ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಗಜಲ್
ಬಾಳಿನಾ ಹಾದಿಯಲಿ ನೂರೆಂಟು ಕಗ್ಗಂಟು ಹೆಣೆದಿವೆ ಬೇಗಂ
ಜಂಜಡದ ಬದುಕಿನಲಿ ಎಷ್ಟೊಂದು ಕಷ್ಟಗಳು ಸುರಿದಿವೆ ಬೇಗಂ
ದೂರದಲಿ ಆಸೆಗಳ ಬೆಟ್ಟ ಕರೆದಿದೆ ಕೈಮಾಡಿ ಅಲ್ಲವೇ
ನೆಮ್ಮದಿಯ ಕಿರಣಗಳು ಮೆಲ್ಲನೆ ಸೂಸುತ ಹೊಳೆದಿವೆ ಬೇಗಂ
ಧಾವಂತದ ಓಡಾಟದಿ ನೋವು ಗಾಯಗಳು ಮರೆಯಲಿ ನರಳುತಿವೆ
ಕನಸುಗಳು ಎತ್ತರಕೆ ಹಾರಲಾಗದೆ ಧರೆಗೆ ಇಳಿದಿವೆ ಬೇಗಂ
ಸುಖದ ತುತ್ತು ಬಾಯಿಗೆ ಬರುವ ಮೊದಲೇ ಕೈಯಿಂದ ಜಾರಿತು
ಮನದಿ ಮೂಡಿದ ಭಾವಗಳು ಮುದುಡಿ ಅಳಿದಿವೆ ಬೇಗಂ
ವ್ಯಾಮೋಹದ ಬಲೆಯಲಿ ಬಂದಿ ಆಗಿದೆ ಜೀವ ಮೈಮರೆತು
ದಾಹದ ಪರದೆ ಹರಿಯಲು ಅರಿವಿನ ಕಂಗಳು ತೆರೆದಿವೆ ಬೇಗಂ
ಹಮೀದಾಬೇಗಂ ದೇಸಾಯಿ ಸಂಕೇಶ್ವರ
ನೋವಿನ ಗಜಲ್ ಭಾವಪೂರ್ಣವಾಗಿ ಮೂಡಿಬಂದಿದೆ.