‘ಶಿಕ್ಷಕರ ದಿನಾಚರಣೆ….. ಒಂದು ವಿಶ್ಲೇಷಣೆ’ವೀಣಾ ಹೇಮಂತ್ ಗೌಡ ಪಾಟೀಲ್

ಅದೊಂದು ಹೃದಯಸ್ಪರ್ಶಿ ಸನ್ನಿವೇಶ. ವಿಶ್ವವಿದ್ಯಾನಿಲಯದ ಉಪಕುಲಪತಿಓವ೯ರು ಉಪರಾಷ್ಟ್ರಪತಿಗಳಾಗಿ ಆಯ್ಕೆಯಾದರು. ವಿಶ್ವವಿದ್ಯಾಲಯದ ವತಿಯಿಂದ ಅವರಿಗೆ ಅದ್ದೂರಿ ಬೀಳ್ಕೊಡುಗೆ ನಡೆದು ಹೂಗಳಿಂದ ಸುಂದರವಾಗಿ ಅಲಂಕರಿಸಲ್ಪಟ್ಟ ಸಾರೋಟಿನಲ್ಲಿ ಆ ವ್ಯಕ್ತಿಯನ್ನು ಕೂರಿಸಿದ ವಿದ್ಯಾರ್ಥಿಗಳು ಕುದುರೆಯ ಬದಲಾಗಿ ತಾವೇ ಆ ಸಾರೋಟನ್ನು ಹೊತ್ತು ಮುನ್ನಡೆದು ರೈಲು ನಿಲ್ದಾಣದವರೆಗೂ ಮೆರವಣಿಗೆಯಲ್ಲಿ ಸಾಗಿದರು. ಬಹುಶಹ ಜಗತ್ತಿನ ಯಾವ ದೇಶದಲ್ಲಿಯೂ ಕಂಡು ಕೇಳರಿಯದ ಗೌರವ ಅಂದು ಶಿಕ್ಷಕರ ಪಾಲಿಗೆ ದೊರೆಯಿತು. ಅಂದು ಅವರನ್ನು ಹಾಗೆ ಗೌರವಿಸಿದ ವಿದ್ಯಾರ್ಥಿಗಳು ಕೂಡ ಮುಂದೆ ಕನ್ನಡ ನಾಡು ಕಂಡ ಅತ್ಯಂತ ಯಶಸ್ವಿ ಲೇಖಕರು, ಬುದ್ಧಿಜೀವಿಗಳು ಮತ್ತು ಸಂಶೋಧಕರು ಮತ್ತು ಹಾಗೆ ಗೌರವಿಸಲ್ಪಟ್ಟ ವ್ಯಕ್ತಿ ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಶಿಕ್ಷಕ ಶಿರೋಮಣಿ ಡಾಕ್ಟರ್ ಎಸ್ ರಾಧಾಕೃಷ್ಣನ್. ಈ ಐತಿಹಾಸಿಕ ಮೆರವಣಿಗೆ ನಡೆದದ್ದು ಆ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದ ನಮ್ಮೆಲ್ಲರ ಹೆಮ್ಮೆಯ ವಿಶ್ವವಿದ್ಯಾನಿಲಯ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ.

ರಾಧಾಕೃಷ್ಣನ್ ಅವರು ಜನಿಸಿದ್ದು ಇಂದಿನ ತಮಿಳುನಾಡಿನ ತಿರುತ್ಟಿಣಿ ಎಂಬ ಗ್ರಾಮದಲ್ಲಿ. ತಂದೆ ಸರ್ವೆಪಲ್ಲಿ ವೀರಾಸ್ವಾಮಿ, ತಾಯಿ ಸರ್ವೆಪಲ್ಲಿ ಸೀತಮ್ಮ. ಮೂಲತಃ ಇಂದಿನ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಸರ್ವೆಪಲ್ಲಿ ಗ್ರಾಮದವರು. ಇವರ ತಂದೆ ಜಮೀನ್ದಾರರ ಬಳಿಯಲ್ಲಿ ಕಂದಾಯ ಅಧಿಕಾರಿಗಳಾಗಿದ್ದರು. ಇವರ ಪ್ರಾರಂಭಿಕ ಶಿಕ್ಷಣ ತಿರುತ್ತಣಿ ಮತ್ತು ತಿರುಪತಿಗಳಲ್ಲಿ ನಡೆಯಿತು. ಹೈಸ್ಕೂಲು ಶಿಕ್ಷಣ ವೆಲ್ಲೋರಿನಲ್ಲಿ ನಡೆದರೆ ಮುಂದೆ ಮದ್ರಾಸಿನಲ್ಲಿ ಪದವಿ ಶಿಕ್ಷಣ ಪಡೆದರು. ಭಾರತೀಯ ಧರ್ಮಗಳು ಮತ್ತು ತತ್ವಶಾಸ್ತ್ರದ ಮೇಲೆ ಇವರು ಸ್ನಾತಕೋತ್ತರ ಪದವಿ ಪಡೆದರು. ಶಿಕ್ಷಣವನ್ನು ಮನುಷ್ಯನಿಂದ ಮನುಷ್ಯನಿಗೆ ಹಂಚಬೇಕು ಎಂಬ ಉನ್ನತ ಧೇಯೋದ್ದೇಶಗಳನ್ನು ಹೊಂದಿದ್ದ ಇವರು ತಮ್ಮ ಉದ್ದೇಶವನ್ನು ನೆರವೇರಿಸಲು ಬನಾರಸ ಹಿಂದೂ ವಿಶ್ವವಿದ್ಯಾಲಯ, ಮೈಸೂರಿನ ಮಾನಸಗಂಗೋತ್ರಿ ವಿಶ್ವವಿದ್ಯಾಲಯಗಳಲ್ಲ್ಲಿ ಕಾರ್ಯನಿರ್ವಹಿಸಿದರು. ಇನ್ನಿತರ ತರಗತಿಗಳ ಮಕ್ಕಳು ಕೂಡ ಬಂದು ತತ್ವಶಾಸ್ತ್ರದ ಕುರಿತು ಇವರ ವಾಗ್ಜರಿಯನ್ನು ಕೇಳುತ್ತಿದ್ದರು. ಮಕ್ಕಳಲ್ಲಿ ಶಿಕ್ಷಣದ, ಶಿಕ್ಷಕರ ಕುರಿತು, ಕುತೂಹಲ ಹುಟ್ಟಿಸಬೇಕಾದ ಕುರಿತು, ಭಾರತೀಯ ತತ್ವ ಮೀಮಾಂಸೆಯನ್ನು ಧರ್ಮಗಳ ಕುರಿತು ಇವರು ಅಪಾರಜ್ಞಾನವನ್ನು ಹೊಂದಿದ್ದರು. ಜೊತೆ ಜೊತೆಗೆ ರಾಜಕೀಯ ಜ್ಞಾನ ಕೂಡ ಹೊಂದಿದ್ದರು. ಅವರ ಪಾಂಡಿತ್ಯದ ಕುರಿತು ಅಲ್ಲಲ್ಲಿ ಚರ್ಚೆಗಳು ನಡೆಯುತ್ತಿತ್ತು. 1939 ರಿಂದ 1942ರ ವರೆಗೆ ಇವರು ಸೋವಿಯತ್ ಒಕ್ಕೂಟದ ಬ್ರಾಂಡ್ ಅಂಬಾಸಿಡರ್ ಆಗಿ ಕೂಡ ಕಾರ್ಯನಿರ್ವಹಿಸಿದರು. 1939 ರಿಂದ 1948 ರವರೆಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿ ಕಾರ್ಯನಿರ್ವಹಿಸಿದರು. ಜೊತೆ ಜೊತೆಗೆ ಆಂಧ್ರಪ್ರದೇಶನ ವಾಲ್ತೇರ್ ವಿಶ್ವವಿದ್ಯಾಲಯದಲ್ಲಿಯೂ ಅವರು ಕಾರ್ಯನಿರ್ವಹಿಸಿದರು. ಮು0ದೆ ಮೈಸೂರಿನ ಮಾನಸಗಂಗೋತ್ರಿಯಲ್ಲಿ 1952ರವರೆಗೆ ಇವರು ಉಪಕುಲಪತಿಗಳಾಗಿ ಕಾರ್ಯನಿರ್ವಹಿಸಿದರು. ಹೀಗೆ ವಿಶ್ವವಿದ್ಯಾಲಯಗಳಲ್ಲಿ ಇವರು ಕಾರ್ಯ ನಿರ್ವಹಿಸುತ್ತಿರುವಾಗಲೇ ಇವರಿಗೆ ಭಾರತದ ಉಪರಾಷ್ಟ್ರಪತಿಗಳಾಗಿ ಕಾರ್ಯನಿರ್ವಹಿಸಲು ಕರೆ ನೀಡಲಾಯಿತು. ಹಾಗೆ ಕರೆ ಬಂದಾಗಲೇ ಮೇಲೆ ಹೇಳಿದ ಘಟನೆ ನಡೆಯಿತು.

ನ ಭೂತೊನ ಭವಿಷ್ಯತಿ ಎಂಬಂತೆ ಡಾಕ್ಟರ್ ಎಸ್. ರಾಧಾಕೃಷ್ಣನ್ ಅವರನ್ನು ಅವರ ಶಿಷ್ಯರು ಮತ್ತು ಸಹೋದ್ಯೋಗಿಗಳು ದೇಶದ ಅತ್ಯುನ್ನತ ಹುದ್ದೆಯೊ0ದಕ್ಕೆ ಕಳುಹಿಸಿ ಕೊಟ್ಟರು. 1952 ರಿಂದ 1962 ರವರೆಗೆ ದೇಶದ ಅತ್ಯುನ್ನತ ಹುದ್ದೆಯಾದ ಉಪರಾಷ್ಟ್ರಪತಿ ಹುದ್ದೆಯನ್ನು ನಿರ್ವಹಿಸಿದ ಅವರು 1962ರಿಂದ 1967 ರವರೆಗೆ ಭಾರತ ದೇಶದ ರಾಷ್ಟ್ರಪತಿ ಹುದ್ದೆಯನ್ನು ನಿರ್ವಹಿಸಿದರು. ಓರ್ವ ಶಿಕ್ಷಕನಿಗೆ ದೊರೆತ ಅತ್ಯುನ್ನತ ಪದವಿ ಇದಾಗಿದೆ. ಬುದ್ಧಿವಂತಿಕೆ, ಚಾಣಾಕ್ಷತೆ, ಸಮಯ ಪ್ರಜ್ಞೆ ಮತ್ತು ಅಪಾರಜ್ಞಾನ ಸಂಪತ್ತಿನಿಂದ ತುಂಬಿ ತುಳುಕುತ್ತಿದ್ದ ಡಾಕ್ಟರ್ ರಾಧಾಕೃಷ್ಣನ್ ಅವರನ್ನು ಅವರ ಜನ್ಮದಿನ ಆಚರಿಸಲು ಕೇಳಿಕೊಂಡಾಗ ತಮ್ಮ ಶಿಕ್ಷಕ ಹುದ್ದೆಯನ್ನು ಸ್ಮರಿಸಿದ ಅವರು ತಮ್ಮ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲು ಕೇಳಿಕೊಂಡರು. ಅದರ ಪರಿಣಾಮವೇ ಇಂದಿನ ಈ ಶಿಕ್ಷಕರ ದಿನಾಚರಣೆ.
ಶಿಕ್ಷಕ ಎಂದರೆ ಯಾರು… ಬುದ್ಧಿ ಹೇಳಿದಾತನೇ, ವಿದ್ಯೆ ಕಲಿಸಿದವನೇ, ತಿದ್ದಿ ತೀಡಿ ವ್ಯಕ್ತಿತ್ವವನ್ನುರೂಪುಗೊಳಿಸಿದವನೇ .
ಮೂವರು ಹೌದು.

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ

ನಮಗೆಲ್ಲ ಮೇಲಿನ ಶ್ಲೋಕ ನೆನಪಿದೆ
ಆದರೆ ಆಳವಾಗಿ ನೋಡಿದಾಗ ಗುರು ಬ್ರಹ್ಮ.. ಬ್ರಹ್ಮ ಎಂದರೆ ಸೃಷ್ಟಿಕರ್ತ, ಗುರು ವಿಷ್ಣು ಅಂದರೆ ಸ್ಥಿತಿ ಕರ್ತ, ಗುರುದೇವೋ ಮಹೇಶ್ವರ ಎಂದರೆ ಲಯ ಕರ್ತನಾದ ಮಹಾದೇವ ಮತ್ತು ಗುರು ಸಾಕ್ಷಾತ್ ಆ ಪರ ಬ್ರಹ್ಮನೇ ಹೌದು ಎಂಬ ಅರ್ಥವನ್ನು ಮೇಲಿನ ಶ್ಲೋಕ ಹೊಂದಿದ್ದರು ಅ0ದರೆ ಗುರು ನಮ್ಮಲ್ಲಿ ಈ ಮೂರು ಕೆಲಸಗಳನ್ನು ಮಾಡುತ್ತಾನೆ. ಶ್ಲೋಕದ ಮುಂದಿನ ಭಾಗವನ್ನು ನೋಡಿ

ಅಖಂಡಮಂಡಲಾಕಾರಂ
ವ್ಯಾಪ್ತಂ ಏನ ಚರಾಚರ0
ತತ್ವದಂ ದರ್ಶಿತಂ ಏನ
ತಸ್ಮೈ ಶ್ರೀ ಗುರುವೇ ನಮಃ

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನಶಲಾಕಯ
ಚಕ್ಶುರಂ ಮೀಲಿತಂ ಏನ
ತಸ್ಮೈ ಶ್ರೀ ಗುರುವೇ ನಮಃ

ಗುರುವಿನ ಅರಿವಿಗೆ ನಿಲುಕದ ಯಾವುದೇ ವಸ್ತುವಿಲ್ಲ. ಈ ಅಖಂಡ ಬ್ರಹ್ಮಾಂಡ ಮಂಡಲದ ಪ್ರತಿಯೊಂದು ವ್ಯಾಪ್ತಿಯು, ಪ್ರತಿಯೊಂದು ಚರಾಚರ ಜೀವಿಗಳು ಗುರುವಿನ ದೃಷ್ಟಿಯಿಂದ ಹೊರತಲ್ಲ. ಎಲ್ಲೆಲ್ಲೂ ಅಜ್ಞಾನದ ಕತ್ತಲೆ ತುಂಬಿದಾಗ ಜ್ಞಾನದ ಸ್ಪಟಿಕದ ದೀಪಜ್ಯೋತಿಯನ್ನು ಹಿಡಿದು ಬಂದಾತನೆ ಗುರು ಎಂದು ಶ್ಲೋಕ ಮುಂದುವರೆಯುತ್ತದೆ. ಹೀಗೆ ಗುರುವಿನ ಮಹಿಮೆಯನ್ನ ನಮ್ಮ ಹಿರಿಯರು ಹಾಡಿ ಹೊಗಳಿದ್ದಾರೆ.
ಓರ್ವ ವೈದ್ಯ ತಪ್ಪು ಮಾಡಿದರೆ ಒಬ್ಬ ರೋಗಿ ತನ್ನ ಜೀವವನ್ನ ಕಳೆದುಕೊಳ್ಳಬಹುದು. ಒಬ್ಬ ಇಂಜಿನಿಯರ್ ತಪ್ಪು ಮಾಡಿದರೆ ಹಲವಾರು ಜನ ದಾರಿ ತಪ್ಪಬಹುದು. ಓರ್ವ ಶಿಕ್ಷಕ ತನ್ನ ಮೌಲ್ಯಗಳನ್ನು ಬಿಟ್ಟುಕೊಟ್ಟು ನಡೆದರೆ ಒಂದಿಡಿ ಜನಾಂಗವೇ ಹಾದಿ ತಪ್ಪಬಹುದು. ಶಿಕ್ಷಕನ ಮೇಲೆ ಅತ್ಯಂತ ಹೆಚ್ಚಿನ ಜವಾಬ್ದಾರಿ ಇದೆ. ಹಾಗೂ ಆ ಜವಾಬ್ದಾರಿಯನ್ನು ಹೊರುವ ಗಟ್ಟಿತನವು ಆತನಲ್ಲಿ ಇರುತ್ತದೆ.
ಓರ್ವ ಶಿಕ್ಷಕ ನಮ್ಮೆಲ್ಲಾ ಪರಂಪರೆಗಳ ಸಾರವನ್ನು ಅರಿತವ, ಅವುಗಳ ಒಳಿತು ಕೆಡುಕುಗಳನ್ನ ತಿಳಿದವ, ಹಂಸಕ್ಷಿರ ನ್ಯಾಯದಂತೆ ಒಳ್ಳೆಯದನ್ನು ಮಾತ್ರ ತೆಗೆದುಕೊಂಡು ಕೆಟ್ಟದ್ದನ್ನು ತೆಗೆದುಹಾಕುವವ, ಪ್ರೀತಿಯಿಂದ ತಿಳಿ ಹೇಳುವ, ಸಮಯ ಬಂದರೆ ತಿದ್ದಿ ಬುದ್ದಿ ಹೇಳುವ ತಂದೆ ತಾಯಿಯರ ನಂತರದ ಸ್ಥಾನದಲ್ಲಿರುವ ವ್ಯಕ್ತಿ ಗುರು. ಗು ಎಂದರೆ ಕತ್ತಲು, ರು ಅಂದರೆ ಕಳೆಯುವವ. ಹೀಗೆ ನಮ್ಮ ಬದುಕಿನ ಕತ್ತಲು ಕಳೆಯುವ ಏಕೈಕ ವ್ಯಕ್ತಿ ಗುರು.
ಇದು ಶಿಕ್ಷಕನ ಕುರಿತಾದ ಧನಾತ್ಮಕ ವಿಷಯವಾದರೆ…. ಮನುಷ್ಯನಾಗಿ ಆತ ತನ್ನೆಲ್ಲ ನೋವು ದುಃಖ ಸಂಕಟಗಳನ್ನು ಮರೆತು, ಅರಿತೋ ಅರಿಯದೆಯೋ ಯಾವುದೇ ತಪ್ಪುಗಳನ್ನು ಮಾಡದ ಸ್ಥಾನದಲ್ಲಿರುವಾತ. ಹೇಳುವುದು ಶಾಸ್ತ್ರ ತಿನ್ನುವುದು ಬದನೆಕಾಯಿ ಎಂಬಂತಾಗಬಾರದು ಎಂಬುದು ಗುರುವಿನ ವಿಷಯದಲ್ಲಿ ಸರ್ವ ವಿದಿತ. ಹೇಳಿದ್ದನ್ನು ಮಾಡಿ ತೋರಿಸುವಾತ ಗುರು, ನುಡಿದಂತೆ ನಡೆಯುವವನು ಗುರು, ವೈಯುಕ್ತಿಕವಾಗಿ
ತಾನೆಷ್ಟೇ ಘಾಸಿಕೊಂಡರು ಸಾರ್ವಜನಿಕವಾಗಿ ತನ್ನ ನೋವು, ದುಃಖ-ದುಮಾನಗಳನ್ನು, ವ್ಯಸನಗಳ ಮೂಲಕ ಹೊರಹಾಕಲಾರದವನು ಗುರು.
ಗುರು ಎಂದೊಡನೆ ನನಗೆ ಇನ್ನೋರ್ವ ವ್ಯಕ್ತಿ ನೆನಪಾಗುತ್ತಾರೆ ಅವರೇ ಗುರು ದ್ರೋಣಾಚಾರ್ಯರು. ಕೌರವ ಪಾಂಡವರ ಕುಲಗುರು ದ್ರೋಣಾಚಾರ್ಯರು. ದ್ರೋಣಾಚಾರ್ಯರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಬಿಲ್ಲು ವಿದ್ಯೆಯನ್ನು ಅತ್ಯಂತ ನಿಖರವಾಗಿ ಕಲಿತ ಏಕಲವ್ಯನ ಕೈಯಿಂದ ಆತನ ಹೆಬ್ಬೆರಳನ್ನೇ ಗುರುದಕ್ಷಿಣೆಯಾಗಿ ಕೇಳಿದ ನಿಷ್ಟುರ ವ್ಯಕ್ತಿ ದ್ರೋಣಾಚಾರ್ಯರು. ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಹಲವು ಬಾರಿ ಈ ವಿಷಯಕ್ಕೆ ದ್ರೋಣಾಚಾರ್ಯರನ್ನು ಹಳೆಯುತ್ತೇವೆ. ಆದರೆ ಗುರುವಿನಲ್ಲಿ ದೂರ ದೃಷ್ಟಿಯು ಮುಖ್ಯ ಎಂಬುದಕ್ಕೆ ದ್ರೋಣಾಚಾರ್ಯರೇ ಸಾಕ್ಷಿ. ಏಕಲವ್ಯ ಎಷ್ಟೇ ಆದರೂ ಮುಂದೆ ಕೌರವರ ಜೊತೆ ಸೇರಿ ಪಾಂಡವರನ್ನು ನಾಶ ಮಾಡುವ ಎಂಬ ದೂರ ದೃಷ್ಟಿಯನ್ನು ಹೊಂದಿದ ಗುರು ದ್ರೋಣಾಚಾರ್ಯರು ಬಿಲ್ಲು ವಿದ್ಯೆಗೆ ಅತ್ಯಂತ ಅವಶ್ಯಕವಾದ ಆತನ ಬಲಗೈ ಹೆಬ್ಬೆರಳನ್ನು
ದಾನವಾಗಿ ಕೇಳಿ ಆತನನ್ನು ಕೊಂಚಮಟ್ಟಿಗೆ ನಿಷ್ಕ್ರಿಯಗೊಳಿಸಿದರು. ಹೀಗೆ ಮಾಡುವುದರ ಮೂಲಕ ಅವರು ಧರ್ಮವನ್ನು ಜಯಿಸಿದರು.

ಕರ್ಮಣ್ಯ ವಾದಿಕಾರಸ್ತೆ ಮಾಫಲೇಶು ಕದಾಚನ
ಅಂದರೆ ಕರ್ಮವನ್ನು ನೀನು ಮಾಡು ಫಲಾಫಲ ಭಗವಂತ ನೋಡಿಕೊಳ್ಳುತ್ತಾನೆ ಎಂಬ ರೀತಿಯಲ್ಲಿ ದ್ರೋಣಾಚಾರ್ಯರು ನಡೆದರು. ಅಂತೆಯೇ ಗುರುಕುಲಕ್ಕೆ ಆದರ್ಶವಾದರು. ಸ್ವಾಮಿ ಪರಮಹಂಸ, ಶಾರದಾದೇವಿ, ಸ್ವಾಮಿ ವಿವೇಕಾನಂದ, ಸ್ವಾಮಿ ಶ್ರದ್ದಾನಂದ, ಸ್ವಾಮಿ ಶಿವಾನಂದ ಹೀಗೆ ಆಧ್ಯಾತ್ಮ ಗುರುಗಳ ಸಾಲು ಬರೆಯುತ್ತಾ ಹೋದರೆ ಪುಟಗಳೇ ಸಾಲದು.
ಈ ಗುರುಗಳ ಮಾಲಿಕೆಯಲ್ಲಿ ಅತ್ಯಂತ ಹೆಚ್ಚಿನ ಮಹತ್ವವಿರುವುದು ನಮ್ಮ ಶರಣ ಪರಂಪರೆಯ ಜಗದ್ಗುರು ಅಣ್ಣ ಬಸವಣ್ಣ. ಕಾಯಕವೇ ಕೈಲಾಸ, ಅರಿವೇ ಗುರು, ಲಿಂಗ ಮಧ್ಯೆ ಜಗತ್ ಸರ್ವಂ ಎಂದು ಜಗತ್ತಿಗೆ ಸಾರಿದ ಮನುಜ ಕುಲ ಜಗತ್ತಿಗೆ ಒಂದೇ ನಾವೆಲ್ಲರೂ ವಿಶ್ವಮಾನವರು ಎಂದು ಸಮಾನತೆಯ ಬೀಜ ಬಿತ್ತಿದ ಸೌಹಾರ್ದತೆಯ ಹರಿಕಾರನಾದ ಮಹಾನ್ ಗುರು, ಜಗದ ಕಣ್ಣು, ಜಗಜ್ಯೋತಿ, ಅರಿವಿನ ಪರಂಜೋತಿ ಅಣ್ಣ ಬಸವಣ್ಣ.
ದೇಶವನ್ನು ಬಾಹ್ಯವಾಗಿ ಸುಭದ್ರ ಗೊಳಿಸುವ ಹೊಣೆಗಾರಿಕೆ ಯೋಧರದಾದರೆ ದೇಶದ ಜನರ ಹೊಟ್ಟೆಪಾಡನ್ನು ನೋಡಿಕೊಳ್ಳುವ ಪುಣ್ಯದ ಕೆಲಸ ರೈತರದು ಅಂತೆಯೇ ಕಲ್ಯಾಣಕರ ಸಮಾಜ ಒಂದನ್ನು ರೂಪಿಸುವ ಹೊಣೆಗಾರಿಕೆ ಶಿಕ್ಷಕರದು. ಶಿಕ್ಷಕರ ವೃತ್ತಿ, ಪ್ರವೃತ್ತಿ, ಆಯ್ಕೆ ಅವಕಾಶ, ವೃತ್ತಿಗೂ ಮಿಗಿಲಾಗಿ ಪ್ರವೃತ್ತಿಯಾಗಿ ವೃತ್ತಿಯನ್ನು ಸ್ವೀಕರಿಸಿದರೆ ಆ ವೃತ್ತಿಗೆ ಸಿಗುವ ಗೌರವ ಅತ್ಯಂತ ಹಿರಿದಾದದು. ನಮ್ಮಲ್ಲಿ ಆಚಾರ್ಯರಿಗೆ ಪ್ರಮುಖ ಸ್ಥಾನವಿದೆ ಆಚಾರ್ಯ, ಗುರು ಎಂದರೆ ಬುದ್ಧಿ ಮನಸ್ಸಿನ ಅಜ್ಞಾನ ತೊರೆದು ಜ್ಞಾನವನ್ನು ಬೆಳಗಿಸಿ ವಿವೇಕವನ್ನು ಮೈಗೂಡಿಸಿಕೊಳ್ಳುವಂತೆ ಮಾಡುವ ಅಪೂರ್ವ ವ್ಯಕ್ತಿ. ಆ ಅಪೂರ್ವ ಶಕ್ತಿಯೇ ಉತ್ತಮ ಸಮಾಜದ ಪರಮ ಆಸ್ತಿ. ಪುರಾತನ ಕಾಲದಿಂದಲೂ ಇಂದಿನವರೆಗೂ ಶಿಕ್ಷಣಕ್ಕೆ ಶಿಕ್ಷಕರಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಬದಲಾದ ಪರಿಸ್ಥಿತಿಯಲ್ಲಿ ಶಿಕ್ಷಕರು ಎದುರಿಸಬೇಕಾದ ಹಲವಾರು ಸಮಸ್ಯೆಗಳಿವೆ. ಶಿಕ್ಷಕ ಸಮಾಜದ ಬೇರಿದ್ದಂತೆ. ಯಾವತ್ತಿಗೂ ಆರೋಗ್ಯಕರವಾಗಿ ನಲಿಯುತ್ತಿರಬೇಕು ಅಂತೆಯೇ ಗಿಡ ಯಾವಾಗಲೂ ಸುರಕ್ಷಿತವಾಗಿರುತ್ತದೆ ಹೂವು ಹಣ್ಣು ಕಾಯಿಗಳಿಂದ ತುಂಬಿ ತುಳುಕುತ್ತಿರುತ್ತದೆ.

ಹಿಂದಿನ ಕಾಲದಲ್ಲಿ ವಿದ್ಯಾರ್ಥಿನೋ ನಾ ಸುಖಿನೋ ಭವಂತಿ ಎಂಬ ಮಾತಿತ್ತು ಅಂದರೆ ಎಲ್ಲಾ ಸುಖಗಳನ್ನು ತ್ಯಜಿಸಿ ವಿದ್ಯಾರ್ಥಿ ಆಗಬೇಕು ಅಥವಾ ವಿದ್ಯಾರ್ಥಿ ಇದ್ದಡೆ ಸುಖದ ಮಾತು ಇರಬಾರದು…. ಗುರುಕುಲದ ಕಾಲದಲ್ಲಿ ರಾಜ ಮಹಾರಾಜರು ಕೂಡ ತಮ್ಮ ಮಕ್ಕಳನ್ನು ಗುರುಕುಲದ ಕಠಿಣ ಶಿಕ್ಷಣಕ್ಕೆ ಕಳುಹಿಸಿಕೊಡುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದೆ ಸರಸ್ವತಿಯನ್ನು ಲಕ್ಷ್ಮಿಯು ಕಟ್ಟಿ ಹಾಕುತ್ತಿದ್ದಾಳೆ ಎಂಬಂತೆ ವಿದ್ಯಾರ್ಜನೆ ಎಂಬುದು ದುಡ್ಡು ಕೊಟ್ಟು ಕೊಂಡುಕೊಳ್ಳುವಂತಹ ಪರಿಸ್ಥಿತಿ ಉಂಟಾಗಿದೆ. ಇದು ಸಲ್ಲದು.
ವಿದ್ಯಾರ್ಥಿಗಳನ್ನು ಯಾವ ರೀತಿ ಒಲಿಸಿಕೊಳ್ಳಬೇಕು ಎಂದು ಕೇಳಿದರೆ ಹೆಚ್ಚೇನು ಬೇಕಾಗಿಲ್ಲ ಮಕ್ಕಳ ಮನಸ್ಸನ್ನು ಮೊದಲು ಗೆಲ್ಲಬೇಕು, ಅವರ ಇಷ್ಟ ಕಷ್ಟಗಳನ್ನು ಚರ್ಚಿಸಿ ಅವರವರಿಗೆ ಆನುಗುಣವಾಗಿ ಉಣ ಬಡಿಸಬೇಕು, ಕಲಿಸಬೇಕು.
ಶಿಕ್ಷಕನ ಮುಂದಿರುವ ಸವಾಲು ಮಕ್ಕಳಲ್ಲಿ ಅರಿವು ಮೂಡಿಸುವುದು ನಮ್ಮ ಹುಟ್ಟು, ಬದುಕು, ಜ್ಞಾನಾರ್ಜನೆಯ ಮೂಲ ಉದ್ದೇಶವಾದರೆ ಮಕ್ಕಳನ್ನು ದೃಶ್ಯ, ಶ್ರವಣ ಮತ್ತು ಕ್ರಿಯಾ ಚಟುವಟಿಕೆಗಳ ಮೂಲಕ ಜ್ಞಾನಾರ್ಜನೆಯತ್ತ ಕೊಂಡೊಯ್ಯುವುದು ಶಿಕ್ಷಕರ ಮುಂದಿರುವ ಮಹತ್ವದ ಸವಾಲು.
ಜೀವಂತ ಕಂದಮ್ಮಗಳಿಗೆ, ಚೈತನ್ಯದ ಚಿಲುಮೆಗಳಿಗೆ ಭಾವನಾ ಲೋಕವಿದೆ, ಕುತೂಹಲವಿದೆ, ನಮ್ಮ ಸಮಾಜದ ಮುಂದಿನ ನಾಗರಿಕರಾಗುವವರ ಭವಿಷ್ಯ ನಮ್ಮ ಕೈಯಲ್ಲಿದೆ. ಅವರೇ ನಮ್ಮ ಸಂಪತ್ತು ಅವರಿಗೆ ಶ್ರೇಷ್ಠವಾದ ಆರೋಗ್ಯಕರವಾದ ಸವಾಲುಗಳ ಮೂಲಕ ಒಳ್ಳೆಯದನ್ನು ಕಲಿಸುವ ಒಳ್ಳೆಯದನ್ನು ನೀಡುವ ಕೆಟ್ಟದ್ದನ್ನು ದೂರಿಕರಿಸುವ ನಿಲುವು ಹೊಂದಿರುವ ಉತ್ತಮ ಶಿಕ್ಷಕರ ದೊಡ್ಡಪಡೆಯೇ ತಯಾರಾಗಬೇಕು. ಆದರೆ ಅವರಿಗೆ ಶೈಕ್ಷಣಿಕ, ಪಠ್ಯ ಮತ್ತು ಪಠ್ಯೇತರ ವಿಷಯಗಳನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ರೀತಿಯ ಬಾಹ್ಯ ಚಟುವಟಿಕೆಗಳಿಗೆ, ರಾಜಕೀಯ ಗೊಂದಲಗಳಿಗೆ ನೂಕಬಾರದು. ಈ ರೀತಿ ಗೊಂದಲಗಳಿಗೆ ಒಳಗಾದ ಶಿಕ್ಷಕ ಮಕ್ಕಳಿಗೆ ಕಲಿಸುವ ಸಾಧ್ಯತೆ ಬಹಳ ಕಡಿಮೆ. ಮಕ್ಕಳ ಮನಸ್ಸು ಮೃದುವಾದ ಹಸಿ ಜೇಡಿ ಮಣ್ಣಿನಂತೆ. ನೀವು ನೀಡುವ ಆಕಾರ ಕೊನೆಯವರೆಗೂ ಮಗುವಿನಲ್ಲಿ ಉಳಿದು ಹೋಗುವುದು ಸಣ್ಣ ಕೆಲಸವನ್ನು ಆಟದಂತೆ ಮಾರ್ಪಡಿಸಿ ಒಳ್ಳೆಯ ತಂತ್ರವನ್ನು ಅದರಲ್ಲಿ ತುಂಬಬೇಕು.

ಶ್ರೀ ಗುರುವಂ ನೆನೆಯಲ್ಕೆಡಹ ಜಾಗದು ಕಂಡಡೆ ಭವನ್ಗಳೋಡಗು ಮತ್ತ ರಾಗದಿ ಚರಣಾಶ್ರಯ ಕೊಂಡಾಗಲೇ ಇಹಪರಕೆ ಸೌಖ್ಯ ಚೂಡಾರತ್ನ

ಅಂದರೆ ಶ್ರೀ ಗುರುವನ್ನು ನೆನೆದರೆ ವಿಪತ್ತು ಬಾರದು, ಗುರುವನ್ನು ನೋಡಿದರೆ ಭವಗಳು ತೊಲಗುವವು, ಪಾದದಲ್ಲಿ ಶರಣಾದರೆ ಸುಖವಾಗುವುದು ಎಂಬ ಡಾ. ಟಿ.ವಿ ವೆಂಕಟಚಲ ಶಾಸ್ತ್ರಿಗಳ ನುಡಿಯಂತೆ,
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಅರಿವನ್ನು ಹೊಂದಿ ಗುರುಗಳನ್ನು ಗೌರವಿಸುವ ಈ ದಿನ ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳ ಕೋರುತ್ತಾ—


Leave a Reply

Back To Top