ʼಆಗದಿರಿ ಕುರಿಹಿಂಡಿನೊಳಗೊಂದು ಕುರಿʼ ಡಾ.ಸುಮಂಗಲಾ ಅತ್ತಿಗೇರಿ

ಬಸವಣ್ಣನವರಂತಹ ಮಹಾನ್ ಶರಣರಿಗೇ ಇಲ್ಲದ ಗರ್ವ ಅಹಂಕಾರ ದರ್ಪಗಳ ಕೊಂಬು ಸಾಮಾನ್ಯ ನರ ಮನುಷ್ಯರಾದ ನಮಗೇಕೆ?


ಎನಗಿಂತ ಕಿರಿಯರಿಲ್ಲ
ಶಿವಭಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದ ಸಾಕ್ಷಿ
ಎನ್ನ ಮನ ಸಾಕ್ಷಿ
ಕೂಡಲ ಸಂಗಮದೇವಾ
ಎನಗಿದೇ ದಿವ್ಯ

  ತಮ್ಮನ್ನು ತಾವು ಕಿರಿಯ ಎನ್ನುತ್ತಲೇ ಇಂದಿಗೂ ನಮ್ಮೆಲ್ಲರ ಎದುರು ಹಿರಿದಾಗಿ ನಿಂತ ವ್ಯಕ್ತಿತ್ವ ಬಸವಣ್ಣನವರದು. ಬಸವಣ್ಣನವರೊಳಗಿರುವ ಈ ಭಾವ ಯಾರಲ್ಲಿರುವುದೋ ಅವರು ಸಮಾಜಮಖಿಯಾಗಿ ಬೆಳೆಯಲು ಸಾಧ್ಯ ಜೊತೆಗೆ ಒಳ್ಳೆಯ ನಡೆ-ನುಡಿ, ನಯ-ವಿನಯಗಳಿಂದ ವೈಯಕ್ತಿಕವಾಗಿಯೂ  ಬೆಳೆಯಲು ಸಾಧ್ಯ.

ಆದರೆ ಇತ್ತೀಚಿನ ದಿನಗಳಲ್ಲಿ ನಾವೆಲ್ಲ ಕವಿ ಜಿ.ಎಸ್. ಶಿವರುದ್ರಪ್ಪ ಅವರು ಹೇಳುವಂತೆ ನಮ್ಮಲ್ಲಿರುವ ಅಹಂನಿಂದಾಗಿ ಹತ್ತಿರವಿದ್ದು ದೂರ ನಿಲ್ಲುತ್ತಿದ್ದೇವೆ. ನಿಜದ ಪ್ರೀತಿ, ಸ್ನೇಹ ಕಾಳಜಿಯನ್ನು ಅರಿಯದಾಗುತ್ತಿದ್ದೇವೆ.
ಈ ಅಹಂಕಾರ, ದರ್ಪ, ನಾನೇ ಹೆಚ್ಚು, ನನ್ನದೇ ನಡೆಯಬೇಕು, ನಾನು ಹೇಳಿದ್ದೇ ಸರಿ, ನಾನೇಕೆ ಇತರರಿಗೆ ತಗ್ಗಿ ಬಗ್ಗಿ ನಡಿಯಬೇಕು? ಎಂಬ ಭಾವ ಯಾರಲ್ಲಿರುತ್ತದೆಯೋ ಅವರು ತಮಗೇ ಗೊತ್ತಿಲ್ಲದಂತೆ ತಮ್ಮ ಅವನತಿಯ ದಾರಿಯನ್ನು ತಾವೇ ತುಳಿಯುತ್ತಿದ್ದಾರೆ ಎಂತಲೇ ಅರ್ಥ.ಹೆಚ್ಚೇನು ಬೇಡ, ನಮ್ಮ ಇತಿಹಾಸವನ್ನೆ ಒಮ್ಮೆ ಅವಲೋಕಿಸಿ ಈ ರೀತಿಯ ವ್ಯಕ್ತಿತ್ವ ಇರುವ ಹಿಟ್ಲರ್ ಆಗಲಿ, ಅಲೆಕ್ಸಾಂಡರ್ ಆಗಲಿ, ಮಹಮದ್ ಬಿನ್ ತುಘಲಕ್ ಆಗಲಿ ಅಂತಿಮವಾಗಿ ಅವರೆಲ್ಲ ಏನಾದರು? ಎಂಬುದನ್ನು ನಾವು ಗಮನಿಸಬೇಕು. ಇವರ ಜೀವನ ನಮಗೆಲ್ಲ ಪಾಠವಾಗಬೇಕು.
ಅದಕ್ಕೆ ಏನೇ ಮಾಡಿ ವಿಚಾರಮಾಡಿ ಮಾಡಿ. ಮಾಡುವ, ಆಡುವ ಮತ್ತು ನಡೆದುಕೊಳ್ಳುವುದರ ಬಗೆಗೆ ಅರಿವಿಟ್ಟುಕೊಂಡು ಮಾಡಿ. ಕುರಿಹಿಂಡಿನೊಳಗೊಂದು ಕುರಿಯಾಗದೆ ಸ್ವಂತಿಕೆಯಿಂದ ಮಾಡಿ. ನಮ್ಮ ಕಾರ್ಯಕಲಾಪ, ನಮ್ಮ ಸ್ಥಾನ ಮಾನ, ನಮ್ಮ ವ್ಯಾಪ್ತಿ, ನಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳ ಬಗೆಗಿನ ಅರಿವು, ನಮಗಿರುವ ಇತಿಮಿತಿಗಳನ್ನರಿತು ನಡೆದರೆ ಒಳಿತು.  

———–

Leave a Reply

Back To Top