ಬುದ್ದಿಗೆ ಹಿಡಿದ ಗ್ರಹಣದ ಬಿಡುಗಡೆ ಎಂತು?
ಗಣೇಶಭಟ್ ಶಿರಸಿ
ಬುದ್ದಿಗೆ ಹಿಡಿದ ಗ್ರಹಣದ ಬಿಡುಗಡೆ ಎಂತು?
ಕಳೆದ ವಾರ ಅಂದರೆ 26-12-2019 ರಂದು ನಡೆದ ಅಪೂರ್ವ ನೈಸರ್ಗಿಕ ವಿದ್ಯಮಾನ ಸೂರ್ಯಗ್ರಹಣ ಹಲವರ ಕಣ್ತುಂಬಿಸಿದರೆ, ಹಲವರು ಭಯದಿಂದ ಕುಗ್ಗಿ ಹೋದರು. ಸೂರ್ಯನಿಗೆ ಗ್ರಹಣದಿಂದ ಬಿಡುಗಡೆ ದೊರಕಿದರೂ ಜನರ ಬುದ್ಧಿಗೆ ಹಿಡಿದ ಗ್ರಹಣ ಬಿಡುವ ಸೂಚನೆಗಳು ಕಾಣುತ್ತಿಲ್ಲ. ಆಕಾಶ ಕಾಯಗಳ ಕುರಿತು, ಅವುಗಳ ಚಲನೆಯ ಬಗ್ಗೆ ಏನೂ ತಿಳಿದಿರದ ಕಾಲಘಟ್ಟದಲ್ಲಿ ಅಂದರೆ ಸಾವಿರಾರು ವರ್ಷಗಳ ಹಿಂದೆ, ಪ್ರಕೃತಿಯ ಜೊತೆ ಸಂಘರ್ಷದ ಜೀವನ ನಡೆಸುತ್ತಿದ್ದ ಮಾನವರನ್ನು ಎಲ್ಲಾ ಘಟನೆಗಳೂ ಭಯ ಹುಟ್ಟಿಸುತ್ತಿದ್ದವು. ಕಾಲ ಸರಿದಂತೆ ಇಡೀ ವಿಶ್ವದ ರಚನೆ, ಆಕಾಶಕಾಯಗಳೂ ಸೇರಿದಂತೆ ವಿವಿಧ ಅಭಿವ್ಯಕ್ತಿಗಳ ನಡುವಿನ ಸಂಬಂಧವನ್ನು ಅಂತರ್ಮುಖಿಯಾದ ಮಾನವರು ಕಂಡುಕೊಂಡರು. ನೈಸರ್ಗಿಕ ಆಗು- ಹೋಗುಗಳ ಕುರಿತು ತಾಳಿದ್ದ ಅನಗತ್ಯ ಭಯದಿಂದ ಹೊರಬಂದು, ಅವಕ್ಕೆ ಕಾರಣಗಳನ್ನು ಕಂಡು ಹಿಡಿಯಲು ಪ್ರಯತ್ನಿಸಿದರು. ಪಾಶ್ಚಾತ್ಯ ದೇಶಗಳು ಇನ್ನೂ ಅಂಬೆಗಾಲಿಡಲು ಪ್ರಾರಂಭಿಸುವ ಮೊದಲೇ ಭಾರತದಲ್ಲಿ ಖಗೋಲಶಾಸ್ತ್ರ ವಿಕಾಸ ಹೊಂದಿತ್ತು. ಗಣಿತ ಶಾಸ್ತ್ರವನ್ನು ಬಳಸಿ ಸೌರಮಂಡಲವೂ ಸೇರಿದಂತೆ ಉಳಿದ ನಕ್ಷತ್ರಗಳ ಚಲನೆಯನ್ನು ನಿರ್ದಿಷ್ಟವಾಗಿ ಊಹಿಸಬಲ್ಲ ಸಾಮಥ್ರ್ಯ ಭಾರತದಲ್ಲಿ ಬೆಳೆದಿತ್ತು. ಇಂತಹ ದೇಶದಲ್ಲೇ ಇಂದು ಅತಿ ಹೆಚ್ಚು ಮೌಢ್ಯ ಪ್ರಚಲಿತವಿರುವುದು ಇತಿಹಾಸದ ವ್ಯಂಗ್ಯ. ಗ್ರಹಣ ಕಾಲದಲ್ಲಿ ಸೂರ್ಯನನ್ನು ಬರಿಗಣ್ಣಿನಿಂದ ನೋಡಬಾರದು ಎಂಬುದು ವಿಜ್ಞಾನ; ಮನೆಯಲ್ಲೇ ಅವಿತುಕೊಂಡು ಗ್ರಹಣದ ಪ್ರಭಾವದಿಂದ ತಪ್ಪಿಸಿಕೊಳ್ಳುತ್ತೇವೆನ್ನುವುದು ಮೌಢ್ಯ. ಗ್ರಹಣ ಕಾಲದಲ್ಲಿ ಊಟ-ತಿಂಡಿ ಮಾಡಬಾರದೆಂಬ ನಂಬಿಕೆ ಇದ್ದವರ ಪಾಡು ಹೇಳತೀರದ್ದು. ಗ್ರಹಣ ಪ್ರಾರಂಭವಾಗುವುದಕ್ಕಿಂತ ಮೊದಲೇ ತಿನ್ನಬೇಕು ಹಾಗೂ ಗ್ರಹಣ ಮುಗಿದ ನಂತರ ಸ್ನಾನ ಮಾಡಿ, ತಿಂಡಿ ಸೇವಿಸಬೇಕೆಂದು ನಂಬುವವರು, ಚಿಕ್ಕಮಕ್ಕಳಿಗೆ , ವೃದ್ಧರಿಗೆ ರಿಯಾಯಿತಿ ನೀಡಿದರೆ ಅದು ದೊಡ್ಡಸ್ತಿಕೆ. ನಾಳೆ ಎಷ್ಟೊತ್ತಿಗೆ ತಿಂಡಿ ತಿನ್ನಬೇಕಂತೆ? ಎಷ್ಟೊತ್ತಿಗೆ ಸ್ನಾನ ಮಾಡಬೇಕಂತೆ? ಎಂದು ಸುಶಿಕ್ಷಿತರೆನಿಸಿಕೊಂಡವರೂ ಗ್ರಹಣದ ಮೊದಲೇ ಮಾಹಿತಿ ಸಂಗ್ರಹಿಸುತ್ತಿದ್ದರು! ಗ್ರಹಣದ ನಂತರ ಮನೆಯಲ್ಲಿ ಶೇಖರಿಸಿಟ್ಟಿರುವ ನೀರನ್ನು ಚೆಲ್ಲಿ ಹೊಸ ನೀರು ತರಬೇಕೆಂದು ನಂಬುವವರು ಬಾವಿಯ ನೀರನ್ನು ಬರಿದು ಮಾಡುತ್ತಾರೆಯೇ? ನಲ್ಲಿ ನೀರಿಗೆ, ನೀರು ಪೂರೈಸುವ ಸಂಗ್ರಹಣಾ ಟ್ಯಾಂಕ್‍ಗಳಿಗೆ ಈ ನಿಯಮ ಯಾಕೆ ಅನ್ವಯವಾಗದು? ಮೂಢನಂಬಿಕೆ ಎಂದರೆ ಹೀಗೆ ಯಾವುದನ್ನೂ ತಾರ್ಕಿಕವಾಗಿ ಯೋಚಿಸದಿರುವುದು. ಗ್ರಹಣದ ಪರಿಣಾಮದಿಂದ ಆಗಬಹುದಾದ ದೋಷಗಳಿಗೆ ಪರಿಹಾರವೆಂದರೆ ಬ್ರಾಹ್ಮಣರಿಗೆ ಧÀನ, ದಕ್ಷಿಣೆ ನೀಡುವುದು. ಇದರಿಂದ ಯಾರದೋ ದೋಷ ಪರಿಹಾರವಾಗುವುದಾದರೆ ಸ್ವೀಕರಿಸಿದವನ ಗತಿ ಏನಾದೀತು ಎಂದು ಯೋಚಿಸಬಾರದೇ? ಬುದ್ದಿಗೆ ಗ್ರಹಣ ಹಿಡಿದಾಗ ಸಾರಾಸಾರ ಯೋಚನಾ ಶಕ್ತಿಯನ್ನೇ ಕಳೆದುಕೊಳ್ಳುತ್ತಾರೆ. ಜಗತ್ತಿನ ನಿಯಾಮಕ, ನಿಯಂತ್ರಕನೇ ಭಗವಂತ ಎಂದು ನಂಬುವವರು, ಕಲ್ಲಿನ ಮೂರ್ತಿಯಲ್ಲೂ ಪರಮಾತ್ಮನಿದ್ದಾನೆ ಎಂದು ಪೂಜಿಸುವವರು, ಗ್ರಹಣ ಕಾಲದಲ್ಲಿ ದೇವಾಲಯಗಳ ಬಾಗಿಲು ಮುಚ್ಚುತ್ತಾರೆ. ಯಾಕೆಂದರೆ ಗ್ರಹಣದ ಮೈಲಿಗೆ, ದೋಷಗಳು ಭಗವಂತನಿಗೆ ತಟ್ಟಬಾರದು ಎಂದು ದೇವರನ್ನೇ ರಕ್ಷಿಸುವ ಉದ್ದೇಶಕ್ಕಾಗಿ ದೇವರ ಮೂರ್ತಿಗಳನ್ನು ನೀರಿನಲ್ಲಿ ಮುಳುಗಿಸಿಡುವ ಅಥವಾ ಅಕ್ಕಿಯಲ್ಲಿ ಹೂದಿಡುವ ಸಂಪ್ರದಾಯವೂ ಕೆಲವೆಡೆ ಇದೆ. ದೇವರಿಗೆ ತಗುಲಿರಬಹುದಾದ ದೋಷಗಳನ್ನು ಸರಿಪಡಿಸುವವರು, ದೇವಾಲಯಗಳನ್ನು ಶುದ್ಧಿಗೊಳಿಸುವವರು ಪೂಜಾರಿಗಳು. ಗ್ರಹಣದ ಬಿಡುಗಡೆಯ ನಂತರ ವಿಶೇಷ ಕಾರ್ಯಕ್ರಮಗಳು, ಪೂಜೆ, ಹವನಗಳ ಮೂಲಕ ಪೂಜಾರಿಗಳು ದೇವರನ್ನೂ ಶುದ್ಧ್ಧಗೊಳಿಸುತ್ತಾರೆ. ಇಂಥ ಅತಾರ್ಕಿಕ ಆಚರಣೆಗಳನ್ನು ಹಬ್ಬಿಸಿದಷ್ಟೂ ಪೂಜಾರಿ ವರ್ಗಕ್ಕೆ ಲಾಭವೋ ಲಾಭ. ಗ್ರಹಣ ಕಾಲದಲ್ಲಿ ಮನೆಯೊಳಗಿದ್ದ ನೀರನ್ನು ಚಲ್ಲುವವರು ಹಾಲು, ಮೊಸರು, ತುಪ್ಪ, ಅಕ್ಕಿ, ಕಾಳು, ಬೇಳೆಗಳನ್ನು ಚೆಲ್ಲುವುದಿಲ್ಲ. ಅವುಗಳ ರಕ್ಷಣೆಯ ಸುಲಭದ ಪರಿಹಾರವೆಂದರೆ ತುಳಸಿ ಎಲೆ ಹಾಕಿದರಾಯಿತು. ಮನೆಯಲ್ಲಿರುವ ಒಂದೆರಡು ಬಟ್ಟೆಯನ್ನು ತೊಳೆದರೆ ದೋಷ ಪರಿಹಾರವಾಯಿತು. ಬೀರುವಿನಲ್ಲಿ ರಾಶಿ ಇರುವ ಬಟ್ಟೆಗಳಿಗೆ ಬ್ರಾಹ್ಮಣರು ನೀಡಿದ ಪಂಚಗವ್ಯ ಸಿಂಪಡಿಸಿದರೆ ಎಲ್ಲಾ ಮೈಲಿಗೆ ಓಡಿ ಹೋಯಿತೆಂದು ನಂಬುವವರೂ ಇದ್ದಾರೆ. ಇಂತಹ ಹಲವು ಮೌಢ್ಯಗಳನ್ನು ಬೆಳೆಸಿ, ಉಳಿಸಲು ಕಾರಣರಾದವರು ವಿಪ್ರ ಮನೋಭಾವಿಗಳು. ಅರ್ಥಾತ್ ಬುದ್ದಿ ಜೀವಿಗಳು. ಎಂದೋ ಒಂದು ಕಾಲದಲ್ಲಿ ಅಜ್ಞಾನದಿಂದ ಆಚರಣೆಗೆ ಬಂದ ವಿಧಿ, ವಿಧಾನಗಳನ್ನು ಜೀವಂತವಾಗಿಟ್ಟುಕೊಳ್ಳುವುದರಿಂದಲೇ ಆದಾಯ ಗಳಿಸುವ ವರ್ಗಕ್ಕೆ ಇದು ಮುಂದುವರಿಯಲೇಬೇಕು. ಅಂಧಶೃದ್ಧೆಗೆ ಬಲಿಯಾದ ಸಮಾಜ, ತನ್ನ ಅಂತಃಶಕ್ತಿಯನ್ನೇ ಕಳೆದುಕೊಳ್ಳುತ್ತದೆ. ಎಲ್ಲೆಡೆ ದೇವರಿದ್ದಾನೆ ಎಂದು ನಂಬುವುದು ವೈಚಾರಿಕತೆ, ದೇವರು ಇಲ್ಲೇ ಇದ್ದಾನೆ, ಬೇರೆಡೆ ಇಲ್ಲವೆಂದು ವಾದಿಸುವುದು ಮೌಢ್ಯತೆ. ದೇವಾಲಯಗಳಲ್ಲಿ ಸ್ಥಾಪಿಸಿದ ಮೂರ್ತಿಗಳು ಕೆಲವು ಕಾಲದ ನಂತರ ತಮ್ಮ ಶಕ್ತಿ ಕಳೆದುಕೊಳ್ಳುತ್ತವೆಂದು ನಂಬುವವರಿದ್ದಾರೆ. ಅಂತಹ ಮೂರ್ತಿಗಳಿಗೆ ಶಕ್ತಿ ತುಂಬುವ ಕಾರ್ಯಕ್ರಮಗಳೂ ನಡೆಯುತ್ತವೆ. ಅದಕ್ಕಾಗಿ ಪುನಃ ಪೂಜಾರಿಗಳು, ಬ್ರಾಹ್ಮಣರು ಬೇಕೇ ಬೇಕು. ಅವರು ನಂಬುವ ದೇವರಿಗೇ ಶಕ್ತಿ ನೀಡುವುದು ಬ್ರಾಹ್ಮಣರು. ಅಂದರೆ ದೇವರಿಗಿಂತ ಬ್ರಾಹ್ಮಣರೇ ಹೆಚ್ಚು ಶಕ್ತಿಶಾಲಿಗಳೆಂದಾಯಿತು. ಇಂತಹ ಅಬದ್ಧ , ಅತಾರ್ಕಿಕ ವಿಚಾರಗಳನ್ನು ಸಹಸ್ರಾರು ವರ್ಷಗಳಿಂದಲೂ ಜನರ ತಲೆಯಲ್ಲಿ ತುಂಬಲಾಗಿದೆ. ಭಾರತದ ಎಲ್ಲಾ ಸಮಸ್ಯೆಗಳಿಗೆ ಶ್ರೇಣೀಕೃತ ಜಾತಿ ವ್ಯವಸ್ಥೆಯೇ ಕಾರಣವೆಂದು ವಾದಿಸುವವರಿದ್ದಾರೆ. ಅಂಥವರಲ್ಲಿ ಹಲವರ ಉದ್ದೇಶ ಸಮಾಜದಲ್ಲಿ ವೈಮನಸ್ಸು ಬೆಳೆಸಿ, ತಮ್ಮ ಸ್ವಾರ್ಥ ಸಾಧನೆ ಮತ್ತು ಪ್ರತಿಷ್ಠೆ ಬೆಳೆಸಿಕೊಳ್ಳುವುದೇ ಆಗಿದೆ. ಯಾಕೆಂದರೆ ಅದರ ಆಕ್ರೋಶ ಬ್ರಾಹ್ಮಣ ಜಾತಿಯ ವಿರುದ್ಧ ಇರುತ್ತದೆಯೇ ಹೊರತು ಜನರ ಮನದಲ್ಲಿ ತುಂಬಿರುವ ಮೌಢ್ಯವನ್ನು , ಮೂಢನಂಬಿಕೆಯನ್ನು ಕಿತ್ತೆಸೆಯುವುದಲ್ಲ. ಬುದ್ಧಿ ಜೀವಿಗಳೆಂಬವರು ಎಲ್ಲಾ ಜಾತಿಗಳಲ್ಲೂ ಇದ್ದಾರೆ. ಅವರಲ್ಲೂ ಒಳ್ಳೆಯವರೂ ಇದ್ದಾರೆ. ಸ್ವಾರ್ಥಿಗಳೂ ಇದ್ದಾರೆ. ಯಾವುದೇ ವ್ಯಕ್ತಿಯನ್ನು ಅಥವಾ ಮನೋಭಾವಿಯನ್ನು 100% ಒಳ್ಳೆಯವ ಅಥವಾ ಕೆಟ್ಟವ ಎಂದು ವರ್ಗಿಕರಿಸುವುದು ಅವಾಸ್ತವ. ಶೂದ್ರ, ಕ್ಷತ್ರಿಯ, ವಿಪ್ರ, ವೈಶ್ಯ ಮನೋಭಾವಿಗಳಲ್ಲಿ (ಭಗವದ್ಗೀತೆಯಲ್ಲಿ ವಿವರಿಸಿರುವ ಚತುರ್ವಣಗಳು) ಒಳ್ಳೆಯತನವೂ ಇರುತ್ತದೆ. ಸ್ವಾರ್ಥ, ದುಷ್ಟತನಗಳೂ ಇರುತ್ತವೆ. ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳುವ ಸ್ವಾರ್ಥದಿಂದಾಗಿ, ಅವರೊಳಗಿನ ದುಷ್ಟ ಬುದ್ಧಿ ಮೆರೆಯುತ್ತದೆ. ಜನಸಾಮಾನ್ಯರಲ್ಲಿ ಮೂಢನಂಬಿಕೆ ಬೆಳೆಸುವ , ಅಂಧ ಶೃದ್ಧೆ ಹೆಚ್ಚಿಸುವ, ಜನರ ಬುದ್ಧಿಗೆ ಗ್ರಹಣ ಹಿಡಿಸುವುದರಿಂದ ಅವರು ತಮ್ಮ ಸ್ವಾರ್ಥ ಸಾಧಿಸುತ್ತಾರೆ. ರಾಜನಿಗಾಗಿ ದುಡಿಯುವುದು, ರಾಜನ ರಕ್ಷಣೆಗಾಗಿ ಕಾದಾಡಿ, ಪ್ರಾಣ ಕಳೆದುಕೊಳ್ಳುವುದು ಮಹತ್ಕಾರ್ಯವೆಂದು ನಂಬಿಸಿದಾಗ ಸೈನ್ಯದ ಮನೋಬಲ ಹೆಚ್ಚಾಗುತ್ತದೆ. ಆಧುನಿಕ ಸಮಾಜದಲ್ಲಿ ರಾಜನ ಸ್ಥಾನದಲ್ಲಿ ರಾಜಕೀಯ ನಾಯಕರನ್ನು ಕೂಡ್ರಿಸಲಾಗಿದೆ. ರಾಜ್ಯದ ಬದಲು ದೇಶ ಬಂದಿದೆ. ದೇಶವನ್ನು ರಕ್ಷಿಸುತ್ತೇವೆಂದು ನಂಬಿರುವವರು ರಕ್ಷಣೆ ನೀಡುತ್ತಿರುವುದು, ಜನರನ್ನು ಆರ್ಥಿಕ ಶೋಷಣೆಗೆ ಒಳಪಡಿಸುವ , ಶ್ರೀಮಂತರಿಗೆ , ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿರುವ ರಾಜಕಾರಣಿಗಳಿಗೆ ಹಾಗೂ ಅಧಿಕಾರಿಗಳಿಗೇ ಹೊರತು ಜನಸಾಮಾನ್ಯರಿಗಲ್ಲ. ಈ ವಾಸ್ತವ ನಮ್ಮ ಸೈನಿಕರಿಗೆ, ಪೋಲೀಸರಿಗೆ ಅರ್ಥವಾದರೆ , ಇಡೀ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಯಾಗುತ್ತದೆ. ಆಂಗ್ಲ ಮಾಧ್ಯಮದಲ್ಲಿ ಕಲಿತರೆ ಮಾತ್ರ ಬುದ್ಧಿವಂತರಾಗುತ್ತಾರೆ, ಬದುಕಿನಲ್ಲಿ ಉತ್ತಮ ಸ್ಥಾನಮಾನ ಸಿಗುತ್ತದೆ ಎಂಬುದು ಒಂದು ಮೌಢ್ಯ. ಈ ಮೌಢ್ಯಕ್ಕೆ ಸಿಲುಕಿದ ಪಾಲಕರು ತಮ್ಮ ಮಕ್ಕಳ ನೈಸರ್ಗಿಕ ಸಾಮಥ್ರ್ಯವನ್ನು , ಆತ್ಮವಿಶ್ವಾಸವನ್ನು ಹಿಸುಕಿ ಹಾಕುತ್ತಿದ್ದಾರೆಂಬುದು ವಾಸ್ತವ. ಮಾತೃಭಾಷೆಯ ಕುರಿತಾದ ಅವಜ್ಞೆ, ಅವಹೇಳನ, ತಿರಸ್ಕಾರಗಳಿಂದ ವ್ಯಕ್ತಿಯ ಆಂತರಿಕ ಬೆಳವಣಿಗೆ ಕುಂಠಿತವಾಗುತ್ತದೆಂದು ಅರಿಯಲಾರದಷ್ಟು ಅವರ ಬುದ್ಧಿ ಗ್ರಹಣ ಗ್ರಸ್ತವಾಗಿರುತ್ತದೆ. ಶಿಕ್ಷಣ ವ್ಯವಸ್ಥೆಯ ಆಧುನೀಕರಣದ ನೆಪದಲ್ಲಿ ಮಾಹಿತಿ ತುರುಕುವ , ಆಡಂಬರದ ಶಿಕ್ಷಣ ಪದ್ಧತಿಗಳು, ಸಂಸ್ಥೆಗಳು ಹಾಗೂ ಪದ್ಧತಿಗಳಿಂದಾಗಿ ಮಾನಸಿಕ ಗುಲಾಮರನ್ನು ತಯಾರಿಸುತ್ತಿದ್ದೇವೆಂಬ ವಾಸ್ತವವನ್ನು ಸಮಾಜ ಗಮನಿಸಿಲ್ಲ. ಹದಿನೈದು ವರ್ಷಗಳ ಕಾಲ ಅಧ್ಯಯನ ನಡೆಸಿ, ಪದವಿ ಪಡೆದ ನಂತರವೂ ತನ್ನ ಕಾಲ ಮೇಲೆ ತಾನು ನಿಲ್ಲಬಲ್ಲೆ ಎಂಬ ಆತ್ಮವಿಶ್ವಾಸವೇ ಇಲ್ಲದ ಯುವ ಜನಾಂಗ ಈ ದೇಶದಲ್ಲಿ ರೂಪುಗೊಳ್ಳಲು ಬುದ್ಧಿಗೆ ಗ್ರಹಣಗ್ರಸ್ತರಾದ ಶಿಕ್ಷಣ ತಜ್ಞರೆನಿಸಿಕೊಂಡವರು, ರಾಜಕಾರಣಿಗಳೇ ಕಾರಣ. ಇವರೆಲ್ಲರನ್ನೂ ನಿಯಂತ್ರಿಸುವವರು ಭ್ರಷ್ಟ ಬಂಡವಾಳಶಾಹಿಗಳು ಎಂಬುದು ಸುಲಭದಲ್ಲಿ ಇವರಿಗೆ ಅರ್ಥವಾಗುವುದಿಲ್ಲ. ಕಂಪನಿಗಳ ಲಾಭ ಹೆಚ್ಚಳಕ್ಕಾಗಿ ಅಹರ್ನಿಶೆ ದುಡಿಯಬಲ್ಲ ತಂತ್ರಜ್ಞರನ್ನು, ಪದವಿಧರರನ್ನು ಉತ್ಪಾದಿಸುವ ಕೇಂದ್ರಗಳಾಗಿ ನಮ್ಮ ಶಿಕ್ಷಣ ಸಂಸ್ಥೆಗಳು ರೂಪುಗೊಂಡಿವೆ. ಇವಕ್ಕೆ ಸಾರ್ವಜನಿಕ ಬೊಕ್ಕಸದಿಂದಲೇ ಹಣ ನೀಡಲಾಗುತ್ತಿದೆ. ಸರ್ವರಿಗೂ ಶಿಕ್ಷಣ, ಹೆಚ್ಚೆಚ್ಚು ಜನರಿಗೆ ಉನ್ನತ ಶಿಕ್ಷಣ ನೀತಿಯೆಂಬುದು ಬಂಡವಾಳಶಾಹಿಗಳ ಬೊಕ್ಕಸ ತುಂಬಲು, ಬೌದ್ಧಿಕ ದುಡಿಮೆ ಗಾರರನ್ನು ತಯಾರಿಸುವ ಕಾರ್ಖಾನೆಗಳಾಗಿವೆ ಎಂಬುದು ರಾಜಕೀಯ ಪಕ್ಷಗಳ ಅಂಧಾಭಿಮಾನಿಗಳಿಗೆ ಅಂದರೆ ಬುದ್ಧಿ ಗ್ರಹಣಗ್ರಸ್ತರಾದವರಿಗೆ ಅರ್ಥವಾಗುವುದಿಲ್ಲ. ದೈಹಿಕ ಶ್ರಮವೆಂದರೆ ಕನಿಷ್ಠ, ಬೌದ್ಧಿಕ ಶ್ರಮವೇ ಶ್ರೇಷ್ಠವೆಂಬ ಅತಾರ್ಕಿಕ, ಅಪಾಯಕಾರಿ ಚಿಂತನೆಯಿಂದ ಪ್ರೇರಿತವಾದ ಶಿಕ್ಷಣ ಪದ್ಧತಿ, ವೇತನ ನಿಗದಿಪಡಿಸುವ ನೀತಿಯ ಅನುಕರಣೆಗಳಿಂದಾಗಿ , ಭಾರತೀಯ ಸಾಮಾಜಿಕ, ಆರ್ಥಿಕ ವ್ಯವಸ್ಥೆಯಲ್ಲಿ ಆಗುತ್ತಿರುವ ಏರುಪೇರುಗಳನ್ನು ತಿಳಿಯಲಾರದಷ್ಟು, ಸರಿಪಡಿಸಲಾರದಷ್ಟು ಬೌದ್ಧಿಕ ಗ್ರಹಣಗ್ರಸ್ತರಾಗಿದ್ದಾರೆ ನಮ್ಮ ನಾಯಕರು ಹಾಗೂ ತಜ್ಞರು. ದೊಡ್ಡ ಕಂಪನಿಗಳು, ಹೆಸರಾಂತ ಬಂಡವಾಳಶಾಹಿಗಳಿಂದಲೇ ಉದ್ಯೋಗ ಸೃಷ್ಟಿಯಾಗುತ್ತದೆಂದು, ಅವರಿಂದಲೇ ಸಮಾಜದ ಉದ್ಧಾರವೆಂದು ಹಲವರು ನಂಬಿಕೊಂಡಿದ್ದಾರೆ. ಇಂತಹ ಕಂಪನಿಗಳು ಅಥವಾ ಅವರ ಮಾಲೀಕರುಗಳು ಹುಟ್ಟುವ ಶತಮಾನಗಳ ಮೊದಲೇ , ಭಾರತ ಜಗತ್ತಿನ ಅತಿ ಶ್ರೀಮಂತ ರಾಷ್ಟ್ರವಾಗಿತ್ತು ಎಂಬುದನ್ನು ಮರೆಯುವಷ್ಟು ಜನರ ಬುದ್ಧಿಗೆ ಗ್ರಹಣ ಹಿಡಿದಿದೆ. ಅಭಿವೃದ್ಧಿಯ ಹೆಸರಿನಲ್ಲಿ ಶ್ರೀಮಂತಿಕೆಯ ನಡುಗಡ್ಡೆಗಳು ಸೃಷ್ಟಿಯಾಗುತ್ತಿರುವಾಗ, ಪ್ರಾಚೀನ ಕಾಲದಿಂದಲೂ ಭಾರತದ ಮೂಲೆ ಮೂಲೆಯೂ ಸಮೃದ್ಧವಾಗಿದ್ದುದಕ್ಕೆ ಕಾರಣಗಳನ್ನು ಅಧ್ಯಯನ ಮಾಡಲಾರದಷ್ಟು ಮೌಢ್ಯತೆ ಆವರಿಸಿದೆ. ಜನಾಂಗೀಯ ಶ್ರೇಷ್ಠತೆಯ ಒಣಹಮ್ಮಿನಿಂದ, ಮತಾಂಧತೆಯ ಭ್ರಮೆಯಲ್ಲಿ, ಪ್ರಾದೇಶಿಕ ಸಂಕೋಲೆಯಲ್ಲಿ ಸಿಲುಕಿದವರಿಂದ ಇಡೀ ಮಾನವ ಕುಲದ ಸುಖ, ಶಾಂತಿಗಳು ಕದಡಿ ಹೋಗಿವೆ. ಸಾಮಾಜಿಕ , ಆರ್ಥಿಕ , ಸಾಂಸ್ಕøತಿಕ, ಶೈಕ್ಷಣಿಕ ಎಲ್ಲಕ್ಕೂ ಮಿಗಿಲಾಗಿ ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಸಮಂಜಸವಾಗಿ ಯೋಚಿಸಲಾರದಷ್ಟು ಗ್ರಹಣಗ್ರಸ್ತರಾದವರೇ ಬಹಳ. ಬುದ್ಧಿಗೆ ಹಿಡಿದಿರುವ ಗ್ರಹಣವನ್ನು ಬಿಡಿಸಲು ಸಮಗ್ರ ಪರಿವರ್ತನೆಯ ಸೂತ್ರವೇ ಬೇಕು. ಪ್ರವಚನ ಅಥವಾ ಭಾಷಣದಿಂದ ಬುದ್ಧಿಗೆ ಹಿಡಿದ ಗ್ರಹಣ ಬಿಡಿಸಲು ಸಾಧ್ಯವಾಗದು. ಪ್ರಾಚೀನ ಭಾರತದಲ್ಲಿ ಪ್ರಚಲಿತವಿದ್ದ, ಸುಮಾರು ಏಳು ಸಾವಿರ ವರ್ಷಗಳ ಹಿಂದೆ, ಭಗವಾನ್ ಸದಾಶಿವನಿಂದ ಪರಿಷ್ಕರಿಸಲ್ಪಟ್ಟ ವಿದ್ಯಾ ತಂತ್ರ ಸಾಧನೆಯೇ ಈ ಸಮಸ್ಯೆಗೆ ದಿವ್ಯೌಷಧ. ವಿದ್ಯಾತಂತ್ರವೆಂದರೆ ಅಂತರ್ ಮುಖಿಯಾಗಿ ಮನಸ್ಸನ್ನು ಏಕಾಗ್ರಗೊಳಿಸಿ, ವಿಶ್ವ ಚೈತನ್ಯದಲ್ಲಿ ಒಂದಾಗಿಸುವ ಸರಳ ಕ್ರಿಯೆ. ವಿದ್ಯಾತಂತ್ರ ಸಾಧನೆ ಎಂಬುದು ವೈಜ್ಞಾನಿಕ , ತಾರ್ಕಿಕ, ಮಾನಸಿಕ ಕ್ರಿಯೆ. ಇದಕ್ಕೆ ಸ್ತ್ರೀ, ಪುರುಷ ಎಂಬ ಭೇದಭಾವ ಇಲ್ಲ. ಪ್ರತಿಯೋರ್ವ ವ್ಯಕ್ತಿಯೂ ತನ್ನ ದೈನಂದಿನ ಬದುಕಿನಲ್ಲಿ ಪಾಲಿಸ ಬಹುದಾದ ಸರಳ ವಿಧಾನ; ಪ್ರಾಕೃತಿಕ ವಿಕಾಸಕ್ರಿಯೆಗೆ ಪೂರಕವಾದ ಮಾನವ ಪ್ರಯತ್ನ. ದಾರ್ಶನಿಕರ ಶಬ್ದಗಳಲ್ಲಿ ಹೇಳುವುದಾದರೆ ತನ್ನನ್ನು ತಾನು ಅರಿಯುವ , ತನ್ನ ಮೂಲ ಸ್ವರೂಪವನ್ನು ತಿಳಿಯುವ ಪ್ರಯತ್ನ, ಆಧ್ಯಾತ್ಮ ಸಾಧನೆಯ ಪಥ. ಯಾವುದೇ ಬಾಹ್ಯಾಡಂಬರಗಳಿಲ್ಲದ, ಯಾವ ಬಾಹ್ಯ ವಸ್ತುವನ್ನೂ ಅವಲಂಬಿಸಿರದ, ಮನಸ್ಸಿನ ಅಂಧಕಾರವನ್ನು ದೂರೀಕರಿಸುವ ಮಾನಸಿಕ ಪ್ರಕ್ರಿಯೆಯೇ ವಿದ್ಯಾತಂತ್ರ ಸಾಧನೆ. ಇದಕ್ಕೆ ಬೇಕಾದುದು ಮಾನವ ದೇಹ ಮಾತ್ರ. ವಿದ್ಯಾತಂತ್ರ ಸಾಧನೆಗಾಗಿ ಬದುಕಿನಿಂದ ವಿಮುಖರಾಗುವ, ನಾಡು ಬಿಟ್ಟು ಕಾಡು ಕಾಣುವ , ಮನೆ ಬಿಟ್ಟು ಮಠ ಸೇರುವ, ಸಂಸಾರ ತ್ಯಜಿಸಿ ಖಾವಿ ಧರಿಸುವ ಅಗತ್ಯವೂ ಇಲ್ಲ. ಬದುಕಿನ ಭಾಗವಾಗಿಯೇ ತಂತ್ರಸಾಧನೆಯನ್ನು ಅನುಸರಿಸಲು ಸಾಧ್ಯವಿದೆ. ಆದರೆ ಒಪ್ಪೊತ್ತಿನ ಊಟಕ್ಕಾಗಿ ಪರದಾಡುವ ವ್ಯಕ್ತಿಗೆ ಆಧ್ಯಾತ್ಮ ಸಾಧನೆಯ ವಿಚಾರ ಹೇಳುವುದು ಕ್ರೂರ ವ್ಯಂಗವೇ ಸರಿ. ಭವಿಷ್ಯದ ಕುರಿತು ಭಯಭೀತನಾದ ವ್ಯಕ್ತಿ ಬದುಕಿನಲ್ಲಿ ಅಭದ್ರತೆ ಕಾಡುತ್ತಿರುವಾಗ ಸಹಜವಾಗಿ ಮೂಢನಂಬಿಕೆಗಳ ದಾಸನಾಗುತ್ತಾನೆ/ಳೆ. ಆದ್ದರಿಂದ ಪ್ರತಿಯೋರ್ವ ವ್ಯಕ್ತಿಗೂ ಜೀವನದ ಭದ್ರತೆ ಕಲ್ಪಿಸಬೇಕಾದುದು ಸಮಾಜದ ಹೊಣೆಗಾರಿಕೆ. ಅರ್ಥಾತ್ ಸರ್ಕಾರದ ಜವಾಬ್ದಾರಿ. ಸರ್ಕಾರದ ಅನುದಾನ ಅಥವಾ ರಾಜಕೀಯ ಪಕ್ಷಗಳ ಭರವಸೆಯಿಂದ ಜೀವನದ ಭದ್ರತೆ ನೀಡಲು ಸಾಧ್ಯವಾಗದು. ಪ್ರತಿಯೋರ್ವ ವ್ಯಕ್ತಿಗೂ ದುಡಿಮೆಯ ಅವಕಾಶ, ದುಡಿಮೆಯ ಪ್ರತಿಫಲದಿಂದ ತನ್ನ ಹಾಗೂ ಅವಲಂಬಿತರ ಜೀವನದ ಕನಿಷ್ಠ ಅಗತ್ಯತೆಗಳಾದ ಆಹಾರ, ಬಟ್ಟೆ, ವಸತಿ, ಶಿಕ್ಷಣ, ಔಷದೋಪಚಾರಗಳನ್ನು ಪೂರೈಸಿಕೊಳ್ಳುವ ಸಾಮಥ್ರ್ಯ ಇರುವಂತಹ ಸಾಮಾಜಿಕ – ಆರ್ಥಿಕ ವ್ಯವಸ್ಥೆಯ ನಿರ್ಮಾಣದಿಂದ ಬದುಕಿನ ಭದ್ರತೆಯ ಭರವಸೆಯನ್ನು ಸಂವಿಧಾನದ ಅಂತರ್ಗತವಾಗಿ ಪ್ರತಿ ವ್ಯಕ್ತಿಗೂ ನೀಡಲು ಸಾಧ್ಯ. ಬಂಡವಾಳವಾದಿ ವ್ಯವಸ್ಥೆಯಲ್ಲಿ ಇದು ಅಸಾಧ್ಯ. ಸಹಕಾರಿ ವ್ಯವಸ್ಥೆಯ ಮೂಲಕ ಜನಸಾಮಾನ್ಯರಿಗೆ ಆರ್ಥಿಕ ಅಧಿಕಾರ ನೀಡುವ ಅಂದರೆ ಸಂಪತ್ತಿನ ಮೇಲೆ ಹತೋಟಿ ಸಾಧಿಸುವ ಸ್ಥಿತಿ ನಿರ್ಮಾಣ ಮಾಡುವ ಅಂದರೆ ಜನಾಧಿಕಾರ ವ್ಯವಸ್ಥೆ. ಸ್ಥಾಪಿಸುವುದು ವಿಕೇಂದ್ರೀಕರಣ ಅರ್ಥನೀತಿಯಿಂದ ಮಾತ್ರ ಸಾಧ್ಯ. ಬುದ್ಧಿಗೆ ಕವಿದಿರುವ ಗ್ರಹಣದಿಂದ ಬಿಡುಗಡೆ ಹೊಂದಲು ವಿದ್ಯಾ ತಂತ್ರಸಾಧನೆ ಮಾಡುವ ಅವಕಾಶವನ್ನು ಪ್ರತಿಯೋರ್ವ ವ್ಯಕ್ತಿಗೂ ಕಲ್ಪಿಸುವ ಸಲುವಾಗಿ ಇಂದಿನ ಅಮಾನವೀಯ, ಶೋಷಣಕಾರಿ ಬಂಡವಾಳವಾದಿ ವ್ಯವಸ್ಥೆಯನ್ನು ಕಿತ್ತೊಗೆದು, ಜನಾಧಿಕಾರ ವ್ಯವಸ್ಥೆಯನ್ನು ಸ್ಥಾಪನೆ ಮಾಡುವುದು ಅನಿವಾರ್ಯ. ಈ ಪರಿವರ್ತನೆ ಎಷ್ಟು ಬೇಗ ಆಗುತ್ತದೋ ಅಷ್ಟು ಬೇಗ ಮಾನವನ ವಿಕಾಸದ ವೇಗ ಹೆಚ್ಚುತ್ತದೆ. – ಗಣೇಶ ಭಟ್ಟ ಶಿರಸಿ – 01-01-2020