ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ ಅವರ
ಗಜಲ್
ಬಿಸಿಯುಸಿರು ನಿಡುಸುಯ್ದಿದೆ ಮಹಲಿನೊಳಗೆ ತಲೆಬಾಗಿಲು ತೆರೆದರೂ ಗೆಳತಿ
ಮನದ ಮಾತುಗಳು ಸಿಲುಕಿವೆ ಎದೆಯೊಳಗೆ ತುಟಿಗಳು ಬಿರಿದರೂ ಗೆಳತಿ
ಸಿಪಾಯಿಗಳಾಗಿ ಸುತ್ತಿವೆ ಒಳಂಗಳದ ಗೋಡೆಗಳು ನನ್ನ ಬಿಡದಂತೆ
ರೇಶಿಮೆಯ ಪರದೆಗಳು ಸೋಕುತಿವೆ ಗಳಿಗೆಗೊಮ್ಮೆ ಮೆಲ್ಲನೆ ನಾ ಸರಿದರೂ ಗೆಳತಿ
ಕೋಣೆಯ ಬೆಳಕಿಂಡಿಯ ಬೆಳಕಲಿ ಕಣ್ತೆರೆದು ಮುದ್ದೆಯಾಗಿ ಬಿದ್ದ ಬದುಕಿದು
ಹೊಸ್ತಿಲ ಹೊರಗೆ ಹೆಜ್ಜೆ ಇಡುವುದ ಮರೆತೆ ವಯಸು ಮೀರಿದರೂ ಗೆಳತಿ
ಕೈಗಳ ಮದರಂಗಿಯ ಕೆಂಬಣ್ಣ ಕರಗುತಿದೆ ಕುದಿವ ಭಾವಗಳ ಬಿಸಿಗೆ
ಕಂಗಳು ಇನ್ನೂ ಸೋತಿಲ್ಲ ಅರಿವಿಲ್ಲದಲೆ ಕಂಬನಿ ಸುರಿದರೂ ಗೆಳತಿ
ಕೇಳುವರು ಯಾರಿಲ್ಲ ಬೇಗಂ ಳ ಅಹವಾಲನು ನಿರ್ದಯ ರಿವಾಜುಗಳ ಕಟಕಟೆಯಲ್ಲಿ
ಒಣ ಪ್ರತಿಷ್ಠೆಯ ಸಂಭ್ರಮವಿಲ್ಲಿ ಡೋಲಿ ಹತ್ತಿ ನನ್ನ ಜನಾಜಾ ಸಾರಿದರೂ ಗೆಳತಿ
ಹಮೀದಾ ಬೇಗಂ ದೇಸಾಯಿ
ಗಝಲ್ ನ ಮಾರ್ಮಿಕತೆ ತೀಕ್ಷ್ಣವಾಗಿ ಹೊರಹೊಮ್ಮಿದೆ.
ಸ್ಪಂದನೆಗೆ ಧನ್ಯವಾದಗಳು ತಮಗೆ.
Abhinandanegalu Hamida