ಪುಸ್ತಕ ಸಂಗಾತಿ
ಶೋಭಾ ನಾಗಭೂಷಣ
ಎಂ ಬಿ ಸಂತೋಷ್ ಅವರ ಕೃತಿ
‘ಭಾವ ಭೃಂಗದ ಮಧುರ ಗಾನವು’
ಜಗತ್ತು ನಿಂದಿರುವುದೇ ಜೀವಿಗಳ ಭಾವಲಹರಿಯ ಆನಂದದೊಳಗೆ. ಭಾವವು ಒಂದೇ ಬಗೆಯಲ್ಲಿ ಹೊರಹೊಮ್ಮುವುದಿಲ್ಲ. ಅದು ಸಂಗೀತವಾಗಿ, ನೃತ್ಯವಾಗಿ, ನಾಟಕವಾಗಿ, ಮಾತಾಗಿ ನವರಸಗಳ ಭಾವಗಳಲ್ಲಿ ಹೊರಹೊಮ್ಮುತ್ತವೆ. ಇಲ್ಲಿ ಭಾವವು ಅಕ್ಷರ ರೂಪದಲ್ಲಿ ಕಾವ್ಯ ಮಾಯವಾಗಿ ಹನಿಹನಿಯಾಗಿ ಹೆಣೆಯಲ್ಪಟ್ಟಿದೆ.
ಕರ್ನಾಟಕದ ಹೆಮ್ಮೆಯ ಖ್ಯಾತ ಸಾಹಿತಿಗಳಾದ ಶ್ರೀಯುತ ಎಂ ಬಿ ಸಂತೋಷ್ ಸರ್ ಅವರ ಭಾವ ಭೃಂಗದ ಮಧುರ ಗಾನವು ಸಹೃದಯನ ಎದೆಯಲ್ಲಿ ಝೇಂಕರಿಸುತ್ತದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.
ದೇವನೊಲುಮೆಯಿಂದ ದೊರೆತ ಪಿತೃ ಸಮಾನ ಗುರುಗಳಾದ ಸನ್ಮಾನ್ಯ ಶ್ರೀ ಎಂ ಬಿ ಸಂತೋಷ್ ಸರ್ ಅವರು ಕನ್ನಡ ನಾಡಿಗೆ, ಕನ್ನಡಾಂಬೆಗೆ ಭಕ್ತಿ ಭಾವದಿಂದ ಸಾಹಿತ್ಯದ ಹಣತೆಯನ್ನು ಹಚ್ಚಿ ಅವಳ ಸೇವೆ ಗೈಯುತ್ತಿರುವವರು.
ಮೈಸೂರಿನ ವೈಭವದ ಕಿರೀಟಕ್ಕೆ ತಮ್ಮದೊಂದು ಗರಿಯನ್ನು ಇರಿಸಿದವರು.
ಸಾಧಕ ಮನಗಳನ್ನು ಗುರುತಿಸಿ ಸಾಧನೆಯ ಏಳಿಗೆಗೆ ತಾವೊಂದು ಮೆಟ್ಟಿಲಾದವರು. ಕಿರಿಯ ಸಾಹಿತ್ಯಾಸಕ್ತರಿಗೆ ದೀವಟಿಗೆ ಹಿಡಿದು ದಾರಿತೋರುತ್ತಿರುವವರು. ಪುಟ್ಟ ಪ್ರತಿಭೆಗಳ ಬೆನ್ನು ತಟ್ಟಿ ಮುನ್ನಡೆಸುತ್ತಿರುವ ಮಾರ್ಗದರ್ಶಕರು. ನಿಸ್ವಾರ್ಥ ಹೃದಯಿ, ಕರುಣೆ – ಮಮತೆ ಇವರ ಸಹೋದರರು. ಹಸನ್ಮುಖಿಯಾಗಿ ಸಮಾಜಮುಖಿ ಕಾರ್ಯಗಳಿಗೆ ಹೆಸರುವಾಸಿಯಾದವರು. ಇಂತಹವರ ಸೇವೆಯು ಕನ್ನಡಾಂಬೆಗೆ ಪರ್ವವೆಂದೇ ಹೇಳಬಹುದು.
ಇವರು ರಚಿಸಿರುವ ಭಾವ ಬೃಂಗದ ಮಧುರ ಗಾನ ಹನಿಗವನ ಸಂಕಲನ ಕೃತಿಯು ಒಟ್ಟು 240 ಹನಿಗವನಗಳನ್ನು ಒಳಗೊಂಡಿದೆ. ಒಂದೊಂದು ಹನಿಗವನವು ಒಂದೊಂದು ಆಣಿಮುತ್ತುಗಳಂತೆ ಪೊಣಿಸಲ್ಪಟ್ಟಿವೆ.
ಈ ಕೃತಿಯ ಮುಖಪುಟವನ್ನು ಶೀರ್ಷಿಕೆಗೆ ತಕ್ಕ ಹಾಗೆ ಸುಂದರವಾಗಿ ಮೂಡಿಸಲಾಗಿದೆ. ಉದಯ ರವಿ ಮುದ್ರಣಾಲಯವು ಅಚ್ಚು ಮಾಡಿದೆ. ಡಿ ವಿ ಪಬ್ಲಿಕೇಷನ್ ನಿಂದ ಹೊರಬಂದಿರುವ ಸಂತೋಷ್ ಸರ್ ಅವರ 29ನೇ ಪುಸ್ತಕ ಇದಾಗಿದೆ.
ಕಾವ್ಯ ಎನ್ನುವುದೇ ಆಕರ್ಷಕವಾದದ್ದು. ಅದರಲ್ಲೂ ಹನಿಗವನಗಳು ಜನಸಾಮಾನ್ಯರ ನಾಲಿಗೆಯಲ್ಲಿ ಸುಲಭವಾಗಿ ನಲಿಯಲ್ಪಡುವಂತಹದ್ದು. ಈ ಹನಿಗವನಗಳ ಹಿನ್ನೆಲೆಯನ್ನು ನೋಡುವುದಾದರೆ,
ಹನಿಗವನಗಳು ಮೇಲ್ನೋಟಕ್ಕೆ ಚುಟುಕುಗಳಂತೆ ಕಂಡುಬಂದರೂ ಕೆಲವು ವಿಷಯಗಳಲ್ಲಿ ಭಿನ್ನವಾಗಿರುವುದನ್ನು ನಾವು ಗುರುತಿಸಬಹುದು. ಚುಟುಕುವಿನಲ್ಲಿ ಹನಿಗವನದ ಹಾಸ್ಯ ಪಂಚ್ ಗಳು ಭಾವಗಳು ಕಂಡುಬರುವುದಿಲ್ಲ.
ಕನ್ನಡ ನಾಡಿನ ಪ್ರಸಿದ್ಧ ಹನಿಗವನ ಹಾಸ್ಯ ಬರಹಗಾರರಾದ ದುಂಡಿರಾಜ್ ಅವರು ತಮ್ಮ ಹನಿಗವನ ಏನು? ಏಕೆ? ಹೇಗೆ? ಎಂಬ ಕೃತಿಯಲ್ಲಿ ಹನಿಗವನಗಳ ಬಗ್ಗೆ ತಿಳಿಸಿರುವ ವಿಷಯಗಳನ್ನು ನಾನಿಲ್ಲಿ ಪ್ರಸ್ತುತಪಡಿಸುತ್ತೇನೆ.
ಹನಿಗವನಗಳು ಮತ್ತು ಚುಟುಕುಗಳು ಇವೆರಡು ಚಿಕ್ಕ ಕವನಗಳೇ ಆದರೂ ಹನಿಗವನದಲ್ಲಿ ಇಂಗ್ಲಿಷ್ ಭಾಷೆಯ ‘Honey’ ಯೂ ಇದೆ. ಆದ್ದರಿಂದ ಜೇನಿನ ಸಿಹಿ ಮತ್ತು ಜೇನು ನೊಣದ ಕುಟುಕುವ ಸ್ವಭಾವ ಎರಡೂ ಇರುತ್ತದೆ. ಹನಿಗವನದಲ್ಲಿ ಇಂತಿಷ್ಟೇ ಸಾಲುಗಳಿರಬೇಕೆಂಬ ಕಟ್ಟುನಿಟ್ಟಾದ ನಿಯಮವಿಲ್ಲ ಎನ್ನುವುದಕ್ಕೆ ಒಂದು ಹನಿಗವನವೇ ಉದಾಹರಣೆಯಾಗಿದೆ.
ಹನಿಗವನ ಅಥವಾ ಮಿನಿ ಗವನ
ಮಿನಿಗವನಿನ ಹಾಗೆ
ಕುತೂಹಲ ಕೆರಳಿಸುವಲ್ಲಿ ಗಿಡ್ಡ
ಮಾನ ಮುಚ್ಚುವಷ್ಟು ಉದ್ದ!
ಹನಿಗವನಗಳಲ್ಲಿ ಏಕಪದಿ, ದ್ವಿಪದಿ, ತ್ರಿಪದಿ,ಚೌಪದಿಗಳು ಸಹ ಇದೆ.
ದ್ವಿಪದಿಗೆ ಉದಾಹರಣೆ :-
ಚಳಿಗಾಲ ಎಂದರೆ ವಿಂಟರು
ಬೇಸಿಗೆ ಬಂದರೆ ನೆಂಟರು
ಹನಿ ಕವನಗಳು ಸಾಮಾನ್ಯವಾಗಿ ಏಳು ಅಥವಾ ಎಂಟು ಸಾಲುಗಳನ್ನು ಮೀರುವುದಿಲ್ಲ. ಹನಿಗವನಗಳ ಪ್ರಧಾನ ಲಕ್ಷಣವೇ ಸಂಕ್ಷಿಪ್ತತೆ.
ಇಂಗ್ಲಿಷಿನ ಕೊಲೆರಿಜ್ ಎಂಬಾತ ವಾಕ್ಯದ ಕನ್ನಡ ಅನುವಾದ ಹೀಗಿದೆ.
ಹನಿಗವನ ಎಂದರೇನು? ಹಿಡಿಯಲ್ಲಿ ಇಡಿ
ಅದರ ದೇಹ ಚಿಕ್ಕದು, ಆತ್ಮ ಕಿಡಿ ನುಡಿ /
ಕನ್ನಡದಲ್ಲಿ ಹನಿಗವನಗಳ ಲಕ್ಷಣಗಳನ್ನು ಈ ರೀತಿ ಹೇಳಬಹುದು.
1. ಕವನಗಳ ಸಾಲುಗಳ ಸಂಖ್ಯೆ ಒಂದೇ ಆಗಿರುವುದಿಲ್ಲ.
2. ಕವನಗಳಲ್ಲಿ ಪ್ರಾಸ ಇರಬಹುದು ಅಥವಾ ಇಲ್ಲದಿರಬಹುದು.
3. ಕವಿತೆಗಳಲ್ಲಿ ಲಯ, ಛಂದಸ್ಸು ಇರಬಹುದು ಅಥವಾ ಇಲ್ಲದಿರಬಹುದು
4. ಮಾತ್ರೆ ಗಣಗಳಿಗೆ ಕಟ್ಟುಬೀಳದ ಮುಕ್ತ ಛಂದಸ್ಸು.
5. ಆಡುಮಾತಿಗೆ ಹತ್ತಿರವಾದ ಗದ್ಯ ಲಯ.
6. ಸಂವೇದನೆಯಲ್ಲಿ ಹೊಸತನ.
‘ಇಡಕುಂಗಬ್ಬ’, ‘ ಕಿರಿದರೋಳ್ ಪಿರಿದರ್ಥ ‘, ‘ ಬಿಂದುವಿನಲ್ಲಿ ಸಿಂಧು ‘, ‘ ಅಂಗೈಯಲ್ಲಿ ಆಕಾಶ’ ಎಂದೆಲ್ಲಾ ಇದರ ಆಕಾರಕ್ಕೆ ತಕ್ಕಂತೆ ಇದರ ಪ್ರಾಮುಖ್ಯತೆಯನ್ನು ಕೂಡ ಹೇಳಲಾಗಿದೆ.
ಬೆಂಜಮೀನ್ ಫ್ರಾಂಕ್ಲಿನ್ ರಚಿಸಿರುವ ಕಾವ್ಯದ ಕನ್ನಡಾನುವಾದ ಹೀಗಿದೆ
ಚಿಕ್ಕದಾದರೂ ಆಕಾರ
ಅರ್ಥದಲ್ಲಿ ಆ ಖಾರ
ನವ್ಯೋತ್ತರದ ಸಂದರ್ಭದಲ್ಲಿ ದೀರ್ಘವಾದ ಕಾವ್ಯ ಮಾತ್ರ ಶ್ರೇಷ್ಠ ಎಂಬ ಅಭಿಪ್ರಾಯವಿತ್ತು. ಆದರೆ ನಂತರದ ದಿನಗಳಲ್ಲಿ ಚಿಕ್ಕ ಕವನಗಳು ಹನಿಗವನಗಳ ಹೆಸರಿನಲ್ಲಿ ಚಾಲ್ತಿಗೆ ಬಂದವು. ಆದ್ದರಿಂದ ಇದೊಂದು ಪ್ರತ್ಯೇಕ ಕಾವ್ಯ ಪ್ರಕಾರ ಎಂದು ಭಾವಿಸಲಾಗಿದೆ.
ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶದಲ್ಲಿ ಸಿಕ್ಕ ಮಾಹಿತಿಯ ಪ್ರಕಾರ ಹೊಸಗನ್ನಡದಲ್ಲಿ ಕಿರು ಪದ್ಯಗಳನ್ನು ಆರಂಭಿಸಿದ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ.
ನಂತರದ ವರ್ಷಗಳಲ್ಲಿ ತೀ.ನಂ.ಶ್ರೀ,ಡಿ.ವಿ.ಜಿ, ಜಿ.ಪಿ ರಾಜರತ್ನಂ, ದಿನಕರ ದೇಸಾಯಿ ಎಸ್.ವಿ.ಪಿ,ವಿ.ಜಿ.ಭಟ್ಟ. ಎಂ. ಅಕ್ಬರ ಅಲಿ, ಶ್ರೀನಿವಾಸ ತೂಪಖಾನೆ. ಎಚ್ಎಸ್ ಬಿಳಗಿರಿ. ಗುಂಡ್ಮಿ ಚಂದ್ರಶೇಖರ ಐತಾಳ, ಇನ್ನೂ ಮುಂತಾದವರು ಹನಿಗಮನಗಳಿಗೆ ಭದ್ರವಾದ ಬುನಾದಿಯನ್ನು ನಿರ್ಮಿಸಿದ್ದಾರೆ.
ಇಂತಹ ಬುನಾದಿಯ ಮೇಲೆ ಭವ್ಯ ಮಹಲನ್ನು ಕಟ್ಟಿಸಿದ ಕೀರ್ತಿ ಹಲವಾರು ಕವಿಗಳದ್ದು. ಅಂತಹವರಲ್ಲಿ ಒಬ್ಬರು ಶ್ರೀ ಎಂ ಬಿ ಸಂತೋಷ್ ಅವರು ಒಬ್ಬರು. ಇವರು ರಚಿಸಿರುವಂತಹ ಭಾವಭೃಂಗದ ಮಧುರ ಗಾನ ಕೃತಿಯಲ್ಲಿ ಹನಿಗವನಗಳು ಸಲೀಲದಂತಹ ಕವನದ ಆಸ್ವಾದವನ್ನು ಹನಿ ಹನಿಯಾಗಿ ಸಾಹಿತ್ಯದ ಬಟ್ಟಲಿನಲ್ಲಿ ಹಿಡಿದುಕೊಡುತ್ತದೆ.
ಅಮ್ಮ ಎನ್ನುವ ವಿಷಯವನ್ನು ಏರಿಸಿಕೊಂಡು ಹಲವು ಹನಿಗವನಗಳು ಇಲ್ಲಿ ರಚನೆಯಾಗಿವೆ
ಅಮ್ಮನಿದ್ದರೆ ಬದುಕಿಗೆ
ಕತ್ತಲು ಕವಿಯುವುದಿಲ್ಲ
ಕಷ್ಟಗಳು ಹೊಸ್ತಿಲು ದಾಟಿ
ಒಳಗೆ ಬರುವುದೇ ಇಲ್ಲ
ಎನ್ನುವ ಹನಿಗವನವು ತಾಯಿಯ ಮಹತ್ವವನ್ನು ತಿಳಿಸುವ ಹನಿಗವನವಾಗಿದೆ. ನಮ್ಮ ಸುತ್ತಮುತ್ತ ನಮ್ಮ ಜೊತೆಗೆ ಹಲವಾರು ಜನರಿರುತ್ತಾರೆ ಲಕ್ಷಾಂತರ ಜನರು ಸ್ನೇಹಿತರು ಬಂಧುಗಳು ಇದ್ದರೂ ಸಹ ಅವರ್ಯಾರು ತಾಯಿಗೆ ಸಮನಾಗಿರಲು ಸಾಧ್ಯವಿಲ್ಲ.
ತಾಯಿಯು ಭಾಸ್ಕರನಂತೆ ಅವನು ಇರುವಲ್ಲಿ ಅಂಧಕಾರಕ್ಕೆ ಎಡೆ ಇಲ್ಲ
ತಾಯಿ ಕಷ್ಟಗಳು ಮಗುವಿನಡೆಗೆ ಬಾರದಂತೆ ಕಷ್ಟದ ಬಾಣಗಳನ್ನು ತನ್ನೆದೆಗೆ ನಾಟಿಸಿಕೊಂಡು ಮಗುವನ್ನು ಕಾಪಿಡುತ್ತಾಳೆ. ಈ ಭಾವವು ಈ ಹನಿಗವನದಲ್ಲಿ ವ್ಯಕ್ತವಾಗಿದ್ದು ಅಮ್ಮನ ಪ್ರೀತಿ ಮರೆತೆಗೆ ಯಾವ ರೀತಿಯಲ್ಲಿಯೂ ಕೂಡ ಬೆಲೆ ಕಟ್ಟಲಾಗುವುದಿಲ್ಲ ಎನ್ನುವುದನ್ನು ತಿಳಿಸುತ್ತದೆ.
ಅಂತಹದೇ ಅದ್ಭುತ ಭಾವವನ್ನು ಒಳಗೊಂಡ ಮತ್ತೊಂದು ಹನಿಗವನ
ಅಮ್ಮನ ಕೈತುತ್ತಿನಲ್ಲಿ
ಅಮೃತವಿದೆ
ಅವಳ ಪ್ರೀತಿಯಲ್ಲಿ
ನಿಜ ಮಕ್ಕಳ
ಭವಿಷ್ಯವೇ ಅಡಗಿದೆ
ಎನ್ನುವ ಮತ್ತೊಂದು ಕವನ ತಾಯಿಯ ಅಮೃತದೋಪಾದಿಯ ಪ್ರೀತಿಯನ್ನು ಸಾರುತ್ತದೆ. ಒಂದಕ್ಕೊಂದು ಅದ್ಭುತವಾದ ಹನಿಗವನಗಳು ಅಮ್ಮ ಎನ್ನುವ ಶೀರ್ಷಿಕೆ ಹೇಳಿ ಮೂಡಿ ಬಂದಿದೆ. ಅಂತಹದೇ ಮತ್ತೊಂದು ಕವನ
ಕವಿತೆ ಬರೆಯಲು
ವಸ್ತು ಹುಡುಕುತ್ತಿದ್ದೆ
ಎದುರಿಗೆ
ಅಮ್ಮ ಬಂದಳು!
ಇದೊಂದು ಶ್ರೇಷ್ಠವಾದ ಪರಿಕಲ್ಪನೆ ಎಂದೇ ಹೇಳಬಹುದು. ತಾಯಿಯನ್ನು ವರ್ಣಿಸದ ಕವಿಯೇ ಇಲ್ಲ. ಕವಿತೆಯ ವಸ್ತು ತಾಯಿಯಾದಾಗ ವರ್ಣಿಸಲಸದಳ.
ಆ ಭಾವ ಆಕಾಶ ಭೂಮಿಯ ವಿಸ್ತಾರ ಎಂದೇ ಹೇಳಬಹುದು.
ಹಾಗೆಯೇ ತಾಯಿಯನ್ನು ವರ್ಣಿಸಿದಷ್ಟೇ ವಿಶಾಲ ಹೃದಯದಿಂದ ತಮ್ಮ ಬಾಳ ಸಂಗಾತಿಯನ್ನು ಕುರಿತಂತೆಯೂ ಸಹ ಈ ಹನಿಗವನಗಳಲ್ಲಿ ಭಾವವೇದ್ಯವಾಗಿದೆ.
ಮಡದಿ
ಇಲ್ಲದ ಬಾಳು
ಬರಿ ಗೋಳು
ಈ ಹನಿಗವನದ ಮೂಲಕ ತಮ್ಮ ಮಡದಿಗೆ ತಮ್ಮ ಜೀವನದಲ್ಲಿ ಎಷ್ಟು ಮಹತ್ವವನ್ನು ನೀಡಿದ್ದಾರೆ ಎನ್ನುವುದನ್ನು ನೋಡಬಹುದು. ಇದರ ಮೂಲಕ ಹೆಂಡತಿ ಒಬ್ಬಳು ಮನೆಯೊಳಗಿದ್ದರೆ ನಾನು ಒಬ್ಬ ಸಿಪಾಯಿ ಎಂಬ ಜನಪ್ರಿಯ ಗೀತೆ ನೆನಪಾಗುತ್ತದೆ.
ಬಾಳ ಸಂಗಾತಿಯನ್ನು
ಕಣ್ಣಲ್ಲಿ ಇಟ್ಟುಕೊಳ್ಳಬೇಡಿ
ಕಾರಣ ಕಣ್ಣೀರಿನ ಜೊತೆ
ಜಾರಿ ಹೋಗುತ್ತಾಳೆ
ಹೃದಯದಲ್ಲಿ ಬಚ್ಚಿಟ್ಟುಕೊಳ್ಳಿ
ಎನ್ನುವ ಹನಿ ಕವನವು 39 ವರ್ಷಗಳ ಸಾರ್ಥಕ ದಾಂಪತ್ಯದ ಸವಿಯನ್ನು ಹೊಂದಿರುವ ಸಂತೋಷ್ ಸರ್ ಅವರ ಅನುಭವವನ್ನು ತಿಳಿಸುತ್ತದೆ.
ಇಂದು ಮದುವೆ ನಾಳೆ ವಿಚ್ಛೇದನ ಎನ್ನುವಷ್ಟು ವೇಗದಲ್ಲಿರುವ ಯುವ ಜನರಿಗೆ ತಮ್ಮ ಅನುಭವದ ಮೂಲಕ ತಮ್ಮ ಯಶಸ್ವಿ ಜೀವನದ ನಿದರ್ಶನದೊಂದಿಗೆ ಮಾದರಿಯಾಗಿದ್ದಾರೆ. ಇಂತಹ ಹಲವು ಹನಿಗವನಗಳು ಇದರ ಭಾವ ಭೃಂಗದ ಗಾನದಲ್ಲಿ ಮೂಡಿಬಂದಿದೆ ಹಲವಾರು ವಸ್ತು ವಿಷಯಗಳನ್ನು ಒಳಗೊಂಡಿರುವ ಹನಿಗವನಗಳು ಇಲ್ಲಿವೆ.
ಜೇಬಿನ ತುಂಬಾ
ಹಣವಿದ್ದಾಗ
ಇಲ್ಲಸಲ್ಲದ ಚೆಲ್ಲಾಟ ಖಾಲಿಯಾದಾಗ
ಈ ಬದುಕು ಕಲಿಸುತ್ತೆ ನೂರೆಂಟು ಪಾಠ
ಮನುಷ್ಯನು ಜೀವನದಲ್ಲಿ ಹಣಕ್ಕೆ ಎಷ್ಟು ಮಹತ್ವವನ್ನು ನೀಡಿದ್ದಾನೆ ಹಣವಿದ್ದವನು ಬುದ್ಧಿಗೇಡಿತನದಿಂದ ಏನೆಲ್ಲಾ ತಪ್ಪುಗಳನ್ನು ಮಾಡುತ್ತಾನೆ ಎನ್ನುವುದನ್ನು ಆರೇ ಸಾಲಿನಲ್ಲಿ 12 ಪದಗಳಿಂದ ವ್ಯಕ್ತಪಡಿಸಿ ಪ್ರಸ್ತುತ ಜಗದ ಪರಿಸ್ಥಿತಿಗೆ ಕನ್ನಡಿ ಹಿಡಿದಿದ್ದಾರೆ.
ಮನುಷ್ಯ ಹಣ ಐಶ್ವರ್ಯ ಅಧಿಕಾರ ಅಂತಸ್ತಿನ ಮಧ್ಯದಲ್ಲಿ ಮೆರೆಯುತ್ತಾ ಜೀವನದ ಮಾರ್ನಿಕ ಸತ್ಯವನ್ನು ಅರಿಯದೆ ಬಾಳ್ವೆ ನಡೆಸುತ್ತಿದ್ದಾನೆ. ಹಾಗೆಯೇ ಭೂಮಿ ಇರುವವರೆಗೂ ತಾನು ಕೂಡ ಗೂಟ ಹೊಡೆದುಕೊಂಡು ಬದುಕುತ್ತೇನೆ ಎನ್ನುವ ಭ್ರಮೆಯಲ್ಲಿ ಮನುಷ್ಯ ಇರುತ್ತಾನೆ ಇಂತಹ ಮಾನವನಿಗೆ ಜೀವನದ ಕಟು ಸತ್ಯವನ್ನು ತಿಳಿಸುವ ಹನಿಗವನ ಈ ಮುಂದಿನದ್ದಾಗಿದೆ.
ಆರಡಿ
ಮೂರಡಿ ಜಾಗ
ನಮ್ಮ ಬದುಕಿನ
ಕೊನೆಯ ಭಾಗ
ಮನೆ ಅರಮನೆ ಗುಡಿಸಲು ಬಂಗಲೆ ನೀನು ಎಲ್ಲೇ ವಾಸವಾಗಿರು, ನಿನ್ನ ಕಡೆ ಜಾಗ ಆರಡಿ ಮೂರಡಿಯಲ್ಲಿ ಎನ್ನುವ ನಿಷ್ಟುರವಾದಂತಹ ಜೀವನ ಸತ್ಯವನ್ನು ಈ ಹನಿಗವನವು ತಿಳಿಸುತ್ತದೆ.
ಇಂದಿನ ಯುಗದಲ್ಲಿ ಆರಡಿ ಮೂರಡಿಯಲ್ಲಿಯೂ ಜಾಗವಿಲ್ಲದೆ ವಿದ್ಯುತ್ ನಿಂದ ಶರೀರ ಭಸ್ಮವಾಗುತ್ತಿರುವುದು ಮತ್ತಷ್ಟು ನಿಷ್ಠುರ ಸತ್ಯವಾಗಿದೆ ಇದನ್ನು ಮನುಷ್ಯ ಅರಿಯಬೇಕಾಗುತ್ತದೆ.
ಹಾಗೆಯೇ ಹಣ ಹಾಗೂ ಜ್ಞಾನದ ಪ್ರಾಮುಖ್ಯತೆಯನ್ನು ತಿಳಿಸುವ ಹನಿಗವನವೂ ಇಲ್ಲಿದೆ.
ನಾವು ಎಷ್ಟೇ ಹಣವನ್ನು ಸುಭದ್ರತೆಯಿಂದ ಕಾಪಾಡಿದರು ಒಮ್ಮೆ ಬೇರೆಯವರ ಪಾಲಾಗುವ ಸಾಧ್ಯತೆ ಇರುತ್ತದೆ ಆದರೆ ನಾವು ಸಂಪಾದಿಸಿ ಕೂಡಿಟ್ಟ ಜ್ಞಾನ ಎಂದಿಗೂ ಪರರ ಸ್ವತ್ತಾಗಲು ಸಾಧ್ಯವಿಲ್ಲ. ಎನ್ನುವ ಹನಿಗವನ ಜ್ಞಾನದ ಪ್ರಾಮುಖ್ಯತೆಯನ್ನು ತಿಳಿಸುತ್ತದೆ.
ಅದೆಷ್ಟೇ ಬಚ್ಚಿಟ್ಟರೂ ಹಣ
ಒಂದಲ್ಲ ಒಂದು ಛಿದ್ರ ಛಿದ್ರ
ಜ್ಞಾನ ಭಂಡಾರವು ಹಾಗಲ್ಲ
ತಲೆ ತಲೆಮಾರು ಕಳೆದರೂ ಎಂದಿಗೂ ಅದು ಸುಭದ್ರ
ಮತ್ತೆ ಶಿಕ್ಷಕರಿಗೆ ಕಿವಿ ಮಾತನ್ನು ಹೇಳುವ ಹನಿಗವನವೊಂದು ಈ ರೀತಿ ಇದೆ.
ಮಕ್ಕಳ ಮನಸ್ಸು
ಕಪ್ಪು ಹಲಗೆಯಂತೆ
ಬರೆಯಬೇಡಿ ಶಿಕ್ಷಕರೇ
ನೀವೆಂದಿಗೂ ಅಲ್ಲಿ
ಕೆಟ್ಟ ವಿಷಯ
ಈ ಹನಿಗವನವು ಶಿಕ್ಷಕರು ಮಕ್ಕಳಿಗೆ ತಿಳಿಸಬೇಕಾದ ವಿಷಯದ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ದೇಶವನ್ನು ಕಟ್ಟುವ ಭಾವಿ ಪ್ರಜೆಗಳಿಗೆ ತಿಳಿಹೇಳುವ ಶಿಕ್ಷಕರು ಸರಿಯಾದ ಮಾರ್ಗದರ್ಶನ ಮಾಡದೇ ಇದ್ದರೆ ಅವರ ಜೀವನ ಹಾಳಾಗುವುದರ ಜೊತೆಗೆ ದೇಶಕ್ಕೂ ಕೇಡನ್ನುಂಟು ಮಾಡುತ್ತದೆ ಎನ್ನುವ ಗೂಡಾರ್ಥವನ್ನು ಈ ಹನಿಗವನ.
ಇಲ್ಲಿ ಎಷ್ಟು ಮೌಲಿಕ ವಿಷಯಗಳನ್ನು ಒಳಗೊಂಡ ಹನಿಗವನಗಳಿದ್ದು ಜೊತೆಗೆ ಹಾಸ್ಯದ ಕಂಪನ್ನು ಸಹ ಬಡಿಸುವ ಹನಿಗವನಗಳೂ ಇವೆ.
ಇಲ್ಲಿ ಕೆಲವು ಗಂಭೀರ ವಿಷಯಗಳನ್ನು ವಿಡಂಬನಾತ್ಮಕವಾಗಿ ಹಾಸ್ಯದ ಲೇಪನದೊಂದಿಗೆ ನಮಗೆ ತಿಳಿಸುತ್ತದೆ. ಮದುವೆಯಾದ ಹೊಸದರಲ್ಲಿ ಮಾವನ ಮನೆಯಲ್ಲಿ ಅಳಿಯನಿಗೆ, ದೊರೆಯುವ ಆದರಾತಿಥ್ಯವು ಬರ ಬರುತ್ತಾ ಇಂತಹ ಸ್ಥಿತಿ ತಲುಪುತ್ತದೆ ಎನ್ನುವುದನ್ನು ಆರೇ ಸಾಲಿನಲ್ಲಿ ಸೊಗಸಾಗಿ ಚಿತ್ರಿಸಲಾಗಿದೆ.
ಮೊದಲ ವರ್ಷ
ದೀಪಾವಳಿ ಅಳಿಯನಿಗೆ ಇನ್ನಿಲ್ಲದ ಮುತುವರ್ಜಿ ವರುಷಗಳು ಕಳೆದಂತೆ ಅದೇಕೋ ಅಲರ್ಜಿ
ಹಾಗೆಯೇ ಇನ್ನೊಂದೆರಡು ಹಾಸ್ಯ ಹನಿಗವನಗಳನ್ನು ನಾನಿಲ್ಲಿ ಉಲ್ಲೇಖಿಸುತ್ತೇನೆ.
ನನ್ನವರು ನೋಡಲು ಬಲು ಚೆಂದ
ಆದರೆ ಅದೇಕೋ ತಿಳಿಯದು ಬುದ್ಧಿ ಮಾತ್ರ ಸ್ವಲ್ಪ ಮಂದ
ಕಥೆ ಕವನಗಳನ್ನು
ಬರೆಯಲು
ಸುಂದರವಾದ ಭಾವನೆಗಳು
ನಮ್ಮಲ್ಲಿರಬೇಕು
ನನ್ನ ಅಕ್ಕನ ಮುಖ
ಕೆಂಪೇರಲು
“ಭಾವ”ನೇ ಬರಬೇಕು
ಹೆಂಡತಿ ಪ್ರತಿಯೊಂದು ವಿಷಯಕ್ಕೂ ಜೋರು
ಬಡಪಾಯಿ ಗಂಡನಿಗೆ ನೆನಪಾಗಿದ್ದು ಬಾರು
ಹೀಗೆ ಹಲವು ಹಾಸ್ಯ ಹನಿಗವನಗಳು ಕೂಡ ಈ ಕೃತಿಯಲ್ಲಿವೆ.
ಕಥೆ,ಕವನ, ನೀಳ್ಗವನ, ಆಧುನಿಕ ವಚನ,ಮುಕ್ತಕ, ಕಾದಂಬರಿ ಹೀಗೆ ಹಲವಾರು ಕಾವ್ಯ ಪ್ರಕಾರಗಳಲ್ಲಿ ತಮ್ಮದೇ ಆದ ಮೈಲುಗಲ್ಲನ್ನು ಸಾಧಿಸಿರುವ ಸಂತೋಷ್ ಸರ್ ಅವರು ಹನಿಗವನಗಳಲ್ಲಿ ಕೂಡ ತಮ್ಮದೇ ಆದ ಮುದ್ರೆಯನ್ನು ಹೊತ್ತಿದ್ದಾರೆ ಇದು ಇವರ………… ಹನಿಗವನದ ಕೃತಿಯಾಗಿದೆ.
ಸಾಹಿತ್ಯ ರಚನೆಯ ಅಷ್ಟೇ ಅಲ್ಲದೆ ಕನ್ನಡ ನಾಡಿನ ಸಾಂಸ್ಕೃತಿಕ ತೇರನ್ನು ಎಳೆಯುತ್ತಿರುವ ಸಂತೋಷ್ ಸರ್ ಅವರ ಹೆಸರು ಕನ್ನಡಮ್ಮನ ಮಡಿಲಿನಲ್ಲಿ ವೈಭವದಿಂದ ವಿಜೃಂಭಿಸಲಿ ಎಂದು ಈ ಮೂಲಕ ಹಾರೈಸುತ್ತೇನೆ.
ಶೋಭಾ ಬಿ
ಶಿಕ್ಷಕಿ, ಕವಯಿತ್ರಿ ಹಾಗೂ ನಿರೂಪಕಿ
ಪ್ರಧಾನ ಕಾರ್ಯದರ್ಶಿ
ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ (ನೋಂ ), ಮೈಸೂರು