‘ಯುವಜನರಿಗೆ ಬೇಕಿದೆ ವೃತ್ತಿ ಮಾರ್ಗದರ್ಶನದ ಬೆಂಬಲ’ಮೇಘ ರಾಮದಾಸ್ ಜಿ

ಯುವಜನತೆ ಅತ್ಯಂತ ಕ್ರಿಯಾಶೀಲರು. ಅವರಲ್ಲಿ ಅಗಾಧವಾದ ಯೋಚನಾ ಶಕ್ತಿ ಇದೆ. ಯಾವುದೇ ಕ್ಷೇತ್ರವಾದರೂ ಸಾಧಿಸಿ ತೋರಿಸುವ ಛಲ ಇರುವವರು. ತಮ್ಮ ಆಸಕ್ತಿಗೆ ಅನುಗುಣವಾಗಿ ಬದುಕು ಕಟ್ಟಿಕೊಳ್ಳಲು ತವಕಿಸುತ್ತಿರುವ ಮನಸ್ಸುಗಳಿವು. ಆದರೆ ಈ ತವಕಗಳು ಸಾಧನೆಯಾಗುವ ಹಾದಿಯಲ್ಲಿ ಬಹಳ ಕಷ್ಟಗಳು ಎದುರಾಗುತ್ತವೆ. ಅದಕ್ಕಾಗಿ ಯುವಜನರ ಸುತ್ತಲು ಇರುವ ಸಮಾಜ ಒಂದಷ್ಟು ಬೆಂಬಲ ನೀಡುವ ಅಗತ್ಯವಿದೆ. ಯುವ ಜನತೆಗೆ ಕೆಲವು ನಿರ್ದಿಷ್ಟವಾದ ಸಮಯಗಳಲ್ಲಿ ಉತ್ತಮ ಮಾರ್ಗದರ್ಶನ ದೊರೆಯುವುದು ಮುಖ್ಯವಾಗಿದೆ. ಕೆಲವೊಂದು ಬಾರಿ ಈ ಸಲಹೆಗಳು ಅವರ ಜೀವನದ ದಿಕ್ಕನ್ನೇ ಬದಲಿಸಿ ಸಾಧನೆಯ ಹಾದಿಗೆ ಕೊಂಡೊಯ್ಯಬಲ್ಲವು. ಹಾಗಾಗಿ ಯುವ ಜನತೆಗೆ ಶಿಕ್ಷಣ ಜ್ಞಾನದ ಜೊತೆ ಜೊತೆಗೆ ವೃತ್ತಿಗಳ ಮಾಹಿತಿ ಸಿಗುವುದು ಈಗಿನ ಕಾಲಘಟ್ಟಕ್ಕೆ ಹೆಚ್ಚು ಅವಶ್ಯಕವಾಗಿದೆ.

ವೃತ್ತಿ ಮಾರ್ಗದರ್ಶನ/ಮಾಹಿತಿ ಎಂದರೆ ಯಾವುದೇ ನಿರ್ದಿಷ್ಟ ಓದಿನ ನಂತರ ಆಯ್ಕೆ ಮಾಡಿಕೊಳ್ಳಬಹುದಾದ ಓದು ಅಥವಾ ವೃತ್ತಿಯ ಮಾಹಿತಿ ನೀಡುವುದಾಗಿದೆ. ಇದು ವ್ಯಕ್ತಿಯ ಆಸಕ್ತಿ, ಕೌಶಲ್ಯ ಮತ್ತು ಓದುತ್ತಿರುವ ಅಥವಾ ಓದಿರುವ ಶಿಕ್ಷಣದ ಮೇಲೆ ಅವಲಂಬಿತವಾಗಿರುತ್ತದೆ. ಇದೇ ಕಾರಣಕ್ಕೆ ಈ ಮಾಹಿತಿಗಳು ಅತ್ಯಂತ ಮಹತ್ವ ಪಡೆದಿವೆ. ಇವುಗಳು ನಿಜವಾಗಿಯೂ ಯುವಜನರ ಭವಿಷ್ಯವನ್ನು ರೂಪಿಸುವ ಸೂತ್ರಗಳಾಗಿವೆ. ಇಷ್ಟು ಮುಖ್ಯವಾದ ಮಾಹಿತಿಗಳನ್ನು ನಮ್ಮ ಶಿಕ್ಷಣ ಕ್ಷೇತ್ರಗಳಲ್ಲಿ ಕಡ್ಡಾಯವಾಗಿ ನೀಡಲೇಬೇಕು ಎನ್ನುವ ವ್ಯವಸ್ಥೆ ಇಲ್ಲ. ಒಂದು ವೇಳೆ ಇದ್ದರೂ ಸಹ ಅವು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಂಡಿಲ್ಲ ಎನ್ನುವುದು ಕಣ್ಣಿಗೆ ಕಾಣುವ ಬಹಿರಂಗ ಸತ್ಯ. ಬಹು ಮುಖ್ಯವಾಗಿ ನಿರುದ್ಯೋಗ ಸಮಸ್ಯೆಗೆ ವೃತ್ತಿ ಮಾರ್ಗದರ್ಶನವೂ ಒಂದು ಸೂಕ್ತ ಪರಿಹಾರವಾಗಬಲ್ಲದು.

ಇಂತಹ ಅತ್ಯಗತ್ಯ ಅಂಶಗಳನ್ನು ಶಿಕ್ಷಣದ ಬಹುದೊಡ್ಡ ಗಟ್ಟಗಳೆಂದೇ ಪರಿಗಣಿಸಲ್ಪಡುವ ಎಸ್ ಎಸ್ ಎಲ್ ಸಿ, ದ್ವಿತೀಯ ಪಿಯುಸಿ ಮತ್ತು ಯಾವುದೇ ಪದವಿ ಶಿಕ್ಷಣದ ನಂತರ ತಿಳಿಸಲಾಗುತ್ತದೆ. ಇದು ಒಂದು ಕ್ರಮ. ಆದರೆ ಈ ವೃತ್ತಿ ಮಾರ್ಗದರ್ಶನದ ಕಲಿಕೆಯನ್ನು ಪ್ರೌಢ ಶಿಕ್ಷಣದಿಂದಲೇ ಆರಂಭಿಸಿದರೆ ಯುವ ಜನತೆಗೆ ಮತ್ತಷ್ಟು ಉಪಯುಕ್ತವಾಗಬಹುದು. ಅವರು ಅಲ್ಲಿಂದಲೇ ತಮ್ಮ ತಮ್ಮ ಗುರಿಗಳನ್ನು ಹೆಚ್ಚು ಸ್ಪಷ್ಟಪಡಿಸಿಕೊಳ್ಳಬಹುದು. ಜೊತೆಗೆ ತಮ್ಮ ಕೌಶಲ್ಯ, ಶಕ್ತಿ ಹಾಗೂ ಗಟ್ಟಿಗೊಳಿಸಿಕೊಳ್ಳಬೇಕಾದ ಕ್ಷೇತ್ರಗಳ ಬಗ್ಗೆ ಹೆಚ್ಚು ಗಮನಹರಿಸಬಹುದಾಗಿದೆ.

ಇನ್ನು ಗ್ರಾಮೀಣ ಯುವಜನರ ವಿಚಾರಕ್ಕೆ ಸ್ಪಂದಿಸುವುದಾದರೆ ನಮ್ಮ ಯುವ ಜನತೆ ಪದವಿ ಹಾಗೂ ಸ್ನಾತಕೋತ್ತರ ಪದವಿಗಳಿಂದಲೇ ಹಿಂದೆ ಉಳಿಯುತ್ತಿದ್ದಾರೆ. ಇದಕ್ಕೆ ವೃತ್ತಿ ಮಾರ್ಗದರ್ಶನದ ಕೊರತೆಯೂ ಕೂಡ ಒಂದು ಮೂಲ ಕಾರಣವಾಗಿದೆ. 2023ರ ವಾರ್ಷಿಕ ಶಿಕ್ಷಣ ವರದಿ (ASER) ನ ಅನುಸಾರ 14 ರಿಂದ 18 ವರ್ಷ ವಯಸ್ಸಿನ ಯುವಜನತೆಯಲ್ಲಿ ಹೆಚ್ಚಿನವರು ಔಪಚಾರಿಕ ಅಥವಾ ಅನೌಪಚಾರಿಕ ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ.  14 ರಿಂದ 18 ವರ್ಷ ವಯಸ್ಸಿನವರಲ್ಲಿ 13.2%, ಕೇವಲ 14 ವರ್ಷದವರಲ್ಲಿ 3.9% ಹಾಗೂ ಕೇವಲ 18 ವರ್ಷದವರಲ್ಲಿ 32.6% ಯುವ ಜನತೆ ಗ್ರಾಮೀಣ ಭಾಗದಲ್ಲಿ ಶಿಕ್ಷಣದಿಂದ ಹಿಂದೆ ಸರಿದಿದ್ದಾರೆ ಎನ್ನುವುದು ದೊಡ್ಡ ಆಘಾತ. ಮತ್ತೊಂದು ಬೇಸರದ ಸಂಗತಿ ಎಂದರೆ ಈ ವರದಿಯ ಪ್ರಕಾರ ಇನ್ನು ಆರು ವರ್ಷ ಕಳೆದರೂ ಸಹ ಈ ಸಂಖ್ಯೆಯಲ್ಲಿ ಹೆಚ್ಚೇನು ವ್ಯತ್ಯಾಸವಾಗುವುದಿಲ್ಲ ಎನ್ನುವ ವಿಚಾರ ಸ್ಪಷ್ಟವಾಗಿದೆ.

ಹಾಗಾದರೆ ಈ ಡ್ರಾಪೌಟ್ ಗಳನ್ನು ತಡೆಗಟ್ಟಲು ಏನೆಲ್ಲಾ ಕ್ರಮ ಕೈಗೊಳ್ಳಬಹುದು ಎಂದು ಯೋಚಿಸುವುದಾದರೆ. ಭಾರತದಲ್ಲಿ ಜಾಗತಿಕ ಆಲೋಚನೆಯ ಪ್ರಕಾರ 3:1 ಅನುಪಾತದಲ್ಲಿ ವಿದ್ಯಾರ್ಥಿಗಳ ಹಾಗೂ ಬುದ್ಧಿ ಮಾರ್ಗದರ್ಶಕ ಸರಾಸರಿ ಉಂಟಾಗಬೇಕಿದೆ. ಇದರ ಜೊತೆಗೆ ಔಪಚಾರಿಕ ಶಿಕ್ಷಣಕ್ಕೆ ನೀಡಿದಷ್ಟೇ ಪ್ರಾಮುಖ್ಯತೆಯನ್ನು ಅನೌಪಚಾರಿಕ ಶಿಕ್ಷಣಕ್ಕೂ ನೀಡುವುದು ಕಡ್ಡಾಯವಾಗಿದೆ. ವೃತ್ತಿ ಆಧಾರಿತ ಕೋರ್ಸ್ಗಳ ಸಂಖ್ಯೆ ಹೆಚ್ಚಾಗಬೇಕಿದೆ. ಪರ್ಯಾಯ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಬೆಳೆಯಬೇಕಿದೆ. ಈ ಎಲ್ಲವೂ ಆದಾಗ ದೇಶದ ಯುವಜನತೆ ತಮ್ಮ ನಿರ್ದಿಷ್ಟ ಗುರಿಗಳನ್ನು ಸಾಧಿಸುವ ಎಲ್ಲಾ ಸಾಧ್ಯತೆಗಳು ಸೃಷ್ಟಿ ಆಗಬಹುದಾಗಿದೆ. ವೃತ್ತಿ ಮಾರ್ಗದರ್ಶನ ಯುವಜನತೆಯ ಜೀವನದ ಅವಿಭಾಜ್ಯ  ಅಂಗವಾದಾಗ ಮತ್ತಷ್ಟು ಸಾಧನೆಯ ಹರಿಕಾರರು ಬೆಳೆಯುತ್ತಾರೆ.


Leave a Reply

Back To Top