ಕೆಂಪು ಐರಾವತ

ಕವಿತೆ

ಡಾ.ಪ್ರೇಮಲತ ಬಿ. 

ರೆಕ್ಕೆಬಿಚ್ಚಿ ಉಡ್ಡಯನಗೈಯ್ಯುವ ಮುನ್ನವೇ

ಹಿಡಿಯಬೇಕೆಂದು ಓಡಿದೆ ಒರೆಸುತ್ತ

ಹಣೆಯ ಮೇಲಿನ ಬೆವರು

ಒಡಲ ತುಂಬುತ್ತ, ಹರಟೆಯೊಡೆಯುತ್ತ

ಪುಕ್ಕವರಡಿ ವಿರಮಿಸಿ ನಿಂತಿತ್ತು

ದೇದೀಪ್ಯಮಾನವಾದ  ಕೆಂಪು ಐರಾವತ

ಏನೋ ಸಂಕಟ, ಬಿಟ್ಟು ಹೊರಟ ತವಕ

ನನ್ನದಲ್ಲದ ಊರ, ಮೂರ್ತವಲ್ಲದ ಭಾವ

ದಿನಕೊಂದು ಕೊನೆಕಟ್ಟಿ ಗಟ್ಟಿಯಾಗಿರದ ಅಳ್ಳಕ  

ಒಂದೇ ಗಂಟೆ ಊರ ತಲುಪಲು

ಒಂದೆರಡೇ ದಿನದ ಗಡುವು ಮತ್ತೆ ಮರಳಲು

ನಿಟ್ಟುಸಿರಿಟ್ಟೆ ನಕ್ಕು..” ಎಲ್ಲ ಮರುಳು”

ಯಾರೋ ಬಂದರು, ಯಾರೋ ಇಳಿದರು

ಕಣ್ಣ ಮುಚ್ಚಿ ಕಿಟಗಿಗೊರಗಿ ಗುನುಗಿ ಹಾಡು

ವಿದಾಯಗಳ ಮಾತು,ಬೈ ಬೈ ಟಾ..ಟಾ

ಪ್ಲಾಸ್ಟಿಕ್ಕಿನ ಸರಬರ ನನ್ನದೇ ಸನಿಹ

ಕಣ್ಬಿಟ್ಟರೆ ಸೇಬು ,ಕಿತ್ತಳೆ ,ಬಾಳೆ ಹಿಡಿದು 

ಬಂದಿದ್ದೆ ಏನಚ್ಚರಿ ನಿನ್ನ ಆ ಕಕ್ಕುಲಾತಿ..

ಮಾತು ಹೊರಡದ ನಿನ್ನ ಅಮಾಯಕತೆ

ಮಾಗಿದ ಪ್ರೀತಿ ಹಣ್ಣಾಗಿ ಹೊಳೆದು ಕಣ್ಣಲ್ಲಿ

ಕೂತಿದ್ದವು ನನ್ನ ಉಡಿಯ ತುಂಬಿ….

************************************************************************

.

4 thoughts on “ಕೆಂಪು ಐರಾವತ

  1. ಬಸ್ಸಿನಲ್ಲಿ ಕೂತು ಹೋಗಿ ಬಂದಷ್ಟೇ ಸಂತೋಷವಾಯಿತು.

  2. ಎಲ್ಲಿಂದಲೋ ನಮ್ಮ ಊರಿಗೆ ಪಯಣಿಸುವಾಗ
    ನಮ್ಮ ಊರಿಂದ ಇನ್ನೆಲ್ಲಿಗೋ ಪಯಣಿಸುವಾಗ
    ಮನಸಿಗೆ ಎಂಥದೋ ಕಸಿವಿಸಿ , ಒಂಥರಾ ಆನಂದ,
    ಒಂಥರಾ ಅನುಭವವಾಗುತ್ತದೆ
    ಇದೆಲ್ಲವನು ನೆನಪಿಸಿತು ನಿಮ್ಮ ಕವಿತೆ

Leave a Reply

Back To Top