ಮಾತು-2
ಡಾ.ಗೋವಿಂದ ಹೆಗಡೆ
ಮಾತು ಮಾತನಾಡುವಾಗ
ಹೀಗೇನಾದರೂ ಕಿಟಕಿ ತೆರೆದುಬಿಟ್ಟಿದ್ದರೆ
ಎಂಥ ಅನಾಹುತವಾಗುತ್ತಿತ್ತು
ತೂರಿ ಹೋಗಿ ಕೆಳಗೆ ರಸ್ತೆಯಲ್ಲಿ
ಬ್ಯಾಡ್ಮಿಂಟನ್ ಆಡುತ್ತಿರುವ ಚಿಣ್ಣರ
ರಾಕೆಟ್ ಮೇಲೆ ಬಿದ್ದು
ಆ ಕಡೆ ಈ ಕಡೆ ಹಾರಿ ಬಿದ್ದು ಹಾರಿ ಬಿದ್ದು
ಹೇಗೆ ಇಳಿಯಬಹುದಿತ್ತು
ಕುರ್ಚಿ ಹಾಕಿ ಮುಗುಮ್ಮಾಗಿ ಕೂತು
ಈ ಮಾಗಿಯ ಇಳಿ ಹೊತ್ತು
ತೆರೆದು ಕೂತು ಮಾತಿನ ಲೋಕ
ಎಂಥ ವಿಚಿತ್ರ ಈ ಮಾತಿನದು
ಮಾತು ಮಾತಾಗಲು ಕಂಠ
ನಾಲಗೆ ತುಟಿ ಅಷ್ಟೇ ಸಾಲದು
ಕಿವಿಯೂ ಬೇಕು
ಮೆದುಳಿಂದ ಕೇಳಿಸಿಕೊಳ್ಳುತ್ತಾರೆ ಅವರು
ಕೆಲವರು ಮಾತ್ರ ಒಡಲಿಂದ
ಮಾತು ಮಾತ್ರ ಮರಳುತ್ತದೆ
ಆಡಿದ ಮರುಕ್ಷಣ ಮೌನಕ್ಕೆ
ಗೂಡಿಗೆ ಮರಳುವ ಹಕ್ಕಿ
ಮತ್ತೆ ಎದ್ದಾಗ ಅದು ಅದೇ
ಮೌನವೇ ಮಾತು ಅದೇನೇ
ಬಣ್ಣ ಬೆಳಕು ಆಡಲು ಬೇಕು ಕತ್ತಲ
ಭಿತ್ತಿ ಮಾತಿಗೆ ಮೌನ
ಬೆಳೆ ಬೆಳೆದಂತೆಲ್ಲಾ ಅದು
ಕಡಲಿಂದ ಆವಿ ಎದ್ದು ಮೋಡವಾಗಿ
ಮಳೆ ಸುರಿದು ಮತ್ತೆ ಕಡಲನು ಕೂಡಿ
ತಾಸು ತಾಸು ಸನಿಹವಿದ್ದೂ ಮಾತೇ
ಆಡದ ಉಲ್ಲಾಸ ತನ್ನ ನಗೆಯಿಂದಲೇ
ಎಷ್ಟೋ ನುಡಿದಂತೆ
ಥಟ್ಟನೆ ಎದ್ದು ಹೊರಟೇ ಹೋದಾಗಲೂ
ಉಳಿದೇ ಇರುವಂತೆ
ಪರಿಮಳ- ಮಾತಿಲ್ಲದೆ.
ಮೌನದಲ್ಲಿ ನಿರುಮ್ಮಳತೆಯನ್ನು
ಶಬ್ದದಲ್ಲಿ ನಿರರ್ಥಕತೆಯನ್ನು
ಹುಡುಕಿ ಹೊರಟಾಗಲೂ
ಅದು ಇದ್ದೇ ಇರುತ್ತದೆ
ಕಾಗೆ ಕಾ ಎಂದರೂ ಎನ್ನದಿದ್ದರೂ
ಕಂಠವನ್ನು ಅದುಮಿ ಹಿಡಿದಾಗಲೂ
ಕಿಟಕಿ ತೆಗೆದಾಗಲೂ ಮುಚ್ಚಿದಾಗಲೂ
ಅಲ್ಲಿ ರಾಕೆಟ್ ಮೇಲೆ
ಆ ಕಡೆ ಈ ಕಡೆ ಆಡುತ್ತ
********
ತುಂಬಾ ಚೆನ್ನಾಗಿದೆ