ಶರಣ ಸಂಗಾತಿ
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು
ಅಪ್ಪಟ ರಾಷ್ಟ್ರ ಪ್ರೇಮಿ
ಜೈ ಹಿಂದ್ ಘೋಷಣೆ ಜನಕ

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಲ್ಲಾ ರಾಜ್ಯಗಳ ಧರ್ಮೀಯರ ಕೊಡುಗೆ ಅಪಾರವಾಗಿದೆ. ಮಹಾತ್ಮಾ ಗಾಂಧಿ ನೆಹರು ವಲ್ಲಭಭಾಯಿ ಪಟೇಲ್ ಸುಭಾಷ್ ಚಂದ್ರ ಬೋಸ್ ಹೀಗೆ ಬೇರೆ ಬೇರೆ ನಾಯಕರ ನೇತೃತ್ವದಲ್ಲಿ ಸಂಗ್ರಾಮ ಹೋರಾಟ ನಡೆದಿವೆ.
ಇಂತಹ ಒಂದು ಅಪರೂಪದ ಹೋರಾಟವೇ ಭಾರತೀಯ ರಾಷ್ಟ್ರೀಯ ಸೇನೆಯ (INA) ಇದನ್ನು ಸ್ಥಾಪಿಸಿದವರು. ಸುಭಾಷ್ ಚಂದ್ರ ಬೋಸ್. ಇವರ ಕರೆಗೆ ಓಗೊಟ್ಟು ಸಾವಿರಾರು ಯುವಕರು ಭಾರತೀಯ ಸೇನೆಯನ್ನು ಸೇರಿದರು. ಹಿಂದೂ ಮುಸ್ಲಿಂ ಸಿಖ್ ಇಸಾಯಿ ಮುಂತಾದ ಬೇರೆ ಬೇರೆ ಧರ್ಮದವರ ನಂಬಿಕೆಯುಳ್ಳ ಯುವಕರ ಪಡೆ ಸ್ವಾತಂತ್ರ್ಯ ಹೋರಾಟದಲ್ಲಿ ದುಮುಕಿದರು .
ಅವರೆಲ್ಲರ ಆಚರಣೆ ವಿಚಾರ ಭಿನ್ನ ಭಿನ್ನವಾಗಿ ಕಂಡು ಬಂದವು. ಕೆಲವರು ಬೆಳಿಗ್ಗೆ ಎದ್ದು ಕೂಡಲೇ ರಾಮ್ ರಾಮ್ ಎನ್ನುತ್ತಿದ್ದರು ಇನ್ನೂ ಕೆಲವರು ವಾಲೀಕುಂ ಸಲಾಂ ಎನ್ನುತ್ತಿದ್ದರು. ಸಿಖ್ ಜನಾಂಗ
ಅಕಾಲಿ ಎನ್ನುತ್ತಿದ್ದರು ಹೀಗೆ ಒಂದೇ ಭಾರತೀಯ ಸೇನಾ ಸಂಸ್ಕೃತಿಯಲ್ಲಿ ಭಿನ್ನ ಭಿನ್ನವಾಗಿ ಸೈನಿಕರು
ಘೋಷಣೆ ಅಥವಾ ತಮ್ಮ ತಮ್ಮ ಬೆಳಗಿನ ನಮಸ್ಕಾರಗಳನ್ನು ಹೇಳುತ್ತಿದ್ದರು. ಇದನ್ನು ಏಕ ರೂಪದಲ್ಲಿ ಅಳವಡಿಸಲು ಸುಭಾಷ್ ಚಂದ್ರ ಬೋಸರು ಚಿಂತಿಸ ಹತ್ತಿದರು ಆಗ ಇವರ ನೆರವಿಗೆ ಬಂದವರೇ ಅಬಿದ್ ಹಸನ್ ಸಫ್ರಾನೀ ಎಂಬ. ಮುಸ್ಲಿಂ ಯುವಕ. ಹಲವು ದಿನಗಳ ವರೆಗೆ. ಯೋಚನೆ ಮಾಡಿ ಜೈ ಹಿಂದುಸ್ತಾನಿ ಎಂದು ಆರಂಭದಲ್ಲಿ ಘೋಷಣೆ ಕೂಗಿದರೂ ಸಹಿತ ಮುಂದೆ ಅದನ್ನು ಜೈ ಹಿಂದ್ ಎಂಬ ಘೋಷಣೆಗೆ ಮಾರ್ಪಾಡಿಸಿದವರು ಅಬಿದ ಹಸನ್ ಸಫ್ರಾನಿ .
ಅಬಿದ್ ಹಸನ್ ಸಫ್ರಾನಿ (Zain-al-Abdin Hasan) ಅವರು ಭಾರತದ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ನಿಕಟ ಒಡನಾಡಿ ಮತ್ತು ಭಾರತೀಯ ರಾಷ್ಟ್ರೀಯ ಸೇನೆಯ (INA) ಪ್ರಮುಖ ಅಧಿಕಾರಿಯಾಗಿದ್ದರು. ಇಡೀ ದೇಶವನ್ನು ಒಗ್ಗೂಡಿಸಿದ ‘ಜೈ ಹಿಂದ್’ (Jai Hind) ಎಂಬ ಪ್ರಸಿದ್ಧ ಘೋಷಣೆಯನ್ನು ಸೃಷ್ಟಿಸಿದ ರೂವಾರಿ ಇವರೇ ಆಗಿದ್ದಾರೆ.
ಆರಂಭಿಕ ಜೀವನ ಮತ್ತು ಶಿಕ್ಷಣ ಜನನ:
ಇವರು 11 ಏಪ್ರಿಲ್ 1911 ರಂದು ಹೈದರಾಬಾದ್ನ ಶ್ರೀಮಂತ ಮತ್ತು ಬ್ರಿಟಿಷ್ ವಿರೋಧಿ ನಿಲುವು ಹೊಂದಿದ್ದ ಕುಟುಂಬದಲ್ಲಿ ಜನಿಸಿದರು.
ಮೂಲ ಹೆಸರು:
ಇವರ ನಿಜವಾದ ಹೆಸರು ‘ಝೈನ್-ಅಲ್-ಅಬ್ದಿನ್ ಹಸನ್’.ಶಿಕ್ಷಣ: ಇವರ ತಾಯಿ ಬ್ರಿಟಿಷರ ಮೇಲಿನ ವಿರೋಧದಿಂದಾಗಿ ಮಕ್ಕಳನ್ನು ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್ಗೆ ಕಳುಹಿಸದೆ ಜರ್ಮನಿಗೆ ಕಳುಹಿಸಿದರು. ಅಲ್ಲಿ ಅಬಿದ್ ಅವರು ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು.
ನೇತಾಜಿ ಒಡನಾಟ ಮತ್ತು ಐಎನ್ಎ (INA) ಪಾತ್ರಪ್ರೇರಣೆ:
ಜರ್ಮನಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭಾಷಣದಿಂದ ಪ್ರೇರಿತರಾಗಿ, ತಮ್ಮ ಎಂಜಿನಿಯರಿಂಗ್ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು.
ಸಬ್ಮರೀನ್ ಪ್ರಯಾಣ:
ಎರಡನೇ ಮಹಾಯುದ್ಧದ ಸಮಯದಲ್ಲಿ ನೇತಾಜಿ ಅವರೊಂದಿಗೆ ಜರ್ಮನಿಯಿಂದ ಜಪಾನ್ಗೆ ಅತ್ಯಂತ ಅಪಾಯಕಾರಿ 90 ದಿನಗಳ ಸಬ್ಮರೀನ್ (ಜಲಾವೃತ ನೌಕೆ) ಪ್ರಯಾಣ ಕೈಗೊಂಡ ಏಕೈಕ ಭಾರತೀಯ ಇವರಾಗಿದ್ದಾರೆ.’ಸಫ್ರಾನಿ’ ಹೆಸರಿನ ಹಿನ್ನೆಲೆ: ಐಎನ್ಎ ಧ್ವಜ ವಿನ್ಯಾಸದ ಸಂದರ್ಭದಲ್ಲಿ ಹಿಂದೂ ಮತ್ತು ಮುಸ್ಲಿಂ ಸೈನಿಕರ ನಡುವೆ ಭಿನ್ನಾಭಿಪ್ರಾಯ ಮೂಡದಂತೆ ಕೋಮು ಸೌಹಾರ್ದತೆಯನ್ನು ಸಾರಲು, ಹಿಂದೂಗಳ ಪವಿತ್ರ ಬಣ್ಣವಾದ ಕೇಸರಿಯನ್ನು (Saffron) ಸೂಚಿಸಿ, ತಮ್ಮ ಹೆಸರಿನೊಂದಿಗೆ ‘ಸಫ್ರಾನಿ’ ಎಂದು ಸೇರಿಸಿಕೊಂಡರು.
‘ಜೈ ಹಿಂದ್’ ಘೋಷಣೆಯ ಜನ್ಮ
ಭಾರತೀಯ ಸೈನಿಕರನ್ನು ಧರ್ಮ ಮತ್ತು ಪ್ರಾಂತ್ಯಗಳ ಭೇದವಿಲ್ಲದೆ ಒಂದೇ ಗೌರವ ವಂದನೆಯಲ್ಲಿ ಸ್ವಾಗತಿಸಲು ನೇತಾಜಿ ಬಯಸಿದ್ದರು.ಆಗ ಅಬಿದ್ ಹಸನ್ ಅವರು “ಜೈ ಹಿಂದೂಸ್ತಾನ್ ಕಿ” ಎಂಬ ನುಡಿಗಟ್ಟನ್ನು ಸುಧಾರಿಸಿ “ಜೈ ಹಿಂದ್” (ಭಾರತಕ್ಕೆ ಜಯವಾಗಲಿ) ಎಂಬ ಸಂಕ್ಷಿಪ್ತ, ಶಕ್ತಿಯುತ ಘೋಷಣೆಯನ್ನು ಸೃಷ್ಟಿಸಿದರು. ನೇತಾಜಿ ಇದನ್ನು ತಕ್ಷಣವೇ ಒಪ್ಪಿಕೊಂಡು ಐಎನ್ಎಯ ಅಧಿಕೃತ ವಂದನೆಯನ್ನಾಗಿ ಮಾಡಿದರು.
ರಾಜತಾಂತ್ರಿಕ ವೃತ್ತಿಜೀವನ
(Diplomat)ಸ್ವಾತಂತ್ರ್ಯದ ನಂತರ, ಪ್ರಧಾನಿ ಜವಾಹರಲಾಲ್ ನೆಹರೂ ಅವರ ಕೋರಿಕೆಯ ಮೇರೆಗೆ ಇವರು ಭಾರತೀಯ ವಿದೇಶಾಂಗ ಸೇವೆಗೆ (IFS) ಸೇರಿದರು.ಈಜಿಪ್ಟ್, ಡೆನ್ಮಾರ್ಕ್, ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಭಾರತದ ರಾಯಭಾರಿಯಾಗಿ (Ambassador) ಅತ್ಯುತ್ತಮ ಸೇವೆ ಸಲ್ಲಿಸಿ 1969 ರಲ್ಲಿ ನಿವೃತ್ತರಾದರು.
Nidhana
ಈ ಮಹಾನ್ ದೇಶಭಕ್ತರು 9 ಮೇ 1984 ರಂದು ತಮ್ಮ ಸ್ವಂತ ನಗರವಾದ ಹೈದರಾಬಾದ್ನಲ್ಲಿ ನಿಧನರಾದರು. ಇತ್ತೀಚೆಗೆ ಅವರ ಸಾಹಸಮಯ ಜೀವನದ ಕುರಿತು Abid Hasan Safrani Netaji’s Comrade-in-Arms ಎಂಬ ಪುಸ್ತಕವನ್ನು ಅವರ ಕುಟುಂಬದವರು ಪ್ರಕಟಿಸಿದ್ದಾರೆ.
ಇಂತಹ ಅಪರೂಪದ ಪ್ರಬುದ್ಧ ಪ್ರಾಮಾಣಿಕ ಭಾರತೀಯ ಸೇನಾ ಪಡೆ ಸೇನಾನಿ ಇತಿಹಾಸಗಳ ಪುಟದಲ್ಲೂ ಸೇರ್ಪಡೆಗೊಂಡಿಲ್ಲ.
__________________________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ




