ಕಥಾಯಾನ

Image result for hd photos of abstract paintings

ತ್ರಿಶಂಕು

ಟಿ.ಎಸ್.ಶ್ರವಣಕುಮಾರಿ

ತ್ರಿಶಂಕು

ಹಪ್ಪಳ ಒತ್ತುತ್ತಿದ್ದ ಸೀತಮ್ಮ, ಬಟ್ಟಲಿಗೆ ಮುಚ್ಚಿದ್ದ ಒದ್ದೆ ಬಟ್ಟೆಯನ್ನು ಸರಿಸಿ ಉಳಿದ ಉರುಳಿಗಳ ಲೆಕ್ಕ ಹಾಕಿದರು. ಇನ್ನು ಹದಿನೈದು ಉಂಡೆಗಳಿವೆ. ಬೆಳಗ್ಗೆಯೇ ಮಹಡಿಯ ಮೇಲೆ ಹಪ್ಪಳ ಒಣಗಿ ಹಾಕಲು ಸವರಿಸುತ್ತಿದ್ದುದನ್ನು ನೋಡಿದ್ದ ಧೀರಜನ ಫ್ರೆಂಡ್ಸ್ “ಅಜ್ಜಿ ನಾವೆಲ್ಲಾ ಶಾಲೆಯಿಂದ ಬಂದಮೇಲೆ ತಿನ್ನಕ್ಕೆ ಹಪ್ಪಳದ ಹಿಟ್ಟು ಕೊಡಬೇಕು” ಅಂತ ತಾಕೀತು ಮಾಡಿ ಹೋಗಿದ್ದರು. ಧೀರಜ್ ಅಮೆರಿಕಕ್ಕೆ ಹೋದಮೇಲೆ ಈ ಮಕ್ಕಳು ಮನೆಗೆ ಬರುವುದೂ ಅಪರೂಪವೇ. ಯಾವಾಗಾದರೂ ಒಮ್ಮೊಮ್ಮೆ ಇಂಥದೇನಾದರು ಇದ್ದಾಗಷ್ಟೆ ಬರುತ್ತಾರೆ. ಪಾಪ ಅವರಾದರೂ ಯಾಕೆ ಬರುತ್ತಾರೆ? ಮುದುಕರೊಂದಿಗೆ ಆಡಲು ಸಾಧ್ಯವೇ? ಅವನಿದ್ದಾಗಾದರೆ ಮಲಗುವ ಹೊತ್ತು, ಶಾಲೆಗೆ ಹೋಗುವ ಸಮಯ ಬಿಟ್ಟರೆ ಮಿಕ್ಕಷ್ಟು ಹೊತ್ತೂ ನಮ್ಮ ಮನೆಯಲ್ಲೇ ಠಿಕಾಣಿ. ಧೀರಜನೇ ಇವರಿಗೆಲ್ಲಾ ಇಂತಹ ರುಚಿಯನ್ನು ಕಲಿಸಿರೋದು. ಮೊಮ್ಮಗನ ನೆನಪು ಬಂದ ತಕ್ಷಣ ಮುಖದ ಮೇಲೆ ತಂತಾನೇ ಒಂದು ಮುಗುಳ್ನಗು ಮೂಡಿತು. ʻಸರಿ, ಆ ಮಕ್ಕಳು ಶಾಲೆಯಿಂದ ಬಂದ ಮೇಲೆ ಒಬ್ಬೊಬ್ಬರೂ ಎರಡೂ, ಮೂರೋ ಉರುಳಿಯನ್ನು ತಿನ್ನುವುದಾದರೆ ಇಷ್ಟು ಸರಿಹೋಗುತ್ತದೆ. ಇನ್ನು ನಿಲ್ಲಿಸೋಣʼ ಎಂದುಕೊಳ್ಳುತ್ತಾ ಗಂಡನನ್ನು ಕರೆದರು. “ಇದಿಷ್ಟು ಹಪ್ಪಳ ಒಣಗಿ ಹಾಕಿ ಬಂದುಬಿಡಿ. ಅಲ್ಲಿಗೆ ಆಯ್ತು”. ಪೇಪರ್ ಓದುತ್ತಿದ್ದ ರಾಮಣ್ಣನವರು ಪಕ್ಕಕ್ಕಿಟ್ಟು ಎದ್ದರು. ಎರಡು ಮೂರು ಗಂಟೆಗಳ ಕಾಲ ಒಟ್ಟಿಗೆ ಕೂತಿದ್ದು, ಸೀತಮ್ಮನವರಿಗೆ ತಕ್ಷಣ ಎದ್ದು ನಿಲ್ಲಲಿಕ್ಕೆ ಆಗಲಿಲ್ಲ. ಸಾವರಿಸಿಕೊಳ್ಳುತ್ತಿರುವಾಗ ತಡೆಯಲಾಗದೇ ರಾಮಣ್ಣನವರು ಅಂದರು. “ಅದಕ್ಕೇ ಹೇಳಿದ್ದು. ಅಡಿಗರ ಅಂಗಡಿಯಿಂದ ತಂದಿಡ್ತೀನಿ. ತೊಂದರೆ ತೊಗೋಬೇಡ ಅಂತ. ನನ್ನ ಮಾತೆಲ್ಲಿ ಕೇಳ್ತಿ ನೀನು” ಲಟ್ಟಿಸಿದ ಹಪ್ಪಳದ ತಟ್ಟೆಯನ್ನು ಹಿಡಿದುಕೊಂಡು ಮೆಟ್ಟಿಲ ಕಡೆ ನಡೆಯುತ್ತಾ. “ಅಂಗಡಿಯಿಂದ ತಂದರೆ ಮನೇಲಿ ಮಾಡಿದ ಹಾಗೆ ಆಗುತ್ತೇನೂ. ಆ ಮಗೂ ಫೋನ್ ಮಾಡಿದಾಗೆಲ್ಲಾ ಕೇಳತ್ತೆ. ಅಜ್ಜಿ ಹಪ್ಪಳ ಮಾಡಿದೀ ತಾನೆ, ಉಪ್ಪಿನಕಾಯಿ ಹಾಕಿದೀ ತಾನೆ, ನಾ ಬರ್ತಾ ಇದೀನಿ. ನಂಗೆಲ್ಲಾ ಬೇಕು ಅಂತ. ಏನೋ ಈ ವರ್ಷಕ್ಕೆ ಇಷ್ಟಾಯ್ತು” ಎನ್ನುತ್ತಾ ಸೀತಮ್ಮ ಸೀರೆ ಕೊಡವಿಕೊಂಡು, ಲಟ್ಟಣಿಗೆ, ಮಣೆ, ಎಲ್ಲವನ್ನೂ ಒಂದೊಂದಾಗಿ ಅಡುಗೆ ಮನೆಗೆ ತೆಗೆದುಕೊಂಡು ಹೋಗಿ ಇಟ್ಟರು.

ಆಗಲೇ ಹನ್ನೆರಡು ಘಂಟೆಯಾಗಿರಬೇಕು. ತಣ್ಣಗೆ ಏನಾದರೂ ಕುಡಿಯೋಣವೆನ್ನಿಸಿ, ಕಡೆದು ಇರಿಸಿದ್ದ ಮಜ್ಜಿಗೆಯನ್ನು ಎರಡು ಲೋಟಕ್ಕೆ ಬಗ್ಗಿಸಿಕೊಂಡು ಪಡಸಾಲೆಗೆ ಬಂದರು. “ಎಷ್ಟಾಯ್ತು ಅಂತ ಎಣಿಸಿದ್ರಾ” ಕೆಳಗೆ ಬಂದ ಗಂಡನ ಕೈಯಲ್ಲಿ ಮಜ್ಜಿಗೆಯ ಲೋಟವನ್ನಿಡುತ್ತಾ ಕೇಳಿದ್ರು. “ಆಗ್ಲೇ ಎಣಿಸಿದಾಗ ಎಂಭತ್ತೈದು ಆಗಿತ್ತು. ಈಗ ಎಷ್ಟಿತ್ತು” ಅಂದರು. “ಸರಿ ಹತ್ತಿರ ಹತ್ತಿರ ನೂರು ಆಗಿರತ್ತೆ ಬಿಡಿ” ಅನ್ನುತ್ತಾ ಮಜ್ಜಿಗೆಯ ಲೋಟವನ್ನು ಹಿಡಿದುಕೊಂಡು ಅಲ್ಲೇ ಸೋಫಾದ ಮೇಲೆ ಕುಳಿತವರು, “ದಿನಕ್ಕೆ ಇನ್ನೂರು, ಮುನ್ನೂರು ಹಪ್ಪಳ ಸಲೀಸಾಗಿ ಮಾಡ್ತಾ ಇದ್ದೆ. ಈಗ ನೂರು ಮಾಡೋಷ್ಟರಲ್ಲೇ ಸೋತು ಹೋಗೋ ಹಾಗಿದೆ” ನಿಟ್ಟುಸಿರು ಬಿಟ್ಟರು. “ಇನ್ನೇನು ಒಂದು ವಾರದಿಂದ ಒಂದೇ ಸಮ ಸಂಡಿಗೆ, ಉಪ್ಪಿನಕಾಯಿ, ಬಾಳಕ ಅಂತ ಏನೇನೋ ಮಾಡ್ಕೊಂಡು ಕುಣೀತಿದೀಯ. ವಯಸ್ಸು ಹಿಂದ್ಹೋಗತ್ತಾ? ಇನ್ನೇನೂ ಹಚ್ಚಿಕೊಳ್ಳಕ್ಕೆ ಹೋಗ್ಬೇಡ. ಇವತ್ತಾಗಲೇ ಗುರುವಾರ. ಭಾನುವಾರ ಅವರೆಲ್ಲಾ ಬಂದೇ ಬಿಡ್ತಾರೆ. ಇನ್ನೆರಡು ದಿನ ಸ್ವಲ್ಪ ಸುಧಾರಿಸ್ಕೋ. ಈಗ ಬೇಕಾದ್ರೆ ನಾನೇ ಅಡುಗೆ ಮಾಡ್ತೀನಿ” ಅಕ್ಕರೆಯಿಂದ ನುಡಿದರು. “ಬೆಳಗ್ಗೇನೇ ಕುಕ್ಕರ್ ಇಟ್ಟಾಗಿದೆ. ಸಾರಿಗೊಂದು ಕೂಡಿಟ್ರೆ ಆಯ್ತು. ಊಟಕ್ಕೆ ಕೂತುಕೊಳ್ಳೋಕೆ ಮುಂಚೆ ಮಾಡಿದ್ತಾಯ್ತು ಬಿಡಿ” ಎನ್ನುತ್ತಾ ಮಜ್ಜಿಗೆಯ ಲೋಟ ಕೆಳಗಿಟ್ಟು ಅಲ್ಲೇ ಸೋಫಾದಲ್ಲಿ ಹಿಂದಕ್ಕೆ ಒರಗಿದರು. “ಸರಿ. ನೀನು ಸ್ವಲ್ಪ ಸುಧಾರಿಸ್ಕೋ. ನಾನು ಹೋಗಿ ಎಲೆಕ್ಟ್ರಿಸಿಟಿ ಬಿಲ್ಲು ಕಟ್ಟಿ ಬರ್ತೀ ನಿ” ಎನ್ನುತ್ತಾ ಮೇಲಕ್ಕೆದ್ದರು. “ಹೊರಗಡೆ ಏನು ಬೆಳದಿಂಗಳೇ? ಈ ಸುಡುಸುಡು ಬಿಸಿಲಲ್ಲಿ ಹೊರಗೆ ಹೊರಟಿದೀರಲ್ಲ, ನಾಳೆ ಹೋದ್ರಾಯ್ತು ಬಿಡಿ” ಎಂದರೂ “ಇಲ್ಲ ನಾಳೆ ಗುಡ್ ಫ್ರೈಡೆ ರಜ. ಇನ್ನು ಶನಿವಾರವೊಂದೇ ಉಳಿಯೋದು. ಆಗ್ಲಿಲ್ಲ ಅಂದ್ರೆ ಕಷ್ಟ. ಭಾನುವಾರ ಅವರೆಲ್ಲಾ ಬಂದು ಬಿಟ್ರೆ, ಆಮೇಲೆ ಹೋಗೋಕಾಗೋದೇ ಇಲ್ಲ” ಎನ್ನುತ್ತಾ ಕೊಡೆ ಹಿಡಿದುಕೊಂಡು ಹೊರಟೇ ಬಿಟ್ಟರು ರಾಮಣ್ಣನವರು. ʻಸುಮ್ನೆ ನನ್ನ ಕಕ್ಕುಲಾತೀಗೆ ಹೇಳಬೇಕಷ್ಟೇ. ಅವರಿಗನ್ನಿಸಿದ್ದನ್ನೇ ಮಾಡೋದುʼ ಎಂದುಕೊಳ್ಳುತ್ತಾ “ಸರಿ ಬಾಗಿಲೆಳೆದುಕೊಂಡು ಹೋಗಿ; ಕೀ ನಿಮ್ಮ ಹತ್ರ ಇದೆ ತಾನೇ” ಎನ್ನುತ್ತಾ ಹಾಗೆಯೇ ಕಣ್ಣು ಮುಚ್ಚಿಕೊಂಡು ಒರಗಿಕೊಂಡರು ಸುಧಾರಿಸಿಕೊಳ್ಳಲೆಂಬಂತೆ…..

ಅತ್ತೆಯಿದ್ದಾಗ ಇಬ್ಬರೂ ಸೇರಿ ಅದೆಷ್ಟು ಹಪ್ಪಳ ಸಂಡಿಗೆ ಮಾಡುತ್ತಿದ್ದದ್ದು… ಶಿವರಾತ್ರಿ ಕಳೆಯಿತೆಂದರೆ ಸಾಕು ಇದೇ ಕೆಲಸ. ಇದ್ದದ್ದು ಶಿವಮೊಗ್ಗದ ಹತ್ತಿರದ ಊರಗಡೂರಿನಲ್ಲಿ. ದೊಡ್ಡ ಮನೆ, ಅಡಿಕೆ ತೋಟ, ಮನೆಯ ತುಂಬಾ ಹತ್ತಾರು ಆಳು ಕಾಳು, ಕೊಟ್ಟಿಗೆಯ ತುಂಬಾ ದನ ಕರುಗಳು. ಕೆಲಸ ಒಂದೇ ಎರಡೇ. ಮದುವೆಯಾದ ಹೊಸತರಲ್ಲಿ ಅಷ್ಟು ದೊಡ್ಡ ಮನೆಯ ನೆಲವನ್ನೆಲ್ಲಾ ಸಗಣಿ ಹಾಕಿ ಸಾರಿಸಬೇಕಿತ್ತು. ಆಮೇಲಾಮೇಲೆ ಗಾರೆ ಮಾಡಿಸಿದ ಮೇಲೆ ಆ ದೊಡ್ಡ ಕೆಲಸ ತಪ್ಪಿತ್ತು. ರಾಶಿ ರಾಶಿ ಕೆಲಸ – ಆದರೆ ಅದೆಷ್ಟು ಹುರುಪು, ಉತ್ಸಾಹ! ಮಾವನವರಿಗೆ ಮೂವರು ಗಂಡು ಮಕ್ಕಳು, ಹೆಣ್ಣು ಮಕ್ಕಳಿರಲಿಲ್ಲ. ಇವರೇ ಕಡೆಯವರು. ತಾನು ಮದುವೆಯಾಗಿ ಮನೆಗೆ ಬರುವಾಗ ಎಲ್ಲರ ಜವಾಬ್ದಾರಿಯೂ ಕಳೆದಿತ್ತು. ದೊಡ್ಡ ಮಗ ಇಂಜಿನಿಯರಾಗಿ ಪಿ.ಡಬ್ಲು.ಡಿಯಲ್ಲಿ ಕೆಲಸಕ್ಕೆ ಸೇರಿಕೊಂಡು ಊರೂರು ಅಲೆಯುತ್ತಿದ್ದು, ಮಕ್ಕಳಿಗೆ ಓದಲಿಕ್ಕೆ ಅನುಕೂಲವೆಂದು ಬೆಂಗಳೂರಿನಲ್ಲಿ ಮನೆಮಾಡಿ ತಮ್ಮ ಸಂಸಾರವನ್ನು ಅಲ್ಲೇ ಸ್ಥಾಪಿಸಿದ್ದರು. ಎರಡನೆಯವರು ಅಡ್ವೋಕೇಟು. ಅವರ ಮಾವನವರು ಚಿತ್ರದುರ್ಗದಲ್ಲಿ ಅದೇ ಕೆಲಸ ಮಾಡುತ್ತಿದ್ದವರು. ನಮ್ಮ ಮಾವನವರಿಗೂ ಮೊದಲಿಂದಲೇ ಗೆಳೆಯರಂತೆ. ಅವರ ಬಳಿಯೇ ಜೂನಿಯರ್ ಆಗಿ ಕೆಲಸ ಮಾಡಲು ಮಗನನ್ನು ಕಳಿಸಿಕೊಟ್ಟಿದ್ದರು. ಕಡೆಗೆ ಅವರ ಒಬ್ಬಳೇ ಮಗಳನ್ನೇ ಮದುವೆಯಾಗಿ ಅದಾಗಲೇ ಚೆನ್ನಾಗಿ ಕುದುರಿಕೊಂಡಿದ್ದ ಕೆಲಸವನ್ನು ಮುಂದುವರೆಸಿಕೊಂಡು ಅಲ್ಲೇ ಮನೆ ಹೂಡಿಕೊಂಡರು. ಇವರು ಓದಿದ್ದು ಶಿವಮೊಗ್ಗೆಯ ಕಾಮರ್ಸ್ ಕಾಲೇಜಿನಲ್ಲಿ ಬಿ. ಕಾಂ. ಮದುವೆಯಾಗುವಾಗ ಅಂತಹ ಕೆಲಸವೇನೂ ಇರಲಿಲ್ಲ. ಸುಮ್ಮನೆ ಹೊತ್ತು ಕಳೆಯುವುದಕ್ಕೆ ಎಲ್. ಐ. ಸಿ. ಏಜೆಂಟರಾಗಿದ್ದರು. ಅನುಕೂಲವಾದ ಮನೆಯಾದ್ದರಿಂದ ತನ್ನ ತವರು ಮನೆಯವರೂ ಇವರ ಕೆಲಸದ ಬಗ್ಗೆ ಅಷ್ಟೇನೂ ಚಿಂತಿಸಿರಲಿಲ್ಲ. ಆದರೆ ಇವರ ಮನಸ್ಸಿನಲ್ಲಿ ತಾನೂ ಅಣ್ಣಂದಿರ ಹಾಗೆ ದುಡಿಯಬೇಕು ಎಂದು ಆಶೆಯಿತ್ತೋ ಏನೋ – ಯಾವ ಯಾವುದೋ ಕೆಲಸಕ್ಕೆ ಅರ್ಜಿ ಹಾಕುತ್ತಿದ್ದರು. ನಾನು ಮದುವೆಯಾಗಿ ಬಂದು ಒಂದಾರು ತಿಂಗಳಾಗಿತ್ತೇನೋ. ಬ್ಯಾಂಕಲ್ಲಿ ಕೆಲಸ ಸಿಕ್ಕೇ ಬಿಟ್ಟಿತು. ಮೊದಲ ಕೆಲಸ ಹುಬ್ಬಳ್ಳಿಯಲ್ಲಿ. ಇವರಿಗದೆಷ್ಟು ಸಂತೋಷವೋ… “ನಿನ್ನ ಕಾಲ್ಗುಣದಿಂದ ನನಗೆ ಈ ಕೆಲಸ ಸಿಕ್ಕಿದ್ದು. ನಾನು ಹೋಗಿ ಕೆಲಸಕ್ಕೆ ಸೇರಿಕೊಂಡು ಆದಷ್ಟು ಬೇಗಲೇ ಮನೆ ಮಾಡಿ ನಿನ್ನನ್ನೂ ಕರೆಸಿಕೊಳ್ಳುತ್ತೇನೆ. ಅಲ್ಲಿಯವರೆಗೆ ಇಲ್ಲೇ ಅಪ್ಪ ಅಮ್ಮನ ಜೊತೆಯಲ್ಲೇ ಇರು” ಎನ್ನುತ್ತಾ ಹೊರಟೇ ಬಿಟ್ಟರಲ್ಲ. ಅತ್ತೆ ಮಾವಂದಿರೂ ಸಂತೋಷವಾಗೇ ಕಳಿಸಿಕೊಟ್ಟರು.

ತನಗೋ ಒಬ್ಬಳೇ ಇರುವುದಕ್ಕೆ ಬೇಸರ, ಆದರೆ ವಿಧಿಯಿಲ್ಲ. ಇನ್ನು ಸ್ವಲ್ಪವೇ ದಿನವಲ್ಲವಾ ಎನ್ನುವ ಸಮಾಧಾನ. ರಾಶಿ ರಾಶಿ ಕೆಲಸದಲ್ಲಿ ಹೊತ್ತು ಹೇಗೋ ಹೋಗುತ್ತಿತ್ತು. ಅತ್ತೆಗೂ ನನ್ನ ಬೇಸರ ಅರ್ಥವಾಗುತ್ತಿತ್ತೇನೋ. ಆದಷ್ಟೂ ನನ್ನ ಜೊತೆಯೇ ಕಾಲ ಕಳೆಯುತ್ತಿದ್ದರು. ಕೆಲಸಕ್ಕೆ ಸೇರಿದ ಹೊಸದಾದ್ದರಿಂದ ಇವರಿಗೆ ಅಷ್ಟು ರಜೆಯೂ ಸಿಕ್ಕುತ್ತಿರಲಿಲ್ಲ. ಅಪರೂಪಕ್ಕೊಂದೊಂದು ಭೇಟಿ. ಒಂದಾರು ತಿಂಗಳು ಕಳೆದಿತ್ತೇನೋ. ಅಂತೂ ಒಂದು ಮನೆ ಮಾಡಿಕೊಂಡು ನನ್ನನ್ನು ಕರೆದುಕೊಂಡು ಹೋಗಲು ಬಂದರು. ಹೊಸ ಸಂಸಾರ ಹೂಡಿಕೊಡಲು ಅತ್ತೆಯೂ ಜೊತೆಗೆ ಬಂದರು. ಯಾಕೋ ಬಂದ ಎರಡು ದಿನಕ್ಕೇ ಅವರಿಗೆ ಹುಶಾರು ತಪ್ಪಿತು. ಹೊಸ ಜಾಗ. ಅವರಿಗೆ ಸರಿ ಹೊಂದಲೇ ಇಲ್ಲ. ವಾಪಸ್ಸು ಊರಿಗೆ ಹೊರಟೇ ಬಿಟ್ಟರು. ವಾರದ ಕೊನೆಯಲ್ಲಿ ಇಬ್ಬರೂ ಅವರನ್ನು ಊರಿಗೆ ಬಿಡಲಿಕ್ಕೆ ಬಂದದ್ದಾಯಿತು. ಜ್ವರ ಹೆಚ್ಚಾಗುತ್ತಾ ಹೋಯಿತು. ಡಾಕ್ಟರು ಮಲೇರಿಯಾ ಅಂದರು. ಸರಿ, ಇವರೊಬ್ಬರೇ ಹುಬ್ಬಳ್ಳಿಗೆ ವಾಪಸ್ಸು ಹೋದರು. ತಾನು ಅತ್ತೆಯ ಶುಶ್ರೂಷೆಗೆ ನಿಂತೆ. ಬರೀ ಒಂದು ವಾರವಷ್ಟೇ. ಇವರು ಮತ್ತೆ ಊರಿಗೆ ಬರುವಂತಾಯಿತು ಸತ್ತ ಅಮ್ಮನನ್ನು ನೋಡಲು….

ಎಲ್ಲ ಕರ್ಮಾಂತರಗಳೂ ಮುಗಿದವು. ಎಲ್ಲರೂ ಹೊರಟು ನಿಂತರು. `ಅಪ್ಪನಿಗೇನು ಮಾಡುವುದು?’ ಎಲ್ಲರ ಮುಂದಿದ್ದ ಪ್ರಶ್ನೆ. ಯಾರು ಬೇಕಾದರೂ ಅವರನ್ನು ಕರೆದುಕೊಂಡು ಹೋಗಲು ತಯ್ಯಾರಿದ್ದರು. ಆದರೆ ಅವರು ಬರುವರೆ? ಬೆಕ್ಕಿಗೆ ಗಂಟೆ ಕಟ್ಟುವ ಪ್ರಶ್ನೆ. ಮಾವನವರಿಗೂ ಇದು ಅರ್ಥವಾಯಿತೇನೋ. ಮಧ್ಯಾನ್ಹ ಊಟ ಮುಗಿದ ನಂತರ ಅವರೇ ಮಕ್ಕಳೆಲ್ಲರಿಗೂ ಹೇಳಿದರು. “ಇನ್ನೆಷ್ಟು ದಿನ ನೀವಿಲ್ಲಿ ಇರಕ್ಕಾಗತ್ತೆ ಕೆಲಸ ಬಿಟ್ಟು. ನಿಮ್ಮ ಪಾಡಿಗೆ ಹೊರಡಿ”. “ಹಾಗಲ್ಲ, ಹೀಗೆ ನಿಮ್ಮೊಬ್ಬರನ್ನೇ ಬಿಟ್ಟು..” ದೊಡ್ಡವರು ಕೇಳಿದರು. “ನೀವೂ ನಮ್ಮ ಜೊತೆಗೇ ಬಂದರೆ ನಮಗೂ ಸಮಾಧಾನವಾಗತ್ತೆ” ಎಲ್ಲ ಮಕ್ಕಳೂ ಹೇಳಿದರು. “ಅದು ಸಾಧ್ಯವಾಗದ ಮಾತು. ಇದು ನಾನು ಹುಟ್ಟಿದಾಗಿಂದ ಇರುವ ಮನೆ. ನಾನು ಸಾಯುವವರೆಗೂ ಇದೇ ನನ್ನ ಮನೆ. ನಿಮ್ಮ ನಿಮ್ಮ ಜೀವನ ನಿಮ್ಮದು. ನೀವು ಹೊರಡಿ” ಎಂದರು ಮುಂದಿನ ಮಾತಿಗೆ ಅವಕಾಶವಿಲ್ಲವೆಂಬಂತೆ. ಯಾರಿಗೂ ಸಮಾಧಾನವಿಲ್ಲ. ಈ ವಯಸ್ಸಲ್ಲಿ ಅಪ್ಪ ಒಬ್ಬರನ್ನೇ ಬಿಟ್ಟು. ಹಾಗಂತ ತಾವು ಇಲ್ಲಿ ಬಂದಿರುವುದೂ ಸಾಧ್ಯವಿಲ್ಲ. ಏನು ಮಾಡುವುದು. ಆಗ ಇವರೆಂದರು – “ಈ ಕೆಲಸ ನನಗೆ ಸಿಕ್ಕುತ್ತೆ ಅಂತ ಅಂದುಕೊಂಡಿರಲಿಲ್ಲ. ಈಗಲೂ ಏನೂ ಪರವಾಗಿಲ್ಲ. ನಾನು ಇಲ್ಲೇ ಅಪ್ಪನ ಜೊತೆಗೇ ಇರ್ತೀನಿ. ಇಲ್ಲಿ ಎಲ್.ಐ.ಸಿ. ಏಜೆನ್ಸೀನೋ, ಇನ್ನೊಂದು ಏನು ಸಾಧ್ಯವೋ ಅದನ್ನೇ ಮಾಡ್ತೀನಿ. ನೀವು ಹೊರಡಿ. ನಿಮ್ಮದಾಗಲೇ ಬೇರು ಬಿಟ್ಟ ಸಂಸಾರ. ನಾನು ಈಗ ತಾನೇ ಕಣ್ಣು ಬಿಡ್ತಿದೀನಿ”. ಬೇರೆ ಇನ್ನೇನಾದರೂ ಹೇಳಲೂ ಯಾರಿಗೂ ಯಾವ ಉಪಾಯವೂ ಇಲ್ಲ. ನಮ್ಮ ಹುಬ್ಬಳ್ಳಿಯ ಸಂಸಾರ ಬರೀ ಒಂದು ವಾರದ್ದಾಯಿತು. ಎಲ್ಲರನ್ನೂ ಕಳಿಸಿಕೊಟ್ಟು ಜಗಲಿಯಲ್ಲಿ ನೋಡುತ್ತಾ ನಿಂತಿದ್ದ ಇವರ ಹೆಗಲ ಮೇಲೆ ಮಾವನವರು ಬಂದು ಕೈಯಿಟ್ಟರು. ಇವರು ತಿರುಗಿ ನೋಡುವಾಗ ಅವರಿಂದ ಏನನ್ನೂ ಹೇಳಲಾಗಲಿಲ್ಲ… ಸುಮ್ಮನೆ ತಮ್ಮ ಶಲ್ಯದ ತುದಿಯಿಂದ ಕಣ್ಣೊರಸಿಕೊಂಡರು….. ಅಪ್ಪನನ್ನು ಬಳಸಿ ಹಿಡಿದುಕೊಂಡು ಮನೆಯೊಳಗೆ ಬಂದರು…

ಏಕೋ ಆ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಥಟ್ಟನೆ ಕಣ್ಣು ಬಿಟ್ಟು ನೋಡಿದರೆ ಆಗಲೇ ಘಂಟೆ ಒಂದೂವರೆ. ಇವರೇನು ಇಷ್ಟು ಹೊತ್ತಾದರೂ ಬರಲಿಲ್ಲ. ಬಾಗಿಲು ತೆರೆದು ಮೆಟ್ಟಿಲ ಕಡೆ ನೋಡಿದರು ಸೀತಮ್ಮ. ಎಲ್ಲೋ ಕೆಳಗಡೆ ಶ್ರೀನಿವಾಸರ ಹತ್ತಿರ ಮಾತಾಡುವ ಶಬ್ದ ಕೇಳಿಸುತ್ತಿದೆ. ಇನ್ನೇನು ಮೇಲೆ ಬಂದಾರು. ಅಷ್ಟರಲ್ಲಿ ಸಾರು ಕೂಡಿಡೋಣ ಎಂದು ಅಡುಗೆ ಮನೆಗೆ ಹೊರಟರು. ಬರೀ ಸಾರಾಯಿತಲ್ಲ ಎಂದುಕೊಂಡು ಸ್ವಲ್ಪ ಸಂಡಿಗೆಯಾದರೂ ಕರೆಯಲೇ ಅಂದುಕೊಂಡವರು, ಇಲ್ಲ ಅದನ್ನು ಧೀರಜನೇ ಮೊದಲು ರುಚಿ ನೋಡಬೇಕು ಎಂದುಕೊಂಡು ಜಾಡಿಯಲ್ಲಿದ್ದ ಉಪ್ಪಿನಕಾಯನ್ನು ಸ್ವಲ್ಪ ತೆಗೆದು ಒಗ್ಗರಣೆ ಹಾಕಿದರು. ತಟ್ಟೆ ಹಾಕುವಷ್ಟರಲ್ಲಿ ರಾಮಣ್ಣನವರೂ ಒಳಗೆ ಬಂದಿದ್ದರು. ಊಟಕ್ಕೆ ಕುಳಿತಾಗ ಕೇಳಿದರು “ಯಾಕಿಷ್ಟು ಹೊತ್ತಾಯಿತು” “ಹಾಗೇ ಬ್ಯಾಂಕಿಗೂ ಹೋಗಿ ಬಂದೆ. ಪಾಸ್ ಬುಕ್ಕನ್ನು ತುಂಬಿಸಿಕೊಂಡು ಬಂದೆ. ವಿಪರೀತ ರಷ್ಷು. ಏನು ಮಾಡೋದು. ಶಂಕರ ಬಂದರೆ ಅವನಿಗೆ ನೋಡಲು ಬೇಕಲ್ಲ” ಎನ್ನುತ್ತಾ ತಟ್ಟೆಗೆ ಕೈಯಿಟ್ಟರು.

ಊಟವಾದ ಬಳಿಕ ನಿದ್ರೆ ಬರುತ್ತೋ ಇಲ್ಲವೋ ಅಂತೂ ಒಂದು ಗಂಟೆ ಹೊತ್ತು ಸ್ವಲ್ಪ ಉರುಳಿಕೊಳ್ಳುವ ಅಭ್ಯಾಸ. ಈದಿನ ಎಷ್ಟು ಆಯಾಸವಾಗಿದ್ದರೂ ಸೀತಮ್ಮನಿಗೆ ನಿದ್ರೆ ಬರುತ್ತಿಲ್ಲ. ಏನೋ ಹಳೆಯ ನೆನಪುಗಳು ಬಾಧಿಸುತ್ತಲೇ ಇವೆ… ತಮ್ಮ ಸಂಸಾರ ಊರಗಡೂರಿನಲ್ಲೇ ಮುಂದುವರೆದಾಗ ಸ್ವಲ್ಪ ಬೇಸರವಾದರೂ, ಮಾವನವರೊಬ್ಬರನ್ನೇ ಬಿಟ್ಟು ಹೋಗುವ ಮನಸ್ಸಂತೂ ಆಗಲಿಲ್ಲ. ಗೇಣಿದಾರರ ಗಲಾಟೆಯಲ್ಲಿ ಇದ್ದ ಜಮೀನೆಲ್ಲಾ ಹೋಯಿತು. ಉಳಿದದ್ದು ನಾಲ್ಕೆಕರೆ ತೋಟ ಮತ್ತು ಊರಗಲದ ಮನೆ ಮಾತ್ರ. ದೊಡ್ಡವರಿಬ್ಬರೂ ತಮ್ಮೆಲ್ಲಾ ಪಾಲನ್ನೂ ಇವರಿಗೇ ಬಿಟ್ಟುಕೊಟ್ಟರು. ಹುಟ್ಟಿದ್ದು ಒಬ್ಬನೇ ಮಗ ಶಂಕರ. ಅವನು ಹುಟ್ಟಿದಾಗ ತಾನು ಬದುಕುಳಿಯುವುದೇ ಕಷ್ಟವಾಗಿ ಡಾಕ್ಟರು ಹೇಳಿದ್ದರು ʻಇನ್ನೊಂದು ಮಗುವಾಗುವ ಸಂಭವವೇ ಇಲ್ಲʼ ಎಂದು. ಸಧ್ಯ ಒಬ್ಬನನ್ನು ಚೆನ್ನಾಗಿ ಬೆಳೆಸಿದರೆ ಸಾಕು ಎಂದು ಇಬ್ಬರೂ ಸಮಾಧಾನ ಪಟ್ಟುಕೊಂಡಿದ್ದೆವು. ಅವನೂ ಹಾಗೇ ಇದ್ದ. ನೋಡಲಿಕ್ಕೂ ಅಜ್ಜಿಯ ಹಾಗೆ ತುಂಬಾ ಚೆನ್ನಾಗಿದ್ದ. ಓದಿನಲ್ಲೂ ಬಹಳ ಚುರುಕು. ಅವನನ್ನು ಸಾಕಿದ್ದೇ ಗೊತ್ತಾಗಲಿಲ್ಲ. ಪಿ.ಯು.ಸಿ.ಯವರೆಗೆ ಶಿವಮೊಗ್ಗೆಯಲ್ಲಿ ಕಲಿಯುತ್ತಿದ್ದ. ಸುರತ್ಕಲ್ಲಿನಲ್ಲಿ ಇಂಜನಿಯರಿಂಗ್ ಸೀಟ್ ಸಿಕ್ಕಾಗ ಎಂತ ಹೆಮ್ಮೆ! ಊರಿನವರಿಗೆಲ್ಲಾ ಸಿಹಿ ಹಂಚಿದ್ದಾಗಿತ್ತು. ಓದು, ಕೆಲಸ, ಮದುವೆ ಯಾವುದರಲ್ಲೂ ಅವನು ಕುಂಟಲೇ ಇಲ್ಲ. ಮಾವನವರಿಗಂತೂ ಮೊಮ್ಮಗನ ಬಗ್ಗೆ ಹೆಮ್ಮೆಯೋ ಹೆಮ್ಮೆ. ಅವನು ಪದ್ಮಿನಿಯನ್ನು ಮದುವೆಯಾದ ವರ್ಷಕ್ಕೆ ಮಾವನವರು ತೀರಿಕೊಂಡರು. ಅನಾಯಾಸ ಮರಣ. ದೇವರ ಪೂಜೆ ಮಾಡಿ ಬಂದು ಒಂದು ಲೋಟ ಹಾಲು ಕುಡಿದು ಪಡಸಾಲೆಯ ಕಂಭಕ್ಕೆ ಒರಗಿದವರು ಮತ್ತೆ ಕಣ್ಣು ಬಿಡಲೇಇಲ್ಲ… ಅಷ್ಟು ದೊಡ್ಡ ಮನೆಯೆಲ್ಲಾ ಭಣ ಭಣ. ಕಂಭ, ಬಾಗಿಲು, ಕಿಟಕಿ ಎಲ್ಲವೂ ತಿನ್ನುವುದಕ್ಕೇ ಬಂದ ಹಾಗಾಗುತ್ತಿತ್ತು. ಮನೆ, ಮನಸ್ಸು ಎಲ್ಲವೂ ಖಾಲಿ ಖಾಲಿ….

ಕರ್ಮಾಂತರಕ್ಕೆ ಬಂದಿದ್ದ ಶಂಕರ ಇಬ್ಬರನ್ನೂ ಕೂರಿಸಿಕೊಂಡು ಹೇಳಿದ್ದ. “ಇನ್ನು ಈ ಮನೆಯಲ್ಲಿ ಇರುವುದು ಸಾಕು. ಬೆಂಗಳೂರಿನಲ್ಲಿ ಮೂರು ರೂಮಿನ ಒಂದು ಫ್ಲಾಟ್ ಕೊಳ್ತಿದೀನಿ. ನೀವು ಇಲ್ಲಿರುವುದನ್ನೆಲ್ಲಾ ಕೊಟ್ಟು ಬಂದು ಬಿಡಿ. ಹೇಗೂ ನನಗಂತೂ ಮತ್ತೆ ಇಲ್ಲಿ ಬಂದಿರುವ ಉದ್ದೇಶವಿಲ್ಲ. ಪದ್ಮಿನಿ ತಾಯಾಗುವುದರಲ್ಲಿದ್ದಾಳೆ. ನಮ್ಮ ಜೊತೆ ಸಂತೋಷವಾಗಿರಿ. ಈ ವಯಸ್ಸಿನಲ್ಲಿ ಮಕ್ಕಳು ಮೊಮ್ಮಕ್ಕಳ ಜೊತೆಗಿರುವುದೇ ಚಂದ”. ನೋಡೋಣ, ಆ ಕಾಲ ಬಂದಾಗ ಎಂದುಕೊಳ್ಳುತ್ತಿದ್ದರೂ, ಆ ನಿರ್ಧಾರಕ್ಕೆ ಹೆಚ್ಚು ಸಮಯ ತಗುಲಲಿಲ್ಲ. ಅವನು ಸ್ವಂತ ಮನೆಗೆ ಬರುವಾಗ ನಾವೂ ಸೇರಿಕೊಂಡಿದ್ದಾಯಿತು. ಮೊಮ್ಮಗ ಧೀರಜನ ಆಟಪಾಟವನ್ನು ನೋಡುತ್ತಾ ದಿನಗಳು ಕಳೆಯುವುದಲ್ಲ, ಓಡಿಹೋದವು. ಪದ್ಮಿನಿಯೂ ಒಳ್ಳೆಯ ಹುಡುಗಿಯೇ. ಈಗಿನ ಕಾಲದವಳು, ಪಟ್ಟಣದಲ್ಲಿ ಬೆಳೆದವಳು… ಅಲ್ಪ ಸ್ವಲ್ಪ ಆಲೋಚನೆಯಲ್ಲಿ ವ್ಯತ್ಯಾಸವಿದ್ದರೂ ಗುಣ ಒಳ್ಳೆಯದೇ. ಶಂಕರ ಕೆಲಸದ ಮೇಲೆ ಅಮೆರಿಕಕ್ಕೆ ಹೋಗಬೇಕಾಗಿ ಬಂದಾಗ, ಇಲ್ಲಿ ನಮ್ಮೊಡನೇ ಎರಡು ವರ್ಷ ಇದ್ದಳು. ಹೋದ ವರ್ಷ ಅವನು ಬಂದವನು “ಈ ವರ್ಷ ಈ ಕಾಂಟ್ರಾಕ್ಟ್ ಮುಗಿದು ಹೋಗಬೇಕಿತ್ತು. ಇನ್ನೊಂದು ವರ್ಷ ಮುಂದುವರೆದಿದೆ. ಅದಕ್ಕೇ ಒಂದು ವರ್ಷ ಅವರಿಬ್ಬರನ್ನೂ ಕರೆದುಕೊಂಡು ಹೋಗೋಣಾಂತ….” ಎನ್ನುತ್ತಾ ರಾಗವೆಳೆದ. “ಸರಿಯೇ. ನಿನ್ನ ಹೆಂಡತಿ ಮಕ್ಕಳನ್ನು ನೀನು ಕರೆದುಕೊಂಡು ಹೋಗುವುದಕ್ಕೇನು. ಧಾರಾಳವಾಗಿ ಕರೆದುಕೊಂಡು ಹೋಗು” ಎನ್ನುತ್ತಾ ಕಳಿಸಿ ಕೊಟ್ಟಿದ್ದಾಯಿತು. ಅಂದಿನಿಂದ ಮತ್ತೆ ಈ ಮನೆಯೆಲ್ಲಾ ಭಣ ಭಣ. ಮೊಮ್ಮಗನನ್ನು ಬಲು ಹಚ್ಚಿಕೊಂಡು ಬಿಟ್ಟಿದ್ದೆವು. ಅವನೂ ಅಷ್ಟೆ. ಎಲ್ಲಕ್ಕೂ ಅಜ್ಜಿಯೇ ಬೇಕು. ಈಗಲೂ ಅಷ್ಟೆ. ಕಂಪ್ಯೂಟರಿನಲ್ಲಿ ಮಾತಾಡುವಾಗ ನಮ್ಮಿಬ್ಬರ ಮಾತಿಗೇ ಕಾಲು ಘಂಟೆ ಮೀಸಲು. ಸಧ್ಯ ಇನ್ನೆರಡು ದಿನ. ಬಂದು ಬಿಡುತ್ತಾನಲ್ಲ. ಈ ವರ್ಷ ಅವನನ್ನು ಇಲ್ಲಿಯ ಸ್ಕೂಲಿಗೆ ಹಾಕಬೇಕು. ಯಾವ ಸ್ಕೂಲಿಗೆ ಹಾಕುವುದೋ? ಅವರೂ ಏನೋ ಯೋಚನೆ ಮಾಡಿಕೊಂಡೇ ಇರುತ್ತಾರೆ. ಯಾವುದಕ್ಕೂ ಅವನು ಬರಲಿ.. ಮೊಮ್ಮಗ ಬರುತ್ತಾನೆಂಬ ಸಂಭ್ರಮ ಸೀತಮ್ಮನನ್ನು ನಿದ್ದೆ ಮಾಡಲು ಬಿಡಲಿಲ್ಲ. ಹೊರಗಡೆ ಬಾಗಿಲು ಬಡಿಯುತ್ತಿದ್ದರು ಧೀರಜನ ಗೆಳೆಯರು. “ಅಜ್ಜಿ ಧೀರಜ್ ಭಾನುವಾರಾನೇ ಬರ್ತಾ ನಾ” ಎನ್ನುತ್ತಲೇ ಒಳಗೆ ಬಂದರು. “ಹಾ! ಬೆಳಗ್ಗೇನೇ ಬಂದರ್ತಾಜನೆ. ತೊಗೊಳ್ಳಿ” ಎನ್ನುತ್ತಾ ಅವರಿಗೆಲ್ಲಾ ಹಪ್ಪಳದ ಉರುಳಿಯನ್ನು ಕೊಟ್ಟಿದ್ದಾಯಿತು. “ಅವನು ನಿಮಗೆಲ್ಲಾ ಕೊಡಕ್ಕೆ ಚಾಕಲೇಟ್ ತೆಗೆದುಕೊಂಡಿದಾನಂತೆ. ಇನ್ನೂ ಏನೇನೋ ಆಟಾಸಾಮಾನು ಬೇರೆ ತರ್ತಿ ದಾನಂತೆ” ಎಂದರು. “ಹೌದಾ!” ಕಣ್ಣರಳಿಸಿದವು ಮಕ್ಕಳು. ಒಂದಷ್ಟು ಹೊತ್ತು ಗಲಗಲ ಮಾಡಿ ಎದ್ದು ಹೋದರು. ಎಷ್ಟೋ ದಿನಗಳ ಬಳಿಕ ಮನೆಯಲ್ಲಿ ಮತ್ತೆ ಮಕ್ಕಳ ಸದ್ದು ಕೇಳಿ ಸೀತಮ್ಮನಿಗೆ ಸಂಭ್ರಮವಾಯಿತು…

ಅಂತೂ ಭಾನುವಾರ ಬೆಳಗಾಯಿತು. ಗಂಡ ಹೆಂಡಿರಿಬ್ಬರೂ ನಿಲ್ಲಲಾರರು, ಕುಳಿತುಕೊಳ್ಳಲಾರರು. ʻನೀವು ಏರ್ ಪೋರ್ಟಿಗೆ ಬರುವುದೇನೋ ಬೇಡ. ನಾವೇ ಬರುತ್ತೇವೆʼ ಎಂದಿದ್ದ ಶಂಕರ. ತಮಗೆ ಹೋಗುವುದಕ್ಕೆ ತಾನೇ ಎಲ್ಲಿ ಗೊತ್ತಾಗುತ್ತದೆ?! ಬರುವ ತನಕ ಕಾಯಲೇ ಬೇಕು… ಅಂತೂ ಒಂದು ಯುಗವೇ ಸರಿದಿತ್ತೇನೋ…. ಧೀರಜನ ಗೆಳೆಯರೂ ಮನೆಯಲ್ಲೇ ಸೇರಿ ಬಿಟ್ಟಿದ್ದರು… ಏನು ಕಿಲ ಕಿಲ.. ಸಂಭ್ರಮ.. ಅಭ್ಭಾ! ಹೊತ್ತು ಮಲಗಿಬಿಟ್ಟಿದೆಯೇನೋ ಅನ್ನಿಸುತ್ತಿದೆ. ಕಡೆಗೂ ಅಂತೂ ಬಂದಿಳಿದರು. ಧೀರಜ್ ಮೊದಲೇ ಬಿಳಿಪು. ಈಗ ಇನ್ನೂ ಕೆಂಪು ಕೆಂಪಾಗಿ ಗುಂಡಗಾಗಿ ಬಂದಿದ್ದಾನೆ. ಪದ್ಮಿನಿಯೂ ಅಷ್ಟೆ; ಮುಖದ ಕಳೆಯೇ ಬದಲಾಯಿಸಿ ಹೋಗಿದೆ. ಏನೋ ಎಲ್ಲರನ್ನೂ ನೋಡಿ ಮನತುಂಬಿ ಹೋಯಿತು ಇಬ್ಬರಿಗೂ…. ಬರುತ್ತಲೇ ಕೇಳಿದ ಧೀರಜ್ “ಅಜ್ಜೀ ಹಪ್ಪಳ, ಸಂಡಿಗೆ ಮಾಡಿದ್ದೀಯಾ ತಾನೆ?!” ಪಟ್ಟ ಶ್ರಮ ಸಾರ್ಥಕವೆನ್ನಿಸಿತು ಸೀತಮ್ಮನಿಗೆ. ಧನ್ಯಳಾದಳು ಆಕೆ!!

ದಂಪತಿಗಳಿಬ್ಬರೂ ಒಂದು ಹತ್ತು ವರ್ಷ ಚಿಕ್ಕವರಾಗಿ ಬಿಟ್ಟಿದ್ದರು. ದಿನಗಳು ಹೇಗೆ ಓಡಿತೋ ಗೊತ್ತಾಗಲೇ ಇಲ್ಲ. ಮಗ, ಸೊಸೆ, ಮೊಮ್ಮಗನಿಗೆ ಇಷ್ಟವಾದ ತಿಂಡಿ, ಅಡುಗೆ, ತಿರುಗಾಟ ಎರಡುವಾರ ಬರೀ ಎರಡು ದಿನವಾಗಿತ್ತು. ಸೊಸೆ ಒಂದು ವಾರ ತವರುಮನೆಗೆ ಹೋಗಿ ಬರುತ್ತೇನೆಂದಳು. ಅದು ಸರಿಯೇ ವರ್ಷದಿಂದ ಅವರನ್ನು ನೋಡಿಲ್ಲ. ಆದರೆ ಮೊಮ್ಮಗನೂ ಜೊತೆಯಲ್ಲಿ ಹೋಗುತ್ತಾನಲ್ಲ ಅನ್ನುವ ಸಂಕಟ. ಆದರೇನು ಮತ್ತೆ ಬರುತ್ತಾರಲ್ಲ. ಅವರಿಗೂ ಆಸೆಯಿರುವುದಿಲ್ಲವೇ ಎಂದುಕೊಂಡು ಬೇಗ ಬಂದು ಬಿಡಿ. ಮತ್ತೆ ಹೋದರಾಯಿತು' ಎಂದು ಹತ್ತು ಸಲ ಹೇಳಿ ಕಳಿಸಿಕೊಟ್ಟದ್ದಾಯಿತು.ಒಂದೇವಾರ ಬಂದುಬಿಡುತ್ತೇವೆ’ ಎಂದು ಹೊರಟರು ಇಬ್ಬರೂ.

ಮಗನೂ ಅಲ್ಲಿ ಇಲ್ಲಿ ಕೆಲಸವೆಂದು ತಿರುಗಾಡಿಕೊಂಡು ಇದ್ದ. ನಾಲ್ಕೈದು ದಿನ ಹಾಗೆಯೇ ಕಳೆಯಿತು. ಆ ರಾತ್ರಿ ಊಟವಾದ ಮೇಲೆ ಹೀಗೇ ಮಾತಾಡುತ್ತಾ ಕುಳಿತರು ಮೂವರು. “ಶಂಕರ ನಿನ್ನ ಮಗನ ಸ್ಕೂಲಿನ ಬಗ್ಗೆ ಏನು ಯೋಚನೆ ಮಾಡಿದೀಯಾ? ಈಗಲೇ ಹೋಗಿ ಯಾವುದಾದರೂ ಶಾಲೆಯಲ್ಲಿ ಮಾತಾಡಿಕೊಂಡು ಬರಬೇಕು. ಆಮೇಲೆ ಸೀಟು ಸಿಗಲ್ಲ” ರಾಮಣ್ಣನವರೆಂದರು. ಶಂಕರ ಸ್ವಲ್ಪ ತಡವರಿಸಿದ “ಅಪ್ಪಾ, ಅದು… ಪ್ರಾಯಶಃ ನಾನು ಇನ್ನೂ ಒಂದೆರಡು ವರ್ಷ ಅಲ್ಲೇ ಇರಬೇಕಾಗತ್ತೇನೋ. ಇಲ್ಲಿ ನೀವಿಬ್ಬರೂ ಒಬ್ಬರಿಗೊಬ್ಬರು ಇದ್ದೀರಿ. ಅಲ್ಲಿ… ನಾನು.. ನಾನೊಬ್ಬನೇ ಆಗಿ ಬಿಡ್ತೀನಿ. ತುಂಬಾ ಬೇಜಾರಾಗತ್ತೆ. ಅದಕ್ಕೆ ಮತ್ತೆ ಅವರಿಬ್ಬರನ್ನೂ ಕರೆದುಕೊಂಡು ಹೋಗೋಣವಾಂತ ಯೋಚಿಸ್ತಿದೀನಿ.. ಅದಕ್ಕೇ ಅಲ್ಲೇ ಸ್ಕೂಲಿಗೆ ಸೇರಿಸೋದು ಒಳ್ಳೇದೇನೋ. ಏನು ಮಾಡಲಿ? ನೀವೇ ಹೇಳಿ” ಅವರಿಬ್ಬರ ಮುಖವನ್ನೇ ನೋಡಿದ. ಸ್ವಲ್ಪ ಹೊತ್ತು ಮೌನ ತನ್ನ ಸಾಮ್ರಾಜ್ಯವನ್ನು ಆಳಿತು. ಸೀತಮ್ಮನಿಗೆ ಅಲ್ಲಿ ಮತ್ತೆ ಕೂರಲಾಗಲಿಲ್ಲ. ಎದ್ದು ಕೋಣೆಯೊಳಗೆ ಹೊರಟು ಹೋದರು. ಶಂಕರ ಹೇಳುತ್ತಿರುವುದು ಕೇಳಿಸುತ್ತಿತ್ತು “ಅಮ್ಮನಿಗೆ ಬೇಜಾರಾಗುತ್ತೇನೋ. ಆದರೆ…” ರಾಮಣ್ಣನವರು ಹೇಳುತ್ತಿದ್ದರು. “ಏನು ಮಾಡೋದಕ್ಕೆ ಆಗತ್ತೆ. ನಿನಗೆ ಹೇಗೆ ಸರಿ ತೋಚತ್ತೋ ಹಾಗೆ ಮಾಡು. ಯಾವಾಗ ಹೊರಡಬೇಕು?” “ಈ ಭಾನುವಾರ ರಾತ್ರಿಗೆ ಟಿಕೆಟ್ಟು ಬುಕ್ಕಾಗಿದೆ. ಇವರಿಬ್ಬರೂ ಶನಿವಾರ ಬೆಳಗ್ಗೆ ಬರುತ್ತಾರೆ..” “ಅಂದರೆ ಎಲ್ಲವೂ ನಿಶ್ಚಿತವಾಗಿದೆ. ಇನ್ನೆರಡೇ ವರ್ಷವೋ; ಎಷ್ಟು ವರ್ಷವೋ.. ಅಲ್ಲೇ ಸ್ಕೂಲಿಗೆ ಸೇರುತ್ತಾನೆಂದರೆ… ಅಲ್ಲಿಗೆ ಅವರಿನ್ನು ಬಂದ ಹಾಗೇ. ಆದರೆ ಯಾಕೀ ನಾಟಕ.. ಒಂದು ಬಾರಿಯಾದರೂ ನೀವಿಬ್ಬರೂ ನಮ್ಮೊಡನೇ ಬನ್ನಿ' ಎಂದು ಕರೆದಿದ್ದರೆ... ಹೋಗುತ್ತಿದ್ದೆವೋ ಇಲ್ಲವೋ?! ಯಾಕೋ ದುಃಖ ತಡೆಯಲಾಗಲಿಲ್ಲ. ಊರಗಡೂರಿನ ದೊಡ್ಡ ಮನೆ ಮತ್ತೆ ಮತ್ತೆ ನೆನಪಾಗತೊಡಗಿತು...ಮಾವ ಅಂದು ಹೇಳಿದಂತೆ ಊರು ಬಿಟ್ಟು ಬರುವಾಗ ನಮಗೇಕೆ ಹೇಳಲಾಗಲಿಲ್ಲ?! ಆ ನಿರ್ಧಾರ ತೆಗೆದುಕೊಳ್ಳಕ್ಕೆ ತಮ್ಮಿಂದ ಏಕೆ ಸಾಧ್ಯವಾಗಲಿಲ್ಲ…? ಎಲ್ಲಕ್ಕೂ ಬಾಗಿಯೇ ಅಭ್ಯಾಸವಾಗಿ ಹೋಗಿದೆಯೇ?ʼ ತಲೆದಿಂಬು ತೋಯತೊಡಗಿತು..


ಬೆಳಗ್ಗೆ ರಾಮಣ್ಣನವರು ಎದ್ದು ಬರುವಾಗ, ಸೀತಮ್ಮ ಹಪ್ಪಳ ಸಂಡಿಗೆ ಎಲ್ಲವನ್ನೂ ಪ್ಯಾಕ್ ಮಾಡುತ್ತಿದ್ದರು. ಮುಖ ತಪ್ಪಿಸುತ್ತಾ ರಾಮಣ್ಣ ಹೇಳಿದರು “ಭಾನುವಾರ ಹೊರಡುತ್ತಾರಂತೆ” “ಹಾ! ಗೊತ್ತಾಯಿತು” ಎನ್ನುತ್ತಾ ಹಪ್ಪಳದ ಕವರನ್ನು ಮುಚ್ಚ ತೊಡಗಿದಳು. ಅದರೊಳಗೆ ಒಂದೆರಡು ಕಣ್ಣ ಹನಿಯೂ ಸೇರಿ ಹೋಯಿತು…

=========

One thought on “ಕಥಾಯಾನ

Leave a Reply

Back To Top