ಎಷ್ಟೊಂದು ಪಠ್ಯಪುಸ್ತಕಗಳು, ನಿಯತಕಾಲಿಕೆಗಳು, ಚಲನಚಿತ್ರಗಳು, ಧಾರಾವಾಹಿಗಳು,ಸಾಕ್ಷ್ಯಚಿತ್ರಗಳು,ಪತ್ರಿಕೆಯ ಬಹುತೇಕ ಭಾಗಗಳು ಪರಿಸರ ಸಂರಕ್ಷಣೆ ಅಥವಾ ಅದರ ದುಷ್ಪರಿಣಾಮಗಳ ಬಗ್ಗೆ ಸವಿಸ್ತಾರವಾಗಿ ದೃಕ್ ಶ್ರವಣ ಮಾಧ್ಯಮಗಳು ಎಚ್ಚರಿಕೆಯ ಗಂಟೆ ಬಾರಿಸುತ್ತಿದ್ದರೂ,ಅದ್ಯಾವುದರ ಬಗ್ಗೆ ಕಾಳಜಿಯ ಲವಲೇಶದ ಅಂಶ ಕಾಣಸಿಗದಿರುವುದು ದುರಂತಕ್ಕೆ ಮುನ್ನುಡಿ ಬರೆದಂತೆ! ಇಂದಿನ ಪ್ರತಿ ಕ್ಷಣ ಅನಾಹುತಗಳು ಅವ್ಯಾಹತವಾಗಿ ನಡೆಯುತ್ತಿರುವ ದೃಶ್ಯಗಳನ್ನು ಕಣ್ಣಾರೆ ಕಾಣುವಂತಹ ದುರಾದೃಷ್ಟ ನಮ್ಮ ಪಾಲಿಗೆ ಬಂದಿರುವುದು ಅಸಹನೀಯ! ಇಂತಹ ಘಟನೆಗಳು ಪ್ರತಿ ವರ್ಷ ಅಥವಾ ವರ್ಷದಿಂದ ವರ್ಷಕ್ಕೆ ವರುಣನನು ತನ್ನ ಆರ್ಭಟದ ಮುದ್ರೆಯನ್ನು ಒತ್ತಿ ಬೆಚ್ಚಿಬೀಳಿಸುತ್ತಿದ್ದರೂ,ಕೊಂಚವು ತಲೆಕೆಡಿಸಿಕೊಳ್ಳದೇ…ತಾತ್ಕಾಲಿಕ ಪರಿಹಾರ ನೀಡಿ ಕೈತೊಳೆಯವ ಹನ್ನಾರಕೆ,ಬಲಿಯಾಗುವ ಅದೆಷ್ಟೋ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಶಾಶ್ವತವಾಗಿ ಸ್ಥಳಾಂತರಗೊಳಿಸುವ ದೃಢವಾದ,ಗಟ್ಟಿಮುಟ್ಟಾದ ನಿರ್ಧಾರ ಕೈಗೊಳ್ಳುವ ಮನಸ್ಥಿತಿ ಇನ್ನಾದರು ಬಂದರೆ ಒಳಿತೆಂಬ ಭಾವ ಪ್ರತಿವರ್ಷ ನೆನಪಾಗುವುದಂತು ಸತ್ಯ.

ಕೊಚ್ಚಿ ಹೋಗುವ ಮುನ್ನ
ಹಿಡಿದಿಟ್ಟುಕೊಳ್ಳುವ
ಜೀವ ಕಳೆದುಕೊಳ್ಳುವ ಮುನ್ನ
ಸುರಕ್ಷತೆಯ ಅರಿಯುವ..

ಕರಾವಳಿಯೆಂದಾಕ್ಷಣ ಸಮುದ್ರಅಲೆಗಳು, ಸುನಾಮಿ,ಚಂಡಮಾರುತದ ಸಂಚಲನ ಇವೆಲ್ಲ ಕಡಲತೀರದಲ್ಲಿ ವಾಸವಾಗಿರುವ ಜನಸಮುದಾಯಕ್ಕೆ ಹೊಸತೆನಲ್ಲ!.ಆದರೂ ಸಮುದ್ರದ ಮೊರೆತ,ಕೊರತಗಳ ನಡುವೆ ಅತಂತ್ರದ ಬದುಕು ಕಟ್ಟಿಕೊಂಡು ಹೈರಾಣಗೊಳ್ಳುವುದನ್ನು ಕಂಡಿದ್ದಿದೆ. ಸುಧಾರಿಸಿಕೊಂಡು ಜೀವನ ಕಟ್ಟಿಕೊಂಡವರು ಸಾವಿರಾರು ಕುಟುಂಬಗಳು ನಮ್ಮೆದುರಿಗಿವೆ. ಇಲ್ಲಿಯ ಜನಜೀವನ ಕೊಂಚ ಭಿನ್ನ!ತೆಂಗು,ಅಡಿಕೆ,ಭತ್ತ,ಮಾವು,ಗೇರುಬೀಜ,ಕಾಳಮೆಣಸು,ಮೀನು ಹೀಗೆ,ಇವಿಷ್ಟು ಇವರ ಜೀವಾಳ.ಅಷ್ಟಲ್ಲದೆ ಸಮುದ್ರವನ್ನು,ಸಮುದ್ರದ ಸಂಪತ್ತು ಭೂತಾಯನ್ನು ನಂಬಿರುವ ಅಂಬಿಗರು,ಮೀನುಗಾರರು ವರ್ಷದ ಎಲ್ಲ ಕಾಲದಲ್ಲಿ ಬದುಕುವುದಕ್ಕೂ ಕಟ್ಟಿಕೊಂಡವರಿಗೆ, ಅನಿರೀಕ್ಷಿತವಾಗಿ ಎದುರಾಗುವ ಇಂತಹ ಸುನಾಮಿ, ಚಂಡಮಾರುತಕ್ಕೆ ಕಂಗೆಟ್ಟು ಬದುಕನ್ನು ಬೀದಿಗೆ ನಿಲ್ಲಿಸಿ ಕುಟುಂಬಗಳು
ಸಹಾಯದ ನಿರೀಕ್ಷೆಯಲ್ಲಿರುವುದಂತು ದಿಟ!.

ಇದು ಒಂದೆಡೆಯಾದರೆ,ಮಳೆಗಾಲ ಯಾರಿಗೆಲ್ಲ ಪ್ರೀಯ? ನಮ್ಮಂತವರಿಗೆ,ಮಕ್ಕಳಿಗೆ, ರೈತನಿಗಂತೂ ಹಬ್ಬವೋ ಹಬ್ಬ! ಇಡೀ ಜಗತ್ತು ನಿಂತಿರುವುದು ಅನ್ನದ ಮೇಲೆ‌ ಹಸಿವನ್ನು ನೀಗಿಸುವ ಆಹಾರ ಒಂದಿದ್ದರೆ ಬದುಕು ಸಾರ್ಥಕ! ಹಿಂದಿನ ಕಾಲದ ಮಳೆಗಾಲ ಕಂಡವರಿಗೆ,ಈಗಿನ ಮಳೆಗಾಲದ ಅಂದಾಜು ಆಗಬಹುದು!.ಈಗೀಗ
ಮಳೆಗಾಲ ಬಂತೆಂದರೆ ಇಡೀ ಕರಾವಳಿಯು ರಂಗು ರಂಗಾಗಿರದೇ ಭಯಾನಕ ರೂಪ ತಾಳಿ,ವರುಣನ ರೌದ್ರನರ್ತಕ್ಕೆ ತತ್ತರಿಸುವ ಜನಜೀವನ ಯಾರಿಗೂ ಬೇಡ..ಮತ್ತು..ನರಕ ಎಲ್ಲಿದೆಯೆಂದು ಹುಡುಕುವುದು ಬೇಡ ಅನ್ನಿಸಿದೆ.ಮಳೆಯಾರ್ಭಟದ ಸಣ್ಣ ಸಣ್ಣ ತುಣುಕುಗಳು,ನಮ್ಮ ನಮ್ಮ ಮನೆಯ ಆಸುಪಾಸು,ಬೀದಿಗಳಲ್ಲಿ ಗೋಚರಿಸುತ್ತದೆ. ಎತ್ತರದ ಪ್ರದೇಶದಲ್ಲಿ ವಾಸವಿರುವವರ ಪಾಡು ಬಹುತೇಕ ಸುರಕ್ಷಿತವಾದರೂ,ಭೂಕಂಪನದಂತಹ ಪ್ರಕೃತಿ ವಿಕೋಪಕ್ಕೆ ಸಿಲುಕಿ ಗುಡ್ಡಗಳು ನೆಲಕ್ಕುರುಳುವ‌ ಸಂದರ್ಭದಲ್ಲಿ ಪ್ರಾಣಹಾನಿ ಕೇವಲ ಮನುಷ್ಯರದಷ್ಟೆ ಅಲ್ಲ,ಪ್ರಾಣಿ,ಪಕ್ಷಿ,ಗಿಡಮರಗಳು  ನಿರಪರಾಧಿಯಾಗಿದ್ದರು,ಜಲಸಮಾಧಿಯಾದ ಘಟನೆಗಳನ್ನು ನೆನೆದಷ್ಟು ಕರುಳು ಕಿತ್ತು ಬರುತ್ತದೆ.

ಹುಬ್ಬಳ್ಳಿ ಅಂಕೋಲಾ ಮಾರ್ಗದಲ್ಲಿ ಅರಬೈಲ್ ಘಟ್ಟ ಅಥವಾ ಅರಬೈಲ್ ಘಾಟ್ ಕೂಡ ಎರಡು ಮೂರು ವರ್ಷದ ಹಿಂದೆ ಧಾರಾಕಾರ ಮಳೆಗೆ ಗುಡ್ಡ ಕುಸಿದು ರಸ್ತೆ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡ ಸಮಯ ನೆನದರೆ ಈಗಲೂ ಭಯ ಹುಟ್ಟುತ್ತಿತ್ತು.ಕಣ್ಣ ಮುಂದೆ ಗುಡ್ಡ ಕುಸಿದ ದೃಶ್ಯ ಕಂಡಾಗ ಜೀವ ಕೈಯಲ್ಲಿ ಹಿಡಿದರೂ ಬಸ್ಸು ಇಡಗುಂದಿ ಯಾವಾಗ ತಲುಪುದೋ ಎಂಬ ಆತಂಕ ಕಾಡದೆ ಇರುತ್ತಿರಲಿಲ್ಲ.೧೦ ಕಿ.ಮೀ ಅಂತರದ ಕರವಿಂಗ/ತಿರುವುಮುರಿವಿನ ನಡುವೆ ಪ್ರಕೃತಿ ಸೌಂದರ್ಯ‌ ಆಸ್ವಾದಿಸುವ ಕಂಗಳಿಗೆ ಮಳೆಗಾಲದಲ್ಲಿ ಪ್ರಕೃತಿಯ ಇನ್ನೊಂದು ಮುಖ ಎದುರಾದಾಗ ಎದೆ ಝಲ್ ಎನ್ನದೆ ಇರಲಾರದು.!
ಗುಡ್ಡ ಕುಸಿತ ಅನಿರೀಕ್ಷಿತವೇ ಎಂಬ ಪ್ರಶ್ನೆ ಕಾಡದಿರಲಿಲ್ಲ!

ಸರಳಿಕರಣದ ನೆಪದಲ್ಲಿ, ಸುವ್ಯವಸ್ಥೆಯ‌ ಗುಂಗಿನಲ್ಲಿ,ಸಾಧಕ/ ಭಾದಕಗಳನ್ನು ಸವಿಸ್ತಾರವಾಗಿ ಅರ್ಥೈಸಿಕೊಳ್ಳದೆ;ಅವೈಜ್ಞಾನಿಕವಾಗಿ ರಸ್ತೆ ಅಗಲಿಕರಣದ ಕಾರ್ಯ ಕೈಗೊಳ್ಳುವ ಮೂಲಕ ಜನಜೀವನವನ್ನು ಅಸ್ತವ್ಯಸ್ತತೆಗೆ ದೂಡಿದ ಕ್ಷಣಗಳು ನಮ್ಮ ಆಧುನಿಕತೆಯ ಅಸುರಕ್ಷಿತ ಕಾಮಗಾರಿಗಳು….ಉತ್ತರ ಕನ್ನಡ ಜಿಲ್ಲೆಯ ಶಿರೂರ ಗುಡ್ಡಕುಸಿತಕ್ಕೆ ಬಲಿಯಾದ ಜೀವಗಳಿಗೆ ಕಾರಣಿಕರ್ತರಾರು??…ಬಾಳಿ ಬದುಕಬೇಕಿದ್ದ ಹಸುಗೂಸುಗಳು ಮಣ್ಣಲಿ ಉಸಿರು ಚಲ್ಲಿದ ಸಮಯ ಉಹಿಸಲು ಅಸಾಧ್ಯ! ಗಂಗಾವಳಿಯ ಆರ್ಭಟ, ಗುಡ್ಡ ಕುಸಿದು ಅಂಗಾತ ಚಲ್ಲಿದ ಮಣ್ಣಿನ ರಾಶಿಯ ಮರಣ ಮೃದಂಗ ಅಬ್ಬಾ! ಮೈನಡುಕ ಹುಟ್ಟಿಸಿದೆ ಒಂದು ಕ್ಷಣ.ಮಣ್ಣಲ್ಲಿ,ಗಂಗಾವಳಿ ನದಿಯಲ್ಲಿ ಸಿಲುಕಿದವರು ಬದುಕಿ ಬರಲೆಂಬ ಕುಟುಂಬಗಳ ರೋಧನದ ನಡುವೆ,ಶೋಧಕಾರ್ಯ ಪೂರ್ಣ ಗೊಳ್ಳದೆ,ಕಳೆದುಕೊಂಡವರ ಕಂಗಳು ಅತ್ತು,ಅತ್ತು ಬತ್ತಿಹೋದರೂ ಪತ್ತೆಯಾಗದ ಜೀವಗಳು! ಇದು ದೇಶವ್ಯಾಪಿ ನೀರಿನ ರೌದ್ರನರ್ತಕ್ಕೆ ಬಲಿಯಾದ ಅಸಂಖ್ಯಾತ ಜೀವಗಳಿಗೆ ಹೊಣೆ ಯಾರು? ಎಂಬ ಪ್ರಶ್ನೆಗೆ ನಿಖರವಾದ ಉತ್ತರವಿಲ್ಲ!

ಇಂತಹ ಪ್ರಕರಣಗಳು ಪ್ರತಿ ಮಳೆಗಾಲದಲ್ಲಿ ಘಟಿಸಿದರೂ ಅದರ ಬಗ್ಗೆ ಮುಂಜಾಗ್ರತಾ ಸೂಕ್ತ ಕ್ರಮ ಕೈಗೊಳ್ಳದಿರುವುದು ವಿಷಾದನೀಯ! ಕುಸಿಯುವ ಗುಡ್ಡಗಳು,ಬುಡ ಮೇಲಾಗಿ ಬೀಳುವ ಮರಗಿಡಗಳು ರಸ್ತೆಯಂಚಿಗೆ ಬಾಗಿದರೂ,ಅಪಾಯದ ಮುನ್ಸೂಚನೆ ನೀಡಿದರೂ ತೆರವುಗೊಳಿಸಲಾರದ ವ್ಯವಸ್ಥೆಗಳು!.ಅನಾಹುತ ಘಟಿಸಿದ ಮೇಲೆ ಕಾರ್ಯ ತತ್ಪರರಾಗುವ ಸಮಯಗಳು,ಉಳಿಸಿಕೊಡಬಹುದೇ ಸತ್ತ ಜೀವಗಳ! ಆಧುನಿಕ ರೀತಿಯಲ್ಲಿ ಸಂಬಂಧ ಪಟ್ಟ ಇಲಾಖೆಗಳು ಸೂಕ್ತ ರೀತಿಯಲ್ಲಿ ಗಿಡಗಳನ್ನು ಬೇರು ಸಮೇತ ಇನ್ನೊಂದು ಕಡೆ ಸ್ಥಳಾಂತರಿಸಿ ಕಾಪಾಡುವತ್ತ ಹೆಜ್ಜೆ ಹಾಕಿದಷ್ಟು ಕಾನನ ಚಿಗುರಲು ಸಾಧ್ಯವೆಂದು ಬಲ್ಲವರ ಮಾತು.

ಕಡಲಂಚಿನಲ್ಲಿ ವಾಸಿಸುವ ಜನರು, ಗುಡ್ಡ ಬೆಟ್ಟಗಳ ಅಂಚಿನಲ್ಲಿ ಬದುಕ ಕಟ್ಟಿಕೊಂಡವರು ಇಂತಹ‌ ಅನಾಹುತಗಳಿಂದ ತಮ್ಮನ್ನು ಅಲ್ಲದೆ ತಮ್ಮ ಪರಿವಾರವನ್ನು ಕಾಪಾಡಿಕೊಳ್ಳುವುದರ ಬಗ್ಗೆ ಹಾಗೂ ಸುರಕ್ಷಿತ ಸ್ಥಳದತ್ತ ತಮ್ಮ ಕುಟುಂಬವನ್ನು ಸ್ಥಳಾಂತರಿಸಿ ಕಾಪಾಡಿಕೊಳ್ಳುವ ಹೊಣೆಗಾರಿಕೆ ಅರಿತರೆ,ಮುಂದಾಗುವ ಅನಾಹುತಗಳನ್ನು ತಪ್ಪಿಸಲು ಸಾಧ್ಯ….ಅದಕ್ಕೂ ಮಿಕ್ಕಿ‌ ದುರಂತವಾದಲ್ಲಿ ಅದಕ್ಕೆ ನಾವುಗಳು ಹೊಣೆ ಹೊರಬೇಕಾಗುತ್ತದೆ. ಕಾರಣ,ಪ್ರಕೃತಿಯ ಕೋರ್ಟಿನಲ್ಲಿ ಅನ್ಯಾಯಕ್ಕೆ ನ್ಯಾಯ ಸಿಗುವುದು ದಿಟ!. ಇಷ್ಟಕ್ಕೆಲ್ಲ ಅರಣ್ಯ ಸಂಪತ್ತಿನ ಅಸಮತೋಲನ,ಚತುಸ್ಪಥ ಮಾರ್ಗದ ತಡೆಗೊಡೆಗಳು ಕುಸಿಯಲು ಕಳಪೆ ಕಾಮಗಾರಿ,ಮಣ್ಣಿನ ಸಡಲಿಕೆ,ಹತ್ತು ಹಲವು ಲೋಪದೋಷಗಳು ವಾಹನ ಚಾಲಕರೊಂದಿಗೆ ಅನೇಕ ಕುಟುಂಬಗಳು ಇಂತಹ ಅನಾಹುತಗಳಿಗೆ ಬಲಿಯಾಗುತ್ತಿರುವುದು ದುರಂತವೇ ಸರಿ!.

ಇನ್ನೂ ಜಲಪಾತಗಳು ಧುಮ್ಮಿಕ್ಕುವ ಸುಂದರ ನೋಟ ಸವಿಯಲು, ಸಮುದ್ರದ ಅಲೆಗಳಿಗೆ ಅವ್ಯಾಹತವಾಗಿ  ತಮ್ಮ ಹುಚ್ಚಾಟಗಳಿಗೆ ಜೀವದ ಹಂಗುತೊರೆದು,ನಿರ್ಭಯವಾಗಿ,ನಿರ್ಬಂಧಿತ ಪ್ರದೇಶಕ್ಕೆ  ತೆರಳಿ ಸೆಲ್ಪಿಗಾಗಿ ಪ್ರಾಣ ಬಿಟ್ಟ ಘಟನೆಗಳು ಮರುಕಳಿಸುತ್ತಿರುವುದನ್ನು ಅಲ್ಲಗೆಳೆಯಲು,ತಡೆಗಟ್ಟಲು ಆಗುತ್ತಿಲ್ಲ. ಇವೆಲ್ಲವೂ ಸ್ವಯಂ ಅಪರಾದಕ್ಕೆ ಸಾಕ್ಷಿಗಳು.ಪ್ರಕೃತಿ ಮುನ್ಸೂಚನೆ ನೀಡಿದರೂ ಎಚ್ಚೆತ್ತುಕೊಳ್ಳದೆ ಹರಿಯುವ ನೀರಿನ ರಭಸಕ್ಕೆ ತಲೆದಂಡ ತೆರುವುತ್ತಿರುವುದು ಸರ್ವೇಸಾಮಾನ್ಯವಾಗಿದೆ.ಕಾಪಾಡುವ ಯುವಕರ ಪಡೆ,ಜಿಲ್ಲಾಧಿಕಾರಿ ಜಿಲ್ಲಾಡಳಿತ ಪೋಲಿಸ್ ಇಲಾಖೆ,ಸ್ವಯಂ ಸೇವಕರು,ನುರಿತ ತಂತ್ರಜ್ಞಾನ ತಂಡ,ನುರಿತ ಈಜುಗಾರರು, ಜೆಸಿಪಿ, ಇತಾಜಿ ಹೀಗೆ ಹತ್ತು ಹಲವರ ಸಹಕಾರ ಅವಿರತ ಪರಿಶ್ರಮದಿಂದ ರಸ್ತೆ ತೆರುವಗೊಳಿಸುವ ಕಾರ್ಯ ಸಾಗಿದಷ್ಟು,ರಸ್ತೆಗೆ ಸಾಲುಸಾಲಾಗಿ ನಿಂತ ಅನೇಕ ವಾಹನಗಳು,ಅದರಲ್ಲಿರುವ ಪ್ರಯಾಣಿಕರು ತಮ್ಮ ತಮ್ಮ ಗೂಡುಸೇರುವ ಆತುರತೆಯೊಂದಿಗೆ ಸುರಕ್ಷಿತವಾಗಿದ್ದೆವೆ ಎಂಬ ಸಂದೇಶ ರವಾನಿಸುವ ಮೂಲಕ ತಮ್ಮ ಉಳಿವಿನ ಬಗ್ಗೆ ದಾಖಲೆ ನೀಡುತ್ತಿರುವುದು. ಮಳೆ,ಗಾಳಿಯ ರಭಸಕ್ಕೆ ತತ್ತರಿಸುವ ಗಿಡಮರಗಳ ಕಂಡಾಗೆಲ್ಲ ಬದುಕು ನೀರಮೇಲಿನ ಗುಳ್ಳೆಯೆಂದು ಗ್ರಹಿಸಲು ಇಂತಹ ಕ್ಷಣಗಳು ಸಾಕ್ಷಿ! ಇದು ಯಾರಿಗೂ ಬೇಡ!

ಹರಿವ ನೀರಿಗೆ ತಡಗೋಡೆ ಯ್ಯಾಕೆ?… ಸಮುದ್ರ ಸೇರುವ ಧಾವಂತ ಹರಿವ ನದಿಗಳಿಗೆ..ಅವು ಫಲವತ್ತಾದ ಮಣ್ಣನ್ನು ವರ್ಗಾವಣೆ ಮಾಡುವ ಬದಲಾಗಿ ಪ್ರಳಯಾಂತಕ ಜಲದಿಗ್ಭಂದನ ಹಳ್ಳಿಹಳ್ಳಿಗೂ ನಿರ್ಮಿಸಿದರೆ ರೈತನಷ್ಟೆ ಅಲ್ಲ ಕೂಲಿಕಾರ್ಮಿಕನು ನಿರ್ಗತಿಕನಾಗುವುದು ಖಂಡಿತ. ಹೀಗಾಗಿ ಬದುಕು ನಶ್ವರ ಕೊನೆಗೆ ಜೀವನ ಅರ್ಪಿಸುವುದು ಈಶ್ವರನಲ್ಲಿ‌ ಎಂಬುದು ಪ್ರಕೃತಿ ನಮಗೆ ನೀಡಿರುವ ಸ್ಪಷ್ಟ ಚಿತ್ರಣ..ಮಳೆಗಾಲ… ಹಿತವಾಗಬೇಕೆಂದರೆ,ಮನುಕುಲ ಪ್ರಕೃತಿಯನ್ನು ಪೂಜಿಸಬೇಕು…ಇದು ಕೇವಲ ‌ಆರಂಭ! ಪ್ರಕೃತಿಯ ಪಿಚ್ಚರ  ಬಾಕಿ ಹೈ…ತಿದ್ದಿಕೊಳ್ಳೋಣ.. ಸುಸ್ಥಿರ ಬದುಕ ಕಟ್ಟಿಕೊಳ್ಳುವತ್ತ ಗಮನಹರಿಸುವುದು ಆದ್ಯ ಕರ್ತವ್ಯ.


7 thoughts on “

  1. ಮಾಡಿದ್ದುಣ್ಣೋ ಮಾರಾಯ ಎನ್ನುವಂತೆ… ಮನುಷ್ಯ ತಾನು ಮಾಡಿದ ಪ್ರಕೃತಿಯ ಆಸಮತೋಲನದ ಪರಿಣಾಮವನ್ನು ಈಗ ಅನುಭವಿಸುವಂತಾಗಿದೆ…. ಎಂಬ ಮಾರ್ಮಿಕ ಅಂಶವನ್ನು ಒಂದು ಸುಂದರ ಲೇಖನದ ರೂಪದಲ್ಲಿ ಹಿಡಿದಿಟ್ಟ ಪ್ರಯಾಸ ಶ್ಲಾಘನೀಯವಾಗಿದೆ. ಸೂಪರ್ ಶಿವು

  2. ಪ್ರಕೃತಿಯನ್ನು ಡಿಸ್ಟರ್ಬ್ ಮಾಡಿದರೆ..
    ಆ ಎಫೆಕ್ಟ್ ಏನಾಗುತ್ತೆ ಅನ್ನೋದನ್ನ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದೀರಿ..
    ಸಿಸ್ಟರ್.. ಅದ್ಭುತ..

  3. ಪ್ರಕೃತಿಯ ಸೌಂದರ್ಯ ನಾಶಗೊಳಿಸಿ ಈಗ ಪರಿತಪಿಸುವ ಸಂದರ್ಭ ತಂದುಕೊಂಡ ಬಗೆಯ ನು ಮನಮುಟ್ಟುವಂತೆ ಬಿಂಬಿಸಿದ್ದರು.

  4. ಆಧುನಿಕತೆಯ ಮತ್ತು ಮಿತಿಮೀರಿದಾಗ ಸಂಭವಿಸುವ ಅಸಹನೀಯ ದುರ್ಘಟನೆಗಳ ಚಿತ್ರಣವನ್ನು ತುಂಬಾ ಸೂಕ್ಷ್ಮವಾಗಿ ಉಲ್ಲೇಖಿಸಿದ್ದೀರಿ ಮೇಡಮ್….

  5. ತುಂಬಾ ಅರ್ಥಗರ್ಭಿತ ಮಾತುಗಳು ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಸರಿಯಾಗಿ ನಿರ್ವಹಿಸಿದಾಗ ಪ್ರಕೃತಿಯ ಜೊತೆ ಜೊತೆಗೆ ನಾವು ಬದುಕಲು ಸಾಧ್ಯ…

  6. ನಿಜಕ್ಕೂ ಬರೆದ ಒಂದಂದೂ ಅಂಶವೂ ಎಲ್ಲರಿಗೂ ಪ್ರಕೃತಿ ನೀಡಿದ ಪಾಠವೇ ಎನ್ನುವಂತಿದೆ. ಎಲ್ಲವೂ ಪ್ರಕೃತಿಯ ಕೊಡುಗೆ ಅದರ ಕರುಳನ್ನೇ ಬಗೆದರೆ….!?! ತಾನೇ ಹೊತ್ತು ಹೆತ್ತ ಮಕ್ಕಳಿಂದ ಹತಳಾದ ದುರ್ಭಾಗ್ಯ ತಾಯಿಯಂತೆ………

  7. ಪ್ರಕೃತಿ ಕುರಿತು ಅದರ ವಿಕೋಪಗಳ ಮುನ್ನೆಚ್ಚರಿಕೆಗಳು ಸಹಜ ಪ್ರಕೃತಿಗೆ ತಡೆಗೋಡೆ ಅಗತ್ಯವೇ ಅನ್ನೋದು ಬಹಳ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರ. ಅಭಿನಂದನೆಗಳು, ಶಿವಲೀಲಾ ಅವರಿಗೆ

Leave a Reply

Back To Top