‘ಭೂಮಿ ಮೇಲೆ ಕೆಡಿಸೋಕೆ ಇನ್ನೆಲ್ಲಿದೆ ಜಾಗ …?’ಸುಧಾ ಹಡಿನಬಾಳ ಅವರ ಲೇಖನ

ಮುಂಜಾನೆದ್ದು ನದಿ ತೀರ, ಸಮುದ್ರ ತೀರ,  ಕಾಲು ದಾರಿ , ಹೈವೇ ರಸ್ತೆಗಳು ಹೀಗೆ   ಎಲ್ಲೆಂದರಲ್ಲಿ  ವಾಕಿಂಗ್ ಗೆ ಅಂತ ಹೊರಟರೆ  ಅಲ್ಲೆಲ್ಲಾ  ಕಣ್ಣಿಗೆ ರಾಚುವಂತೆ ಬಿದ್ದಿರೋ ಪ್ಲಾಸ್ಟಿಕ್ ರಾಶಿ,  ತಿಂದು ಕುಡಿದು   ಬಿಸಾಡಿದ ಗಾಜಿನ ಬಾಟಲಿಗಳ ರಾಶಿ ರಾಶಿ.!! ಮುಂಜಾನೆಯ ಮೊದಲ  ಮಾನಸಿಕ ಕಿರಿಕಿರಿ ಮಾಡಿಕೊಳ್ಳುವವರಿಗೆ… ಹಲವರಿಗೆ ಇವೆಲ್ಲ ನಗಣ್ಯ, ಅವರಿಗೆ ಇದೆಲ್ಲಾ ‌ಸಂಬಂಧವಿಲ್ಲದ  ವಿಷಯ.. ಎಷ್ಟು ಅಂತ ಭೂಮಿತಾಯಿ ಸಹಿಸಿಕೊಳ್ಳೋದಕ್ಕೆ ಸಾಧ್ಯ? ನಿಯಂತ್ರಣವೇ ಇಲ್ಲದಷ್ಟು, ಕೈ ತಪ್ಪಿ ಹೋದಷ್ಟು ಪ್ರಕೃತಿ ಮಾಲಿನ್ಯಗೊಳ್ಳುತ್ತಿದೆ .ಇದನ್ನೆಲ್ಲಾ ತಡೆಯ ಬೇಕಾದವರು ಯಾರು? ಇದನ್ನೆಲ್ಲಾ ಕಲುಷಿತಗೊಳಿಸುತ್ತಿರುವವರು ಯಾರು? ಈ ಪರಿಯಲ್ಲಿ ಕಸ ಪ್ಲಾಸ್ಟಿಕ್ ಎಸೆದು  ಇಂಚಿಂಚು ಭೂಮಿಯನ್ನು,  ನದಿ ಕೆರೆ ಕೊಳ ಸಮುದ್ರಗಳನ್ನು ಕಸದ ತೊಟ್ಟಿಯನ್ನಾಗಿ ಮಾಡುತ್ತಿರುವುದರ ಪರಿಣಾಮ ಏನು? ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕಾದ ಅತಿ ಜರೂರಾದ ಪ್ರಶ್ನೆಗಳು!

 ಸಂಜೆ ಹೊತ್ತು  ಆಗ ತಾನೇ ಹೈಸ್ಕೂಲು ಬಿಟ್ಟಿರುವ  ಹೊತ್ತು.; ರಸ್ತೆ ಸುತ್ತಮುತ್ತ ಶಾಲೆ ಮಕ್ಕಳದೇ ಹಾವಳಿ.   ಬಹುತೇಕ ಗಂಡು ಮಕ್ಕಳ ಕೈಯಲ್ಲಿ  ಒಂದೊಂದು ಪೆಪ್ಸಿ ಕೊಟ್ಟೆ, ಅದನ್ನ ಚೀಪ್ತ, ಪರಸ್ಪರ ಕಿತ್ತಾಡ್ತಾ, ಕೆಟ್ಟ ಪದಗಳಿಂದ  ಬೈದುಕೊಳ್ಳುತ್ತ, ಅಂಗಡಿ ಬಾಗಿಲಲ್ಲೇ ತಿಂದ ಪ್ಲಾಸ್ಟಿಕ್, ಬಾಟಲ್ ಗಳನ್ನು ಎಸೆದು ಅಂಗಡಿ ಮಾಲೀಕರಿಂದ ಬೈಸಿಕೊಳ್ಳುವ ಹುಡುಗರನ್ನ ನೋಡಿದಾಗ ಮನಸ್ಸಿಗೆ  ಬಲೂನ್ ಗೆ ಸೂಜಿಯಿಂದ ಚುಚ್ಚಿದಷ್ಟೇ ನಿರಾಶೆಯಾಗುವುದು!  ದಿನವಿಡೀ ಮೌಲ್ಯ ಶಿಕ್ಷಣ ,ಭಾಷೆ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳ  ಶಿಕ್ಷಣ ಪಡೆದು ಸಂಸ್ಥೆಯಿಂದ ಹೊರ ಬಿದ್ದೊಡನೆ ಈ ಪರಿ  ಪ್ರಾಣಿಗಳಂತೆ ವರ್ತಿಸುವ ವಿದ್ಯಾರ್ಥಿ ವೃಂದವನ್ನು ನೋಡಿದಾಗ ತುಂಬಾ ಆತಂಕ, ಕಿರಿಕಿರಿ, ವಿಷಾದ ಒಟ್ಟೊಟ್ಟಿಗೆ!  ಯಾಕೆ   ಈ ರೀತಿಯ  ನಡತೆ ಸರಿಯಲ್ಲ ಎಂದು ನಮ್ಮ  ಮಕ್ಕಳಿಗೆ ಅನಿಸುತ್ತಿಲ್ಲ? ಶಿಕ್ಷಣ ಬದುಕಿನ ಅವಿಭಾಜ್ಯ ಅಂಗವಾಗಿ ನಮ್ಮ ಮಕ್ಕಳಿಗೆ  ಏಕೆ ತೋರುತ್ತಿಲ್ಲ?  ಯಾಕೆ ವರ್ಗ ಕೋಣೆಯ ಬೋಧನೆಯನ್ನು ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಲು ಇಚ್ಚಿಸುವುದಿಲ್ಲ ? ??

ದೋಷ ಮಕ್ಕಳಲ್ಲೊಂದೇ  ಇರಲಿಕಿಲ್ಲ  ಶಿಕ್ಷಣ ವಾಣಿಜ್ಯೀಕರಣ ಗೊಳ್ಳುತ್ತಿದೆ.. ಶಿಕ್ಷಣ ಬದುಕಿನ  ಅವಿಭಾಜ್ಯ ಅಂಗ ಎಂದು ಬಿಂಬಿಸುವಲ್ಲಿ ನಾವು ಮೊದಲಿನಿಂದಲೂ ಸೋತಿದ್ದೇವೆ.. ಅದು ಪರೀಕ್ಷೆ, ಅಂಕ ಗಳಿಕೆ, ನೌಕರಿ  ಗಿಟ್ಟಿಸುವ ಸಾಧನ ಎಂಬುದು ನಮ್ಮ ಧೋರಣೆ.ದೊಡ್ಡವರೇನಿಸಿಕೊಂಡವರಿಗೆ  ಇಚ್ಛಾ ಶಕ್ತಿ, ಬದ್ಧತೆ ಕೊರತೆ ಇದೆ, ನಮ್ಮ ಮಕ್ಕಳಿಗೆ ಅತ್ಯುತ್ತಮ ಮಾದರಿಗಳು ನೋಡಲು ಸಿಗುತ್ತಿಲ್ಲ ಅಥವಾ ಬಲು ಅಪರೂಪ .ಇದೊಂದು ಕಾರಣವಾದರೇ   ಪಠ್ಯಪುಸ್ತಕದಲ್ಲಿ ಬಂದಿರುವ ಅಂಶಗಳು  ಪರೀಕ್ಷೆ ಮುಗಿಸಿದೊಡನೆ ಎಲ್ಲವೂ ಮುಗಿದಂತೆ . ಇದು ಮಕ್ಕಳ, ಪಾಲಕರ ಧೋರಣೆ.

ಇನ್ನು   ದೊಡ್ಡವರಿನಿಸಿಕೊಂಡವರು ಮಾಡುವ ಘನಂದಾರಿ ಕೆಲಸಗಳನ್ನು ನೋಡಿದರೆ ನಿಜಕ್ಕೂ ನಾಚಿಕೆಯಾಗಬೇಕು!  ರಸ್ತೆ ಬದಿಯಲ್ಲಿ ಗೂಡಂಗಡಿ , ಬೇಕರಿ, ಇನ್ನಿತರ ಅಂಗಡಿ ಮಾಡಿಕೊಂಡು ನಿತ್ಯದ ಬದುಕನ್ನು ಕಟ್ಟಿಕೊಂಡವರು ರಾತ್ರಿಯಾಗುತ್ತಿದ್ದಂತೆ  ಕಳ್ಳರಂತೆ ತಮ್ಮ ಅಂಗಡಿಯ ಸುತ್ತಮುತ್ತ ಸ್ವಚ್ಛಗೊಳಿಸಿ ಬಿದ್ದಿರುವ ಎಲ್ಲ ಬಗೆಯ ಕಸಗಳನ್ನು ಮೂಟೆ ಕಟ್ಟಿ ರಸ್ತೆ ಬದಿಯಲ್ಲಿ ಎಸೆದು ಹೋಗುವ   ನಿರ್ಲಜ್ಜ ಜನರನ್ನು ನೋಡುವಾಗ  ಹೇಸಿಗೆಯಾಗುತ್ತದೆ.ಬೆಳಗಾಗುತ್ತಲೆ  ನಾಯಿ ನರಿಗಳು ತಿಂಡಿ,  ಆಹಾರದ ವಾಸನೆಗಾಗಿ ಪ್ಲಾಸ್ಟಿಕ್ ಕಸದ ಪಟ್ಟಣವನ್ನು ಬಿಡಿಸಿ ರಸ್ತೆ ತುಂಬಾ ಬಿಸಾಡಿರುವುದನ್ನು ನೋಡಿದರೆ

ನಾವೇ ತಲೆತಗ್ಗಿಸಬೇಕಾಗಿದೆ .

ಇನ್ನು ತೀರ್ಥಯಾತ್ರೆ ,ಪ್ರವಾಸ  ಹೊರಡುವವರು ನದಿ ತೀರ ಸಮುದ್ರ ತೀರಗಳಲ್ಲಿ ಸ್ನಾನ ಮಾಡಿ ಎಲ್ಲ ಬಗೆಯ ಕೊಳೆ ,ಕಸ, ಸೋಪು ನೀರನ್ನು ನೀರಿನ ಮೂಲ ದೊಂದಿಗೆ ಸೇರಿಸುವುದರೊಂದಿಗೆ ಅತ್ಯಧಿಕ ಪ್ರಮಾಣದಲ್ಲಿ ನೀರಿನ ಮೂಲಗಳು ಕೊಳೆ ಆಗುತ್ತಿವೆ ; ಈ ರೀತಿಯಾಗಿ  ಹೆಚ್ಚುತ್ತಿರುವ ಜಲ ಮಾಲಿನ್ಯ, ಪರಿಸರ ಮಾಲಿನ್ಯ ಒಂದೆಡೆಯಾದರೆ ಅಧಿಕಾರದ ಅಮಲಿನಲ್ಲಿ ವಿಶ್ವವೇ ನಿಬ್ಬೆರಗಾಗಿ ನೋಡುವಂತೆ ಮಾಡುತ್ತಿರುವ ಜಾಗತಿಕ ನಾಯಕರ ವಿಕೃತ ವಿನಾಶಕಾರಿ ಯುದ್ಧೋತ್ಸಾಹ ಅತ್ಯಧಿಕ ಪ್ರಮಾಣದ ವಾಯುಮಾಲಿನ್ಯಕ್ಕೆ ಕಾರಣವಾಗಿದೆ. ಅತಿ ಬುದ್ಧಿವಂತ ಮಾನವ ಜೀವಿ

  ಶಿಕ್ಷಣ ಸಂಸ್ಕಾರ ಎಲ್ಲವನ್ನು ಪಡೆದ ನಾಗರಿಕ ಪ್ರಪಂಚದಲ್ಲಿ ಈ ಪರಿಯಲ್ಲಿ ವರ್ಷಗಟ್ಟಲೆಯಿಂದ ನಡೆಸುತ್ತಿರುವ ಬಾಂಬ್ ಸ್ಪೋಟ, ಮದ್ದು ಗುಂಡುಗಳ ಸುರಿಮಳೆಯಿಂದ ಅಮಾಯಕರ ಮಾರಣಹೋಮದೊಂದಿಗೆ ಜೀವ ಸಂಕುಲ, ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮ ಊಹಿಸಲಸಾಧ್ಯ !! ಯಾರೋ ಕೆಲವೇ ಕೆಲವು ಮಂದಿಯ ಇಂತಹ ಹೇಯ ಕೃತ್ಯವನ್ನು ಜಾಗತಿಕ ಮಟ್ಟದ ಯಾವೊಂದು ಉನ್ನತ ಸಂಸ್ಥೆಗೂ ನಿಯಂತ್ರಿಸಲಾಗದಿರುವುದು ಈ ಶತಮಾನದ ಅತಿ ದೊಡ್ಡ

 ದುರಂತವೇ ಆಗಿದೆ… ಮನುಷ್ಯ ಇತಿಹಾಸದಿಂದ ಪಾಠ ಕಲಿಯದಿದ್ದರೆ  ಇನ್ನೇನಾದೀತು ??

ಸ್ವಚ್ಛ ಸುಂದರ ಸಮೃದ್ಧ ಭೂ ಮಂಡಲವನ್ನು ಅದರ ಪಾಡಿಗೆ ಬಿಟ್ಟಿದ್ದರೆ ಮುಂದಿನ ಸಹಸ್ರ ಸಹಸ್ರ ತಲೆಮಾರುಗಳು ನೆಮ್ಮದಿಯಿಂದ ಬದುಕುಳಿಯಬಹುದಿತ್ತು; ಆದರೆ ಭೂಮಿಯ ಒಡಲನ್ನು ಬಗೆದು ಬರಡು ಮಾಡುತ್ತಿರುವ ಧನದಾಹಿಗಳು, ಅಭಿವೃದ್ಧಿಯ ಹೆಸರಲ್ಲಿ ಭೂಮಿಯನ್ನೇ ನಡುಗಿಸುತ್ತಿರುವ ಸಡಿಲಿಸುತ್ತಿರುವ ಅಧಿಕಾರಿಸ್ತರ ನಡೆ ಎಲ್ಲವೂ  ಪರಿಸರ  ನಾಶ , ಪ್ರಕೃತಿ ವಿಕೋಪಕ್ಕೆ  ನೇರ ಕಾರಣ.ನಮ್ಮ ಸಾವನ್ನು, ನಮ್ಮ ಕಂದಕವನ್ನು ನಾವೇ ತೋಡಿಕೊಳ್ಳುತ್ತಿದ್ದೇವೆ;  ಅದರಲ್ಲಿ ಬೀಳುವುದೊಂದೇ ನಮಗಿರುವ ದಾರಿ , ಇಂದು ಬೀಳುತ್ತಿರುವವರ ನೋಡಿ ನಾವು  ಕೊರಗುತ್ತೇವೆ.ನಾಳೆ ನಮ್ಮ  ಸರದಿಯೂ ಬರಬಹುದು  ಬರುತ್ತದೆ! ಭೂಮಿಯ ಮೇಲೆ ಮನುಷ್ಯನ ಹಸ್ತಕ್ಷೇಪ ಇಲ್ಲದ ನೆಲವೊಂದು ಇರಲಿಕ್ಕಿಲ್ಲ….ಯೋಚಿಸಬೇಕಿದೆ…


Leave a Reply

Back To Top