‘ಎಲ್ಲಾ ನೋವ ಮರೆತು…’ ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರ ಓರೆನೋಟ

ಅದೊಂದು ಬಹುದೊಡ್ಡ ಮದುವೆ ಸಮಾರಂಭ.  ಬಣ್ಣ ಬಣ್ಣದ ವಿದ್ಯುತ್ ದೀಪಗಳು. ಜಗಮಗಿಸುವ ಬೆಳಕು.  ಇಂತಹ ಕಲ್ಯಾಣ ಮಂಟಪದಲ್ಲಿ ಎಲ್ಲರೂ ಸಂತೋಷದಿಂದ ಸಂಭ್ರಮಿಸುತ್ತಿದ್ದಾರೆ. ವಧು-ವರರು ವೇದಿಕೆಯ ಮೇಲೆ ಬಂದಿರುವ ಅತಿಥಿಗಳನ್ನು ಸ್ವಾಗತಿಸುತ್ತಾ ಶುಭ ಹಾರೈಕೆಗಳನ್ನು ಸ್ವೀಕರಿಸುತ್ತಿದ್ದಾರೆ.

 ಆದರೆ..

 ಅದೇ ಕಲ್ಯಾಣ ಮಂಟಪದ ಹಿಂದಿನ ಕೊಠಡಿಯ ಮೂಲೆಯೊಂದರಲ್ಲಿ ಕತ್ತಲು..!  ಜೀವವೊಂದು ಅಳುತ್ತಾ.. ಏನೋ ನೆನಪು ಮಾಡಿಕೊಂಡು ಬಿಕ್ಕಳಿಸುತ್ತಿದೆ.  

ಈ ಮೇಲಿನ ಎರಡು ಸನ್ನಿವೇಶಗಳು ನಮ್ಮ ಬದುಕಿನಲ್ಲಿ ಆಗಾಗ ನೋಡುತ್ತಿರುತ್ತೇವೆ. ಹೌದು ಬದುಕೇ ಹಾಗೆ.. ಸಂಭ್ರಮದಲ್ಲಿಯೂ ಸಂಕಟಪಡುವ ಅನೇಕ ಜೀವಗಳು ನಮ್ಮ ನಡುವೆ ಇರುತ್ತವೆ.  ಯಾರನ್ನೋ ನೆನಪಿಸಿಕೊಂಡು…ಹೃದಯ ಹಗುರ ಮಾಡಿಕೊಳ್ಳುವ ಕೃತಜ್ಞತೆಯ ಕಣ್ಣೀರುಗಳು ಧಾರೆಯಾಗಿ ಸುರಿಯುತ್ತಿರುತ್ತವೆ.

 ಮಗನ ಮದುವೆಯನ್ನೋ ಅಥವಾ ಮಗಳ ಮದುವೆಯನ್ನೋ ಅಥವಾ ತಂಗಿಯ ಮದುವೆಯನ್ನೋ ಮಾಡುವ ಸಂದರ್ಭದಲ್ಲಿ ಇಂತಹ ಕಣ್ಣೀರಿಗೆ ಕಾರಣವೆನೆಂದು ಹುಡುಕುತ್ತಾ ಹೋದಾಗ ಇಡೀ  ಬದುಕನ್ನು ಆ ಕುಟುಂಬಕ್ಕಾಗಿ ಹಗಲಿರುಳು ದುಡಿದು, ಬೆವರು ಸುರಿಸುತ್ತಾ, ತನ್ನ ಸಂತೋಷವನ್ನು ಮರೆತು, ಕುಟುಂಬದ ಸಂತೋಷಕ್ಕಾಗಿ ಪರಿತಪಿಸುತ್ತಿದ್ದ ಜೀವವೊಂದು ಮದುವೆಯ ಸಂಭ್ರಮದ ಮುಂಚಿತವಾಗಿ ಒಂದೇರಡು ತಿಂಗಳ ಹಿಂದೆ ಅಗಲಿಹೋದ ಬಗ್ಗೆ ತಿಳಿದು, ಹೃದಯ ವಿಲವಿಲನೆ ಒದ್ದಾಡುತ್ತದೆ.  

“ಇನಷ್ಟು ದಿನ  ಅವರು ಇರಬೇಕಾಗಿತ್ತು. ಈ ಸಂಭ್ರಮವನ್ನು ಕಣ್ತುಂಬ ಕಾಣಬೇಕಾಗಿತ್ತು.  ಈ ಸಂಭ್ರಮಕ್ಕೆ ಅವರೇ ಕಾರಣ, ಅವರೇ ಇಲ್ಲದ ಸಂಭ್ರಮವನ್ನು ನಾನು ಹೇಗೆ ಸ್ವೀಕರಿಸಲಿ..?” ಎನ್ನುವ ಕೃತಜ್ಞತಾ ಮನೋಭಾವದ ಕರುಳ ಸಂಬಂಧಗಳು ಮಮ್ಮಲ ಮರುಗುತ್ತವೆ.

 ವಧು-ವರರ ತಾಯಿಯೋ ಅಥವಾ ತಂದೆಯೋ ಅಥವಾ ಅಜ್ಜಿಯೋ ಸದಾ ತಮ್ಮವರನ್ನು ಕಳೆದುಕೊಂಡ ಸಂಕಟದ ಸನ್ನಿವೇಶವನ್ನು ನೆನಪಿಸಿಕೊಂಡು ಕಣ್ಣೀರು ಸುರಿಸುತ್ತಾರೆ. ಸಮಾಜ ಹಾಗು ಊರಿನವರ ಹಿತದ ಮಾತುಗಳಿಗೆ ಕಿವಿಗೊಟ್ಟು,

“ವರ್ಷ ತುಂಬುವುದರೊಳಗ ಮನೆಯಲ್ಲಿ ಯಾವುದಾದರೂ ಒಂದು ಶುಭಕಾರಣ ಮಾಡಬೇಕು..”
ಎಂಬ ಮಾತಿಗೆ ಕಟ್ಟುಬಿದ್ದು, ಮಗನ ಮದುವೆಯನ್ನೋ, ಮಗಳ ಮದುವೆಯನ್ನೋ ಸಿದ್ಧತೆ ಮಾಡಿಕೊಳ್ಳುತ್ತಾರೆ. ಆರ್ಥಿಕ ಸಂಕಷ್ಟಗಳ ನಡುವೆ ಮನೆಯ ಜವಾಬ್ದಾರಿ ನಿರ್ವಹಿಸುತ್ತಿದ್ದ ಯಜಮಾನನನ್ನು ಕಳೆದುಕೊಂಡ ದುಃಖ ಒಂದು ಕಡೆಯಾದರೆ, ಮದುವೆಯೋ ಅಥವಾ ಯಾವುದಾದರೂ ಒಂದು ನಿಶ್ಚಿತಾರ್ಥ ಕಾರ್ಯಕ್ರಮಕ್ಕೋ ಹಣವನ್ನು ಹೊಂದಿಸುವ, ಈ ಹಿಂದೆ ಯಾವುದೋ ಕಾರಣಕ್ಕೆ ಜಗಳವಾಡಿ ಮನಸ್ತಾಪ ಮಾಡಿಕೊಂಡ ಬಂಧುಗಳನ್ನು ಕೂಡಿಸುವ, ಅಲ್ಲದೆ ಮಗನಿಗೆ ವಧುವನ್ನೋ ಇಲ್ಲವೆ ಮಗಳಿಗೆ ವರನನ್ನೋ  ಹುಡುಕುವ ಜವಬ್ದಾರಿ ಬೇರೆ. ಈ ಅನೇಕ ಸಮಸ್ಯೆಗಳ ನಡುವೆ ವಿಲಿವಿಲಿ ಒದ್ದಾಡು ಜೀವವು ಹಿಂಡಿಹಿಪ್ಪೆಯಾಗಿಬಿಟ್ಟಿರುತ್ತದೆ.  

ಇಂತಹ ಸಮಯದಲ್ಲಿಯೇ ಅವರು ನೆನಪಾಗುವುದು..! ಹೌದಲ್ಲ ಇಡೀ ಬದುಕಿನದ್ದಕ್ಕೂ ತನಗೆ ತನ್ನ ಸುಖಕ್ಕಾಗಿ ಏನು ಮಾಡದ ಜೀವವನ್ನು ಹೀಗೆ ನಮ್ಮಿಂದ ದೂರವಾಯಿತಲ್ಲ. ಮಕ್ಕಳಿಂದಲಾದರೂ ಸಂತೋಷ, ಸಂಭ್ರಮಪಡಬೇಕಾದ ಕೊನೆಗಾಲದಲ್ಲಿ ವಿಧಿಯ ಕ್ರೂರದಾಟಕ್ಕೆ ತಮ್ಮಿಂದ ದೂರಾದವರನ್ನು ನೆನಪಿಸಿಕೊಂಡು, ಮನದ ಮೂಲೆಯಲ್ಲಿ ಅಳುತ್ತಿರುವುದು ಸರ್ವೇ ಸಾಮಾನ್ಯ.

ನಿಜ,  ಪ್ರತಿಯೊಬ್ಬರ ಬದುಕು ಬಹುತೇಕವಾಗಿ ತನಗಾಗಿ ಏನನ್ನು ಮಾಡಿಕೊಳ್ಳದೆ, ಕುಟುಂಬದ ಸದಸ್ಯರಿಗಾಗಿ, ಮಕ್ಕಳಿಗಾಗಿ, ಸಹೋದರರಿಗಾಗಿ ದುಡಿದು ದುಡಿದು ಗಳಿಸಿದ ಬೆವರಿನ ಪ್ರತಿಫಲವನ್ನು ತಾವು ಸುಖವಾಗಿ ಉಣ್ಣಬೇಕಾದ ಬದುಕಿನ ಮುಸ್ಸಂಜೆಯಲ್ಲಿ ಆರೋಗ್ಯ ಕೈಕೊಟ್ಟುಬಿಡುತ್ತದೆ.  ಹೀಗೇ ಜಗತ್ತಿನಿಂದ ದೂರವಾಗುವ ನಿರ್ದಯಿ ಪರಿಸ್ಥಿತಿ ಯಾರಿಗೂ ಬರಬಾರದು.  ಪ್ರತಿಯೊಬ್ಬರ ಬದುಕು ತುಂಬು ಬದುಕಿನಿಂದ ಬದುಕಬೇಕು. ಮದುವೆಯ ಸಂಭ್ರಮದಲ್ಲಿಯೋ ಅಥವಾ ಇನ್ಯಾವುದೋ ಸಡಗರದಲ್ಲಿಯೋ ಅಂತಹವರನ್ನು ನೆನಪಿಸಿಕೊಳ್ಳುವುದು ಮಡದಿಯಾದರೆ ಗಂಡನನ್ನು :  ಗಂಡನಾದರೇ ಮಡದಿಯನ್ನು ನೆನಪಿಸಿಕೊಂಡು ಬಿಕ್ಕಿಬಿಕ್ಕಿ ಅಳುತ್ತಾರೆ.  ಆ ನೋವು ಇನ್ನೊಬ್ಬರಿಗೆ ಗೊತ್ತಾಗದಂತೆ, ಸಾಧ್ಯವಾದಷ್ಟು ಸಂಭ್ರಮದ ಮರೆಯಲ್ಲಿಯೇ ನಿಲ್ಲಲು ಬಯಸುತ್ತಾರೆ.

“ಅವರಿದ್ದಾಗ ಯಾವ ಬಂಧುಗಳು ಮನಸ್ತಾಪ ಮಾಡಿಕೊಂಡಿದ್ದರೋ ಅಂತಹ ಬಂಧುಗಳು ಸಂಭ್ರಮದ ಕಾರ್ಯಕ್ರಮಕ್ಕೆ ಬಂದಾಗ ಅವರನ್ನು ಕಂಡು, ಉಕ್ಕಿ ಬರುವ ದುಃಖವನ್ನು ಬಿಕ್ಕಿ ಬಿಕ್ಕಿ ಅಳುತ್ತಾ ಕಣ್ಣಿರಗೆರೆಯುವ ಜೀವವು, ನಗು ನಗುತ್ತಲೇ ಅವರನ್ನು ಸ್ವಾಗತಿಸುತ್ತದೆ. ಪ್ರತಿಯೊಬ್ಬರ ಬದುಕು ಕೂಡ ‘ಎಲ್ಲಾ ನೋವ ಮರೆತು ಬದುಕಬೇಕಾಗಿದೆ’. ನಾವು ದು:ಖದಲ್ಲಿಯೇ ಮುಳುಗಿ ಬದುಕನ್ನು ದುಃಖದ ಸಾಗರವನ್ನು ಮಾಡಲು ಸಾಧ್ಯವಿಲ್ಲವೆಂಬ ವಾಸ್ತವ ಸತ್ಯ ಗೊತ್ತಿರಬೇಕು.  ಅಲ್ಲದೆ ಆ ದುಃಖವನ್ನು ಮರೆತಿರಲು ಕೂಡ ಆಗುವುದಿಲ್ಲ.  ‘ಕಾಲ ಎಲ್ಲದಕ್ಕೂ ಮದ್ದು’ ಎಲ್ಲ ನೋವ ಮರೆತು ಹೊಸ ಬದುಕಿಗೆ ಹೆಜ್ಜೆ ಹಾಕುವ ಕ್ಷಣಗಳು ಎಲ್ಲರದಾಗಬೇಕು.  ನಾವು ಯಾವುದಾದರೂ ಅಂತಹ ಸಂಭ್ರಮದ ಮದುವೆಗೋ, ಇನ್ನಿತರ ಕಾರ್ಯಕ್ರಮಗಳಿಗೋ ಹೋದಾಗ ದುಃಖಿಸುವ ಜೀವಗಳಿಗೆ ಸಾಂತ್ವನದ ನಾಲ್ಕು ಮಾತುಗಳನ್ನು ಹೇಳಿ, ಪ್ರೀತಿಯಿಂದ ಹರಸಿ ಬರೋಣ. ಪ್ರೀತಿಯಿಂದಲೇ ಪ್ರೀತಿಯ ಬಂಧುತ್ವವನ್ನು ಬೆಸೆಯಲು ಸಾಧ್ಯ. ಎಲ್ಲರೂ ನೋವ ಮರೆತು ಬದುಕಬೇಕೆನ್ನುವ ಬಾಳು ನಮ್ಮದಾಗಲಿ ಎಂದು ಹಾರೈಸಬಲ್ಲೆ


One thought on “‘ಎಲ್ಲಾ ನೋವ ಮರೆತು…’ ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರ ಓರೆನೋಟ

Leave a Reply

Back To Top