ಉಗಾದಿ ಚಿತ್ರಗಳು
ಕೆರೆಕೋಡಿ ಪಕ್ಕದಲ್ಲಿದ್ದ ಬೀದಿಯೊಂದರಲ್ಲಿ ನನ್ನ ತಾರುಣ್ಯ ಕಳೆಯಿತು. ಅಲ್ಲಿ ಬೆಸ್ತರು, ಈಡಿಗರು, ಬಡಗಿಗೆಲಸದ ಆಚಾರಿಗಳು, ಕಮ್ಮಾರರು, ಮಂಡಕ್ಕಿಭಟ್ಟಿಯವರು, ಮೇದಾರರು ಇದ್ದರು. ಎಲ್ಲರೂ ಬಸವಣ್ಣನವರ ವಚನದಲ್ಲಿ ಬರುವಂತೆ `ಅಂದಂದೆ ಹುಟ್ಟಿತ್ತು ಅಂದಂದೆ ಹೊಂದಿತ್ತು’ ಎಂಬಂತೆ ಹಗಲ ದುಡಿಮೆ- ರಾತ್ರಿಯ ಊಟದ ಅವಸ್ಥೆಯವರು. ಒಬ್ಬರ ಮನೆಯ ಹಬ್ಬ ಇಡೀ ಬೀದಿಯ ಹಬ್ಬವಾಗುತ್ತಿತ್ತು. ರಂಜಾನ್ ದಿನ ಶೀರ್‍ಕುರುಮಾ ಬಟ್ಟಲನ್ನು ಬೀದಿಯ ಎಲ್ಲರ ಮನೆಗೆ ತಲುಪಿಸುವುದು ನಮಗೆ ಲೋಕಮಹತ್ವದ ಕಾಯಕವಾಗಿತ್ತು. ಉಗಾದಿಯ ದಿನ ಬೇರೆಯವರ ಮನೆಗಳಿಂದ ಬರುತ್ತಿದ್ದ ಹೋಳಿಗೆ, ಕೋಸಂಬರಿ, ಹೋಳಿಗೆ ಸಾರು, ಚಿತ್ರಾನ್ನ, ಮಜ್ಜಿಗೆ ಮೆಣಸಿನಕಾಯಿ, ಸಂಡಿಗೆಗಳಿಂದ ಅಲಂಕೃತವಾದ ದೊಡ್ಡ ತಾಟನ್ನು ಬಾಗಿಲಲ್ಲಿ ಖುದ್ದು ನಿಂತು ಸ್ವಾಗತಿಸುವ ಕೆಲಸವನ್ನು ಮುತುವರ್ಜಿಯಿಂದ ನಾವು ಮಾಡುತ್ತಿದ್ದೆವು. ಮಕ್ಕಳು ಅವರಿವರ ಮನೆಯ ಅಡಿಗೆಗೆ ಕಾಯಬಾರದೆಂದು ಅಮ್ಮ ಹೋಳಿಗೆ ಮಾಡುತ್ತಿದ್ದಳು. ಆದರೆ ನೆರೆಮನೆಯ ಹೋಳಿಗೆಯ ಸ್ವಾದವೇ ಬೇರೆ.
ಬೀದಿಯ ಜನ, ಉಗಾದಿಯಂದು ಹೊತ್ತು ಕಂತುವ ಸಮಯಕ್ಕೆ ಪುರಿಭಟ್ಟಿಯ ಅಕ್ಕಿ ಒಣಗಲು ಮಾಡಿದ್ದ ಕಣದಲ್ಲಿ ಜಮಾಯಿಸುತ್ತಿತ್ತು. ಕೆರೆ ಕೆಳಗಿನ ಅಡಿಕೆ ತೋಟಗಳ ತಲೆಯ ಮೇಲೆ, ಬಣ್ಣಬಣ್ಣದ ಮೋಡಗಳು ವಿವಿಧ ಆಕೃತಿಗಳಲ್ಲಿ ಲಾಸ್ಯವಾಡುವ ಪಡುವಣದಾಗಸದಲ್ಲಿ, ಬೆಳ್ಳಿ ಕುಡುಗೋಲಿನಂತಹ ಉಗಾದಿ ಚಂದ್ರನನ್ನು ಹುಡುಕುವ ಕಾರ್ಯ ನಡೆಸುತ್ತಿತ್ತು. ನಾವು ವಯಸ್ಸಾಗಿ ಕಣ್ಣು ಮಂಜಾದವರಿಗೆ ಚಂದ್ರನನ್ನು ತೋರಿಸುವ ಕೆಲಸ ಮಾಡುತ್ತಿದ್ದೆವು. ಅವರ ಬೆನ್ನಹಿಂದೆ ನಿಂತು, ಅವರ ಎಡಹೆಗಲ ಮೇಲೆ ಕೈಯಿಟ್ಟು, ಅವರ ಕಿವಿಯ ಪಕ್ಕ ನಮ್ಮ ಕೆನ್ನೆ ತಂದು, ತೋರುಬೆರಳನ್ನು ನಿಮಿರಿಸಿ ಚಂದ್ರನಿಗೆ ಅವರ ದಿಟ್ಟಿಯನೊಯ್ದು ಮುಟ್ಟಿಸಲು ಯತ್ನಿಸುತ್ತಿದ್ದೆವು. “ಅಗೋ ಆ ಕರೇ ಮಾಡ ಐತಲ್ಲಜ್ಜಿ, ಅದರ ಪಕ್ಕ ಮೊಸಳೆ ತರಹ ಒಂದು ಮಾಡ ಎದ್ದೀತಲ್ಲ, ಅದರ ಬಲಗಡೀಕ್ ನೋಡು, ಸಣ್ಣಗೆ ಬೆಳ್ಳಗೆ ಗೆರೆ ಥರ” ಎಂದು ವೀಕ್ಷಕ ವಿವರಣೆ ಕೊಡುತ್ತಿದ್ದೆವು. ರಂಜಾನ್ ತಿಂಗಳಲ್ಲೂ ಚಂದ್ರನನ್ನು ಹೀಗೇ ಹುಡುಕುತ್ತಿದ್ದವು. ಅವನು ಕಂಡನೆಂದರೆ ನಾಳೆ ನಮಾಜು ಗ್ಯಾರಂಟಿ. ಉಗಾದಿ ಚಂದ್ರನನ್ನು ತೋರಿಸುವಾಗ ಈಡಿಗರ ಅಜ್ಜಿಗೆ ಕಾಣದಿದ್ದರೂ ಚದುರಿದ ಮೋಡದ ಚೂರನ್ನು ಕಂಡು `ಹ್ಞೂಕಣಪ್ಪಾ, ಕಾಣ್ತುಕಾಣ್ತು. ಸ್ವಾಮೀ ನಮಪ್ಪಾ. ಈಸಲ ಒಳ್ಳೆ ಮಳೆಬೆಳೆ ಕೊಡಪ್ಪಾ” ಎಂದು ಮುಗಿಲಿಗೆ ಕೈಮುಗಿಯುತ್ತಿತ್ತು. ಅದೇ ಹೊತ್ತಲ್ಲಿ ಅಪ್ಪ, ಬೀದಿಯಲ್ಲಿ ಹಿರೀಕನಾಗಿ ಅಂಗಳದಲ್ಲಿ ಕುರ್ಚಿ ಹಾಕಿಕೊಂಡು ಜಗದ್ಗುರುವಿನಂತೆ ಪಾದಗಳನ್ನು ನೀಟಾಗಿ ಜೋಡಿಸಿಕೊಂಡು ಕೂರುತ್ತಿದ್ದ. ಚಿಕ್ಕವರೆಲ್ಲರೂ ಅಪ್ಪನಿಗೆ `ಸಾಬರೇ ಚಂದ್ರ ಕಾಣ್ತು, ಆಶೀರ್ವಾದ ಮಾಡ್ರಿ’ ಎಂದು ಕಾಲುಮುಟ್ಟಿ ಹಾರೈಕೆ ಪಡೆಯುತ್ತಿದ್ದರು.
ಯುಗಾದಿ ಹಬ್ಬದ ದಿನ ಭದ್ರಾವತಿ ಆಕಾಶವಾಣಿಯವರು ಬೆಳಗಿನ ವಾರ್ತೆಗಳ ಬಳಿಕ 7.45ಕ್ಕೆ `ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ಹಾಡನ್ನು ಕಡ್ಡಾಯವೆಂಬಂತೆ ಹಾಕುತ್ತಿದ್ದರು. ಜಾನಕಿಯವರ ದನಿಯಲ್ಲಿ ಮೂಡಿಬಂದಿರುವ ಬೇಂದ್ರೆ ವಿರಚಿತ ಈ ಹಾಡು, ನನ್ನ ಸ್ಮತಿಯಲ್ಲಿ ಭದ್ರವಾಗಿ ಕೂತಿದೆ. ಕೋಡಿಹಳ್ಳದ ದಂಡೆಗೆ ಹೊಂಗೆಗಿಡಗಳಿದ್ದ ಕಾರಣ “ಹೊಂಗೆಹೂವ ತೊಂಗಲಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಬರುತಿದೆ” ಎಂಬ ಸಾಲು ನಮಗೆ ಅನುಭವವೇದ್ಯವಾಗಿತ್ತು. ಈ ಸಾಲನ್ನು ಮೈಸೂರಿನಲ್ಲಿ ಕುಕ್ಕರಹಳ್ಳಿ ಪಕ್ಕದ ಹಾಸ್ಟೆಲಿನಲ್ಲಿರುವಾಗ, ಕೆರೆದಂಡೆಯ ಮೇಲೆ ಅಡ್ಡಾಡುತ್ತ ಮತ್ತೂ ದಿವಿನಾಗಿ ಅನುಭವಿಸಿದೆ. ಸಾಹಿತ್ಯದ ವಿದ್ಯಾರ್ಥಿಯಾಗಿ `ಯುಗಾದಿ’ ಕವನ ಓದುವಾಗ ಗೊತ್ತಾಯಿತು- ಇದು ನಿಸರ್ಗದ ಸಂಭ್ರಮಾಚರಣೆಯ ಹಾಡು ಮಾತ್ರವಲ್ಲ, ವಿಷಾದಗೀತೆ ಕೂಡ ಎಂದು. “ವರುಷಕೊಂದು ಹೊಸ ಜನುಮ ವರುಷಕೊಂದು ಹೊಸತು ನೆಲೆಯು ಅಖಿಲ ಜೀವ ಜಾತಕೆ; ಒಂದೇ ಜನ್ಮದಲಿ ಒಂದೇ ಬಾಲ್ಯ ಒಂದೇ ಹರೆಯ ನಮಗದಷ್ಟೇ ಏತಕೆ?”ಎಂಬ ಪ್ರಶ್ನೆ ನನ್ನೊಳಗೆ ಕಂಪನದಾಯಕ ಅಸಹಾಯಕತೆ ಹುಟ್ಟಿಸಿತು. ಯಾಕೀ ಅನ್ಯಾಯ ಎಂದು ಆಕ್ರೋಶ ಬರಿಸಿತು. ಯುಗದ ಆದಿಯನ್ನು ಸೂಚಿಸುವ ಈ ಹಬ್ಬ, ಕಾಲನ ಕಠೋರತೆಯನ್ನೂ ಸೂಚಿಸುತ್ತ ತಲ್ಲಣವನ್ನು ನನ್ನೊಳಗೆ ಖಾಯಂ ಸ್ಥಾಪಿಸಿಬಿಟ್ಟಿತು.
ಇದನ್ನೆಲ್ಲ ಧೇನಿಸುತ್ತ್ತ ಮನೆಯ ಮುಂದೆ ನಾವೇ ಬೆಳೆಸಿರುವ ಹೊಂಗೆಗಿಡಗಳನ್ನು ನೋಡುತ್ತೇನೆ. ನಮ್ಮ ತಾಪತ್ರಯಗಳಲ್ಲಿ ಅವಕ್ಕೆ ವಾರದಿಂದ ನೀರುಣಿಸುವುದಕ್ಕೂ ಆಗಿರಲಿಲ್ಲ. ಎಮ್ಮೆಗಳು ಕೋಡಿನ ತುರಿಕೆ ಕಳೆಯಲು ತಿಕ್ಕಾಡಿದ್ದರಿಂದ ಲಾಠಿಜಾರ್ಜಿಗೆ ಒಳಗಾದ ಭಿಕ್ಷರಂತಾಗಿದ್ದವು ಅವು. ಆದರೀಗ ಗಾಯಗೊಂಡ ಅವುಗಳ ಕೊಂಬೆಗಳಿಂದ ಜೀವರಸ ಹೊಮ್ಮಿದಂತೆ ತೆಳುಕೆಂಬಣ್ಣದ ತಳಿರು ಮೂಡಿವೆ-ಯಾರ ಹಂಗೂ ಇಲ್ಲದೆ ದೇಹದೊಳಗಿನ ಜವ್ವನವು ಉಕ್ಕಿ ಮುಖದಲ್ಲಿ ಕಾಂತಿ ಹೊಮ್ಮಿಸುವಂತೆ.
ಕಳೆದೆರಡು ವಾರಗಳಿಂದ ನಮ್ಮ ಹಿತ್ತಲ ಮರಗಿಡಗಳು ಎಲೆಯುದುರಿಸುತ್ತಿವೆ. ನನ್ನ ಹೆಂಡತಿ ಗೊಣಗಿಕೊಂಡು ಅವನ್ನು ಗುಡಿಸುತ್ತ ಮರದ ಬುಡಕ್ಕೇ ಸುರಿಯುತ್ತಿದ್ದಾಳೆ. ಎಲೆಯುದುರುವ ಸದ್ದು ಸಾಮಾನ್ಯವಾಗಿ ಕೇಳುವುದಿಲ್ಲ. ಆದರೆ ದಿವಿಹಲಸಿನ ಗಿಡದ ದಪ್ಪನೆಯ ಎಲೆ ಕಳಚಿ ಬೀಳುವ ಖಟ್ ಸದ್ದು ಮಾತ್ರ ಶ್ರವಣೀಯ. ತನ್ನ ಮೈಯ ತೊಗಲೊಡೆದು ಹುಟ್ಟಿದ ಎಲೆಯನ್ನು ವರ್ಷವಿಡೀ ಇರಿಸಿಕೊಂಡಿದ್ದ ಮರ, ಹಣ್ಣಾದ ಬಳಿಕ ಎಷ್ಟು ನಿರಾಳವಾಗಿ ಕೈಬಿಡುತ್ತಿದೆ! ಚಿಕ್ಕಂದಿನಲ್ಲಿ ಅಮ್ಮ ಹೇಳುತ್ತಿದ್ದಳು. ಸ್ವರ್ಗದಲ್ಲಿ ಒಂದು ಮರವಿದೆಯಂತೆ. ಅದರಲ್ಲಿ ನಮ್ಮ ಹೆಸರಿನ ಎಲೆಗಳಿವೆಯಂತೆ. ಅದು ಉದುರಿದ ದಿನ ಇಲ್ಲಿ ನಮ್ಮ ಪ್ರಾಣ ಹೋಗುತ್ತದಂತೆ. ಉದುರಿದ ಎಲೆಯ ಜಾಗದಲ್ಲಿ ಹೊಸ ಚಿಗುರು ಬರಬಹುದು. ಆದರೂ ಉದುರಿದ ಎಲೆಯ ತಬ್ಬಲಿತನ ಇನ್ನಿಲ್ಲದಂತೆ ಕಾಡುತ್ತದೆ.
ಎಲೆಯುದುರಿಸಿದ ಮರಗಳೀಗ ಮುಂದಿನ ಉಗಾದಿ ತನಕ ಅಭಯಕೊಡುವಂತೆ ಚಿಗುರುತ್ತಿವೆ. ಮನೆಯೆದುರಿನ ಬೇವು ಮುತ್ತಿನ ಮೂಗುಬೊಟ್ಟಿನಂತಹ ಹೂಗಳನ್ನು ಗೊಂಚಲಾಗಿ ಬಿಟ್ಟಿದೆ. ಇಂತಹ ಋತುಚಕ್ರದ ಯಾವ ಕರಾರಿಗೂ ಸಹಿಹಾಕದ ಬಾಳೆಗೆ ಎಲೆಬದಲಿಸುವ ಗರಜಿಲ್ಲ. ಕೆಂಡಸಂಪಿಗೆ ಗಿಡದಲ್ಲಿ ಉಳಿದಿರುವ ಕೊನೆಯ ಮೊಗ್ಗುಗಳು, ಮನೆಗೆಲಸಕ್ಕೆ ಹೋಗಿಬರುವ ಬಡ ಹುಡುಗಿಯರಂತೆ ಸೊರಗಿ ಸಣ್ಣಗೆ ಅರಳುತ್ತಿವೆ. `ಇದು ಗೊಡ್ಡು ಬಿದ್ದಿದೆ ಕಂಡ್ರಿ, ಕಡಿದು ಎಸೀರಿ ಅತ್ಲಾಗೆ’ ಎಂದು ಸಾರ್ವಜನಿಕ ಒತ್ತಾಯವಿದ್ದರೂ, ನನ್ನ ವೀಟೊ ಕಾರಣದಿಂದ ನಿಂತಿರುವ ಕಾಡುನೆಲ್ಲಿ, ರೆಂಬೆಗಳಲ್ಲಿ ಗಿಣಿಹಸುರಿನ ಸಣ್ಣಚಿಗುರು ತಳೆದು ಇನ್ನೊಂದು ಅವಕಾಶ ಕೊಡಿ ಎಂದು ಅರ್ಜಿ ಹಾಕುತ್ತಿದೆ. ನುಗ್ಗೆ, ಜೋಗಮ್ಮನ ಜಡೆಗಳಂತೆ ಕಾಯಿಗಳನ್ನು ಇಳಿಬಿಟ್ಟು ತೃಪ್ತಿಯಿಂದ ನಿಂತಿದೆ. ಅಂಜೂರ ಮಾತ್ರ ಎಮ್ಮೆಕಿವಿಯಂತಹ ಎಲೆಗಳ ಮೇಲೆ ಧೂಳನ್ನು ಹೊತ್ತು ತಾಪ ಕೆರಳಿಸುತ್ತಿದೆ. ಜಂಬುನಾಥನ ಬೆಟ್ಟದಲ್ಲಿ ನಿಶ್ಯಬ್ದವಾಗಿ ಮಲಗಿದ್ದ ಅದಿರನ್ನು ಬಲಾತ್ಕಾರವಾಗಿ ಮೇಲೆಬ್ಬಿಸಿ, ವಿದೇಶಗಳಿಗೆ ಕಳಿಸಿ ರೊಕ್ಕ ಬಾಚುತ್ತಿರುವ ಧಣಿಗಳು ಎಲ್ಲಿದ್ದಾರೊ ಏನೊ, ಅವರು ಹಬ್ಬಿಸಿದ ಧೂಳು ನಮ್ಮ ಮರದೆಲೆಗಳ ಮೇಲೆ ತಬ್ಬಲಿಯಂತೆ ಪವಡಿಸಿದೆ. ಗಣಿಯೂರಲ್ಲಿ ನೆಲೆಸಿರ್ದ ಬಳಿಕ ಕೆಂಧೂಳಿಗೆ ಅಂಜಿದೊಡೆ ಹೇಗೆ ಎಂದುಕೊಂಡು, ವಾಸ್ತವವಾದಿ ಅಂಜೂರ ಗಿಡ ನೀಳತೊಟ್ಟಿನ ಚಪ್ಪಟೆಮುಖದ ಹಸಿರುಕಾಯನ್ನು ಮೈತುಂಬ ಕಚ್ಚಿಕೊಂಡಿದೆ.
ಆದರೆ ಇಷ್ಟಪಟ್ಟು ನೆಟ್ಟ ಬದಾಮಿ ಮಾವು ಮಾತ್ರ ಚಿಗುರಿ ನಿರಾಶೆ ತಂದಿದೆ. ಅದರ ಕೆಂದಳಿರು ಮೋಹಕವಾಗಿದೆ. ಅದು ಈ ಸಲ ಫಲವಿಲ್ಲ ಎಂದು ಕೊಟ್ಟಿರುವ ನೋಟಿಸಾಗಿದ್ದು ಅದರ ಸೌಂದರ್ಯ ಅಹಿತವಾಗಿ ಕಾಣುತ್ತಿದೆ. ವಸಂತಮಾಸದಲ್ಲಿ ಮಾವಿನ ಚಿಗುರು ತಿನ್ನಲು ಕೋಗಿಲೆಗಳು ಬಂದು ಕೂಗುತ್ತವೆ ಎಂಬುದು ಕವಿಸಮಯ. ನಮ್ಮ ಮಾವಿನ ಮರ ಕಂಡಂತೆ ಸದಾ ಮೆರೂನ್ ಬಣ್ಣದ ಕೆಂಬೂತಗಳು ಬಂದು ಕುಳಿತು, ಗಂಟಲನ್ನು ಕ್ಯಾಕರಿಸಿ ಸರಿಪಡಿಸಿಕೊಳ್ಳುವವರಂತೆ ಖ್‍ಖ್‍ಖ್ ನಾದ ಹೊರಡಿಸುತ್ತ ಸುರತಕೇಳಿ ಮಾಡುತ್ತವೆ. ಇಷ್ಟಾಗಿಯೂ ಮೂರು ಕೊಂಬೆಗಳು ಚಿಗರದೆ ಕಪ್ಪುಹಸಿರಿನ ಹಳೇಎಲೆಗಳನ್ನು ಇಟ್ಟುಕೊಂಡು, ಹೂತು ಮಾವು ಬಿಡುವ ಭರವಸೆ ನೀಡುತ್ತಿವೆ. ಒಂದಷ್ಟು ಬಲಿತ ಕಾಯಿ, ಒಂದಷ್ಟು ಮಿಡಿ, ಒಂದಷ್ಟು ಹೂವು ಎಲ್ಲವೂ ಒಟ್ಟೊಟ್ಟಿಗೆ ಇವೆ.
ಅರೆಹುಚ್ಚನಂತಿರುವ ಮಾವಿನ ಮರವನ್ನೂ, ಬೀದಿ ಮಣ್ಣಲ್ಲಿ ಆಡಿಬಂದ ಮಗುವಿನಂತಹ ಅಂಜೂರ ಗಿಡವನ್ನೂ ನೋಡುತ್ತಿರುವಂತೆ, ಉಗಾದಿ ವಿಚಿತ್ರ ಭಾವವನ್ನು ಸ್ಫುರಿಸುತ್ತಿದೆ. ಬಾಲ್ಯದ ಮಧುರ ನೆನಪುಗಳೂ, ಬೇಂದ್ರೆ ಕವನ ಹುಟ್ಟಿಸಿದ ಕಂಪನಗಳೂ ಕೆಂಧೂಳಿನ ವಾಸ್ತವತೆಗಳೂ ಮಿಶ್ರಗೊಂಡು ನುಗ್ಗುತ್ತಿವೆ. ತಮ್ಮೆಲ್ಲ ದುಗುಡಗಳೊಳಗೆ ಬದುಕುವ ಯಾವುದೊ ತ್ರಾಣ ಜನರಲ್ಲಿದೆ. ಹಬ್ಬ ಬರುವುದೇ ದಣಿದ ಜೀವಗಳಿಗೆ ಚೈತನ್ಯ ತುಂಬಲು. ಬೀದಿಯಲ್ಲಿ ಕಟ್ಟುತ್ತಿರುವ ಕಟ್ಟಡಗಳನ್ನು ಕಾಯಲೆಂದು ಊರುಬಿಟ್ಟು ಬಂದಿರುವ ವಾಚ್‍ಮನ್ ಶೆಡ್ಡುಗಳತ್ತ ನೋಡಿದೆ. ಕವನದ ಮೊದಲ ಭಾಗದಲ್ಲಿರುವ `ಭೃಂಗದ ಕೇಳಿ’ ಮಕ್ಕಳಿಂದ ಹೊಮ್ಮಿ ಬರುತ್ತಿದೆ. ಕವನದ ಕೊನೆಯ ಭಾಗವನ್ನೇ ಧೇನಿಸುತ್ತ ವಿಷಾದಮುಖಿಯಾಗಿರುವ ನನ್ನನ್ನು ಅಣಕಿಸುತ್ತಿದೆ. ಯುಗಕ್ಕೆ ಆದಿ ಯಾವುದೊ ಏನೊ? ಅದರ ಅಂತ್ಯವನ್ನೇ ಕುರಿತು ಯಾಕೆ ಚಿಂತಿಸಬೇಕು. ಮನುಷ್ಯರಿಗೆ ಅಂತ್ಯವಿರುವುದು ನಿಜ. ಆದರೆ ಪಯಣದ ಹಾದಿಯಲ್ಲಿ ದೊರಕುವ ನೋಟಗಳು ಅನಂತವಾಗಿವೆ. ಇದು ಬೇಂದ್ರೆಯವರಿಗೂ ಅರಿವಿತ್ತು. ಎಂತಲೇ ತಾವೇ ಬರೆದ `ಯುಗಾದಿ’ ಕವನಕ್ಕೆ ಡಿಕ್ಕಿಹೊಡೆಯುವಂತೆ `ಈ ತುಂಬಿಬಾಳು ತುಂಬಿರುವ ತನಕ ತುಂತುಂಬಿ ಕುಡಿಬೇಕು’ ಎಂಬ ಸಾಲನ್ನೂ ಬರೆದರು. ಉಮರ್ ಖಯಾಮನನ್ನು ಕನ್ನಡಿಸುತ್ತ ಹುಟ್ಟಿದ ಸಾಲುಗಳಿವು. ಸಾವು ಹತಾಶೆಯನ್ನು ಮಾತ್ರವಲ್ಲ, ತೀವ್ರವಾಗಿ ಬದುಕುವ ಉತ್ಕಟತೆಯನ್ನೂ ಹುಟ್ಟಿಸಬಲ್ಲದು.
(ಪಂಡಿತ್ ಬಿಜಾಪುರೆ ಲೇಖನಕ್ಕೆ ಸಿಕ್ಕ ಮೆಚ್ಚುಗೆ ಕಂಡಬಳಿಕ, ಈ ಹಿಂದೆ ಬರೆದ ಆದರೆ ಪುಸ್ತಕರೂಪದಲ್ಲಿನ್ನೂ ಬಂದಿರದ ಕೆಲವು ಟಿಪ್ಪಣಿಗಳನ್ನು ಹಂಚಿಕೊಳ್ಳಬಹುದು ಅನಿಸಿ ಈ ಈ ಬರಹ.)
***********************
ಲೇಖಕರ ಬಗ್ಗೆ:
ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ
ನಮ್ಮ ಊರಿನ ಕಡೆ ಉಗಾದಿ ಹಬ್ಬದ ದಿನ ಬೇವು ಬೆಲ್ಲ ತಿಂದು,ನಮಗೆ ಎಷ್ಟು ವರ್ಷ ವಯಸ್ಸಾಗಿದೆ ಯೋ ಆ ಸಂಖ್ಯೆ ಹೇಳಿ,”ಅಷ್ಟು ಉಗಾದಿ ಗೆದ್ದೇ”ಅಂತ ಹೇಳ್ಬೇಕು.ಉದಾಹರಣೆಗೆ,ನಲವತ್ತು ವರ್ಷದ ವರು”ನಲವತ್ತು ಉಗಾದಿ ಗೆದ್ದೇ”ಹೀಗೆ..
ಬಹುಶಃ ಕಳೆದ ಹೋದ ವರ್ಷಗಳ ಮತ್ತು ಮುಂಬರುವ ವರ್ಷದ ನಡುವಿನ ಕೊಂಡಿಯಂತೆ ಈ ಮಾತು ನನಗೆ ಅನ್ನಿಸುತ್ತದೆ.
ಉಗಾದಿ ಅಂದ್ರೆ ಒಬ್ಬಟ್ಟು,ಮಾವಿನಕಾಯಿ ಚಿತ್ರಾನ್ನ,ಬೇವು ಬೆಲ್ಲ ಸೇವನೆ ,ಮಾರನೇ ದಿನದ ವರ್ಷತೊಡಕಿಗೆ ಮರಿ ಕಡಿಯುವುದು,ಎಷ್ಟೊಂದು ನೆನಪುಗಳು..ಚಂದದ ಆಪ್ತ ಬರಹ…
ಇಡೀ ಬರಹ ಚಿತ್ರರೂಪಿಯಾಗಿ ಮನಃಪಟಲದ ಮೇಲೆ ಎದ್ದೆದ್ದು ಕುಣಿಯಿತು. ರಹಮತ್ ಸರ್ ಅವರ ಶೈಲಿಯೇ ಹಾಗೆ… ಚಿತ್ರಕತೆ, ಧ್ವನಿಪೂರ್ಣತೆ ಅವರಿಗೆ ಒಲಿದಿರುವುದು ಕನ್ನಡ ಓದುಗರ ಸೌಭಾಗ್ಯ…