ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

*ವ್ಯಕ್ತಪತ್ರೆಗಳ ಒಳ ಹೊಕ್ಕಾಗ*

               ವ್ಯಕ್ತಪತ್ರೆಗಳು ಎಂಬ ಶೀರ್ಷಿಕೆಯೆ ಬಹಳ ಅರ್ಥಪೂರ್ಣವಾಗಿದೆ. ಈ ಕವನ ಸಂಕಲನವು ಶ್ರೀಕಾಂತ್ ಪತ್ರೆಮರ ರವರ ಚೊಚ್ಚಲ ಕೃತಿಯಾಗಿದ್ದು ಇದು ನೂರಕ್ಕೂ ಅಧಿಕ ಕವನಗಳನ್ನು ತನ್ನ ಒಡಲಿನೊಳಗೆ ಇಟ್ಟುಕೊಂಡಿರುವ ಅದ್ಭುತ ಕೃತಿ ಎಂದರೆ ತಪ್ಪಾಗಲಾರದು. ಇದರೊಳಗಿರುವ ಒಂದೊಂದು ಕವನಗಳು ಕೂಡ ಒಂದೊಂದು ಕಥೆಯನ್ನು ಹೇಳುವಂತಿವೆ.ಇಲ್ಲಿನ ಕವನಗಳಲ್ಲಿ ಭಾವನೆಗಳು, ಕಲ್ಪನೆಗಳು ಮತ್ತು ಆಲೋಚನೆಗಳನ್ನು ಅತ್ಯಂತ ಸುಂದರ ಹಾಗೂ ಅರ್ಥಗರ್ಭಿತ ಪದಗಳಲ್ಲಿ ವ್ಯಕ್ತಪಡಿಸಿರುವುದನ್ನು ನೋಡುತ್ತಿದ್ದರೆ ಮನಸ್ಸಿಗೆ ಏನೋ ಒಂಥರಾ ಆನಂದ. ಈ ಸಂಕಲನದಲ್ಲಿ ಶ್ರೀಕಾಂತ್ ಪತ್ರೆಮರ ರವರು ಕಡಿಮೆ ಪದಗಳಲ್ಲಿ ಹೆಚ್ಚು ಅರ್ಥವನ್ನು, ಭಾವನೆಯನ್ನು ತುಂಬಿ ಕವನಗಳ ರಚನೆ ಮಾಡಿರುವುದನ್ನು ಕಾಣಬಹುದು. ಈ ಸಂಕಲನದಲ್ಲಿನ ಕವನಗಳಲ್ಲಿ ಪ್ರೀತಿ, ಕರುಣೆ, ಕೋಪ, ದುಃಖ, ದೇಶಭಕ್ತಿ, ಪ್ರಕೃತಿಯ ಸೌಂದರ್ಯವನ್ನು ಮನಮುಟ್ಟುವಂತೆ ಹೇಳಿರುವುದಲ್ಲದೆ;ಕೆಲವೊಂದು ಕವನಗಳು ಲಯಬದ್ಧವಾಗಿ ರಚಿಸಿದ್ದಾರೆ. ಹಾಗಾಗಿ ಇಲ್ಲಿನ ಕೆಲವು ಕವನಗಳು ರಾಗವಾಗಿ ಹಾಡಲು ಮನಸ್ಸಿಗೆ ಮುದ ನೀಡುವಂತಿವೆ.ಪತ್ರೆಮರ ರವರು ​ತಮ್ಮ ಕಲ್ಪನಾ ಲೋಕದ ಮೂಲಕ ಸಾಮಾನ್ಯ ಸಂಗತಿಗಳಿಗೂ ಒಂದು ವಿಶಿಷ್ಟ ರೂಪವನ್ನು ಕೊಟ್ಟಿರುವುದು ಹಾಗು ಸುದೀರ್ಘವಾದ ಕಥೆಯನ್ನು ಹೇಳುವ ಬದಲು, ಕೆಲವೇ ಸಾಲುಗಳಲ್ಲಿ ಇಡೀ ಭಾವವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿರುವುದು ಶ್ಲಾಘನೀಯವೆನಿಸಿದೆ.ಅದರ ಜೊತೆಗೆ ಪ್ರಕೃತಿಯ ಐಸಿರಿ , ವಸುಂಧರೆಯ ಸೌಂದರ್ಯ; ಅವಳ ಅನನ್ಯ ಅಪ್ರತಿಮ ಒಡಲಿನಲಿ ತುಂಬಿರುವ ಅಗಾಧ ಅಂಶಗಳನ್ನು ಹೊತ್ತಿ ತರುವುದರ ಮೂಲಕ ಒಂದು ಪ್ರಚಲಿತ ವಿಚಾರಧಾರೆಗಳನ್ನು ಪ್ರಸ್ತುತಪಡಿಸುವ ವಿಧಾನ ನಾಡುನುಡಿಯ ಬಗ್ಗೆ ಗೌರವ, ಆದರಗಳು ಇತ್ಯಾದಿಗಳನ್ನು ಬಹಳ ಅಚ್ಚುಕಟ್ಟಾಗಿ ಹೆಣೆದಿದ್ದಾರೆ.
“ಮನಸ್ಸಿನ ಆಳದಿಂದ ಉಕ್ಕಿ ಬರುವ ಭಾವನೆಗಳಿಗೆ ಶಬ್ದಗಳ ಬಣ್ಣ ಹಚ್ಚಿ, ಲಯದ ಚೌಕಟ್ಟಿನಲ್ಲಿ ಪೋಣಿಸಿರುವುದನ್ನು ಕೂಡ ಈ ಕೃತಿಯಲ್ಲಿ ನೋಡಬಹುದಾಗಿದೆ.

                ಪತ್ರೆಮರ ರವರು ತಮ್ಮ ಆಂತರ್ಯದ ಮೌನ, ಪ್ರೀತಿ, ವಿರಹ, ಹಳಹಳಿಕೆ, ಸಾಮಾಜಿಕ ಚಿಂತನೆಗಳನ್ನು ವ್ಯಕ್ತಪಡಿಸುತ್ತಾ ಪತ್ರಗಳ ರೂಪದಲ್ಲಿ ಕಾವ್ಯವಾಗಿಸಿ ವ್ಯಕ್ತಪಡಿಸಿರುವುದನ್ನು ಈ ಕವನಗಳನ್ನು ಓದುತ್ತಿದ್ದಂತೆಯೇ ಗೊತ್ತಾಗುವುದು.ಭಾವನೆಗಳನ್ನು ವ್ಯಕ್ತಪಡಿಸಿರುವ ಈ ಕವನಗಳು ಸಾಮಾನ್ಯವಾಗಿ ಓದುಗನಿಗೆ ನೇರವಾಗಿ ಕವಿಯು ತನ್ನೊಳಗಿನ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಿರುವಂತೆಯೆ  ಆಪ್ತವೆನಿಸುವವು.

                ಪತ್ರೆಮರ ರವರು ತಮ್ಮ ಕವನ ಸಂಕಲನದಲ್ಲಿ ನಮ್ಮೊಳಗಿನ ಅಹಂಕಾರವನ್ನು ಕರಗಿಸಿ, ಭಗವಂತನಲ್ಲಿ ಶರಣಾಗುವ ದಿವ್ಯ ಮಾರ್ಗವನ್ನು ತೋರುವಂತಹ ಭಕ್ತಿ ಸುಧೆಯನ್ನು ಹರಿಸಿರುವುದನ್ನು ಕಾಣಬಹುದು.ಬದುಕಿನ ಏಳು ಬೀಳುಗಳನ್ನು ಕಂಡಂತಹ ಆಪ್ತ ವಿಷಯಗಳನ್ನು ಕಥನ ರೂಪದಲ್ಲಿ ಬಿಂಬಿಸಿರುವುದು ಅರ್ಥಗರ್ಭಿತವಾಗಿದೆ. ಅಪ್ಪನ ನೋವು, ಹೆತ್ತವ್ವನ ಕಷ್ಟ,ಜೀವಸಖಿಯ ಗೀತೆಗಳನ್ನು ಎಳೆ ಎಳೆಯಾಗಿ ರಚಿಸಿದ್ದಾರೆ. ಈ ಕೃತಿಯಲ್ಲಿರುವ ಎಲ್ಲಾ ಕವನಗಳು ತುಂಬಾ ಅರ್ಥಪೂರ್ಣವಾಗಿ ರಚನೆಗೊಂಡಿದೆ ಅದರಲ್ಲಿ ಕೆಲವೊಂದುಷ್ಟು ಕವನಗಳ ಸಾಲುಗಳು ತುಂಬಾ ಆಪ್ತವೆನಿಸಿತ್ತಿವೆ

 *ತಾವರೆ ನಾವಾದರೆ*

ಸುತ್ತಣ ಸುಂದರವಿದೆ ಒಳಗಣ ಅಂದಗೆಟ್ಟಿದೆ
ಹಾಗೆಂದು ಅರಳದೇನು? ತಾವರೆ ಜೀವ ಚೈತನ್ಯದ ಚಾರುಲತೆ?

      ಕವಿಯ ಈ ಸಾಲುಗಳಲ್ಲಿ ಅದೆಷ್ಟು ಅರ್ಥ ತುಂಬಿದ ನುಡಿಗಳಿವೆ. ನಮ್ಮ ಸುತ್ತಲಿನ ಪರಿಸರ ಎಷ್ಟೇ ಸುಂದರವಾಗಿದ್ದರೂ, ನಮ್ಮೊಳೊಗಿನ ಮನಸ್ಸು ಕುಸಿದಿರಬಹುದು; ಹಾಗೆಂದ ಮಾತ್ರಕ್ಕೆ ಬದುಕಿನ ಚೈತನ್ಯದ ಸಂಕೇತವಾದ ತಾವರೆ ಅರಳುವುದನ್ನು ನಿಲ್ಲಿಸುವುದಿಲ್ಲ.ನಾವು ತಾವರೆಯಂತಾದರೆ, ಎಂತಹ ಕಷ್ಟದ (ಕೆಸರಿನ) ಪರಿಸ್ಥಿತಿಯಲ್ಲೂ ಧೃತಿಗೆಡದೆ ನಮ್ಮೊಳಗಿನ ಜೀವಕಳೆಯನ್ನು ಜಾಗೃತವಾಗಿಟ್ಟುಕೊಂಡು ಮುನ್ನಡೆಯುತ್ತ,
ನಮ್ಮನ್ನು ನೋಡುವ ಇಡೀ ಜಗತ್ತಿಗೆ ನಮ್ಮ ಮುಖದಲ್ಲಿನ ನಗು ಮತ್ತು ಸಕಾರಾತ್ಮಕತೆ ಸದಾ ಸ್ಪೂರ್ತಿ ನೀಡುವಂತಿರಬೇಕು ಎಂಬುದನ್ನ ತುಂಬಾ ಸೊಗಸಾಗಿ ಹೇಳಿದ್ದಾರೆ.

 *ದೀವಟಿಕೆ*

 ಮಾತಿರದ ಮೌನದಲಿ ಅರಳಿಸಿಹಳು
 ಹಣತೆಗಳೊಳಗಿಂದ ಬೆಳಕಿನ ಸಿಂಚನ
 ಮಾತಿರುವ ಮುನಿಸಿರುವ ಬದುಕಿನಲಿ
 ಪ್ರೀತಿಯ ಎದೆಗೂಡಲಿ ಮುಡಿದಿಹಳು
 ಜೀವಾತ್ಮದ ಜ್ಯೋತಿ ಸುಚೇತನವನು
 ಮಿಡಿದಿಹಳು ಸಖಳಾಗಿ ಸಕಲಕೆಲ್ಲಕು

ದೀವಟಿಕೆ ಕವನದಲ್ಲಿ ಹೆಣ್ಣನ್ನು ಹಣತೆಗೆ ಹೋಲಿಸಿರುವ ಅವರ ಸಾಲುಗಳು ತುಂಬಾ ಚೆನ್ನಾಗಿವೆ

ಮಾತುಗಳಿಲ್ಲದ ನಿಶ್ಯಬ್ದದ ಪರಿಸ್ಥಿತಿಯಲ್ಲಿ ಆಕೆ ಪ್ರೀತಿಯ ಹಣತೆಯನ್ನಿಟ್ಟು, ಬದುಕಿನಲ್ಲಿ ಜ್ಞಾನ ಮತ್ತು ಸಂತೋಷದ ಬೆಳಕನ್ನು ಚೆಲ್ಲುತ್ತ,ಮೌನದ ಬೆಳಕನ್ನು,
ಪ್ರೀತಿಯ ಆಸರೆಯನ್ನು, ಆತ್ಮದ ಜಾಗೃತಿಯನ್ನು ಮಾಡುತ್ತಾ, ಕೊನೆಗೆ ತನ್ನ ಬದುಕಿನ ಪ್ರತಿಯೊಂದು ಅಣು-ಅಣುವಿನಲ್ಲೂ ತುಂಬಿ ಹೋಗಿ, ಜೀವನದ ಸಕಲಕ್ಕೂ ತಾನೇ ಸರ್ವಸ್ವವಾಗಿದ್ದಾಳೆ ಎಂಬುವುದನ್ನು ಈ ಸಾಲುಗಳಲ್ಲಿ ತುಂಬಾ ಚೆನ್ನಾಗಿ ಹೇಳಿದ್ದಾರೆ.

ಅಮೂರ್ತ ಚಿಂತನೆಗೆ ಮೂರ್ತ ರೂಪ ನೀಡುವ ಇವರ ಕವನದ ಸಾಲುಗಳು, ಸಡಗರದ ಸಂಕ್ರಾಂತಿಯ ಕಿಚ್ಚು. ಎಳ್ಳು ಬೆಲ್ಲ ಸವಿಯುವ ಮೆಚ್ಚು, ಸಹಬಾಳ್ವೆ,
ಸಮಾನತೆ,ಸಹಬಂಧಗಳ ಬಗ್ಗೆ ಮೂಡಿ ಬಂದಿರುವ ಸಾಲುಗಳ ತೇರು. ಕನ್ನಡ ನುಡಿ,ನಾಡಿನ ಕೆಚ್ಚೆದೆಯ ಬಗೆಗಿನ ಬರಹ ಅರ್ಥಪೂರ್ಣವಾಗಿದೆ.

 *ಕನ್ನಡ ನುಡಿ*

ವಿಶಾಲ ಕರುನಾಡಿನ ಊರು ಕೇರಿಗಳಲ್ಲಿ
ಬಡವರ ಒಡಲುಗಳಲ್ಲಿ ಮಣ್ಣಿನ ಮಕ್ಕಳಲ್ಲಿ
ಶ್ರಮಿಕ ಕಾರ್ಮಿಕರ ಉಸಿರಿನಲ್ಲಿ ಮತ್ತೆಲ್ಲರ
ತುಟಿಗಳಲ್ಲಿ ನಲಿದಾಡುತಿರೆ ಭಯವೇಕೆ?

ಕನ್ನಡ ನಾಡಿನ ಹಳ್ಳಿ-ಹಳ್ಳಿಗಳಲ್ಲಿ, ಬಡವರ ಹಾಗೂ ರೈತರ ಹೃದಯಗಳಲ್ಲಿ,ಕಷ್ಟಪಟ್ಟು ದುಡಿಯುವ ಕಾರ್ಮಿಕರ ಉಸಿರಿನಲ್ಲಿ ಕನ್ನಡ ನುಡಿ ರಾರಾಜಿಸುತ್ತಿದೆ. ಈ ಮಣ್ಣಿನ ಪ್ರತಿಯೊಬ್ಬರ ತುಟಿಗಳ ಮೇಲೂ ಕನ್ನಡವೇ ನಲಿದಾಡುತ್ತಿರುವಾಗ, ನಮ್ಮ ಭಾಷೆಗೆ ಯಾವುದೇ ಆಪತ್ತು ಬರುತ್ತದೆ ಎಂಬ ಭಯ ಪಡುವ ಅಗತ್ಯವೇ ಇಲ್ಲ. ಜನಸಾಮಾನ್ಯರ ಬದುಕಿನೊಂದಿಗೆ ಬೆರೆತುಹೋಗಿರುವ ಕನ್ನಡ ಭಾಷೆ ಸದಾ ಸುರಕ್ಷಿತ ಮತ್ತು ಚಿರಂತನ ಎಂಬುವುದನ್ನು ಅದ್ಭುತವಾಗಿ ತಮ್ಮ ಕವನದ ಸಾಲುಗಳಲ್ಲಿ ಹೇಳಿದ್ದಾರೆ.

      ಹಾಗೆಯೇ ಲೌಕಿಕ ಮತ್ತು ಅಲೌಕಿಕ ಎಂಬ ಎರಡು ವಿಭಿನ್ನ ತತ್ವಗಳನ್ನು ಸರಳವಾಗಿ ಅರ್ಥೈಸುವ ಇವರ ಕವನದ  ಸಾಲುಗಳನ್ನು ಓದಲೇಬೇಕು.”ವ್ಯಕ್ತಿಯು ತನ್ನ ಅಸ್ಮಿತೆ  ಮತ್ತು ಕಣ್ಣೀರಿನ ಮೂಲಕ ತನ್ನೊಳಗಿನ ದುಃಖ-ದುಮ್ಮಾನಗಳನ್ನು ಅರಿತುಕೊಳ್ಳುವ ಬಗ್ಗೆ,
ಪ್ರಕೃತಿಯ ಮುಗ್ಧತೆ (ಹಕ್ಕಿಯ ಹಾಡು) ಹಾಗೂ ಜೀವನದ ಸಂತೋಷದ ಸಾಕಾರ ರೂಪವಾದ ನಗುವಿನಲ್ಲೇ (ಸಿರಿ ನಿನ್ನ ನಗುವಿನಲ್ಲಿದೆ) ನಿಜವಾದ ಸಂಪತ್ತನ್ನು ಕಂಡುಕೊಳ್ಳುವ ಬಗ್ಗೆಗಿನ ಸಾಲುಗಳನ್ನು ಕಾಣಬಹುದು ಮತ್ತು ಈ ರೀತಿ ತನ್ನನ್ನು ತಾನು ಗೆದ್ದು, ಜಗತ್ತಿಗೆ ಪ್ರೀತಿ ಮತ್ತು ಜ್ಞಾನವನ್ನು ಹಂಚುವ ಮೂಲಕವೆ
ಮನುಷ್ಯ ಕೊನೆಗೆ ‘ವಿಶ್ವಗುರು’ ಆಗುತ್ತ ಉದಾತ್ತ ಎತ್ತರಕ್ಕೆ ಬೆಳೆಯುವ ಈ ಕವನದ ಸಾಲುಗಳನ್ನು ಪ್ರತಿಯೊಬ್ಬರು ಓದಲೇಬೇಕು. ಏಕೆಂದರೆ ಅರ್ಥಪೂರ್ಣವಾದ ಸಾಲುಗಳಿವು.​ಒಟ್ಟಾರೆಯಾಗಿ ಅಸ್ತಿತ್ವ, ಪ್ರಕೃತಿ, ಭಾವನೆ, ಆನಂದ ಮತ್ತು ಆಧ್ಯಾತ್ಮಿಕ ಉನ್ನತಿಯ ವಿಭಿನ್ನ ಹಂತಗಳನ್ನು ಧ್ವನಿಸುವಂತಿವೆ. ಮುಂದುವರೆದಂತೆ ಈ ಎಲ್ಲ ಪರಿಕಲ್ಪನೆಗಳು ಮನುಷ್ಯನ ಜೀವನದ ಸುದೀರ್ಘ ಪಯಣವನ್ನು ಮತ್ತು ಅದರಲ್ಲಿ ಎದುರಾಗುವ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ಬಿಂಬಿಸುವಂತಿರುವುದನ್ನು ನೋಡಬಹುದು. ಜಗತ್ತಿನ ಸತ್ಯವನ್ನು ಹುಡುಕುವ ‘ಶೋಧನಾ ಸವಾರಿ’ ಮತ್ತು ಸಾವಿನೆಡೆಗೆ ಸಾಗುವ ‘ಬಾಳಯಾನ’ಗಳು ‘ವಿಧಿ ಲಿಖಿತ’ದ ಚೌಕಟ್ಟಿಗೆ ಒಳಪಟ್ಟಿದ್ದರೂ, ಬದುಕು ಸಾರ್ಥಕವಾಗುವುದು ಪ್ರೀತಿಯ ಜ್ವಾಲೆಯಾದ ‘ಒಲುಮೆಯ ಕುಲುಮೆ’ಯಲ್ಲಿ ಬೆಂದು ಪಕ್ವವಾದಾಗ ಮಾತ್ರ. ಅಂತಿಮವಾಗಿ, ಜಗದ್ಜ್ಯೋತಿ ಬಸವೇಶ್ವರರು ತೋರಿದ ಕಾಯಕ, ಸಮಾನತೆ ಮತ್ತು ಭಕ್ತಿಯ ಮಾರ್ಗವು ಈ ಇಡೀ ಜೀವನದ ಪಯಣಕ್ಕೆ ಒಂದು ಸುಂದರವಾದ ಅರ್ಥವನ್ನು ಹಾಗೂ ಮುಕ್ತಿಯ ದಾರಿಯನ್ನು ಕಲ್ಪಿಸಿಕೊಡುತ್ತದೆ. ಇಂತಹ ಹಲವಾರು ಕವನಗಳನ್ನು ಓದಬೇಕಾದರೆ ಈ ಸಂಕಲನವನ್ನು ಖಂಡಿತ ಕೊಂಡು ಓದಿರಿ. ಅಷ್ಟೇ ಅಲ್ಲದೆ ಈ ಕೃತಿಯಲ್ಲಿ ಹಲವಾರು ಮಹಾನ್ ಕವಿಗಳು, ಸಂಗೀತಗಾರರ,ಬಗ್ಗೆ ತುಂಬಾ ಚೆಂದದ ಕವನಗಳಿವೆ.

 *ಸಂಚಲನ*

ಸಂಚಲನ ಕವನದಲ್ಲಿ ಮೂಡಿ ಬಂದಿರುವಂತಹ ಈ ಸಾಲುಗಳು ಮನಸ್ಸಿಗೆ ಮುದ ನೀಡುವಂತಿವೆ.
“ದಟ್ಟ ಕಾನನದಿ ಫಲಪುಷ್ಪಗಳ ತೊನೆದ ತರುಲತೆಗಳು ತಂಗಾಳಿಗೆ ತೂಗುತ ತೇಲುತ ಜೀಕುವ ಜೋಗುಳದ ತರಂಗ ಲಾಲಿ ನಿತ್ಯ ಲೀಲೆ.”

ಈ ಸಾಲುಗಳು ದಟ್ಟವಾದ ಅರಣ್ಯದಲ್ಲಿ ಪ್ರಕೃತಿ ಮತ್ತು ತಂಗಾಳಿಯ ನಡುವೆ ನಡೆಯುವ ಅದ್ಭುತ ಸುಂದರ ಬಾಂಧವ್ಯವನ್ನು ವರ್ಣಿಸುತ್ತಿವೆ. ಹೂವು-ಹಣ್ಣುಗಳಿಂದ ತುಂಬಿದ ಗಿಡಮರಗಳು ತಂಗಾಳಿಯ ಸೌಮ್ಯ ಸ್ಪರ್ಶಕ್ಕೆ ಲಯಬದ್ಧವಾಗಿ ತೂಗುತ್ತಾ, ಪ್ರಕೃತಿಯೇ ಒಂದು ದಿವ್ಯ ಜೋಗುಳವನ್ನು ಹಾಡುತ್ತಿರುವಂತೆ ಭಾಸವಾಗುತ್ತಿವೆ. ಕಾಡಿನ ಈ ಧ್ವನಿ ಮತ್ತು ಹಸಿರಿನ ನೃತ್ಯವು ಮನಸ್ಸಿಗೆ ಶಾಂತಿಯನ್ನು ನೀಡುವ ಜೋಗುಳದ ತರಂಗದಂತಿದೆ. ಯಾವುದೇ ಹಸ್ತಕ್ಷೇಪವಿಲ್ಲದ ನಿಗೂಢ ಕಾನನದಲ್ಲಿ ಈ ನೈಸರ್ಗಿಕ ಸೌಂದರ್ಯವು ಪ್ರತಿದಿನವೂ ನಿರಂತರವಾಗಿ ನಡೆಯುವ ಒಂದು ದೈವಿಕ ಲೀಲೆಯಾಗಿದೆ ಎಂಬುವುದನ್ನು ತುಂಬಾ ಸುಂದರವಾಗಿ ಹೇಳುತ್ತಾ, ಇಲ್ಲಿ ಪ್ರತಿದಿನ ಪ್ರಕೃತಿಯ ಸಂಚಲನ ಹೇಗಾಗುತ್ತಿದೆ ಎಂಬುದನ್ನು ಈ ಸಾಲುಗಳಲ್ಲಿ ಬಿಂಬಿಸಿದ್ದಾರೆ.

           ಇಲ್ಲಿನ ಕವನಗಳಲ್ಲಿ ಹಲವಾರು ವಿಷಯಗಳನ್ನು ತಿಳಿದುಕೊಳ್ಳಬಹುದು. ಶ್ರೀಕಾಂತ್ ಪತ್ರೆಮರ ರವರು ಯಾವುದೇ ತ್ರಾಸಕ್ಕೆ ಬೀಳದೆ ಹೆಚ್ಚಿನ ಪ್ರಾಸವಿಲ್ಲದೆ ಅರ್ಥಪೂರ್ಣವಾದಂತಹ ಕವನಗಳನ್ನು ನೀಡಿದ್ದಾರೆ. ಹಾಗೆಯೇ ತಮ್ಮ ಕವನಗಳಲ್ಲಿ ರೂಪಕ ಉಪಮೇಗಳನ್ನು ಅಲ್ಲಲ್ಲಿ ಸೇರಿಸಿ ಉತ್ತಮ ನಿದರ್ಶನಗಳೊಂದಿಗೆ ಸಾಲುಗಳನ್ನು ಹೆಣೆಯುತ್ತ ಹಲವಾರು ಕವನಗಳನ್ನು ರಚಿಸಿದ್ದಾರೆ. ಇಲ್ಲಿ ಭಾವ ತುಂಬಿದ ಸಾಲುಗಳಿದ್ದು,ಪ್ರಸ್ತುತ ವಿಚಾರಗಳನ್ನ ಸೇರಿಸುತ್ತಾ ಅರ್ಥಪೂರ್ಣವಾಗಿ ಹಾಗೂ ಪ್ರಜ್ಞಾಪೂರ್ವಕವಾಗಿ ರಚಿಸಿದ್ದಾರೆ.

               ಕವಿತೆ ಕಟ್ಟಲು ಒಬ್ಬ ಕವಿಗೆ ತನ್ನೆಲ್ಲ ಅಭಿಷ್ಟಗಳಿಗಿಂತಲೂ ಮುಖ್ಯವಾಗಿ ತಾಳ್ಮೆ ಇರಬೇಕು. ಇಲ್ಲಿ ಶ್ರೀಕಾಂತ್ ಪತ್ರೆಮರ ರವರ ಕವನಸಂಕಲನದ ಮಟ್ಟಿಗೆ ಹೇಳುವುದಾದರೆ ಇಲ್ಲಿ ಭಕ್ತಿಸುಧೆ, ಬದುಕಿನ ಏಳುಬೀಳಿಗೆ ಸಂಬಂಧಪಟ್ಟಂತಹ ಕವನಗಳು, ಹೆಣ್ಣು, ಕನ್ನಡ ನುಡಿ, ಮಹಾನ್ ವ್ಯಕ್ತಿಗಳ ಸಾಲುಗಳು, ಕಾಣದ ವೈರಾಣು, ನೀರಾಗಬೇಕು,ಕಂಬನಿ, ಹೊರಟೆ ಏಕೆ ನಿಷ್ಕಾರಣ.? ಜೋಪಡಿ, ಹುಲಿ ಉಳಿಸಿ, ಮದರಂಗಿ, ಮೇಘ ಮನ, ಕೊನೆಯೆಂದು,ಸ್ವಯಂ ಪ್ರೀತಿ,ನಿರುತ್ತರ, ನಿರಾಸೆ, ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತಹ ಕವನಗಳನ್ನು ನೋಡಬಹುದಾಗಿದೆ. ಕುತೂಹಲ ಭರಿತ ವಿಚಾರಗಳನ್ನ ನೀವು ತಿಳಿಯಬೇಕಾದರೆ ಈ ಸಂಕಲನವನ್ನು ಖಂಡಿತ ಓದಲೇಬೇಕು.ಈ ಅಂದರೆ ನೋವು, ನೋಲಿವು, ಅಕ್ಕರೆ, ಸಕ್ಕರೆ. ಹುರುಪು, ಉತ್ತೇಜನ. ಉತ್ಸಾಹ, ಧೈರ್ಯ, ಉಲ್ಲಾಸ, ಆಸೆ, ಆಕಾಂಕ್ಷೆ, ಅಭಿಷ್ಟಗಳು, ಹೆಣ್ಣು,ಪ್ರಕೃತಿ,ಗೆಳೆಯ, ಗೆಳತಿ ಹೀಗೆ ಎಲ್ಲಾ ರೀತಿಯ ಕವಿತೆಗಳು ಸಹ ಇಲ್ಲಿವೆ..

      ಈ ಸಂಕಲನವು ಸುಮಾರು 100 ಕ್ಕು ಹೆಚ್ಚು ಕವನಗಳನ್ನು ಒಳಗೊಂಡಿದ್ದು ;ಇದರೊಳಗೆ ಓದುಗರ ಮನಸ್ಸಿನಲ್ಲಿ ಉಳಿಯುವ ಕವನಗಳನ್ನು ನೋಡಬಹುದಾಗಿದೆ. ಅಂದ ಹಾಗೆ ಎಲ್ಲಾ ಕವನಗಳು ಉತ್ತಮ ರಚನೆಗಳಾಗಿದ್ದು ಮುಂಬರುವ ಹೊತ್ತಿಗೆಯಲ್ಲಿ ಮತ್ತಷ್ಟು ಹೊಸತನ, ಲಯಬದ್ದ ಕವನಗಳು ಹಾಗೂ ಒಂದಷ್ಟು ಛoದೋಬದ್ದ ಕವನಗಳನ್ನು ಹೊತ್ತು ತರಲೆಂದು ಆಶಿಸುವೆ.ಈ ಒಂದು ಕೃತಿಗೆ ನಿವೃತ್ತ ಉಪನ್ಯಾಸಕರಾದ ಶ್ರೀಮತಿ ಸಿ.ಬಿ ಶೈಲಾ ಜಯಕುಮಾರ್ ರವರು ಅಮೂಲ್ಯವಾದ ನುಡಿತೋರಣವನ್ನು ಮುನ್ನುಡಿಯೊಂದಿಗೆ ಕಟ್ಟಿಕೊಟ್ಟಿರುವರು. ಹಾಗೂ ಈ ಕೃತಿಗೆ ತಮ್ಮದೇ ಬೆನ್ನುಡಿಯಿದ್ದು ತುಂಬಾ ಸೊಗಸಾಗಿದೆ.ಹೀಗೆಯೆ ತಮ್ಮ ಸಾಹಿತ್ಯ ಸೇವೆ ಮುಂದುವರಿಯಲಿ ಶುಭವಾಗಲಿ ಸರ್.ನಿಮ್ಮಿಂದ ಮತ್ತಷ್ಟು ಕವನ ಸಂಕಲನಗಳು ಕನ್ನಡ ಸಾಹಿತ್ಯದ ಒಡಲಿನಲ್ಲಿ ಸೇರಿಕೊಳ್ಳಲೆಂದು ಹಾರೈಸುವೆ…


About The Author

Leave a Reply

You cannot copy content of this page

Scroll to Top