ಕಥೆ
ಸುಧಾ ಹೆಚ್.ಎನ್
ರುಕ್ಮಿಣಮ್ಮ ಕಡಲಿನ ಮಗಳು. ಹುಟ್ಟಿದ್ದು, ಬೆಳೆದದ್ದು, ಪ್ರತಿ ಬೆಳಗು, ಪ್ರತಿರಾತ್ರಿ ಕಳೆದದ್ದು ಸಮುದ್ರದ ಜೊತೆಗೇ. ಮೀನುಗಳ ವ್ಯಾಪಾರ ಮಾಡುತ್ತಿದ್ದ ತಂದೆಯ, ಜೀವನದ ಜೊತೆಗಾರನಾದ ಪಾಂಡುರಂಗನ ಮನೆಯಿದ್ದದ್ದು ಕಡಲತೀರದಲ್ಲೇ. ತಮ್ಮ ಸುಮಾರು ಎಂಬತ್ತು ವರ್ಷದ ಜೀವಮಾನವನ್ನು ಕಣ್ಣಳತೆಯಲ್ಲಿದ್ದ ಅಗಾಧ ಸಮುದ್ರ, ಅವಿರತವಾಗಿ ಕೇಳಿಬರುತ್ತಿದ್ದ ಅಲೆಗಳ ಮೊರೆತ, ಮೀನು….
ಇತರೆ ವಾಸನೆಯ ಜೊತೆಗೆ ಜೀವನ ಸವೆಸಿದ್ದರು ರುಕ್ಮಿಣಮ್ಮ.
ರುಕ್ಮಿಣಮ್ಮ ಮತ್ತು ಪಾಂಡುರಂಗಪ್ಪ ಐವರು ಮಕ್ಕಳಿಗೆ ತಮ್ಮ ಕೈಲಾದ ಮಟ್ಟಿಗೆ ವಿದ್ಯಾಭ್ಯಾಸ ಕೊಡಿಸಿ, ಮದುವೆ ಮಾಡಿದ್ದರು. ಎಲ್ಲಾ ಮಕ್ಕಳು ದೂರ ದೂರದ ಊರುಗಳಲ್ಲಿ ತಮ್ಮ, ತಮ್ಮ ನೆಲೆ ಕಂಡುಕೊಂಡಿದ್ದರು.
ಎಂಟು ವರ್ಷಗಳ ಹಿಂದೆ ಪಾರ್ಶ್ವವಾಯು ಪೀಡಿತರಾಗಿ, ದೇಹದ ಒಂದು ಭಾಗದ ಸ್ವಾಧೀನ ಕಳೆದುಕೊಂಡಿದ್ದರು ಪಾಂಡುರಂಗಪ್ಪ. ಗಂಡನ ಅನಾರೋಗ್ಯದ ಸಮಯದಲ್ಲಿ ಅನಾವರಣಗೊಂಡ ಮಕ್ಕಳ ನಡವಳಿಕೆ, ಅಸಹಕಾರ, ಅಸಹನೆ, ಲೆಕ್ಕಾಚಾರಗಳಿಂದ ಬಹಳವಾಗಿ ನೊಂದಿದ್ದರು ರುಕ್ಮಿಣಮ್ಮ. ತಂದೆ-ತಾಯಿಯರ ಕಷ್ಟಕಾಲದಲ್ಲಿ ಹಡೆದ ಮಕ್ಕಳು ತಮ್ಮ ಕರ್ತವ್ಯ ನಿರ್ವಹಿಸುವಾಗ ತಮ್ಮತಮ್ಮಲ್ಲೆ ಸ್ಪರ್ಧೆ, ಜಿದ್ದಿಗೆ ಬಿದ್ದು ತೋರಿಸಿದ ಅನಾದರ, ಮಾಡಿದ ಅವಮಾನ ರುಕ್ಮಿಣಮ್ಮನವರಿಗೆ ಜೀವನ ಕಲಿಸಿದ ಹೊಸ ಪಾಠವಾಗಿತ್ತು.
ಹಾಗೂ, ಹೀಗೂ ಪರಿಪಾಟಲು ಪಟ್ಟು ಆಸ್ಪತ್ರೆಯಿಂದ ಗಂಡನನ್ನು ಮನೆಗೆ ಕರೆತಂದಿದ್ದರು ರುಕ್ಮಿಣಮ್ಮ. ನಂತರ ವೈದ್ಯರ ಸಲಹೆಯಂತೆ ಪ್ರತಿ ದಿನ ಮುಂಜಾನೆ , ಸಂಜೆ ಗಂಡನ ಕೈ ಹಿಡಿದು , ಸಮುದ್ರದ ದಂಡೆಗೆ ಕರೆದೊಯ್ದು ಬೆಚ್ಚಗಿನ ಮರಳಿನಲ್ಲಿ ಮಲಗಿಸಿ, ಹಿತವಾಗಿ ಕೈ ಕಾಲು ತಿಕ್ಕಿ , ಕಡಲ ಅಲೆಗಳಿಂದ ಸ್ನಾನ ಮಾಡಿಸುತ್ತಿದ್ದರು. ಗಂಡನ ಬಗಲಲ್ಲಿ ಕುಳಿತು ಸಮುದ್ರದಲೆಗಳ ಲೆಕ್ಕ ಹಾಕುತ್ತಿದ್ದಾಗ, ಪಾಂಡುರಂಗಪ್ಪ ನಗುತ್ತಾ ” ಹುಚ್ಚು ರುಕ್ಮಿ” ಎಂದು ಪ್ರೀತಿಯಿಂದ ತಲೆಗೆ ಮೊಟಕುತ್ತಿದ್ದರು. ಮಕ್ಕಳೆಲ್ಲಾ ಕಳುಹಿಸುತ್ತಿದ್ದ ಅಷ್ಟಿಷ್ಟು ಹಣದಿಂದ ಎಂಟು ವರ್ಷಗಳು ಜೀವನ ದೂಡಿದ್ದ ಪಾಂಡುರಂಗಪ್ಪನವರು ತೀರಿಕೊಂಡಿದ್ದರು.
ಪಾಂಡುರಂಗಪ್ಪ ಸತ್ತು ಹನ್ನೊಂದು ದಿನಗಳು ಕಳೆದಿದ್ದವು. ಐವರು ಮಕ್ಕಳು, ಹನ್ನೆರಡು ಮೊಮ್ಮಕ್ಕಳು ಒಟ್ಟಿಗೆ ಕುಳಿತು ಎಂಟು ವರ್ಷಗಳಿಂದ , ತಂದೆಯ ಆಸ್ಪತ್ರೆ ಖರ್ಚು , ಇದುವರೆಗೆ ತಾಯಿಗೆ ನೀಡಿದ ಹಣ, ತಂದೆಯ ಮಣ್ಣು , ಶ್ರಾದ್ಧ, ಮಾಡುವವರೆಗೆ ಆದ ಖರ್ಚುವೆಚ್ಚಗಳನ್ನು ಲೆಕ್ಕ ಹಾಕುತ್ತಾ ಕುಳಿತಿದ್ದರು. ಪ್ರತಿಯೊಬ್ಬರು ತಾವು ಮಾಡಿದ ವೆಚ್ಚಕ್ಕೆ ಸಾಕ್ಷಿಗಳನ್ನು ನೀಡುತ್ತಿದ್ದರು. ತಾಯಿಯಾದ ರುಕ್ಮಿಣಮ್ಮ ಮಕ್ಕಳಿಗೆ ತಾನೇನು ನೀಡಿದ್ದೇನೆ ಎಂಬುದಕ್ಕೆ ಯಾವ ಲೆಕ್ಕ , ಸಾಕ್ಷಿ ನೀಡಲಾಗದೆ ಕುಳಿತಿದ್ದರು.
ಗಂಡನನ್ನು ಕಳೆದುಕೊಂಡು ಒಂಟಿಯಾಗಿದ್ದ ರುಕ್ಮಿಣಮ್ಮನನ್ನು ಯಾರ್ಯಾರು ಎಷ್ಟೆಷ್ಟು ದಿವಸ ಯಾರ್ಯಾರ ಮನೆಗಳಲ್ಲಿ ಇಟ್ಟುಕೊಳ್ಳಬೇಕು ಎಂಬುದರ ಕುರಿತು ಚರ್ಚೆಯಾಗತೊಡಗಿತ್ತು. ಅವರುಗಳೆಲ್ಲಾ ವೇಳಾಪಟ್ಟಿಯನ್ನು ತಯಾರಿಸುತ್ತಾ ಪರಸ್ಪರರ ಅನುಕೂಲ, ಅನಾನುಕೂಲಗಳನ್ನು ಹೇಳಿ ಕೊಳ್ಳತೊಡಗಿದ್ದರು. ರುಕ್ಮಿಣಮ್ಮ ಬದುಕಿರುವ ಜೀವಿ ಎಂದು ಅವರ್ಯಾರೂ ಭಾವಿಸಿದಂತೆ ಕಾಣಲಿಲ್ಲ.
ರುಕ್ಮಿಣಮ್ಮನವರಿಗೆ ಆ ಕ್ಷಣದಲ್ಲಿ ಅಗಾಧವಾದ , ಆಳವಾದ , ಲೆಕ್ಕ ಮಾಡಲಾಗದ ಅಲೆಗಳ ಕಡಲು ನೆನಪಾಯಿತು. ಕುಳಿತಲ್ಲಿಂದ ಮೆಲ್ಲನೆ ಎದ್ದು ಮನೆಯಿಂದ ಹೊರಬಂದು ಕಡಲ ಕಡೆ ಹೆಜ್ಜೆ ಹಾಕಿದರು. ಕಡಲ ಮರಳು ತನ್ನ ಆತ್ಮೀಯತೆಯ ಸ್ಪರ್ಶದಿಂದ ನೊಂದ ಮನಸ್ಸನ್ನು ಸಂತೈಸಿತು. ರುಕ್ಮಿಣಮ್ಮ ಕಡಲ ಅಲೆಗಳ ಲೆಕ್ಕ ಹಾಕುತ್ತಾ…… ಹಾಕುತ್ತಾ ………ಕಡಲೆಡೆಗೆ ಹೆಜ್ಜೆ ಹಾಕತೊಡಗಿದ್ದರು.
*********