ಅಕ್ಷರದ ಬಂಡಾಯ

ತಲ್ಲಣಗಳಿಗೆ ಪ್ರತಿಕ್ರಿಯೆ ಬೇಕಾದ ಅನಿವಾರ್ಯತೆಯಲ್ಲಿ ಬರೆಯಲು ಮನಸ್ಸು ಮಾಡಿದೆ’

ಡಾ.ರಾಮಕೃಷ್ಣ ಗುಂದಿ

ಡಾ.ರಾಮಕೃಷ್ಣ ಗುಂದಿ ಕನ್ನಡದ ಅತ್ಯಂತ ಪ್ರಭಾವಶಾಲಿ ಕತೆಗಾರರಲ್ಲಿ ಒಬ್ಬರು. ಅವಾರಿ ಅವರ ಪ್ರಸಿದ್ಧ ಕತೆ. ಅವರ ಮೊದಲ ಕಥಾ ಸಂಕಲನ ಅವಾರಿ ಹೆಸರಲ್ಲೇ ಪ್ರಕಟವಾಯಿತು. ಕಡಲ ಬೆಳಕಿನ ದಾರಿಯಲ್ಲಿ, ಸೀತೆದಂಡೆ ಹೂವೆ ಅವರ ಕಥಾ ಸಂಕನಲಗಳು. ಪ್ರಾಂಜಲ ಅವರು ವಿವಿಧ ಲೇಖಕರಿಗೆ ಬರೆದ ಮುನ್ನುಡಿಗಳ ಸಂಗ್ರಹ. ಆಗೇರರ ಬದುಕು ಮತ್ತು ಸಂಸ್ಕೃತಿ ಕುರಿತು ಅವರು ಸಂಶೋಧನಾ ಪ್ರಬಂಧ ಮಂಡಿಸಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ಅವರ ಆತ್ಮಕತೆ ಸಹ ಪ್ರಕಟವಾಗಿದೆ. ಯಕ್ಷಗಾನ ಕಲಾವಿದರೂ ಆಗಿರುವ ಡಾ.ಗುಂದಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಯಕ್ಷಗಾನ ಅಕಾಡಮಿಯ ಸದಸ್ಯರಾಗಿಯೂ ಕಾರ‍್ಯ ನಿರ್ವಹಿಸಿದ್ದಾರೆ. ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸುಧೀರ್ಘ ಅವಧಿ ಕಾರ‍್ಯ ನಿರ್ವಹಿಸಿದ ಅವರು, ಕಾರವಾರದ ದಿವೇಕರ ಕಾಲೇಜಿನಲ್ಲಿ ಕೆಲ ವರ್ಷ ಪ್ರಾಂಶುಪಾಲರಾಗಿ ಕಾರ‍್ಯ ನಿರ್ವಹಿಸಿ ನಿವೃತ್ತಿಯಾಗಿದ್ದಾರೆ. ಅವರು ಅಂಕೋಲಾದ ನಾಡು ಮಾಸ್ಕೇರಿ ಬಳಿಯ ಗ್ರಾಮದವರು. ಈಗ ನೆಲಸಿರುವುದು ಅಂಕೋಲಾದಲ್ಲಿ. ಅವಾರಿ, ಕಡಲ ಬೆಳಕಿನ ದಾರಿಯಲ್ಲಿ, ಸೀತೆ ದಂಡೆ ಹೂವೆ, ಮಾನಿನಿ ಮಣಿಯೆ ಬಾರೆ ಅವರ ಬರೆದ ಅತ್ಯುತ್ತಮ ಕತೆಗಳ ಸಾಲಿಗೆ ಸೇರುವಂತಹವು. ಬಂಡಾಯ ಮತ್ತು ದಲಿತ ಸಾಹಿತ್ಯದ ಓದು ಅವರ ಕತೆಗಳನ್ನು ಪ್ರಭಾವಿಸಿದೆಯಾದರೂ, ಕರಾವಳಿಯಲ್ಲಿ ಶೋಷಣೆ, ಜಾತಿಯ ಮುಸುಕು, ಕಾಣುವ ದೌರ್ಜನ್ಯ ಕತೆಗಳಲ್ಲಿ ಅನಾವರಣಗೊಳ್ಳುವ ಬಗೆ ವಿಶಿಷ್ಟ. ಅವರ ಕತೆಗಳಲ್ಲಿ ಮಾನವೀಯ ಅನುಕಂಪ ಮತ್ತು ಮನುಷ್ಯನ ಸೂಕ್ಷ್ಮ ಪ್ರತಿಸ್ಪಂದನಗಳು ಎದ್ದು ಕಾಣುವಂತಹವು.

………………………….

ನಾಗರಾಜ ಹರಪನಹಳ್ಳಿ : ಕತೆಗಳನ್ನು ಯಾಕೆ ಬರೆಯುತ್ತೀರಿ?

ರಾಮಕೃಷ್ಣ ಗುಂದಿ : ನನ್ನ ಊರು ಕುಮಟಾ ತಾಲೂಕಿನ ನಾಡು ಮಾಸ್ಕೇರಿ ಎಂಬ ಪುಟ್ಟ ಗ್ರಾಮ. ನನ್ನ ಬಾಲ್ಯ ಮತ್ತು ಹರೆಯದ ಬಹುಪಾಲು ಅಲ್ಲಿಯೇ ಕಳೆದವು. ಅಂದಿನ ಅಲ್ಲಿಯ ಸಾಮಾಜಿಕ ಪರಿಸರ, ಜಾತಿ ವ್ಯವಸ್ಥೆ, ಮುಖಾಮುಖಿಯಾದ ವಿಕ್ಷಿಪ್ತ ಮತ್ತು ಉದಾತ್ತ ವ್ಯಕ್ತಿತ್ವಗಳು, ನನ್ನೊಳಗೆ ಉಂಟು ಮಾಡಿದ ತಲ್ಲಣಗಳಿಗೆ ಪ್ರತಿಕ್ರಿಯೆ ನೀಡಲೇ ಬೇಕಾದ ಅನಿವಾರ‍್ಯತೆಯಲ್ಲಿ ನಾನು ಬರೆಯಲು ಮನಸ್ಸು ಮಾಡಿದೆ ಮತ್ತು ಅದಕ್ಕೆ ಕಥೆಯೇ ಸೂಕ್ತವಾದ ಮಾಧ್ಯಮ ಅನ್ನಿಸಿತು. ಅದೇ ಸಮಯ ಆರಂಭವಾದ ದಲಿತ-ಬಂಡಾಯ ಚಳುವಳಿಯಿಂದಲೂ ಪ್ರಭಾವಿತನಾಗಿ ಕತೆ ಬರೆಯಲು ತೊಡಗಿದೆ.

ಪ್ರಶ್ನೆ : ಕಥೆ ಹುಟ್ಟುವ ಕ್ಷಣ ಯಾವುದು?

ಉತ್ತರ : ಸಂವೇದನಾ ಶೀಲತೆ ಇದ್ದರೆ ಬರಹಗಾರನಿಗೆ ಇಂಥಹುದೇ ಕ್ಷಣ ಎಂಬುದೇನಿಲ್ಲ. ಅಥವಾ ಅದು ನಿಜವೂ ಇರಬಹುದೇನೋ. ತೀರ ಮನಸ್ಸನ್ನು ಕಾಡುವ ಕ್ಷಣವೊಂದು ಅಭಿವ್ಯಕ್ತಿಯ ಉದ್ದೀಪನಕ್ಕೆ- ಪ್ರೇರಣೆಯಾಗುವ ಸಾಧ್ಯತೆಗಳೂ ಇಲ್ಲದಿಲ್ಲ. ನಮ್ಮೂರಿನ ಬಂಡಿಹಬ್ಬ ನೋಡಲು ನೂರಾರು ಜನರ ನಡುವೆ ನಿಂತಿದ್ದೆ, ಆಗ ದೇವರ ಮೋಕ್ತೇಸರ ಭಕ್ತ ಜಂಗುಳಿಯತ್ತ ತೆಂಗಿನ ಕಾಯಿ ಎಸೆಯುತ್ತಾನೆ. ಅದು ಯಾರ ಕೈಗೆ ಸಿಗುತ್ತದೋ ಅವರು ಬಂಡಿ ಕಟ್ಟೆಗೆ ಒಡೆಯುವ ಅವಕಾಶ ಪಡೆಯುತ್ತಾರೆ. ಅಲ್ಲಿ ಆಕಸ್ಮಿಕವಾಗಿ ದಲಿತ ಯುವಕನೋರ‍್ವನ ಕೈಗೆ ಕಾಯಿ ಸಿಕ್ಕಾಗ ಅದನ್ನು ಒಡೆಯಲು ಆತನಿಗೆ ಅವಕಾಶ ನೀಡದೆ ಸವರ್ಣೀಯನೊ  ಬ್ಬನ ಕೈಗೆ ನೀಡಿ ಕಾಯಿ ಒಡೆಯಲಾಯಿತು. ಈ ದೃಶ್ಯ ನನಗೆ ಆ ಕ್ಷಣದಲ್ಲಿ ತುಂಬ ಕಾಡಿತು. ಮತ್ತು ಅಂದೇ ನಾನು ‘ಚಾಚುದಾರರು’ ಎಂಬ ಕಥೆ ಬರೆಯಲೇ ಬೇಕಾಯಿತು. ದಲಿತನಾದ ನನಗೆ ಅಸ್ಪ್ರಶ್ಯತೆಯ ಕಾರಣದಿಂದ ನೋವು ನೀಡಿದ ಕ್ಷಣಗಳೇ ನನ್ನ ಹಲವು ಕಥೆಗಳ ಹುಟ್ಟಿಗೆ ಕಾರಣವೂ ಆಗಿದೆ.

ಪ್ರಶ್ನೆ : ನಿಮ್ಮ ಕಥೆಗಳ ವಸ್ತು ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು?

ಉತ್ತರ : ನಾನು ಆಗಲೇ ಹೇಳಿರುವಂತೆ ನನ್ನೂರಿನ ದಲಿತ ಕೇರಿಯ ಬಡತನ, ಹಸಿವು, ಅಸ್ಪ್ರಶ್ಯತೆಯ ಅವಮಾನಕರ ಪ್ರಸಂಗಗಳು ಇದೇ ಕಾರಣದಿಂದ ಅನಿವಾರ‍್ಯವಾಗಿ ಅನುಭವಿಸುವ ಶೋಷಣೆ ಮುಂತಾದವುಗಳೇ ನನ್ನ ಕಥೆಗಳಿಗೆ ವಸ್ತುವಾದವು. ಮುಖ್ಯವಾಗಿ ಒಂದು ಉಪೇಕ್ಷಿತ ದಲಿತ ಸಮುದಾಯವಾಗಿ ಇಂದಿಗೂ ನಿರೀಕ್ಷಿತ ಪ್ರಗತಿ ಕಾಣದ ನಮ್ಮ ‘ಆಗೇರ’ ಜನಾಂಗದ ಧ್ವನಿಯಾಗಬೇಕೆಂಬ ಉತ್ಕಟ ಹಂಬಲವೇ ನನ್ನ ಬಹುತೇಕ ಕಥೆಗಳ ಪ್ರೇರಣೆ ಅನ್ನಬಹುದು. ಹಾಗಾಗಿ ನನ್ನ ಕಥೆಗಳ ವಸ್ತು ವ್ಯಾಪ್ತಿ ಅದರಾಚೆಗೆ ವಿಸ್ತರಿಸಿದ್ದು ಬಹಳ ಕಡಿಮೆಯೇ ಎಂದು ಒಪ್ಪಿಕೊಳ್ಳುವೆ. ಈಗಲೂ ಜಾತಿ-ಮತ-ಧರ‍್ಮದ ಕಾರಣದಿಂದಲೇ ನಿರ್ಧಾರಿತವಾಗುತ್ತಿರುವ ‘ಮನುಷ್ಯ ವ್ಯಕ್ತಿತ್ವ’ ನನ್ನನ್ನು ಯಾವಾಗಲೂ ಕಾಡುತ್ತದೆ.

ಪ್ರಶ್ನೆ : ಕಥೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ?

ಉತ್ತರ : ಖಂಡಿತವಾಗಿ. ಬಹುಶಃ ಯಾವುದೇ ವ್ಯಕ್ತಿತ್ವ ಬೆಳೆದು ಬರುತ್ತಲೇ ಬಾಲ್ಯ-ಯೌವನಗಳ ಅನುಭವಗಳು ಗಾಢವಾಗಿ ಪ್ರಭಾವಿಸಿರುತ್ತವೆ. ನನ್ನ ಬಹುತೇಕ ಕಥೆಗಳು ನನ್ನ ಬಾಲ್ಯದ ಅನುಭವಗಳಿಂದಲೇ ಸಾಕಷ್ಟು ವಸ್ತುಗಳನ್ನು ದೊರಕಿಸಿಕೊಂಡಿವೆ. ಹರೆಯದ ಅನುಭವಗಳ ಹಿನ್ನಲೆಯಲ್ಲಿ ಕೆಲವು ಕಥೆಗಳನ್ನು ನಿರೂಪಿಸಿದ್ದೇನೆ. ನನ್ನ ‘ಅವಾರಿ’, ‘ಇರಿತ’, ‘ಉಲ್ಕಾಪಾತ’, ‘ಅತಿಕ್ರಾಂತ’ ಮುಂತಾದ ಕಥೆಗಳು ನನ್ನ ಬಾಲ್ಯದ ಹಸಿ ಹಸಿ ನೆನಪುಗಳ ಹಿನ್ನೆಲೆಯಿಂದಲೇ ರೂಪುಗೊಂಡವು.

ಪ್ರಶ್ನೆ : ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆಯೇನು?

ಉತ್ತರ : ರಾಜಕೀಯ ವಿದ್ಯಮಾನಗಳ ಕುರಿತು ಮಾತೇ ಆಡದಿರುವುದು ಒಳಿತು ಎಂಬಂಥ ಸ್ಥಿತಿಯಲ್ಲಿ ಈಗ ನಾವಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವಿದ್ದೇವೆ ಎನ್ನುವುದು ಕೇವಲ ಬಾಯಿ ಮಾತಿಗೆ ಅಷ್ಟೇ. ಎಲ್ಲರಿಗೂ ಅಧಿಕಾರ-ಗದ್ದುಗೆ ಮತ್ತು ಸ್ವಾರ‍್ಥವೇ ಮುಖ್ಯವಾಗಿರುವಾಗ ಪ್ರಜಾಹಿತವೆಂಬುದು ಒಂದು ಚರ್ಚಿತ ವಿಷಯವಾಗಿ ಅಷ್ಟೇ ಉಳಿದುಕೊಂಡಿದೆ. ರೈತರ, ನಿರುದ್ಯೋಗಿಗಳ, ಸಂತ್ರಸ್ತರ ಕುರಿತು ಆಲೋಚಿಸಬೇಕಾದ ರಾಜಕಾರಣಿಗಳು ಕೇವಲ ಅಧಿಕಾರಕ್ಕಾಗಿ ಕಚ್ಚಾಡುವುದು, ಪರಸ್ಪರ ಕಾಲೆಳೆಯುವ, ಕೆಸರೆರಚುವ ಹುಡುಗಾಟದಲ್ಲಿ ಮಗ್ನರಾಗಿರುವುದು ರಾಜಕೀಯದ ಶೋಚನೀಯ ಸ್ಥಿತಿಗೆ ದೃಷ್ಟಾಂತಗಳಾಗಿ ತೋರುತ್ತಿವೆ.

ಪ್ರಶ್ನೆ: ಧರ‍್ಮ ದೇವರು ವಿಷಯದಲ್ಲಿ ನಿಮ್ಮ ನಿಲುವೇನು?

ಉತ್ತರ : ನನಗೆ ‘ವಚನ ಸಾಹಿತ್ಯ’ ತುಂಬಾ ಪ್ರಭಾವಿಸಿದ ಪ್ರಕಾರ ಅಲ್ಲಿಯೂ ಬಸವಣ್ಣನಂಥವರ ಧರ‍್ಮ ಮತ್ತು ದೇವರ ಕುರಿತಾದ ನಿಲುವು ಪರಿಕಲ್ಪನೆಗಳೇ ಹೃದಯದಿಂದ ಒಪ್ಪಿತವಾದವುಗಳು. ನನ್ನ ಬಾಲ್ಯ, ತಾರುಣ್ಯದ ಬಹು ಮುಖ್ಯ ಜೀವಿತಾವಧಿಯಲ್ಲಿ ನನಗೆ ಜಾತಿಯ ಕಾರಣದಿಂದ ದೇವಾಲಯ ಪ್ರವೇಶ ನಿಷಿದ್ಧವಾಗಿತ್ತು. ನಾನು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಗೋಕರ‍್ಣದ ಶಿವರಾತ್ರಿಯಲ್ಲಿ ಮಹಾಬಲೇಶ್ವರ ದೇವಸ್ಥಾನ ಪ್ರವೇಶಕ್ಕೆ ಅರ‍್ಚಕರು ತಡೆದಾಗ ನಮ್ಮ ತಂದೆಯವರು ಅರ‍್ಚಕರೊಡನೆ ಜಗಳಕ್ಕೇ ನಿಂತಿದ್ದು ನನಗೆ ನೆನಪಿದೆ. ಇಂಥ ಸನ್ನಿವೇಶಗಳಿಂದಾಗಿ ‘ದೇವಾಲಯಗಳಿಗೆ ಹೋಗದಿದ್ದರೆ ಆಗುವ ನಷ್ಟವೇನು?’ ಎಂಬ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಂಡು ಅವುಗಳಿಂದ ದೂರವೇ ಉಳಿದೆ. ಹಾಗೆಂದು ನಾಸ್ತಿಕನೇನಲ್ಲ. ನಾನು ದೇವರನ್ನು ಆರಾಧಿಸುವ ಕ್ರಮ-ಪರಿಕಲ್ಪನೆಗಳು ಬೇರೆ ಅಷ್ಟೇ. ಮನುಷ್ಯನನ್ನು ಮನುಷ್ಯನಾಗಿ ನೋಡದ, ಮನುಷ್ಯ ಮನುಷ್ಯರ ನಡುವೆ ಭೇದ ಕಲ್ಪಿಸುವ ಯಾವ ದೇವರು ಧರ‍್ಮದ ಕುರಿತಾಗಿಯೂ ನನ್ನ ದಿಕ್ಕಾರವೇ. ಸೌಹಾರ್ದತೆ-ಶಾಂತಿ – ಪ್ರೀತಿಯ ನೆಲೆಯ ಯಾವ ಧರ‍್ಮವೇ/ದೇವರೇ ಆದರೂ ನಾನು ಆತ್ಮಸಾಕ್ಷಿಯಾಗಿ ಆರಾಧಿಸುವೆ. ದೇವಾಲಯ ಪ್ರವೇಶ, ಕ್ಷೇತ್ರದರ್ಶನ ಇತ್ಯಾದಿ ನನಗೆ ನಂಬಿಕೆಯಿಲ್ಲ.

ಪ್ರಶ್ನೆ: ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಕುರಿತು ನಿಮಗೆ ಏನನ್ನಿಸುತ್ತದೆ?

ಉತ್ತರ : ಸಾಂಸ್ಕೃತಿಕ ವಾತಾವರಣ ತಕ್ಕಮಟ್ಟಿಗೆ ಆಶಾದಾಯಕವಾಗಿಯೇ ಇದೆ ಅನಿಸುತ್ತದೆ. ಅಲ್ಲಿಯೂ ಆಗಾಗ ಪ್ರವೇಶ ಪಡೆಯುವ ರಾಜಕಾರಣ, ಸ್ವಜನಪಕ್ಷಪಾತ ಇತ್ಯಾದಿಗಳು ಸ್ವಲ್ಪಮಟ್ಟಿನ ಆತಂಕಕ್ಕೆ ಕಾರಣವಾಗುತ್ತದೆ ಎಂಬುದು ನಿಜವಾದರೂ ಒಟ್ಟಾರೆಯಾಗಿ ಸಾಂಸ್ಕೃತಿಕ ವಾತಾವರಣ ಸಹನೀಯವಾಗಿದೆ ಎನ್ನಬಹುದು.

ಪ್ರಶ್ನೆ: ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ?

ಉತ್ತರ : ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿಯೂ ರಾಜಕಾರಣ ತನ್ನ ಕಬಂಧ ಬಾಹುಗಳನ್ನು ಚಾಚುತ್ತಲೇ ಇರುತ್ತದೆ. ಸಾಹಿತ್ಯ ವಲಯ ಕೂಡ ಇದರಿಂದ ಹೊರತಾಗಿಲ್ಲ. ಇಲ್ಲಿಯೂ ಮತ್ತೆ ಅದೇ ಪ್ರಶ್ನೆ. ಮತ ಧರ‍್ಮಗಳಿಗೆ ಸೇರಿದ, ಸೇರದ ಎಂಬ ಗುಂಪುಗಾರಿಕೆ, ಅಕಾಡೆಮಿ, ಸಾಹಿತ್ಯ ಪರಿಷತ್ತು, ಮತ್ತಿತರ ಸಾಹಿತ್ಯ ಸಂಘಟನೆಗಳಲ್ಲಿನ ಗದ್ದುಗೆಯ ಗುದ್ದಾಟ ಇತ್ಯಾದಿ ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವುದು ಅಸಹನೀಯವೆನಿಸುತ್ತದೆ. ಸಾಹಿತ್ಯದ ಓದು-ಬರಹಗಳು ಭಾವನಾತ್ಮಕವಾಗಿ ನಮ್ಮನ್ನು ಒಂದುಗೂಡಿಸಲು ವಿಫಲವಾದರೆ ಅದರಿಂದ ಶ್ರೀಸಾಮಾನ್ಯನಿಗಾಗುವ ಪ್ರಯೋಜನವಾದರೂ ಏನು?

ಪ್ರಶ್ನೆ: ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸ್ಸು ಏನು ಹೇಳುತ್ತದೆ?

ಉತ್ತರ : ಅಂತರಾಷ್ಟ್ರೀಯ ಮಟ್ಟದ ಸ್ನೇಹ-ಬಾಂಧವ್ಯ, ಸ್ವಚ್ಛತೆಯ ಕುರಿತಾದ ರಾಷ್ಟ್ರಮಟ್ಟದ ಅರಿವು ಮುಂತಾದ ಸಂಗತಿಗಳು ಹೆಮ್ಮೆಯೆನಿಸುವಂತಿವೆ. ದಿನದಿಂದ ದಿನಕ್ಕೆ ಗಾಬರಿ ಹುಟ್ಟಿಸುವಂತೆ ಬೆಳೆಯುತ್ತಿರುವ ಆರ್ಥಿಕ ಹಿಂಜರಿತ, ನಿರುದ್ಯೋಗದ ತೀವ್ರ ಸಮಸ್ಯೆ, ರೈತರು ಮತ್ತು ಮದ್ಯಮ ವರ‍್ಗದ ಜನಸಾಮಾನ್ಯರ ಸಮಸ್ಯೆಗಳು ಆತಂಕ ಹುಟ್ಟಿಸುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷದೊಂದಿಗೆ ಪ್ರಬಲ ವಿರೋಧಿ ಪಕ್ಷವೂ ಸಕ್ರಿಯವಾಗಿರಬೇಕಾಗುತ್ತದೆ. ರಾಜ್ಯದಲ್ಲಿಯೇ ಇರಲಿ ರಾಷ್ಟ್ರಮಟ್ಟದಲ್ಲಿಯೇ ಇರಲಿ ಧ್ವನಿ ಕಳೆದುಕೊಳ್ಳುತ್ತಿರುವ ವಿರೋಧ ಪಕ್ಷಗಳ ಸ್ಥಿತಿಯನ್ನು ಗಮನಿಸಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ರಕ್ಷಣೆ ಭವಿಷತ್ತಿನಲ್ಲಿ ಸಾಧ್ಯವೆ? ಸಂವಿಧಾನ ನಿಷ್ಠೆಯ ಕುರಿತು ಗಂಭೀರ ಚಿಂತನೆ ತುರ್ತು ಅಗತ್ಯವೆನಿಸುತ್ತದೆ.

ಪ್ರಶ್ನೆ: ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು?

ಸಾಹಿತ್ಯ ರಚನೆ ಆಶಾದಾಯಕವಾಗಿ ಅಭಿವೃದ್ಧಿ ಹೊಂದುತ್ತಿರುವುದು ಸಂತೋಷ ತರುತ್ತಿದೆ. ಆದರೆ ಅದೇ ಪ್ರಮಾಣದಲ್ಲಿ ಓದುಗರ ಸಂಖ್ಯೆ ಬೆಳೆಯುವಂತೆ ತೋರುತ್ತಿಲ್ಲ. ಸಾಹಿತ್ಯ ವೇದಿಕೆಗಳು, ಸಂಘ-ಸಂಸ್ಥೆಗಳು ಯುವ ಓದುಗರನ್ನು ಹೆಚ್ಚಿಸುವ ಕುರಿತು ಯೋಜನೆಗಳನ್ನು ರೂಪಿಸಬೇಕು, ಪ್ರಯತ್ನಿಸಬೇಕು. ವೈಯುಕ್ತಿಕವಾಗಿ ಇನ್ನಷ್ಟು ಬರಹಗಳಲ್ಲಿ ತೊಡಗಿಕೊಳ್ಳುವ, ಪ್ರಕಟನೆಯ ಕನಸುಗಳಿವೆ ನೋಡಬೇಕು.

ಪ್ರಶ್ನೆ: ಕನ್ನಡ ಮತ್ತು ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಕಾಡಿದ ಕತೆಗಾರ ಸಾಹಿತಿ ಯಾರು?

ಕನ್ನಡದಲ್ಲಿ ಬಹುತೇಕ ಎಲ್ಲ ಹಿರಿಯ ಸಾಹಿತಿಗಳೂ ಕವಿಗಳೂ ನನ್ನ ನೆಚ್ಚಿನವರೇ. ದೇವನೂರು, ತೇಜಸ್ವಿ, ಕುಂ. ವೀರಭದ್ರಪ್ಪ ನನ್ನ ಬಹುಮೆಚ್ಚಿನ ಲೇಖಕರು. ಮುಖ್ಯವಾಗಿ ಕಥೆ ಬರೆಯುವ ನಿಟ್ಟಿನಲ್ಲಿ ಕುಂ.ವೀ. ನನ್ನ ಇಷ್ಟದ ಮತ್ತು ನನ್ನನ್ನು ತುಂಬ ಪ್ರಭಾವಿಸಿದ ಕತೆಗಾರ.

ಇಂಗ್ಲೀಷ ಸಾಹಿತ್ಯ   ಶ್ರದ್ಧೆಯ ಓದು ನನ್ನದಲ್ಲ ಹೆಮಿಂಗ್ವೇ, ಗಾರ್ಕಿ ಟಾಲ್ಸ್ಟಾಯ್ರಂಥವರ ಪ್ರಾಸಂಗಿಕ ಬೀಸು ಓದು ಮಾತ್ರವೇ ನನಗೆ ಸಾಧ್ಯವಾಗಿದೆ. ಯಾವ ಬಗೆಯ ಪ್ರಭಾವಕ್ಕೆ ದಕ್ಕುವ ಲೇಖಕರನ್ನು ಹೆಸರಿಸಲಾರೆ ಕ್ಷಮಿಸಿ.

….

ಲೇಖಕರ ಬಗ್ಗೆ:

ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌


One thought on “

Leave a Reply

Back To Top