ಕಾರ್ಮಿಕ ದಿನದ ವಿಶೇಷ-ಕವಿತೆ

ಕೂಲಿಯವನ ಮಗ ನಾನು ವಾಯ್.ಜೆ.ಮಹಿಬೂಬ ಕೂಲಿಯವನ ಮಗ ನಾನು ಬಡವನಾದರೇನಂತ ಇಲ್ಲೆನಗ ಬ್ಯಾಸರ ಕಣ್ಣತುಂಬ ನಿದ್ದೀಗಿ ಗುಡಿಸಲೆಮಗೆ ಆಸರ !!ಪ!! ಕೂಲಿಯವನ ಮಗನಾನು ಬಿಸಿಲೆಮಗೆ ಸಹೋದರ ನಮ್ಮಪ್ಪ ಅಂತಾನ ಮುಗಿಲೆ ನಮಗೆ ಹಂದರ !!೧!! ಅವ್ವನ ಸೀರಿ ಶೆರಗೇ ಒರಿಸೇತಿ ಬೆವರ ಹಾಸಿಗೆ ಆಗತೈತಿ ಅಪ್ಪನ ಹರಕ ಧೋತರ!!೨!! ಹಬ್ಬಕವರು ಕಾಣಲಿಲ್ಲ ಹೊಸ ಸೀರಿ-ದೋತರ ಸತ್ತಾಗ ಕಟ್ಟತೀರಿ ಅರವಿ ಐದು ಮೀಟರ್ !!೩! ******

ಕಾರ್ಮಿಕ ದಿನದ ವಿಶೇಷ-ಕವಿತೆ

ಕಾರ್ಮಿಕ-ಶ್ರಮಿಕ ಪ್ರೊ.ಕವಿತಾ ಸಾರಂಗಮಠ ಕಾರ್ಮಿಕ-ಶ್ರಮಿಕ ದೇವನಿತ್ತ ಭೂಮಿಯಲ್ಲಿ ಶ್ರಮಿಕ ಪ್ರಾಮಾಣಿಕತೆಯ ಧನಿಕ ಸಮಯದ ಪರಿಪಾಲಕ ನಿತ್ಯ ದುಡಿದು ತಿನ್ನುವ ಕಾಯಕ! ಕರ್ಮದಿಂದ ಜಗವೆಲ್ಲ ಸುಗಮ ಕರ್ಮದಿಂದಲೇ ಸಂತಸದ ಉಗಮ ಹರಿಸುತ ನಿತ್ಯ ಬೆವರ ಸುಮ ಜಗವೆಲ್ಲ ಹರಡುವ ಶ್ರಮದ ಕುಸುಮ! ಶ್ರಮದೊಂದಿಗೆ ದಿನಚರಿ ಆರಂಭ ಅವಿರತ ದುಡಿದ ಬೆವರಲವನ ಬಿಂಬ ಸಹಿಸುವ ಧನಿಕರ ದಬ್ಬಾಳಿಕೆ ಆದರೂ ಇವನ ಕೆಲಸಕಿಲ್ಲ ಹೋಲಿಕೆ! ಕಟ್ಟುವ ನಿತ್ಯ ಕಾಯಕದ ಕಟ್ಟೆ ಕೈಯಲ್ಲಿ ಹಿಡಿದು ಉಣ್ಣುವ ಕರ್ಮದ ತಟ್ಟೆ ತೊಟ್ಟರೂ ಚಿಂದಿ ಬಟ್ಟೆ ಎಂದು ಬಿಡದವ ಕಾಯಕ ನಿಷ್ಠೆ! ವೃತ್ತಿ ಭೇದಗಳಿಲ್ಲ ನಾ ಮೇಲೆಂಬ ಭಾವವಿಲ್ಲ ಪ್ರಾಮಾಣಿಕತೆಯೆ ಇವನಿಗೆಲ್ಲ ದುಡಿದು ತಿಂದು ಬದುಕಾಗಿಸಿಕೊಂಡಿರುವ ಬೆಲ್ಲ! *******

ಕಾರ್ಮಿಕ ದಿನದ ವಿಶೇಷ-ಕವಿತೆ

ಸನ್ಮಾನ ಸಂಮ್ಮೋದ ವಾಡಪ್ಪಿ ಸನ್ಮಾನ ಗಳಿಕೆಗೆ ಸ್ವಾಭಿಮಾನದ ದಿಟ್ಟ ಹೆಜ್ಜೆ ಇಡುತ ಬೆವರ‌ ಹನಿಗಳ ಸುರಿಸಿ ದುಡಿಮೆಯಲಿ ನಗುತ ಭವ್ಯ ದೇಶದ ಏಳಿಗೆಯ ಬೆನ್ನೆಲಬು ನಾವು ಶ್ರಮದ ದಾರಿ ಜೀವನದುದ್ದಕ್ಕೂ ನಡೆಯುತಿಹೆವು ಒಗ್ಗಟ್ಟಿನಲಿ ಒಕ್ಕೊರಲಿನ ಶಿಸ್ತಿನ ನಡೆಯು ದಣಿವಿಲ್ಲದ‌ ಚಲನೆ ನಿಲ್ಲಬೇಕು ಮನೆಯು ಸಹಿಷ್ಣುತೆಯಿಂದ ಸದಾ‌ ಕಾರ್ಯೋನ್ಮುಖ ಆತ್ಮವಿಶ್ವಾಸದ ಪಡೆ ಆಗನೆಂದು ವಿಮುಖ ಕಾರ್ಮಿಕರು ಒಂದೇ‌ ಸೂರಿನಲಿ ಬಂಧುಗಳು ಸಮಯ‌‌ ಪಾಲನೆ, ಶ್ರದ್ಧೆಯೇ ಪ್ರಮಾಣಗಳು ತಂತ್ರಜ್ಞಾನ ಕಾರ್ಯತಂತ್ರದಲ್ಲಿ‌ಯೂ ಪರಿಣಿತರು ಆರ್ಥಿಕತೆಯ ಬುನಾದಿ ನಿರಂತರ ಸಾಧಕರು ದಿನ‌‌ ವಾರ ಮಾಸ ವರುಷ ದಿಟ್ಟ ದುಡಿಮೆ ವಿವಿಧ ಕಾರ್ಯ ಅನೇಕ‌ ಕ್ಷೇತ್ರದ ಹಿರಿಮೆ ಕಾರ್ಮಿಕರ ಬಲ ದಕ್ಷತೆ ದೇಶದ ಹೆಮ್ಮೆ ಶಕ್ತಿ ಯುಕ್ತಿ ಕಾರ್ಯದಿ ಇವರೇ ರಾಷ್ಟ್ರದ ಗರಿಮೆ ಮೇ ದಿನವು ಕಾರ್ಮಿಕರಿಗಾಗಿ ಒಂದು ದಿನ ಪ್ರತಿಯೊಬ್ಬರ ಶ್ರಮಕೆ ಈ ಕವನದಿ ಸನ್ಮಾನ *******

ಕಾರ್ಮಿಕ ದಿನದ ವಿಶೇಷ-ಕವಿತೆ

ಭರವಸೆಯ ಬದುಕು ಪ್ರತಿಭಾ ಹಳಿಂಗಳಿ ಭರವಸೆಯ ಬದುಕು ದುಡಿಯುವ ಕೈಗಳೇ ನಿವೇನು ಬೇಡುತಿರುವಿರಿ ಹೊತ್ತು, ಹೊತ್ತಿನ ಊಟ ಇರಲೊಂದು ನೆಲೆ ಇಷ್ಟು ಸಾಕಲ್ಲವೇ? ಇಲ್ಲ ಸಾಕಾಗಲಿಲ್ಲ ನಾವೇನು ಯಂತ್ರಗಳಲ್ಲ, ನಮ್ಮ ‌ದೇಹದಲ್ಲೂ ಹರಿದಾಡುತಿದೆ ರಕ್ತ ಅದು ಕೂಡ ಕೆಂಪಲ್ಲವೇ ನಿಮ್ಮೆಲ್ಲರ‌ ಹಾಗೆ. ಬೆವರು ಸುರಿಯುತಿಹೆ ನಮ್ಮ ಹಣೆಯ ಮೇಲೆ ಅದು ಯಾರದೋ ಸಂಪತ್ತಿನ ಬಂಡವಾಳವಂತೆ ಹಗಲು, ರಾತ್ರಿ ಶ್ರಮವಹಿಸಿ ಮೈಯೆಲ್ಲ ಹಣ್ಣಾಗಿಸಿ ದುಡಿಯುತಿರೆ ನಾವು ನೀವು ಕೊಡುವ ಕಾಸು ಧರ್ಮದ್ದೇನಲ್ಲ. ಇಂದು ಬೆವರು ಹರಿಸಿದಾಗಲೇ ದೊರಕುವದು ಅನ್ನ ಸಿಗದೆ ಹೋದರೆ ಕೆಲಸ ದಿನವೂ ಉಪವಾಸವೇ. ಯಾರಿಗೂ ತಿಳಿಯದು ಈ ತಳಮಳ ನಮ್ಮ ಬದುಕು ಎಂದಿಗೂ ಹಾದಿ,ಬೀದಿಯಲ್ಲಿಯೇ ಭರವಸೆ,ಭದ್ರತೆ ,ಕನಿಷ್ಠ ಗೌರವವು ಇಲ್ಲದೆ ನಡೆಯುತಿದೆ ನಮ್ಮ ಜೀವನ. ******

ಕಾರ್ಮಿಕ ದಿನದ ವಿಶೇಷ-ಬರಹ

ಮನೆಯ ಕಾರ್ಮಿಕರು ವಸುಂಧರಾ ಕದಲೂರು.     ‘ಮನೆಯ ಕಾರ್ಮಿಕರು’      ‘ಮನೆಯ ಗಂಡನ ಮನೆವಾರ್ತೆಯನೇನ ಹೇಳುವೆನವ್ವ ‘ ಎಂದು ಪ್ರಾರಂಭವಾಗುವ ಬಸವಣ್ಣನವರ ಒಂದು ವಚನವಿದೆ.  ‘ಕಾಯಕವೇ ಕೈಲಾಸ’ ವೆಂದು ಜೀವನದ ನಿಜತತ್ವ ಸಾರಿದ ಬಸವಣ್ಣನವರದು ಶರಣ ಸತಿ ಲಿಂಗ ಪತಿಯ ಭಾವ.      ಲಾಕ್ ಡೌನ್ ಸಮಯದಲ್ಲಿ ಮನೆವಾರ್ತೆಗೆ ಎಳಸುತ್ತಿರುವ ಗಂಡಂದಿರು ಅದೆಷ್ಟು ಜನವೋ.. ಬಹುಶಃ ಕೆಲವರಿಗಾದರೂ ಈಗ ಮನೆಕೆಲಸದ ಮಹತ್ವ ಅರಿವಾಗಿರಬಹುದು. ಇಲ್ಲವಾದರೆ, “ನನ್ನ ಹೆಂಡತಿಯೇ..? ಎಲ್ಲೂ ಕೆಲಸಕ್ಕೋಗಲ್ಲ, ಮನೇಲಿರ್ತಾಳೆ” ಎಂದು ಮೂಗು ಮುರಿಯುವ ಮಂದಿಗೆ ಈಗ ಅಲ್ಲವಾದರೆ, ಮತ್ತೆಂದೂ ಮನೆಕೆಲಸದ ಮಹತ್ವ ತಿಳಿಯದೇ ಹೋಗಬಹುದು.      ನಿಜವಾಗಿಯೂ ಅಡುಗೆ ಸುಮ್ಮನೆ ಆಗದು, ಬಟ್ಟೆ ಅದಷ್ಟಕ್ಕೆ ಸಾಪಾಗಿ ಗರಿಗರಿಯಾಗದು, ಪಾತ್ರೆ ಸುಮ್ಮನೆ ನೀರಿಗೆ ಹಿಡಿದರೆ ಫಳಫಳ ಹೊಳೆಯದು, ನೆಲ ತನ್ನಷ್ಟಕ್ಕೆ ಥಳಥಳಿಸದು. ಮಕ್ಕಳ ರಚ್ಚೆ  ಅದರಷ್ಟಕ್ಕೆ ನಿಲ್ಲದು, ಹಿರಿಯರ ಹಾರೈಕೆ ಹೊತ್ತೇರಿ ಇಳಿದಂತೆ ನಡೆದು ಹೋಗದು. ಆದರೆ ಇವೆಲ್ಲಾ ಬೆಳಗಾಗೆ ಎದ್ದು ಶೌಚಾದಿ ಕ್ರಿಯೆ ಮುಗಿಸಿ, ಬಿಸಿ ಬಿಸಿ ಕಾಫಿಯೋ – ಟೀಯೋ ಹೀರುತ್ತಾ ಲೋಕ ವಾರ್ತೆಗೆ ಕಣ್ಣುಕಿವಿ ಮನಸ್ಸುಕೊಟ್ಟು ಕುಳಿತುಕೊಳ್ಳುವ, ಕುಳಿತಲ್ಲಿಗೇ ಬರುವ ತಿಂಡಿಯನ್ನು ತಿಂದು, ಮಧ್ಯಾಹ್ನದ ಬುತ್ತಿ ಹಿಡಿದು ಆಫೀಸಿಗೆ ಹೊರಟು, ರಾತ್ರಿ ಹೊತ್ತಿಗೆ ಸುಸ್ತಾಗಿ ಬಂದು ಧೊಪ್ಪೆಂದು ಕುಕ್ಕರಿಸುತ್ತಿದ್ದ ಗಂಡಂದಿರಿಗೆ ಹೇಗೆ ತಿಳಿಯ ಬೇಕಿತ್ತು ಹೇಳಿ? ಈಗ ಲಾಕ್ ಡೌನಿನ ಸಲುವಾಗಿ ಮನೆಯಲ್ಲಿ ದಿನದೂಡುತ್ತಿರುವವರಿಗೆ ಈಗಲಾದರೂ ಇಷ್ಟೆಲ್ಲಾ ಮನೆವಾರ್ತೆಗಳು ಅರಿವಿಗೆ ಬಂದಿರಬಹುದೇ..?     ಎಲ್ಲರೂ ಹೀಗೆಯೇ ಎಂದು ಶರಾ ಬರೆಯುತ್ತಿಲ್ಲ. ಆದರೆ ಬಹುಪಾಲು ಹೀಗೆಯೇ ಎಂದು ಹೇಳಲು ಯಾವ ಭೀತಿಯೂ ಇಲ್ಲ.                 ಇನ್ನು ಕೆಲವು ಹೆಂಗಸರ ಕತೆ ನೆನೆದುಕೊಂಡರೆ ಹರೋಹರ ಎಂದು ಕೈ ಮುಗಿಯಬೇಕು. ಅವರು ದಿನಂಪ್ರತಿ ಮನೆಯಲ್ಲೂ ಮಾಡಿಟ್ಟು, ಹೊರಗೂ ದುಡಿದು ಹೈರಾಣಾಗುತ್ತಿರುತ್ತಾರೆ. ಇಂತಹ ಹೆಂಗಸರ ಹಣೆಬರಹ ತಿದ್ದುವಂತಾಗಿದ್ದರೇ ಎನಿಸುತ್ತದೆ. ಪಾಪ, ಆಕೆ ಸರಿಯಾಗಿ ಉಂಡಿರುತ್ತಾಳೋ.., ಅರೆ ಹೊಟ್ಟೆ ಹಸಿದಿರುತ್ತಾಳೋ.., ಹಬ್ಬಕ್ಕೋ, ಖುಷಿಗೋ ಹೊಸಬಟ್ಟೆ ಕೊಂಡಿರುತ್ತಾಳೋ.. ಕೇಳುವವರಾರು? ‘ದುಡಿ ನೀ ಹೆಣ್ಣೇ.. ನಿನ್ನ ಹಣೆ ಬರಹವೇ ಇಷ್ಟು‘ ಎನ್ನುವವರೇ ನಮ್ಮಲ್ಲಿ ಬಹುಮಂದಿ.        ಲಾಕ್ ಡೌನ್ ಸಮಯದಲ್ಲಂತೂ ಮುಂಚಿನಂತೆ ಮನೆ ಕೆಲಸದ ಸಹಾಯಕರಿಲ್ಲದೇ, ಮನೆಯವರ ಸಹಕಾರವೂ ಸಿಗದೆ ತಾನೇ ಎಲ್ಲಾ ಕೆಲಸ ಮಾಡಿಟ್ಟು, ಕಚೇರಿಗೂ ಓಡುವ ಮಹಿಳೆಯರ ಸ್ಥಿತಿ ನೆನೆದರೇ ಬೇಜಾರೆನಿಸುತ್ತದೆ. ನಾನೂ ಸಹ ಸರಕಾರಿ ನೌಕರಳೇ ಆಗಿದ್ದರೂ ಮನೆಯಲ್ಲಿ ನನ್ನ ಮಕ್ಕಳನ್ನು ಸಂಭಾಳಿಸಿಕೊಂಡು, ಅಡುಗೆ ಹಾಗೂ ಇತರೆ ಮನೆವಾರ್ತೆಗಳ ಕುರಿತು ನಾನು ತಲೆಕೆಡಿಸಿಕೊಳ್ಳದಂತೆ ನೋಡಿಕೊಳ್ಳುವಲ್ಲಿ ಅಪಾರ ಬೆಂಬಲ ನೀಡುತ್ತಿರುವ ನನ್ನತ್ತೆ ಹಾಗೂ ನಾದಿನಿಯರ ಸಹಕಾರವನ್ನು ಪ್ರತೀಕ್ಷಣವೂ ನೆನೆಯುತ್ತೇನೆ. ಮನೆಯವರ ಹೃತ್ಪೂರ್ವಕ ಸಹಕಾರವೇ ನಿಶ್ಚಿಂತೆಯಿಂದ ಹೊರಗಿನ ಕೆಲಸದಲ್ಲಿ ನಮ್ಮಂತಹ ಮಹಿಳೆಯರು ತೊಡಗಿಕೊಳ್ಳುವಂತೆ ನೋಡಿಕೊಳ್ಳುವುದು. ಅದು ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ. ಆದರೆ ಈ ಬಗೆಯ ಸಹಕಾರ ಎಲ್ಲರಿಗೂ ದಕ್ಕುವುದೇ ಎಂಬುದು ನಿಜವಾದ ಪ್ರಶ್ನೆ. ಹಾಗಾಗಿ, ಮನೆ ಕೆಲಸಕ್ಕೆ, ಅಡುಗೆ ಕೆಲಸಕ್ಕೆ ಎಂದು  ಹೊರಗಿನಿಂದ ಬರುವ ಸಹಾಯಕರಿಗೆ ತಿಂಗಳಿಗೆ ಇಷ್ಟೆಂದು ಸಂಬಳ ನಿಗದಿ ಮಾಡಿ ನಿಗದಿತ ಅವಧಿಗೆ ಕೊಡುವ ನಾವು, ನಮ್ಮದೇ ಮನೆಯಲ್ಲಿ ನಮಗಾಗಿಯೇ ದುಡಿಯುವ ನಮ್ಮವರಿಗೆ ಅದೇನು ಬೆಲೆ ಕೊಡುತ್ತಿದ್ದೇವೆ ಎಂಬುದನ್ನು ಕುರಿತು ಆಲೋಚಿಸಲು ಇದು ಸಕಾಲ.     ‘ಕಾಯಕವೇ ಕೈಲಾಸ’ ಎಂದ ಬಸವಣ್ಣನವರಂತೆ  ದುಡಿಮೆಯನ್ನು ಗೌರವಿಸಬೇಕು ನಾವು. ಅವರ ವಚನದ ವಾಕ್ಯವೊಂದನ್ನು ಈ ಲೇಖನದ ಶುರುವಿಗೆ ಬಳಸಿರುವೆ. ಪೂರ್ಣ ವಚನದ ಸಾರ ಬೇರೆಯಿದೆ. ಆದರೆ, ಲೇಖನದ ಆಶಯವಿಷ್ಟೇ… ಮನೆವಾರ್ತೆಗೆ ಒದಗಿಬಂದು,  ಜೊತೆಗೆ ಕೈ ಜೋಡಿಸುವ ಸುಬುದ್ಧಿ ಲಾಕ್ ಡೌನಿನ ಕಾರಣಕ್ಕೆ ಈಗ ಮನೆಯ ಒಳಗೆ ಬಂಧಿಯಾಗಿರುವ ಎಲ್ಲರಿಗೂ ಬರಲಿ. ಮರೆಮಾಚಲ್ಪಟ್ಟಿರುವ ಮನೆಯ ಕಾರ್ಮಿಕರ ದುಡಿಮೆಯನ್ನು ಗುರುತಿಸಿ ಗೌರವಿಸುವ ಮನಸ್ಥಿತಿ ಎಲ್ಲರಲ್ಲೂ ಮೂಡಲಿ.             ••••••••••••••••••••••••••••••••

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ಗಝಲ್ ಪ್ರತಿಮಾ ಕೋಮಾರ ಗಜಲ್ ಕರವೆರಡು ಕೊರಡಾದರೂ ಸೋಲುವುದಿಲ್ಲ  ಅವನು ಉಳಿ ಮೇಲೆ ಉಳಿ ಬಿದ್ದರೂ ಎದೆಗುಂದುವುದಿಲ್ಲ ಅವನು ಕತ್ತಲೇ ಮನೆಯಾದರೂ ಕೊರಗುವುದಿಲ್ಲ ಅವನು ಎಲ್ಲರಿಗೂ ಬೆಳಕನ್ನೇ ಹಂಚಿದರೂ ಬೀಗುವುದಿಲ್ಲ ಅವನು ಒಡಲಾಳದಲ್ಲಿ ಹರಿದರೂ ಲಾವಾ, ಹೇಳಿಕೊಳ್ಳುವುದಿಲ್ಲ ಅವನು ಉಳ್ಳವರು ತುಳಿಯುತ್ತಲಿದ್ದರೂ ಚಕಾರವೆತ್ತುವುದಿಲ್ಲ ಅವನು ಮಳೆ,ಬಿಸಿಲು ,ಚಳಿ ಏನೇ ಇದ್ದರೂ ಅಳುಕುವುದಿಲ್ಲ  ಅವನು ಕಾಯಕದಲ್ಲಿ ಮೇಲು ಕೀಳೆಂಬ ಭಾವ ತೋರುವುದಿಲ್ಲ ಅವನು ಆಲಸ್ಯದಿ ದುಡಿಯದೇ ಕುಳಿತು ಉಣ್ಣುವುದಿಲ್ಲ ಅವನು ಕಾಯಕವೇ ಕೈಲಾಸ ಎಂಬ ತತ್ವ ಮರೆಯುವುದಿಲ್ಲ ಅವನು ( ಶ್ರಮಿಕರಿಗೆ ನಮನ , ಮೇ ಕಾಮಿ೯ಕರ ದಿನ )

ಕಾರ್ಮಿಕ ದಿನದ ವಿಶೇಷ-ಕವಿತೆ

ನಾವು ಮತ್ತು ಅವರು ಶೋಭಾ ನಾಯ್ಕ. ಹಿರೇಕೈಕಂಡ್ರಾಜಿ. ನಾವು ಮತ್ತು ಅವರು ಇಲಿ ಕೊರೆದ ಮನೆ ಗೋಡೆಗೆ ಮಣ್ಣ ಮೆತ್ತಿಯೇ ಬಂದಿದ್ದಾರಿಲ್ಲಿ ಮಹಡಿ ಮನೆಗೆರಡು ಕಂಬ ಎಬ್ಬಿಸಲು ಅವರ ಮೈ ಬೆವರಿಗಷ್ಟು ಕೂಡಿಸಿ, ಕಳೆದು ಲೆಕ್ಕಹಾಕಿ ಕೂಲಿ ಕೊಡುವ ನಾವುಗಳು ನಮ್ಮ ಮೈ ಬೆವರನ್ನು ಹೇಳಿದಷ್ಟು ಕಟ್ಟಿ ಇಳಿಸಿ ಬರುತ್ತೇವೆ. ಸಂಜೆ ಮೀನು ಮತ್ತು ಮಾರುದ್ದ ಜಡೆಯ ಮಗಳಿಗೆರಡು ರಿಬ್ಬನ್ನು ಒಯ್ಯುವಾಗ ನಗುತ್ತವೆ ಅವರ ಕೈಯಲ್ಲಿ ನಾವೇ ಕೊಟ್ಟ ನೋಟುಗಳು ಇಲ್ಲಿನ ಬರಕತ್ತಿನ ಬದುಕ ಕಂಡು ಕೊನೆಗೂ ಕಂಡದ್ದೇನು ಇಲ್ಲಿ? ಮುಚ್ಚಿದ ಬಾಗಿಲ ಒಳಗಡೆ ಕೋರೈಸುವ ಗ್ಲಾಸು, ಹೊಳೆಯುವ ಟೆರೇಸು ಬಿಟ್ಟರೆ, ಹಸಿರ ಕೊಂದು ಜಾರುವ ನೆಲ ಹಾಸು ದುಡಿದು ರಾತ್ರಿ ಮನೆ ಸೇರಿದ ಅವರೋ.. ಜೋಗುಳ ಕೇಳಿಸಿಕೊಂಡಂತೆ ನಿದ್ದೆ ಹೋಗುತ್ತಾರೆ ಜೋಪಡಿಯಲ್ಲಿ ನಾವೋ… ದಿಂಬಿನ ಜೊತೆಗೆ, ನಿದ್ದೆಯನ್ನೂ ಮಾರುವವರಿಗಾಗಿ ಬರ ಕಾಯುತ್ತಿದ್ದೇವೆ ಇಲ್ಲಿ ಈ ಮಹಡಿ ಮನೆಯಲ್ಲಿ. *******

ಕಾರ್ಮಿಕ ದಿನದ ವಿಶೇಷ -ಲೇಖನ

ಕಾರ್ಮಿಕರ ದಿನಕ್ಕೊಂದು ಬೆಲೆ ಬರಬೇಕಿದೆ ಶಿವಲೀಲಾ ಹುಣಸಗಿ ಕಾರ್ಮಿಕರ ದಿನಕ್ಕೊಂದು ಬೆಲೆ ಬರಬೇಕಿದೆ ಇಂದು ಸಮಾನತೆ,ಅಸಮಾನತೆಗಳ ನಡುವೆ ತುಟಿಕಚ್ಚಿ ಹಿಡಿದು ಮೌನದೊಳಗೆ ತನ್ನಾತ್ಮವನ್ನು ಬಿಗಿದು ಒಡಲೊಳಗೆ ಅಗ್ನಿಯನ್ನು ಬಚ್ಚಿಟ್ಟು ನಡೆಯುವ ಸಂಸಾರದ ನೋಗವನ್ನು ಎಳೆಯುವ ಜೀವವೆಂದರೆ ಅದು ಹೆಣ್ಣು… ಸಾಧನೆಯ ಮೆಟ್ಟಿಲೇರಿದ ಮಹಿಳೆಯರ ಸಾಲು ಬೆರಳೆನಿಕೆಯಷ್ಟಿದ್ದರೂ,ಅದೇ ಮಹತ್ತರ ಶಿಖರವೆಂಬಂತೆ ಬಿಂಬಿಸಿ, ಮಹಿಳಾ ಸಬಲೀಕರಣವಾಗಿದೆಯೆಂದು ಕಾಣುವ ಪರಂಪರೆ ಭಾರತದ ನಾಗರಿಕ ಸಮಾಜದಲ್ಲಿ ಬೇರೂರಿದೆ..ನಮ್ಮ ದೇಶ ಪುರುಷ ಪ್ರಧಾನ ಸಮಾಜದ ಅಡಿಯಲ್ಲಿ ಮುಂದುವರೆದಿದ್ದಕ್ಕೆ ಇತಿಹಾಸ ಸಾಕ್ಷಿ….ಆದರೆ  ಸಾಧಕರೂ ಇನ್ನೂ ಎಲೆಮರೆಯಕಾಯಿಯಂತೆ ಜೀವನದ ಸಾಗರದಲ್ಲಿ ಬರುವ ಕಷ್ಟಗಳ ನೀಗಿಸುತ್ತ ಹೇಳ ಹೆಸರಿಲ್ಲದೆ ಕಣ್ಮರೆಯಾಗುವ ಸಾವಿರಾರು ಮಹಿಳೆಯರ ಜೀವನ “ಆಟಕ್ಕೂಂಟು ಲೆಕ್ಕಕ್ಕಿಲ್ಲ” ಎಂಬಂತಾಗಿದೆ. ತಮ್ಮ ದಿನನಿತ್ಯದ ಬದುಕಿನ ಹೋರಾಟಕ್ಕೆ ಮೈಲುಗಟ್ಟಲೇ ಉದ್ಯೋಗ ಅರಸಿ ವಲಸೆ ಬರುವ ಅಸಂಖ್ಯಾತ ಮಹಿಳೆಯರ ಬವಣೆಯನ್ನು ನೀಗಿಸುವುದಿರಲಿ, ಗಮನಿಸುವ ಇಚ್ಛಾಶಕ್ತಿಯು ಸರಕಾರ ನಡೆಸುವ ಜನಪ್ರತಿನಿಧಿಗಳಿಗೂ ಕಂಡು ಬಂದಿಲ್ಲ..! ಬದುಕಿನ ಅನಿವಾರ್ಯತೆಗೆ ಕಟ್ಟ ಬಿದ್ದು ಲಕ್ಷಾಂತರ ಮಂದಿ ಮಹಿಳಾ ಕಾರ್ಮಿಕರಾಗಿ ಗಾರ್ಮೆಂಟ್ಸ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಗಾರ್ಮೆಂಟ್ಸಯೆಂಬ ನರಕ ನಮ್ಮ ದೇಶದಲ್ಲಿ ಒಂದು ವರದಿ ಪ್ರಕಾರ 28,000 ಸಾವಿರ ಉಡುಪಿನ ಕಾರ್ಖಾನೆಗಳಿವೆ.ಅದರಲ್ಲಿ ಶೇ 70% ರಷ್ಟು ರಫ್ತಿಗಾಗಿ ಉತ್ಪಾದನೆ ಮಾಡುವ ಕಾರ್ಖಾನೆಗಳು. ಬೆಂಗಳೂರಲ್ಲಿ  3800 ಕಾರ್ಖಾನೆಗಳಿವೆ.ಒಟ್ಟಾರೆ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರು 8,00,000 ಲಕ್ಷ. ಶ್ರಮದ ಶೋಷಣೆ ತೀವ್ರವಾಗಿದೆ.14 ರಿಂದ 30 ರ ವಯಸ್ಸಿನ ಮಹಿಳೆಯರನ್ನು ಉಡುಪು ಕಾರ್ಖಾನೆಗಳಲ್ಲಿ ಕೆಲಸಕ್ಕೆ ತೆಗೆದುಕೊಳ್ಳುವರು. 10 ರಿಂದ 12 ಗಂಟೆ ಕೆಲಸಕ್ಕೆ ಒತ್ತಾಯ. ಮಹಿಳಾ ಕಾರ್ಮಿಕರು ದೈಹಿಕವಾಗಿ ಸದೃಡರಿದ್ದರೂ, ಮನೆಗೆಲಸ ಮುಗಿಸಿ ಕಾರ್ಖಾನೆಗಳಿಗೆ ಬರುವ ಮಹಿಳೆಯರಿಗೆ ನೆಮ್ಮದಿಯಿಲ್ಲ.ಗೇಟಿನಿಂದ ಹಿಡಿದು ಕೆಲಸಕ್ಕೆ ತೊಡಗುವವರೆಗೂ ಸೂಪರ್ ವೈಸರಗಳು,ಪ್ರೊಡಕ್ಷನ್ ಮ್ಯಾನೇಜರ್ ಗಳ ಕಿರುಕುಳವನ್ನು ಸಹಿಸಿಕೊಳ್ಳಲೇಬೇಕು. ಒಂದು ವೇಳೆ ಅವರ ವಿರುದ್ಧ ತಿರುಗಿಬಿದ್ದರೆ ಕೆಲಸ ಕಳೆದುಕೊಳ್ಳುವ ಭಯ ಬೇರೆ.! ಇನ್ನೂ ಕೈಗಾರಿಕಾ ಪ್ರದೇಶದಲ್ಲಿ 500 ರಿಂದ 600 ಗಾರ್ಮೆಂಟ್ಸಗಳಿವೆ ಅಲ್ಲಿ ದುಡಿಯುವ ಮಹಿಳೆಯರಿಗೆ ತಮ್ಮ ಏಳೆಗೂಸಿಗೆ ಹಾಲು ಕುಡಿಸಲು ಸಮಯ ನೀಡುವುದಿಲ್ಲ. ಹಾಲಿಣಿಸಿ ತಡವಾಗಿ ಬಂದರಂತೂ ಅಶ್ಲೀಲ ಮಾತುಗಳಿಂದ ನಿಂದಿಸುವುದು ಎಂಬುದು ನುಂಗಲಾರದ ಅಸಹನೀಯ ಸನ್ನಿವೇಶ. ಒತ್ತಡವೆಂಬ ಸಂಕಟ,ನೋವು ನಮ್ಮ ರಾಜ್ಯದ ಗಾರ್ಮೆಂಟ್ಸನಲ್ಲಿ ಎಂಟು ಲಕ್ಷ ಕಾರ್ಮಿಕರಿದ್ದು.ಅದರಲ್ಲಿ ಮಹಿಳಾ ಕಾರ್ಮಿಕರ ಸಂಖ್ಯೆ ಶೇಕಡಾ 85% ರಷ್ಟು ಅಂದರೆ  6 ಲಕ್ಷ 80 ಸಾವಿರ ಮಹಿಳೆಯರು ಹಗಲು ರಾತ್ರಿ ಕಣ್ಣಿಗೆ ಸರಿಯಾಗಿ ನಿದ್ರಿಸದೇ ದುಡಿಯುತ್ತಿರುವುದು.ಯ್ಯಾರ ಕಣ್ಣಿಗೂ ಕಾಣಿವುದಿಲ್ಲ.ಏಕೆಂದರೆ ಅವರ ಚಿಂತನೆ ಮನೆಯಂಗಳದಿಂದ ಗಾರ್ಮೆಂಟ್ಸ ವರೆಗೆ ಮಾತ್ರ.ಅಲ್ಲಿಗೆ ಅವರ ಬದುಕು ಮುಗಿಯಿತು. ಪ್ರತಿನಿತ್ಯ ಕೆಲಸಕ್ಕೆ ಬೆಳಿಗ್ಗೆ ೯. ರಿಂದ ಸಂಜೆ ೫.೩೦.ಆದರೆ ನಿತ್ಯವು ಅರ್ಧಗಂಟೆ ಹೆಚ್ಚು ಕೆಲಸ ಮಾಡಲೇಬೇಕು. ಅದು ಕಡ್ಡಾಯ.ಸಂಜೆ ಸೈರನ ಮೊಳಗಿದ ಮೇಲೆ ಮನೆಯತ್ತ ಹೋಗಲು ತವಕ ಆಗದು, ಏಕೆಂದರೆ ಮ್ಯಾನೇಜರ್ ಗಳು ಗುರುತಿನ ಚೀಟಿಗಳನ್ನು ತಮ್ಮಲ್ಲಿಟ್ಟಿಕೊಂಡು ಅರ್ಧಗಂಟೆ ಹೆಚ್ಚುವರಿ ಕೆಲಸವಾದ ಮೇಲೆ ಚೀಟಿ ನೀಡಿ ಕಳಿಸುವರು.ಹೆಚ್ಚುವರಿ ಕೆಲಸಕ್ಕೆ ವೇತನವಿಲ್ಲ. ಕಡಿಮೆ ವೇತನ,ಹೆಚ್ಚುಕೆಲಸಕ್ಕೆನೂ ಕೊರತೆಯಿಲ್ಲ. ಒತ್ತಡಗಳ ನಡುವೆ ನಿಂತವರು ಕುಳ್ಳುವಹಾಗಿಲ್ಲ, ಕುಂತವರು ನಿಲ್ಲುವ ಹಾಗಿಲ್ಲ,ಬೆನ್ನಿಗೆ ಆಸರೆಯು ಇಲ್ಲ.ಎಲ್ಲಿ ಶೌಚಾಲಯಕ್ಕೆ ಹೋಗಬೇಕಾಗುತ್ತದೆ ಎಂಬ ಕಾರಣದಿಂದ ಮಹಿಳೆಯರು ನೀರು ಕುಡಿಯುವುದಿಲ್ಲ.ಊಟಕ್ಕೆ ಅರ್ಧಗಂಟೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ…. ಗಾಳಿಯಾಡಲು ಅವಕಾಶವಿಲ್ಲದಿರುವುದರಿಂದ ಬಟ್ಟೆಗಳ ಧೂಳು ಕಾರ್ಮಿಕರ ಶ್ವಾಸಕೋಶ ಸೇರುತ್ತದೆ. ಗಂಟಲು ಕ್ಯಾನ್ಸರ್, ರಕ್ತ ಹೀನತೆ,ನಿದ್ದೆ ಬರದಿರುವುದು.ಕಾಲು ಮತ್ತು ಬೆನ್ನು ನೋವು,ಗರ್ಭಪಾತ ಅತೀ ಸಾಮಾನ್ಯವಾಗಿ ಮಹಿಳಾ ಕಾರ್ಮಿಕರಿಗೆ ಕಂಡುಬರುವಂತಹ ಆತಂಕಗಳು. ನಾವು ಧರಿಸುವ ಬಟ್ಟೆಯ ಹಿಂದಿರುವ ಯಾತನೆ ಮಹಿಳೆಯ ಬದುಕಿನ ಚಿತ್ರಣವೆಂದರು ತಪ್ಪಾಗದು. ಅಸಹನೀಯ ಸನ್ನಿವೇಶಕ್ಕೆ ಮಹಿಳೆ ಬಲಿಯಾಗುವುದು. ವಿಚಿತ್ರವೆಂದರೆ ಕಾರ್ಮಿಕರು ಎಂದರೆ ಯಂತ್ರದಂತೆ ವಿಶ್ರಾಂತಿ ಪಡೆಯದೇ ಗಾಣದೆತ್ತಿನ ಹಾಗೆ ದುಡಿಯುತ್ತಿಬೇಕು.ಮಹಿಳೆಯ ದೇಹದಲ್ಲಿ ಉಂಟಾಗುವ ಜೈವಿಕ ಪ್ರಕ್ರಿಯೆಗಳನ್ನು ಸಂಪ್ರದಾಯ ಮತ್ತು ಆಚರಣೆಗಳಚೌಕಟ್ಟಿನಲ್ಲಿ ನೋಡುವ ಮಟ್ಟಿಗೆ ಭಾರತದ ಪುರುಷ ಸಮಾಜ ಮತ್ತು ಆಡಳಿತ ವ್ಯವಸ್ಥೆ ನೈತಿಕ ಅವನತಿ ಹೊಂದಿರುವುದಂತೂ ಸತ್ಯ… ಮಹಿಳೆ ಮತ್ತು ಯುವತಿಯರಿಗೆ ಸಹಜವಾಗಿ ಕಂಡುಬರುವ ಋತುಚಕ್ರದ (ಮುಟ್ಟಿನ )ಸಂದರ್ಭದಲ್ಲಿ ನೋವನ್ನು ಸಹಿಸಿಕೊಳ್ಳುವಂತೆ ಮಾಡುವುದರೊಂದಿಗೆ ಹೆಚ್ಚು ಕೆಲಸ ಮಾಡಿಸಿಕೊಳ್ಳುವ ಸಲುವಾಗಿ ಕೆಲವು ಗಾರ್ಮೆಂಟ್ಸ ಕಂಪನಿಗಳು ಹೆಸರಿಲ್ಲದ ಅಪಾಯಕಾರಿ ಮಾತ್ರೆಗಳನ್ನು ನೀಡುತ್ತಿರುವ ಆಘಾತಕಾರಿ ಅಂಶ ಚೆನೈನಲ್ಲಿ ಕಂಡುಬಂದಿರುವುದಲ್ಲದೆ..ಕೆಲಸ ಹೆಚ್ಚಿಸಲು ಅನುಸರಿಸುವ ಮಾರ್ಗ, ಪಾಯಕಾರಿಯೆಂದರೆ ತಪ್ಪಿಲ್ಲ. ಈ ಮಾತ್ರೆ..ನೋವು ನಿರೋಧಕವಾದರೂ ನಿರಂತರ ಸೇವನೆಯಿಂದ ಅಡ್ಡ ಪರಿಣಾಮಗಳನ್ನು ಎದುರಿಸುವವುದಂತೂ ಸತ್ಯವೆಂಬ ಮಾತು ವೈದ್ಯರು ದೃಡಪಡಿಸಿದ್ದು, ಇದು ಸಾಧ್ಯವಾಗಿದ್ದು ಥಾಮಸ್ ರಾಯಿಟರ್ಸ್‌‌‌ ಫೌಂಡೇಶನ್ ನಡೆಸಿದ ಅಧ್ಯಯನ ಸಮೀಕ್ಷೆ ಯಿಂದ, ಕಾರ್ಮಿಕ ಕಾನೂನನ್ನು ಉಲ್ಲಂಘಿಸಿವಿತರಿಸಲಾದ ಮಾತ್ರೆಯಿಂದ ಖಿನ್ನತೆ,ಉದ್ವೇಗ,ಮೂತ್ರದ್ವಾರದ ಸೊಂಕು,ಫೈಬ್ರಾಯಿಡ್ ಮತ್ತು ಗರ್ಭಪಾತ ಸಮಸ್ಯೆಗಳು ಉಂಟಾಗಿರುವುದು,ಅದರಿಂದ ಬಳಲುವ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಇನ್ನೂ ಭಾರತದ ಗಾರ್ಮೆಂಟ್ಸ ಪ್ಯಾಕ್ಟರಿಗಳಲ್ಲಿ ಪಾಶ್ಚಾತ್ಯ ಉಡುಪುಗಳಿಗೆ ಇನ್ನಿಲ್ಲದ ಬೇಡಿಕೆ ಹೆಚ್ಚಿರುವುದರಿಂದ ಈ ಬೇಡಿಕೆ ಉತ್ಪಾದನಾ ಪ್ರಮಾಣ ಹೆಚ್ಚಿಸುವ ಸಲುವಾಗಿ ಕೆಲಸ ಮಾಡುವ ಮಹಿಳಾ ಕಾರ್ಮಿಕರನ್ನು ಕಠಿಣವಾದ ನಿಯಂತ್ರಣದಲ್ಲಿಡಲಾಗಿದೆ,ಅದು ಎಷ್ಟೆಂದರೇ ಋತುಚಕ್ರದ ಸಮಯದಲ್ಲೂ ಶೌಚಾಲಯಗಳಿಗೂ ಹೋಗಲಾರದಂತಹ ಹೀನಾಯ ಪರಿಸ್ಥಿತಿ ಎದುರಿಸುತ್ತಿರುವುದು ದುರಂತ..! ಪ್ರೊಡಕ್ಷನ್ಸ್ ಟಾರ್ಗೆಟ್ ನ ಸಂಕಟ ಬೇರೆ..! ಪ್ರತಿ ಕಾರ್ಮಿಕರಿಗೆ ಗಂಟೆಗೆ  140-150 ಪೀಸ್ ಉತ್ಪಾದನಾ ಗುರಿ ನೀಡಲಾಗುತ್ತದೆ.ದಿನದ 8 ಗಂಟೆಯ ಅವಧಿಗೆ   1000-1100 ಪೀಸ್ ಗುರಿ ತಲುಪಲೇ ಬೇಕು.ಒಂದೊಮ್ಮೆ ಗುರಿ ಮುಟ್ಟದಿದ್ದರೆ.ಮೂವರಿಂದ ಬೈಗುಳ ತಪ್ಪಿದ್ದಲ್ಲ. ಅಸಂಘಟಿತ ವಲಯದ ಕಾರ್ಮಿಕರ ನಿತ್ಯ ಗೋಳಾಟ… ಮನುಷ್ಯನೇ ಅನಾರೋಗ್ಯಕ್ಕೆ ಒಳಗಾಗುವಾಗ ಇನ್ನು ಯಂತ್ರಗಳ ಪಾಡೆನು? ಯಂತ್ರಗಳು ಕೆಟ್ಟು ನಿಂತರೆ ಯ್ಯಾರಿಗೂ ಕೆಲಸವಿರುವುದಿಲ್ಲ.ಕೆಲವೊಮ್ಮೆ ಆರ್ಡರ್ ಇರದಿರುವಾಗ ಕಾರ್ಮಿಕರನ್ನು ಮನೆಗೆ ಕಳಿಸುವರು.ಆದರೆ ಕೆಲಸ ಮಾಡದ ಅವಧಿಯನ್ನು ಆಡಳಿತ ಮಂಡಳಿ ದಾಖಲಿಸಿಕೊಂಡು ರಜಾದಿನಗಳಲ್ಲಿ ಬೆಳಿಗ್ಗೆ, ಸಂಜೆ,ಕೆಲಸ ಮಾಡಿ ಬಾಕಿ ಅವಧಿ ತೀರಿಸಲೇ ಬೇಕು.ಇಲ್ಲವಾದರೆ ಬೋನಸ್ ಇಲ್ಲ. ಶ್ರೀಮಂತ ದೇಶಗಳಿಗೆ ರಫ್ತಾಗುವ ಉಡುಪುಗಳಿಗೆ ಇರುವ ಬೆಲೆ,ಬಟ್ಟೆ ತಯಾರಿಸುವ ಮಹಿಳೆಯರಿಗಿಲ್ಲ ಎಂಬುದೇ ಆತಂಕ. ಬಡ ಮಹಿಳಾ ಕಾರ್ಮಿಕರೆಂದರೆ ಎಲ್ಲವನ್ನು ಬಿಟ್ಟವರೆಂಬ ಭಾವನೆ.ಹೇಳೋರು,ಕೇಳೋರುಯಾರಿಲ್ಲವೆಂಬಂತೆ ಗಾರ್ಮೆಂಟ್ಸ ಫ್ಯಾಕ್ಟರಿ ಗಳಲ್ಲಿ ನಡೆದುಕೊಳ್ಳುವ  ರೀತಿಗೆ ನೊಂದು ನುಡಿದು ಮರೆಯಾಗುತ್ತಾರೆ. ಲೈಂಗಿಕ ಕಿರುಕುಳ,  ದೌರ್ಜನ್ಯ ಗಳಿಂದ ಮುಕ್ತರಾಗಿಲ್ಲ.ಮನೆಗೆ ಬರುವ ಸಂದರ್ಭದಲ್ಲಿ ಮೇಲ್ವಿಚಾರಕರು ತಪಾಸಣೆಯ ನೆಪವೊಡ್ಡಿ ಮುಟ್ಟುವುದು‌ ಮಹಿಳೆಯರ ಪಾಲಿಗೆ ಮಾನಸಿಕ ಹಿಂಸೆ. “ಅನುಷ್ಠಾನಕ್ಕೆ ನೂರೆಂಟು ಲೋಪದೋಷಗಳು.” ದೌರ್ಜನ್ಯ, ಲೈಂಗಿಕ ಕಿರುಕುಳ,ಖಿನ್ನತೆಗೆ ಒಳಗಾಗುವುದು. ಗಾರ್ಮೆಂಟ್ಸ ಕಾರ್ಮಿಕರಿಗೆ ಸಾಮಾನ್ಯ ಸಂಗತಿಯಾಗಿದೆ.ಎಕೆಂದರೆ ನೋವಿನ ಜ್ವಾಲೆಯ ಮೇಲೆ ಬೆಂದವರು. ಬರಿ ಬೆಂಗಳೂರಲ್ಲೆ ೧೨೦೦ ಗಾರ್ಮೆಂಟ್ಸ ಗಳಿವೆ.೪.೫ ಲಕ್ಷಕ್ಕೂ ಹೆಚ್ಚು ಕಾರ್ಮಿಕರು. ಬಹುತೇಕವಾಗಿ ಮಹಿಳೆಯರು.ಗ್ರಾಮಿಣಭಾಗದವರು.ಪ್ರತಿ ಐದು ವರ್ಷಗಳಿಗೊಮ್ಮೆ ಗಾರ್ಮೆಂಟ್ಸ ಕಾರ್ಮಿಕರ ವೇತನ ಪರಿಷ್ಕರಣೆಯಾಗಿಲ್ಲವೆನ್ನುವುದು ವಿಷಾದನೀಯ. ಕನಿಷ್ಠ ವೇತನ ೮.೩೦೦ ರೂಪಾಯಿ ಸಿಗುತ್ತಿದ್ದು.ಕನಿಷ್ಠ ವೇತನ ವನ್ನು ಮೂರು ವರ್ಷಕ್ಕೊಮ್ಮೆಯಾದರು ಪರಿಷ್ಕರಣೆ ಮಾಡದಿರುವುದು ಕಾರ್ಮಿಕರ ಬದುಕಲ್ಲಿ ಸಮಸ್ಯೆಗಳು ಸೃಷ್ಟಿಯಾಗಲು ಕಾರಣವಾಗಿದೆ. ರಾಜ್ಯ ಸರ್ಕಾರ ೨೦೧೮ ರಲ್ಲಿ ಒಟ್ಟು ೮೨ ಶೆಡ್ಯೂಲ್ಡ್ ಉದ್ಯಮಗಳಲ್ಲಿ ಕನಿಷ್ಠ ಮಾಸಿಕ ವೇತನ ೧೧,೫೦೦ ರೂ.ವೇತನ ನಿಗದಿ ಪಡಿಸಿ ಕರುಡು ಅಧಿಸೂಚನೆ ಪ್ರಕಟಿಸಿತ್ತು. ನಂತರ ಏಕೋ ಗಾರ್ಮೆಂಟ್ಸ ವಲಯವನ್ನು ಹೊರಗಿಡಲಾಯಿತು.ಇದರ ಪರಣಾಮ ಕನಿಷ್ಠ ವೇತನ ೮.೩೦೦/ರೂ.ಗಳಲ್ಲಿಯೇ ಮುಂದುವರೆದಿದೆ ಎಂದರೆ ಗಾರ್ಮೆಂಟ್ಸ ಕಂಪನಿಗಳ ಸ್ವಾರ್ಥ,ಲಾಭಿಯೇ ಇದಕ್ಕೆ ಕಾರಣವೆನ್ನಬಹುದು. “ಪುನಃ ಸಮಾಜದ ಕೆಂಗಣ್ಣಿಗೆ ಗುರಿಯಾದರೆಂಬ ಭಯ“. *ಸವೋಚ್ಛ ನ್ಯಾಯಾಲಯದ ಸೂಚನೆ ಇದ್ದರೂ ದೂರು ಸಲ್ಲಿಸಲು ಸಮಿತಿಗಳನ್ನು ಸ್ಥಾಪಿಸಿರುವುದು ಕೆಲವೇ ಸಂಸ್ಥೆಗಳು ಮಾತ್ರ. *ದೂರು ಸಲ್ಲಿಸಿದ ಮಹಿಳೆಯರು ಕ್ರೂರ ಸಮಾಜವನ್ನು ಎದುರಿಸಬೇಕು.ತಪ್ಪಿತಸ್ಥರಿಗೆ ಛೀಮಾರಿ ಹಾಕುವ ಬದಲು ಮಹಿಳೆಯರ ಮೇಲೆ ಗೂಬೆ ಕೂರಿಸಲಾಗುವುದೆಂಬ ಭಯದಿಂದ ಮಹಿಳೆಯರು ದೂರು ಸಲ್ಲಿಸುವುದಿಲ್ಲ. *ಕೆಲಸ ಕಳೆದು ಕೊಳ್ಳುವ ಭಯ ಮಹಿಳೆಯರನ್ನು ದೂರು ಸಲ್ಲಿಸುವುದರಿಂದ ದೂರವಿಡುತ್ತದೆ. * ನ್ಯಾಯ ತೀರ್ಮಾನಕ್ಕೆ ಸಮಯಾವಕಾಶ ಅಧಿಕ ಬೇಕು. ಅದೊಂದು ಸಂಕಟ ಅನುಭವಿಸಬೇಕು. “ಅಭದ್ರತೆಯನ್ನು ನಿವಾರಿಸುವ ಕ್ರಮಗಳು ಅನಿವಾರ್ಯ. ಕೆಲಸಕ್ಕೆ ಬರುವ ಮಹಿಳೆಯರ ಕೌಟುಂಬಿಕ ಹಿನ್ನೆಲೆ ಸುಖಮಯವಾಗಿರುವುದಿಲ್ಲ.ಯಾವುದೋ ಕಷ್ಟಗಳ ಸುಳಿಗೆ ಸಿಲುಕಿ ಪರಿಹರಿಸಿಕೊಳ್ಳಲು ನೂರಾರು ಕನಸು ಕಂಡು ಸುರಕ್ಷಿತ ಜಾಗದಲ್ಲಿ ನಾವಿದ್ದೇವೆಯೆಂಬ ಭಾವನೆಯಿಂದ ಬಂದಿರುವವರು.ಅವರಿಗೆ ಅಸಹನೀಯ ಸನ್ನಿವೇಶಗಳು,ಲೈಂಗಿಕ ದೌರ್ಜನ್ಯಗಳು,ಕಿರುಕುಳಗಳು,ಮಾನಸಿಕ ಕಿರುಕುಳ ದುಡಿವ ಸ್ಥಳದಲ್ಲಾದರೇ ಎದುರಿಸುವ ಮನೋಬಲವೆಲ್ಲಿ.? ಹೀಗಾಗಿ ಕಾರ್ಮಿಕ ಕಾಯಿದೆ ಮಹಿಳೆಯರಿಗೂ ಅನ್ವಯವಾಗಬೇಕು… * ಪ್ಯಾಕ್ಟರಿಯಿಂದ ಮನೆಗೆ ಹೋಗುವ ಮುನ್ನ ತಪಾಸಣೆ ಮಾಡುವವರು ಮಹಿಳೆಯರಾದರೇ ಸೂಕ್ತ. * ಭಾರತದ ಪ್ಯಾಕ್ಟರಿ ಕಾಯ್ದೆಯನ್ವಯ ವೈದ್ಯಕೀಯ ಔಷಧಿ ಗಳನ್ನು ನುರಿತ ನಸ್೯,ಅಥವಾ ವೈದ್ಯರು ನಿರ್ವಹಿಸಬೇಕು. ಹಾಗೂ ಮಹಿಳಾ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆಗೆ ಅವಕಾಶ ನೀಡಬೇಕು. * ವ್ಯವಸ್ಥಿತ ಶೌಚಾಲಯವಿರಬೇಕು.ಕುಡಿಯೋನೀರು, ಶುದ್ಧಗಾಳಿ,ಅನಾರೋಗ್ಯದವರಿಗೆ ಹಾಗೂ ಬಾಣಂತಿ, ಗರ್ಭಿಣಿಯರಿಗೆ ವಿನಾಯತಿ ನೀಡಬೇಕು. * ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.ಹಾಗೂ ಪಿ ಎಪ್ ನ್ನು ಮಾಲಿಕರು ಸರಿಯಾದ ವೇಳೆಗೆ ತುಂಬಿ ಸಿಗುವಂತೆ ಮಾಡಬೇಕು.ಓಟಿಗೆ ವೇತನ ನೀಡಬೇಕು.  * ಇಎಸ್ಐ ಮೂಲಕ ರಜೆಗೆ ಅಲಿಯದೇ ಕಂಪನಿಯಲ್ಲೇ ರಜೆ ಪಡೆವ ಸೌಲಭ್ಯ ಪಡೆಯುವಂತಿರಬೇಕು. *ಗಾರ್ಮೆಂಟ್ಸ ಗಳಲ್ಲಿ ಮಹಿಳೆಯರಿಗೆ ರಾತ್ರಿ ಪಾಳಿಗೆ ಅವಕಾಶ ನೀಡಿದರೆ ಸಾಲದು,ಅವರ ಭದ್ರತೆ ಕಡೆಗೂ ಹೆಚ್ಚು ಗಮನವಹಿಸಬೇಕು,ಕ್ಯಾಬ್ನಲ್ಲಿ ಭದ್ರತೆ ನೀಡಬೇಕು. * “ವನಿತಾ ಸಂಗಾತಿ” ಯೋಜನೆಯಡಿ ಗಾರ್ಮೆಂಟ್ಸ ನಲ್ಲಿ ದುಡಿವ ಮಹಿಳಾ ಕಾರ್ಮಿಕರಿಗೆ ಉಚಿತ ಪಾಸ್ ನೀಡುವ ವಿಚಾರ ಜಾರಿಯಲ್ಲಿ ಬರಬೇಕು. ಉಪಸಂಹಾರ. ಹೆಣ್ಣು ಮಕ್ಕಳು ಹೊಸಿಲದಾಟಿ ಪುರುಷರಿಗೆ ಸಮನಾಗಿ ಹೆಗಲು ಕೊಟ್ಟು ದುಡಿಯುವುದು ತಮ್ಮ ಸುಖಕಲ್ಲ..! ಮನೆಯು ನೆಮ್ಮದಿಯಿಂದ ಮುಂದೆ ಸಾಗಲು.ಆದರೆ ಇಂದು ದುಡಿವ ಮಹಿಳೆಯ ಕುರಿತು ಚಿಂತಿಸುವ ವರ್ಗ ಮುಂದೆ ನಿಂತು ಬೆಂಬಲಿಸುತ್ತಿಲ್ಲ..ಮಹಿಳೆ,ದುಡಿದು ತರಬೇಕು, ಹೆರಬೇಕು, ಮಾಡಿಹಾಕಬೇಕು.ಈ ಸ್ಥಿತಿ ಕೂಲಿ ಕಾರ್ಮಿಕರಲ್ಲಿ.ಅದರಲ್ಲೂ ಈ ಗಾರ್ಮೆಂಟ್ಸ ಕಾರ್ಖಾನೆಗಳಲ್ಲಿ ಒಳ ಉಡುಪುಗಳನ್ನು ಹೊಲಿಯುವ, ಅಸಂಖ್ಯಾತರ ಮಹಿಳೆಯರ ಬದುಕು ಬೀದಿ ಪಾಲಾಗುತ್ತಿರುವುದನ್ನು ,ಕಂಡು ಕಾಣದಂತೆ ಕುಳಿತಿರುವ ಪ್ರಭುತ್ವಕ್ಕೆ ಏನು ಹೇಳುವುದು. ಅನಾಹುತವಾದರೆ ಸಾಂತ್ವಾನದ ನುಡಿಯುಯಿಲ್ಲ. ಕೆಲಸವೂಇಲ್ಲ,ಎಲ್ಲ ರೀತಿಯ‌ ದೌರ್ಜನ್ಯ ಗಳನ್ನು  ಮೌನವಾಗಿ ಎದುರಿಸಿ ಅರಳುವ ಮುನ್ನ ಬಾಡಿ ಹೋಗುವ ವೇದನೆಯ ಹೂಗಳು.ಇನ್ನಾದರೂ ಕಾರ್ಮಿಕರೆಂದರೆ ಪುರುಷರಷ್ಟೇಯಲ್ಲ..ಮಹಿಳೆಯರು ಎಂಬುದನ್ನು ಅರಿತು ಸಮಾನತೆ ಕಾಯ್ದುಕೊಳ್ಳಬೇಕಿದೆ…ಅಂದಾಗ ಕಾರ್ಮಿಕ ದಿನಕ್ಕೊಂದು ಬೆಲೆ…..

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ನಾವು ಕಾರ್ಮಿಕರು ಸಾಯಬಣ್ಣ ಮಾದರ ನಾವು ಕಾರ್ಮಿಕರು ನಮ್ಮಗರಿವಿಲ್ಲದೆ ಹಗಲು ಇರುಳು ಚಲಿಸುತ್ತಿವೆ ಕಷ್ಟಕಾರ್ಪಣ್ಯಕೆ ಬರವಿಲ್ಲದೆ ಚಲಿಸುತ್ತಿದೆ ಜೀವ ಮುಸುಕು ಹೊದ್ದು ಹಸುರನುಟ್ಟು ನಾಳೆ ಎಂಬುವುದು ಭಯವಿಲ್ಲದೆ! ತಲೆಯೊಡೆದು ಬದಕುವವರು ನಾವಲ್ಲ ಬರಿ ದುಡಿದು ತಿನ್ನುವರು ನಾವೆಲ್ಲ ! ನಿಮ್ಮ ಗೋಪುರ ಮೀನಾರಗಳಿಗೆ ನಮ್ಮ ಎಲುಬುಗಳೆ ಹಂದರವಾಗಿ ನಿಮ್ಮ ತೆವಳುವ ಕನಸುಗಳಿಗೆ ನಮ್ಮ ಸ್ವಪ್ನದೆಲೆಗಳಾಗಿ ಚಲಿಸುತ್ತಿದ್ದೇವೆ ಮಾಸಿದ ಬಣ್ಣ ಬಳಿದುಕೊಂಡು ನಿಮ್ಮ ಭಾಷೆ-ಭಾವಗಳು ನುಂಗಿ ಹಾಕಿವೆ ಎಷ್ಟೊಂದು ಜೀವಗಳು ಉಸಿರಿನ ಸಮಾಧಿಗಳ ಮೇಲೆ ಆಕಾಶದಲ್ಲಿ ಹಾರಾಡಿ ನೀರಿನಲ್ಲಿ ತೇಲಾಡಿ ಭೂಮಿಯಲ್ಲಿ ಹುಂಕರಿಸುವವರೆ ಕಣ ಕಣದ ಕೆಂಬಣ್ಣ ಸುರಿಸಿ ದೇಶ ಕಟ್ಟಲು ಜೀವ ತೆತ್ತವರು ನಾವು ! ಚಿಗುರಿದ ಹೂವ ಮಾಲೆ ಮಾಡಿಕೊಂಡವರು ನೀವು! ಮಲಹೊತ್ತು ಚಪ್ಲಿ ಹೊಲೆದು ಚರಂಡಿ ಬಳಿದು ರೋಡಿಗೆ ಟಾರು ಹೊತ್ತವರು ನಿಮ್ಮ ಶವಕ್ಕೆ ಮುಕ್ತಿದಾತರು ನಾವು ! ಬರಿ ಸ್ವಚ್ಛ ಭಾರತ ವಾರಸದಾರರು ನೀವು ಮಳೆ ಬಿಸಿಲಿಗೆ ಮೈಯೊಡ್ಡಿ ದಬ್ಬಾಳಿಕೆ ಅವಮಾನಕ್ಕೆ ಕಲ್ಲಾಗಿ ದುಡುಮೆಯೇ ದೇವರೆಂದು ಹೊಟ್ಟೆ ತುಂಬುವ ಕನಸಿಗಾಗಿ ಕಲ್ಲಿಗು ಕಣ್ಣೀರಾದ ಬದಕು ನಮ್ಮದು ಬೆನ್ನು ಬಾಗಿಸಿ ಕಣ್ಣು ಪಿಳುಕಿಸಿ ಚರ್ಮ ಸುಟ್ಟು ನೆರಿಗೆ ಬಿದ್ದವರು ಆಸೆಗೋಪುರ ಕಳಚಿ ಆಕಾಶವೆ ಚಪ್ಪರ ಹೊದ್ದು ಭೂಮಿಯೇ ಹಾಸಿಗೆ ಮಾಡಿಕೊಂಡು ಬದುಕುವ ನಮ್ಮ ಬಾಳೆ ಬೆಂಗಾಡು ನಾವು ಇರದಿದ್ದರೆ ನಿಮ್ಮ ಬಾಳು ಬರಿ ಗೋಳು !! ******

ಕಾರ್ಮಿಕದಿನದ ವಿಶೇಷ-ಲೇಖನ

ಅರ್ಥ ಕಳೆದುಕೊಳ್ಳುವ ಸಮಯ ಪ್ರಮೀಳಾ .ಎಸ್.ಪಿ.ಜಯಾನಂದ್. ಅರ್ಥ ಕಳೆದುಕೊಳ್ಳುವ ಸಮಯ. “ರೈತ ದೇಶದ ಬೆನ್ನೆಲುಬು” ಎನ್ನುವರು.ಹಸಿವು ಇಂಗಿಸುವ ಕಾಯಕ ಮಾಡುವ ರೈತ ದೇಹದ ಮತ್ತು ದೇಶದ ಆಧಾರ  ವಾಗಿರುವುದು ಸತ್ಯ. ಹಾಗಾಗಿಯೇ ದೇಶದ ಹಲವಾರು ಯೋಜನೆಗಳು ರೈತರ ಪರವಾಗಿ ಬಂದು ನಿಲ್ಲುತ್ತವೆ.ಆದರೆ ಕೃಷಿಭೂಮಿ ಇಲ್ಲದವರು,ಕಾರ್ಖಾನೆ ಗಳಲ್ಲಿ ದುಡಿಯುವ ಮಂದಿ,ಕೂಲಿ ಕಾರ್ಮಿಕರು, ಹಲವಾರು ಸ್ತರಗಳಲ್ಲಿ ದುಡಿದು ದೇಶದ ಅಭಿವೃದ್ಧಿಗೆ ಕರಣರಾಗುತ್ತಾರೆ.ಇವರುಗಳಲ್ಲಿ ಎರಡು ವಿಧ. 1-ಸಂಘಟಿತ ಕಾರ್ಮಿಕರು 2-ಅಸಂಘಟಿತ ಕಾರ್ಮಿಕರು. ಈ ದೇಶದ ಕಾರ್ಮಿಕ ಕಾಯ್ದೆಯು ಹಲವು ಸೌಲಭ್ಯಗಳು ಮತ್ತು ಭದ್ರತೆಯನ್ನು ಒದಗಿಸಿದರು ಕೂಡ ಅದು ಕೇವಲ ಬೆರಳೆಣಿಕೆಯಷ್ಟು ಕಾರ್ಮಿಕರನ್ನು ಮಾತ್ರ ತಲುಪುತ್ತಿದೆ. ಕಾರ್ಮಿಕರ ಪರವಾಗಿ ಹುಟ್ಟಿಕೊಂಡ ಅನೇಕ ಸಂಘಗಳು ಕಾರ್ಮಿಕರ ಕಲ್ಯಾಣ ಮರೆತು ಒತ್ತಡ ಗುಂಪುಗಳಾಗಿ ಕೇವಲ ಹಣ ಪೀಕುವ ಕಾರ್ಯ ಮಾಡುತ್ತಿರುವುದು ತಿಳಿಯದ ವಿಷಯವೇನಲ್ಲ. ನಗರ ಪ್ರದೇಶದ ಬಹುರಾಷ್ಟ್ರೀಯ ಕಂಪನಿಗಳ ಲ್ಲಿನ ಕಾರ್ಮಿಕರು ಒಗ್ಗಟ್ಟು ಪ್ರದರ್ಶನ ದಿಂದ ಬಹುಬೇಗನೆ ಸವಲತ್ತು ಪಡೆಯುವಲ್ಲಿ ಯಶಸ್ಸು ಕಾಣುತ್ತಾರೆ.ಆದರೆ ತಳ ಹಂತದಲ್ಲಿ ಕೆಲಸ ಮಾಡುವ  ಕಾರ್ಮಿಕ ರಾದ *ಅಂಗನವಾಡಿ ಕಾರ್ಯಕರ್ತೆ ಯಾರು *ಆಶಾ ಕಾರ್ಯಕರ್ತೆಯರು *ನೀರ್ಗಂಟಿ ಗಳು *ಬಿಸಿಯೂಟದ ನೌಕರರು *ಪೌರಕರ್ಮಿಕರು *ರಸ್ತೆ ,ಚರಂಡಿ ಕೆಲಸಗಾರರು *ಕಟ್ಟಡ ಕಾರ್ಮಿಕರು *ಮಾಲ್ಗಳು,ಆಸ್ಪತ್ರೆ,ಹೋಟೆಲ್, ಅಂಗಡಿಗಳಲ್ಲಿ ದುಡಿಯುವವರು *ದಮನಿತ ಲೈಂಗಿಕ ಕಾರ್ಯಕರ್ತರು *ಮಾರುಕಟ್ಟೆಯಲ್ಲಿ, ರೈಲ್ವೆ ,ಬಸ್ ನಿಲ್ದಾಣದಲ್ಲಿ ದುಡಿಯುವ ಹಮಾಲಿಗಳು. *ವಾಚಮನ್ ಗಳು *ಕಂಪ್ಯೂಟರ್ ಅಪರೇಟರ್ಸ್ * ಹೊರಗುತ್ತಿಗೆ ಕೆಲಸ ಗಾರರು…. ಇನ್ನೂ ಮುಂತಾದ ಕೆಲಸಗಾರರಲ್ಲಿ ಕೆಲವರು ಸಂಘಟಿತರಾಗಿ ದ್ದರೆ ಹಲವರಿಗೆ ಸಂಘಟನೆಯ ಮಹತ್ವವೇ ತಿಳಿದಿಲ್ಲ. ಸಂಘಟನೆ ಮಾಡಿದವನ ನೌಕರಿಗೆ ಕುತ್ತು. ಅನೇಕ ವಲಯಗಳಲ್ಲಿ ಕಾರ್ಮಿಕನೊಬ್ಬ ಸಂಘಟನೆ ಮಾಡಿ ಹೋರಾಟಕ್ಕೆ ಮುಂದೆ ನಿಂತರೆ ಅವನನ್ನು ಕ್ಷುಲ್ಲಕ ಕಾರಣ ನೀಡಿ ಕೆಲಸದಿಂದ ವಜಾ ಗೊಳಿಸುವ ಕಾರ್ಯವನ್ನು ಆಡಳಿತ ಮಂಡಳಿ ಮಾಡುತ್ತದೆ.ಸರ್ಕಾರ ದ ಇಲಾಖೆಯ ಅಧಿಕಾರಿಗಳು ಇದರ ಹೊರತಾಗಿ ಕಾರ್ಯನಿರ್ವಹಿಸಿಲ್ಲ. ಕಾರ್ಮಿಕರ ಪರ ನಿಲ್ಲವ ನೌಕರನನ್ನು ಮಟ್ಟ ಹಾಕಲು ಅಧಿಕಾರ ವರ್ಗ ಸದಾ ಹಪಹಪಿಸುತ್ತದೆ.ಈ ಕಾರಣದಿಂದ ಲೇ ಕೆಲವು ಕಾರ್ಮಿಕರು ಭಯದಿಂದ ಹೊರಗಿನ ಕಾರ್ಮಿಕ ಪಕ್ಷ ಮತ್ತು ಸಂಘಟನೆ ಗಳ ಜೊತೆ ಕೈ ಜೋಡಿಸುತ್ತವೆ. ಉದಾಹರಣೆಗೆ… ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕಾರ್ಮಿಕರು, ನಗರಪಾಲಿಕೆ ವ್ಯಾಪ್ತಿಯ ಗಾರ್ಮೆಂಟ್ಸ್ ಕಾರ್ಮಿಕರು..ಹೊರಗಿನ ಸಂಘಟನೆ ಜೊತೆ ಸೇರಿ ಹೋರಾಟಕ್ಕೆ ಇಳಿಯುತ್ತಾರೆ. ಭ್ರಷ್ಟ ಕಾರ್ಮಿಕ ಮುಖಂಡರು. ಇಂದು ಭಾರತದ ಅನೇಕ ಕಾರ್ಮಿಕ ಸಂಘಟನೆಗಳ ಪರವಾಗಿದ್ದ ಪಕ್ಷದ ಮುಖಂಡ ರು ರಾಜಕೀಯ ಅಧಿಕಾರ ದ ಲಾಲಸೆಗೆ ಬಿದ್ದು ತಮ್ಮತನವನ್ನು ಕಳೆದುಕೊಂಡು ಕೇವಲ ಹೆಸರಿಗಷ್ಟೇ ಉಳಿದಿವೆ. ಒಂದು ದಿನದ ಮುಷ್ಕರ ಕ್ಕೆ ಕಾರ್ಮಿಕರನ್ನು ಪ್ರೇರೇಪಿಸಿ ಅವರಿಂದ ಕಡ್ಡಾಯವಾಗಿ ಹಣ ವಸೂಲಿ ಮಾಡಲಾಗುತ್ತದೆ. ಮೊದಲೇ ಬಡಪಾಯಿ ಸ್ಥಿತಿ ಯಲ್ಲಿನ ಕಾರ್ಮಿಕರು ಸಂಘಟನೆ ನೆಪದಲ್ಲಿ ಹಣ ನೀಡಬೇಕಾದ ಸ್ಥಿತಿಯಿದೆ.ಹೀಗಿರುವಾಗ ಕೆಲವು ಕಾರ್ಮಿಕ ಪರವಾದ ಪಕ್ಷದ ನಾಯಕ ರು ಸರ್ಕಾರದ ಬಂಡವಾಳ ಗಾರರ ಕಾರ್ಮಿಕ ವಿರೋಧಿ ನೀತಿಯನ್ನು ಬೆಂಬಲಿಸಿ ಸ್ವಾಮಿನಿಷ್ಠೆ ವ್ಯಕ್ತಪಡಿಸಿ ಸ್ವಕಾರ್ಯ ಪೂರ್ಣ ಗೊಳಿಸಿಕೊಳ್ಳುವುದನ್ನು ಕಾಣ ಬಹುದಾಗಿದೆ. ಮಹಿಳಾ ಕಾರ್ಮಿಕರ ದುಸ್ಥಿತಿ. ಅನೇಕ ಕಡೆ ತಾವೇ ಕೇಳಿ ಪಡೆದ ಉದ್ಯೋಗ ದಲ್ಲಿರುವ ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ.ಅದರಲ್ಲಿಯೂ ಗಾರ್ಮೆಂಟ್ಸ್ ಮತ್ತು ವಾಹನಗಳ ಲ್ಲಿ  ನಿಂತು ಕೆಲಸ ಮಾಡುವ ಹೆಣ್ಣುಮಕ್ಕಳು ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಕಳೆದುಕೊಳ್ಳುತ್ತಿದ್ದಾರೆ. ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವುದು ಆಕೆಯ ಕುಟುಂಬದ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತದೆ.ಕೌಟುಂಬಿಕ ಸಾಮರಸ್ಯ ಕುಂಟಿತ ವಾಗಿ ಮಕ್ಕಳು ಅಪರಾಧಿ ಚಟುವಟಿಕೆ ಗಳಲ್ಲಿ ಮುಂದುವರೆಯುವುದನ್ನು ನೋಡಬಹುದಾಗಿದೆ. ಸದಾಕಾಲ ತಮ್ಮ “ನೌಕರಿ ಭದ್ರತೆ” ಯ ಬಗ್ಗೆ ಯೋಚಿಸೋ ಮಹಿಳೆಯರು ಬಹುಬೇಗ ಒತ್ತಡಕ್ಕೆ ಸಿಲುಕುತ್ತಾರೆ. ಕುಟುಂಬ ದೊಳಗಿನ ಸ್ತ್ರೀಯರ ಮಾನಸಿಕ ಮತ್ತು ದೈಹಿಕ ಆರೋಗ್ಯ ವು ತನ್ನ ಕುಟುಂಬದ ಮೇಲಷ್ಟೇ ಅಲ್ಲ ಇಡೀ ದೇಶದ ಮೇಲೂ ಪ್ರಭಾವ ಬೀರುತ್ತದೆ ಎಂಬುದನ್ನು ಮರೆಯಬಾರದು.        ಹಾಗಾಗಿ ಮಹಿಳಾ ಕಾರ್ಮಿಕರ ಬಗ್ಗೆ ಅಸಡ್ಡೆ ತೋರಲೇ ಬಾರದು. ಅಸಂಘಟಿತ ಕಾರ್ಮಿಕರು. ಅಲ್ಲಲ್ಲಿ ಕಡಿಮೆ ಸಂಖ್ಯೆ ಮತ್ತು ಚದುರಿಹೋದ ಕಾರ್ಮಿಕರನ್ನು ಸಂಘಟನೆ ಮಾಡಲು ಯಾರೂ ಮುಂದೆ ಬರುವುದಿಲ್ಲ.ಇಲ್ಲಿ ಅವರನ್ನು ಗುರುತಿಸುವುದೇ ದೊಡ್ಡ ಸವಾಲು. ಒಂದು ದಿನ ತರಕಾರಿ ಮಾರಿದ ವನೊಬ್ಬ ಇನ್ನೊಂದು ದಿನ ಕಟ್ಟಡ ಕರ್ಮಿಕನಾಗಿ ಮಗದೊಂದು ದಿನ ವಾಚಮನ್ ಆಗಿ ಕೆಲಸ ಮಾಡುವ ಬಹುತೇಕ ಮಂದಿ ಇದ್ದಾರೆ.ಹಾಗೆಯೇ ವಲಸೆ ಇವರ ಇನ್ನೊಂದು ಸಮಸ್ಯೆ. ಕ್ರಷರ್ ಗಳ ಕಾರ್ಮಿಕ ವರ್ಗವೂ ಇದಕ್ಕೆ ಹೊರತಾಗಿಲ್ಲ. ನಿಗಧಿತ ಗುರುತಿನ ಚೀಟಿ ನೀಡಿ ಸೌಲಭ್ಯಗಳನ್ನು ಒದಗಿಸಲು ಅಸಂಘಟಿತ ಕಾರ್ಮಿಕರನ್ನು ಗುರುತಿಸಲು ಬೇರು ಮಟ್ಟದಲ್ಲಿ ಕೆಲಸ ಮಾಡುವ ನೌಕರರನ್ನೇ ಇಲ್ಲಿ ಬಳಸಿಕೊಳ್ಳಬೇಕಾಗುತ್ತದೆ. ಕಾರ್ಮಿಕ ಕಲ್ಯಾಣ ಇಲಾಖೆ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸುವ ಬದಲು ವಂದಿಮಾಗದರಾದರೆ, ಬಂಡವಾಳ ಹೂಡಿಕೆದಾರರ,ಆಡಳಿತ ಮಂಡಳಿ ಅಧಿಕಾರ ವರ್ಗದವರ ಬಾಲ ಹಿಡಿಯುವ ಕಾರ್ಮಿಕ ಪಕ್ಷಗಳಿದ್ದರೆ ದುಡಿಯುವ ಕೈಗಳು ಕೊಳೆಯುತ್ತವೆಯೇ ಹೊರತು ನೆಮ್ಮದಿಯಿಂದ ಅನ್ನ ತಿನ್ನಲು ಸಾಧ್ಯವಿಲ್ಲ. ಈ ದೇಶದ ಅಧಿಕಾರಿಗಳು, ನಾಯಕರು,ಬಡ ಕಾರ್ಮಿಕರ ನೋವು ಅರಿಯದೇ ಕಾರ್ಮಿಕರ ಹೋರಾಟಗಳನ್ನು ಮತ್ತು ಪ್ರಾಮಾಣಿಕ ಮುಂದಾಳುಗಳನ್ನು ದಹಿಸದೇ ಗೌರವ ದಿಂದ ನಡೆಸಿಕೊಳ್ಳಬೇಕಿದೆ. ಆಗ ಮಾತ್ರ ಮೇ-ಒಂದರ ಕಾರ್ಮಿಕ ದಿನಕ್ಕೊಂದು ಅರ್ಥ ಸಿಗಬಹುದೇನೋ. ಕೇವಲ ದಿನ ಒಂದನ್ನು ಸಂಭ್ರಮಿಸುವುದು ಕಣ್ಣೊರೆಸುವ ತಂತ್ರವಾಗುತ್ತದೆಯೇ ಬೇರೇನೂ ಸಾಧ್ಯವಾಗುವುದಿಲ್ಲ. *******

Back To Top