ಕನ್ನಡದ ಮೌಖಿಕ ಪಠ‍್ಯಗಳಲ್ಲಿ ಗಾತ್ರ, ಸೂತ್ರ, ಸತ್ವ ಸಮನ್ವಯಗಳ ಹಿನ್ನೆಲೆಯಲ್ಲಿ ಮಂಟೇಸ್ವಾಮಿ ಕತೆಯು ಬಹುಮುಖ್ಯ ಎನಿಸುತ್ತದೆ. ತಮ್ಮದೇ ಸಾಮಾಜಿಕ, ಧಾರ್ಮಿಕ ಅಂಶಗಳನ್ನು ಹೊಂದುವುದು ಎಲ್ಲ ಕಾಲದ ಮನುಷ್ಯರ ಆಸೆ, ಸಾಕಾರಗೊಳಿಸಿದ ಕೆಲವೇ ಕೆಲವು ಮುಖ್ಯ ಸಂಚಲಗಳಲ್ಲಿ ಮಂಟೇಸ್ವಾಮಿ ಪರಂಪರೆಗೆ ಕನ್ನಡನಾಡಿನಲ್ಲಿಆದ್ಯಮತ್ತುಆರಾಧ್ಯಸ್ಥಾನವಿದೆ.ಮೌಖಿಕಪಠ್ಯಗಳಲ್ಲಿನನಾದ, ಲಯ, ವಸ್ತು ವಿನ್ಯಾಸಗಳಷ್ಟೇ ಅಲ್ಲದೆ, ಸತ್ವದ ಆಧಾರದಿಂದ ಎಲ್ಲರನೂ ತನ್ನ ಕಡೆಗೆ ಸೆಳೆಯುವ ಪಟ್ಟಿಯಲ್ಲಿ ಮಂಟೇಸ್ವಾಮಿಯ ಕತೆ ಎರಡನೆಯದು

 ಮೊದಲನೆಯ ಕತೆ ಮಲೆ ಮಾದಪ್ಪನದಾದರೆ, ಮೂರನೆಯದು ಬೆಳ್ಳಿ ಬೆಟ್ಟದ ರಂಗಪ್ಪನ ಕತೆ. ಈ ಮೂರು ಕತೆಗಳಲ್ಲಿ ಮಲೆ ಮಾದಪ್ಪನದು ವಿರಕ್ತಿ, ಭಕ್ತಿ, ಶರಣಾಗತಿಗಳಿಗೆ, ಮಂಟೇಸ್ವಾಮಿ ಕತೆ ಬಂಡಾಯ-ಶರಣಾಗತಿಗೆ ಮತ್ತು ರಂಗಪ್ಪನ ಕತೆ ಶೃಂಗಾರ-ಭಕ್ತಿಗಳ ಸಮನ್ವಯತೆಯನ್ನು ಸಾಧಿಸಿವೆ. ಮನುಷ್ಯರ ಆಳಮನಸ್ಸಿನ, ವರ್ತನೆಯ ಮೂಲಭೂತ ಗುಣಗಳಿವು. ಈ ಮೂರು ಮೌಖಿಕ ಕತೆಗಳ ವಸ್ತು-ವಿನ್ಯಾಸಗಳನ್ನು ಅರಿಯಲು ನಾಯಕ, ಸಹಾಯಕ ಪಾತ್ರಗಳ ಚಲನೆ-ಕ್ರಿಯಾಶೀಲತೆಗಳನ್ನು ಗಮನಿಸುವುದು ಮುಖ್ಯವಾಗುತ್ತದೆ. ಕೇಂದ್ರ ಪಾತ್ರದ ‘ಚಲನೆ’ ಗೆ ಸಮಾನಾಂತರವಾಗಿ ಬರುವ ಸಹಾಯಕ ಪಾತ್ರಗಳ ನಡೆಯನ್ನು ಗಮನಿಸಿದರೆ ಮಹಾನದಿಯೊಂದರ ಹರಿವಿನ ನಕ್ಷೆಯನ್ನು ತಯಾರಿಸಿ ಬಿಡಬಹುದಾದ ಸಾಧ್ಯತೆಗಳಿವೆ. ಕತೆಯ ಆರಂಭದಿಂದ ಅಂತ್ಯದವರೆವಿಗೂ ನೆಲ, ವ್ಯಕ್ತಿ, ಹೂವುಗಳೊಂದಿಗೆ ಜನಜೀವನ ವಿಧಾನ ತಳುಕು ಹಾಕಿಕೊಂಡಿರುವುದನ್ನು ತಮಿಳು ಕಾವ್ಯಮೀಮಾಂಸೆಯ ‘ಅಗಂ’ ಮತ್ತು ‘ಪುರಂ’ ಕಡೆಯಿಂದಲೂ ಗಮನಿಸಬಹುದಾದ ಸಾಧ್ಯತೆಗಳಿವೆ. ಪ್ರಾಚೀನ ಕನ್ನಡ ಮಾರ್ಗ ಮಹಾಕಾವ್ಯ ಪರಂಪರೆಯ ವಾದಿ, ಸಂವಾದಿ ಹಿನ್ನೆಲೆಯಲ್ಲಿ ನೋಡುವ ಸಾಧ್ಯತೆಯೂ ಈ ಜನಪದ ಮಹಾಕತೆಗಳ ವಿನ್ಯಾಸವು ಹೊಂದಿದೆ. ಭಾರತದಲ್ಲಿ ಮಹಾಪರಂಪರೆಯೊಂದರ ನಿರ್ಮಾಣಕ್ಕೆ ಕಾರಣನಾದ ಆಚಾರ್ಯ ಅಭಿನವಗುಪ್ತಪಾದರ ‘ತಂತ್ರಾಲೋಕ’ ಮತ್ತು ‘ಲೋಚನ’ (ಧ್ವನ್ಯಾಲೋಕ ಲೋಚನ) ಗಳ ಹಿನ್ನೆಯೆಯಲ್ಲಿಟ್ಟು ಮಂಟೇಸ್ವಾಮಿಯ ಕತೆಯನ್ನು ವಿವೇಚಿಸಬಹುದಾದ ಸಾಧ್ಯತೆಯಿದೆ. ಕಲ್ಯಾಣ ಪಟ್ಟಣದ ಕಡೆಗೇ ನಮ್ಮ ಗಮನ ಹೆಚ್ಚಿರುವುದರಿಂದ ಕೆಲವಾದರೂ ಸಾಂಸ್ಕೃತಿಕ, ಭಾಷಿಕ ವಿವೇಚನಾ ಸಾಧ್ಯತೆಗಳು ಆ ಹಿನ್ನೆಲೆಯಲ್ಲಿಯೇ ಸುತ್ತುತ್ತಿದೆಯೇನೋ ಅನಿಸಿದೆ. ನಮ್ಮ ಬದುಕಿನ ಎಲ್ಲ ಸಾಧ್ಯತೆಗಳ ಕೇಂದ್ರವಾಗಿರುವ, ಅತಿಯಾದ ತೊಡಕೂ ಆಗಿರುವ “ಭಾಷೆ” ಎಂಬುದರ ಕಡೆಯಿಂದ ಕೆಲವಾದರೂ ಮಾತುಗಳನ್ನು ಈ ಲೇಖನ ಮಂಟೇಸ್ವಾಮಿ ಕತೆಯ ಆಯ್ದ ಸಾಲುಗಳ ಕೇಂದ್ರವಾಗಿಟ್ಟುಕೊಂಡು ಆಡಬಯಸಿದೆ.

ಒಂದು ಕಾಲದಲ್ಲಿ ಸಂಭವಿಸು,ಸಂಘಟಿಸುವಭಾಷೆಯಸಂರಚನೆ, ಕಾಲಾತೀತವಾದ ಋತತತ್ತ್ವಕೇಂದ್ರದ ಕಡೆಗೆ ಚಲನೆ ಪಡೆದು ಬಿಡುತ್ತದೆ. ಇದಕ್ಕೆಸಹಾಯಕವಾಗಿ ಮೀಮಾಂಸೆಯೆಂದು ಕಟ್ಟಿಕೊಂಡಿರುವ ಉಪಮೆ, ಪ್ರತಿಮೆ, ರೂಪಕ, ಪಾತ್ರಎಲ್ಲವನ್ನೂ ಜೋಡಿ ವೈರುಧ್ಯಗಳನ್ನಾಗಿಬಳಕೆಮಾಡಿ ಸಲಕರಣೆಯಾಗಿ ಬಳಸಿಕೊಳ್ಳುತ್ತವೆ. ಕೊನೆಗೂ ಭವದ ಬೇಗೆ ತಾಳಲಾರದೆ ಕೂಗಿ ಕರೆಯುವುದಷ್ಟೇ ಅಲ್ಲದೆ ಭಕ್ತಿಯಲ್ಲಿ ಬನ್ನಿ ಬನ್ನಿ ಎಂಬ ಕೂಗು ಪೂರ್ಣ ಕತೆಯಾಗಿಯೇ ಮಾರ್ದನಿಸುತ್ತದೆ.

ಕಾಲಿಕ ಮತ್ತು ಕಾಲಾತೀತ ಪಠ್ಯಗಳೆಂದು ವಿಭಾಗ ಮಾಡುವುದು ಆಧುನಿಕ ಭಾಷಾವಿಜ್ಞಾನಿ ಸಸೂರನ ನಿಯಮಗಳಲ್ಲಿ ಒಂದು, ಬಹುಮುಖ್ಯವಾದದ್ದು. ಮತ್ತೊಂದು ಅಂಶವೆಂದರೆ ಡೆರಿಡಾ ಹೇಳುವ ಋತಕೇಂದ್ರ ವಿವೇಚನೆ. ಈ ಎರಡು ವಿವೇಚನೆಗಳು ಕೃತಿಯೊಂದನ್ನು ಅರ್ಥೈಸಿಕೊಳ್ಳಲು, ವಿವೇಚಿಸಲು ಆಧುನಿಕ ತತ್ತ್ವಶಾಸ್ತ್ರ ಮತ್ತು ಭಾಷಾಶಾಸ್ತ್ರಗಳು ಬಳಸುತ್ತದೆ. (ಡೆರಿಡಾ ಆರಂಭಿಸುವ ನಿರಚನೆ ಎಂಬುದು ವಾದವಲ್ಲ. ಅದೊಂದು ಚಿಂತನಾ ಲಹರಿ. ಅದನ್ನು ವಾದವೆಂದು ಕರೆದು ಡೆರಿಡಾನಿಂದ ತಿರಸ್ಕಾರಕ್ಕೆ ಒಳಗಾದವನು ಅವನ ಶಿಷ್ಯ ಜ್ಯೋನಾಥನ್ ಕಲರ್ ) ಇದೆಲ್ಲರದರ ಜೊತೆಗೆ “ಸಂರಚನೆ” ಗೊಂಡ ಪಠ್ಯವೊಂದರಲ್ಲಿನ ಸಮಾನ ವೈರುಧ್ಯಗಳ ಗುರುತಿಸುವಿಕೆ ಹಾಗು ಅವುಗಳ ಕುರಿತ ಚಿಂತನೆಗಳು “ಮೋಟಿಫ್” ಎಂಬುದನ್ನು ಅರಿಯಲು, ಕಟ್ಟಿಕೊಳ್ಳಲು ಮುಖ್ಯವಾಗುತ್ತದೆ.

“ಭಾಷೆ” ಎನ್ನುವುದೇ ವ್ಯಾವಹಾರಿಕವಾದದ್ದು, ಮನುಷ್ಯ ತಾನೇ ಕಟ್ಟಿಕೊಂಡಿರುವ ಬಹುದೊಡ್ಡ ತೊಡಕು. “ಮಾತು” ಎನ್ನುವುದು ಭಾಷೆಯನ್ನು ಬಳಸಿಕೊಂಡು ಬಾಂಧವ್ಯವನ್ನು ಬೆಸೆಯುವ ಕೆಲಸ ಮಾಡುವುದು. ಮಧ್ಯಕಾಲೀನ ಶಿವಶರಣ ವಚನಕಾರರು ತಮ್ಮ ಅಭಿವ್ಯಕ್ತಿಗೆ ಮಾತು, ಉಲಿ, ವಚನಗಳೆಂದು ಕರೆದುಕೊಂಡಿರುವುದು ವ್ಯಾವಹಾರಿಕವಾಗದ, ಬಾಂಧವ್ಯವನ್ನು ಬೆಸೆವ ಹಿನ್ನೆಲೆಯಲ್ಲಿಯೇ. ಈ ಸ್ಪಷ್ಟತೆಯಿರುವ ಕಾರಣದಿಂದಲೇ ವಚನಕಾರರ ರಚನೆಗಳಲ್ಲಿ ಬಿಗಿಯಾದ ವಾಕ್ಯರಚನೆಯು (Periodic Struchor) ಕಾಣಿಸುತ್ತದೆ. ಇದನ್ನು ಅನಂತರ ಕಾಲದ ಸಮಾಜ, ಸಮುದಾಯಗಳು ಒಪ್ಪಿದ್ದರಿಂದ, ಹಾಗೆ ಒಪ್ಪಲು ಹಿಂದಿನ ಮತ್ತು ತಮ್ಮ ಕಾಲದ ಸಮಾಜದೊಡನೆ ಮಾತು ವ್ಯವಸ್ಥಿತವಾದ ಸಂವಹನಕ್ಕೆ ತೆರೆದಿದ್ದರಿಂದಲೇ ವಚನಕಾರರನ್ನು “ಅಧಿಭಾಷಿಕ” (Meta Language) ಎಂದು ಕರೆಯಬಹುದೆನಿಸಿದೆ. ಅನಂತರ ಇದೇ ‍ಸ್ಥಿತಿಯನ್ನು ಮುಟ್ಟಿದವರು ಬೃಹತ್ ಜನಪದ ಕತೆಗಳನ್ನು ಹೆಣೆದವರು. ವಚನಕಾರರು ಮಾತಿನ ಮೂಲಕವೇ ನಿರ್ಮಾಣ ಮಾಡಿಕೊಂಡಿದ್ದ “ಅಧಿಭಾಷಿಕ” (Meta Language) ಕ್ಕೆ ಮತ್ತು ಮಾತಿನ ಮೂಲಕವೇ ಸೃಷ್ಟಿಯಾಗುವ “ಅಧಿಸಂಸ್ಕೃತಿ” (Meta Culture) ಗಳಿಗೆ ಏಕಕಾಲದಲ್ಲಿ ಎದುರು ನಿಂತು ಮತ್ತೊಂದು ಹೊಸದಾದ ನೂತನ “ಅಧಿಭಾಷಿಕ” (Meta Language) ಮತ್ತು “ಅಧಿಸಂಸ್ಕೃತಿ” (Meta Culture) ಗಳನ್ನು ಸೃಷ್ಟಿಸಿ ಕಟ್ಟಿಕೊಂಡವರು. ಮೇಲು ನೋಟಕ್ಕೆ ಮೌಖಿಕ ಪಠ್ಯಗಳನ್ನು ಓದುವಾಗ ಸಡಿಲವಾದ, ಬಿಗಿಯಲ್ಲದ ವಾಕ್ಯಗಳ ಸರಮಾಲೆ (Non Periodic Structure) ಎಂದು ಕಾಣಿಸುತ್ತದೆ. ಆದರೆ ಮೌಖಿಕ ಕತೆಗಳು ಸಾರ್ಥಕ್ಯತೆ ಸಾಧಿಸುವುದೇ ಎದುರು ನಿಂತವರಲ್ಲಿನ “ಕೇಳುವಿಕೆಯಲ್ಲಿ” ಎನ್ನುವುದನ್ನು ಮರೆಯುವ ನಮ್ಮ ಮಹಾಮರೆವಿನ ಕಾರಣದಿಂದ ವಚನಾನಂತರದಲ್ಲಿ ಕಟ್ಟಿಕೊಂಡ ಹೊಸ ಕ್ರಮದಲ್ಲಿನ “ಅಧಿಭಾಷಿಕ” (Meta Language) ವಿವೇಚನೆಗೆ ಬಹಳಷ್ಟು ಸಮಸ್ಯೆ ಆಗುತ್ತದೆ. ಈ ಸಮಸ್ಯೆಯ ಮೊದಲ ಮುಖವೇ ಮಹಾಕಾವ್ಯವೆಂದು ಕರೆಯುವುದರಲ್ಲಿ ಸಂತಸಪಟ್ಟು ಪರ್ಯಾವಸಾನವಾಗುವುದು. ಮಹಾಕಾವ್ಯಕ್ಕೆ ವಿರುದ್ಧವಾಗಿ ಮಹಾಕತೆಯನ್ನು, ಮಹಾನಾಯಕನಿಗೆ ವಿರುದ್ಧವಾಗಿ ನೆಲದ ನಾಯಕನನ್ನು ಮತ್ತು ಮಹಾಛಂದಸ್ಸಿಗೆ ವಿರುದ್ಧವಾಗಿ ಮಾತನ್ನೇ ಮಂತ್ರ ಮಾಡಿದ್ದನ್ನು ಕಡೆಗಣಿಸುತ್ತಲೇ ಇರುತ್ತೇವೆ. ಈ ಭಾಷೆ, ಮಾತುಗಳ ನಡುವಿನ ಸಾಮ್ಯತೆ, ಸ್ಪಷ್ಟತೆ ಮತ್ತದರ ಸಮಸ್ಯೆಗಳ ಸ್ಪಷ್ಟತೆಯನ್ನು ಗಮನದಲ್ಲಿಟ್ಟು ಮುಂದಿನ ಮಾತುಗಳನ್ನು ಮಂಟೇಸ್ವಾಮಿ ಕತೆಯ ಕುರಿತು ಆಡಬಹುದೆನಿಸುತ್ತದೆ. ಈ ಸಾಲುಗಳನ್ನು ಒಮ್ಮೆ ಗಮನಿಸಿ –

ಆಡಿದವರ ಮನವ ಬಲ್ಲೆ | ನೀಡಿದವರ ನಿಜವ ಬಲ್ಲೆ |
ಸಿದ್ದಯ್ಯಾ ಸ್ವಾಮಿ ಬನ್ನಿ || ಮಂಟೇದಾ ||
ಲಿಂಗಯ್ಯಾ ದಯಮಾಡಿ

ಮಡಿಕೇರಿ ತಾಲೂಕು |
ಮಡಿಕೇರಿ ತಾಲೂಕು | ಹರಳೆ ಹಂಪಾಪುರ |
ಮಿರಳೆ ಸಾಲಿಗ್ರಾಮ | ಎಡತೊರೆ ಚಂದಗಾಲ
ಕಾವೇರಿ ಹರಿವಂತ | ನದಿಯ ಪಕ್ಕದ ಒಳಗೆ
ಕಪ್ಪಡಿಯೆ ಕೈಲಾಸ | ಕಿಡಗಣ್ಣ ರಾಚಪ್ಪಾಜಿ
ಹಿರೀ ಚೆನ್ನಾಜಮ್ಮ | ತೋಪಿನ ದೊಡ್ಡಮ್ಮ
ಮಳವಳ್ಳಿ ಸ್ವಾಮಿಗಳು | ಬೊಪ್ಪೆಗೌಡನ್ಪುರದ ಬುದ್ಯವರೆ

ನಾವು ಕೂಗುವ ಕೂಗು ನಿಮ್ಮ | ಪಾದಕ್ಕರವಾಗಲಪ್ಪ ||
ಸಿದ್ದಯ್ಯಾ ಸ್ವಾಮಿ ಬನ್ನಿ | ಲಿಂಗಯ್ಯಾ ದಯಮಾಡೋ ||

ಆರು ಮೊಗದವನಟ್ಟಿ | ಕುಲುಮೆ ಗೌಡರಾ ಮನೆಯಾ |
ಹದಿನಾರು ಅಂಕಣದಾ | ತೊಟ್ಟಿಯ ಹಟ್ಟಿಯ ಒಳಗೇ |
ಕುಳಿತಿರುವ ನನ್ನಪ್ಪ | ಮಂಟೆದ ಲಿಂಗಯ್ಯಾ |

ಕುರಿಯಾ ಕೊಟ್ಟಿಗೆ ಒಳಗೇ | ಉಲಿಯ ಚರ್ಮ ಆಸವರೇ |
ಕಂಡಾಯದ ಮೂರ್ತಿ | ಧರೆಯಾಗ್ದೊಡ್ಡವರೂ |
ಆರುಮೂರು ಒಂಭತ್ತು ಗಳಿಗೆ | ಜೋಲು ನಿದಿರೆ ಮಾಡುತಾರೆ |
ಸಿದ್ದಯ್ಯಾ ಸ್ವಾಮಿ ಬನ್ನಿ | ಲಿಂಗಯ್ಯಾ ದಯಮಾಡೋ ||
ಧರ್ಮಾಗುರುವೆ || ಲಿಂಗಯ್ಯಾ ದಯಮಾಡೋ ||

                     ಕನ್ನಡದ ಯಾವ ಕಾವ್ಯವೂ ‘ನಿಜ’, ‘ನಂಬಿಕೆ’ಗಳಿಂದ ಆರಂಭ ಆಗಿರುವುದನ್ನು ಕಂಡಿಲ್ಲ. ಮಂಟೇಸ್ವಾಮಿಯ ಕತೆ “ನಿಜ” ದಿಂದಲೇ ಆರಂಭವಾಗುತ್ತದೆ. “ನಿಜ” ಎಂಬ ಪದಕ್ಕೆ ‘ಸತ್ಯವಾದುದು’, ‘ದಿಟ’, ‘ತನ್ನತನ’, ‘ಆತ್ಮಸ್ವಭಾವ’, ‘ಸಹಜವಾದ ಸ್ವರೂಪ’ ‘ಕೃತ್ರಿಮವಲ್ಲದ’ ‘ಮೋಕ್ಷ’, ಮತ್ತು ‘ಕೈವಲ್ಯ’ ಇತ್ಯಾದಿ ಅರ್ಥಗಳಿವೆ. ‘ಆಡುವ’ ಮತ್ತು ‘ನೀಡುವ’ ಎರಡು ಕ್ರಿಯೆಗಳಲ್ಲಿನ ‘ನಿಜ’ ಸ್ವಭಾವಶೋಧವನ್ನು ಕತೆ ತೆರೆಯುತ್ತದೆ. ಮೊದಲ ಸಾಲಿನಲ್ಲಿ ಕೇಂದ್ರಪಾತ್ರ ಪ್ರಸ್ತಾಪವೇ ಇಲ್ಲ, ಆದರೆ ಸಿದ್ಧಯ್ಯ ಎಂಬುದನ್ನು ಈ ಕ್ರಿಯೆಗಳಲ್ಲಿ ಸಹಜತೆ ಉಳಿಸಿಕೊಂಡವನೆಂದು ತಿಳಿಯಬಹುದು. (ಕತೆಯಲ್ಲಿನ ಬಹಳಷ್ಟು ಪಾತ್ರಗಳ ಅಸಹಜವೆಂಬ ವ್ಯಕ್ತಿತ್ವ ಬದಲಾಗುವುದನ್ನು, ಸಹಜತೆ ಪಡೆಯುವುದನ್ನು ಕತೆಯು ವಿಸ್ತಾರವಾಗಿ ಭಿನ್ನ ವಿನ್ಯಾಸ, ಪಾತ್ರಗಳ ಮೂಲಕ ಕಾಣಿಸುತ್ತಲೇ ಸಾಗುತ್ತದೆನ್ನುವ ಸೂಚನೆಯು ಮೊದಲಿಗೇ ದೊರೆಯುತ್ತದೆ.) ‘ಆಡುವ’ ಮತ್ತು ‘ನೀಡುವ’ ಕ್ರಿಯೆಗಳ ಮೂಲವಾದ ‘ಮನವ’ನ್ನು ಮಧ್ಯದಲ್ಲಿಟ್ಟು, ‘ಮನ’ವೇ ಕೇಂದ್ರವಾಗಿ ಕತೆ ತೆರೆಯುತ್ತದೆ. ‘ಬರ’ ಎಂಬ ಏಕವಚನಕ್ಕೆ ವಿರುದ್ಧವಾದ ಬಹುವಚನ ‘ಬನ್ನಿ’ ಎಂಬುದು. ‘ಬನ್ನಿ’ ಪದಕ್ಕೆ ‘ಮಾಡಿದ ಕೆಲಸಕ್ಕೆ ಕೊಡುವ ಕೂಲಿ’ ಎಂಬ ಅರ್ಥವೂ ಇದೆ. ಈ ಹಿನ್ನೆಲೆಯಲ್ಲಿ ಗಮನಿಸಿದರೆ, ‘ಆಡಿದ’ ಮತ್ತು ‘ನೀಡಿದ’ ಕೆಲಸಗಳಲ್ಲಿನ ‘ನಿಜ’ದ ಯೋಗ್ಯತಾನುಸಾರ ಪಡೆಯುವ ಪ್ರತಿಫಲದ ಮೂರ್ತರೂಪವಾದ ಸಿದ್ಧಯ್ಯನನ್ನು, ಲಿಂಗಯ್ಯನನ್ನು ಕರೆಯುತ್ತಿರುವ ಕ್ರಮವಿದು. ‘ಲಿಂಗಯ್ಯಾ ದಯಮಾಡಿ’ ಸಾಲಿನಲ್ಲಿನ ‘ದಯ’ ಪದಕ್ಕೆ ‘ಕರುಣೆ ತೋರು’, ‘ಕೃಪೆಮಾಡು’ ಮತ್ತು ‘ಅನುಕಂಪ’ವನ್ನು ತೋರು ಎಂಬ ಅರ್ಥಗಳಿವೆ. ಈ ಎಲ್ಲ ಹಿನ್ನೆಲೆಯಲ್ಲಿ ‘ಆಡಿದ’, ‘ನೀಡಿದ’ ಕ್ರಿಯೆಗಳಿಗೆ ಕಾರಣವಾದ ‘ಮನ’ದಲ್ಲಿನ ‘ನಿಜ’ದ ಕಾರಣದಿಂದ ಮಾತ್ರ ಪಡೆಯುವ ಕೂಲಿ ಕರುಣೆ ಎಂಬುದನ್ನು ಹಾಡುಗಾರ ಸಂವಹನ ಮಾಡುತ್ತಿದ್ದಾನೆ. ‘ಮಂಟೇದಾ’ ಎಂಬುದರಲ್ಲಿನ ‘ಮಂಟ’ ಪದಕ್ಕೆ ವಿಶಿಷ್ಟವಾದ ಅರ್ಥಗಳನ್ನು ನಿಘಂಟು ಕೊಡುತ್ತದೆ – “ಸಮತಲವಾದ ಚಾವಣಿಯುಳ್ಳ, ಬಾಗಿಲಿಲ್ಲದ ಚಪ್ಪರದಾಕಾರದ ಕಲ್ಲಿನ ಕಟ್ಟಡ”, “ಅರಮನೆ ಮುಂತಾದ ಕಡೆ ದರ್ಬಾರು ನಡೆಸಲು ನಿರ್ಮಿಸುತ್ತಿದ್ದ ಸಭಾಸ್ಥಾನ” ಎಂಬ ಎರಡು ಅರ್ಥಗಳು ಪ್ರಮುಖವಾದದ್ದು. ಆ ಕಲ್ಲಿನ ಕಟ್ಟದ ಒಳಗೆ, ಸಭಾಸ್ಥಾನದ ಒಳಗೆ, ಆಡಿದವರ ನೀಡಿದವರ ನಿಜವ ಅರಿವವನು, ದರ್ಬಾರು ನಡೆಸುತ್ತಾ ಕುಳಿತಿದ್ದಾನೆ ಎಂಬ ಅರ್ಥವನ್ನು ಕೊಡತ್ತಿದೆ. ಕತೆಯ ಕೇಂದ್ರಪಾತ್ರದ ಆಗಮನವೇ ಆಗಿಲ್ಲ ಎಂಬುದು ವಿಶೇಷ. ಆತ ಗಮನಿಸುವುದು, ಇರುವುದು ಇತ್ಯಾದಿ ವಿಷಯಗಳು ಬಂದುವು, ಆದರೆ ಆತನೇ ಇಲ್ಲ !

ಅನಂತರದ ಸಾಲುಗಳಲ್ಲಿ “ಮಡಿಕೇರಿ” “ಹರಳೆ” “ಹಂಪಾಪುರ” “ಮಿರಳೆ” (ಮಿರ್ಲೆ ?), “ಸಾಲಿಗ್ರಾಮ” “ಎಡತೊರೆ” “ಚಂದಗಾಲ” “ಕಪ್ಪಡಿ” “ಮಳವಳ್ಳಿ” “ಬೊಪ್ಪೆಗೌಡನಪುರ” ಇತ್ಯಾದಿ ಸ್ಥಳನಾಮಗಳಿವೆ. ಇದೊಂದು ನದಿಯ ಹರಿವಿನ ಹಾಗೆ ಅನಿಸುವಷ್ಟರಲ್ಲಿಯೇ “ಕಾವೇರಿ”ಯ ಪ್ರಸ್ತಾಪವೂ ಕತೆಯದಲ್ಲಿ ಬಂದುಬಿಡುತ್ತದೆ. “ಕಾವೇರಿ ಹರಿವಂತ, ನದಿಯ ಪಕ್ಕದ ಒಳಗೆ” ಎಂದು ಸ್ಥಾನ ನಿರ್ದೇಶಿಸಿ, ರಾಚಪ್ಪಾಜಿಗೆ ಒಂದು ವಿಶೇಷಣ ಇಡುತ್ತಾರೆ “ಕಿಡಗಣ್ಣ” (ಕಿಡಗಣ) – ಇದು ಏನು ? ಏಕೆ ? ಎನ್ನುವದು ಕತೆಯಲ್ಲಿ ಬೇರೆ ವಿನ್ಯಾಸಗಳಲ್ಲಿ ತೆರೆಯುತ್ತದೆ. “ಹಿರೀ ಚೆನ್ನಾಜಮ್ಮ” ಮತ್ತು “ತೋಪಿನ ದೊಡ್ಡಮ್ಮ” ಎಂಬ ಸ್ತ್ರೀ ನಾಮಪದಗಳು ಆರಂಭದಲ್ಲಿಯೇ ಬರುತ್ತದೆ. ಏಕೆ ಹಿರಿ ? ಏನದು ತೋಪು ? ಎಂಬುದು ಮುಂದಿನ ವಿನ್ಯಾಸ ಕಾಣಿಸುತ್ತದೆ. ಆದರೆ “ಅಮ್ಮ” “ತಾಯಿ” ಎಂಬ ಗೌರವಸೂಚಕವನ್ನು ಗಮನಿಸಿ, ಈ ಹೆಸರು ಬಂದಾಗಲೆಲ್ಲ ಮತ್ತೆ ಮತ್ತೆ ಈ ಪದಗಳು ಸೇರುತ್ತವೆ. “ಮಳವಳ್ಳಿ ಸ್ವಾಮಿಗಳು” ಈ ಸಾಲು ಬಹುಮುಖ್ಯ ಎನಿಸುವದು ಹಾಡುಗಾರ ಎಲ್ಲಿಯವನು ? ಆತನ ಗುರು, “ಹಾಡು ಕಲಿಸಿದ ಹರರೂಪೀ ಗುರು” ಯಾರು ? ಜೊತೆಗೆ ಅಲ್ಲಿರುವ ಮಠದ ವಿಷಯವೂ ನೆನಪಾಗುತ್ತದೆ. ತನ್ನ ಗುರುವಿನ ನಂತರ “ಬೊಪ್ಪೆಗೌಡನ್ಪುರದ ಬುದ್ಯವರೆ” ಎಂದು ಮಂಟೇಸ್ವಾಮಿ ಮಠದ ಪೀಠಾಧಿಪತಿಗಳ ಹೆಸರು ಬರುತ್ತದೆ. ಆದರೆ ಗಮನಿಸಿ ಇಲ್ಲಿಯೂ ಕೇಂದ್ರಪಾತ್ರವಾದ ಮಂಟೇಸ್ವಾಮಿಯ ಆಗಮನವಾಗಿಲ್ಲ.

|| ನಾವು ಕೂಗುವ ಕೂಗು ನಿಮ್ಮ ಪಾದಕ್ಕರವಾಗಲಪ್ಪ ||

ಮಂಟೇಸ್ವಾಮಿಯನ್ನು “ಕೂಗು” ವುದು ಆರಂಭವಾಗುತ್ತದೆ. ಈ ಸಾಲು ಮಂಟೆಸ್ವಾಮಿ ಮಹಾಕತೆಯ ಪೂರ್ಣವಾಗಿ ಅನುರಣಿಸುತ್ತಲೇ ಇರುತ್ತದೆ. “ಕೂಗು” ಪದಕ್ಕೆ – ಧ್ವನಿಮಾಡು, ಅರಚು, ಕರೆ, ಆಹ್ವಾನಿಸು ಎಂಬರ್ಥಗಳಿವೆ – ಯಾವ ಭಾವದಲ್ಲಾದರು ತೆಗೆದುಕೊಳ್ಳುವ ಸಾಧ್ಯತೆಯಿದೆ. “ಪಾದಕ್ಕೆ ಅರಿವಾಗಲಿ” ಎಂಬುದರ ಪಕ್ಕದಲ್ಲಿ “ಬನ್ನಿ” ಎಂಬುದನ್ನು ಇಟ್ಟೊಡನೆ, ಇದು ಕರೆಯುವ ಕ್ರಮವೆನ್ನುವುದು ಅರಿವಿಗೆ ಬರುತ್ತದೆ. ಅನಂತರ ಕುಳಿತ ಮನೆ, ಮನೆಯ ೊಡೆಯ ಮತ್ತೆ ಮನೆಯ ಸ್ಥಾನ ಎಲ್ಲವೂ ಬರುತ್ತದೆ. ಈ ಹರಿನಾರು ಅಂಕಣ, ಹದಿನಾರು ಲೋಕ ಭುವನ ಸಮಸ್ತ ವಿಸ್ತಾರ ಇತ್ಯಾದಿಗಳೆಲ್ಲವೂ ತೆರೆಯುತ್ತವೆ.  

ಕೊನೆಯ ಭಾಗದಲ್ಲಿ ಎರಡೆರಡು ವೈರುಧ್ಯಗಳು ಏಕತ್ರವಾಗಿ ಗಟ್ಟಿಯಾಗಿ ಸಂರಚನೆಗೊಂಡಿದೆ. “ಹದಿನಾರು ಅಂಕಣದ ತೊಟ್ಟಿಯ ಹಟ್ಟಿ” ಯ “ಒಳಗೆ” ಎಂದು ಮೊದಲು ಹೇಳಿ, ಅನಂತರ “ಕುರಿಯಾ ಕೊಟ್ಟಿಗೆ” “ಒಳಗೆ” ಎನ್ನುವ ಮಾತು ಬರುತ್ತದೆ. “ಮನೆಯ ಒಳಗೆ” ಎಂದು ಸಂರಚನೆಗೊಂಡ ಕತೆ, ತಕ್ಷಣದಲ್ಲೆ “ಕುರಿಯಾ ಕೊಟ್ಟಿಗೆ” ಎಂದೊಡನೆ ಸ್ಥಾನ ನಿರ್ದೇಶನ “ಮನೆಯಿಂದ ಹೊರಗೆ” ಎಂದು ಸ್ಪಷ್ಟವಾಗುತ್ತದೆ. “ಕೊಟ್ಟಿಗೆ” ಯ ಕಡೆಗೆ ಗಮನ ಕೊಡುವಂತೆ ಮಾಡುತ್ತದೆ. ಇದು “ತಿಪ್ಪೆ ಮೇಲಿನ ಜ್ಯೋತಿ” ಕಡೆಗೆ ಕರೆದುಕೊಂಡು ಹೋಗುವ ಕ್ರಮ, ಮತ್ತು ಆ ನೆನಪನ್ನು ಕೇಳುಗನ ಒಳಗೆ ಸಂಘಟನೆ ಮಾಡುತ್ತದೆ. ಈ “ರಚನೆ” ಅಲ್ಲೆ ನಿಲ್ಲದೆ ಮನೆಯ ವಿಸ್ತೀರ್ಣ “ಹದಿನಾರು ಅಂಕಣ” ದ ಪ್ರಸ್ತಾಪ ಮಾಡಿ, ಅದಕ್ಕಿಂತ ವಿಸ್ತಾರದಲ್ಲಿ ಕಡಿಮೆಯಾದ “ಕೊಟ್ಟಿಗೆ” ಕಡೆಗೆ ಚಲಿಸುತ್ತದೆ. ಸಮಾಜದಲ್ಲಿ ಮುನ್ನೆಲೆಗೆ ಬಂದ ಸಂಸ್ಕೃತಿಗೆ ಸಿಕ್ಕಷ್ಟು ಪ್ರಾಧಾನ್ಯತೆ, ಹಿಂದೆ ತಳ್ಳಲ್ಪಟ್ಟ ಸಂಸ್ಕೃತಿಗೆ ಸಿಕ್ಕಿಲ್ಲವೆಂಬುದರ ಕಡೆಗೆ ಯೋಚಿಸುವಂತೆ ಮಾಡುತ್ತದೆ. ಕತೆಯ ನಾಯಕ ಮಂಟೇಸ್ವಾಮಿ ಕುಳಿತಿದ್ದವನು ನಿಂತು, ಮುಂಬಾಗಿಲಿನಿಂದ ಪ್ರವೇಶ ಪಡೆದವನು, ಹಿಂಬಾಗಿಲಿನ ಕಡೆಗೆ ನಡೆದು, ಅಲ್ಲಿಂದ “ಕೊಟ್ಟಿಗೆ”ಯ “ಒಳಗೆ” ಪ್ರವೇಶ ಪಡೆಯುತ್ತಾನೆ.

ನಂತರದ ಸಾಲುಗಳು ಎರಡು ವಿರುದ್ಧ ಜೀವಿಗಳಾದ “ಹುಲಿ” ಮತ್ತು “ಕುರಿ” ಗಳ ಪ್ರಸ್ತಾಪ ಮಾಡುತ್ತದೆ. ಇದೊಂದು “ಕುರಿಯಾ ಕೊಟ್ಟಿಗೆ ಒಳಗೆ” – “ಉಲಿಯ ಚರ್ಮ ಹಾಸವರೆ” ಎಂದಿದೆ. ಮಂಟೇಸ್ವಾಮಿ ಹಾಸಿದ್ದಾನೆ ಅಷ್ಟೆ, ಇನ್ನು ಕುಳಿತಿಲ್ಲ – “ಸಂರಚನೆ”ಯೊಂದರಲ್ಲಿ ನಾಯಕನ ಸ್ಥಾನ ನಿರ್ದೇಶನ ಕುಳಿತುಕೊಳ್ಳುವವರೆವಿಗೂ ನಡೆದಿಲ್ಲ. ಅನಂತರದ ಸಾಲು “ಕಂಡಾಯದ ಮೂರ್ತಿ” “ಧರೆಯಾಗ್ದೊಡ್ಡವರು” ಎಂಬ ಸಾಲುಗಳು ಬಂದೊಡನೆ ನಿಂತಿದ್ದವನು ಕುಳಿತಿರುವ ಚಿತ್ರ ಕಣ್ಣ ಮುಂದೆ ಬರುತ್ತದೆ. ಮೊದಲು ತನ್ನ ಸಂಕೇತ – ಚಿಹ್ನೆ – ಗಳಿಗೊಂದು ಸ್ಥಳ ಮಾಡಿ, ಅನಂತರ ಕುಳಿತುಕೊಳ್ಳುತ್ತಾನೆ. ಕಾಲ ನಿರ್ದೇಶನಕ್ಕೆ “ಮೂರು ಸಂಖ್ಯೆ”ಗಳು ಮತ್ತು ಅವುಗಳ “ಗಣಿತದ ಸಂಕಲನ ಕ್ರಿಯೆ” ನಡೆಯುತ್ತದೆ. “ಆರು + ಮೂರು = ಒಂಭತ್ತು” ಎಂದು.  ಇಲ್ಲಿಯೂ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಸಂಖ್ಯೆಗಳು ದುಪ್ಪಟ್ಟಾಗುವ ಕ್ರಮ ಹಾಗೂ ಪ್ರತೀ ಸಂಖ್ಯೆಗಳ ನಡುವೆ ಉಂಟಾಗಿರುವ ಮೂರು ಸಂಖ್ಯೆಗಳ ಸಮಾನ ಅಂತರ. ಈ ಅಂತರಗಳೂ ಸಾಮಾಜಿಕ ಅಂತರದ ಕಡೆಗೆ ಯೋಚಿಸುವಂತೆ ಸ್ಥಾನ, ಸ್ಥಳ, ಕ್ರಿಯೆ, ಸಂಖ್ಯೆಗಳ ಮೂಲಕ ಮಾಡುತ್ತದೆ. ಕೊನೆಗೆ “ಜೋಲು ನಿದಿರೆ” ಎಂಬೊಂದು ಪದವಿದೆ. ಇದು ಬಹುಮುಖ್ಯವಾದದ್ದು. “ಯೋಗನಿದ್ರೆ” ಯ ಸ್ಥಿತಿಯದು.‌ ಪರ್ಯಾಯ ಸಂಸ್ಕೃತಿ ಟಂಕಿಸುವ ಪದವಿದು. ಸ್ಥಿತಪ್ರಜ್ಞತೆಯನ್ನು ಸೂಚಿಸಲು ಈ ಜೋಲುನಿದಿರೆ ಪದವು ಬಳಕೆಯಾಗಿದೆ.

ತೊಟ್ಟಿಯ ಅಟ್ಟಿಯ ಒಳಗಿನಿಂದ ಹಿಂಬಾಗಿಲಿನ ಕಡೆಗೆ ನಡೆದು, ಕೊಟ್ಟಿಗೆಯ ತಿಪ್ಪೆಯ ಮೇಲೆ ನಲಿದು, ಮನೆಯನ್ನೇ ಆಕ್ರಮಿಸಿಕೊಂಡು ದೊಡ್ಡ ಪರಂಪರೆಯೇ ಆರಂಭ ಮಾಡಿಬಿಡುತ್ತಾನೆ. ಶೀರ್ಷಿಕೆಯ ಸಾಲಿನ ಮೊದಲ ಪದವಾಗಿ ಬನ್ನಿ ಎಂಬುದನ್ನು ಹಾಕಿ ಓದಿ. ಇದೊಂದು ದೊಡ್ಡ ಭಕ್ತಿ ಶರಣಾಗತಿಯ ಆಹ್ವಾನವಾಗಿ ಕೆಲಸ ಮಾಡಿಬಿಡುತ್ತದೆ. ಮಂಟೇಸ್ವಾಮಿ ಕತೆಯ ಪೂರ್ಣ “ಸಿದ್ದಯ್ಯಾ ಸ್ವಾಮಿ ಬನ್ನಿ, ಮಂಟೇದಾ ನೀವೆ ಬನ್ನಿ” ಎಂಬ ಸ್ಪಷ್ಟ ವ್ಯಕ್ತಿ ನಿರ್ದೇಶನ ನಡೆಯುತ್ತಲೇ ಇರುತ್ತದೆ.


Leave a Reply

Back To Top