́ನೈತಿಕ ಅಧಃಪತನದತ್ತ ಶಿಕ್ಷ(ಕ)ಣ…??́ ವಿಶೇಷ ಲೇಖನ-ಲೀಲಾಕುಮಾರಿ ತೊಡಿಕಾನ

     ಶಿಕ್ಷಣವೆಂಬುದು ಮಗುವಿನಲ್ಲಿರುವ ಸೃಜನಶೀಲತೆಯನ್ನು ಗುರುತಿಸಿ, ಅರಳಿಸುವ ಸಾಧನವಾಗಬೇಕೆ ಹೊರತು ತಲೆಗೆ ಹೃದಯಕ್ಕೆ ಅರಿಯದ ವಿಷಯಗಳನ್ನು ಉರು ಹೊಡೆಸಿ ,ಪರೀಕ್ಷೆಯಲ್ಲಿ ವಾಂತಿ ಮಾಡಿಸುವ ವಿಧಾನವಾಗಬಾರದು. ಹಿಂದಿನ ಕಾಲದ ಶಿಕ್ಷಣ ಮಾನವೀಯ ಮೌಲ್ಯಗಳ ಜೊತೆ ಅಜ್ಞಾನದಿಂದ ಸುಜ್ಞಾನದೆಡೆಗೆ ಕೊಂಡೊಯ್ಯುತ್ತಿತ್ತು.ಆದರೆ ಇಂದು ವಿಜ್ಞಾನದೆಡೆಗೆ ಕೊಂಡೊಯ್ಯುವ ಭರಾಟೆಯಲ್ಲಿ ಮಾನವೀಯ ಮೌಲ್ಯಗಳು ಅಷ್ಟೇ ರಭಸವಾಗಿ ಹಿಂದಕ್ಕೆ ತಳ್ಳಲ್ಪಡುತ್ತಿವೆ.

    ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬದಲ್ಲಿ ಬೆಳೆಯುತ್ತಿದ್ದ ಮಗುವಿಗೆ ಕುಟುಂಬವೇ ಮೊದಲ ಪಾಠಶಾಲೆಯಾಗಿತ್ತು.ಕುಟುಂಬ ಸದಸ್ಯರನ್ನು ನೋಡಿ ಅನುಕರಿಸಿ , ಅನುಸರಿಸಿ ಮಾನವೀಯ ಮೌಲ್ಯಗಳನ್ನು ಕುಟುಂಬದಿಂದಲೇ ಮಗು ಕಲಿಯುತ್ತಿತ್ತು. ಆದರೆ ಇಂದು ತಂದೆ ತಾಯಿ ಇಬ್ಬರೂ ಹೊರಗಡೆ ದುಡಿಯಲು ಹೋಗುವ ವಿಭಕ್ತ ಕುಟುಂಬದಲ್ಲಿ ಮಗು ಕೆಲಸದಾಕೆಯ ಕೈಯಲ್ಲೋ ,ಡೇ ಕೇರ್ ನಲ್ಲೋ ಬೆಳೆಯುತ್ತದೆ.ಮನೆ ಕೆಲಸ ಮತ್ತು ಹೊರಗಡೆ ಕೆಲಸ ಇವೆರಡರ ಒತ್ತಡದಲ್ಲಿರುವ ಎಷ್ಟೋ ಪೋಷಕರಿಗೆ ತಮ್ಮ ಮಕ್ಕಳಿಗೆ ಸಮಯ ನೀಡಲು ಸಾಧ್ಯವಾಗುವುದಿಲ್ಲ. ಜೊತೆಗೆ ಎಷ್ಟೋ ಪೋಷಕರು ತಮ್ಮ ಮಕ್ಕಳಿಗೆ ಸಮಯ ನೀಡಬೇಕಾಗಿರುವ ಪ್ರಾಮುಖ್ಯತೆಯನ್ನು ತಿಳಿದಿಲ್ಲ. ತಮ್ಮ ಸಮಯದ ಬದಲಾಗಿ ಕೇಳಿದ ವಸ್ತುಗಳನ್ನು ತೆಗೆದುಕೊಟ್ಟು ಸಮಧಾನ ಪಟ್ಟುಕೊಳ್ಳುವವರೇ ಜಾಸ್ತಿ.ಕುಟುಂಬದಲ್ಲಿ ಕತೆ ಹೇಳುವ , ಕೇಳುವ ಸಂಪ್ರದಾಯವೆಲ್ಲ ಮಾಯವಾಗಿ ಆಧುನಿಕತೆಗೆ ತೆರೆದುಕೊಂಡ ನಾವೆಲ್ಲರೂ ಮಗುವಿಗೆ ತಿನ್ನಲು ಆಹಾರ, ಹಾಕಲು ಬ್ರಾಂಡೆಡ್ ಬಟ್ಟೆ ,ವಾರಾಂತ್ಯ ಸುತ್ತಾಟ, ದೊಡ್ಡ ಮೊತ್ತದ ಶುಲ್ಕವಿರುವ ಶಾಲೆಗೆ ಸೇರಿಸುವುದು ಇದಷ್ಟೇ ನಮ್ಮ ಜವಬ್ದಾರಿ ಎಂದುಕೊಂಡಿದ್ದೇವೆ. ಮಕ್ಕಳಿಗೆ‌ ಕಷ್ಟದ ಜೀವನದ ಚಿತ್ರಣವಾಗಲಿ , ದುಡ್ಡಿನ‌ ಬೆಲೆಯಾಗಲಿ ತಿಳಿಸದೆ, ನಾವು ಕಷ್ಟ ಪಟ್ಟಂತೆ ಮಕ್ಕಳು ಕಷ್ಟ ಪಡುವುದು ಬೇಡವೆಂದು ಕೇಳಿದ್ದನ್ನೆಲ್ಲ ಕೊಡಿಸಿ ಅತಿ ಸುಖದಲ್ಲಿ ಬೆಳೆಸಿ ಮಕ್ಕಳು ದಾರಿ ತಪ್ಪಲು ನಾವೇ ಕಾರಣಕರ್ತರಾಗುತಿದ್ದೇವೆ. ಚಿಕ್ಕ ವಯಸ್ಸಿನಲ್ಲೇ ಮೋಜಿಗಾಗಿ ಬೈಕ್ ,ಕಾರುಗಳನ್ನು ಕೊಡಿಸಿ ತಮ್ಮ ಮಕ್ಕಳನ್ನೇ ಶಾಶ್ವತವಾಗಿ ಕಳೆದುಕೊಳ್ಳುವ ಘಟನೆಗಳು ಹೆಚ್ಚಾಗುತ್ತಿವೆ. ನೈತಿಕ ಶಿಕ್ಷಣ ಮತ್ತು ಬಾಲ್ಯದಾಟಗಳಿಂದ ವಂಚಿತರಾಗಿ ಮೊಬೈಲ್, ಟಿ.ವಿ , ಕಂಪ್ಯೂಟರ್ ‘ತ್ರೀಸ್ಕ್ರೀನ್’ ನಲ್ಲಿ ಬಂಧಿಯಾದ ಮಕ್ಕಳನ್ನು ಶಾಲೆಗೆ ಸೇರಿಸಿ ತಮ್ಮ ಭಾರ ಕಡಿಮೆ ಮಾಡಿಕೊಳ್ಳುವ ಪೋಷಕರು ಒಂದೆಡೆಯಾದರೆ ನಮ್ಮ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಮೌಲ್ಯ ಶಿಕ್ಷಣವನ್ನು ನೀಡುವುದರಲ್ಲಿ ಸೋತಿವೆ. ಜ್ಞಾನದ ಜೊತೆಗೆ ಮಾನವೀಯ ಮೌಲ್ಯಗಳು ಮಿಳಿತವಾದಾಗ ಮಾತ್ರ ಶಿಕ್ಷಣ ಗುಣಮಟ್ಟವನ್ನು ಕಾಯ್ದುಕೊಂಡು ಸಾರ್ಥಕತೆಯನ್ನು ಪಡೆಯಲು ಸಾಧ್ಯ.

     ಇತ್ತೀಚಿಗಿನ‌ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಮೋಹದ ಬಲೆಯೊಳಗೆ ಸಿಲುಕಿ ನಿಜವಾದ ಕಲಿಕೆ ಮತ್ತು ಸಂಸ್ಕಾರದಿಂದ ವಿಮುಖರಾಗುತ್ತಿರುವ ಬೆನ್ನಲ್ಲೇ ಕೆಲವು ಶಿಕ್ಷಕರಲ್ಲೂ   ನಿಜವಾದ ಜ್ಞಾನ, ಪ್ರಾಮಾಣಿಕತೆ ಮತ್ತು ಬದ್ಧತೆಯ ಕೊರತೆಯನ್ನು ಕಾಣುತ್ತೇವೆ. ಜ್ಞಾನ, ಪ್ರಾಮಾಣಿಕತೆ, ಬದ್ಧತೆ ಇರುವ ಎಷ್ಟೋ ಶಿಕ್ಷಕರು ಉದ್ಯೋಗದಿಂದ ವಂಚಿತರಾಗಿ ಸಾಮಾನ್ಯ ಜ್ಞಾನ, ಬೋಧನಾ ಕೌಶಲ್ಯ ಇಲ್ಲದಿರುವವರು ಶಿಕ್ಷಕ ವೃತ್ತಿಗೆ ಬಂದು ಶಿಕ್ಷಣದ ಮೌಲ್ಯ ಮತ್ತಷ್ಟು ಕುಸಿಯಲು ಕಾರಣರಾಗುತ್ತಿರುವುದು ‘ಶಿಕ್ಷಕರ ನೇಮಕಾತಿ ಹಗರಣ’ ದಂತಹ ಪ್ರಕರಣಗಳನ್ನು ಕಂಡಾಗ ಸಾಬೀತಾಗುತ್ತದೆ. ಈಗೀಗ ಲಂಚ ಕೊಟ್ಟು ಅಧಿಕಾರ ಬಳಸಿ ಉದ್ಯೋಗ ಪಡೆಯುವ ಚಾಳಿ ಸರ್ವೇ ಸಾಮಾನ್ಯ.ಇದಕ್ಕೆ ಬೋಧನಾ ವೃತ್ತಿಯೂ ಹೊರತಾಗಿಲ್ಲ.

      ನಮ್ಮ ದೊಡ್ಡ ದುರಂತವೆಂದರೆ ಕೆಲವು ಬೋಧಕರೇ ತಮ್ಮ ಸಂಸ್ಥೆಗೋ ತನಗೋ ಉತ್ತಮ‌ ಹೆಸರು ಬರಲೆಂಬ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ನಕಲು ಮಾಡಲು ಅವಕಾಶ ಕಲ್ಪಿಸಿಕೊಟ್ಟು ಶಿಕ್ಷಣ ವ್ಯವಸ್ಥೆಯನ್ನು ಹಾಳುಗೆಡಹುತಿದ್ದಾರೆ. ಇದಕ್ಕಿಂತ ಹೊಲಸು ಕೆಲಸ ಖಂಡಿತಾ ಇನ್ನೊಂದಿಲ್ಲ. ತನ್ನ ಕೈಯಾರೆ ವಿದ್ಯಾರ್ಥಿಗಳ ಕಲಿಕಾ ಸಾಮಾರ್ಥ್ಯವನ್ನು ಚಿವುಟಿ ವಿದ್ಯಾರ್ಥಿಗಳು ದಾರಿ ತಪ್ಪಲು ನೇರ ಕಾರಣರಾಗುತ್ತಿರುವುದು ಶೋಚನೀಯ. ವಿದ್ಯಾರ್ಥಿಗಳಿಗೂ ನಕಲು ಹೊಡೆಸುವ ಬೋಧಕರೇ ಹೆಚ್ಚು ಅಚ್ಚುಮೆಚ್ಚು.ಮಾತ್ರವಲ್ಲದೆ ಪ್ರಾಮಾಣಿಕವಾಗಿ ಕರ್ತವ್ಯ ಮಾಡುವ ಬೋಧಕರನ್ನು ಶತ್ರುಗಳಂತೆ ಕಾಣುವ ಕಾಲಕ್ಕೆ ಬಂದು ತಲುಪಿದ್ದೇವೆ ಎಂಬುದು ನಿಜಕ್ಕೂ ವಿಪರ್ಯಾಸ. ಒಬ್ಬ ಬೋಧಕ ತನ್ನ ಜ್ಞಾನ, ಬೋಧನಾ ಕೌಶಲ್ಯದಿಂದ ವಿದ್ಯಾರ್ಥಿಗಳ‌ ಪ್ರೀತಿ ಗಳಿಸಬೇಕೆ‌ ಹೊರತು ನಕಲು ಹೊಡೆಸುವುದರಿಂದ ಅಲ್ಲವೆಂಬುದನ್ನು ಹಲವು ಬೋಧಕರು ಅರಿತುಕೊಳ್ಳಬೇಕಾದ ಅನಿವಾರ್ಯತೆ ಇದೆ‌.

      ಇವತ್ತು ಪದವಿ ಹಂತದಲ್ಲಿದ್ದರೂ  ಪಾಠದ ಕುರಿತಾಗಿ ಸಂದೇಹವಾಗಲಿ, ಪ್ರಶ್ನಿಸುವ ಮನೋಭಾವವಾಗಲಿ ವಿದ್ಯಾರ್ಥಿಗಳಲ್ಲಿ ಮಾಯವಾಗಿ ನಕಲು ಮಾಡಿಸಿಯಾದರೂ ಉತ್ತೀರ್ಣಗೊಳಿಸಿ ಎಂದು ಬೇಡುವ ಸ್ಥಿತಿಗೆ ಇಳಿದಿದ್ದಾರೆ. ಕೆಲವೇ ಕೆಲವು ಜಿಲ್ಲೆಗಳನ್ನು ಹೊರತು ಪಡಿಸಿ ಹೆಚ್ಚಿನ ‌ಜಿಲ್ಲೆಗಳಲ್ಲಿ ನಕಲು ಮಾಡಿಸುವುದು ಸರ್ವೇ ಸಾಮಾನ್ಯವಾಗಿದ್ದು, ಪರೀಕ್ಷೆ ಎಂಬುದೇ ಅರ್ಥ ಕಳೆದುಕೊಳ್ಳುತ್ತಿದೆ. ಅಂಕ ಬಂದರೆ ಸಾಕು, ಉದ್ಯೋಗ ಸಿಗುತ್ತದೆ ಎಂಬ ಭ್ರಮೆಯಲ್ಲಿರುವ ವಿದ್ಯಾರ್ಥಿಗಳು ಇತ್ತೀಚೆಗೆ ಮೂಲಭೂತವಾಗಿ ಬೇಕಾಗಿರುವ ಜ್ಞಾನ‌ ಮತ್ತು ಕೌಶಲ್ಯದ ಕೊರತೆಯಿಂದ ಉದ್ಯೋಗ ಕಳೆದುಕೊಂಡ ಅದೆಷ್ಟೋ ಯುವಜನತೆಯ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ತಮ್ಮ ಸ್ವಾರ್ಥಕ್ಕಾಗಿಯೋ,ದುಡ್ಡಿನಾಸೆಗೋ, ವಿದ್ಯಾರ್ಥಿಗಳಿಂದ ಒಳ್ಳೆಯವರೆನಿಸಿಕೊಳ್ಳುವ ಹಪಹಪಿಕೆಯಿಂದಲೋ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಕೃತ್ಯದಲ್ಲಿ ಭಾಗಿಯಾಗುವ ಅದೆಷ್ಟೋ ನೀಚ ಬೋಧಕರೂ ಇದ್ದಾರೆ. ಜೊತೆಗೆ ಸಂಬಳ ಬಂದರೆ ಸಾಕೆಂದು ಮೌಲ್ಯಗಳಿಗೆ ಬೆನ್ನು ಹಾಕಿದ ಬೋಧಕರಿಂದ, ನಕಲು ಹೊಡೆಸಿ ಒಳ್ಳೆಯವರಾಗಬೇಕೆಂಬ ಕೆಟ್ಟತನ, ಅಂಕಗಳನ್ನಷ್ಟೇ ಮಾನದಂಡವಾಗಿ ನೋಡುವ ಪೋಷಕರು ಮತ್ತು ಶಿಕ್ಷಕರ ದೃಷ್ಟಿಕೋನ, ಪಠ್ಯಪುಸ್ತಕ ಹೊರತು ಪಡಿಸಿ ಇತರ ಉತ್ತಮ ಪುಸ್ತಕ ಓದುವ ಹವ್ಯಾಸದಿಂದ ವಿದ್ಯಾರ್ಥಿಗಳು ವಿಮುಖರಾಗಲು ಕಾರಣವಾದ ಮೋಬೈಲ್ ಚಟ, ಸರಿ ತಪ್ಪು ವಿಮರ್ಶೆ ಮಾಡದೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಪ್ರಚೋದನಾಕಾರಿ ಸುದ್ದಿಗಳು ಇವೆಲ್ಲವೂ ಕೂಡ ಶಿಕ್ಷಣದ ವ್ಯವಸ್ಥೆಯ ಮೇಲೆ ಪ್ರತ್ಯಕ್ಷ- ಪರೋಕ್ಷವಾಗಿ ಪರಿಣಾಮ ಬೀರುತ್ತವೆ.

      ಒಟ್ಟಿನಲ್ಲಿ ಕೇವಲ ಅಂಕಗಳನ್ನಷ್ಟೇ ಮಾನದಂಡವಾಗಿ ಕಾಣದೆ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯ ಜೊತೆ ಸಂಸ್ಕಾರ, ಮಾನವೀಯ ಗುಣಗಳನ್ನು ಬೆಳೆಸಿ ,ಉದ್ಯೋಗ ಪಡೆಯುವ ಶಕ್ತಿ ಗಳಿಸಿಕೊಳ್ಳುವ  ಶಿಕ್ಷಣದ ಅನಿವಾರ್ಯತೆ ಖಂಡಿತಾ ಇದೆ.  

Leave a Reply

Back To Top