ಗಝಲ್

ಎ ಎಸ್. ಮಕಾನದಾರ

ನೀನು ಹೋದ ಅರೆಗಳಿಗೆಗೆ ಬಾಗಿಲ ಕಿಟಕಿಗಳು ಬೋರಾಡಿ ಅಳುತಿವೆ
ಇಂದಲ್ಲ ನಾಳೆ ಬರುತ್ತೀಯೆಂದು ಹೊಸ್ತಿಲ ಭರವಸೆಯಿಂದ ಕಾಯುತಿವೆ

ಅಂಗಾಲಿಗೆ ಮುತ್ತಿಕ್ಕಿದ ಮಣ್ಣು ಹಿಮ್ಮಡಿಯಲಿ ಹಿಮ್ಮೇಳಹಾಕಿವೆ ಸಾಕಿ
ದಣಿದ ದೇಹಕೆ ಖಬರಸ್ತಾನಿನ ಹೂಗಳು ಸದಾ ಸಾಂತ್ವನ ಹೇಳುತಿವೆ

ಬೀದಿ ದೀಪಗಳು ಕಣ್ಣುಗಳನ್ನು ಪಿಳುಕಿಸಿ ಮಿಂಚುಹುಳು ವಾಗಿಸುತ್ತಿವೆ
ನೆನಪುಗಳು ಮಗ್ಗುಲು ಬದಲಿಸಿ ನೇಸರನಿಗೆ ಕರೆದು ಸಾವು ತರಿಸುತಿವೆ

ಹರಿದ ಅಂಗಿಗೆ ಬೆವರ ಉಣಿಸಿ ಬೆಂದ ಹಾಲಿಗೆ ನೆಮ್ಮದಿ ಬೇಡುತ್ತಿವೆ
ತುಕ್ಕು ಹಿಡಿದ ತೊಟ್ಟಿಲಲಿ ಜೋಗುಳ ತೂಗಿ ಹರತಾಳವನು ಹೂಡುತಿವೆ

ಸಾಹೇಬನ ಹಸಿವು ಕಂಡು ಹರಿದು ತಿನ್ನುವ ಹದ್ದು ಮೌನವಾಗಿಸುತ್ತಿವೆ
ರಟ್ಟೆ ತಟ್ಟಿದ ತವೆಯಲಿ ಕರಕಲು ರೊಟ್ಟಿಗಳು ಹೊಟ್ಟಿಗೆ ಪ್ರಶ್ನಿಸುತಿವೆ

*********

3 thoughts on “ಗಝಲ್

  1. ವಾ..ವ್ ಸುಂದರ ಪ್ರತಿಮೆಗಳೊಂದಿಗೆ ಗಜ಼ಲ್ ಕಂಗೊಳಿಸುತ್ತಿದೆ ಸರ್

Leave a Reply

Back To Top