ವಿಶ್ಲೇಷಣೆ

gold and brown building ceiling

ಶಬ್ದ-ಅರ್ಥಗಳ ಅನುಸಂಧಾನದಲ್ಲಿ “ಶಬ್ದವೇಧಿ”

ಡಾ.ಗೋವಿಂದ ಹೆಗಡೆ

ಶಬ್ದ-ಅರ್ಥಗಳ ಅನುಸಂಧಾನದಲ್ಲಿ “ಶಬ್ದವೇಧಿ”

ವಸ್ತುವೈವಿಧ್ಯ,ಲಯ-ಛಂದೋ ವೈವಿಧ್ಯಗಳನ್ನು ವಿಪುಲವಾಗಿ ತಮ್ಮ ಕಾವ್ಯ ಕ್ರಿಯೆಯಲ್ಲಿ ತಂದ ನಮ್ಮ ಕವಿಗಳಲ್ಲಿ ಡಾ. ಎಚ್ಎಸ್ ವೆಂಕಟೇಶಮೂರ್ತಿ ಅವರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಪರಂಪರೆಯೊಡನೆ ಅನುಸಂಧಾನದ ರೀತಿ ಅವರದು ಎನ್ನುವ ಕೆ ವಿ ತಿರುಮಲೇಶ್ “ಅವರು ಕನ್ನಡದ ಕಾವ್ಯ ಧಾತುವಿಗೆ ಅಂಟಿಕೊಂಡಿರುವ ಕವಿ” ಎಂದು ಗುರುತಿಸುತ್ತಾರೆ.

‘ಈ ಅನುಸಂಧಾನದ ಒಂದು ಎಳೆ ಎಂದರೆ ಛಂದಸ್ಸಿನ ಬಗ್ಗೆ ಅವರಿಗಿರುವ ಮೋಹ.. ಅವರು ಛಂದೋಬದ್ಧವಾಗಿ ಬರೆಯದಿದ್ದರೂ ಛಂದಸ್ಸನ್ನು ಧಿಕ್ಕರಿಸಿಯೂ ಬರೆದಿಲ್ಲ’ ಎಂಬುದು ತಿರುಮಲೇಶರ ಮಾತು.

ಸಾನೆಟ್ ಗೆ ಬರೋಣ. ಕನ್ನಡದಲ್ಲಿ ಸಾನೆಟ್ಟನ್ನು ಬಳಸಿ, ಬೆಳೆಸಿದವರಲ್ಲಿ ಮಾಸ್ತಿ ,ಬೇಂದ್ರೆ ,ಕುವೆಂಪು, ಪುತಿನ, ಕಣವಿ ಮೊದಲಾದವರಿದ್ದಾರೆ. ಸಾನೆಟ್ ಅನ್ನು ತಮ್ಮ ಅಭಿವ್ಯಕ್ತಿಯ ಒಂದು ಮಾಧ್ಯಮವಾಗಿಸಿಕೊಂಡು, ಈಗಲೂ ಬರೆಯುತ್ತಿರುವವರಲ್ಲಿ ಎಚ್ಚೆಸ್ವಿ ಪ್ರಮುಖರು.ಹಲವಾರು ವ್ಯಕ್ತಿಚಿತ್ರಗಳನ್ನು ಅಲ್ಲದೆ ಅನೇಕ ಸುಂದರ ನುಡಿಚಿತ್ರಗಳನ್ನು ಅವರು ಸಾನೆಟ್ ಮೂಲಕ ಕಟ್ಟಿಕೊಟ್ಟಿದ್ದಾರೆ.

ಕಾವ್ಯದ ಬಗ್ಗೆ ಕಾವ್ಯ ಕ್ರಿಯೆಯ ನಿಗೂಢತೆ ಅದರ ಮಾಂತ್ರಿಕತೆಯ ಬಗ್ಗೆ ಹಲವು ಕವಿಗಳು ಬರೆದಿದ್ದಾರೆ.
ಪ್ರತಿಯೊಂದು ಕವನವೂ ಭರವಸೆಯ ವ್ಯವಸಾಯ ಅಜ್ಞಾತದ ತಳಕ್ಕಿಳಿದು ಬಂದವನ ಭಾಗ್ಯ
ಎಂದ ರಾಮಚಂದ್ರ ಶರ್ಮರ ಸಾಲುಗಳು(ಕವನ),
ಈ ಮುಖೋದ್ಗತ ನಿನ್ನ ಹೃದ್ಗತವೆ ಆದ ದಿನ ಸುದಿನ. ಆವರೆಗು ಇದು ತಕ್ಕ ಮಣ್ಣಿನ ತೇವಕಾಗಿ ಕಾದೇ ಇರುವ ಬೀಜ.
ಎಂದ ಗಂಗಾಧರ ಚಿತ್ತಾಲರ (ಕವನ) ಮಾತುಗಳು ಈ ಕ್ಷಣದಲ್ಲಿ ನೆನಪಿಗೆ ಬರುವ ಉದಾಹರಣೆಗಳು.

ಶಬ್ದವೇಧಿ ಈ ಸಾಲಿಗೆ ಸೇರುತ್ತದೆ. ಇದೊಂದು ಸುನೀತ (ಸಾನೆಟ್). ೪-೪-೪-೨ ಸಾಲುಗಳ ಇಂಗ್ಲಿಷ್/ಶೇಕ್ ಸ್ಪಿಯರ್ ನ ಸಾನೆಟ್ ಗಳ ಮಾದರಿಯದು.
“ಆಲಿಬಾಬನ ಗವಿ”-ಒಳಗೆ ನಿಧಿಯಿದೆ- ನಾವು ಕೇಳಿರುವ ಕಥೆ. ಕವಿ ಇಲ್ಲಿ ಅದನ್ನು ಒಂದು ರೂಪಕವಾಗಿ ಬಳಸಿದ್ದಾರೆ.
“ಅಲಿಬಾಬಾನ ಗವಿಯ ಮುಂದೆ ನಿಂತಿರುವವರು
ನಾವು”

ಎಂದು ಆರಂಭವಾಗುವ ಕವಿತೆ ಗವಿಗೆ ‘ ಹೆಬ್ಬಂಡೆ ಬಾಗಿಲು’ಎನ್ನುತ್ತದೆ. ಗವಿಯ ಒಳಗಿದೆಯಂತೆ ಕೊಪ್ಪರಿಗೆ ತುಂಬ ನಿಧಿ. ‘ಇದೆಯಂತೆ’ ಯಾಕೆಂದರೆ ನಾವು ಇನ್ನೂ ಅದನ್ನು ಕಂಡಿಲ್ಲ. ಯಾರೋ ಕಂಡವರು ಹೇಳಿದ್ದಾರೆ. ನಮ್ಮ ದುರ್ದೈವ-‘ಹೊರಗೆ ಉರಿಬಿಸಿಲು, ಬಿರುಗಾಳಿ’ಈ ಮಾತು ಗವಿಯ ಹೊರಗಿನ ಸ್ಥಿತಿಯನ್ನು ಸಹಜವಾಗಿ ಚಿತ್ರಿಸಿದರೂ ಶಕ್ತಿಯುತ ಸಂಕೇತವೂ ಹೌದು. ಕವಿತೆಯ ನಿಧಿ ಸಿಗದ ನಮ್ಮ ವಿಧಿ ದುರ್ವಿಧಿ. ಅದರ ಹೊರಗೆ ಉಳಿದವರಿಗೆ ಇರುವುದು ಉರಿಬಿಸಿಲು ಮತ್ತು ಬಿರುಗಾಳಿ ಮಾತ್ರ.
ಅಲಿಬಾಬಾನ ಗವಿಯ ರೂಪಕ ಮುಂದುವರೆಯುತ್ತದೆ. ಬಾಗಿಲು ತೆಗೆಯಲು ಸಂಕೇತ ಪದ ಬೇಕು. ನಮ್ಮ ಸ್ಥಿತಿ ಬೇರೆ. ಸಂಕೇತ ಪದ ಮರೆತು, ಬೇರೇನನ್ನೋ ಬಡಬಡಿಸಿ, ಶಬ್ದಕೋಶ ಹಿಡಿದು,ಹಲವು ಪದಗಳನ್ನು ಜಪಿಸಿ ನೋಡುತ್ತಿದ್ದೇವೆ.’ಕಲ್ಲು ಕರಗುವ ಸಮಯ ಕಾಯುತ್ತ ಕಾಯುತ್ತ’ಈ ಕಾಯುವಿಕೆಯ ತಪಸ್ಸನ್ನು ಗಮನಿಸಿ. ಇಂದಲ್ಲ ನಾಳೆ ಬಾಗಿಲು ತೆರೆದೀತೆನ್ನುವ ಆಶಾಭಾವ ಕಾಯುವಿಕೆಯನ್ನು ಮುಂದುವರಿಸಿದೆ.
ಬಾಗಿಲಿದೆ. ಬಾಗಿಲಾಚೆಯ ಗವಿಯಲ್ಲಿ ಅರ್ಥವೂ ಇರಬಹುದು. ‘ಅರ್ಥ’ ಪದದ ಶ್ಲೇಷೆ ತುಂಬ ಸಹಜವಾಗಿ, ಸೊಗಸಾಗಿ ಬಂದಿದೆ.ಅಲಿಬಾಬಾನ ಗವಿಯ ರೂಪಕದಿಂದ ಅರ್ಥಕ್ಕೆ ‘ಸಂಪತ್ತು’ ಎಂಬ ಅರ್ಥ, ಅಭಿಪ್ರಾಯ ತಾನಾಗಿ ಒದಗಿ ಬರುತ್ತದೆ. ಒಳಗೆ ಅರ್ಥವಿರಬಹುದು,ಶಬ್ದಗಳು ಹೊರಗಿವೆ ಎನ್ನುತ್ತದೆ, ಕವಿತೆ. ಇವೆರಡರ ಜೋಡಣೆ-ವಾಗರ್ಥಗಳ “ಪ್ರತಿಪತ್ತಿ”-ಹೇಗೆ? ಒಂದೊಂದು ಪದವನ್ನು ಇಟ್ಟು ಅರ್ಥದ ಬಾಗಿಲನ್ನು ತಟ್ಟುವುದು… ಅದು, ಅಷ್ಟು ಮಾತ್ರ ಸಾಧ್ಯ! “ಏಕಾಗ್ರ ನಿಷ್ಠೆಯಲಿ”ಮತ್ತೆ ತಪದ ಮಾತು.

ಯಾವುದು ಈ ಪದವಿಟ್ಟು ಅರ್ಥದ ಅಂತರಂಗವನ್ನು ತೆರೆಯಿಸುವ ಕಾರ್ಯವನ್ನು, ಆ ಪ್ರಯತ್ನವನ್ನು ಬಿಡದೆ ನಡೆಸುವುದು?
ಸುನೀತದ ಕೊನೆಯ ಕಪ್ಲೆಟ್, ದ್ವಿಪದಿ, ಯಾವುದನ್ನು ಅಡಿಗ, ಶರ್ಮರು “ಭರತವಾಕ್ಯ” ವನ್ನಾಗಿ ನಿಲ್ಲಿಸುತ್ತಾರೆಂದು ತಿರುಮಲೇಶರು ಹಾಸ್ಯ ಮಾಡುತ್ತಾರೋ ಅಂತಹ ಶಕ್ತಿಯುತ ಜೋಡಿಸಾಲು ಈಗ.
ಈ ನಿರಂತರ ಶ್ರಮದ ಹಿಂದೆ ಒಂದೇ ಕೆಚ್ಚು: ನಮ್ಮ ಭಾಷೆಯ ಬಗ್ಗೆ ನಮ್ಮ ಆಳದ ನಚ್ಚು!

ಈ ಕೊನೆಯ ಸಾಲು ನನಗೆ ಬೆರಗನ್ನು ತಂದಿದ್ದು. ನಿಜ ಭಾಷೆಯಲ್ಲಿ ಎಲ್ಲ ಕಾವ್ಯ ವ್ಯಾಪಾರ. ಅದು ಅರ್ಥ ನೆಲೆಯ ಅರಿವಿನ ನಿಧಿಯ ಬಾಗಿಲನ್ನು ತೆರೆದೇ ತೆರೆಯುತ್ತದೆ-ಈ ದೃಢನಂಬಿಕೆ ಒಂದೇ ಕೆಲಸವನ್ನು ಮಾಡಲು ಮರಳಿ ಯತ್ನವ ಮಾಡಲು ಹಚ್ಚುವುದು. ಆ ನಚ್ಙು ಇದ್ದವ ಮಾತ್ರ ಕವಿಯಾಗುತ್ತಾನೆ. ಶಬ್ದವನ್ನು ನೆಮ್ಮಿ ಅರ್ಥ ಲಾಭ ಪಡೆಯಲು ಕತ್ತಲಲ್ಲೂ ಬಾಣಪ್ರಯೋಗ ಮಾಡುತ್ತಾನೆ.

ತುಂಬ ಎಚ್ಚರದಿಂದ, ನಿಷ್ಣಾತ ಶಿಲ್ಪಿಯ ಮಗ್ನತೆಯಿಂದ ತಮ್ಮ ಕವಿತೆಗಳ ಶರೀರ, ಶಾರೀರಗಳನ್ನು ರೂಪಿಸುವ ಕವಿ ಎಚ್ಎಸ್ವಿ. ನಮ್ಮ ಅರಿವನ್ನು, ಸಂವೇದನೆಯನ್ನು ತಣ್ಣಗೆ ವಿಸ್ತರಿಸುವ,ಎತ್ತರಿಸುವ,ಭಾವಪುಷ್ಟಿಯೊದಗಿಸುವ ಕವಿತೆಗಳು ಅವರವು.ಭಾವೋದ್ರೇಕ ಅವರ ರೀತಿಯಲ್ಲ. ‘ಶಬ್ದವೇಧಿ’ ಅಂಥದೊಂದು ಕವಿತೆ.
ಎಚ್ಚೆಸ್ವಿಯವರು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವನ್ನು ಅಲಂಕರಿಸುತ್ತಿರುವ ಈ ಶುಭ ಅವಸರದಲ್ಲಿ,ಅವರು ಶಬ್ದ ,ಸಂಕೇತಗಳನ್ನು ಬಳಸಿ, ಬೆಳೆಸಿ, ಅರ್ಥದ ಬಾಗಿಲುಗಳನ್ನು ತೆರೆಸುತ್ತಲೇ ಇರಲಿ ಎಂದು ಹಾರೈಸುತ್ತೇನೆ.

======

Leave a Reply

Back To Top