ಆಗತಾನೇ ಕಣ್ಬಿಟ್ಟ ಮಗುವಿಗೆ ಪ್ರಪಂಚದ ಯಾವುದೇ ಆಚಾರ,ವಿಚಾರವೆಲ್ಲ ನಿರಪೇಕ್ಷ ಹಿಡಿತದಲ್ಲಿ ಮೌನವಾಗಿರುತ್ತದೆ.ಕಂಗಳ ಭಾಷೆಗೆ ಎಲ್ಲವೂ ಆಶ್ಚರ್ಯದ ಸಂಗತಿಗಳೇ! ಇಂತಹ ಅಮೂರ್ತವಾದ ಮಗುವಿಗೆ ಮೂರ್ತ ಕಲ್ಪನೆಗಳನ್ನು ಹಂತ ಹಂತವಾಗಿ ಸಮಾಜದ ಪ್ರತಿಯೊಂದು ಘಟನೆಗಳು ದೈಹಿಕ, ಮಾನಸಿಕ,ಬೌದ್ಧಿಕ ಬೆಳವಣಿಗೆಯತ್ತ ಕೊಂಡೊಯ್ಯಲು ಸಹಾಯ ಮಾಡುತ್ತವೆ. ಆಶ್ಚರ್ಯ ಆಗಬಹುದು! ಜಗತ್ತು ನಿರ್ಮಾಣವಾದಾಗ ಪ್ರಶಾಂತತೆಯ ಸ್ವರ್ಗ ಭೂಮಿಯನ್ನು ಆವರಿಸಿತ್ತು.ಆಗೆಲ್ಲ ಸೌಂದರ್ಯ ಪ್ರಜ್ಞೆ ಅಥವಾ ಅದರೊಳಗೆ ಅಡಗಿರುವ ಜೀವಂತಿಕೆಯ ರಸಾನುಭವವನ್ನು ಆಸ್ವಾಧಿಸುವ ಪುಟ್ಟ ಪ್ರಪಂಚದ ಜೀವ ಜಂತುಗಳ ಕಲರವದ ಜೊತೆಗೆ ದೈತ್ಯ ಜೀವಿಗಳ ಭಯಾನಕ ಚೆಲ್ಲಾಟಗಳಿಗೆ ಉಭಯ ಜೀವಿಗಳು ಪರದಾಡುವ ಸ್ಥಿತಿಯು ಒಂದೆಡೆ ನಿರಂತರವಾಗಿ “ಪ್ರಾಣ” ಎನ್ನುವ ‘ವಿಶೇಷ ಶಕ್ತಿಗೆ’ ಶರಣಾಗಿದ್ದು ಉಂಟು.ಇಂತಹ ಸಂಕೀರ್ಣ ಸನ್ನಿವೇಶಗಳಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ತನ್ನದೇ ಆದ ಸ್ವಾವಲಂಬಿ ಬದುಕಿದೆ ಎಂಬ ಅಂಶ ಬಲವಾಗಲು ಶತಶತಮಾನಗಳೇ ಉರುಳಿವೆ!.ಈ ಅಭಿವೃದ್ಧಿಯ ಸಂಕೇತವೇ  “ಮಂಗನಿಂದ ಮಾನವ” ಎಂದು ಉಲ್ಲೇಖಿಸಲಾಗಿದೆ.ಪ್ರಗತಿಯಂತೂ ಅವ್ಯಾಹತವಾಗಿ ಆಗಲೂ ನಡೆದಿತ್ತು,ಮುಂದೆಯೂ ನಡೆಯುವುದು!.

ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯ.
ಇವ ನಮ್ಮವ, ಇವ ನಮ್ಮವ, ಇವನಮ್ಮವನೆಂದೆನಿಸಯ್ಯ
ಕೂಡಲಸಂಗಮದೇವಯ್ಯ ನಿಮ್ಮ ಮನೆಯ ಮಗನೆಂದೆನಿಸಯ್ಯ.
ವಿಶ್ವಗುರು ಬಸವಣ್ಣನವರ ವಚನ ಯುಗಯುಗಳಿಗೂ ಅನ್ವಯ.

ಹೌದು…ಇಷ್ಟಲ್ಲ ಮಾತು ಕಥೆ ಎಕೆಂದರೆ,ಮನುಷ್ಯ ಎಂಬ ಬುದ್ದಿವಂತ ಪ್ರಾಣಿ ತನ್ನೆಲ್ಲ ಅವಶ್ಯಕತೆಗೆ ಅಥವಾ ಇನ್ನೇನನ್ನೋ ಅವಿಷ್ಕರಿಸಲು, ಅದರಿಂದ ಲಾಭ ಪಡೆದು ತಮ್ಮ ಅಸ್ತಿತ್ವಕ್ಕೆ ತಾವೇ ಪರೋಕ್ಷವಾಗಿ ಬೆನ್ನು ಚಪ್ಪರಿಸುವ ಕೆಲಸಕ್ಕೆ ಕೈಜೋಡಿಸುವ ಅಸಹಾಯಕ ಜೀವಿಗಳ ಮೇಲೆ ಪ್ರಭಾವ ಬೀರುವ ಮೂಲಕ ತಾನೇ ಎಲ್ಲಾ ಎಂಬಂತೆ ಸಮಯ ಅಸಾಧಾರಣ!. ಇದ್ಯಾಕೆ ಎಂಬ ಪ್ರಶ್ನೆ? ಹುಟ್ಟುತ್ತ ಯಾರು ಎಲ್ಲ ಬಲ್ಲರಾಗಿರುವುದಿಲ್ಲ,ಆಸ್ತಿ ಅಂತಸ್ತಿನ ಕಮಾನುಗಳಿಲ್ಲದೆ,ನಿರಾಡಂಭರದ ಹೊಸ್ತಿಲಲ್ಲಿ  ಮನುಷ್ಯ ಉಸಿರಾಡುತ್ತಿರುವಾಗ,ಅವನ ಉಸಿರನ್ನು ಒಂದೆಡೆಗೆ ಸೀಮಿತಗೊಳಿಸುವ ಹುನ್ನಾರದ ನಡುವೆ ಅಲ್ಪಸ್ವಲ್ಪ ವ್ಯತ್ಯಾಸಗಳು ಕಂಡು ಬಂದರು ಅದೇನೇ ಅಪರಾಧವೆಂದು ಪರಿಗಣಿಸಿ ಶಿಕ್ಷಿಸುವ ಮೂಲಕ,ಪ್ರಾಣಿಗಳಿಗಿಂತ ಕೀಳಾಗಿ ನಡೆಸಿಕೊಳ್ಳುವ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದವರ ಗಂಟಲನ್ನೆ ಕಿತ್ತು ನರಿ ನಾಯಿಗಳಿಗೆ ಊಣಬಡಿಸಿದ ಅದೆಷ್ಟೋ ಕಹಾನಿಗಳು ಇಂದಿಗೂ ಪ್ರಸ್ತುತ.

“ಸ್ವಾತಂತ್ರ್ಯ” ಎಂಬ ಶಬ್ದ ಕಿವಿಗಿಂಪಾದರೂ,ದಣಿದ ದೇಹಕೆ ಅಪ್ಯಾಯಮಾನವಾಗುವುದಿಲ್ಲ.ಕಾರಣ ಸ್ವಾತಂತ್ರ್ಯ ಎಂಬ ಸ್ವಚ್ಛಂದದ ಗಿಳಿಯನ್ನು ಪಂಜರದಿಂದ ಬಾನಿನೆತ್ತರಕೆ ಹಾರಲು ಬಿಡುಗಡೆಗೊಳಿಸುವವರು ಯಾರು?…… ಒಂದರ್ಥದಲ್ಲಿ” ಬೆಕ್ಕಿಗೆ ಗಂಟೆ ಕಟ್ಟುವವರಾರು”? ಎಂಬ ಪ್ರಶ್ನೆ? ವ್ಯವಸ್ಥೆಯ ಹೊರನಿಂತು ಮಾತಾಡುವುದು ಸುಲಭ!,ಅದೇ ಒಳನಿಂತು‌ ಮಾತನಾಡುವ ಧೈರ್ಯ ಯಾರಿಗಿದೆ? ಆದರೂ’ ಸ್ವಾತಂತ್ರ್ಯ’ ನಮಗೆ ದಕ್ಕಿದೆ!. ನಮ್ಮ ಅದೃಷ್ಟ!.
ಮಕ್ಕಳಿಗೆ ದೇಶಭಕ್ತರ ಒಂದಿಷ್ಟು ಹೆಸರು ಹಾಗೂ ಅವರ ಜೀವನದ ಗುರಿ ಉದ್ದೇಶ,ಅವರ ಬಲಿದಾನದ ವಿವರಣೆ ಓದಿ ತಿಳಿ, ಇನ್ನೊಬ್ಬರಿಗೂ ತಿಳಿಸೆಂಬ ಭಾವ ಬಿತ್ತಿದಾಗ,ಅವರಲ್ಲೊಂದು ಹೊಸ ಸಂಚಲನದ ಗಾಳಿ ಬೀಸಬಹುದೇನೋ…!

ನಮ್ಮದೇಶದ ಹಿರಿಮೆಯನ್ನು “ಎತ್ತಿಹಿಡಿದ ಲಿಖಿತ ಸಂವಿಧಾನ ” ಇತರ ದೇಶಗಳಿಗೆ ಮಾದರಿ.ಇಂತಹ ನಾಡಿನಲ್ಲಿ ಬದುಕುವ  ಪ್ರತಿಯೊಬ್ಬ ವ್ಯಕ್ತಿಯು ಸಂವಿಧಾನಕೆ ತಲೆಬಾಗುವುದು ಗೌರವ ಸಲ್ಲಿಸಿದಂತೆ.ಇಂತಹ ಅಭಿಮಾನ ಹೆಚ್ಚಿಸುವುದು ರಾಷ್ಟ್ರೀಯ ಹಬ್ಬಗಳೆಇಂದ. ಇಡೀ ದೇಶದ ತನು-ಮನದಲ್ಲಿ ಏಕತಾನತೆಯ ಸಂಚಲನ!. ವರ್ಷಪೂರ್ತಿ ಅದರ ಬಗ್ಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಏನೆಲ್ಲ ವರ್ಣನೆ ಅಥವಾ ಪ್ರತೀಕವಾಗಿ ತಮ್ಮೊಳಗೆ ಅದನ್ನು ದಾಖಲಿಸಿ, ಪ್ರತಿಬಿಂಬಿಸುವತ್ತ ಮೈಕೊಡವಿದ ಮನಸ್ಸುಗಳೆಷ್ಟೋ.ಸ್ವಾತಂತ್ರ್ಯವು ಒಂದು ರಾಷ್ಟ್ರ , ದೇಶ ಅಥವಾ ರಾಜ್ಯದ ಸ್ಥಿತಿಯಾಗಿದೆ, ಇದರಲ್ಲಿ ನಿವಾಸಿಗಳು ಮತ್ತು ಜನಸಂಖ್ಯೆ, ಅಥವಾ ಅದರ ಕೆಲವು ಭಾಗಗಳು, ಅದರ ಪ್ರದೇಶದ ಮೇಲೆ ಸ್ವ-ಸರ್ಕಾರ ಮತ್ತು ಸಾಮಾನ್ಯವಾಗಿ ಸಾರ್ವಭೌಮತ್ವವನ್ನು ಚಲಾಯಿಸುತ್ತವೆ. ಸ್ವಾತಂತ್ರ್ಯದ ವಿರುದ್ಧವಾದವು ಅವಲಂಬಿತ ಪ್ರದೇಶ ಅಥವಾ ವಸಾಹತು ಸ್ಥಿತಿಯಾಗಿದೆ.

ಎಲ್ಲ ಪ್ರಜೆಗಳು ನಿಜವಾದ ಸ್ವಾತಂತ್ರ್ಯಯೆಂದರೆ, ಬ್ರಿಟಿಷ್ ಸಾಮ್ರಾಜ್ಯದ ವಿರುದ್ದ ಗೆದ್ದು ಪಡೆದ ಸ್ವಾತಂತ್ರ್ಯ ಎಂದುಕೊಂಡರೆ ಅದು ಹೋರಾಟದ ಪ್ರತಿಫಲ!,ನಿಜವಾದ ಸ್ವಾತಂತ್ರ್ಯ ಸಿಗುವುದು, ಮನುಷ್ಯ ಮನುಷ್ಯರ ನಡುವೆ ಸಂವಹನ ಮತ್ತು ಮಾನವೀಯ ಮೌಲ್ಯಗಳ ಬದುಕು ಯಾವುದರ ಮೇಲೆ ನಿಂತಿದೆ? ಎಂಬುದರ ಬಗ್ಗೆ ತಿಳಿಯುವುದು ಈಗೀಗ ಅನಿವಾರ್ಯವಾಗಿದೆ..ಬೇಕಾಬಿಟ್ಟಿಯಾಗಿ ಬದುಕುವುದು ಸ್ವಾತಂತ್ರ್ಯ ಅಲ್ಲ! ಹೋರಾಡಿ ಮಡಿದ ದೇಶಭಕ್ತರ ಒಂದಿಷ್ಟು ಕುರುಹುಗಳು, ಅವರ ಬಲಿದಾನದ ಮಹತ್ವದ ಜೊತೆಗೆ ಮನಸೋಯಿಚ್ಛೆ ವರ್ತಿಸುವ ಅಧಿಕಾರ ನಮಗಿಲ್ಲವೆಂಬ ಸಾಮಾನ್ಯ ಅರಿವು ಮುಖ್ಯ.ಮನುಷ್ಯನ ವಿಕಸಿತ ಮನೋಭಿಲಾಷೆಗಳು ಒಂದು ಚೌಕಟ್ಟನ್ನು ಬಳಸಿ ಅದರಡಿಯಲ್ಲಿ ಹೇಗೆಲ್ಲ ಇರಲು ಸಾಧ್ಯ? ಇತಿಮಿತಿಗಳನ್ನು ಅರಿತುಕೊಂಡು ಮುನ್ನಡೆವ ಮಾರ್ಗವನ್ನು ಅಳವಡಿಸಿಕೊಂಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು.

ನಮಗೆಲ್ಲ ತಿಳಿದಿದೆ…ಸಂವಿಧಾನದ ರಚನೆಯ ಹಿನ್ನೆಲೆ, ಸಂವಿಧಾನ ಶಿಲ್ಪ ಡಾ.ಬಿ.ಆರ್‌.ಅಂಬೇಡ್ಕರ್ ರವರ ದಿವ್ಯ ದೃಷ್ಟಿ ಜೊತೆಗೆ ಜನಸಾಮಾನ್ಯರಿಗೆ ಅವಶ್ಯವಾದ ಕಾನೂನು ಪರಿಚ್ಛೇದಗಳಲ್ಲಿ ಮೂಲಭೂತ ಹಕ್ಕುಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದ್ದಾರೆ. ಸಂವಿಧಾನದಲ್ಲಿ 448 ವಿಧಿಗಳು, 25 ಭಾಗಗಳು, 12 ಶೆಡ್ಯೂಲ್, 5 ಅನುಬಂಧಗಳಿವೆ. ಸಂವಿಧಾನ ರಚನಾ ಸಮಿತಿಯಲ್ಲಿ 284 ಮಂದಿ ಸದಸ್ಯರಿದ್ದರು.ಡಾ.ಬಾಬಾಸಾಹೇಬ ಅಂಬೇಡ್ಕರ್‌ ನೇತೃತ್ವದಲ್ಲಿ ಅನೇಕ ತಜ್ಞರು ಶ್ರಮ ವಹಿಸಿದ ಫಲವಾಗಿ 1949ರ ನವೆಂಬರ್‌ 26ರಂದು ಸಂವಿಧಾನ ಪೂರ್ಣಗೊಂಡಿತ್ತು. ಈ ನೆನಪಿಗಾಗಿಯೇ ನವೆಂಬರ್‌ 26ನ್ನು ‘ರಾಷ್ಟ್ರೀಯ ಸಂವಿಧಾನ ದಿನ’ವಾಗಿ ಆಚರಿಸಲಾಗುತ್ತಿದೆ’.
 ಹಕ್ಕುಗಳಲ್ಲಿ ಈ ಸ್ವಾತಂತ್ರ್ಯವೂ ಒಂದಾಗಿರುವುದನ್ನು ಬಲ್ಲೆವು. ಹಾಗಿದ್ದರೂ,ಸ್ವಾತಂತ್ರ್ಯದ ಕಲ್ಪನೆಗೆ ಭಿನ್ನ ಭಿನ್ನ ರೀತಿಯ ವ್ಯಾಖ್ಯಾನಗಳು ಪ್ರಚಲಿತದಲ್ಲಿರುವುದು,ಪ್ರಜೆಯ ವಿಭಿನ್ನ ಅಭಿಪ್ರಾಯಗಳು ವೈಯಕ್ತಿಕ ಸ್ವಾತಂತ್ರ್ಯದ ಪರಿಕಲ್ಪನೆಯು ಯಾವುದೇ ರೀತಿಯ ಅನಿಯಂತ್ರಿತ ಮತ್ತು ನ್ಯಾಯಸಮ್ಮತವಲ್ಲದ ಸಂಯಮದ ಅಡಿಯಲ್ಲಿ ವ್ಯಕ್ತಿಯು ತನಗೆ  ವರ್ತಿಸಬಹುದಾದ ಪರಿಸ್ಥಿತಿಗಳ ಲಭ್ಯತೆ ಎಂದರ್ಥವಾಗಿದೆ.
ದೇಶೀಯ ಸ್ವಾತಂತ್ರ್ಯವು ಮಾನವರು ತಮ್ಮ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಲು ಅವಕಾಶವನ್ನು ನೀಡುವ ರಾಜ್ಯದಲ್ಲಿ ಸ್ವಾತಂತ್ರ್ಯವು ಒಂದು ಪ್ರಮುಖ ಸ್ಥಿತಿಯಾಗಿದೆ.ಭಾರತೀಯ ಸಂವಿಧಾನದ ಮೂಲಭೂತ ಹಕ್ಕುಗಳು ಭಾರತದ ಸಂವಿಧಾನವು ಅದರ ನಾಗರಿಕರಿಗೆ  ಮೂಲಭೂತ ಹಕ್ಕುಗಳಾಗಿವೆ. ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಈ ಹಕ್ಕುಗಳು ಅತ್ಯಗತ್ಯ. ಮಾನವ ಘನತೆಯನ್ನು ಕಾಪಾಡಲು ಅವು ಅಗತ್ಯವಾಗಿವೆ. 

ಸ್ವಾತಂತ್ರ್ಯದ ಹಕ್ಕನ್ನು ಆರ್ಟಿಕಲ್ 19 ರಿಂದ ಆರ್ಟಿಕಲ್ 22ರಲ್ಲಿ ಸ್ಪಷ್ಟ ಪಡಿಸಲಾಗಿದ್ದು,ಆರ್ಟಿಕಲ್ 19 – ಭಾರತದ ನಾಗರಿಕರಿಗೆ ಆರು ಹಕ್ಕುಗಳನ್ನು ಖಾತರಿಪಡಿಸುತ್ತದೆವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ
ಶಾಂತಿಯುತವಾಗಿ ಮತ್ತು ಶಸ್ತ್ರಾಸ್ತ್ರಗಳಿಲ್ಲದೆ ಒಟ್ಟುಗೂಡುವ ಸ್ವಾತಂತ್ರ್ಯ
ಸಂಘಗಳು ಅಥವಾ ಒಕ್ಕೂಟಗಳನ್ನು ರಚಿಸುವ ಸ್ವಾತಂತ್ರ್ಯ
ಭಾರತದ ಭೂಪ್ರದೇಶದಾದ್ಯಂತ ಮುಕ್ತವಾಗಿ ಚಲಿಸುವ ಸ್ವಾತಂತ್ರ್ಯ
ಭಾರತದ ಭೂಪ್ರದೇಶದ ಯಾವುದೇ ಭಾಗದಲ್ಲಿ ವಾಸಿಸಲು ಮತ್ತು ನೆಲೆಸಲು ಸ್ವಾತಂತ್ರ್ಯಬಿಟ್ಟುಬಿಡಲಾಗಿದೆ.ಯಾವುದೇ ವೃತ್ತಿಯನ್ನು ಅಭ್ಯಾಸ ಮಾಡಲು ಅಥವಾ ಯಾವುದೇ ಉದ್ಯೋಗ, ವ್ಯಾಪಾರ ಅಥವಾ ವ್ಯಾಪಾರವನ್ನು ಕೈಗೊಳ್ಳಲು ಸ್ವಾತಂತ್ರ್ಯ ನೀಡಲಾಗಿದೆ. ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆಯು ಪ್ರಮುಖವಾಗಿದೆ.

ಒಟ್ಟಾರೆಯಾಗಿ….ಸ್ವಾತಂತ್ರ್ಯ ಎನ್ನುವುದು ಇನ್ನೊಬ್ಬರ ನೆಮ್ಮದಿಯನ್ನು ಕಸಿದುಕೊಳ್ಳುವುದಲ್ಲ.ನಮಗೆಷ್ಟು ಬದುಕಲು ಹಕ್ಕಿದೆಯೋ ಇತರರಿಗೂ ಅಷ್ಟೇ ಹಕ್ಕಿದೆಯೆಂಬುದನ್ನು ತಿಳಿದಿರಬೇಕು.ಸ್ವಾರ್ಥದ ಬೆನ್ನಟ್ಟುವ ಬದಲು ಇದ್ದುದರಲ್ಲೆ ನೆಮ್ಮದಿ ಕಾಣುವ ವಿಶಾಲ ಮನೋಭಾವ ಬರಬೇಕು.ಜಗತ್ತು ಸಾಮರಸ್ಯದ ಮೇಲೆ ನಿಂತಿದೆಯೆಂಬುದನ್ನು ಮರೆಯಬಾರದು.’ರಾಷ್ಟ್ರಕವಿ ಕುವೆಂಪು’ ರವರ ಮಾತಿನಂತೆ “ಮನುಜಮತ ವಿಶ್ವಪಥ”ದತ್ತ ನಾವೆಲ್ಲ ಹೆಜ್ಜೆಯಿಡಬೇಕಿದೆ.ಸ್ವಾತಂತ್ರ್ಯ  ಪ್ರಪಂಚ ನೀಡಿರುವ‌ ಕ್ರಿಯಾಶೀಲ ಜೀವಂತಿಕೆ.ದುರುಪಯೋಗದ ನಶೆಯೆರದಂತೆ ಬದುಕಿದರೆ ಅದೆ ಸಾರ್ಥಕ ಜೀವನ….ಸ್ವಾತಂತ್ರ್ಯ ಕೇವಲ ಹೆಸರಿಗಷ್ಟೆ ಇರದೆ ಭವ್ಯ ಭವಿಷ್ಯಕ್ಕೆ ನಾಂದಿ ಹಾಡಲಿ….


11 thoughts on “

    1. ಅತೀ ಸುಂದರ ಅಪರೂಪದ ಅಧ್ಭುತ ಲೇಖನ. ಮತ್ತೆ ಮತ್ತೆ ಓದಬೇಕು ಎಂಬ ಭಾವ.

  1. ಸ್ವಾತಂತ್ರ್ಯದ ಮಾತುಗಳನ್ನು ನಿನ್ನ ಅಂಕಣ ಬರಹದಲ್ಲಿ ಸುಂದರವಾಗಿ ಮೂಡಿ ಬಂದಿದೆ.

  2. ಅದ್ಭುತ ಮಾತು… ಸತ್ಯಕ್ಕೆ ಹಿಡಿದ ಕೈಗನ್ನಡಿ ಎಂಬಂತೆ ಸಂವಿಧಾನ ಪ್ರತಿಯೊಬ್ಬ ವ್ಯಕ್ತಿಯೂ ಗೌರವ ಸಮಾನತೆಯಿಂದ ಜೀವನ ನಡೆಸಲು ರೂಪಿಸಿರುವ ಒಂದು ಮಾರ್ಗವೇ ಸರಿ… ಇಂಥಹ ಒಂದು ಶ್ರೇಷ್ಠ ಸಂಗತಿಯನ್ನು ಅರ್ಥಗರ್ಭಿತವಾಗಿ ಪದಗಳಲ್ಲಿ ಹೆಣೆ ಇಡಿದ ನಿಮ್ಮ ಜ್ಞಾನಕ್ಕೆ ಸದಾ ನನ್ನ ನಮನ….

    ಎಸ್.ನಾಯಕ

  3. ಸ್ವಾತಂತ್ರ್ಯ ಅಂದ್ರೆ ಏನೇನು ಒಳಗೊಂಡಿರುತ್ತದೆ ಎಂಬುದನ್ನು ಮನಮುಟ್ಟುವಂತೆ ಬರೆದಿದ್ದಿರಿ…ಲೇಖನ ಚೆನ್ನಾಗಿದೆ..ಸಂಗ್ರಹ ಯೋಗ್ಯವಾಗಿದೆ..

  4. ಸೂಪರ್. ತುಂಬಾ ಚೆನ್ನಾಗಿ ವಿಷಯ ತಿಳಿಸಿ ಕೊಟ್ಟಿದ್ದೀರಾ. ಶುಭಾಶಯಗಳು..

  5. ಹಲವಾರು ಮಾಹಿತಿಗಳನ್ನೊಳಗೊಂಡ ಅದ್ಭುತ ಸುಂದರ ಲೇಖನ…

Leave a Reply

Back To Top