“ಲೀಡ್ ಕೈಂಡ್ಲಿ ಲೈಟ್” (Lead, Kindly Light) ಎಂಬ ಕವಿತೆಯನ್ನು ಜಾನ್ ಹೆನ್ರಿ ನ್ಯೂಮನ್ (John Henry Newman) ಎಂಬ ಪಾದ್ರಿಯು 1833 ರಲ್ಲಿ ಬರೆದಿರುವುದು. ಬಿ. ಎಂ. ಶ್ರೀಕಂಠಯ್ಯನವರ ‘ಇಂಗ್ಲೀಷ್ ಗೀತೆಗಳು’ ಎಂಬ ಕೃತಿಯಲ್ಲಿ ಅನುವಾದವಾಗಿ, ‘ಪ್ರಾರ್ಥನೆ’ ಎಂಬ ಶೀರ್ಷಿಕೆಯಿಂದ ಅದರ ಪರಿಷ್ಕೃತ ಮುದ್ರಣದಲ್ಲಿ ಸೇರಿದ ಅನಂತರ ಬಹುಪ್ರಖ್ಯಾತವಾಗಿದೆ. ‘ಇಂಗ್ಲೀಷ್ ಗೀತೆಗಳು’ ಕೃತಿಯ ಮೊದಲ ಮುದ್ರಣದ ಕಾಲದಲ್ಲಿ “ಲೀಡ್ ಕೈಂಡ್ಲಿ ಲೈಟ್” ಕವಿತೆಯು ಸೇರಿರಲಿಲ್ಲ, ಎರಡನೆಯ ಪರಿಷ್ಕೃತ ಮುದ್ರಣದ ಸಮಯದಲ್ಲಿ ‘ಶ್ರೀ’ ಅವರು ಮೂರು ಕವಿತೆಗಳನ್ನು ಸೇರಿಸಿದರು, ಅವುಗಳಲ್ಲಿ ‘ಪ್ರಾರ್ಥನೆ’ಯೂ ಒಂದು. ನ್ಯೂಮನ್ ತನ್ನ ಕವಿತೆಗೆ “ದಿ ಪಿಲ್ಲರ್ ಆಫ್ ದಿ ಕ್ಲೌಡ್” ಎಂದು ಮೊದಲು ಶೀರ್ಷಿಕೆಯನ್ನು ಕೊಟ್ಟಿದ್ದರು. 1834 ರಲ್ಲಿ ಮೊಟ್ಟ ಮೊದಲ ಬಾರಿಗೆ ಬ್ರಿಟೀಷ್ ಮ್ಯಾಗಜಿನ್ ನಲ್ಲಿ ಪ್ರಕಟವಾಯಿತು.

ಈ ಕವಿತೆ ಸ್ಫುರಣಗೊಳ್ಳಲು ವಿಶೇಷವಾದ ಘಟನೆಯೊಂದು ತನ್ನ ಬದುಕಿನಲ್ಲಿ ನಡೆದಿರುವುದನ್ನು ನ್ಯುಮನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಮತ್ತು ಶೀರ್ಷಿಕೆ ಬದಲಾವಣೆಯಾಗಿರುವುದನ್ನೂ ಸ್ವತಃ ಹೇಳಿಕೊಂಡಿದ್ದಾರೆ. ಇದು ಆಶ್ಚರ್ಯವನ್ನು ಉಂಟುಮಾಡುವಂತಹದ್ದಾಗಿದೆ.. ನ್ಯೂಮನ್ ಪತ್ರಿಕೆಯ ಸಂಪಾದಕರಿಗೆ ಹೇಳಿರುವ ಮಾತುಗಳು ಹೀಗಿವೆ – “Before starting from my inn in the morning of May 26th or 27th, I sat down on my bed and began to sob violently. My servant, who had acted as my nurse, asked what ailed me. I could only answer, “I have a work to do in England.” I was aching to get home; yet for want of a vessel I was kept at Palermo for three weeks. I began to visit the Churches, and they calmed my impatience, though I did not attend any services. I knew nothing of the Presence of the Blessed Sacrament there. At last I got off in an orange boat, bound for Marseilles. Then it was that I wrote the lines, “Lead, kindly light”, which have since become well known. We were becalmed a whole week in the Straits of Bonifacio. I was writing verses the whole time of my passage.” ಈ ಮಾತುಗಳೆಲ್ಲವೂ ಕಾವ್ಯಸ್ಫುರಣಕಾರಣ ತಿಳಿಸಿದ ಹಾಗಾಯಿತು. ಈ ಎಲ್ಲ ಘಟನೆಗಳ ಅನಂತರ ಕವಿತೆಗೆ ‘ಲೀಡ್ ಕೈಂಡ್ಲಿ ಲೈಟ್’ ಎಂಬ ಶೀರ್ಷಿಕೆಯನ್ನು ಕೊಟ್ಟು ಪ್ರಕಟ ಮಾಡಿದ.

‘ಶ್ರೀ’ ಯವರು ಅನುವಾದಕ್ಕೆ ತೊಡಗಿದಾಗ “ಲೀಡ್ ಕೈಂಡ್ಲಿ ಲೈಟ್” ಎಂದು ನ್ಯೂಮನ್ ಬದಲಾಯಿಸಿದ ಶೀರ್ಷಿಕೆಯನ್ನು ಉಳಿಸಿಕೊಳ್ಳದೆ, ಮುಂಚಿತವಾಗಿ ಕೊಟ್ಟಿದ್ದ “ದಿ ಪಿಲ್ಲರ್ ಆಫ್ ದಿ ಕ್ಲೌಡ್” ಎಂಬುದನ್ನೂ ಉಳಿಸಿಕೊಳ್ಳದೆ, ಕವಿತೆಯ ಭಾವಕೇಂದ್ರವನ್ನು ಅನುಲಕ್ಷಿಸಿ “ಪ್ರಾರ್ಥನೆ” ಎಂಬುದನ್ನು ಶೀರ್ಷಿಕೆಯಾಗಿ ಕೊಡಮಾಡಿದ್ದಾರೆ. ಈ ಶೀರ್ಷಿಕೆಯ ಬದಲಾವಣೆಯನ್ನು ಮುಖ್ಯವೆಂದು ಪರಿಗಣಿಸಿ ಎರಡು ಊಹೆಗಳನ್ನು ಮಾಡಬಹುದು. ‘ಶ್ರೀ’ ಅವರ ಇಂಗ್ಲೀಷ್ ಗೀತೆಗಳಲ್ಲಿನ ಕೆಲವು ಕವಿತೆಗಳು 1919 ರಲ್ಲಿ ಮೊದಲು ಮುದ್ರಣವಾದರೆ, ಅನಂತರ 1921 ರಲ್ಲಿ ಕೆಲವು, 1924 ರಲ್ಲಿ ಕೆಲವು ಆದುವು. ಈಗ ನಮಗೆ ದೊರೆತಿರುವಂತೆ ಕೃತಿರೂಪವು 1955 ರಲ್ಲಿ ಮುದ್ರಣಗೊಂಡಿತು. “ಲೀಡ್ ಕೈಂಡ್ಲಿ ಲೈಟ್” ಕವಿತೆಯ ಆಯ್ಕೆ ಮತ್ತು ಅನುವಾದಗಳನ್ನು ಗಮನಿಸಿ, “ಪ್ರಾರ್ಥನೆ” ಎಂದು ಮರುನಾಮಕರಣ ಮಾಡಿದ್ದಕ್ಕೆ ಕೆಲವು ಕಾರಣಗಳಿರಬಹುದೆನ್ನುವುದನ್ನು ಕವಿಮನೋಧರ್ಮ, ಕವಿಯ ಕಾಲ, ಆತನ ಬದುಕಿನಲ್ಲಿ ಘಟಿಸಿರಬಹುದಾದ ಅಹಿತಕರ ಘಟನೆಗಳ ಇತ್ಯಾದಿಗಳ ಹಿನ್ನೆಲೆಯಿಂದ ಕಾವ್ಯವನ್ನು ಅರಿಯುವ ಕರ್ತೃನಿಷ್ಠ ವಿಮರ್ಶೆಯನ್ನು ಮುಂದುಮಾಡಿ ಕೆಲವು ಮಾತುಗಳನ್ನೂ ಆಡಬಹುದಾಗಿದೆ. ಇಪ್ಪತ್ತನೆಯ ಶತಮಾನವು ಆರಂಭವಾಗಿದ್ದೇ ರಕ್ತಪೀಪಾಸುತನ, ಏಕಸ್ವಾಮ್ಯ ಸ್ಥಾಪನೆಯ ಅಧಿಕಾರಶಾಹೀ ಮನಃಸ್ಥಿತಿಗಳ ಪರಿಣಾಮದ ಮೊದಲನೆಯ ಮಹಾಯುದ್ಧದಿಂದ (1914-1918). ಈ ಮಹಾಯುದ್ಧವು ಜರ್ಮನಿಯ ಸೋಲಿನೊಂದಿಗೆ ಮುಗಿಯಿತು. ಭಾರತೀಯ ಸೈನ್ಯವೂ ಮೊದಲನೆಯ ಮಹಾಯುದ್ಧ ಆರಂಭವಾದ ಸಮಯದಲ್ಲಿ ಯುದ್ಧರಂಗದಲ್ಲಿ ಇಂಗ್ಲೆಂಡಿನ ಪರವಾಗಿ ಕಾದಾಡಲು ನಿಂತಿತ್ತು. ಒಂದರ್ಥದಲ್ಲಿ ಈ ಭಾಗವಹಿಸುವಿಕೆಯೂ ಅನಗತ್ಯವೆನಿಸಿದ್ದಿದೆ. ಅಧಿನಾಯಕತ್ವ ಸ್ಥಾಪನೆಯ ಲಾಲಸೆಗೆ ಹದಿಮೂರು ಲಕ್ಷಕ್ಕೂ ಹೆಚ್ಚಿನ ಭಾರತೀಯ ಸೈನಿಕರನ್ನು ಮೊದಲನೆಯ ಮಹಾಯುದ್ಧ ರಂಗದಲ್ಲಿ ಇಂಗ್ಲೆಂಡ್ ಕರೆದುಕೊಂಡು ಹೋಗಿ ನಿಲ್ಲಿಸಿತ್ತು. ಘೋರವಾದ ಯುದ್ಧವೊಂದು ಸೃಷ್ಟಿಮಾಡುವ ಸಾವು-ನೋವು, ಹಿಂಸೆ-ಹತಾಶೆ, ಗೆದ್ದವರ ಕೇಕೆ-ಸೋತವರ ಕಣ್ಣೀರು, ಕಾಣೆಯಾದವರ-ಗಾಯಾಳುಗಳ ಅಸಹಾಯಕತೆ, ಹಿಂದೆಂದೂ ಕಂಡು ಕೇಳರಿಯದ ಹೊಸ ಹೊಸ ಶಸ್ತ್ರಾಸ್ತ್ರಗಳು ಮಾಡಿದ ಅಪಾಯ ಎಲ್ಲ ಕಾಲಕ್ಕೂ ಮನುಜಕುಲ ತಲೆತಗ್ಗಿಸಬೇಕಾದ ಕಾರ್ಯಗಳು. ಘೋರವಾದ ಯುದ್ಧದಿಂದ ಆರಂಭವಾದ ಯುಗಧರ್ಮವೊಂದರ ನಾಗರೀಕರು ಎನಿಸಿಕೊಂಡವರು ಇಟ್ಟಿದ್ದ ಹೆಜ್ಜೆಗಳನ್ನು, ಆ ಹೆಜ್ಜೆಗಳು ಮುಟ್ಟಿದ ನೋವಿನ ತುದಿಯನ್ನು ಕಂಡಿದ್ದರ ಕಾರಣದಿಂದ ಬಿ. ಎಂ. ಶ್ರೀಕಂಠಯ್ಯನವರು “ಲೀಡ್ ಕೈಂಡ್ಲಿ ಲೈಟ್” ಕೃತಿಯನ್ನು ಅನುವಾದಕ್ಕಾಗಿ ಆಯ್ಕೆ ಮಾಡಿಕೊಂಡರೇ ? “ಲೀಡ್ ಕೈಂಡ್ಲಿ ಲೈಟ್” ಎಂಬ ಶೀರ್ಷಿಕೆನ್ನು ಬದಲಾಯಿಸಿ ‘ಪ್ರಾರ್ಥನೆ’ ಎಂದು ಮರುನಾಮಕರಣವನ್ನು ಮಾಡಿದರೆ ? ಹಾಗಾದರೆ, ಕನ್ನಡದಲ್ಲಿ ‘ಶ್ರೀ’ ಅವರಿಂದ ಬಂದ ಈ ‘ಪ್ರಾರ್ಥನೆ’ ಯಾರಿಯಾಗಿ ? ಏಕೆ ಈ ‘ಪ್ರಾರ್ಥನೆ’ ? ಎಂಬ ಪ್ರಶ್ನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕವಿತೆಯನ್ನು ವಿಶ್ವಾತ್ಮಕ ವಿಧ್ವಂಸವನ್ನು ತಡೆಯುವಂತೆಯೂ ಓದಿಕೊಳ್ಳಬಹುದಾದ ಸಾಧ್ಯತೆ ಇದೆ.

ಇಷ್ಟು ಮಾತುಗಳ ನಂತರ, ನೇರವಾಗಿ ಕವಿತೆಯ ಕಡೆಗೆ ಮುಖ ಮಾಡುವುದು ಒಳಿತೆನಿಸುತ್ತದೆ. ಲೇಖನದ ಕೊನೆಯಲ್ಲಿ ಮೂಲ ಇಂಗ್ಲೀಷಿನ ಕವಿತೆಯನ್ನೂ ಕೊಟ್ಟಿದ್ದೇನೆ, ಮೂಲ ಮತ್ತು ಅನುವಾದ ಕೃತಿಗಳನ್ನು ತೌಲನಿಕವಾಗಿ ವಿವೇಚಿಸುವವರು ಅದನ್ನು ಗಮನಿಸಬಹುದು. ಕನ್ನಡದ ಬಹುಮುಖ್ಯ ವಿದ್ವಾಂಸರು ಇಂಗ್ಲೀಷ್ ಮತ್ತು ಕನ್ನಡಾನುವಾದಗಳನ್ನು ಈಗಾಗಲೇ ತೌಲನಿಕವಾಗಿ ವಿವೇಚನೆಯನ್ನು ಅಲ್ಪಸ್ವಲ್ಪವಾದರೂ ಅಲ್ಲಲ್ಲಿ ಮಾಡಿರುತ್ತಾರೆ. ಈ ಲೇಖನವು ಕನ್ನಡಾನುವಾದವನ್ನು ಮಾತ್ರ ಅನುಲಕ್ಷಿಸಿ ರಚನೆಯಾಗಿದೆ. ಸುಪರಿಚಿತವಾಗಿರುವ ಈ ಕವಿತೆಯಲ್ಲಿರುವ ಸೂಕ್ಷ್ಮತೆಗಳನ್ನು ಗಮನಿಸುವ ಮೊದಲು, ಮತ್ತೊಮ್ಮೆ ಕವಿತೆನ್ನು ಓದಿ –

ಪ್ರಾರ್ಥನೆ

ಕರುಣಾಳು, ಬಾ, ಬೆಳಕೆ, ಮಸುಕಿದೀ ಮಬ್ಬಿನಲಿ,
ಕೈ ಹಿಡಿದು ನಡೆಸೆನ್ನನು.
ಇರುಳು ಕತ್ತಲೆಯ ಗವಿ ; ಮನೆ ದೂರ ; ಕನಿಕರಿಸಿ,
ಕೈ ಹಿಡಿದು ನಡೆಸೆನ್ನನು.
ಹೇಳಿ ನನ್ನಡಿಯಿಡಿಸು ; ಬಲುದೂರ ನೋಟವನು
ಕೇಳೆನೊಡನೆಯೆ – ಸಾಕು ನನಗೊಂದು ಹೆಜ್ಜೆ

ಮುನ್ನ ಇಂತಿರದಾದೆ ; ನಿನ್ನ ಬೇಡದೆ ಹೋದೆ,
ಕೈ ಹಿಡಿದು ನಡೆಸು ಎನುತ.‌
ನನ್ನ ದಾರಿಯ ನಾನೆ ನೋಡಿ ಹಿಡಿದೆನು ; – ಇನ್ನು
ಕೈ ಹಿಡಿದು ನಡೆಸು ನೀನು
ಮಿರುಗು ಬಣ್ಣಕೆ ಬೆರೆತು, ಭಯ ಮರೆತು, ಕೊಬ್ಬಿದೆನು ;
ಮೆರೆದಾಯ್ತು ; ನೆನೆಯದಿರು ಹಿಂದಿನದನೆಲ್ಲ.

ಇಷ್ಟು ದಿನ ಸಲಹಿರುವೆ ಮೂರ್ಖನನು ; ಮುಂದೆಯೂ
ಕೈಹಿಡಿದು ನಡೆಸದಿಹೆಯಾ ?
ಕಷ್ಟದಡವಿಯ ಕಳೆದು, ಬೆಟ್ಟ ಹೊಳೆಗಳ ಹಾದು,
ಇರುಳನ್ನು ನೂಕದಿಹೆಯಾ ?
ಬೆಳಗಾಗ ಹೊಳೆಯದೇ ಹಿಂದೊಮ್ಮೆ ನಾನೊಲಿದು
ಈ ನಡುವೆ ಕಳಕೊಂಡೆ ದಿವ್ಯಮುಖ ನಗುತ ?

******

ಒಂದು ಸ್ವತಂತ್ರ ಕವಿತೆಗೆ ಇರಬೇಕಾದ ಸ್ವಯಂಪೂರ್ಣತೆಯು ಈ ಕವಿತೆಗೆ ಇದೆ. ಭಾಷೆ-ವಸ್ತು-ನಿರ್ವಹಣೆಗಳಲ್ಲಿ ಸಾಸತ್ಯವಿದೆ. ವಸ್ತುವಿಗೆ ತಕ್ಕಂತೆ ಬಳಸಿರುವ ಭಾಷೆ, ರೂಪಕ, ವಿನ್ಯಾಸಗಳು ಮಹತ್ತರವಾದ ಗಾಂಭೀರ್ಯತೆಯನ್ನು ಕವಿತೆಗೆ ತಂದುಕೊಟ್ಟಿದೆ. ಮೂಲ ಇಂಗ್ಲೀಷ್ ಕವಿತೆಯಲ್ಲಿರುವ ಗಾಂಭೀರ್ಯತೆ ಬಂಧದಲ್ಲಿ ಸಡಿಲವಾಗದಂತೆ, ಸೋರಿಹೋಗದಂತೆ ನಿರ್ವಹಿಸಿರುವ ಕಾರಣದಿಂದ ಕನ್ನಡಾನುವಾದದ ಕವಿತೆಗೆ ತೀವ್ರತೆ ಲಭಿಸಿದ್ದು, ಪರಿಣಾಮಕಾರಿಯಾಗಿ ಓದುಗನನ್ನು ತನ್ನೆಡೆಗೆ ಹಿಡಿದು ನಿಲ್ಲಿಸಿಕೊಳ್ಳುವ ಗುಣವು ಲಭ್ಯವಾಗಿದೆ. ಕನ್ನಡ ಕವಿತೆ ಮುದ್ರಣಗೊಂಡಿರುವುದರ ಪುಟದ ಕೊನೆಯಲ್ಲಿ, ಮೂಲ ಕವಿತೆಯ ಶೀರ್ಷಿಕೆಯನ್ನು ದಾಖಲಿಸಿರುವ ಒಂದೇ ಒಂದು ಕಾರಣದಿಂದ ಇದು ಅನುವಾದ ಮಾಡಿರುವುದೆಂದು ಓದುಗನ ಅರಿವಿಗೆ ಬರುತ್ತದೆ. ಪೂರ್ಣಪ್ರಮಾಣದ ಶರಣಾಗತಿ ಕವಿತೆಯ “ಕ್ರಿಯಾಕೇಂದ್ರ” ಮತ್ತು ಭಕ್ತಿ ಕವಿತೆಯ “ಭಾವಕೇಂದ್ರ” ವಾಗಿದೆ.  ಕವಿತೆಯ ನಾಯಕನ ಬದುಕಿನಲ್ಲಿ ಎಷ್ಟೋ ಕಾಲಗಳ ಹಿಂದೆ ನಡೆದಿರುವ ಘಟನೆಗಳು, ಕವಿತೆಯಲ್ಲಿ ಅವುಗಳು ಅಲ್ಲಲ್ಲಿ ಸೂಚ್ಯವಾಗಿರುವ ರೀತಿಯನ್ನು ಗಮನಿಸಿದರೆ, ಅವು ಕವಿತೆಯ ಕ್ರಿಯಾಕೇಂದ್ರಕ್ಕೆ ಮತ್ತು ಭಾವಕೇಂದ್ರಕ್ಕೆ ಪೋಷಕವಾಗಿ ಬಂದು ಕವಿತೆ ಯಶಸ್ವಿಯಾಗುವಲ್ಲಿ ಕಾರ್ಯನಿರ್ವಹಿಸುತ್ತಿವೆ. ಭಿನ್ನ ಘಟನೆಗಳನ್ನು ಕವಿತೆಯ ಒಳಗೆ ತಂದಿರುವುದನ್ನು ಗಮನಿಸಿದರೆ, ಭಾವಗಳಲ್ಲಿ ಪಲ್ಲಟವಾಗುವುದು ಕಾಣಬರುತ್ತಿದೆ, ಆದರೆ ಅವೆಲ್ಲವೂ ಭಾವಕೇಂದ್ರವಾದ ‘ಭಕ್ತಿ’ ಎಂಬುದನ್ನು ಪ್ರಬಲಗೊಳಿಸಲು ಏರುಮುಖವಾಗಿ ಬಳಸಿದಂತೆ ಕಾಣಿಸುತ್ತಿದೆ, ಆದರೆ ‘ಕವಿತೆಯ ನಾಯಕ’ ಇರುವ ಮೂರು ಚರಣಗಳಲ್ಲಿ ಒಂದರಿಂದ ಮತ್ತೊಂದಕ್ಕೆ ಇಳಿಯುತ್ತಾ ಶರಣಾಗತನಾಗುತ್ತಿದ್ದಾನೆ. ಪ್ರತೀ ಚರಣಗಳಲ್ಲಿಯೂ ಆರು ಸಾಲುಗಳಿವೆ. ಪ್ರತೀ ಚರಣಗಳಲ್ಲಿ ವರ್ತಮಾನ, ಭೂತ ಮತ್ತು ವರ್ತಮಾನ ಕಾಲಗಳಲ್ಲಿ ನಾಯಕನ ಮನಸ್ಸು ವೇಗವಾಗಿ ಓಡಾಡಿರುವುದು ಕಾಣಸಿಗುತ್ತಿದೆ.

ಕವಿತೆಯ ‘ಆದಿ’ ಪದವೇ ‘ಕರುಣಾಳು’ ಎಂದು ಸಂಬೋಧಿಸುವುದು ಸಂಸ್ಕೃತದ್ದಾಗಿದೆ. ಮೊದಲ ಭಾಗದಲ್ಲಿಯೇ ನಾಯಕನಲ್ಲಿ ಅಸಹಾಯಕತೆ, ಆರ್ತತೆ, ಆರ್ದ್ರತೆಗಳು ನಿರ್ಮಾಣವಾಗುವುದಕ್ಕೆ ಎರಡು ಬಾರಿ ಸಮಾನಾಂತರದಲ್ಲಿ “ಕೈ ಹಿಡಿದು ನಡೆಸೆನ್ನನು.” ಪುನರಾವರ್ತನೆಯಾಗಿದೆ. ‘ಕೈ ಹಿಡಿದು ನಡೆಸೆನ್ನನು.’ ಎಂಬ ವಾಕ್ಯದ ಕೊನೆಯಲ್ಲಿ ಪೂರ್ಣವಿರಾಮ ಚಿಹ್ನೆಯು ಬಂದಿದೆ. ಈ ಚಿಹ್ನೆಯ ಬಳಕೆಯ ಕಾರಣದಿಂದಲೇ ಕವಿತೆಯಲ್ಲಿ ‘ಬೇಡಿಕೆ’ ಯ ದನಿಯೊಂದು ನಿರ್ಮಾಣವಾಗಿ, ನಾಯಕ ಬೇಡಿಕೊಳ್ಳುತ್ತಿರುವಾಗ ಎದುರಿಗೆ ನಿಂತಿರಬಹುದಾದ ಮತ್ತೊಂದು ಮರುಮಾತನಾಡುವ, ಮಾರ್ನುಡಿಯುವ ಅವಕಾಶವನ್ನು ಕವಿತೆಯಲ್ಲಿರುವ ನಾಯಕ ಕೊಟ್ಟಿಲ್ಲ. ವಾಸ್ತವದ ತನ್ನ ಸ್ಥಿತಿ-ಪರಿಸ್ಥಿತಿಗಳು ಸೃಷ್ಟಿಸಿರುವ ಮಾನಸಿಕಸ್ಥಿತಿಯನ್ನು ಸೂಚಿಸಲು “ಮುಸುಕಿದ ಮಬ್ಬು”, “ಇರುಳು”, “ಕತ್ತಲೆ”, “ಗವಿ” ಇತ್ಯಾದಿ ಪದಗಳು ಸಹಾಯಕವಾಗಿ ಬಂದಿವೆ. ಮತ್ತೂ ಪರಿಣಾಮಕಾರಿಯಾಗಿ ತಿಳಿಸಲು “ಇರುಳು”, “ಕತ್ತಲೆ” ಎಂಬ ಪದಗಳನ್ನು ಬಳಸಿದ್ದಾನೆ.

“ಕತ್ತಲೆಯ ಗವಿ” ರೂಪಕವು ಬಂದೊಡನೆ ಕವಿತೆಯ ನಾಯಕ ನಿಂತ ಆಳ, ನಿರ್ವಾತ ಸ್ಥಿತಿಯಲ್ಲಿನ ಕತ್ತಲೆ ಓದುಗನಿಗೆ ತಿಳಿಯುತ್ತದೆ. ಮತ್ತೂ ಆಳದಿಂದ ನಾಯಕ ಕೂಗುವಂತೆ “ಮನೆ ದೂರ ; ಕನಿಕರಿಸಿ / ಕೈ ಹಿಡಿದು ನಡೆಸೆನ್ನನು.” ಎಂದು ಬೇಡುತ್ತಾನೆ. ತತಕ್ಷಣದಲ್ಲಿಯೇ “ಹೇಳಿ ನನ್ನಡಿಯಿಡಿಸು” ಎನ್ನುತ್ತಾನೆ, ಈ ಸಾಲಿನೊಡನೆ ಆರ್ತತೆ, ಆರ್ದ್ರತೆಗಳ ಜೊತೆಗೆ ಅಸಹಾಯಕತೆ-ಶರಣಾಗತಿಯೂ ಅನಾವರಣವು ಆಗುತ್ತದೆ. “ಬಲುದೂರ ನೋಟವನು ಕೇಳೆನೊಡನೆಯೆ” ಎನ್ನುತ್ತಾನೆ, ಇದರಲ್ಲೊಂದು ಸೂಕ್ಷ್ಮತೆಯಿದೆ – ಒಡನೆಯೆ ಕೇಳುವುದಿಲ್ಲ ಎಂದರೆ ಅನಂತರ ಕೇಳುವುದಿಲ್ಲ ಎಂದೇನು ನಾಯಕ ಹೇಳುತ್ತಿಲ್ಲವಲ್ಲ ! ಆದರೆ ನಿಧಾನವಾಗಿಯಾದರೂ ಬಲುದೂರ ನೋಡಬೇಕಾದ ಆಸೆಯನ್ನು ನಾಯಕ ಹೊಂದಿರುವುದನ್ನು ಕಾಣಿಸಿ, ಸದ್ಯಕ್ಕೆ “ಸಾಕು ನನಗೊಂದು ಹೆಜ್ಜೆ” ಎಂದು ಸಮಾಧಾನ ಪಡುತ್ತಾನೆ. ಈ ಎಲ್ಲವನ್ನು ಗಮನಿಸಿದರೆ ಪಂಚೇಂದ್ರಿಯಗಳಲ್ಲಿ ದೃಷ್ಟಿ, ಸ್ಪರ್ಶ ಮತ್ತು ಕಿವಿಗಳನ್ನು ತರಲಾಗಿದೆ.

ಕವಿತೆಯ ‘ಮಧ್ಯ’ ಭಾಗದಲ್ಲಿ ‘ನಿನ್ನ’ ಎಂಬ ಏಕವಚನ ಸಂಬೋಧನೆ ಎರಡು ಬಾರಿ ಬಂದಿದೆ. ಈ ಮೂಲಕ ಕವಿತೆಯ ನಾಯಕ ಆತ್ಮೀಯತೆಯು ‘ಕರುಣಾಳು’ ವಿನ ಜೊತೆಗೆ ಸಾಧಿಸಲಾಗುತ್ತಿರುವ ಹಾಗೆ ಕಾಣಿಸುತ್ತಿದೆ, ಅದರೊಡಲಿನಲ್ಲಿಯೇ ಕರುಣಾಳು ದೊಡ್ಡವನೆಂಬುದು ಅವನ ಅರಿವಿನಲ್ಲಿದೆ. ‘ಮುನ್ನ ಇಂತಿರದಾದೆ’ ಎಂದು ತನ್ನ ಭೂತಕಾಲದ ಘಟನೆಗಳ ಕಡೆಗೆ ಹೋಗುತ್ತಾನೆ, ತತಕ್ಷಣವೇ ವಾಸ್ತವದ ಸ್ಥಿತಿ ನೆನಪಾಗಿ ‘ಕೈ ಹಿಡಿದು ನಡೆಸೆನ್ನನು.’ ಎಂದು ಈಗ ಬೇಡುತ್ತಿರುವ ಮಾತು ನೆನಪಾಗಿ, ಹಿಂದೆ ‘ನಿನ್ನ ಬೇಡದೆ ಹೋದೆ,’ ಎನ್ನುತ್ತಾನೆ. ಪಕ್ಕದಲ್ಲೊಂದು ಅಲ್ಪವಿರಾಮವಿದೆ, ಆ ಸ್ಥಿತಿಗೆ ಕಾರಣವನ್ನು ಹುಡುಕುತ್ತಾ ನಾಯಕ ಮುಂದುವರೆಯುತ್ತಾನೆ. ಈಗ ಕೇಳುತ್ತಿರುವಂತೆ ‘ಮುನ್ನ’ ಕೇಳಲಿಲ್ಲವೆಂಬ ಭಾವ ಕಾಡುತ್ತದೆ. ‘ನನ್ನ ದಾರಿಯ ನಾನೆ ನೋಡಿ ಹಿಡಿದೆನು’ ಎಂದು ಆ ಬಂದ ಹಾದಿಯ ಪರಿಚಯವನ್ನು ಕರುಣಾಳುವಿಗೆ ಮಾಡಿಸುತ್ತಾನೆ. ‘ಮಿರುಗು ಬಣ್ಣಕೆ ಬೆರೆತಿದ್ದು’, ‘ಭಯ ಮರೆತಿದ್ದು’, ‘ಕೊಬ್ಬಿದ್ದು’, ‘ಮೆರೆದಿದ್ದು’ ಈ ನಾಲಕ್ಕು ಕಾರಣದಿಂದ ಉದ್ಭವಿಸಿ, ಹಬ್ಬಿ, ಕೊನೆಗೆ ‘ಇರುಳು ಕತ್ತಲೆಯ ಗವಿ’ ಗೆ ಸೇರಿಸಿದೆ, ನಿಜದ ‘ಮನೆ’ ಯಿಂದ ‘ದೂರ’ ಮಾಡಿದೆ ಎಂದು ನಾಯಕನಿಗೆ ಅನಿಸಿದೆ. “ಬೆರೆತಿದ್ದು”, “ಮರೆತಿದ್ದು” “ಕೊಬ್ಬಿದ್ದು” “ಮೆರೆದಿದ್ದು” ಈ ನಾಲಕ್ಕು ಭೂತಕಾಲದ ಪದಗಳು, ಇವು ತನ್ನ ಪರಿಣಾಮವನ್ನು ಒಳಗಿನಿಂದ ಆರಂಭಮಾಡಿ ಹೊರಗಿನ ಸಾಮಾಜಿಕ ವರ್ತನೆಯಲ್ಲಿ ಕೊನೆಯಾಗುತ್ತಿದೆ. ಕವಿತೆಯ ನಾಯಕ ‘ಕತ್ತಲ ಗವಿ’ಯಲ್ಲಿ ನಿಂತ ಕಾರಣ ‘ಹಿಂದಿನದನೆಲ್ಲ’ ನೆನಪಿಸಿಕೊಂಡು, ಮಾಡಿದ್ದು ತಪ್ಪೆಂದು ಅರಿವಿಗೆ ಬಂದು, ಎಲ್ಲವನು ನಿರಾಕರಿಸಿ ಒಂಟಿ ನಿಂತಿದ್ದಾನೆ. ‘ನೆನೆಯದಿರು ಹಿಂದಿನದನೆಲ್ಲ.’ ಎಂದು ‘ಕರುಣಾಳು’ವಿನಲ್ಲಿ ಬೇಡಿಕೊಳ್ಳುತ್ತಿದ್ದಾನೆ, ಆದರೆ ತಾನೇ ಅದನ್ನು ನೆನಪಿಸುತ್ತಿದ್ದಾನೆ. ಈ ‘ಬೇಡಿಕೆ’ಯು ಸಹಜವಾಗಿಯೇ ಆದ ಬದಲಾವಣೆಯಾಗಿ ಕಾಣಿಸುತ್ತಿದೆ. ‘ನೀನು’ ಎಂದು ಸಂಬೋಧಿಸುವಷ್ಟರ ಮಟ್ಟಿಗಿನ ಆತ್ಮೀಯತೆಯ ಕಾರಣದಿಂದ ಎಲ್ಲವನೂ ಹೇಳಿಕೊಂಡಿದ್ದಾನೆ. ಈ ಭಾಗವು ವರ್ತಮಾನ, ಭೂತ ಮತ್ತು ವರ್ತಮಾನ ಕಾಲದಲ್ಲಿ ಇದೆ.

ಕವಿತೆಯ ‘ಅಂತ್ಯ’ ಭಾಗದಲ್ಲಿ ನಾಯಕನಿಗೆ ಕರುಣಾಳುವಿನೊಡನೆ ಎರಡನೆಯ ಭಾಗದಲ್ಲಿ ಆರಂಭವಾದ ಆತ್ಮೀಯತೆಯು ಹಾಗೆಯೇ ಇದ್ದು, ಕರುಣಾಳುವನ್ನು ಸಂಬೋಧಿಸುವಲ್ಲಿ ಏಕವಚನ ಪ್ರಯೋಗವಿದೆ. ಕವಿತೆಯ ನಾಯಕ ತನ್ನನ್ನು ‘ಮುರ್ಖ’ ಎಂದು ಕರೆದುಕೊಳ್ಳುತ್ತಾನೆ. ತಾನು ‘ಮೂರ್ಖ’ ಆಗಲು ‘ನನ್ನ ದಾರಿಯ ನಾನೆ ನೋಡಿ ಹಿಡಿದೆ’ ಎನ್ನುವುದರ ಜೊತೆಗೇ ಅದರೊಡನೆಯೇ ಉದ್ಭವಿಸಿದ ನಾಲಕ್ಕು ಕಾರಣಗಳಾದ ‘ಮಿರುಗು ಬಣ್ಣಕೆ ಬೆರೆತಿದ್ದು’, ‘ಭಯ ಮರೆತಿದ್ದು’, ‘ಕೊಬ್ಬಿದ್ದು’, ‘ಮೆರೆದಿದ್ದು’ ಅದು ‘ಮನೆ’ಯಿಂದ ‘ದೂರ’ ಮಾಡಿ, “ಇರುಳು ಕತ್ತಲೆಯ ಗವಿ’ ಯಲ್ಲಿ ನಿಲ್ಲಿಸಿರುವುದು, ಇವುಗಳನ್ನು ನೆನಪಿಸಿಕೊಂಡು,  ‘ಮುಂದೆಯೂ ಕೈಹಿಡಿದು ನಡೆಸದಿಹೆಯಾ ?’ ಎಂದು ಕರುಣಾಳುವಿನಲ್ಲಿ ಬೇಡುತ್ತಾನೆ. ತಾನು ‘ಇರುಳು ಕತ್ತಲೆಯ ಗವಿ’ ನಿಂತಿರುವುದು ಆತನಿಗೆ ನೆನಪಿದೆ, ‘ಕಷ್ಟದಡವಿಯ ಕಳೆದು, ಬೆಟ್ಟ ಹೊಳೆಗಳ ಹಾದು, ಇರುಳನ್ನು ನೂಕದಿಹೆಯಾ ?’ ಎಂದು ಬದುಕನ್ನು ಕುರಿತು ಎರಡು ರೂಪಕಗಳನ್ನು ಕೊಡುತ್ತಾನೆ. ಈ ಮೇಲಿನ ಎಲ್ಲದರಿಂದ ಬಿಡುಗಡೆಯನ್ನು ಕೊಟ್ಟರೆ ‘ಬೆಳಗಾಗ ಹೊಳೆಯದೇ ಹಿಂದೊಮ್ಮೆ ನಾನೊಲಿದು, ಈ ನಡುವೆ ಕಳಕೊಂಡೆ ದಿವ್ಯಮುಖ ನಗುತ ?’ ಎನ್ನುವ ಬೇಡಿಕೆಯೊಂದಿಗೆ ಕವಿತೆಯು ಮುಗಿಯುತ್ತದೆ. ಈ ಭಾಗದಲ್ಲಿ ಎರಡು ಪ್ರಶ್ನೆಗಳಿವೆ ಎಲ್ಲಿಯೂ ಕರುಣಾಳುವಿನ ಉತ್ತರದ ಸುಳಿವಿಲ್ಲ. ಕೊನೆಯ ಸಾಲಿನಲ್ಲಿ ‘ಹಿಂದೊಮ್ಮೆ’ ಮತ್ತು ‘ದಿವ್ಯಮುಖ’ ಎಂಬುದನ್ನು ಬಳಸುತ್ತಾ ಮಗುತ್ವವನ್ನು, ಚೈತನ್ಯಶಕ್ತಿಯನ್ನು ಕವಿತೆಯ ನಾಯಕ ಆಸೆ ಪಡುತ್ತಿದ್ದಾನೆಯೆ ? ಎಂಬ ಪ್ರಶ್ನೆಯು ಉದ್ಬವಿಸುತ್ತದೆ. ಈ ಭಾಗದಲ್ಲಿಯೂ ಭೂತ-ವರ್ತಮಾನ ಕಾಲಗಳ ಜೊತೆಗೆ ನಾಯಕನ ಪರಿಕ್ರಮಣವು ಇದೆ.   

ಕವಿತೆಯು ಓದುಗನ ಅರ್ಹತೆ, ಯೋಗ್ಯತೆಗಳನ್ನು ಸ್ವ-ಮೌಲ್ಯಮಾಪನ ಮಾಡಿಕೊಳ್ಳುವಂತೆ ಕರೆ ಕೊಡುತ್ತಿದೆ. ‘ಪ್ರಾರ್ಥನೆ’ ಕವಿತೆ ಎರಡು ಪ್ರಶ್ನೆಗಳನ್ನು ಮುಂದೆ ನಿಲ್ಲಿಸುತ್ತದೆ. ಮೊದಲನೆಯದು – ಕವಿತೆಯ ನಾಯಕ ಯಾರು ? ಮತ್ತು ಕರುಣಾಳು ಯಾರು ? ಎಂಬುದು. ಮತ್ತೊಂದು, ‘ಕರುಣಾಳು’ ಮತ್ತು ‘ಮೂರ್ಖ’ ಎಂಬ ಸಂಸ್ಕೃತ ಪದಗಳನ್ನು ಕವಿತೆಯೊಳಗೆ ಬಹುಮುಖ್ಯ ಜಾಗದಲ್ಲಿ ಏಕೆ ತಂದಿದ್ದಾನೆ ? ಉಂಟಾಗುತ್ತಿರುವ ಅರ್ಥವೇನು ? ಎಂಬುದು. ‘ಮಿರುಗು ಬಣ್ಣಕೆ ಬೆರೆತು, ಭಯ ಮರೆತು, ಕೊಬ್ಬಿದೆನು ; ಮೆರೆದಾಯ್ತು ;’ ಎಂದು ಓದುಗನ ಮನಸ್ಸಿಗೆ ಬಂದರೆ, ಅಂತಹವರೆಲ್ಲರೂ ಈ ಕವಿತೆಯ ನಾಯಕರು, ‘ಮಸುಕಿದೀ ಮಬ್ಬಿನಲಿ, ಇರುಳು ಕತ್ತಲೆಯ ಗವಿ ; ಮನೆ ದೂರ ; ಕನಿಕರಿಸಿ,’ ‘ಕೈ ಹಿಡಿದು ನಡೆಸೆನ್ನನು’ ಎಂದು ಕೇಳಿಕೊಳ್ಳಬೇಕಾದವರು ತಮ್ಮಂತಹ ನಾಯಕರೇ ಎಂಬ ಸ್ಪಷ್ಟತೆ ಸಿಕ್ಕವರು. ನಾಯಕನು ಯಾರ ಮುಂದೆ ಹೆಜ್ಜೆಹೆಜ್ಜೆಗೂ ಶರಣಾಗಿ ಬೇಡಿಕೊಳ್ಳುವುದಕ್ಕೆ ಸಾಧ್ಯವೋ, ಅಂತಹ ಯೋಗ್ಯತೆ ಅರ್ಹತೆಗಳು ಯಾರಲ್ಲಿ ಇವೆಯೋ ಅವರೆಲ್ಲರೂ ‘ಕರುಣಾಳು’ ಆಗುತ್ತಾರೆ. ಕವಿತೆಯಲ್ಲಿ ಬಳಕೆಯಾಗಿರುವ ‘ಕರುಣಾಳು’ ಮತ್ತು ‘ಮೂರ್ಖ’ ಎಂಬ ಎರಡು ಸಂಸ್ಕೃತ ಪದಗಳ ಹಿನ್ನೆಲೆಯಲ್ಲಿ ಮತ್ತೊಂದು ರೀತಿಯ ವಿವೇಚನೆ ಮಾಡಬಹುದು. ‘ಕರುಣಾಳು’ ನಮ್ಮಂತಹವನಲ್ಲ, ನಾವು ಬಳಸುವ ಭಾಷೆ ಬಳಸುವವನಲ್ಲವೆಂಬ ಅರಿವು ಎಚ್ಚರವಾದ ಸ್ಥಿತಿಯಲ್ಲಿ, ಕವಿತೆಯ ನಾಯಕ ದೈನಂದಿನ ಬಳಕೆಯಲ್ಲಿಲ್ಲದ ಪದವಾದ ‘ಕರುಣಾಳು’ ಎಂದು ಅವನಿಗೆ ಸಂಬೋಧನೆ ಮಾಡಿ, ಅಂತಹ ‘ಕರುಣಾಳು’ ವಿಗೆ ಕವಿತೆಯ ನಾಯಕ ಅನಿಸಿಕೊಂಡ ನನ್ನಂತವನು ನಿಂತ ಸ್ಥಿತಿ ಅರ್ಥವಾಗಲಿ ಎಂದು, ಅವನ ಭಾಷೆಯಲ್ಲಿನ ಪದದಲ್ಲಿಯೇ ಅರಿವಿಗೆ ಬರಲಿ ಎಂದು ತನ್ನನ್ನು ‘ಮೂರ್ಖ’ ಎಂದು ಆರೋಪಿಸಿಕೊಂಡಿದ್ದಾನೆ.

ನ್ಯೂಮನ್ ರಚನೆಯ ಮೂಲ ಇಂಗ್ಲೀಷ್ ಕವಿತೆಯನ್ನೂ ಒಮ್ಮೆ ಗಮನಿಸಿ –

              Lead kindly light

Lead, kindly light, amid the encircling gloom
Lead thou me on
The night is dark, and I am far from home
Lead thou me on
Keep thou my feet, I do not ask to se
e
The distant scene, one step enough for me

I was not ever thus, nor prayed that thou
Shouldst lead me on
I loved to choose, and see my path but now
Lead thou me on
I loved the garish day, and spite of fears
Pride ruled my will, remember not past years

So long thy power hath blest me, sure it still
Will lead me on
O’er moor and fen, o’er crag and torrent, till
The night is gone
And with the morn those angel faces smile
Which I have loved long since and lost a while


Leave a Reply

Back To Top