ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕ ಮಹಾದೇವಿ ವಚನಗಳ ವಿಶ್ಲೇಷಣೆ -06
ಕಾಯಕ್ಕೆ ನೆಳಲಾಗಿ ಕಾಡಿದ್ದು ಮಾಯೆ
*ಪ್ರಾಣಕ್ಕೆ ಮನವಾಗಿ ಕಾಡಿತ್ತು ಮಾಯೆ
ಮನಕ್ಕೆ ನೆನಹಾಗಿ ಕಾಡಿತ್ತು ಮಾಯೆ,
ನೆನಹಿಂಗೆ ಅರಿವಾಗಿ ಕಾಡಿತ್ತು ಮಾಯೆ
ಅರುಹಿಂಗೆ ಮರವಾಗಿ ಕಾಡಿತ್ತು ಮಾಯೆ
ಜಗದ ಜಂಗುಳಿಗೆ ಬೆಂಗೋಲನೆತ್ತಿ ಕಾಡಿತ್ತು ಮಾಯೆ
ಚೆನ್ನಮಲ್ಲಿಕಾರ್ಜುನಾ ನೀನೊಡ್ಡಿದ ಮಾಯೆಯ ನಾರೂ ಗೆಲಬಾರದು
ಅಕ್ಕಮಹಾದೇವಿಯು ಹೇಳಿದ ಮಾಯೆಯ ಅರ್ಥ ಎನೆಂದರೆ. ವ್ಯಾಮೋಹ ಮತ್ತು ಸೆಳೆತ ಎಂದರ್ಥ.
ಅಕ್ಕಮಹಾದೇವಿಯು ಮಾಯೆಯ ವಿರಾಟ್ ಸ್ವರೂಪವನ್ನು
ಮಾನವನ ಕಾಯದೊಂದಿಗಿನ ಅನೇಕ ಉದಾಹರಣೆಗಳ ಮೂಲಕ ಹೇಳಿರುವುದು ಈ ಒಂದು ವಚನದಲ್ಲಿ ಕಂಡು ಬಂದಿದೆ .
ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ
ಸ್ವಾರ್ಥ ಹಾಗೂ ವ್ಯಾಮೋಹವನ್ನು ಹೊಂದಿದ ಮಾನವ, ಈ ಕಾಯದ ಮೇಲಿನ ವ್ಯಾಮೋಹದಿಂದ ಏನು ಬೇಕಾದರೂ ಮಾಡಬಲ್ಲ. ಯಾರನ್ನಾದರೂ ಸೆಳೆಯಬಲ್ಲ ವ್ಯಾಮೋಹಿಸಬಲ್ಲ .
ಈ ಮಾಯೆ ಎನ್ನುವ ವ್ಯಾಮೋಹವು ಬೆನ್ನು ಬಿಡದೇ ನಮ್ಮ ನೆರಳಂತೆ ನಮ್ಮನ್ನೇ ಹಿಂಬಾಲಿಸಿಕೊಂಡು ಬರುತ್ತದೆ .
ಈ ಮಾಯೆ ಎನ್ನುವುದು ಬೆಳಕಿದ್ದಾಗ ಸ್ಪಷ್ಟವಾಗಿ ಕಾಣಿಸುತ್ತದೆ .
ಕತ್ತಲಲ್ಲಿ ಕಣ್ಣಿಗೆ ಕಾಣಿಸದಿದ್ದರೂ ನಮ್ಮ ಕಾಯವನ್ನೇ ಅಂದರೆ ನಮ್ಮ ದೇಹವನ್ನೇ ಹಿಂಬಾಲಿಸಿಕೊಂಡು ಬರುವ ಈ ಮಾಯೆ ನಮ್ಮ ದೇಹವನ್ನೇ ಅಂಟಿಕೊಂಡು ಇರುತ್ತದೆ .
ಅಕ್ಕಮಹಾದೇವಿಯ ಈ ಮಾಯೆ ಎಂಬುವ ಮೋಹ ಒಳಾರ್ಥದಲ್ಲಿ ಕೌಶಿಕ ಎನ್ನುವ ಮಾಯೆ, ಬೆಂಬತ್ತಿ ಬರುವ ಪ್ರಸಂಗವನ್ನು ಅಕ್ಕಮಹಾದೇವಿಯು ಹೇಳಿದ್ದು ಕಂಡು ಬರುತ್ತಿದೆ .
ಪ್ರಾಣಕ್ಕೆ ಮನವಾಗಿ ಕಾಡಿತ್ತು ಮಾಯೆ
ಮನುಷ್ಯ ಮನದಲ್ಲಿ ಪ್ರಾಣವು ಹೇಗಿದೆಯೋ ಆ ಪ್ರಾಣದಲ್ಲೇ ಮನಸ್ಸು ತುಂಬಿಕೊಂಡಿರುತ್ತದೆ.
ಮನುಷ್ಯನ ಮನಸ್ಸನ್ನು ಹಾಗೂ ಪ್ರಾಣವನ್ನು ಪ್ರತ್ಯೇಕಿಸಲು ಸಾಧ್ಯವೇ ಇಲ್ಲ .ಹಾಗೇ ಮನಸ್ಸನ್ನು ಹಿಡಿದಿಡಲು ಆಗಲಾರದು.
ಈ ಪ್ರಾಣವೆಂಬುವ ಮನ ಮರ್ಕಟ ಇದ್ದಂತೆ .ಎಲ್ಲಲ್ಲೋ ಆಡುತ್ತಿರುತ್ತದೆ. ಎಲ್ಲಲ್ಲೋ ಜೋತು ಬಿದ್ದು ಬಿಡುತ್ತದೆ .
ಸೂಕ್ಷ್ಮ ಸಂವೇದನೆಯ ಮನ ತನ್ನದೇ ಮನಸೋ ಇಚ್ಚೆಯಂತೆ ಸಂಚರಿಸುವ ಮನವನ್ನು ಯಾರೂ ಹಿಡಿದು ಕಟ್ಟಲಾರರು .ಅದು ಪ್ರಾಣ .ಅದನ್ನು ಕಟ್ಟಲು ಪ್ರಯತ್ನಿಸಿದರೆ ಅದು ಜಾರಿಕೊಳ್ಳುವ ಅವಸ್ಥೆಗೆ ಬಂದು ಬಿಡುತ್ತದೆ .
ಇದನ್ನೇ ಅಕ್ಕ ಮಾಯೆ ಎಂದು ಕರೆದಿದ್ದಾಳೆ. ಅಕ್ಕಳ ಮಾಯೆಯ ಗಂಡ ಚೆನ್ನಮಲ್ಲಿಕಾರ್ಜುನನು .
ಆತನೇ ಅಕ್ಕಳಿಗೆ ಜೀವ ಮತ್ತು ಪ್ರಾಣ .
ಅಕ್ಕನ ಮಾಯೆಯೇ ಒಂದು ಪರಪಂಚ.ಈ ಪರಪಂಚದಲ್ಲಿ ಸುತ್ತುವ ನನ್ನ ಮನವು ಪ್ರಾಣವಾಗಿ ಕಾಡಿತ್ತು ಎಂದು ಹೇಳುವ ಅಕ್ಕಳ ಮಾಯಾ ಗಂಡನಾದ ಚೆನ್ನಮಲ್ಲಿಕಾರ್ಜುನನೇ ಜೀವ ನನ್ನ ಮನದಿಂದ ಚೆನ್ನಮಲ್ಲಿಕಾರ್ಜುನ ಎಂಬ ವ್ಯಾಮೋಹದ ಗಂಡನನ್ನು ತ್ಯಜಿಸುವ ಅಕ್ಕನ ಲೌಕಿಕ ಗಂಡ ಕೌಶಿಕ ಹಾಗೂ ಪಾರಮಾಪಾರ್ಥಿಕ ಗಂಡನಾದ ಚೆನ್ನಮಲ್ಲಿಕಾರ್ಜುನನೊಂದಿಗೆ ನಡೆಸುವ ಸಂವಾದವು ಅಕ್ಕನನ್ನು ಈ ಮಾಯೆ ಪ್ರಾಣವಾಗಿ ಕಾಡಿದ್ದಂತೆ ಕಂಡು ಬರುತ್ತದೆ .
ಯಾರಾದರೂ ನಮ್ಮನ್ನು ಕಾಡಿಸಿದರೆ ಏಕೆ ನನ್ನ ಪ್ರಾಣವನ್ನು ಹಿಂಡುತ್ತಿರುವೆ ಎಂದು ಹೇಳುವುದಿಲ್ಲವೇ ? ಹಾಗೇಯೇ ಅಕ್ಕನ ಮಾಯದ ಪ್ರಾಣ ಈ ಚೆನ್ನಮಲ್ಲಿಕಾರ್ಜುನನೇ ಆಗಿದ್ದಾನೆ.
.
ಮನಕ್ಕೆ ನೆನಹಾಗಿ ಕಾಡಿತ್ತು ಮಾಯೆ
ಮನುಷ್ಯನು ನೆನಪನ್ನು ಹೊಂದದಿದ್ದರೆ ಸತ್ತ ಹೆಣವಿದ್ದಂತೆ .
ಮನಸ್ಸು ಎಲ್ಲಿರುತ್ತದೆಯೋ ಅಲ್ಲಿ ನೆನಪು ಇದ್ದೆ ಇರುತ್ತದೆ .
ಮನುಷ್ಯನು ಹುಟ್ಟಿನಿಂದ ಸಾಯುವವರೆಗೆ ಈ ನೆನಪನ್ನು ಮನದಲ್ಲಿ ಸ್ಥಿರವಾಗಿ ಇಟ್ಟುಕೊಂಡಿರುತ್ತಾನೆ .
ನೆನಹಿಂಗೆ ಅರಿವಾಗಿ ಕಾಡಿತ್ತು ಮಾಯೆ
ಅರುಹಿಂಗೆ ಮರವಾಗಿ ಕಾಡಿತ್ತು ಮಾಯೆ
ಮನುಷ್ಯನ ನೆನಪಿನಲ್ಲಿ ಅರಿವು ಎನ್ನುವುದು ಇದ್ದೇ ಇರುತ್ತದೆ .ಒಬ್ಬ ಮನುಷ್ಯನು ಬೆಳೆಯಬೇಕಾದರೆ. ಅದು ರಾಜಕೀಯ, ಸಾಮಾಜಿಕ ಯಾವುದೇ ಇರಲಿ ಅರಿವು ಎಂಬುವುದು ಬಹಳಷ್ಟು ಮುಖ್ಯವಾಗಿರುತ್ತದೆ.
ಈ ಅರಿವು ಎನ್ನುವ ಭಗವಂತನ ಸಾಕ್ಷಾತ್ಕಾರದ ಪಥದಲ್ಲಿ ಮತ್ತೆ ಮತ್ತೆ ಈ ಮಾಯೆಯಾಗಿ ಕಂಡು ಬರುತ್ತದೆ .ಮನಸ್ಸಿಗೂ, ನೆನಪಿಗೂ ಅವಿನಾಭಾವ ಸಂಬಂಧ. ಈ ನೆನಪು ಮಾಯೆಯ ರೂಪದಲ್ಲಿ ಸದಾ ಮನಸ್ಸನ್ನು ಕಾಡುತ್ತಿರುತ್ತದೆ.
ಅದು ಒಳ್ಳೆಯದೇ ಇರಲಿ ,ಕೆಟ್ಟದ್ದೆ ಇರಲಿ ,ಕೆಡುಕಿರಲಿ, ಹಿತವಿರಲಿ ಕಾಡುತ್ತದೆ .ಈ ಕಾಡುವಿಕೆ ಕಾಡಿ ತಡೆಯೊಡ್ಡುತ್ತಿರುತ್ತದೆ. ಹೀಗಾಗಿ ಅರಿವು ಮಾಯೆಯ ರೂಪದಲ್ಲಿ ನಿರಂತರವಾಗಿ ಕಾಡುತ್ತಿರುತ್ತದೆ.
ಎಲ್ಲಿ ನೆನಪು ಇದೆಯೋ ಅಲ್ಲಿ ಅರಿವು ಸೇರಿಕೊಂಡೇ ಇರುತ್ತದೆ .
ಒಬ್ಬ ಮನುಷ್ಯ ಬೌದ್ಧಿಕ ಬೆಳವಣಿಗೆಗೆ ಅರಿವು ಎನ್ನುವುದು ಬಹಳ ಮುಖ್ಯವಾಗಿರುತ್ತದೆ .
ತನ್ನ ಅರಿವೇ ಗುರುವಾಗಿ ನಿಲ್ಲುವ ಅಕ್ಕನ ಮಾಯೆ ಇಲ್ಲಿ ಬೆಂಬತ್ತಿದ್ದಂತೆ ಕಂಡು ಬರುತ್ತದೆ .
ಜಗದ ಜಂಗುಳಿಗೆ ಬೆಂಗೋಲನೆತ್ತಿ ಕಾಡಿತ್ತು ಮಾಯೆ
ಚೆನ್ನಮಲ್ಲಿಕಾರ್ಜುನ ನೀನೊಡ್ಡಿದ ಮಾಯೆಯನಾರೂ ಗೆಲಬಾರದು
ಜಗತ್ತಿನಲ್ಲಿರುವ ಯಾರೂ ಈ ಮಾಯೆಯಿಂದ ಮುಕ್ತವಾಗಿ ಮುಕ್ತವಾಗುವುದಿಲ್ಲ.
ಕಾಡುವ ಕಾಯಕ್ಕೆ ನೆರಳಾಗಿ, ಪ್ರಾಣಕ್ಕೆ ಮನವಾಗಿ ,ಮನಕ್ಕೆ ನೆನಪಾಗಿ ,ನೆನಪಿಗೆ ಅರಿವಾಗಿ ಕಾಡುವ ಈ ಮಾಯೆ ಬೆಂಗೋಲಿನಂತೆ ಕಾಡುತ್ತಿರುತ್ತದೆ.
ಲೌಕಿಕ ಬಂಧನದಲ್ಲಿ(ಕೌಶಿಕ)ನಲ್ಲಿ ಸಿಲುಕಿದ ಈ ಮಾಯೆಗೆ ಕಾರಣ, ಹೆಣ್ಣು ,ಹೊನ್ನು, ಮಣ್ಣು. ಇವುಗಳನ್ನು ಪ್ರಯತ್ನ ಪಟ್ಟು ಗೆಲ್ಲಬಹುದಾದರೂ, ಭಗವಂತ ಒಡ್ಡಿದ ಅಲೌಕಿಕ (ಚೆನ್ನಮಲ್ಲಿಕಾರ್ಜುನನು) ಮಾಯೆಯನ್ನು ಗೆಲ್ಲಲಾಗದು.
ಅಕ್ಕನಿಗೆ ಈ ಮಾಯೆ ಸರ್ವಾಂತರ್ಯಾಮಿಯಾಗಿ ಕಂಡಿರಬೇಕು.
ಅಕ್ಕಳು ಮಾಯೆಯನ್ನು ಅರಿತವಳು. ಮತ್ತು ಮಾಯೆಯನ್ನು ಗೆದ್ದು ನಡೆದವಳು .
ಅಲ್ಲಮನ ಪ್ರಕಾರ ಮಾಯೆ
ಅಲ್ಲಮನರ ಪ್ರಕಾರ ನಿರಾಕಾರ ನಿರ್ಗುಣಾತೀತವಾದ ಈ ಲಿಂಗ ಒಂದೇ .ಅದು ಏನನ್ನು ಬಯಸುವುದಿಲ್ಲ.ಅದು ಏನನ್ನೂ ಕುರಿತು ಚಿಂತಿಸುವುದಿಲ್ಲ .ಹೀಗಾಗಿ ಇದಕ್ಕೆ ಶೂನ್ಯ, ಬಯಲು ಎಂದು ಕರೆದರು .
ಈ ಲಿಂಗದಲ್ಲಿ ಸೃಷ್ಟಿಯ ಚೈತನ್ಯವಿದೆ .ಚಲನೆ ಇದೆ ಅದು ನಾನಾ ವಸ್ತು ಗಳಾಗಿ ರೂಪಾಂತರಗೊಳ್ಳುತ್ತದೆ. ಲಿಂಗ ಜಗತ್ತಿನಲ್ಲಿ ಪೂರ್ಣವಾಗಿ ವ್ಯಾಪಿಸಿಕೊಂಡಿದೆ.
ಜಗತ್ತು ಲಿಂಗದಲ್ಲಿಯೂ ಲಿಂಗವು ಆ ಲಿಂಗ ಜಗತ್ತಿನಲ್ಲಿ ಇರುತ್ತದೆ .
ನಮ್ಮ ಮಾನಸಿಕ ಆಲೋಚನೆ ಸುಖ, ದುಃಖ, ಕೋಪ,ತಾಪ, ಖಿನ್ನತೆ ಇವೆಲ್ಲ ನಮ್ಮ ಒಳಗಿರುವ ಮಾನಸಿಕ ಸ್ಥಿತಿಗಳು .ಹಾಗೇ ಜಗತ್ತು ಲಿಂಗದ ಒಳಗೇ ಇರುವುದರಿಂದ ಲಿಂಗವು ಜಗತ್ತು ತನ್ನ ಒದಗಿಸುವಂತೆ ಕಾಣುತ್ತದೆ.
ಒಬ್ಬ ವ್ಯಕ್ತಿ ಅನುಭಾವಿಯಾದರೆ ,ಅವನು ಲಿಂಗದೊಂದಿಗೆ ತಾನೇ ಲಿಂಗವಾಗಿ ಮೊದಲಿದ್ದ ಮರೆವು ಇಲ್ಲವಾಗಿ ತಾನೇ ಲಿಂಗ ಎನ್ನುವ ಅನುಭೂತಿ ಉಂಟಾಗುತ್ತದೆ .
ಲಿಂಗಾಯತ ಅನುಭಾವಿಗೆ ತಾನು ಮತ್ತು ಲಿಂಗ ಎರಡೂ ಒಂದೇಯಾಗಿ ಕಾಣುವಂತೆ ತಾನು ಮತ್ತು ಜಗತ್ತು ಒಂದೇ .ತಾನೇ ಲಿಂಗ ಎಂದು ಭಾವಿಸಿಕೊಂಡಾಗ ಲಿಂಗನು ಹೇಗೆ ಜಗತ್ತು ತನ್ನ ಒಳಗೆ ಇದೆ ಎಂದು ಪರಿಭಾವಿಸುತ್ತಾನೆ. ಲಿಂಗವಾಗುವುದು ಎಂದರೆ ತಾನು ಮತ್ತು ಲಿಂಗ ಒಂದೇ ಎಂದು ತಿಳಿಯುವುದು .
ಅನುಭಾವದಲ್ಲಿ ಇಂದ್ರಿಯ ಮತ್ತು ಅಂತಃಕರಣಗಳು ಆತ್ಮದೊಂದಿಗೆ ಸಂಬಂಧವನ್ನು ತಾತ್ಕಾಲಿಕವಾಗಿ ಕಡಿದುಕೊಂಡು ಆತ್ಮ ತಾನೊಂದೆ ಉಳಿಯುತ್ತದೆ .
ಆ ಶುದ್ಧ ಆತ್ಮವೇ ಪರಮಾತ್ಮ. ಅದೇ ಬ್ರಹ್ಮ. ಅದೇ ಸೃಷ್ಟಿ.ಅದೇ ಜ್ಞಾನ, ಅದೇ ವಿದ್ಯೆ ಇದನ್ನೇ ಶರಣರು ಅರಿವು ಅಥವಾ ಲಿಂಗ ಎನ್ನುತ್ತಾರೆ .ಇದನ್ನು ಅನುಭವಿಸಿದ ವನು ಲಿಂಗಾನುಭಾವಿ .
ಲಿಂಗನಿಂದ ಭಿನ್ನವಾದ ನಾನು ಈ ಜಗತ್ತೆ ಮಿಥ್ಯ ಯಾಗಿರುವಂತೆ ಜಗತ್ತಿನಿಂದ ಭಿನ್ನವಾದ ಲಿಂಗವೂ ಮಿಥ್ಯೆ. ಈ ಜಗತ್ತನ್ನು ಕಾಣುವ ನೋಟದಲ್ಲಿ ದೋಷವಿದೆ .
ಹೀಗಾಗಿ ಈ ಜಗತ್ತು ಒಂದು ಮಾಯೆಯಾಗಿ ನಮ್ಮನ್ನು ಕಾಡುತ್ತದೆ .ಈ ಮಾಯೆಯನ್ನು ಗೆದ್ದವನೇ ನನ್ನ ಚೆನ್ನಮಲ್ಲಿಕಾರ್ಜುನ ಎಂದು ಹೇಳುವ ಅಕ್ಕಳಂತೆ ಅಲ್ಲಮಪ್ರಭುಗಳು ನಮಗೆ ಕಂಡು ಬರುತ್ತಾರೆ .
ಅಕ್ಕಮಹಾದೇವಿಯ ಮಾಯೆಯ ಕುರಿತು ಕಿನ್ನರಿ ಬ್ರಹ್ಮಯ್ಯನವರು ತಮ್ಮ ಒಂದು ವಚನದಲ್ಲಿ ಹೀಗೆ ಹೇಳುತ್ತಾರೆ.
ಕಾಯದಲ್ಲಿ ಕಳವಳವಿರಲು
ಪ್ರಾಣದಲ್ಲಿ ಮಾಯೆ ಯಿರಲು
ಏತರ ಗಮನ ಏತರ ನಿರ್ಮಾಣ
ಮಹಾಲಿಂಗ ತ್ರಿಪುರಾಂತಕ ನಿನ್ನ ಸಂಹಾರಿ ಎಂಬನ್ನಲ್ಲದೆ
ಸಜ್ಜೆನೆಯೆಂದು ಕೈವಿಡಿವನಲ್ಲ
ಈ ಕಾಯದಲ್ಲಿರುವ ಕಳವಳವನ್ನು, ಚಿಂತೆಯನ್ನು ,ಮನದಲ್ಲಿರುವ ವಿಷಯಾದಿಗಳನ್ನು ಗೆಲ್ಲುವ ಏಕೈಕ ಹೆಣ್ಣು ಅಕ್ಕ .ಅವಳಲ್ಲಿರುವ ವ್ಯಕ್ತಿತ್ವವು ವಿಷಯಾದಿಗಳಾದ ಹಸಿವು, ತೃಷೆಯನ್ನು ಗೆಲ್ಲುವ ಬಗೆಯನ್ನು ಅಕ್ಕ ಮಾತ್ರ ಹೊಂದಿದ್ದಾಳೆ .ಎನ್ನುವ ಕಿನ್ನರಿ ಬೊಮ್ಮಯ್ಯನ ಈ ಒಂದು ವಚನದಲ್ಲಿ ಕಂಡು ಬರುತ್ತದೆ .
ಮಾಯೆ ಕುರಿತು ಬಸವಣ್ಣನವರ ವಚನ
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ
ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ
ಇದಾವ ಪರಿಯಲ್ಲಿ ಕಾಡಿತ್ತು ಮಾಯೆ
ಈ ಮಾಹೆಯ ಕಳೆವೊಡೆಯೆನ್ನಳವಲ್ಲ
ನೀವೇ ಬಲ್ಲಿರಿ ಕೂಡಲಸಂಗಮದೇವಾ ಕೊಡೆವಿಡಿದು ಕುದುರೆಯ ದೃಢ ವುಳ್ಳ ರಾವುತನೇರಿ ಕೊಡೆ ಕೋಟಿ ಶೂರರು ಹನ್ನಿಬರಯ್ಯಾ
ಮೋಹದ ತಾಯಿಗೆ ಮಗಳಾಗಿ ಹುಟ್ಟಿದ ಮಾಯೆ .ದೊಡ್ಡದಾಗಿ ಬೆಳೆಯುವ ಈ ಮಾಯೆ ಎಂಬ ಸ್ತ್ರೀಯು ಅದಾವ ಪರಿಯಲ್ಲಿ ಕಾಡಿದಳು .ಈ ಮಾಯೆಯ ಕುದುರೆಯನ್ನು ನಾನು ಏರಲಾರೆ .ಈ ಮಾಯೆಯ ಕುದುರೆಗಾಗಿ ಅಂದರೆ ಹೆಣ್ಣು ,ಹೊನ್ನು ಮಣ್ಣಿಗಾಗಿ ಅನೇಕ ಕೋಟಿ ವೀರರು ಹೋರಾಡಿ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ಇಂಥಹ ಮಾಯದ ಕುದುರೆಯನ್ನು ನಾನು ಹತ್ತಲಾರೆ.ಈ ಮಾಯದ ಕುದುರೆಗೆ ನಾನೆಂದೂ ಬೆಂಬತ್ತಿ ಓಡಲಾರೆ. ಕೂಡಲಸಂಗಮದೇವ ಇದೆಲ್ಲವನ್ನು ಅರಿತವನು ನೀನು ಭಗವಂತ ಎನ್ನುವರು .
ಒಟ್ಟಿನಲ್ಲಿ ಮಾಯೆಯನ್ನು ಬರೀ ಹೆಣ್ಣಿಗೆ ಹೋಲಿಸದೇ ಹೆಣ್ಣನ್ನು ಪೂಜ್ಯನೀಯ ,ಮಾತೆಯ ಸ್ವರೂಪ ದಲ್ಲಿ ಕಂಡವರು ಬಸವಣ್ಣನವರಾಗಿದ್ದಾರೆ .
ಹೆಣ್ಣು ಮತ್ತು ಗಂಡು ಎನ್ನುವ ಭೇದ ಕಳೆದು ಒಳಗೆ ಸುಳಿವ ಆತ್ಮ ವೂ ಹೆಣ್ಣೂ ಅಲ್ಲ ಹಾಗೂ ಗಂಡೂ ಅಲ್ಲ ಎನ್ನುವ ಶರಣರ ಸಿದ್ಧಾಂತ ದಲ್ಲಿ ನಾವು ನೀವುಗಳೆಲ್ಲ ನಡೆಯೋಣ .ಹೆಣ್ಣು ತಾಯಿಯಾಗಿ ,ಮಗಳಾಗಿ, ಹೆಂಡತಿಯಾಗಿ ಮನೆಯನ್ನು ಬೆಳಗುವ ನಾರಿಯನ್ನು ಗೌರವಿಸೋಣ. ಇದು ಶರಣರ ನಡೆ ಮತ್ತು ನುಡಿ ಪುರುಷ.
ಮಾಯೆ ಕುರಿತು ಅಕ್ಕನ ಇನ್ನೊಂದು ವಚನ
ಎನ್ನ ಮಾಯದ ಮದವ ಮುರಿಯಯ್ಯಾ
ಎನ್ನ ಕಾಯದ ಕತ್ತಲೆಯ ಕಳೆಯಯ್ಯಾ
ಎನ್ನ ಜೀವದ ಜಂಜಡವ ಮಾಣಿಸಯ್ಯಾ
ಎನ್ನ ದೇವ ಚೆನ್ನಮಲ್ಲಿಕಾರ್ಜುನನಯ್ಯಾ
ಎನ್ನ ಸುತ್ತಿದ ಪ್ರಪಂಚವ ಬಿಡಿಸಾ
*ನಿಮ್ಮ ಧರ್ಮ
ಒಟ್ಟಿನಲ್ಲಿ ಈ ಕಾಯದ ಕತ್ತಲೆಯನ್ನು ಕಳೆದು ಮಾಯ ಎನ್ನುವ ಸೊಕ್ಕನ್ನು ಮುರಿದು ಈ ಭವ ಜಂಜಡದ ಅಂದರೆ ಈ ಸಂಸಾರ ಎನ್ನುವ ಬಂಧನದಿಂದ ನನ್ನನ್ನು ಬಿಡುಗಡೆ ಗೊಳಿಸು ನನ್ನನ್ನು ಸುತ್ತಿದ ಮಾಯೆಯ ಪ್ರಪಂಚದಿಂದ ನನ್ನನ್ನು ಬಿಡಿಸಿ ನಿಮ್ಮತ್ತ ತೋರಾ ಚೆನ್ನಮಲ್ಲಿಕಾರ್ಜುನಾ ಎಂದು ಅರಿವಿನ ಕುರುಹು .ಆದ ಅಮೂರ್ತ ಅಗೋಚರನಾದ ಆ ಪರಮಾತ್ಮ ಸ್ವರೂಪ ಚೆನ್ನಮಲ್ಲಿಕಾರ್ಜುನನಲ್ಲಿ ಬೇಡಿಕೊಳ್ಳುವ ಅಕ್ಕನನ್ನು ನೋಡಿದಾಗ, ಮನ ಮಿಡಿಯುತ್ತದೆ .ಕಂಗಳಲ್ಲಿ ಕಂಬನಿಯನ್ನು ತರಿಸಿ ಬಿಡುತ್ತದೆ .
ಈ ಭವ ಬಂಧನದಿಂದ ನನ್ನನ್ನು ಪಾರು ಮಾಡು ಹೇ ಚೆನ್ನಮಲ್ಲಿಕಾರ್ಜುನಾ ಎನ್ನುವಳು ಅಕ್ಕ.
———————————————————————————————
ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ
ಸರ್ಕಾರಿ ಪದವಿಪೂರ್ವ ಕಾಲೇಜು ಖನಗಾಂವ
ಪ್ರಾಚಾರ್ಯರುಇವರು ಮೂಲತ:ಬೆಳಗಾವಿ ಜಿಲ್ಲೆಯ ಮುರಗೋಡದವರಾಗಿದ್ದು, ಸರಕಾರಿಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರ ಪ್ರಕಟಿತ ಕೃತಿಗಳು ಆರು:1ನೆನಪಿನ ಅಂಗಳದಲ್ಲಿ
2ಮೌನಗಳೇ ಮಾತನಾಡಿ
3 ಬದುಕು ಒಂದು ಹೊತ್ತಿಗೆ
4ಸಂತೆಯೊಳಗಿನ ಅಜ್ಜಿ
5 ಕನಸುಗಳ ಜಾತ್ರೆ
6ಬದುಕು ಭಾರವಲ್ಲ ಲೇಖನ ಕೃತಿ
ಪ್ರಕಟಣೆಗೆ ಸಿದ್ಧವಾಗಿರುವ ಕೃತಿಗಳು ಇರುವ ಕೃತಿಗಳು
1ನನಗೆ ಇಂದು ಒಂದು ಕನಸಿದೆ
2 ಕೆಸರೊಳಗಿನ ಕಮಲ
3ಕಾವಲುಗಾರ
5 ಸವಿ ಮನ
6 ಅಭಿಮಾನಿ
7 ಗಾಯತ್ರಿ ಸಣ್ಣ ಕಥೆ
8 ಸಂಗ್ರಹ ಗ್ರಂಥ ರವಿಶಂಕರ ಗುರೂಜಿ ಯವರ ನುಡಿಗಳು ಅಮೃತ ಬಿಂದು
9 ಶರಣರ ವಚನಗಳ ವಿಶ್ಲೇಷಣೆ ಕೃತಿ
ಪ್ರಶಸ್ತಿಗಳು
1ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ
2ಗೌರವ ಡಾ.ಲಿಟ್ ಪ್ರಶಸ್ತಿ
3ಕಾವ್ಯಚೇತನ ಪ್ರಶಸ್ತಿ
4.ಡಾ ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರೀಯ ಪ್ರಶಸ್ತಿ