ಕಳೆದ ಹಲವಾರು ದಿನಗಳಿಂದ ಒಂದೇ ಸಮನೆ ಸುರಿಯುತ್ತಿರುವ ಮಳೆ ಜನಜೀವನವನ್ನು ಅಸ್ತ ವ್ಯಸ್ತಗೊಳಿಸಿದೆ. ರಸ್ತೆಗಳು ಕೆಸರಿನ ಹೊಂಡಗಳಾಗಿದ್ದು ರಸ್ತೆ ಹೌದೋ ಅಲ್ಲವೋ ಎಂಬಂತೆ ಭಾಸವಾಗುತ್ತದೆ. ಮತ್ತೆ ಕೆಲವೆಡೆ ರಸ್ತೆಗಳ ನಿಶಾನೆಯೇ ಇಲ್ಲದಂತೆ ಕೊಚ್ಚಿ ಹೋಗಿವೆ.ಹೊಳೆ, ಹಳ್ಳಗಳು ರಭಸದಿಂದ ಹರಿಯುತ್ತಿದ್ದು, ಅವುಗಳ ದುಡುಕುತನದ ಅರಿವಿದ್ದು ಕೂಡ ಅವಸರಕ್ಕೆ ಬಿದ್ದು ಕೆಲವರು ಕೊಚ್ಚಿ ಹೋಗಿರುವುದು ಅಲ್ಲಲ್ಲಿ ವರದಿಯಾಗಿವೆ.

ತಗ್ಗು ಪ್ರದೇಶಗಳಲ್ಲಿನ ಮನೆಗಳಲ್ಲಿ ಎರಡೆರಡು ಅಡಿಯಷ್ಟು ನೀರು ಹೊಕ್ಕಿರುವುದು ಸಾರ್ವಜನಿಕರ ನೋವು ಬೇಸರ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ತುಸು ಶಿಥಿಲವಾಗಿರುವ ಕೊಂಚ ಹಳೆಯ ಮನೆಗಳು ಇನ್ನೇನು ಬೀಳುವ ಹಂತದಲ್ಲಿದ್ದರೆ ಮತ್ತೆ ಕೆಲ ಮನೆಗಳು ತಂಪು ಹಿಡಿದಿವೆ. ಮಳೆಯ ಕಾರಣದಿಂದ ಹೊಲಗಳಲ್ಲಿ,ಗದ್ದೆಗಳಲ್ಲಿ ಕೆಲಸ ಮಾಡುವ ಜನರು ಮನೆಯಲ್ಲೇ ಕುಳಿತುಕೊಳ್ಳುವಂತಾಗಿರುವುದು ದೈನಂದಿನ ದುಡಿಮೆಯ ಮೇಲೆ ಬದುಕನ್ನು ನಡೆಸುವ ಅವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದರೆ ಅತಿ ದೊಡ್ಡ ಪೆಟ್ಟು ಬಿದ್ದಿರುವುದು ನಮ್ಮ ರೈತಾಪಿ ವರ್ಗಕ್ಕೆ.
ಸರಿಯಾದ ಸಮಯಕ್ಕೆ ಮಳೆ ಸುರಿದು, ಹೊಲವನ್ನು ಹದ ಮಾಡಿ, ಬಿತ್ತಿ ಕಾಲ ಕಾಲಕ್ಕೆ ನೀರು ಗೊಬ್ಬರ ಉಣಿಸಿ ಸುತ್ತಲಿನ ಕಳೆಯನ್ನು ತೆಗೆದು ಇನ್ನೇನು ಭರ್ಜರಿ ಫಸಲು ಕೈಗೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತ ವಿಪರೀತ ಮಳೆಯಿಂದ ಧರಾ ಶಾಯಿಯಾಗಿರುವ ತನ್ನ ಬೆಳೆಗಳನ್ನು ಕಂಡು ಬಾಯಿ ಬಡಿದುಕೊಳ್ಳುವುದೊಂದೇ ಬಾಕಿ ಎಂಬಂತೆ ನಿರಾಶನಾಗಿದ್ದು ವರ್ಷದ ಕೂಳಿನ ಚಿಂತೆ, ಏರುತ್ತಿರುವ ಜೀವನಾವಶ್ಯಕ ವಸ್ತುಗಳ ಖರ್ಚು ವೆಚ್ಚ, ಮಕ್ಕಳ ಶಾಲೆ ಕಾಲೇಜುಗಳ ಖರ್ಚು, ವಯಸ್ಸಿಗೆ ಬಂದ ಮಕ್ಕಳ ಮದುವೆಯ ಚಿಂತೆ ಆತನ ಮುಂದೆ ಭೂತಾಕಾರವಾಗಿ ನಿಂತು ಆತನ ಮುಖದ ಮೇಲೆಪ್ರೇತ ಕಳೆಯನ್ನು ಸೃಷ್ಟಿಸಿದೆ.

ರೈತನಿಗೆ ಮಳೆ ವರವೂ ಹೌದು! ಶಾಪವೂ ಹೌದು!.ಸಮಯಕ್ಕೆ ಸರಿಯಾಗಿ ಮಳೆ ಬಂದು ಒಳ್ಳೆಯ ಬೆಳೆ ದೊರೆತರೆ ವರವಾಗಿ ಪರಿಣಮಿಸುವ ಮಳೆರಾಯ, ತಾನು ಬಾರದೆ ಬೆಳೆ ಬೆಳೆಯಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಶಾಪವಾಗಿ ಪರಿಣಮಿಸುತ್ತಾನೆ.

ಹೊಲಗಳು ಕೆಸರಿನ ಗದ್ದೆಗಳಾಗಿದ್ದು ಒಂದಡಿ ನೀರಿನಲ್ಲಿ ಬೆಳೆಗಳು ಮುಳುಗಿ ಕೊಳೆತು ಹೋಗಿವೆ. ಮಳೆಯ ಕಾರಣದಿಂದಾಗಿ ತರಕಾರಿಗಳು ಅಂಗಡಿಯಲ್ಲಿಯೇ ಬೂಸ್ಟ್ ಹಿಡಿದಿದ್ದರೆ ಅಭಾವದಿಂದಾಗಿ ಸೊಪ್ಪುಗಳ ಬೆಲೆ ಗಗನಕ್ಕೇರಿವೆ.
ಇಷ್ಟಾಗಿಯೂ ಈ ಎಲ್ಲಾ ಮಳೆ ಬೀಳುವ ಪ್ರದೇಶಗಳನ್ನು ನೆರೆಪೀಡಿತ ಎಂದು ಘೋಷಿಸಲು ಸರ್ಕಾರದ ಕೆಲ ಕಾಯ್ದೆಗಳು ಅಡ್ಡಿಯಾಗುತ್ತವೆ.

ರಾಜ್ಯ ರಾಜಧಾನಿಯಲ್ಲಿ ಕೆರೆ ಕಾಲುವೆಗಳನ್ನು ಒತ್ತುವರಿ ಮಾಡಿ, ತಗ್ಗು ಪ್ರದೇಶಗಳಲ್ಲಿ ನಿವೇಶನಗಳನ್ನು ಮಾಡಿ ಮನೆಗಳನ್ನು,ಕಚೇರಿಗಳನ್ನು ಕಟ್ಟಿರುವ ಹಲವೆಡೆ ಮಳೆ ನೀರಿನ ಕಾರಣ ಮನೆಗೆ ನೀರು ಹೊಕ್ಕಿರುವ ದೃಶ್ಯವನ್ನು ಪದೇಪದೇ ತೋರಿಸುವ ಸುದ್ದಿ ಮಾಧ್ಯಮಗಳಿಗೆ ರಾಜ್ಯದಾದ್ಯಂತ
ಹೊಲಗಳು ಕೆಸರಿನ ಗದ್ದೆಗಳಾಗಿದ್ದು, ಬೆಳೆಗಳು ನೀರು ಪಾಲಾಗಿ, ತರಕಾರಿ ಧಾನ್ಯಗಳು ಕೊಳೆತು ತಿಪ್ಪೆಯ ಪಾಲಾಗಿರುವುದು,ರೈತರು ಪಡುತ್ತಿರುವ ಬವಣೆಯ ಬದುಕು ಏಕೆ ಕಾಣುತ್ತಿಲ್ಲ?

ನಿಗದಿತವಾಗಿ ತಿಂಗಳ ಸಂಬಳ ಪಡೆಯುವ ನೌಕರರಿಗೆ, ನಿಗದಿತ ವರಮಾನ ಇರುವ ಇನ್ನುಳಿದ ಜನತೆಗೆ ಮಳೆಯಿಂದ ಬೆಚ್ಚಗೆ ಮನೆಯಲ್ಲಿ ಕುಳಿತುಕೊಳ್ಳುವ ಇಲ್ಲವೇ ನಾಲ್ಕು ಗೋಡೆಯ ಮಧ್ಯದ ಕಚೇರಿಗಳಲ್ಲಿ ಕೆಲಸ ಮಾಡುವ ಅನುಕೂಲತೆಗಳಿವೆ, ಆದರೆ ರಸ್ತೆ ಬದಿ ವ್ಯಾಪಾರಸ್ಥರು, ಹೊಲಗದ್ದೆಗಳಲ್ಲಿ ದುಡಿಯುವ ದಿನಗೂಲಿ ಕಾರ್ಮಿಕರು ದೈನಂದಿನ ದುಡಿಮೆಯನ್ನೇ ನಂಬಿ ಜೀವನ ಸಾಗಿಸುವ ಕೊಟ್ಯಂತರ ಜನರ ಬದುಕಿನ ಬಂಡಿ ಹಳಿ ತಪ್ಪಿದೆ.
ರೈತರನ್ನು ಹೊರತು ಪಡಿಸಿದ ಉಳಿದೆಲ್ಲರೂ ಮಳೆ ನಿಂತ ಒಂದೆರಡು ದಿನಗಳಲ್ಲಿ ಮತ್ತೆ ತಮ್ಮ ಕಾಯಕಗಳನ್ನು ಮುಂದುವರೆಸಿದರೆ ಸ್ವಲ್ಪವೇ ಹೊಲವಿದ್ದು ಆ ಹೊಲದ ಆದಾಯದಿಂದಲೇ ಜೀವನ ಸಾಗಿಸುವ ಸಣ್ಣ ಮತ್ತು ಬಡ ರೈತರಿಗೆ ಬದುಕಿನೆಡೆಗಿನ ಭರವಸೆ ಕುಸಿದು ಹೋಗಿದೆ.

ಇದೀಗ ಸರಕಾರದ ಮತ್ತು ಸಾರ್ವಜನಿಕ ಸಂಸ್ಥೆಗಳ
ನೈತಿಕ ಮತ್ತು ಆರ್ಥಿಕ ಬೆಂಬಲ ಅವರಿಗೆ ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕಾಗಿದೆ.


Leave a Reply

Back To Top