‘ಬಗ್ಗುವವನಿಗೊಂದು ಗುದ್ದು ಜಾಸ್ತಿ’ಇದು ನಮ್ಮ ಸಮಾಜದ ಗುಣ ಎನ್ನುತ್ತಾರೆ ರಮೇಶ ಸಿ ಬನ್ನಿಕೊಪ್ಪ ಹಲಗೇರಿ’

ಬಗ್ಗುವವನಿಗೊಂದು ಗುದ್ದು ಜಾಸ್ತಿ…

ಅವನ ತಪ್ಪು ಏನು ಇರದಿದ್ದರೂ ವಾಚಮಗೋಚರವಾಗಿ ಬೈಗುಳ ತಿನ್ನುತ್ತಾನೆ. ಮೌನದಿ ಏಕಾಂಗಿಯಾಗಿ ಬಿಕ್ಕಳಿಸುತ್ತಾನೆ.

ಈ ಬದುಕೇ ಹಾಗೆ…

ಈ ಸಮಾಜದಲ್ಲಿ ನಾವು ನಡವಳಿಕೆಗಳ ಮೇಲೆ ನಮ್ಮ ಅಸ್ತಿತ್ವ ನಿಲ್ಲುತ್ತದೆ. ನಮ್ಮ ಗುಣಗಳು, ನಮ್ಮ ನಡತೆಗಳ ಮೇಲೆ ಸಮಾಜದಲ್ಲಿ ಕೆಲವೊಂದು ಸ್ಥಾನಮಾನಗಳನ್ನು ಕೊಡುತ್ತಾರೆ. ಆದರೆ ಎಲ್ಲಾ ಕಾಲಕ್ಕೂ ನಮ್ಮ ಗುಣಗಳು ಕೆಲವು ಸಲ ಕೈ ಕೊಡುತ್ತವೆ. ಇಂದಿನ ಆಧುನಿಕ ಯಾಂತ್ರಿಕೃತ ಸಮಾಜದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲದೆ ಹೋಗಿರುವುದನ್ನು ನಾವು ಅನೇಕ ಸಂದರ್ಭಗಳಲ್ಲಿ ಕಾಣುತ್ತೇವೆ.

“ಅವನು ನಮ್ಮವನು, ಅವನಿಗಾಗಿ ನಾನೊಂದಿಷ್ಟು ತ್ಯಾಗ ಮಾಡುತ್ತೇನೆ. ಸರಿದು ನಡೆಯುತ್ತೇನೆ. ಸೋತರೇನು ಸ್ವರ್ಗ ಹೋಗುವುದಿಲ್ಲ…”

ಹೀಗೆ ಇನ್ನೊಬ್ಬರ ಬಗ್ಗೆ ಅನುಕಂಪ ಪಡುತ್ತಲೇ ತನಗೆ ಸಿಗುವ ಅವಕಾಶಗಳನ್ನು ಬಿಟ್ಟು ಕೊಡುವ, ತನಗೆ ಸಲ್ಲಬೇಕಾದ ಗೌರವಗಳನ್ನು ಇನ್ನೊಬ್ಬರಿಗೆ ಸಲ್ಲಿಸುವ, ಇನ್ನೊಬ್ಬ ವ್ಯಕ್ತಿ ಎಷ್ಟೇ ಕೆಟ್ಟ ನಡುವಳಿಕೆಯನ್ನು ರೂಢಿಸಿಕೊಂಡು, ತನ್ನಡೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರೂ ಕೆಲವರದು ಕ್ಷಮಿಸುವ ಗುಣವಿದೆಯಲ್ಲ ಅದು ಬಹಳ ದೊಡ್ಡದು.

ಕ್ಷಮಿಸಿ ಬಿಡುವ ದೊಡ್ಡ ಗುಣವು ಕೆಲವು ಸಮಯ ಕೆಲವರಲ್ಲಿ ಇರುತ್ತದೆ. ಅದು ಅವರ ಮೇರು ವ್ಯಕ್ತಿತ್ವದ ಕೈಗನ್ನಡಿ. ಆದರೆ ಅಂತಹ ವ್ಯಕ್ತಿಗಳು ತಮ್ಮವರಿಗಾಗಿ, ತಮ್ಮ ಸ್ನೇಹಕ್ಕಾಗಿ, ಸೋಲುತ್ತ… ಸೋಲುತ್ತ… ಬೆನ್ನು ಬಾಗಿಸಿ ಶರಣಾಗತಿಯಾಗಿ ಬಿಟ್ಟರೆ..! ಅದನ್ನು ಕೆಲವರು ಅವನ ದೌರ್ಬಲ್ಯ ಎಂತಲೂ ಕರೆಯುತ್ತಾರೆ.

ಹಾಗಾಗಿ ಯಾರೇ ಆಗಿರಲಿ ಅವರು ಮಾಡುವ ತ್ಯಾಗಕ್ಕೊಂದು ಬೆಲೆ ಇದೆ. ಅದು ಒಂದು ಹಂತದವರೆಗೆ ಅದನ್ನು ರೂಡಿಸಿಕೊಂಡರೆ ನಮಗೆ ಗೌರವ ತಂದುಕೊಡುತ್ತದೆ. ಇಲ್ಲವಾದರೆ ನಮ್ಮ ಅಸ್ತಿತ್ವವನ್ನೇ ಹಾಳು ಮಾಡುತ್ತದೆ. ಇಂತಹ ಅನೇಕ ಸಂದರ್ಭಗಳನ್ನು ರಾಮಾಯಣ, ಮಹಾಭಾರತ ಮುಂತಾದ ಕೃತಿಗಳಲ್ಲಿ ಓದಿರುತ್ತೇವೆ.

ಹರಿಶ್ಚಂದ್ರ ಸತ್ಯಕ್ಕಾಗಿ ಎಲ್ಲವನ್ನು ತ್ಯಾಗ ಮಾಡುತ್ತಾ.. ಮಾಡುತ್ತಾ…ಕೊನೆಗೆ ಸಾಮ್ರಾಜ್ಯ, ಮಡದಿ ಮಕ್ಕಳನ್ನು ಕೂಡ ಬಿಟ್ಟು ಕೊಡಬೇಕಾದಂತ ಪ್ರಸಂಗ ಬರುತ್ತದೆ. ಹಾಗೆಯೇ ಮಹಾಭಾರತದಲ್ಲಿ ಕರ್ಣ ತ್ಯಾಗದ ಪ್ರತಿಕವೆಂದೆ ನಾವು ಭಾವಿಸುತ್ತೇವೆ. ಅಂತಹ ಕರ್ಣ ಕೊನೆಗೆ ಶೂರ ವೀರನಾಗಿದ್ದರೂ ತ್ಯಾಗ ಮಾಡುತ್ತಲೇ ಸೋಲುತ್ತಾ.. ಸೋಲುತ್ತಾ… ಪ್ರಾಣವನ್ನೇ ಬಿಡುತ್ತಾನೆ. ಇದೆಂಥ ತ್ಯಾಗ..? ಇದನ್ನೇ ನಾವು “ಬಗ್ಗಿದವನಿಗೆ ಒಂದು ಗುದ್ದು ಜಾಸ್ತಿ..” ಎನ್ನುತ್ತೇವೆ. ಈ ಮಾತು ನಿಜವಾಗಲೂ ನಾವು ಅರ್ಥಮಾಡಿಕೊಳ್ಳಬೇಕು.

ಸಮಾಜದಲ್ಲಿ ನಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಬಾರದು. ನಮ್ಮ ಅಸ್ತಿತ್ವ ನಮ್ಮನ್ನು ಕಾಪಾಡಬೇಕು. ಯಾರೋ ಮರ್ಜಿಗಾಗಿ, ಇನ್ಯಾರೋ ಕಕ್ಕುಲತೆಗಾಗಿ, ಇನ್ಯಾರು ಮನಸ್ಸನ್ನು ತಣಿಸುವುದಕ್ಕಾಗಿ ನಮ್ಮತನವನ್ನೆಲ್ಲ ಬಿಟ್ಟು ಅವರಿಗಾಗಿ ಸರ್ವಸ್ವವನ್ನು ಅರ್ಪಿಸುವುದು ಅದು ಅಷ್ಟೊಂದು ಆರೋಗ್ಯಕರ ಲಕ್ಷಣವಲ್ಲ.

ನಾವು ಎಷ್ಟೇ ತ್ಯಾಗ ಮಾಡಿದರೂ ಯಾರಿಗಾಗಿ ನಾವು ತ್ಯಾಗ ಮಾಡುತ್ತೇವೆಯೋ ಆ ವ್ಯಕ್ತಿಯಿಂದಲೇ ನಮ್ಮ ಬದುಕಿನಲ್ಲಿ ಅತಿ ಹೆಚ್ಚು ನೋವು ಅನುಭವಿಸುತ್ತಿರುತ್ತೇವೆ. ಅದು ಗೆಳೆಯ, ಸಂಬಂಧಿಗಳು, ಸಹೋದ್ಯೋಗಿಗಳು, ಅಲ್ಲದೆ ಸಹಪಾಠಿಗಳು ಹೀಗೆ ಹಲವು ಸಂಬಂಧಗಳ ಜೇಡರ ಬೆಲೆಗಳಿಗೆ ಬಿದ್ದು ಒದ್ದಾಡುತ್ತಿರುವಾಗ ಪ್ರೀತಿಯಿಂದಲೇ ಅವರನ್ನು ಗೌರವಿಸುತ್ತೇವೆ. ಸರಿದು ನಡೆಯೋಣ, ಬಿಟ್ಟುಕೊಡೋಣ, ಸಂದರ್ಭ ಬಂದಾಗ ಎಷ್ಟು ಒಳಿತು ಮಾಡಬೇಕು ಅದಕ್ಕಿಂತ ಹೆಚ್ಚು ಒಳಿತು ಮಾಡೋಣ. ಆದರೆ ನಮ್ಮ ಆತ್ಮಭಿಮಾನವನ್ನು ಮಾರಿಕೊಳ್ಳುವುದು ಅದು ಒಳ್ಳೆಯದಲ್ಲ. ಅಂತಹ ಸಂದರ್ಭ ಸೃಷ್ಟಿ ಮಾಡಿಕೊಳ್ಳುವುದು ಒಳ್ಳೆಯ ವಿಚಾರವಲ್ಲ. ಅವರು ನಮಗಾಗಿ ಸಮಯವನ್ನು, ಸಂಪತ್ತನ್ನು ಏನೆನ್ನಾದರೂ ತ್ಯಾಗ ಮಾಡುತ್ತಾರೆಂದರೆ ಅವರಿಗೆ ನಾವು ಕೂಡ ತ್ಯಾಗ ಮಾಡಲು ಸಿದ್ದರಾಗೋಣ. ಪರಸ್ಪರ ನಂಬಿಕೆ ವಿಶ್ವಾಸಾರ್ಹ ನಡತೆಯನ್ನು ರೂಢಿಸಿಕೊಂಡು ಸಂಬಂಧ ಉಳಿಸಿಕೊಳ್ಳೊಣ.

ನಾವು ಆತ್ಮಭಿಮಾನ ಮಾರಿಕೊಂಡು, ಸ್ವಾಭಿಮಾನ ಬಿಟ್ಟು, ಅವರಿಂದ ಗುದ್ದು ಬಿಳಿಸಿಕೊಳ್ಳುವ ಮುನ್ನ ಎಚ್ಚರಾಗೋಣ. ಸ್ನೇಹಮಯಿ ಸಂಬಂಧ ಮುಂದುವರಿಸೋಣ.


Leave a Reply

Back To Top