ಪ್ರಭುವೂ ಪಾರಿವಾಳವೂ

ಕವಿತೆ

ಪ್ರಭುವೂ ಪಾರಿವಾಳವೂ

ಬೆಂಶ್ರೀ ರವೀಂದ್ರ

White Dove on White Bird Figure Stand

ಬಂದ
ಬಸವಳಿದ ನಾಡಪ್ರಭು ಹೊತ್ತಿಲ್ಲದ ಹೊತ್ತಿನಲಿ ಇಂದ್ರಪುರಿಯಿಂದ ಚಂದ್ರಪುರಿಯ ಕಡಲತಡಿಗೆ
ದಿಡ್ಡಿಬಾಗಿಲ ದೊಡ್ಡ ಕಮಾನಿಗೆ

ದೊರೆ ಬಂದನೆಂದು ಮಾಡಿದರು
ಊರು ಬಂದು ಬಂದೋಬಸ್ತು
ಹಾರಕೂಡದು ಮೇಲೆ ವಿಮಾನ
ಚುಕುಬುಕು ರೈಲಿಗೆ ಹಳಿಯೇ ಇಲ್ಲ
ಬಸ್ಸು ಕಾರು ಸ್ಕೂಟರು ಬೈಕು ಇಲ್ಲ
ಸೈಕಲ್ಲು ನಡಿಗೆಯೂ ಕಡಲತಡಿಗೆ

ಮನೆ ಬಾಗಿಲು ಕಿಟಕಿ ಹೋಟೆಲು
ಬಾಲ್ಕನಿ ಬಾತುರೂಮು ಮಾಲು
ಗೀಲು ರಸ್ತೆ ಗಿಸ್ತೆ ಎಲ್ಲ ಮುಚ್ಚಿದೆ
ತಪ್ಪಿ ತೆರೆಯದಿರು ಆದೇಶವಿದೆ

ಪಾನೀಪುರಿ ಬತ್ತಾಸು ಕಬ್ಬಿನ ರಸವಿಲ್ಲ
ಐಸ್‌ಕ್ರಿಮು ಕಾಟನ್‌ಕ್ಯಾಂಡಿ ಹಣ್ಣುಗಿಣ್ಣು
ತಳ್ಳು ಗೂಡಂಗಡಿಗಳು ನಡಿ ಗಡಿಯಾಚೆ
ಕುಣಿದಾಡುವ ಮಕ್ಕಳಿಲ್ಲ ಈ ಗಳಿಗೆ
ನಿಷೇಧ ಪ್ರವಾಸಿಗರಿಗೆ ಊರವರಿಗೆ

ಕ್ಯಾಮರಾಗಳು ಸೂಟ್ ಸಿಪಾಯಿಗಳು
ಕಪ್ಪುಕೂಲಿಂಗ್ ಗ್ಲಾಸುಗಳು ಗನ್ನುಗಳು
ಇಳೆ ಹೊತ್ತ ಧಬೆಗೆ ಕಡಲ ತಂಪು ಅತ್ತರು

ಎಂದಿನಂತೆ
ಪಾರಿವಾಳಗಳ ಪರಿವಾರವಲ್ಲಿ
ಕಿಚ ಕಿಚವೆನ್ನುತ್ತ ಹಸಿವ ತಣಿಯಲು
ಇತ್ತಿಂದತ್ತ ಅತ್ತಿಂದಿತ್ತ ರಾಶಿರಾಶಿ
ಓಡಿಸಿದರೂ ಹೋಗವವು
ಅಲ್ಲೆ ಠಿಕಾಣಿ ಕಿಂಕಾಪ್ ರಾಣಿ

ಕಾರಿಂದಿಳಿದನು ಪ್ರಭುವು
ದಿಟ್ಟಿಸುತ ದಿಡ್ಡಿ ಬಾಗಿಲನು
ಬಂದಂತಾಯಿತು ಯಾರೊ
ಪರಊರಿಗರು ತುತೂರಿಗಳು
ಸ್ವಾಗತ ಗನ್ನು ಸಲ್ಯೂಟುಗಳು
ಮುಗಿಲ ಭೇದಿಸಿದಂತಾಯ್ತ
ಇಂದ್ರಪುರಿಯ ಸಿಂಹಾಸನವ
ಗುಮ್ಮ ಅಲುಗಿಸಿದಂತಾಯ್ತು
ಕಣ್ಣು ಒರೆಸಿಕೊಂಡ, ಮಂಜಾಯ್ತೆ
ಪಿಎ ಪಿಸುಗುಟ್ಟುತ್ತಿದ್ದಾನೆ, ಸ್ವಾಮಿ
ನೂರು ವರ್ಷಕೆ ಮಿಗಿಲಾಯ್ತು

ಕಡಲಾಚೆಯ ಗಾಳಿಯಲೇನೋ ಕೆಟ್ಟ ವಾಸನೆ
ಸಮುದ್ರದ ಮೀನುಗಳು ಸತ್ತು ಹೋಗಿವೆಯೆ
ಯಾರು ಕೊಂದವರು ; ಅಂದ ಹಾಗೆ
ಕಡಲಿಗೀಗ ಯಾವ ಜಹಜು ಬರುವುದಿಲ್ಲ
ಅಲ್ಲವೇ, ಇಲ್ಲ ದೊರೆಯೆ
ಇಂದು ಬಂದರಿಗೆ ಯಾರೂ ಬಾರರು
ಇರುವ ಬೋಟುಗಳ ಖಾಲಿ ಮಾಡಿಸಿದ್ದೇವೆ

ಪಾರಿವಾಳಗಳ ಸದ್ದು ವಿಪರೀತವಾಯ್ತು
ಭರ್‌ರ್ …ಪುರ್‌ರ್….
ಆಸೆಗಣ್ಣಲಿ ಹಾರಿದವು ಪ್ರಭುವಿನೆಡಗೆ
ಬಾಯಾಡಿಸುತ್ತಿದ್ದ ಭಂಟರೆಡೆಗೆ
ಭರ್‌ರ್……‌ಪುರ್‌ರ್…….
ಕೆಲವು ಸಣ್ಣವು ಕೆಲವು ಹಾರಲಾರವು
ಪಾರಿವಾಳದ ಪುಕ್ಕ ಮೈದಾನದ ತುಂಬಾ

ಓಡಿಸಿ.. ಓಡಿಸಿ…. ಅವು ಅಪಾಯಕಾರಿ
ಯಾರೂ ಬಾರದೆಡೆ ಪಾರಿವಾಳಗಳು
ಅವಕೇನು ಕೆಲಸ
ಎಲ್ಲಿಂದ ಬಂದಿವೆಯೊ ಏನೋ
ಯಾರು ಕಳಿಸಿದರೋ ಏನೋ
ಪ್ರಭುವಿಗೆ ತಲೆ ನೋಯತೊಡಗಿತು

ಗನ್ನುಗಳ ಭಂಟರು ಗನ್ನು ಹಿಡಿದು
ನುಗ್ಗಿದರು ಇತ್ತಿಂದತ್ತ ಅತ್ತಿಂದಿತ್ತ
ಓಡಾಡಿಸುತ್ತಿವೆ ಪಾರಿವಾಳಗಳು
ಏನು ಮಾಡಿದರೂ ಹೋಗಲಾರವು
ಅಲ್ಲಿ ಮರಗಳ ಮೇಲೆ
ಕಟ್ಟಡದ ಚಾಚುಗಳ ಮೇಲೆ
ಸಂದುಗಳ ಒಳಗೆ ಅವುಗಳ
ಗೂಡುಗಳಿವೆ ಶತಮಾನಗಳಿಂದ.

ಪ್ರಭುವಿಗೆ ಸಿಟ್ಟು ಬಂತು
ದೊರೆ ಬಂದರೂ ದೂರ ಹೋಗವು
ತೊಳೆದರೂ ತೊರೆಯವು ವಾಸನೆ
ಶತಮಾನಗಳ ಕಮಟು ; ಸಾಯಿಸಿಬಿಡಿ
ಭಂಟರು ಗನ್ನು ತೆಗೆದು ಗುಂಡು
ಹೊಡೆಯ ತೊಡಗಿದರು ಪಾರಿವಾಳಗಳಿಗೆ

*************************************

Leave a Reply

Back To Top