ಸ್ವಾತ್ಮಗತ

ಪೂರ್ಣವಾಗದ ಸ್ವಾತಂತ್ರ ಹೋರಾಟಗಾರರ ಸ್ಮಾರಕ

ಕೆ.ಶಿವು ಲಕ್ಕಣ್ಣವರ

ಇನ್ನೂ ಪೂರ್ಣವಾಗಿಲ್ಲ ಹಾವೇರಿಯ ‘ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ವಸ್ತುಸಂಗ್ರಹಾಲಯ’..!

1934ನೇ ಇಸವಿಯಲ್ಲಿ ಗಾಂಧೀಜಿ ಶಿರಸಿ, ಹಾನಗಲ್ ಮೂಲಕ ಹಾವೇರಿ ಪ್ರವಾಸ ಹೊರಟಿದ್ದರು. ಆಗ ನೊಂದ ದಲಿತ ಹೆಣ್ಣು ಮಗಳೊಬ್ಬಳು ಹೋಗುತ್ತಿರುವುದನ್ನು ಗಮನಿಸುತ್ತಾರೆ ಗಾಂಧೀಜಿ. ಆಕೆಯನ್ನು ವೀರನಗೌಡ ಅವರ ಮೂಲಕ ಆಶ್ರಮಕ್ಕೆ ಸೇರಿಸುತ್ತಾರೆ. ಮುಂದೆ ಗಾಂಧೀಜಿ ಸಲಹೆಯಂತೆ ಸಂಗೂರು ಕರಿಯಪ್ಪ ಅವರು ಆ ಹೆಣ್ಣು ಮಗಳನ್ನು ಮದುವೆಯಾಗುತ್ತಾರೆ. ಹೀಗೆ ಸ್ವಾತಂತ್ರ್ಯ ಸಂಗ್ರಾಮದ ಕಾಲಗಟ್ಟ, ಸಮಾನತೆ, ಸಾಮರಸ್ಯವನ್ನೂ ಸಾರುತ್ತಾರೆ…

‘ನಮ್ಮ ನೆಲದಲ್ಲೇ ನಡೆದ ಇಂತಹ ಐತಿಹಾಸಿಕ ಘಟನೆಗಳ ಬಗ್ಗೆ ಎಷ್ಟೋ ಜನರಿಗೆ ಅರಿವಿಲ್ಲ. ಅವು ದಾಖಲೀಕರಣಗೊಳ್ಳಬೇಕು. ಆ ಮಾಹಿತಿ ಕಿರಿಯರಿಗೆ ದೊರೆಯಬೇಕು. ಆಗ ದೇಶಪ್ರೇಮ ಬೆಳೆಯಲು ಸಾಧ್ಯ. ಇದರ ಪ್ರಯತ್ನವೇ ‘ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ವಸ್ತುಸಂಗ್ರಹಾಲಯ’ ಎನ್ನುತ್ತಾರೆ ಹುತಾತ್ಮ ಮಹದೇವ ಮೈಲಾರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಸದಸ್ಯ ವಿ.ಎನ್‌ ತಿಮ್ಮನಗೌಡ…

ಜಿಲ್ಲಾಧಿಕಾರಿ ಎಂ. ಮಂಜುನಾಥ ನಾಯಕ್‌ ಅಧ್ಯಕ್ಷತೆಯ ಈ ಟ್ರಸ್ಟ್ ಬಜೆಟ್‌ ಪೂರ್ವದಲ್ಲೇ ರೂಪಾಯಿ 6.22 ಕೋಟಿಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ‘ಹಾವೇರಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ನೆನಪಿನಲ್ಲಿ ವಸ್ತು ಸಂಗ್ರಹಾಲಯ ಸ್ಥಾಪಿಸಲು ರೂಪಾಯಿ 2.5 ಕೋಟಿ ಅನುದಾನ ನೀಡಲಾಗುವುದು’ ಎಂದು ಮಾರ್ಚ್‌ 2015ರ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆಯೂ ಮಾಡಿದ್ದರು. ಆದರೆ, ಈ ಘೋಷಣೆಯಾಗಿ ವರ್ಷಗಳೇ ಕಳೆದರೂ, ಬಿಡಿಗಾಸು ಬಂದಿಲ್ಲ. ಹೀಗಾಗಿ ಮಹತ್ತರ ಯೋಜನೆಯ ಕಾರ್ಯವು ಇನ್ನೂ ‘ಯೋಚನೆ’ಯಿಂದ ‘ಯೋಜನೆ’ ಹಂತಕ್ಕೆ ಬಂದಿಲ್ಲ. ಈ ವಸ್ತು ಸಂಗ್ರಹಾಲಯದ ಕಟ್ಟಡ, ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿ ಸಂಗ್ರಹಿಸಬೇಕಾದ ಕಾರ್ಯ ಆರಂಭಗೊಂಡಿಲ್ಲ. ಸರ್ಕಾರ ಜಿಲ್ಲಾಡಳಿತಕ್ಕೆ ಅನುದಾನ ಬಿಡುಗಡೆ ಮಾಡಿದ ತಕ್ಷಣವೇ ಈ ಕಾರ್ಯವು ಚಿಗುರೊಡೆಯುವ ನಿರೀಕ್ಷೆ ಮೊದಲಿತ್ತು, ಈಗಿಲ್ಲ…

ಸ್ವಾತಂತ್ರ್ಯದಲ್ಲಿ ‘ಹಾವೇರಿ’: ಸ್ವಾತಂತ್ರ್ಯ ಹೋರಾಟದಲ್ಲಿ ಹಾವೇರಿ ಜಿಲ್ಲೆಯು ವಿಶಿಷ್ಟ ಹೆಜ್ಜೆ ಗುರುತು ಮೂಡಿಸಿದೆ. ಜಿಲ್ಲೆಯ ಮೈಲಾರ ಮಹದೇವಪ್ಪ, ತಿರುಕಪ್ಪ ಮಡಿವಾಳರ, ವೀರಯ್ಯ ಹಿರೇಮಠ, ಕೆ.ಎಫ್‌ ಪಾಟೀಲ್‌, ಹಳ್ಳಿಕೇರಿ ಗುದ್ಲೆಪ್ಪ, ಸಂಗೂರು ಕರಿಯಪ್ಪ, ಟಿ.ಆರ್. ನಿಸ್ವಿ, ಮೆಣಸಿನಹಾಳ ತಿಮ್ಮನಗೌಡ, ಹೊಸ್ಮನಿ ಸಿದ್ದಪ್ಪ, ತಾವರೆಕೆರೆ ಫಕ್ಕೀರಪ್ಪ, ಪಂಚಾಕ್ಷರಪ್ಪ ವಳಸಂಗದ, ಚಾಂದ ಸಾಬ್, ಪರಮಣ್ಣ ಹರಕಂಗಿ ಮತ್ತಿತರ ಹಲವಾರು ಪ್ರಮುಖರು ಹೋರಾಟಕ್ಕೆ ಕೊಡುಗೆ ನೀಡಿದ್ದಾರೆ. 1943ರ ಹೊಸರಿತ್ತಿಯಲ್ಲಿ ಮೈಲಾರ ಮಹದೇವಪ್ಪ ಹಾಗೂ ಜೊತೆಗಾರರ ಬಲಿದಾನ, ಹೋರಾಟಕ್ಕೆ ಬಾಂಬ್‌ ತಯಾರಿಸಲು ಹೋಗಿ ಕೈಯನ್ನೇ ಕಳೆದುಕೊಂಡ ಸಂಗೂರ ಕರಿಯಪ್ಪ, ಮೆಣಸಿನಹಾಳ ತಿಮ್ಮನಗೌಡರ ಬಲಿದಾನ ಸೇರಿದಂತೆ ಹಲವಾರು ಘಟನಾವಳಿಗಳಿಗೆ ಹಾವೇರಿ, ಅಗಡಿ, ಹೊಸರಿತ್ತಿ, ಮೋಟೆಬೆನ್ನೂರ, ಬ್ಯಾಡಗಿ ಸೇರಿದಂತೆ ಜಿಲ್ಲೆಯ ಹಲವು ಸ್ಥಳಗಳು ‘ಪವಿತ್ರ ಸಾಕ್ಷಿ’ಯಾಗಿವೆ. ಹಲವೆಡೆ ತ್ಯಾಗದ ನೆತ್ತರೂ ಹರಿದಿದೆ…

‘ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡರೂ ಎಲೆಮರೆಕಾಯಿಯಾಗಿ ಉಳಿದವರೇ ಸಹಸ್ರಾರು ಜನ. ಅಂತಹ ದೇಶಪ್ರೇಮಿಗಳ ನೆನೆಪುಗಳ ದಾಖಲೀಕರಣ ಹಾಗೂ ಯುವಜನತೆಯಲ್ಲಿ ದೇಶಪ್ರೇಮ ಜಾಗೃತಗೊಳಿಸುವ ಉದ್ದೇಶವೇ ಈ ವಸ್ತುಸಂಗ್ರಹಾಲಯ ಯೋಜನೆ ರೂಪುಗೊಳ್ಳಲು ಕಾರಣ’ ಎಂದಿದ್ದರು ಟ್ರಸ್ಟ್‌ನ ಇನ್ನೊಬ್ಬ ಸದಸ್ಯ ಸಾಹಿತಿ ಸತೀಶ ಕುಲಕರ್ಣಿ…

‘ಟ್ರಸ್ಟ್‌ ಮೂಲಕ ದೇಶಪ್ರೇಮ ಕುರಿತ ಕಾರ್ಯಕ್ರಮ ನಡೆಯುತ್ತಿತ್ತು. ಇದಕ್ಕೆ ವಸ್ತುಸಂಗ್ರಹಾಲಯವು ಇನ್ನಷ್ಟು ಇಂಬು ನೀಡಲಿದೆ’ ಎಂದಿದ್ದರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ…

ಈ ವಸ್ತುಸಂಗ್ರಹಾಲಯದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟದ ಘಟನಾವಳಿ ಹಾಗೂ ಹೋರಾಟಗಾರರನ್ನು ಬಿಂಬಿಸುವ ಚಿತ್ರಗಳ ಗ್ಯಾಲರಿ, ಹೋರಾಟಕ್ಕೆ ಸಂಬಂಧಿಸಿದ ವಸ್ತುಗಳು ಪ್ರದರ್ಶನಗಳು ಕಾಣಲಿವೆ. ಅದರೊಂದಿಗೆ ಇತಿಹಾಸದ ಕ್ಷಣಗಳನ್ನು ಅಕ್ಷರಗಳಲ್ಲಿ ದಾಖಲಿಸಲಾಗುತ್ತದೆ. ಮತ್ತೊಂದೆಡೆ ಸಬರಮತಿ, ಇತರ ಆಶ್ರಮಗಳು, ದಂಡಿ ಸತ್ಯಾಗ್ರಹ ಮತ್ತಿತರ ಪ್ರಮುಖ ಸ್ಥಳ– ಘಟನೆಗಳ ಮಾದರಿಯನ್ನು ರೂಪಿಸಲಾಗುತ್ತದೆ. ಸ್ವಾತಂತ್ರ್ಯದ ಇತಿಹಾಸವನ್ನು ಆಧುನಿಕ ತಂತ್ರಜ್ಞಾನದ ವಿದ್ಯುನ್ಮಾನ ಸಾಧನಗಳ ಮೂಲಕ ದೃಶ್ಯ, ಶ್ರವಣ ಹಾಗೂ ಅಕ್ಷರಗಳಲ್ಲಿ ದಾಖಲಿಸಲಾಗುತ್ತದೆ…

‘ವೀಕಿಪೀಡಿಯಾ’ ಮಾದರಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಘಟನಾವಳಿಗಳ ಮಾಹಿತಿಯನ್ನು ದಾಖಲಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಸರಳವಾಗಿ ಈ ಮಾಹಿತಿ ಪಡೆಯಬಹುದು…

‘ದೇಶ, ರಾಜ್ಯ ಹಾಗೂ ಜಿಲ್ಲೆಯ ಪ್ರಮುಖ ಘಟನಾವಳಿಗಳನ್ನು ಹಂತ ಹಂತವಾಗಿ ದಾಖಲಿಸುವ ಉದ್ದೇಶವಿದೆ’ ಎಂದಿದ್ದರು ಟ್ರಸ್ಟ್‌ ಸದಸ್ಯ ವಿ.ಎನ್‌ ತಿಮ್ಮನಗೌಡ ಅವರು…

‘ಜಿಲ್ಲಾಧಿಕಾರಿ ಅಧ್ಯಕ್ಷತೆಯ ಹುತಾತ್ಮ ಮೈಲಾರ ಮಹದೇವಪ್ಪ ಟ್ರಸ್ಟ್ ಮೂಲಕ ರಾಜ್ಯ ಸರ್ಕಾರಕ್ಕೆ ಬಜೆಟ್ ಪೂರ್ವ ಪ್ರಸ್ತಾವನೆ ಹೋಗಿತ್ತು. ಈಗ ಕನಸು ನನಸಿಗಾಗಿ ಬಿ.ಜಿ ಬಣಕಾರ, ಸಿ.ಎಂ ಉದಾಸಿ, ಜಿಲ್ಲೆಯ ಶಾಸಕರುಗಳು, ಜಿಲ್ಲಾಧಿಕಾರಿ ಮತ್ತಿತರರು ಪ್ರಮುಖ ಕಾರ್ಯಕ್ಕೆ ಶ್ರಮಿಸುತ್ತಿದ್ದಾರೆ’ ಎಂದ್ದಿರು ಅವರು ಆಗ…

ಇಷ್ಟೆಲ್ಲಾ ಪಯತ್ನಗಳಾದರೂ ವಸ್ತುಸಂಗ್ರಹಾಲಯ ಪೂರ್ಣ ಪ್ರಮಾಣದಲ್ಲಿ ಆಗಬೇಕಾದ ಕೆಲಸವಾಗಿಲ್ಲ. ಈ ಕೆಲಸ ಜರೂರಾಗಿ ಆಗಬೇಕಾಗಿದೆ..!

========

Leave a Reply

Back To Top