ಪುಸ್ತಕ ಸಂಗಾತಿ

ದೃಷ್ಟಾಂತದ ಮೂಲಕ ನೀತಿಯ ಬೋಧನೆ.

ಸೋಮೇಶ್ವರ ಶತಕ

ಕೃತಿ : ಸೋಮೇಶ್ವರ ಶತಕ
ಪುಲಿಗೆರೆ ಸೋಮನಾಥ.
ಕನ್ನಡ ಸಾಹಿತ್ಯ ಪರಿಷತ್ತು.
ಚಾಮರಾಜಪೇಟೆ.ಬೆಂ.
ಮರು ಮುದ್ರಣ:೨೦೨೦.
ಬೆಲೆ :೬೦.

ಪುಸ್ತಕ ಪರಿಚಯ:

ಕೃತಿ: *ಸೋಮೇಶ್ವರ ಶತಕ
ಪುಲಿಗೆರೆಯ
ಸೋಮನಾಥ

ನಾವೆಲ್ಲಾ ಶಾಲೆಯಲ್ಲಿ ಕಲಿಯುವಾಗ ಕನ್ನಡ ಪಠ್ಯಪುಸ್ತಕದಲ್ಲಿ ‘ ಹರಹರಾ ಶ್ರೀಚೆನ್ನ ಸೋಮೇಶ್ವರ ‘ ಎಂದು ಕೊನೆಗೆ,ಮತ್ತೆ ಮತ್ತೆ ರಾಗವಾಗಿ ಹಾಡುವ ಪದ್ಯಗಳನ್ನು ಓದಿಯೇ ಇದ್ದೇವೆ.ಈಗಲೂ ಒಂದರಿಂದ ಹನ್ನೆರಡನೆ ತರಗತಿಯ ವರೆಗಿನ ಕನ್ನಡ ಪಠ್ಯದಲ್ಲಿ, ಎರಡು ಮೂರು ಪಠ್ಯಗಳಲ್ಲಾದರೂ ಈ ಬಗೆಯ ಪದ್ಯಗಳಿವೆ.ಇವು ಪುಲಿಗೆರೆ ಸೋಮೇಶ್ವರನ ಶತಕದಿಂದ ಆರಸಿ ಇಡುತ್ತಿದ್ದ ಪದ್ಯಗಳು.ಬಿಡಿ ಬಿಡಿಯಾಗಿರುವ ಈ ಪದ್ಯಗಳು ನೀತಿಬೋಧಕವಾದವು. ದೃಷ್ಟಾಂತಗಳ ಮೂಲಕ ಸರಿ ತಪ್ಪುಗಳನ್ನು,ಸಾಮಾಜಿಕ ನಡವಳಿಕೆಯನ್ನು ತಿಳಿಸುವ ಅಲಿಖಿತವಾದ ಜನಮಾನಸದ ಶಾಸನಗಳಂತಿರುವ ಪದ್ಯಗಳು ಇವು.

ಹಾಗೆ ನೋಡಿದರೆ ನಮ್ಮ ಹಲವು ಜನಪದ ತ್ರಿಪದಿಗಳು,ಗಾದೆಗಳೂ,ಶರಣರ ನುಡಿಗಳು,ಸರ್ವಜ್ಞನ ವಚನಗಳು,ಕೀರ್ತನೆಕಾರರ ನುಡಿಗಳು..ಇವೆಲ್ಲಾ ಬಹುಪಾಲು ಸಾಮಾಜಿಕ ಧಾರ್ಮಿಕ ನಡಾವಳಿಗಳನ್ನು ಕುರಿತು ಹೇಳುತ್ತಲೇ,ಮಾರ್ಗದರ್ಶಿಯೂ ಚಿಂತನೆಗೆ ಹಚ್ಚುವವೂ ಆಗಿವೆ.

“ಸೋಮೇಶ್ವರ ಶತಕ ” ರಚನೆಕಾರ ಪುಲಿಗೆರೆ ಸೋಮೇಶ್ವರ ಅಥವಾ ಪಾಲ್ಕುರಿಕೆ ಸೋಮೇಶ್ವರನೇ ಎಂಬ ಗೊಂದಲವಿದೆ.ಹನ್ನೆರಡನೆ‌ ಶತಮಾನದ ಅಂತ್ಯದಲ್ಲಿದ್ದ ಪಾಲ್ಕುರಿಕೆ ಸೋಮನಾಥನು ಸಂಸ್ಕೃತ, ತೆಲುಗು,ಕನ್ನಡ ಮೂರು ಭಾಷೆಗಳಲ್ಲೂ ಪಾಂಡಿತ್ಯ ಪಡೆದವನಾಗಿದ್ದ.ಆದರೆ,ಇವನು ಗೋದಾವರಿ ಪ್ರಾಂತ್ಯದಲ್ಲಿದ್ದನೆಂದು,ಇವನಿಂದ‌ ಇದು ರಚಿತವಾಗಿಲ್ಲವೆಂದು ಕವಿಚರಿತೆಕಾರರು ಹೇಳಿದ್ದಾರೆ.
ಮತ್ತೊಬ್ಬರು, ಪುಲಿಗೆರೆ ಸೋಮನಾಥ. ಸುಮಾರು ಹದಿನಾರನೇ ಶತಮಾನ.ಧಾರವಾಡದ ಜಿಲ್ಲೆ,ವೀರಶೈವ ಕವಿಯಾಗಿದ್ದವನು.ಕೃತಿಯಲ್ಲಿ‌ಸೋಮ‌ ಎಂದಷ್ಟೇ ಕವಿ ಹೆಸರಿದೆ.ಈ ಧಾರವಾಡದ ಕವಿ ಪುಲಿಗೆರೆ ಸೋಮನಾಥನೇ‌ ಶತಕದ ಕವಿಯೆಂದು ವಿದ್ವಾಂಸರು ಊಹಿಸಿದ್ದಾರೆ.

ಶತಕವೆಂದರೆ ನೂರು.ಆರಂಭದ ಸ್ತುತಿ ಮತ್ತು ಅಂತ್ಯದ ಶತಕದ ಉಪಯೋಗ ತಿಳಿಸುವ ಪದ್ಯಗಳನ್ನು ಸೇರಿಸಿ,ಒಟ್ಟು ನೂರ ಮೂರು ಪದ್ಯಗಳು ಇದರಲ್ಲಿವೆ.ಮೊದಲ ಮತ್ತು ಕೊನೆಯ ಪದ್ಯಗಳು ಸ್ರಗ್ಧರಾ ವೃತ್ತದಿಂದ ಕೂಡಿದ್ದು,ಉಳಿದವು ಮತ್ತೇಭವಿಕ್ರೀಡಿತವೆಂಬ ವೃತ್ತ ಪದ್ಯಗಳಲ್ಲಿ ರಚನೆಯಾಗಿವೆ.

” ಸೋಮೇಶ್ವರ ಶತಕ” ಕೃತಿಯ ಸಂಪಾದನೆ ಬಹಳ ಅರ್ಥಪೂರ್ಣವಾಗಿದೆ.ಪದ್ಯಗಳು, ಅವುಗಳಿಗೆ ಭಾವಾರ್ಥ,ಟಿಪ್ಪಣಿ,ಜೊತೆಗೆ ಆ ಪದ್ಯಗಳಲ್ಲಿ ಉಲ್ಲೇಖಿಸಿರುವ ಕಥಾ ಎಳೆಗಳು ತಿಳಿಯದವರಿಗೆ ಪೂರ್ಣ ವಾಗಿ ತಿಳಿಯಲಿ ಎಂಬ ಆಶಯದೊಂದಿಗೆ ನೀಡಿರುವ ಮುವತ್ತು ಮೂಲಕಥೆಗಳನ್ನು ಪುಸ್ತಕದ ಕೊನೆಯಲ್ಲಿ ನೀಡಲಾಗಿದೆ.ಹಾಗಾಗಿ,ಶಿಕ್ಷಕರಿಗೆ,ವಿದ್ಯಾರ್ಥಿಗಳಿಗೆ, ಓದುಗರೆಲ್ಲರಿಗೂ ಯಾವುದೇ ಗೊಂದಲವಿಲ್ಲದೆ ಸರಳವಾಗಿ ಗ್ರಹಿಸಲು ಉಪಯುಕ್ತವಾಗಿ ರೂಪಿಸಿಕೊಡಲಾಗಿದೆ.

ಸೋಮೇಶ್ವರ ಶತಕದ ಪದ್ಯಗಳು ಎಷ್ಟು ಜನಪ್ರಿಯವಾದವು ಎಂದರೆ; ಎಳೆಗರು ಎತ್ತಾಗದೆ,ಬಡವಂ ಬಲ್ಲಿದನಾಗನೆ,ಹಲವು ಹಳ್ಳ ಸೇರಿ ಸಮುದ್ರವಾಗದೆ,ಮಡಿಯೆ ನಿರ್ಮಲ‌ ಚಿತ್ತ…ಹೀಗೆ ಗಾದೆಗಳಂತೆ,ನಾಣ್ನುಡಿಗಳಂತೆ ರೂಢಿಗತವಾಗಿ ಬಳಸುವ ಮಾತುಗಳಾಗಿವೆ.

ಈ ಶತಕದ ಪದ್ಯಗಳು ನಾಲ್ಕು ಸಾಲಿನಲ್ಲಿದ್ದು ಕೆಲವು ದೃಷ್ಟಾಂತಗಳ ಮೂಲಕ ನೀತಿ, ತಿಳುವಳಿಕೆ ‌ಹೇಳುತ್ತವೆ.

” ಉಣದಿರುವ ಧನಮಿರ್ದೊಡೇನು,ಸುತನಿರ್ದೇಂ‌ ಮುಪ್ಪಿನಲ್ಲಾಗದಾ,ಒಣಗಲ್ಪೈರಿಗೆ ಬಾರದಿರ್ದ ಮಳೆ ತಾಂ‌ ಬಂದೇನದಾಪತ್ತಿನೊಳ್ ಮಣಿದುಂ‌ ನೋಡದ ಬಂಧುವೇತಕೆಣಿಸಲ್ ಕಾಲೋಚಿತಕ್ಕೈದಿದ ತೃಣವೇ ಪರ್ವತವಲ್ಲವೇ‌ ಹರಹರಾ ಶ್ರೀಚೆನ್ನ ಸೋಮೇಶ್ವರ.!”(೧೬)

ಉಪಯೋಗಿಸದಿರುವ ಹಣವೂ,ಮುಪ್ಪಿನಲ್ಲಿರುವ ತಂದೆ ತಾಯಿಯನ್ನು ನೋಡದ ಮಗನೂ,ಪೈರು ಒಣಗುವಾಗ ಬಾರದ‌ ಮಳೆಯೂ,ಕಷ್ಟಕಾಲದಲ್ಲಿಯೂ ಬಂದು ವಿಚಾರಿಸಿಕೊಳ್ಳದ ನಂಟರೂ ಇದ್ದು ಪ್ರಯೋಜನವಿಲ್ಲ‌.ಉಪಯೋಗವಿಲ್ಲ.ಆದುದರಿಂದ ಸಮಯಕೆ ಸರಿಯಾಗಿ ಒದಗಿದ ಹುಲ್ಲುಕಡ್ಡಿಯೂ,ಅಂದರೆ‌ ಸಣ್ಣ‌ಸಹಾಯವೂ ಪರ್ವತಕ್ಕೆ ಸಮಾನವಾದುದು.ಹೀಗೆ ಸಾಮಾಜಿಕ ಜೀವನದ ವಿವರಗಳನ್ನೇ ಉದಾಹರಿಸುತ್ತಾ ಸರಿ ತಪ್ಪುಗಳ, ಒಳಿತು ಕೆಡಕುಗಳ ವಿಚಾರ ಮಾಡಿದ್ದಾನೆ‌ ಕವಿ.

” ಮದನಂ ದೇಹವ ನೀಗಿದಂ,ನೃಪವರಂ ಚಂಡಾಲಗಳಾದ,ಪೋದುದು ಬೊಮ್ಮಂಗೆ ಶಿರಸ್ಸು,ಭಾರ್ಗವನು ಕಣ್ಗಾಣಂ,ನಳಂ‌ ವಾಜಿಪಂ,ಸುಧೆಯಂ‌ ಕೊಟ್ಟು ಸುರೇಂದ್ರ ಸೋಲ್ತ,ಸತಿಯಂ ಪೋಗಾಡಿದಂ ರಾಘವಂ,ವಿಧಿಯಂ ಮೀರುವನಾವನೈ ಹರ ಹರಾ ಶ್ರೀ ಚೆನ್ನ ಸೋಮೇಶ್ವರ. “(೨೭)

ಮನ್ಮಥನು ದೇಹವನ್ನೇ ಕಳೆದುಕೊಂಡನು,ರಾಜಶ್ರೇಷ್ಠನಾದ ಹರಿಶ್ಚಂದ್ರನು ಚಂಡಾಲನಿಗೆ ದಾಸನಾದನು,ಬ್ರಹ್ಮನಿಗೆ ಒಂದು ತಲೆಯೇ ಹೋಯಿತು.ಶುಕ್ರಾಚಾರ್ಯರಿಗೆ ಒಂದು ಕಣ್ಣು ಹೋಯಿತು.ನಳ‌ ಮಹಾರಾಜನು ಕುದುರೆಯ ನೋಡಿಕೊಂಡಿರಬೇಕಾಯಿತು,ಇಂದ್ರನು ಅಮೃತವನ್ನು ಕಳೆದುಕೊಂಡು ಯುದ್ದದಲ್ಲಿ ಸೋತು ಹೋದನು,ಶ್ರೀರಾಮನು ತನ್ನ ಹೆಂಡತಿಯನ್ನು ಕಳೆದುಕೊಂಡನು…ಹೀಗಿರುವಾಗ ಲೋಕದಲ್ಲಿ ದುರಾದೃಷ್ಟವನ್ನು ಮೀರಲು ಯಾರಿಗೆ ಸಾಧ್ಯ.ಎಲ್ಲರೂ ಬಂದುದನ್ನು ಅನುಭವಿಸಲೇಬೇಕು ಎಂದು ಕವಿ ಹೇಳುತ್ತಾನೆ.ಈ ಒಂದು ಪದ್ಯಭಾಗದಲ್ಲೇ ಏಳುಕಥೆಗಳ ಉಲ್ಲೇಖವಿದೆ.ಕಾಮ‌ ದಹನದ‌ ಕಥೆ,ಹರಿಶ್ಚಂದ್ರನ ಕಥೆ,ರಾಮಾಯಣದ ಕಥೆ,..ಹೀಗೆ ನಾಲ್ಕು ಪದ್ಯ ಗಳಲ್ಲೇ ಹಲವು ಕತೆಗಳ ನಿದರ್ಶನಗಳ ಮೂಲಕ ಅದೃಷ್ಟ ದುರಾದೃಷ್ಟ ನಮ್ಮ ಕೈಯಲಿಲ್ಲವೆಂದು ಕವಿ ಚಿತ್ರಿಸಿದ್ದಾನೆ.

ಪಾಠ ಮಾಡುವಾಗ ಶಿಕ್ಷಕರು ಎಡವಬಾರದೆಂದು,ಮಕ್ಕಳೇ‌ ಓದುವಾಗ ಅವರಿಗೂ ತಿಳಿಯಲಿ ಎಂದು ಈ ಕೃತಿಯ ಸಂಪಾದಕರು ಈ ಎಲ್ಲಾ ಉಲ್ಲೇಖಿತ ಕಥಾ ಎಳೆಗಳನ್ನು ಹಿಡಿದು,ಅವುಗಳ ಮೂಲಕಥೆಗಳನ್ನು ಒದಗಿಸಿದ್ದಾರೆ.ಆ ಮೂಲಕ ಈ ಪುಸ್ತಕದ ಉಪಯುಕ್ತತೆ ಹೆಚ್ಚಾಗಿದೆ.

ಈ ಶತಕದ ಪದ್ಯಗಳಲ್ಲಿರುವ ವಿಷಯವು ನೀತಿಬೋಧಕವೆಂದು ಆಗಲೇ‌ ಹೇಳಿದ್ದೇನೆ.ಆ ನೀತಿ,ಒಣ ಬೋಧನೆಯಂತಾಗಬಾರದೆಂದು ಕವಿ ಹೋಲಿಕೆ,ಉಪಮೆ,ದೃಷ್ಟಾಂತ ಗಳನ್ನು ನೀಡುತ್ತಾ ಅಂತಿಮವಾಗಿ ನೀತಿ ಹೇಳಿದ್ದಾನೆ.ಹೀಗಾಗಿ ಈ ಪದ್ಯಗಳು ಸೊಗಸಿನಿಂದ ಕೂಡಿದ್ದು,ಓದಿಸಿಕೊಳ್ಳುವ,ಸಂವಾದಿಸುವ ಸಾಮರ್ಥ್ಯ ಹೊಂದಿವೆ.

ಮತ್ತೊಂದು ವಿಚಾರವೆಂದರೆ, ಈ ಪದ್ಯಗಳಲ್ಲಿರುವ ವಿಷಯಗಳೆಲ್ಲವೂ ಸಾರ್ವಕಾಲಿಕವಾದವೆ,ಪ್ರಗತಿಪರವೇ ಎಂದೇನಾದರೂ ಪ್ರಶ್ನೆ ಹಾಕಿಕೊಂಡರೆ,ಇಲ್ಲಿ,ಅನೇಕ ವಿಚಾರಗಳು ಎಲ್ಲ ಕಾಲಕ್ಕೂ ಬೇಕಾದತಂಹವು ಇವೆ.ಆದರೆ,ಕೆಲವು ವಿಚಾರಗಳು ಕವಿ ಬಾಳಿ ಬದುಕಿದ ಸಮಾಜದಲ್ಲಿ ಆಗ ಮಾನ್ಯತೆ ಪಡೆದಿದ್ದು,ಪ್ರಸ್ತುತದಲ್ಲಿ ಅವುಗಳು ಅರ್ಥ ಕಳೆದುಕೊಂಡಿವೆ.ಇವತ್ತಿನ ಸಮಾಜದಲ್ಲಿ ಅಂತಹ ವಿಷಯಗಳಿಗೆ ‌ಮೌಲ್ಯವಿಲ್ಲ.
ನಿದರ್ಶನಕೆ ; ಹೀಗಾಗಲೇ ಉಲ್ಲೇಖಿಸಿರುವ ‘ಉಣದಿರ್ದ ಧನವಿದ್ದರೇನು ಪ್ರಯೋಜನ’ ಅಂತಹ ಪದ್ಯಗಳು ಎಲ್ಲಾ ಕಾಲ‌ಕ್ಕೂ ಸೂಕ್ತವಾದವು.ಆದರೆ,ವಿಧವೆ,ಒಂಟಿ ಬ್ರಾಹ್ಮಣ, ಜೈನ ಸಂನ್ಯಾಸಿ,ಅಂಗಹೀನನು…ಇವೆಲ್ಲವೂ ಅಪಶಕುನವಾದದ್ದು,ಇವುಗಳನ್ನು ಕಂಡಾಗ ನಿಪುಣರು ಹೊರಹೋಗುವುದಿಲ್ಲಾ ಎಂಬ ಮಾತು ಅವತ್ತಿನ ಸಾಮಾಜಿಕ ನಂಬಿಕೆ,ನಡವಳಿಕೆಯನ್ನು ಯಥಾ ಪ್ರಕಾರ ಬಿಂಬಿಸಿದಂತಿದೆ.

” ಧರೆ ಬೀಜಂಗಳ ನುಂಗೆ,ಬೇಲಿ ಹೊಲನೆಲ್ಲಂ‌ ಮೇದೊಡೆಂ,ಗಂಡ ಹೆಂಡಿರನತ್ಯುಗ್ರದಿ ಶಿಕ್ಷಿಸಲ್,ಪ್ರಜೆಗಳಂ ಭೂಪಾಲಕಂ ಭಾದಿಸಲ್,ತರುವೇ ಪಣ್ಗಳ ಮೆಲ್ಲೆ,ಮಾತೆ ವಿಷಮಂ ಪೆತ್ತರ್ಭಂಕಂಗೂಡಿಸಲ್,ಹರಂ‌ಕೊಲ್ಲಲ್ ಪರ ಕಾಯ್ವನೇ ಹರ ಹರಾ ಶ್ರೀಚೆನ್ನ ಸೋಮೇಶ್ವರ! “(೨೯)

ಎಂಬ ಪದ್ಯದಲ್ಲಿ ರಕ್ಷಿಸಬೇಕಾದವರೇ ಭಕ್ಷಕರಾದರೆ ಯಾರು ರಕ್ಷಿಸಲು ಸಾಧ್ಯ ಎಂದು ಕವಿ ಕೇಳುತ್ತಾರೆ.ಬಸವಣ್ಣನ‌ ” ಒಲೆ ಹತ್ತಿ ಉರಿದರೆ ನಿಲ್ಲಬಹುದಲ್ಲದೆ,ಧರೆ ಹತ್ತಿ ಉರಿದರೆ ನಿಲಲಾಗದು” ವಚನವೂ ಇದೇ ನುಡಿಗಳನ್ನು ಹೇಳುತ್ತಾ,ಕಾಯುವವರೆ ಕೊಲ್ಲಲು ನಿಂತರೆ ಇನ್ಯಾರಿಗೆ ದೂರುವುದು ಎಂದು ಪ್ರಶ್ನಿಸುತ್ತದೆ‌.ಇಂತಹ ಹಲವಾರು ‌ಪದ್ಯಗಳು,ಗುರು,ಜ್ಞಾನ, ವಿದ್ಯೆ,ಹಣ,ಅಧಿಕಾರ,ಬಂಧು ಮಿತ್ರರು,ರಾಜ,ಮಂತ್ರಿ,ಅಧಿಕಾರಿಗಳಿಗಿರಬೇಕಾದ ಸಾಮರ್ಥ್ಯ.. ಹೀಗೆ ಇವುಗಳೆಲ್ಲದರ ಗುಣ ಲಕ್ಷಣ ಕುರಿತು ಆಡಿರುವ ನುಡಿಗಳು ಇವತ್ತಿಗೂ ಅನ್ವಯಿಸುತ್ತವೆ.ಮತ್ತು ಉಪಯುಕ್ತತೆ ಪಡೆದಿವೆ.ನಿದರ್ಶನಗಳ ಮೂಲಕ ಹೇಳುವುದರಿಂದ ಓದುಗ,ಕೇಳುಗರ‌ ಮನದಲ್ಲಿ ಉಳಿದು,ತಿಳುವಳಿಕೆಗೆ,ಚಿಂತನೆಗೆ ದೂಡುವ ಪದ್ಯಗಳಾಗಿವೆ.ಹಾಗಾಗಿ ಸೋಮೇಶ್ವರ ಶತಕವು ಮರುಓದಿಗೆ,ಪರಾಮರ್ಶನಕೆ ಒಳಗಾಗುತ್ತಲೇ ಇರುತ್ತದೆ.

ಕವಿ ಪರಿಚಯ,ಪದ್ಯಗಳು,ಭಾವಾರ್ಥ,ಟಿಪ್ಪಣಿ,ಮೂಲಕಥೆಗಳು ಅಂದರೆ ಕಾಮದಹನದ ಕಥೆ,ಹರಿಶ್ಚಂದ್ರನ‌ ಕಥೆ,ಬಲಿಚಕ್ರವರ್ತಿಯ ಕಥೆ,ಅಹಲ್ಯೆಯ ಕಥೆ..ಹೀಗೆ ವಿನ್ಯಾಸಗೊಳಿಸಿ,ಸಿದ್ದಪಡಿಸಿರುವ ಸಂಪಾದಕರ ಶ್ರಮ ಮತ್ತು ಪಾಂಡಿತ್ಯಕ್ಕೆ ನಮಿಸಲೇಬೇಕಾಗುತ್ತದೆ.ಇಂತಹ ಪುಸ್ತಕವನ್ನು ಪುನರ್ ಮುದ್ರಣ ಮಾಡಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೆಲಸ ಶ್ಲಾಘನೀಯ. ಆದರೆ,ಪುನರ್ ಮುದ್ರಣದಲ್ಲಿ ಸಂಪಾದಕರು ಯಾರು ಎಂದೇ‌ ತಿಳಿಯುತ್ತಿಲ್ಲಾ.ಅದನ್ನು ಇರುವುದು ಸಮಂಜಸವಲ್ಲ.

” ನೀತಿಯ ಕಟುತ್ವದ ಕಹಿ ಗುಳಿಗೆಗಳನ್ನು ಕಥೆಯ ಜೇನಿನಲಿ ಅದ್ದಿ ಉಣಿಸುವ
ಆರೋಗ್ಯಕರ ನುಡಿಮುತ್ತುಗಳು ” ಈ ಶತಕದ ಪದ್ಯಗಳು.

*********


ಡಾ.ಸುಜಾತಾ ಲಕ್ಷೀಪುರ

3 thoughts on “ಪುಸ್ತಕ ಸಂಗಾತಿ

  1. ಬಹಳ ಸಮಗ್ರ ಮತ್ತು‌ಪರಿಪೂರ್ಣ ಪರಿಚಯ ಮಾಡಿದಗದಿರಿ ಅಭಿನಂದನೆ

Leave a Reply

Back To Top