ಸಮಾಜಸಂಗಾತಿ
ಜಯಲಕ್ಷ್ಮಿ ಕೆ. ಅವರಲೇಖನ
‘ನಾಗರಿಕ ಪ್ರಪಂಚದಲ್ಲಿ…’
[6:10 pm, 16/10/2024] Jayalaxmi K Madikeri: ಏನು ಕಾಲ ಬಂತಪ್ಪ ಶಿವನೇ…ಪ್ರೀತಿಸಿದ ಬಾಲೆಯನ್ನು ಆಕೆಗೆ ಹದಿನೆಂಟು ವರ್ಷ ಆದ ಮೇಲೆ ಮದುವೆ ಮಾಡಿಕೊಡುತ್ತೇವೆ ಎಂದು ಆಕೆಯ ಅಪ್ಪ ಅಮ್ಮ ಹೇಳಿದಾಗ ಮನೆಗೆ ನುಗ್ಗಿದವನೇ ಸತ್ತ ಪ್ರಾಣಿಯನ್ನು ಎಳೆದೊಯ್ಯುವ ಹಾಗೆ ಆಕೆಯನ್ನು ಎಳೆದೊಯ್ದು ಅನತಿ ದೂರದಲ್ಲಿ ಬಾಲೆಯ ಅಮ್ಮನಿಗೆ ಕಾಣುವಂತೆ ಆಕೆಯ ತಲೆ ಕತ್ತರಿಸಿ ಕೈಯಲ್ಲಿ ಹಿಡ್ಕೊಂಡು ಹೋಗ್ತಾನೆ! ಅಲ್ಲೊಬ್ಬ ತನ್ನ ಪ್ರೇಯಸಿ ಮಾತು ನಿಲ್ಲಿಸಿಬಿಟ್ಟಳು ಎಂದು ಅವಳ ಮನೆಗೇ ಬಂದು ನಲವತ್ತು -ಐವತ್ತು ಬಾರಿ ಚುಚ್ಚಿ ಚುಚ್ಚಿ ಸಾಯಿಸುತ್ತಾನೆ .. ಇನ್ನೊಬ್ಬ ಹುಡುಗಿಯೊಬ್ಬಳು ಅವನನ್ನು ಪ್ರೀತಿ ಮಾಡಲು ಒಪ್ಪಲಿಲ್ಲ ಎಂದು ಅವಳ ಮುಖಕ್ಕೆ ಆಸಿಡ್ ಎರಚಿ ಕುರೂಪಗೊಳಿಸುತ್ತಾನೆ.. ಇನ್ನು ಯಾವನೋ ಒಬ್ಬ ತಾನು ಪ್ರೀತಿಸಿದ ಹುಡುಗಿಯನ್ನೇ ತನ್ನ ಸ್ನೇಹಿತರಿಗೆ ತಲೆ ಹಿಡಿದು ಮಂಚದಲ್ಲಿ ದೇಹ ಹಂಚಿಕೊಳ್ಳಲು ಕಾಟ ಕೊಡುತ್ತಾನೆ! ಇನ್ನಾವನೋ ಪಾಪಿ ಪ್ರೀತಿಸುವ ನಾಟಕ ಮಾಡಿ ಆಕೆಯೊಡನೆ ಲೈಂಗಿಕ ಸುಖವನ್ನೂ ಅನುಭವಿಸಿ ನಂತರ ವಿಷ ಕೊಟ್ಟು ಸಾಯಿಸುತ್ತಾನೆ.. ಮತ್ತೊಬ್ಬ ಪುರುಷನ ಜೊತೆಗೆ ಹೋಗಲೊಲ್ಲದ ತನ್ನ ಪ್ರಿಯತಮೆಯನ್ನು ಉಸಿರುಗಟ್ಟಿಸಿ ಸಾಯಿಸುತ್ತಾನೆ!! ಮಗದೊಬ್ಬ ಪ್ರೀತಿಸಿ ದೇಹ ಹಂಚಿಕೊಂಡು ಮಜಾ ಅನುಭವಿಸದ ಪಾಪಿ ಆ ಹೆಣ್ಣು ಮಗಳ ದೇಹ ಕತ್ತರಿಸಿ ತುಂಡು ತುಂಡು ಮಾಡಿ ಫ್ರಿಡ್ಜ್ ನಲ್ಲಿ ಇಡ್ತಾನೆ … ಅವನಾವನೋ ಧೂರ್ತ ತನ್ನ ಪ್ರೇಯಸಿಯನ್ನು ಗಂಟೆಗೆ ಒಬ್ಬೊಬ್ಬರ ಬಳಿಗೆ ಕಳಿಸಿಕೊಟ್ಟು ಆಕೆಗೆ ಚಿತ್ರ ಹಿಂಸೆ ಕೊಡ್ತಾನೆ… ಇನ್ನೊಬ್ಬ ತನ್ನನ್ನು ಪ್ರೀತಿಸುವಂತೆ ಬಲವಂತ ಮಾಡಿ ಆಕೆ ಒಪ್ಪದೇ ಹೋದಾಗ ವಂಚನೆಯಿಂದ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಕತ್ತು ಹಿಸುಕಿ ಸಾಯಿಸಿ ಎಸೆಯುತ್ತಾನೆ!
ಕ್ರೌರ್ಯದ ಪರಮಾವಧಿ ಮೆರೆಯುವ ಈ ಘಟನೆಗಳಿಗೆಲ್ಲ ‘ ಪ್ರೀತಿ ‘ ಎನ್ನುವ ಪವಿತ್ರ ಪದದ ಲೇಪನ ಬೇರೆ! ಪ್ರೀತಿ ಎಂದರೇನು? ಒಂದು ಬಾರಿ ಆಸ್ಪತ್ರೆಯೊಂದರಲ್ಲಿ ಇಬ್ಬರು ಗರ್ಭಿಣಿಯರಿಗೆ ಒಂದೇ ದಿನ ಹೆರಿಗೆಯಾಯಿತು. ಆಗ ಯಾವುದೋ ಆರೋಗ್ಯ ಸಮಸ್ಯೆಯಿಂದ ಒಂದು ಶಿಶು ಮರಣ ಹೊಂದಿತು, ಇನ್ನೊಂದು ಉಳಿಯಿತು. ಇಬ್ಬರು ತಾಯಿಯರು ‘ಉಳಿದ ಮಗು ನನ್ನದು, ಮಗು ನನ್ನದು ಎಂದು ಜಗಳ ಶುರುವಾಯಿತು. ಜಗಳಕ್ಕೆ ಪರಿಹಾರ ಸಿಗದೇ ಹೋದಾಗ ನ್ಯಾಯ ತೀರ್ಮಾನ ಮಾಡಲು ಊರಿನ ಮುಖಂಡರು ಬಂದು ಒಬ್ಬ ತಳವಾರನನ್ನು ಕರೆಸಿದರು. ತಾಯಂದಿರ ಸಮ್ಮುಖದಲ್ಲಿ ಆ ತಳವಾರನಿಗೆ ” ಈ ಮಗುವನ್ನು ಸಮ ಪ್ರಮಾಣದಲ್ಲಿ ತುಂಡು ಮಾಡಿ ಈ ಇಬ್ಬರು ತಾಯಂದಿರಿಗೆ ಹಂಚು ” ಎಂದರು. ಇದನ್ನು ಕೇಳಿ ಒಬ್ಬಾಕೆ ಸಮ್ಮತಿ ಸೂಚಿಸಿದರೆ ಮತ್ತೊಬ್ಬಳು ಓಡಿ ಎದುರು ಬಂದು ” ಬೇಡ, ಬೇಡ, ಈ ಮಗುವನ್ನು ತುಂಡರಿಸಬೇಡಿ… ಈ ಮಗು ಆಕೆಯದೇ.. ಅವಳಿಗೇ ಕೊಡಿ… ಅವಳಿಗೇ ಕೊಟ್ಟುಬಿಡಿ… ನನಗೆ ಬೇಡ ” ಎಂದಳಂತೆ. ‘ಪ್ರೀತಿ ‘ಅಂದರೆ ಇದು. ತಾನು ಹೆತ್ತ ಮಗು ಎಲ್ಲಾದರೂ ಚೆನ್ನಾಗಿ ಬದುಕಲಿ ಎನ್ನುವ ಭಾವ. ಮುಂದೇನಾಯಿತು ಎನ್ನುವುದು ಇಲ್ಲಿ ಮುಖ್ಯ ಅಲ್ಲ. ತನಗೆ ದಕ್ಕದಿದ್ದರೂ ಪರವಾಗಿಲ್ಲ, ತಾನು ಪ್ರೀತಿಸಿದ ಜೀವ ಸುಖವಾಗಿರಲಿ ಎನ್ನುವ ಭಾವನೆ ನಿಜವಾದ ಪ್ರೀತಿ. ಮೇಲಿನ ಯಾವುದೇ ಉದಾಹರಣೆಗಳಲ್ಲಿ ಇಂತಹ ಸಂವೇದನೆಗಳಿವೆಯಾ? ಅಲ್ಲೆಲ್ಲ ಕಾಣುವುದು ಸ್ವಾರ್ಥ…ಕ್ರೌರ್ಯ… ಪೈಶಾಚಿಕ ಪ್ರವೃತ್ತಿ, ಮೃಗೀಯ ವರ್ತನೆ! ಕಾಮ ಪಿಶಾಚಿಗಳ ಇಂತಹ ನೀಚ ಕಾರ್ಯಗಳಿಗೆ ಪ್ರೀತಿಯ ಮುಖವಾಡವನ್ನೇಕೆ ತೊಡಿಸುತ್ತಾರೆ ಮಾಧ್ಯಮದವರು? ಯಾರೋ ಹೊತ್ತು ಹೆತ್ತು ಸಾಕಿದ ಹೆಣ್ಣುಮಕ್ಕಳ ಜೀವ ತೆಗೆಯುವ ಹಕ್ಕನ್ನು ಇಂತಹ ನೀಚರಿಗೆ ಕೊಟ್ಟದ್ದು ಯಾರು..? ಇಷ್ಟು ಧೈರ್ಯ ಆ ಪಾಪಿಗಳಿಗೆ ಬಂದದ್ದಾದರೂ ಹೇಗೆ..? ಇಂತಹ ದುಷ್ಕೃತ್ಯ ಎಸಗಿದವರು ಬಹುತೇಕರು ಮಾದಕ ವ್ಯಸನಿಗಳು. ಹುಡುಗಿಯರ ಹುಚ್ಚು ಹಿಡಿದ ಸಂದರ್ಭದಲ್ಲಿ ತಾವು ಮೆದುಳಿಗೆ ಹತ್ತಿದ ನಶೆಯೂ ಸೇರಿ ಇಂತಹ ಘನ ಘೋರ ಕೃತ್ಯ ಎಸಗಿದ ಈ ಪಾಪಿಗಳು ವಿವೇಚನಾ ಶಕ್ತಿಯನ್ನು ಕಳೆದುಕೊಂಡ ಪಾಪಿಗಳು!
ಒಂದೆಡೆ ಯುವತಿಯರ ಮೇಲೆ ಅತ್ಯಾಚಾರ ಕೊಲೆ ಪ್ರಕರಣಗಳ ದಾಖಲೆ ಹೆಚ್ಚಿದರೆ, ಇನ್ನೊಂದೆಡೆ ಮುದ್ದು ಮುದ್ದಾಗಿ ಆಟವಾಡುತ್ತಾ ಪ್ರಪಂಚವೆಂದರೇನೆಂದೇ ಅರಿಯದ ಮುಗ್ಧ ಕಂದಮ್ಮಗಳನ್ನು ತಮ್ಮ ಕಾಮ ತೃಷೆಗೆ ಬಳಸಿಕೊಂಡು ಹೊಸಕಿ ಎಸೆಯುವ ದುಷ್ಕರ್ಮಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕೆಲವೊಮ್ಮೆ ಅರಳುವ ಮೊಗ್ಗುಗಳನ್ನು ಹಿಚುಕಿ ಹಾಕುವ ಅಮಾನುಷ ಕೃತ್ಯ ಮನೆ ಮಂದಿ ಎನಿಸಿಕೊಂಡವರಿಂದಲೇ ನಡೆಯುತ್ತದೆ! ಯಾರನ್ನು ನಂಬಬೇಕು..? ಯಾರನ್ನು ಬಿಡಬೇಕು? ಈ ಪ್ರಶ್ನೆಗಳೇ ಪಾಲಕರಿಗೆ ಬೆಟ್ಟದಷ್ಟು ದೊಡ್ಡ ಸಮಸ್ಯೆಗಳಾಗಿ ಕಾಡುತ್ತದೆ. ನಾಗರಿಕರೆಂದು ಸಭ್ಯರೆಂದು ಗುರುತಿಸಿಕೊಂಡವರು ಕೂಡ ಪುಟ್ಟ ಹೆಣ್ಣುಮಕ್ಕಳ ಜೊತೆಗೆ ಅಸಭ್ಯವಾಗಿ ವರ್ತಿಸುವ ಉದಾಹರಣೆಗಳ ಬಗ್ಗೆ ಓದಿದಾಗ, ಕೇಳಿದಾಗ ನಿಜಕ್ಕೂ ಖೇದವೆನಿಸುತ್ತದೆ.
ಹೆಣ್ಣೆಂದರೆ ಭೋಗದ ವಸ್ತುವೇ? ಪುರುಷರು ಹೇಳಿದಂತೆ ಕೇಳಬೇಕಾದ ಸೇವಕಿಯರೇ? ಆಡಿಸಿದಂತೆ ಆಡಬೇಕಾದ ಗೊಂಬೆಗಳೇ? ಈಗಾಗಲೇ ಹೆಣ್ಣುಮಕ್ಕಳ ಸಂಖ್ಯೆ ಇಳಿಮುಖವಾಗಿದೆ. ಕೆಲವೊಂದು ಪ್ರದೇಶಗಳಲ್ಲಿ ಗಂಡು ಮಕ್ಕಳು ಕಾಡಿದರೂ ಬೇಡಿದರೂ ಹುಡುಗಿಯರು ಸಿಗುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ…..
ಕೆಲವೊಂದು ಹೆಣ್ಣುಮಕ್ಕಳು ಕೂಡಾ ಪ್ರೀತಿಯ ನಾಟಕ ಆಡಿ ಹುಡುಗರನ್ನು ಮೋಸಗೊಳಿಸಿ ತದ ನಂತರ ತಾವೇ ನರಕ ಅನುಭವಿಸುತ್ತಾರೆ. ಮನಸು ಅನ್ನೋದು ಕಲ್ಲಲ್ಲ. ಕೆಲವು ಹುಡುಗರು ಎಷ್ಟರಮಟ್ಟಿಗೆ ‘ಪ್ರೀತಿ ‘ ಎನ್ನುವ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಾರೆ ಎಂದರೆ ತಾವು ಪ್ರೀತಿಸಿದ ಹುಡುಗಿಯ ಹೊರತಾದ ಒಂದು ಜಗತ್ತೇ ಇಲ್ಲ ಎನ್ನುವಷ್ಟು. ಇಂತಹ ಹುಡುಗರು ತಾವು ಮೋಸ ಹೋದೆವು ಎಂದರಿತಾಗ ಮನಸ್ಸನ್ನು ನಿಗ್ರಹಿಸಲಾಗದೆ ಯಾವ ಹಂತಕ್ಕೆ ಇಳಿಯುವುದಕ್ಕೂ ಹೇಸುವುದಿಲ್ಲ. ಮಾಧ್ಯಮಗಳಲ್ಲಿ ನಾವು ನೋಡುವ, ಓದುವ, ಕೇಳುವ ಹೆಚ್ಚೇಕೆ ನಮ್ಮ ಸುತ್ತ -ಮುತ್ತಲಿನಲ್ಲಿ ನಡೆಯುವ ಹೆಣ್ಣುಮಕ್ಕಳ ಮೇಲಾಗುವ ಅನೇಕ ದೌರ್ಜನ್ಯಗಳಿಗೆ ಮೂಲ ಕಾರಣ ಹೆಣ್ಣು ಮಕ್ಕಳೇ ಆಗಿರುತ್ತಾರೆ. ಕೆಟ್ಟ ಮೇಲೆ ಬುದ್ಧಿ, ಸತ್ತ ಮೇಲೆ ದುಃಖ.. ಫಲವೇನು? ಯಾರೇ ಆಗಲಿ, ಯಾವ ವಿಚಾರವೇ ಆಗಲಿ, ಅತಿರೇಕದ ವರ್ತನೆಗೆ ಮುಂದಾಗಬಾರದು. ಅತಿ ಆದರೆ ಅಮೃತವೂ ವಿಷವೇ ಎಂದು ನಮ್ಮ ಹಿರಿಯರು ಸುಮ್ಮನೆ ಹೇಳಿಲ್ಲ. ಕೆಲವೊಂದು ಹೆಣ್ಣುಮಕ್ಕಳ ಮುಂದಾಲೋಚನೆ ಇಲ್ಲದ ಚೆಲ್ಲು -ಚೆಲ್ಲಾದ ನಡವಳಿಕೆ ಮತ್ತು ಆ ವರ್ತನೆಯ ಪರಿಣಾಮ ಅವರು ಅನುಭವಿಸುವ ಯಾತನೆ ಇವುಗಳನ್ನು ನೋಡಿದಾಗ ದ. ರಾ. ಬೇಂದ್ರೆ ಯವರ ಹಾಡಿನ ಸಾಲೊಂದು ನೆನಪಾಗುತ್ತದೆ.
ಒಡಲ ನೂಲಿನಿಂದ ನೇಯುವಂತೆ ಜೇಡ ಜಾಲ …
ತನ್ನ ದೈವ ರೇಖೆ ಬರೆಯುವಂತೆ ತಾನೆ ಮಾಲ …
ಆಲೋಚನೆ ಮಾಡದೆ ತೆಗೆದುಕೊಳ್ಳುವ ನಿರ್ಧಾರ ಭವಿಷ್ಯಕ್ಕೇ ಕೊಡಲಿಯೇಟು ಆದೀತು. ಚಕ್ರವ್ಯೂಹದಿಂದ ಹೊರಬರಲು ಶೂರ ಅಭಿಮನ್ಯುವಿಗೇ ಸಾಧ್ಯ ಆಗಲಿಲ್ಲ! ಪ್ರೀತಿ ಎನ್ನುವ ಚಕ್ರವ್ಯೂಹದಿಂದ ಹೊರಬರುವುದು ಅಷ್ಟು ಸುಲಭವೇನಲ್ಲ. ಭೇದಿಸಲಸಾಧ್ಯ ಕೋಟೆಯ ಒಳಗೆ ಹೋಗುವ ಮುನ್ನ ಎಚ್ಚರ ಅಗತ್ಯ!
ಇನ್ನು ಕೆಲವೊಂದು ಸಂದರ್ಭಗಳಲ್ಲಿ ಶಿಶುಗಳೆಂದೂ ನೋಡದೆ ಅತ್ಯಾಚಾರ ಮಾಡಿ ಹೊಸಕಿ ಹಾಕುವ ಕೆಲ ಕಾಮುಕರ ನೀಚ ಪ್ರವೃತ್ತಿ, ಅನಾಗರಿಕ ನಡವಳಿಕೆ ನೋಡುವಾಗ ನಿಜಕ್ಕೂ ಅಸಹ್ಯ ಎನಿಸುತ್ತದೆ. ಇಂತಹ ರಾಕ್ಷಸೀಯ ಕೃತ್ಯವನ್ನು ಮನುಷ್ಯ ಎಂದು ಕರೆಸಿಕೊಳ್ಳುವವನು ನಡೆಸಲು ಸಾಧ್ಯವೇ? ಈ ರೀತಿಯಲ್ಲಿ ವಿಕೃತಾನಂದ ಪಡೆಯುವವ ಮಾನವ ಎಂದು ಕರೆಸಿಕೊಳ್ಳಲು ಯೋಗ್ಯನೇ? ಒಂದು ತಾಯಿಯ ಒಡಲಿಂದ ಬಂದ ಜೀವ, ಇನ್ನೊಂದು ಜೀವವನ್ನು ಅಷ್ಟೊಂದು ತುಚ್ಚವಾಗಿ, ಕ್ರೂರವಾಗಿ, ಭಯಾನಕವಾಗಿ, ಹೀನವಾಗಿ ನಡೆಸಿಕೊಳ್ಳಲು ಸಾಧ್ಯವೇ…? ಇತ್ಯಾದಿ ಹತ್ತು ಹಲವು ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ. ಬಹುಶಃ ಮಾದಕ ವ್ಯಸನದ ಪರಿಣಾಮ ಇದಿರಬೇಕು. ಮತ್ತೇರಿದ ಮನುಷ್ಯ ಮದಗಜಕ್ಕಿಂತಲೂ ಅಪಾಯಕಾರಿ ಎನ್ನುವ ಒಂದು ಮಾತು ಸತ್ಯ ಎನಿಸುತ್ತದೆ. ಮದ್ಯ ಸೇವನೆ, ಮಾದಕ ವಸ್ತುಗಳ ಸೇವನೆ ಇತ್ಯಾದಿಗಳಿಂದ ಕೆಲವೊಮ್ಮೆ ಕೆಲವೊಂದು ಪುರುಷರು ತಮ್ಮ ಮಾನಸಿಕ ಸ್ಥಿರತೆಯನ್ನು ಕಳೆದುಕೊಂಡು ಮೃಗೀಯ ವರ್ತನೆಗೆ ಒಳಗಾಗುತ್ತಾರೆ. ಅದರ ಪರಿಣಾಮವೇ ಇಂತಹ ಅನಾಗರಿಕ, ಮೃಗೀಯ ವರ್ತನೆಗೆ ಪ್ರೇರಣೆ ಇರಬಹುದು. ಬಹುಶಃ ಮಾದಕ ವಸ್ತುಗಳು ಹೆಚ್ಚಿದಂತೆ ಸಮಾಜದಲ್ಲಿ ಇಂತಹ ಘೋರ ಅಪರಾಧಗಳು ಹೆಚ್ಚುತ್ತಿವೆ. ವಿಕೃತ ಆನಂದ ಪಡೆವ ವ್ಯಸನಿಗಳು ಹೆಚ್ಚುತ್ತಿದ್ದಾರೆ. ಆದ್ದರಿಂದ ಮಾದಕ ವಸ್ತುಗಳ ಬಳಕೆ ನಿಲ್ಲಬೇಕು. ಆರೋಗ್ಯಕರ ಮನಸ್ಥಿತಿ ನಮ್ಮದಾಗಬೇಕು. ಆಗ ಮಾತ್ರ ಮನುಷ್ಯ ಮನುಷ್ಯನಾಗಿ ಉಳಿಯಲು, ಬೆಳೆಯಲು ಸಾಧ್ಯ.
ಜಯಲಕ್ಷ್ಮಿ ಕೆ,