‘ಮಧ್ಯ ವಯಸ್ಸಿನ ತರುಣಿಯರೇ….ನೀವಿನ್ನು ಮುದುಕರಾಗಿಲ್ಲ’ಮಹಿಳೆಯರಿಗಾಗಿ ವಿಶೇಷ ಬರಹವೀಣಾ ಹೇಮಂತ್ ಗೌಡ ಪಾಟೀಲ್

32ರ ಕರೆಯದ ಪುಟ್ಟ ಸ್ನೇಹಿತೆಯೊಬ್ಬಳು ಇನ್ನೇನ್ರೀ ಆಗ್ಲೇ 32 ವರ್ಷ ಆಯ್ತು ಮದುವೆಯಾಗಿ ಎರಡು ಮಕ್ಕಳಾಗಿದ್ದಾವೆ. ಮಕ್ಕಳು ಆಗ್ಲೇ ಸ್ಕೂಲಿಗೆ ಹೋಗ್ತಾ ಇದಾರೆ ನಾವೇನ್ ಚಿಕ್ಕವ್ರ ಅಂತ ಕೇಳಿದ್ರು
 ಕೂಡಲೇ ಆಕೆಗೆ “ನಿಮ್ಮ ದೇಹಕ್ಕೆ ವಯಸ್ಸಾಗಿದೆಯೇ ಹೊರತು ಮನಸ್ಸಿಗೆ ಅಲ್ಲ ಬೇಗ ಮದುವೆ ಮಾಡಿದ್ದಾರೆ, ಮಕ್ಕಳಾಗಿವೆ ಅನ್ನೋದರ ಅರ್ಥ ನೀವು ಮುದುಕರಾಗಿದ್ದೀರಿ ಅಂತ ಅಲ್ಲ.. ಎಷ್ಟೋ ಜನರ ಸಾಂಸಾರಿಕ  ಜೀವನ ಇನ್ನೂ ಈ ವಯಸ್ಸಿನಲ್ಲಿ ಶುರುವಾಗಿರುವುದೇ ಇಲ್ಲ, ಅಂತದ್ದರಲ್ಲಿ ನೀವು ವೈರಾಗ್ಯದ ಮಾತೇಕೆ ಆಡ್ತಿರಿ ಎಂದು ಕೇಳಿದೆ.

 22 ರಿಂದ 25 ವರ್ಷದಲ್ಲಿ ಮದುವೆಯಾಗುವ ಬಹುತೇಕ ಹೆಣ್ಣು ಮಕ್ಕಳು 30ರೊಳಗಾಗಿ ಎರಡು ಮಕ್ಕಳನ್ನು ಪಡೆಯುವುದು ವೈಜ್ಞಾನಿಕವಾಗಿ ಒಳ್ಳೆಯದು ಎಂಬ ಕಾರಣ, ಜೊತೆಗೆ ಅವರ ಪಾಲಕರು ತಮ್ಮ ಮಕ್ಕಳನ್ನು ತಮ್ಮ ಕೈ ಕಾಲು ಗಟ್ಟಿ ಇರುವಾಗಲೇ ಮದುವೆ ಮಾಡಿಕೊಡಬೇಕೆಂಬ ಮಹದಾಶೆಯಿಂದ ಮದುವೆ ಮಾಡುತ್ತಾರೆ,
 ಅದರರ್ಥ ಮದುವೆ, ಮಕ್ಕಳಾದ ಮೇಲೆ ಹೆಣ್ಣು ಮಕ್ಕಳು ತಮ್ಮ ವೈಯುಕ್ತಿಕ ಆಸೆ ಆಕಾಂಕ್ಷೆ ಹವ್ಯಾಸಗಳನ್ನು ಮರೆಯಬೇಕೆಂದಲ್ಲ

 ಅತ್ತೆ ಮಾವನ ಜವಾಬ್ದಾರಿ, ಗಂಡನ ಯೋಗಕ್ಷೇಮ ಮತ್ತು ಮಕ್ಕಳ ಪಾಲನೆ ಪೋಷಣೆ, ಅಡುಗೆ ಮನೆ ಕೆಲಸ ಇವುಗಳ ನಡುವೆ ಹೆಣ್ಣು ಮಕ್ಕಳಿಗೆ ಸಮಯ ಸಿಗುವುದಿಲ್ಲ ಎಂಬುದು ಎಷ್ಟು ಸತ್ಯವೋ ಇದ್ದುದರಲ್ಲಿಯೇ ಸಮಯವನ್ನು ಹೊಂದಿಸಿಕೊಂಡು ತಮ್ಮ ವೈಯುಕ್ತಿಕ ಮನೋ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂಬುದು ಕೂಡ ಅಷ್ಟೇ ಸತ್ಯ.

 ಮುಂಜಾನೆ ಮನೆ ಕೆಲಸಗಳನ್ನೆಲ್ಲ ಮುಗಿಸಿ ಗಂಡನನ್ನು ಕೆಲಸಕ್ಕೆ ಮತ್ತು ಮಕ್ಕಳನ್ನು ಶಾಲೆಗೆ ಕಳುಹಿಸಿದ ನಂತರ ಟಿ.ವಿ.ಯ ಮುಂದೆ ಠಿವಿಯಿಂದ  ಕುಳಿತು ಇಲ್ಲವೇ ಅಡ್ಡಲಾಗಿ ಮಲಗಿ ಧಾರಾವಾಹಿಗಳನ್ನು ನೋಡುತ್ತ, ಊಟ ತಿಂಡಿ ಬಟ್ಟೆ ಬರೆಗಳ ಕುರಿತು ಸ್ನೇಹಿತರೊಂದಿಗೆ ಗಂಟೆಗಟ್ಟಲೆ ಫೋನಿನಲ್ಲಿ ಹಾಳು ಹರಟೆ ಹೊಡೆದು ನಿಮ್ಮ ಶಕ್ತಿಯನ್ನು ವ್ಯಯಿಸುತ್ತಾ ದೇಹವನ್ನು ಬೆಳೆಸುವುದರ ಬದಲು ಮನೆಯಿಂದ ಹೊರಬೀಳಿ. ಜಿಮ್ ಗೆ ಹೋಗಿ ನಿಮ್ಮ ದೇಹದ ಆಕಾರವನ್ನು ಸರಿಪಡಿಸಿಕೊಳ್ಳಿ. ಪಾರ್ಲರಿಗೆ ಹೋಗಿ ನಿಮ್ಮನ್ನು ನೀವು ಸುಂದರವಾಗಿಸಿಕೊಳ್ಳಿ. ಚಿಕ್ಕಂದಿನಲ್ಲಿ ನೀವು ಆಸೆ ಪಡುತ್ತಿದ್ದ ಆದರೆ ಕಲಿಯಲು ಸಾಧ್ಯವಾಗದ ಹಾಡು, ನೃತ್ಯ, ವಾದನ, ಈಜು, ಏರೋಬಿಕ್ಸ್, ಚಿತ್ರಕಲೆ ಮುಂತಾದವುಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಆದರೆ ಎಲ್ಲವನ್ನೂ ಏಕಕಾಲಕ್ಕೆ ಮಾಡಲು ಹೋಗಿ ಯಾವುದನ್ನೂ ಮಾಡದೇ ಇರಬೇಡಿ. ನಿಮಗಿಷ್ಟ ಇರುವ ಒಂದೆರಡು ಆಸಕ್ತಿಯ ವಿಷಯಗಳನ್ನು ಅದೆಷ್ಟೇ ಕಷ್ಟವಾದರೂ ತಪ್ಪದೇ  ನಿರಂತರವಾಗಿ ಕಲಿಯಿರಿ, ಕೆಲವೊಮ್ಮೆ ಮನೆಯ ಕಾರ್ಯಬಾಹುಳ್ಯದಿಂದ ತರಗತಿಗಳು ತಪ್ಪಿದರೂ ಮತ್ತೆ ಮುಂದುವರಿಸಿ. ಮಾಡದೆ ಇರುವುದಕ್ಕಿಂತ ಏನನ್ನಾದರೂ ಮಾಡುತ್ತಿರುವುದು ಉತ್ತಮ ಎಂಬುದನ್ನು ಮನಗಾಣಿರಿ. ನಿಮ್ಮನ್ನು ನೀವೇ ಒತ್ತಾಯಪೂರ್ವಕವಾಗಿ ತೊಡಗಿಸಿಕೊಳ್ಳದೆ ಹೋದರೆ ಬೇರಾರೂ ಆ ಕೆಲಸವನ್ನು ಮಾಡಲು ಸಾಧ್ಯವಿಲ್ಲ ಎಂಬುದನ್ನು ಅರಿಯಿರಿ. ನಿಮ್ಮನ್ನು ಉದ್ದರಿಸಲು ಬೇರೊಬ್ಬರಿಂದ ಸಾಧ್ಯವಿಲ್ಲ ಇದು ನಿಮ್ಮ ವೈಯಕ್ತಿಕ ಹೋರಾಟ ಎಂಬುದನ್ನು ಅರಿಯಿರಿ.

 ನಿಮಗೂ ಒಂದು ಕಾಲ ಬರುತ್ತದೆ ಒಂದಲ್ಲ ಒಂದು ದಿನ ನಿಮ್ಮ ಪ್ರತಿಭೆ ಬೆಳಕಿಗೆ ಬಂದೇ ಬರುತ್ತದೆ. ಅಕಸ್ಮಾತ್ ಬರದೇ ಹೋದರೂ ಪರವಾಗಿಲ್ಲ ನಿಮ್ಮ ಮಕ್ಕಳ ಪಾಲಿಗೆ ನೀವು ಆದರ್ಶ ಮಹಿಳೆಯಾಗಿ ತೋರುತ್ತೀರಿ… ನಮ್ಮವರು ನಮ್ಮ ಯೋಗ್ಯತೆಯನ್ನು ಗುರುತಿಸಿ ಪ್ರಶಂಶಿಸಿದಾಗ  ಜಗತ್ತಿನ ಅತಿ ದೊಡ್ಡ ಪ್ರಶಸ್ತಿಯ ಪ್ರಕಾಶವು ಕೂಡ ನಮ್ಮವರ ಪ್ರಶಂಸೆಯ ಮುಂದೆ ಮಂಕಾಗುತ್ತದೆ.  

 ನಿಮಗೋಸ್ಕರ ನೀವು ಸಮಯವನ್ನು ಮಾಡಿಕೊಳ್ಳುವುದು ನಿಮ್ಮ ಕುಟುಂಬದ ಜವಾಬ್ದಾರಿಗೆ, ಪತ್ನಿತ್ವಕ್ಕೆ, ತಾಯ್ತನಕ್ಕೆಂದು ಕುಂದು ತರದು.

 ನನ್ನ ಗಂಡ ನನಗಾಗಿ, ಕುಟುಂಬಕ್ಕಾಗಿ ಸಮಯವನ್ನೇ ನೀಡುವುದಿಲ್ಲ ಎಂದು ಹೇಳದಿರಿ,
 ಸದಾ ಕೆದರಿದ ತಲೆ, ಅಸ್ತವ್ಯಸ್ತವಾದ ಉಡುಪು,ಮನೆ ಕೆಲಸ, ಮಕ್ಕಳು ಎಂದು ವ್ಯಸ್ತರಾಗುವ ಹೆಣ್ಣು ಮಕ್ಕಳು ಎಂಟು ಗಂಟೆಗಳ ಚಾಕರಿ ಮುಗಿಸಿ ಮನೆಗೆ ಬರುವ ಗಂಡನ ಮುಂದೆ ಚಹಾ ಹಿಡಿದು ಮಕ್ಕಳ ವಿಷಯವಾಗಿ ಮನೆಯ ಕೆಲಸದ ವಿಷಯವಾಗಿ ದೂರು ಹೇಳದೇ ಗಂಡ ಮನೆಗೆ ಬರುವ ವೇಳೆಗೆ ಹಿತಮಿತವಾಗಿ ಅಲಂಕರಿಸಿಕೊಂಡು ಚಹಾ ಕಪ್ ಹಿಡಿದು ಆತನ ಅಂದಿನ ದಿನಚರಿಯ ಕುರಿತು ಸಮಾಧಾನವಾಗಿ ಕೇಳಿ ನೋಡಿ. ಆತನ ಎಷ್ಟೇ ಕೆಲಸದ ಒತ್ತಡವಿದ್ದರೂ ಪ್ರಶಾಂತ ಮನಸ್ಥಿತಿಯ ಪತ್ನಿಯನ್ನು ನೋಡಿದಾಗ ಓಡಿ ಹೋಗುತ್ತದೆ. ಸ್ವಲ್ಪ ಸಮಯದ ನಂತರ ಮಕ್ಕಳ ಕುರಿತಾಗಿ ಆತನೇ ಮಾತನಾಡಿದರೆ ಸರಿ ಇಲ್ಲದಿದ್ದರೆ ನೀವೇ ಮೆಲುವಾಗಿ ಪ್ರಸ್ತಾಪಿಸಿ. ಮಕ್ಕಳನ್ನು ದೂರದೆ ಅವರ ತಪ್ಪಿನ ಕುರಿತು ಅರಿವು ಮೂಡಿಸಿ ಮಕ್ಕಳನ್ನು ಸೂಕ್ಷ್ಮವಾಗಿ ತಿದ್ದಲು ಆತನ ಸಹಕಾರ ಕೋರಿ…. ಆತ ಅದೆಷ್ಟೇ ಅಸಹನೆಯಿಂದ ಗೊಣಗಿದರೂ ನೀವು ಸಹನೆಯನ್ನು ಕಳೆದುಕೊಳ್ಳಬೇಡಿ…. ಕೆಲವೇ ದಿನಗಳಲ್ಲಿ ನಿಮ್ಮ ಪತಿ  ಕೂಡ ಸಮಾಧಾನ ಚಿತ್ತರಾಗುತ್ತಾರೆ.

 ಮೂವತ್ತರ ವಯಸ್ಸಿನಲ್ಲಿ ಐವತ್ತನ್ನು ದಾಟಿದವರಂತೆ ಸದಾ ನೈಟಿ ಎಂಬ ಗೋಣಿಚೀಲದಲ್ಲಿ ನಿಮ್ಮನ್ನು ನೀವು ತೂರಿಸಿಕೊಳ್ಳಬೇಡಿ. ಈ ನೈಟಿ ಎಂಬ ವಸ್ತ್ರ ಸಡಿಲ ವಿನ್ಯಾಸವನ್ನು ಹೊಂದಿದ್ದು ನಿಮ್ಮ ದೇಹ ಅದೆಷ್ಟು ಸುತ್ತಳತೆ ದಪ್ಪವಾಗಿದೆ ಎಂಬುದನ್ನು ನಿಮಗೆ ಗೊತ್ತು ಮಾಡಿಕೊಡುವುದಿಲ್ಲ. ನೈಟಿ ರಾತ್ರಿಯುಡುಪು ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಹಗಲಿನಲ್ಲಿ ಕೆಲಸ ಮಾಡುವಾಗ ಚೂಡಿದಾರ್, ಕುರ್ತಾಗಳನ್ನು ಧರಿಸಿ. ನಂತರ ಸಾಧ್ಯವಾದರೆ ಸೀರೆಗಳನ್ನು ಉಡಿ. ಸೀರೆಗೆಂದೇ ಹೊಲಿಸಿರುವ ಕುಪ್ಪಸಗಳು ನೀವು ಕೊಂಚ ದಪ್ಪವಾದರೂ ಅಳತೆ ಸರಿ ಹೋಗದೆ ನಿಮ್ಮನ್ನು ಎಚ್ಚರಿಸುತ್ತವೆ.

 ಬದುಕು ಬಹಳ ದೊಡ್ಡದು… ನಾವು ಯಾರನ್ನು ಮೆಚ್ಚಿಸಬೇಕಾಗಿದೆ ಎಂದುಕೊಳ್ಳುವ  ಬಹಳಷ್ಟು ಹೆಣ್ಣು ಮಕ್ಕಳು ತಮ್ಮ ವೈಯುಕ್ತಿಕ ಸೌಂದರ್ಯದ ಕಡೆ ಗಮನಹರಿಸುವುದಿಲ್ಲ. ನಿಮ್ಮನ್ನು ನೀವು ಮೆಚ್ಚಿಸಿಕೊಳ್ಳಲು, ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು, ಕೀಳರಿಮೆಯಿಂದ ಬಳಲದೆ ಇರಲು ನೆವಗಳನ್ನು ಹೇಳದೆ ಹೊಸ ಬದಲಾವಣೆಗಳಿಗೆ ಒಗ್ಗಿಸಿಕೊಳ್ಳಿ. ನಿಮ್ಮನ್ನು ನೀವು ಪ್ರೀತಿಸಿ.

 ಮತ್ತೆ ಕೆಲವರು ಮನೆಯಲ್ಲಿ ಅತ್ತೆಮಾವರ,ಗಂಡನ ಅಸಹನೆ ಮಕ್ಕಳ ಕೆಲಸಗಳಲ್ಲಿ ಎಲ್ಲಿಯ ವ್ಯಾಯಾಮ, ಎಲ್ಲಿಯ ಅಲಂಕಾರ ಎಂದು ಗೊಣಗಬಹುದು!…. ಆದರೆ ಮುಂದೆ ಭವಿಷ್ಯದಲ್ಲಿ ತೊಂದರೆಗಳಿಗೆ ಒಳಗಾಗಿ ನೋವನ್ನು ಅನುಭವಿಸುವಾಗ
 “ಅಟ್ಟದ ಮೇಲೆ ಒಲೆ ಉರೀತು ಸುಟ್ಟ ಮೇಲೆ ಬುದ್ಧಿ ಬಂತು ” ಎಂಬಂತೆ
ಅಯ್ಯೋ ಆಗ ನನ್ನ ವೈಯುಕ್ತಿಕ ಜೀವನದ ಕಡೆ ನಾನು ಗಮನಹರಿಸಬೇಕಾಗಿತ್ತು ಎಂದು ಪಶ್ಚಾತಾಪ ಪಡುವುದಕ್ಕಿಂತ ಈಗಿನಿಂದಲೇ ನಿಮ್ಮ ಕಾಳಜಿ ವಹಿಸಿ. ಅಷ್ಟಕ್ಕೂ ಅವರು ಪ್ರತಿರೋಧ ಒಡ್ಡಿದರೆ ಸೂಕ್ಷ್ಮವಾಗಿ ಪ್ರತಿಭಟಿಸಿ. ಅದಕ್ಕೂ ಬಗ್ಗದಿದ್ದರೆ ನಿರ್ಲಕ್ಷಿಸಿ ನಿಮ್ಮ ಕುರಿತು ಯೋಚಿಸಿ.

 ಜೀವನದ ಲೆಕ್ಕಾಚಾರ ಬಲು ಸರಳ… ಇಂದು ಮಾಡಬೇಕಾದದ್ದನ್ನು ಮುಂದೆ ಹಾಕಿದರೆ ಮುಂದೆ ಮಾಡಲು ಸಾಧ್ಯವಾಗುವುದೋ ಇಲ್ಲವೋ ಯಾರಿಗೆ ಗೊತ್ತು? ಉಳಿದದ್ದು ನಿಮಗೆ ಬಿಟ್ಟದ್ದು.

 ಜೀವನದ ಮೊದಲ 20 ವರ್ಷ ತಂದೆ ತಾಯಿಯ ನಿರ್ದೇಶನದಂತೆ ಬದುಕು ಸಾಗಿದರೆ ನಂತರದ 20 ವರ್ಷ ಗಂಡ ಮಕ್ಕಳಿಗಾಗಿ ಬದುಕುತ್ತೇವೆ. ನಂತರ ಮಕ್ಕಳ ಆಸರೆಯಲ್ಲಿ ಸದಾ ಆರೋಗ್ಯ ತೊಂದರೆಗಳನ್ನು ಅನುಭವಿಸುತ್ತಾ ಗೊಣಗುತ್ತ ಬದುಕುವ ಪಾಡು ನಿಮಗೇಕೆ? ದೇಹದಲ್ಲಿ ಕಸುವಿರುವಾಗಲೇ ಅದರ ಸಮರ್ಥ ಬಳಕೆ ಮಾಡಿಕೊಳ್ಳುವ ಮೂಲಕ ನಮ್ಮ ಮನೋ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಳ್ಳೆಯದು.

 ಹಾಗಾದರೆ ನಮಗಾಗಿ ಬದುಕುವುದು ಯಾವಾಗ? ನಾವು ಎಲ್ಲರಿಗಾಗಿ ಎಲ್ಲವನ್ನು ಮಾಡುವ ಹೆಣ್ಣು ಮಕ್ಕಳು ತಮಗಾಗಿ ಏನನ್ನೂ ಮಾಡುವುದಿಲ್ಲ.
 ನಿಮ್ಮ ಬದುಕನ್ನು ನೀವೇ ಬದುಕಬೇಕೇ ಹೊರತು ಬೇರಾರೂ ಬದುಕಲು ಸಾಧ್ಯವಿಲ್ಲ. ನಿಮ್ಮ ಪಾಲಿನ ಹೋರಾಟ ನೀವೇ ಮಾಡಬೇಕು… ನಿಮ್ಮೊಳಗಿನ ಪುಟ್ಟ ಮಗುವನ್ನು ಸದಾ ಜೀವಂತವಾಗಿಟ್ಟು  ನಿಮ್ಮ ಮಕ್ಕಳೊಂದಿಗೆ, ಮುಂದೆ ನಿಮ್ಮ ಮೊಮ್ಮಕ್ಕಳೊಂದಿಗೆ ಕೂಡ ಆರೋಗ್ಯಯುತ ಜೀವನವನ್ನು ಸಾಧಿಸಿ. ನಿಮಗಾಗಿ ನೀವು ಬದುಕಿ, ಬಾಳಿ. ಹಾಗೆ ಮಾಡುವುದರ ಮೂಲಕ ನಿಮ್ಮ ವ್ಯಕ್ತಿತ್ವಕ್ಕೊಂದು ಘನತೆಯನ್ನು ತಂದು ಕೊಡಿ. ಆಗ ನಿಮ್ಮಲ್ಲಾಗುವ ಬದಲಾವಣೆಯನ್ನು ಮತ್ತು  ಸಂತೋಷವನ್ನು ಎಲ್ಲರಿಗೂ ಹಂಚಿ. ನಿಮ್ಮ ಅದ್ಭುತ ಜೀವನವನ್ನು ಕಂಡು ನಿಮ್ಮ ಮಕ್ಕಳು ಕೂಡ ನಿಮ್ಮಂತೆಯೇ ಬದುಕುವ ಆಶಯವನ್ನು ಹೊಂದಲಿ.

 “ಬದುಕು ನಿಮ್ಮದು….. ಕೆಲ ನಿರ್ಧಾರಗಳು ಕೂಡ ನಿಮ್ಮವೇ ಆಗಿರಬೇಕು”.


One thought on “‘ಮಧ್ಯ ವಯಸ್ಸಿನ ತರುಣಿಯರೇ….ನೀವಿನ್ನು ಮುದುಕರಾಗಿಲ್ಲ’ಮಹಿಳೆಯರಿಗಾಗಿ ವಿಶೇಷ ಬರಹವೀಣಾ ಹೇಮಂತ್ ಗೌಡ ಪಾಟೀಲ್

  1. ತುಂಬಾ ಚೆನ್ನಾಗಿ ಬರೆದಿದ್ದೀರಾ ವೀಣಾ ಮಾಡಮ್ ಅವರೇ …. ನಿಮ್ಮ ಲೇಖನಹೆಣ್ಣು ಮಕ್ಕಳಿಗೆ ಸ್ಫೂರ್ತಿ ತುಂಬಲಿ ಎಂದು ಆಶಿಸುವೆ

Leave a Reply

Back To Top