‘ಜನಪದ ಸಾಹಿತ್ಯದಲ್ಲಿ ಮಹಿಳಾ ಪ್ರತಿರೋಧದ ಧ್ವನಿಗಳು’ವಿಶೇಷ ಲೇಖನ-ಡಾ. ಸುಮಂಗಲಾ ಅತ್ತಿಗೇರಿ

ಜನಪದ ಸಾಹಿತ್ಯವನ್ನು ನಾವು ಆಡಿ, ಹಾಡಿ, ಹೇಳಿ, ಕೇಳಿ, ಆನಂದಿಸುತ್ತಿದ್ದೇವು ಅಷ್ಟೆ. ಆದರೆ ಆ ಜನಪದ ಸಾಹಿತ್ಯದಲ್ಲಿನ ಮಹಿಳಾ ಧ್ವನಿಗಳನ್ನು ಕೇಳಿಸಿಕೊಳ್ಳಲು ಮತ್ತು ಅವುಗಳ ಆಂತರ್ಯವನ್ನು ಆಲಿಸಲು ನಾವು ಇತ್ತೀಚಿಗಷ್ಟೆ ಕಿವಿಗೊಟ್ಟಿದ್ದೇವೆ. ಶಿಷ್ಟ ಸಾಹಿತ್ಯದ ಸಂದರ್ಭದಲ್ಲಿ ವಚನ ಸಾಹಿತ್ಯದಲ್ಲಿ ಮಹಿಳಾ ಅಭಿವ್ಯಕ್ತಿಗಳು ಕಂಡು ಬರುತ್ತವೆ. ಆದರೆ ಅದಕ್ಕಿಂತ ಪೂರ್ವದಲ್ಲಿಯೇ ಜನಪದ ಸಾಹಿತ್ಯದಲ್ಲಿ ಮಹಿಳೆಯರು ತಮ್ಮ ಸಂತಸದ ಸಂಗತಿಗಳ ಜೊತೆಜೊತೆಗೆ ತಮ್ಮ ದುಡಿಮೆಯ ದಣಿವನ್ನು, ಸಾಮಾಜಿಕ ಅಸಮಾನತೆ ಮತ್ತು ಅವಮಾನಗಳನ್ನು, ಸಾಮಾಜಿಕ ಮತ್ತು ಕೌಟುಂಬಿಕ ವಲಯದಲ್ಲಾಗುವ ಕ್ರೌರ್ಯ, ಹಿಂಸೆಗಳನ್ನು, ಒಡಲಾಳದ ನೋವನ್ನು, ಮನದ ವೇದನೆಗಳನ್ನು ಅನಾವರಣಗೊಳಿಸಿದ್ದಾರೆ. ಹಾಗಾಗಿ ಜನಪದ ಸಾಹಿತ್ಯದಲ್ಲಿ ಮಹಿಳಾ ಧ್ವನಿ ಎಂದಾಗ ಕೇವಲ ಜೋಗುಳದ ಹಾಡು, ದೇವರ ಹಾಡು, ಆಚರಣಾತ್ಮಕ ಹಾಡುಗಳನ್ನು ಮಾತ್ರ ನೋಡದೆ ಒಟ್ಟು ಜನಪದ ಗೀತ ಪ್ರಕಾರಗಳನ್ನು, ತ್ರಿಪದಿಗಳು, ಗಾದೆಗಳು, ಒಡಪುಗಳು, ಕಥೆಗಳು, ಕಥನಗೀತೆಗಳು, ಮಹಾಕಾವ್ಯಗಳು ಇವುಗಳನ್ನೆಲ್ಲ ನೋಡಬೇಕಾಗುತ್ತದೆ. ಅಂದರೆ ಜನಪದ ಸಾಹಿತ್ಯದಲ್ಲಿ ಕೇವಲ ಮಹಿಳೆಯ ಸಂಭ್ರಮದ ಮತ್ತು ಸೌಮ್ಯ ಧ್ವನಿಗಳಷ್ಟೇ ಅಲ್ಲದೆ ಪ್ರತಿರೋಧದ ಮತ್ತು ಪ್ರತಿಭಟನಾತ್ಮಕ ಧ್ವನಿಗಳು ವ್ಯಕ್ತವಾಗಿರುವುದನ್ನು ಗಮನಿಸಬಹುದು. ಆ ರೀತಿಯ ಧ್ವನಿಗಳ ಆಲಿಸುವ ಮತ್ತು ಅವುಗಳ ಆಂತರ್ಯವನ್ನು ಅರಿಯುವ ಒಂದು ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
ಪ್ರತಿರೋಧವೆಂದರೆ, ಇರುವ ವ್ಯವಸ್ಥೆಗೆ ಹೊಂದಿಕೊಳ್ಳಲಿಕ್ಕಾಗದೆ ಆ ವ್ಯವಸ್ಥೆಯನ್ನು ವಿರೋಧಿಸುವ ಮನೋಭಾವವಾಗಿದೆ. ಆದರೆ ಈ ಪ್ರತಿರೋಧಗಳು ವ್ಯಕ್ತಿಯಿಂದ ವ್ಯಕ್ತಿಗೆ, ಕಾಲದಿಂದ ಕಾಲಕ್ಕೆ ಮತ್ತು ಸಂದರ್ಭ ಸನ್ನಿವೇಶಕ್ಕೆ ತಕ್ಕಂತೆ ಭಿನ್ನವಾಗಿರುತ್ತವೆ. ಪ್ರತಿರೋಧದ ಗುಣ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರಲ್ಲೂ ಒಂದಿಲ್ಲೊಂದು ರೀತಿಯಲ್ಲಿ ವ್ಯಕ್ತವಾಗುತ್ತಿರುತ್ತದೆ. ಆದರೆ ಎಷ್ಟೋ ಕಡೆ ಮಹಿಳೆಯರನ್ನು ಸಹನಾ ಮೂರ್ತಿ ಎನ್ನಲಾಗಿದೆ. ಆ ಸಹನೆಯ ಕಾರಣಕ್ಕೆ ಆಕೆಯನ್ನು ಭೂಮಿಗೆ ಹೋಲಿಸುತ್ತಾರೆ. ಗಂಡಿಗಿಂತ ಹೆಣ್ಣಿನಲ್ಲಿ ಹೆಚ್ಚು ತಾಳ್ಮೆ, ಸಹನೆ ಇರುತ್ತದೆ ಅಥವಾ ಹಾಗೆ ಇರಬೇಕೆಂಬುದು ಪುರುಷ ಪ್ರಧಾನ ಸಮಾಜದ ನಿರೀಕ್ಷೆಯೂ ಆಗಿರಬಹುದು. ಆದರೆ ಕವಿ ನಾಗಚಂದ್ರ ಹೇಳಿದಂತೆ “ಕಾಲವಶದಿಂ ಅಬ್ದಿಯೋರ್ಮೆಯುಂ ಮರ್ಯಾದೆಯಂ ದಾಂಟದೆ?” ಎಂಬ ಮಾತಿನಂತೆ ಪ್ರಶಾಂತವಾದ ಸಮುದ್ರ ಕೂಡಾ ಒಮ್ಮೊಮ್ಮೆ ತನ್ನ ಎಲ್ಲೆ ಮೀರಿ ದುಮ್ಮುಕುವುದು ಅದೇರೀತಿ ಸ್ತ್ರೀಯರು ಕೂಡಾ ಕೆಲವೊಮ್ಮೆ ಯಾವುದೋ ಸಂಗತಿಯಿಂದ ರೋಸಿ ಹೋಗಿ ತನ್ನ ಸಹನೆ ಕಳೆದುಕೊಂಡು ಪ್ರತಿರೋಧವನ್ನು ವ್ಯಕ್ತಪಡಿಸಬಹುದು. ಆದರೆ ಪ್ರತಿರೋಧಿಸುವ ರೀತಿ ಎಲ್ಲ ಮಹಿಳೆಯರಲ್ಲಿ ಒಂದೇ ರೀತಿಯಾಗಿರುವುದಿಲ್ಲ. ಕೆಲವರ ಪ್ರತಿರೋಧ ಸೌಮ್ಯ ಸ್ವರೂಪದ್ದಾದರೆ, ಕೆಲವರದ್ದು ತೀರ್ವ ಸ್ವರೂಪದ್ದಾಗಿರುತ್ತದೆ. ಹೀಗೆ ಕೌಟುಂಬಿಕ ವಲಯದಿಂದ ಹಿಡಿದು ಸಾಮಾಜಿಕ ವಲಯಕ್ಕೂ ಸಂಬಂಧಿಸಿದಂತೆ ವ್ಯಕ್ತವಾದ ಮಹಿಳಾ ಪ್ರತಿರೋಧದ ಧ್ವನಿಗಳು ಜನಪದ ಸಾಹಿತ್ಯದಲ್ಲಿ ಕಂಡುಬರುತ್ತವೆ. ತನ್ನ ಸ್ವಾಭಿಮಾನಕ್ಕೆ ಧಕ್ಕೆಯಾದರೆ, ಮಾನ ಹಾನಿಯ ಸನ್ನಿವೇಶಗಳು ಎದುರಾದರೆ, ತನ್ನ ಹಾಗೂ ತನ್ನ ಕುಟುಂಬದ ಮರ್ಯಾದೆಗೆ ದಕ್ಕೆಯಾದರೆ ಅನಿವಾರ್ಯವಾಗಿ ತನ್ನ ರಕ್ಷಣೆಗಾಗಿ ಅವುಗಳ ವಿರುದ್ಧ ಪ್ರತಿ ಮಹಿಳೆ ತನ್ನ ಸಹನೆ ಮೀರಿದಾಗ ತನ್ನ ಇತಿಮಿತಿಯಲ್ಲಿ ಪ್ರತಿರೋಧಸುತ್ತಾಳೆ. ಅಕ್ಷರ ಕಲಿಯದ ನಮ್ಮ ಜನಪದ ಮಹಿಳೆಯರು ತಮ್ಮದೇಯಾದ ಬುದ್ಧಿವಂತಿಕೆಯಿಂದ ವಿವಿಧ ರೀತಿಯಲ್ಲಿ ಪ್ರತಿರೋಧಿಸಿರುವುದನ್ನು ನಾವು ಕಾಣಬಹುದು.


ಹೆಣ್ಣಾಗಿ ಹುಟ್ಟಿದ ಬಗ್ಗೆಯೇ ಪ್ರತಿರೋಧಿಸಿದ ಬಗೆ:
“ಹೆಣ್ಣು ಹಡಿಯಲಿ ಬ್ಯಾಡ ಹೆರವರಿಗೆ ಕೊಡಬೇಡ” ಎನ್ನುವಲ್ಲಿ ಆಗಲಿ, “ಹೆಣ್ಣಾಗಿ ಹುಟ್ಟುವುದಕ್ಕಿಂತ ಮಣ್ಣಾಗಿ ಹಟ್ಟುವುದು ಲೇಸು” ಎನ್ನುವಲ್ಲಿ ಆಗಲಿ ಹೆಣ್ಣಿನ ಪ್ರತಿರೋಧದ ದ್ವನಿ ಇದೆ. ಇಂತಹ ಒಂದು ಕಠೋರತೆಯ ಧ್ವನಿ ಬರಬೇಕಾದರೆ ಅದು ಏಕಾಏಕಿ ಬರಲು ಸಾಧ್ಯವಿಲ್ಲ. ಜೀವನಾನುಭವದ ಮೂಸೆಯಲ್ಲಿ ತಾನು ಉಂಡ ನೋವು, ನಿರಾಸೆ, ತಾತ್ಸಾರ, ಅವಮಾನ-ಅಪಮಾನಗಳ ಹಿನ್ನಲೆಯಲ್ಲಿ ಹೆಣ್ಣು ಇಂತಹ ನಿಲುವಿಗೆ ಬಂದಿರಲು ಸಾಧ್ಯ.
ಕೇಡು ಬಯಸಿವ ವ್ಯಕ್ತಿ ಮತ್ತು ಸನ್ನಿವೇಶಗಳ ವಿರುದ್ಧದ ಪ್ರತಿರೋಧ:


ಹಚ್ಚಿಕೊಂಡವ್ವಗ ಚೊಚ್ಚಲು ಮಗಳಾದೆ
ಬಿಟ್ಟಾಡಿಕೊಳ್ಳುವ ವೈರೀಯ ಮನಿ ಮುಂದ
ಬಿಚ್ಚು ಗತ್ತಾö್ಯಗಿ ಹೊಳದೇನ

ಯಾವುದೇ ಒಬ್ಬ ವ್ಯಕ್ತಿಯಲ್ಲಿ ದ್ವಿವಿಧದ ಸ್ವಭಾವಗಳಿರುತ್ತವೆ. ಅದು ಗಂಡಿನಲ್ಲಾಗಲಿ, ಹೆಣ್ಣಿನಲ್ಲಾಗಲಿ, ಯಾರು ತನ್ನೊಂದಿಗೆ ಚನ್ನಾಗಿರುವರೋ ಅವರೊಂದಿಗೆ ಚನ್ನಾಗಿಯೇ ಇರುವ ಮತ್ತು ತಮಗೆ ಆಗದ ವೈರಿಗಳನ್ನು ವೈರತ್ವದಿಂದಲೇ ಕಾಣುವ ದ್ವಿವಿಧದ ಸ್ವಭಾವ ಮನುಷ್ಯರಲ್ಲಿ ಸಾಮಾನ್ಯವಾಗಿ ಇರುತ್ತದೆ. ಅಂತಹದ್ದೇ ಸ್ವಭಾವ ನಮ್ಮ ಜನಪದ ಮಹಿಳೆಯಲ್ಲಿಯೂ ಇದೆ ಎಂಬುದಕ್ಕೆ ಈ ಮೇಲಿನ ತ್ರಿಪದಿಯೇ ನಿದರ್ಶನವಾಗಿದೆ. ಈ ತ್ರಿಪದಿಯಲ್ಲಿ ವ್ಯಕ್ತವಾದ ಧ್ವನಿ ಅವಳೊಳಗಿನ ಪ್ರತಿಭಟನೆಯ ಧ್ವನಿಯೂ ಆಗಿದೆ.


ಅಂಜಿಕಿ ತೋರಿದರ ಅಂಜುವರ ಮಗಳಲ್ಲ
ಮುಂಜಾನದಾಗ ಹುಲಿ ಕರಡಿ | ತೋರಿದರ |
ಅಂಜಿ ತಿರುಗುವವರ ಸೊಸಿಯಲ್ಲ

ಹೆಣ್ಣೋರ್ವಳು ಅಂಜಿಸಿದರೆ ಅಂಜುವವಳಲ್ಲ ಎನ್ನುವ ಮೂಲಕ ತನ್ನಲ್ಲಿನ ಎದೆಗಾರಿಕೆಯನ್ನು, ಆತ್ಮವಿಶ್ವಾಸವನ್ನು ತೋರಿರುವುದನ್ನು ಕಾಣುತ್ತೇವೆ. ಅವಳ ಈ ಪ್ರತಿಕ್ರಿಯೆಯಲ್ಲಿಯೂ ಪ್ರತಿರೋಧದ ಧ್ವನಿಯಿದೆ.

ಒಪ್ಪದ ವಿವಾಹ ಹಾಗೂ ಬಾಲ್ಯ ವಿವಾಹದ ವಿರುದ್ಧದ ಪ್ರತಿರೋಧ:

ಒಲ್ಲದ ಗಂಡನ್ನು ಮದುವೆಯಾಗಬೇಕಾದ ಸಂದರ್ಭದಲ್ಲಿ ಅಸಹಾಯಕಳಾದ ಹೆಣ್ಣೊಬ್ಬಳು ತನ್ನ ಮನದೊಳಗೆ ಶಪಿಸುವ ಮೂಲಕ ಪ್ರತಿರೋಧವನ್ನು ಒಡ್ಡುವ ರೀತಿ ಹೀಗಿದೆ;


ಚಪ್ಪರ ಬೀಳಲಿ ಹಪ್ಪಳ ಮುರಿಯಲಿ
              ಮಿತ್ರರೈರಾಣಿ ಒಡಿಯಾಲಿ

ಬಾಗಿಲದಾಗಿನ ಕುದುರಿ ಕಾಲಮ್ಯಾಲಾಗಲಿ
ಮದುಮಗ ಕಾಳಿಂಗ ಮಡಿಯಲಿ

  ಒಂದು ವೇಳೆ ತನ್ನ ಮನಸ್ಸಿಗೆ ವಿರುದ್ಧವಾಗಿ ಹಿರಿಯರು ಒತ್ತಾಯದಿಂದ ಮಾಡಿದಂತಹ ಮದುವೆಯ ಬಗೆಗೂ ಹೆಣ್ಣಿನಲ್ಲಿ ಪ್ರತಿರೋಧ ಇರುವುದನ್ನು ಕಾಣಬಹುದು.

ಇಷ್ಟು ಸಡಗರ ಸೋಯ್ದು ಕುಡುಗೋಲಿಗ್ಯಾಕಲಿ
ಅಷ್ಟು ಸಂಪತ್ತೊಯ್ದು ಸುಡುಗಾಡಿಗಿಕ್ಕಲಿ
ಗಂಡತಂತ್ರವಾದೀತು ಬಾಲಿಯ ಈ ಜನುಮ
ಎದೆಬಿಚ್ಚಿ ಯಾರಿಗ್ಹೇಳಲಿ ದೇವ
ಕೊಟ್ಟಾರ ಮುದುಕಗ

ಇಲ್ಲಿ ಚಿಕ್ಕ ವಯಸ್ಸಿನ ಹೆಣ್ಣು ಮಗಳನ್ನು ಮುದುಕನಿಗೆ ಕೊಟ್ಟು ಮದುವೆ ಮಾಡುವ ಹಿರಿಯರ ಕೈಕರ್ಯ ಎಷ್ಟು ನಿರರ್ಥಕವಾದುದು ಎಂಬುದನ್ನು “ಅಷ್ಟು ಸಂಪತ್ತನೊಯ್ದು ಸುಡುಗಾಡಿಗಿಕ್ಕು ಎನ್ನುವ ಮೂಲಕ ತನ್ನ ಮನದ ಇಂಗಿತವನ್ನು ಮತ್ತು ಆ ಮದುವೆಯನ್ನು ನಿರಾಕರಿಸುವ ರೀತಿ ಕಂಡುಬರುತ್ತದೆ.

ಕಿರಕ ಸಾಲಿಯ ಗಿಡವು ನೆಲಕ ಹಬ್ಬಿದರೇನ
ಮುದುಕ ಗಂಡನ ಮದಿವ್ಯಾಗಿ | ಆ ಬಾಲಿ
ಎರಕೊಂಡ ಮುಡಿಯ ಬಿಟ್ಟಾಳ

ಮದಗುಣಕಿ ಗಿಡಾ| ಉದ್ದ ಬೆಳೆದಾರೇನ
ಮುದುಕ ಗಂಡನ ಮದಿವ್ಯಾಗಿ | ಆ ಬಾಲಿ
ಬಂಗಾರ ಇಡವಳ್ಳ

ಮಹಿಳೆಯರು ಸಾಮಾನ್ಯವಾಗಿ ಕೌಟುಂಬಿಕ ವಲಯದಲ್ಲಿ ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತ ವ್ಯವಸ್ಥೆಗೆ ಹೊಂದಿಕೊಂಡೇ ಬದುಕು ಸಾಗಿಸುತ್ತಿದ್ದಾಗಲೂ ಕೆಲವೊಮ್ಮೆ ಆಕೆಯ ಆಶೆ ಆಕಾಂಕ್ಷೆಗಳು ಇಡೇರದಿದ್ದಾಗ ತನ್ನ ಮನೋಬಯಕೆಗೆ ಮನ್ನಣೆ ಸಿಗದಿದ್ದಾಗ ಆಕೆ ಒಡ್ಡುವ ಪ್ರತಿರೋಧ ವೈವಿಧ್ಯಮಯವಾಗಿರುತ್ತದೆ. ಮಾತು ಬಿಟ್ಟು ಮೌನವಾಗುವುದು, ತಲೆಯ ಕೂದಲನ್ನು ಜಡೆ ಕಟ್ಟದೆ ಹಾಗೆ ಬಿಡುವುದು, ಆಭರಣ ತೊಡದಿರುವುದು ಇವೆಲ್ಲ ಆಕೆಯ ಮೌನ ಪ್ರತಿರೋಧಗಳೇ ಆಗಿವೆ. ಉದಾಹರಣೆಗೆ ಮಹಾಭಾರತದಲ್ಲಿ ದ್ರೌಪದಿ ತನ್ನ ಮನೋಬಯಕೆ ಇಡೇರುವ ವರೆಗೆ ಮುಡಿಕಟ್ಟದೇ ಇದ್ದದ್ದನ್ನು ನಾವಿಲ್ಲಿ ನೆನೆಯಬಹುದು. ಇದು ದ್ರೌಪದಿಯ ಪ್ರತಿಭಟನೆಯೇ ಆಗಿದೆ.

ಒಟ್ಟಿನಲ್ಲಿ ಪ್ರತಿರೋಧ ಕೆಲವೊಮ್ಮೆ ನೇರವಾಗಿ ಕಾಣಿಸಿಕೊಳ್ಳಬಹುದು ಇಲ್ಲವೆ ಮೌನವಾದ ಪ್ರತಿರೋಧವೂ ವ್ಯಕ್ತವಾಗಿರುವುದನ್ನು ಕಾಣುತ್ತೇವೆ. ಮೌನ ಪ್ರತಿರೋಧವು ನೇರ ಪ್ರತಿರೋಧಕ್ಕಿಂತಲೂ ಕಠಿಣ ಮತ್ತು ಕಠೋರವಾಗಿರುವಂತಹದ್ದು.

ವರ್ಣ ತಾರತಮ್ಯದ ವಿರುದ್ಧದ ಪ್ರತಿರೋಧ:

ಸಮಾಜದಲ್ಲಿ ಲಿಂಗತಾರತಮ್ಯ, ಜಾತಿ ತಾರತಮ್ಯದ ಜೊತೆಗೆ ವರ್ಣ ತಾರತಮ್ಯವೂ ಇದ್ದೇ ಇದೆ. ನಮ್ಮ ಭಾರತೀಯ ಸಮಾಜದಲ್ಲಿ ಮೊದಲಿನಿಂದಲೂ ಕಪ್ಪು ವರ್ಣದವರ ಬಗೆಗೆ ಒಂದಿಷ್ಟು ಮೂಗು ಮುರಿಯುವುದನ್ನು ನೋಡಿದ್ದೇವೆ. ಬೆಳ್ಳನೆಯ ಮೈಬಣ್ಣದ ವ್ಯಕ್ತಿಗೆ ಮನ್ನಣೆ ನೀಡಿದಷ್ಟು ಕಪ್ಪು ಬಣ್ಣದ ವ್ಯಕ್ತಿಗಳಿಗೆ ನೀಡದಿರುವುದನ್ನು ಸರ್ವೆಸಾಮಾನ್ಯವಾಗಿ ಕಾಣುತ್ತೇವೆ.


ಕರಿಯ ಹೆಂಡತಿ ಅಂತ ಕರಿ ಕರಿ ಮಾಡಬ್ಯಾಡ
ಹರಕೊಳ್ಳೊ ನಿನ್ನ ಗುಳದಾಳಿ
ನಾ ರೈತನ ಮಗಳಾಗಿ ಇರತೇನಿ

ಮದುವೆಗಾಗಿ ವಧುವರರ ಅನ್ವೇಷಣೆಯ ಸಂದರ್ಭದಲ್ಲಿ ಸಾಮಾನ್ಯವಾಗಿ ಗಂಡಾಗಲಿ, ಹೆಣ್ಣಾಗಲಿ ತಮ್ಮ ಬಾಳ ಸಂಗಾತಿ ಬೆಳ್ಳಗೆ, ಕೆಂಪಗೆ ಇರಬೇಕೆಂಬುದು ಅವರ ಮೊದಲ ಆದ್ಯತೆ ಆಗಿರುತ್ತದೆ. ಆದರೆ ಕೆಲವೊಮ್ಮೆ ಹಿರಿಯರ ಒತ್ತಾಯದಿಂದಲೋ ಅಥವಾ ಇನ್ನಾವುದೊ ಅನಿವಾರ್ಯಕ್ಕೊ ಮನಸ್ಸಿಲ್ಲದಿದ್ದರೂ ಕಪ್ಪು ಹುಡುಗಿಯನ್ನು ಮದುವೆ ಆಗಿದ್ದರೆ ಕಾಲಾಂತರದಲ್ಲಿ ಆಕೆ ಕಪ್ಪು ಎಂಬ ಕಾರಣಕ್ಕಾಗಿಯೇ ಕೈ ಹಿಡಿದ ಹೆಂಡತಿಗೆ ಕಿರಿಕಿರಿ ಮಾಡಿದರೆ ಅಂತಹ ಕಿರಿಕಿರಿಯನ್ನು ಸಹಿಸಿ ಸಹಿಸಿ ಸಾಕಾಗಿ ಕೊನೆಗೆ ಆ ಕಪ್ಪು ಹುಡುಗಿ ಹರಕೊಳ್ಳೊ ನಿನ ಗುಳದಾಳಿ ಎನ್ನುವ ಮಟ್ಟಿಗೆ ಪ್ರತಿರೋಧವನ್ನು ತಾಳಿದ ಬಗೆಗೆ ನಮ್ಮ ಜನಪದ ಸಾಹಿತ್ಯದಲ್ಲಿ ನಿದರ್ಶನಗಳಿವೆ.
ಪರಸ್ತ್ರೀ ಸಹವಾಸದ ಬಗೆಗಿನ ಪ್ರತಿರೋಧ :
        ಪರಸ್ತ್ರೀಯೊಂದಿಗಿನ ಸಹವಾಸ ಇಲ್ಲವೆ ಬಹುಪತ್ನಿತ್ವವನ್ನು ಪ್ರಶ್ನಿಸುವ ಮನೋಭಾವ ನಮ್ಮ ಜನಪದ ಮಹಿಳೆಯರಲ್ಲಿತ್ತು. ತನ್ನ ಗಂಡ ಬೇರೊಂದು ಹೆಣ್ಣಿನ ಸಹವಾಸ ಮಾಡಿದ್ದು ತಿಳಿದಾಗ ಆಕೆ;

    “ಅಂಗಿಯ ಮ್ಯಾಲಂಗಿ ಚಂದೇನೋ ನನರಾಯ
     ರಂಬಿಮ್ಯಾಲ ರಂಬಿ ಪ್ರತಿರಂಬಿ ಬಂದರೆ
     ಛಂದೇನೋ ರಾಯಾ ಮನಿಯಾಗ”

ಎಂದು ನಯ ನಾಜೂಕಿನಿಂದಲೇ ತನ್ನ ಗಂಡನನ್ನು ಪ್ರಶ್ನಿಸುತ್ತಾಳೆ. ಇದೇರೀತಿ ಮತ್ತೊಂದೆಡೆ “ಸಾವಿರ ಕೊಟ್ಟರೂ ಸವತಿಯ ಮನಿಬ್ಯಾಡ” ಎಂದು ಪ್ರತಿಭಟಿಸಿರುವುದನ್ನು ನಾವು ಕಾಣುತ್ತೇವೆ.
ವೇಶ್ಯಾ ಪದ್ಧತಿಯ ಬಗೆಗಿನ ಪ್ರತಿರೋಧ:
        ಸಮಾಜದಲ್ಲಿ ರೂಢಿಯಿದ್ದ ವೇಶ್ಯಾ ಪದ್ಧತಿಯ ಬಗೆಗೂ ಜನಪದ ಮಹಿಳೆ ಅಸಮಾಧಾನ ವ್ಯಕ್ತಪಡಿಸಿದ್ದಾಳೆ.


      “ಗಾಳಿಗಾಳಿ ಕೇಳೆ ಗಾಳಿ ಮಾಂಕಾಳಿ ಕೇಳೆ
       ಸೂಳೇರ ಕೇರಿಯ ಸುಡಬೇಕು
       ಜಾಣರ ಕೇರೀಲಿ ಇರಬೇಕು”  

  ಎಂದು ತನ್ನ ಪತಿ ವೇಶ್ಯಯರ ಸಹವಾಸ ಮಾಡಿರುವುದನ್ನು ತಿಳಿದ ಸತಿ ಅದರಿಂದ ತನ್ನ ಕುಟುಂಬ, ಮನೆತನದ ಮಾನ ಮರ್ಯಾದೆ ಹಾಳಾಗುವುದೆಂದು ಅರಿತು ವೇಶ್ಯಾ ಪದ್ಧತಿಯಂತಹ ಅನಿಷ್ಟ ಪದ್ಧತಿಯನ್ನು ದೂಷಿಸುತ್ತಾಳೆ. ಆ ಕುರಿತು ಆಕ್ರೋಶವನ್ನು ವ್ಯಕ್ತಪಡಿಸಿ ಸೂಳೇರ ಕೇರಿ ಸುಡಬೇಕು ಎಂದು ವೇಶ್ಯಾ ಪದ್ಧತಿಯ ವಿರುದ್ಧ ಧ್ವನಿ ಎತ್ತಿದ್ದಾಳೆ.
ಜೊತೆಗೆ ಈ ರೀತಿ ಪುರುಷ ದಾರಿ ತಪ್ಪಿದರೆ ಅವನು ಏನಾಗುತ್ತಾನೆ ಎಂಬ ಎಚ್ಚರಿಕೆಯನ್ನು ನಮ್ಮ ಜನಪದ ಮಹಿಳೆ ನೀಡಿದ್ದಾಳೆ.


    “ಸೂಳೆಗೆ ಹೋದವನು ಏನಾದ ಎಂತಾದ
     ಕಾಡು ನಾಯಾದ ಕಪಿಯಾದ ಆ ಮುರುವ
     ಸೂಳೆ ಕಾಲಿಗೆ ಕೆರವಾದ”

ಸೂಳೆಯರ ಸಹವಾಸ ಮಾಡಿದ ವ್ಯಕ್ತಿಯ ಜೀವನವೇ ವಿನಾಶವಾಗಿ ಕೊನೆಗೆ ಅವನ ಸ್ಥಿತಿ ಏನಾಗುವುದು ಎಂಬುದನ್ನು ತಿಳಿಸಿದ್ದಾಳೆ. ಈ ಬಗೆಯ ಸಾಮಾಜಿಕ ಸೂಕ್ಷö್ಮಗಳನ್ನು ಮಹಿಳೆಯರು ಅರಿತಿದ್ದರು ಮತ್ತು ಅದರ ಪರಿಣಾಮಗಳ ಬಗೆಗೂ ಚಿಂತಿಸುತ್ತಿದ್ದರು.

ವೈಧವ್ಯದ ಅನಿಷ್ಟ ಪದ್ಧತಿಗಳ ವಿರುದ್ಧ ಪ್ರತಿರೋಧ:


      ವಿಧವಾ ಹೆಣ್ಣಿನ ಬಗೆಗೆ ಸಮಾಜದಲ್ಲಿ ಅಶುಭ ಎಂಬ ಮನೋಭಾವ ಮೊದಲಿಂದಲೂ ಇದೆ. ಹಾಗಾಗಿಯೇ ಶುಭ ಕಾರ್ಯಕ್ರಮಗಳಲ್ಲಿ ವಿಧವೆಯರನ್ನು ಮಂಗಳಕಾರ್ಯಗಳಿಂದ ದೂರ ಇರಿಸಲಾಗುತ್ತದೆ. ಅನಾರೋಗ್ಯ, ಆಕಸ್ಮಿಕ ಅಪಘಾತಗಳಿಂದಾಗಿ ಗಂಡ ಅಕಾಲಿಕ ಮರಣ ಹೊಂದಿದಾಗ ಮಹಿಳೆ ಅನಿವಾರ್ಯವಾಗಿ ವಿಧವೆಯಾಗುತ್ತಾಳೆ. ಆದರೆ ವಿಧವೆಯನ್ನು ನೋಡುವ ಮತ್ತು ನಡೆಸಿಕೊಳ್ಳುವ ಸಾಮಾಜಿಕ ದೃಷ್ಟಿಕೋನ ಕೆಲವು ಸಮುದಾಯಗಳಲ್ಲಿ ಸರಿಯಾಗಿಲ್ಲ. ಆ ಹಿನ್ನಲೆಯಲ್ಲಿಯೇ ವಿಧವೆಯರಿಗೆ ತಲೆ ಬೋಳಿಸುವುದು, ಹಣೆಯ ಕುಂಕುಮ, ಮುಡಿಯ ಹೂವು, ಕೈಯ ಬಳೆಗಳನ್ನೆಲ್ಲ ತಗೆಯಲಾಗುತ್ತದೆ. ಈ ರೀತಿಯ ಸಂಪ್ರದಾಯ ಆಚರಣೆಗಳಲ್ಲಿ ವಿಧವಾ ಹೆಣ್ಣಿನ ತಲೆ ಬೋಳಿಸಿ ಆಕೆಯನ್ನು ವಿಕಾರಗೊಳಿಸಿ ಆಕೆಯು ಸುಂದರವಾಗಿ ಕಾಣದಂತೆ ಮಾಡುವ ಸಮಾಜದ ವಿಕೃತ ಮನಸ್ಸನ್ನು ಪ್ರತಿನಿಧಿಸುತ್ತದೆ. ಈ ರೀತಿಯ ಕೃತ್ಯದ ವಿರುದ್ಧ ಜನಪದ ಮಹಿಳೆ ಧ್ವನಿ ಎತ್ತಿದ್ದಾಳೆ.


    ಒಪ್ಪತ್ತು ಉಣಲಾರೆ, ನೆತ್ತಿ ಬೋಳಿಸಲಾರೆ
    ಬಕ್ಕ ಮುಂಡ್ಯಾಗಿ ಇರಲಾರೆ| ಅತ್ತೆವ್ವ
    ನನ್ನ ಶೆಟ್ಟರ ಕೂಡ ಕಳುವವ್ವ

     ಮೇಲಿನ ತ್ರಿಪದಿಯೊಂದರಲ್ಲಿನ ಮಹಿಳೆಯ ಧ್ವನಿ ಆಲಿಸಿದರೆ, ಹೆಣ್ಣಿನ ತಲೆ ಬೋಳಿಸಿ ವಿಕಾರಗೊಳಿಸುವುದನ್ನು ಸಹಿಸದ ಹೆಣ್ಣು, ಅದಕ್ಕಿಂತ ಗಂಡನೊಂದಿಗೆ ತಾನೂ ಜೀವ ಕಳೆದುಕೊಳ್ಳುವುದು ಲೇಸು ಎನ್ನುವ ಮೂಲಕ ತಲೆ ಬೋಳಿಸುವ ಅನಿಷ್ಟದ ವಿರುದ್ಧ ಪ್ರತಿರೋಧವನ್ನು ಒಡ್ಡುತ್ತಾಳೆ. ಆದರೆ ಬಹುಪಾಲು ಬುಡಕಟ್ಟು ಸಮುದಾಯಗಳಲ್ಲಿ ಇದಕ್ಕೆ ವ್ಯತರೀಕ್ತವಾಗಿ ವಿಧವಾ ವಿವಾಹಕ್ಕೆ ಮುಕ್ತ ಅವಕಾಶವಿರುವುದನ್ನು ಕಾಣುತ್ತೇವೆ.
ಕೌಟುಂಬಿಕ ದೌರ್ಜನ್ಯದ ವಿರುದ್ಧದ ಪ್ರತಿರೋಧ:
    ಕೆಲವೊಮ್ಮೆ ಕುಟುಂಬದ ಒಳಗಡೆಯೇ ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗುತ್ತಿರುತ್ತಾರೆ. ಕೆಲ ವಿಕೃತ ಮನಸ್ಸಿನ ಪುರುಷರು ತಂದೆ ಮಗಳ ಮೇಲೆ, ಮಾವ/ಭಾವ ಸೊಸೆಯ ಮೇಲೆ, ಮೈದುನ ಅತ್ತಿಗೆಯ ಮೇಲೆ ದೌರ್ಜನ್ಯ ಎಸಗುವುದನ್ನು ನಾವು ಈಗಲೂ ಕೇಳುತ್ತಲೇ ಬಂದಿದ್ದೇವೆ. ಈ ತರಹದ ಘಟನೆಗಳು ನಡೆದಾಗ ನಮ್ಮ ಜನಪದ ಮಹಿಳೆಯೂ ಕೂಡಾ ತನ್ನದೇ ರೀತಿಯಲ್ಲಿ ಪ್ರತಿರೋಧವನ್ನು ವ್ಯಕ್ತಪಡಿಸಿದ್ದಾಳೆ.


     “ಕಂದನ ಸಲುವಾಕೆ ತಂಗಿಯ ಕರೆತಂದೆ
      ತಂಗ್ಯೆಮ್ಮಗೆರಡ ಬಗೆದೆಲ್ಲೊ | ರಾಯರೆ
      ಬಂಡು ಮಾಡಲೆ ಸಭೆಯೊಳಗೆ”

ಬಾಣಂತನದ ಸಂದರ್ಭದಲ್ಲಿ ತನಗೆ ಆಸರೆಯಾಗಲೆಂದು ತಂಗಿಯನ್ನು ಕರೆಯಿಸಿದರೆ ಆ ಸಮಯದಲ್ಲಿ ತಂಗಿಯ ಮೇಲೆಯೇ ಗಂಡ ಕಣ್ಣು ಹಾಕಿ ಆಕೆಗೆ ದೌರ್ಜನ್ಯ ಎಸಗಿದ್ದು ತಿಳಿದಾಗ, ಗಂಡ ಎಸೆದ ಕೃತ್ಯದ ಬಗೆಗೆ ಪ್ರಶ್ನಿಸಲು ಆಕೆ ಅಂಜುವುದಿಲ್ಲ. ಎಲ್ಲಿ ತಪ್ಪಾಗುವುದೋ ಅದನ್ನು ಖಂಡಿಸುವ, ವಿರೋಧಿಸುವ, ಪ್ರಶ್ನಿಸುವ ರೀತಿಯನ್ನು ನಾವು ಜನಪದ ಮಹಿಳೆಯರಲ್ಲಿ ಕಾಣುತ್ತೇವೆ. ಹಿಂದೆ ನಮ್ಮ ಪೂರ್ವಿಕ ಸಮಾಜದಲ್ಲಿ  ಇಂತಹದ್ದೆ ಘಟನೆಗಳು ನಡೆದು ಕೊನೆಗೆ ಒಬ್ಬನೇ ವ್ಯಕ್ತಿ ಅಕ್ಕತಂಗಿಯರಿಬ್ಬರಿಗೂ ಬಾಳು ಕೊಟ್ಟ ನಿದರ್ಶನಗಳಿವೆ.


ಶೀಲ/ಪಾತಿವ್ರತ್ಯದ ಬಗೆಗಿನ ಶಂಕೆ/ಅನುಮಾನದ ವಿರುದ್ಧ ಪ್ರತಿರೋಧ:


ಸೋಲಿಗರ ನೀಲಯ್ಯ ತನ್ನ ಮಡದಿ ಸಂಕಮ್ಮನನ್ನು ಬಿಟ್ಟು ಬೇಟೆಗೆ ಹೋಗುವ ಸಂದರ್ಭದಲ್ಲಿ ಅವಳ ಶೀಲ ಸಂರಕ್ಷಣೆಯ ಬಗೆಗೆ ಅವನಿಗೆ ಚಿಂತೆಯಾಗುತ್ತದೆ. ಹಾಗಾಗಿ ಶೀಲ ಕಾಪಾಡಿಕೊಳ್ಳುವ ಬಗ್ಗೆ ಸಂಕಮ್ಮ ಭರವಸೆ ಕೊಡಬೇಕೆಂದು ಅವಳಲ್ಲಿ ಬಲಗೈ ಭಾಷೆ ಕೇಳುತ್ತಾನೆ ಮತ್ತು ಭಾಷೆ ಕೊಡುವಂತೆ ಒತ್ತಾಯಿಸುತ್ತಾನೆ. ಹಟ ಹಿಡಿಯುತ್ತಾನೆ. ಆದರೆ ಸಂಕಮ್ಮ ತನ್ನ ಶೀಲವನ್ನು ಅನುಮಾನಿಸುವ ನೀಲಯ್ಯನಿಗೆ ಭಾಷೆ ಕೊಡಲು ನಿರಾಕರಿಸುತ್ತಾಳೆ.


ನೀನು ಕಟ್ಟಿದ ತೆರವ ತಕ್ಕಯ್ಯ
ನನ್ನ ಹಟ್ಟಿಂದಾಚೆ ಕಳುವಯ್ಯ
ನಿನ್ನ ದಾರಿಯ ನೀನು ನೋಡಯ್ಯ
ನಾನು ಬಲಗೈ ಮುಟ್ಟಿ ಭಾಷೆ ಕೊಡುವ
ಮಗಳಲ್ಲ ಹೋಗೊ ಯಜಮಾನ


ಎಂದು ಪ್ರತಿಭಟಿಸುತ್ತಾಳೆ. ಪಾತಿವ್ರತ್ಯದಂತಹ ಒಂದು ಸಾಮಾಜಿಕ ಕಟ್ಟಳೆಯನ್ನು ಮೀರುವ ಮತ್ತು ತಾಯ್ತನದಂತಹ ಬಯಕೆಯನ್ನು ಮಾದಪ್ಪನಲ್ಲಿ ವ್ಯಕ್ತಪಡಿಸುತ್ತಾಳೆ. ಆ ಮೂಲಕ ತನ್ನ ಇಚ್ಛೆಗೆ ಪ್ರಶಸ್ತö್ಯ ನೀಡಿ ಗಂಡನ ಕಟ್ಟುಪಾಡುಗಳಿಗೆ ಪ್ರತಿರೋಧ ತೋರುತ್ತಾಳೆ.


ಒಲ್ಲದ ಗಂಡನ ಬಗೆಗಿನ ಪ್ರತಿರೋಧ:
ಗಂಡನ ಹಿತವೇನು ಕೆಂಡದ ತಂಪೇನು
ಕೊಂಡ ಮಜ್ಜಿಗೆ ರುಚಿಯೇನು | ಎಲೆ ಗಿಳಿಯೆ |
ಬಂಡ ಬದುಕಿನ ಫಲವೇನು

ಒಲ್ಲದ ಗಂಡನನ್ನು ಸಾರಾ ಸಗಟಾಗಿ ನಿರಾಕರಿಸುವ ಹೆಣ್ಣಿನ ದಿಟ್ಟತನ ಈ ಮೇಲಿನ ತ್ರಿಪದಿಯಲ್ಲಿ ಕಂಡುಬರುತ್ತದೆ. ಹೆಣ್ಣಿಗೆ ಎಲ್ಲ ಸಂಪತ್ತಿನಾಚೆಗೆ ಗಂಡನ ಪ್ರೀತಿ ಒಲುಮೆ ಮುಖ್ಯವಾಗುತ್ತದೆ. ಅದೇ ಇರದಿದ್ದರೆ ಆಕೆಯ ಬದುಕು ಸುಖದ ಮತ್ತು ನೆಮ್ಮದಿಯ ಬದುಕಾಗಲಾರದು. ಆ ಕಾರಣಕ್ಕಾಗಿ ಹಿತವಿಲ್ಲದ ಗಂಡನೊಂದಿಗೆ ಬಾಳಿ ಫಲವೇನು ಎಂಬುದನ್ನು ಸಮರ್ಥವಾದ ರೂಪಕಗಳ ಮೂಲಕ ಹೇಳಿಕೊಂಡ ರೀತಿ ವಿಶಿಷ್ಟವಾಗಿದೆ. ಸುಡುವ ಬೆಂಕಿಯ ಕೆಂಡಕ್ಕೆ ತಂಪು ನೀಡುವ ಗುಣವಿಲ್ಲ. ಅಂತೆಯೇ ಮಾರಟಕ್ಕೆ ತಗೆದುಕಂಡ ಮಜ್ಜಿಗೆ ಅದು ಮಾರುವವರ ವ್ಯವಹಾರಿಕ ಬುದ್ಧಿಯಿಂದಾಗಿ ಅದರಲ್ಲಿ ಅಷ್ಟಾಗಿ ಸತ್ವ ಮತ್ತು ರುಚಿ ಇರುವುದಿಲ್ಲ. ಹಾಗೆಯೇ ಗಂಡನ ಹಿತವಿಲ್ಲದಿದ್ದರೆ ಅದೊಂದು ಬಂಡ ಬದುಕಿದ್ದಂತೆ ಅಂತಹ ಬದುಕು ಬದುಕಿದರೆ ಫಲವೇನು? ಎಂಬ ಪ್ರಶ್ನೆ ಹೆಣ್ಣಿನ ವೈಚಾರಿಕ ಪ್ರಜ್ಞೆಗೆ ಸಾಕ್ಷಿಯಾಗಿದೆ. ಮತ್ತು ಆ ಧ್ವನಿಯಲ್ಲಿ ಆಕೆಯ ಪ್ರತಿರೋಧವಿದೆ.

ಒಟ್ಟಿನಲ್ಲಿ ಜನಪದ ಸಾಹಿತ್ಯದಲ್ಲಿ ಸಮಾಜದ ಅನಿಷ್ಟ ಪದ್ಧತಿಗಳಾದ ಬಾಲ್ಯ ವಿವಾಹದ ವಿರುದ್ಧ, ವರ್ಣ ತಾರತಮ್ಯದ ವಿರುದ್ಧ, ಪರಸ್ತ್ರೀ ಸಂಗದ ವಿರುದ್ಧ, ಒಪ್ಪದ ಮದುವೆಯ ವಿರುದ್ಧ, ವೇಶ್ಯಾ ಪದ್ಧತಿಯ ವಿರುದ್ಧ, ವೈಧವ್ಯದ ಅಂಧ ಅನುಕರಣೆಯ ವಿರುದ್ಧ, ಶೀಲ/ಪಾತಿರ್ವತ್ಯದ ಬಗೆಗಿನ ಶಂಕೆ-ಅನುಮಾನಗಳ ವಿರುದ್ಧ ಹೀಗೆ ಮುಂತಾದ ಸಂಗತಿಗಳ ವಿರುದ್ಧ ಮಹಿಳೆ ಪ್ರತಿರೋಧವನ್ನು ಎತ್ತಿರುವುದನ್ನು ನಾವು ಗಮನಿಸುತ್ತೇವೆ. ಇಂತಹ ಅನೇಕ ಮಹಿಳಾ ಪ್ರತಿರೋಧದ ಧ್ವನಿಗಳು ಜನಪದ ಸಾಹಿತ್ಯದಲ್ಲಿ ಹುದುಗಿವೆ.ಅವುಗಳನ್ನು ಮೊದಲು ಮುಕ್ತ ಮನಸ್ಸಿನಿಂದ ಓದುವ ಮತ್ತು ಕೇಳಿಸಿಕೊಳ್ಳುವ ವ್ಯವಧಾನ ಬೆಳೆಸಿಕೊಳ್ಳಬೇಕಾಗಿದೆ. ಹೀಗೆ ಜನಪದ ಸಾಹಿತ್ಯದುದ್ದಕ್ಕೂ ಮಹಿಳೆ ತೋರಿದ ಪ್ರತಿಕ್ರಿಯೆ ಹಾಗೂ ಪ್ರತಿರೋಧ, ಪ್ರತಿಭಟನೆಯ ಧ್ವನಿಗಳ ಮೂಲಕ ಮಹಿಳಾ ಬದುಕಿನ ಅಸ್ಥಿತ್ವ ಮತ್ತು ಆಶೋತ್ತರಗಳು ಏನಾಗಿದ್ದವು ಎಂಬುದನ್ನು ನಾವು ಅರಿಯಬಹುದು. ಜನಪದ ಸಾಹಿತ್ಯದಲ್ಲಿ ಮಹಿಳೆಯರ ಪ್ರತಿರೋಧಗಳೇ ಹೆಚ್ಚು ದಾಖಲಾಗಿವೆ. ಅಂತಹ ಹಲವು ಪ್ರತಿರೋಧಗಳಲ್ಲಿ ಮಹಿಳೆಯರ ಅಸಾಯಕತೆ ಹೆಚ್ಚು ಧ್ವನಿಸುತ್ತದೆ.
ಹೀಗೆ ಮಹಿಳೆ, ಪುರುಷ ಪ್ರಧಾನ ವ್ಯವಸ್ಥೆಯ ಅಧಿನದಲ್ಲಿಯೇ ವ್ಯವಸ್ಥೆಯನ್ನು ಅನಿವಾರ್ಯವಾಗಿ ಒಪ್ಪಿಕೊಂಡಂತೆ ತೋರಿದರೂ, ವ್ಯವಸ್ಥೆಯ ನಿಯಂತ್ರಣದ ಅಧೀನತೆಯಿಂದ ಹೊರ ಬರುವುದಕ್ಕೆ ಪ್ರಯತ್ನಿಸಿ, ಮಿತಿಗಳನ್ನು ಉಲ್ಲಂಘಿಸಿ, ವ್ಯವಸ್ಥೆಯನ್ನು ಪ್ರತಿಭಟಿಸಿ ಪರ್ಯಾಯ ವ್ಯವಸ್ಥೆಯನ್ನು ಕಟ್ಟಿಕೊಂಡ ಮಾದರಿಗಳು ಮಹಿಳೆಯರಿಂದಲೇ ಸೃಷ್ಟಿಗೊಂಡ ಜನಪದ ಸಾಹಿತ್ಯದಲ್ಲಿ ದೊರೆಯುತ್ತವೆ.
ಪರಾಮರ್ಶನ ಗ್ರಂಥಗಳು:
೧. ಜನಪದ ಸಾಹಿತ್ಯದಲ್ಲಿ ಮಹಿಳಾ ಪ್ರತಿಭಟನೆ, ಡಾ. ಮಂದಾಕಿನಿ ಪುರೋಹಿತ, (ಉಪನ್ಯಾಸ ಗ್ರಂಥಮಾಲೆ-೫೩೨) ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ೨೦೦೬
೨. ಮಹಿಳಾ ಅನುಸಂಧಾನ ಮತ್ತು ಪ್ರತಿರೋಧದ ನೆಲೆಗಳು, ಸಂ. ಡಾ. ಸುಮಂಗಲಾ ಅತ್ತಿಗೇರಿ, ಎಸ್.ಎಲ್.ಎನ್. ಪಬ್ಲಿಕೇಷನ್ ಬೆಂಗಳೂರು, ೨೦೧೮
೩. ಜಾನಪದಮತ್ತು ಮಹಿಳೆ:ಅನನ್ಯತೆಯ ನೆಲೆಗಳು, ಸಂ. ಡಾ. ಸುಮಂಗಲಾ ಅತ್ತಿಗೇರಿ, ಎಸ್.ಎಲ್.ಎನ್. ಪಬ್ಲಿಕೇಷನ್ ಬೆಂಗಳೂರು, ೨೦೧೯
   —————————————————

3 thoughts on “‘ಜನಪದ ಸಾಹಿತ್ಯದಲ್ಲಿ ಮಹಿಳಾ ಪ್ರತಿರೋಧದ ಧ್ವನಿಗಳು’ವಿಶೇಷ ಲೇಖನ-ಡಾ. ಸುಮಂಗಲಾ ಅತ್ತಿಗೇರಿ

  1. ಅತ್ಯುತ್ತಮ ಮಾಹಿತಿಪೂರ್ಣ ಲೇಖನ.ಶುಭಾಶಯ

  2. ಅತ್ಯುತ್ತಮ ಮಾಹಿತಿ ಪೂರ್ಣ ಲೇಖನ ಮೇಡಮ್.
    ಅನ್ನಪೂರ್ಣ ಸು ಸಕ್ರೋಜಿ ಪುಣೆ

Leave a Reply

Back To Top