ಧಾರಾವಾಹಿ-46
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಭರವಸೆಯ ಬೆಳಕು ವಿಶ್ವ
ಮಗ ವಿಶ್ವ ಆರು ವರ್ಷದ ಪೋರನಾದರೂ ಅಮ್ಮನ ಪ್ರತಿಯೊಂದು ಕೆಲಸದಲ್ಲೂ ತನ್ನಿಂದಾದ ಸಣ್ಣ ಪುಟ್ಟ ಸಹಾಯ ಮಾಡುತ್ತಿದ್ದ. ಅಮ್ಮನ ಕಣ್ಮಣಿಯಾಗಿ ಮನೆಯ ತುಂಬಾ ಓಡಾಡುತ್ತಿದ್ದ. ಈಗ ಸುಮತಿಗೆ ಸಹಾಯಕ್ಕೆ ಯಾರೂ ಇಲ್ಲ ಎನ್ನುವ ಕೊರಗು ಇಲ್ಲದಾಯಿತು. ಶಾಲೆಯಿಂದ ಬಂದ ನಂತರ ವಿಶ್ವ ಅಮ್ಮನ ಸಹಾಯಕ್ಕಾಗಿ ನಿಲ್ಲುತ್ತಿದ್ದ. ಸಂಜೆಯ ಸಮಯ ಅಮ್ಮನ ಜೊತೆ ಕುಳಿತು ಅಂದು ಕಲಿತ ಪಾಠದ ಪುನರಾವರ್ತನೆ ಮಾಡುತ್ತಿದ್ದ. ಅಮ್ಮನ ಜೊತೆ ಸಂಧ್ಯಾದೀಪದ ಮುಂದೆ ಕುಳಿತು
ದೇವರನ್ನು ಪ್ರಾರ್ಥಿಸಿ ಶ್ಲೋಕಗಳನ್ನು ಹೇಳುತ್ತಿದ್ದ. ಅಮ್ಮ ಮಾಡುತ್ತಿದ್ದ ಅಡುಗೆಯ ಸವಿರುಚಿಯನ್ನು ತೃಪ್ತಿಯಾಗಿ ಉಂಡು ಮಲಗುವ ವೇಳೆಯಲ್ಲಿ ಅಮ್ಮ ಹೇಳುವ ನೀತಿಕಥೆಗಳನ್ನು ಕೇಳುತ್ತಾ ಅಮ್ಮ ಹಾಡುವ ಮಧುರವಾದ ಲಾಲಿ ಹಾಡನ್ನು ಕೇಳಿ ನೆಮ್ಮದಿಯಿಂದ ಅಮ್ಮನ ತೋಳ ಮೇಲೆ ತಲೆ ಇಟ್ಟು ನಿದ್ರಿಸುತ್ತಿದ್ದ. ಹೀಗೇ ದಿನಗಳು ಉರುಳಿದವು. ತನಗೆ ತಂಗಿಯೋ ತಮ್ಮನೋ ಬರುವ ದಿನಗಳನ್ನು ನಿರೀಕ್ಷಿಸುತ್ತಾ ಕಾತುರದಿಂದ ಕಾಯುತ್ತಿದ್ದ. ಕಡೆಗೂ ಆ ದಿನ ಬಂದೇಬಿಟ್ಟಿತು. ಅಮ್ಮನನ್ನು ಸಕಲೇಶಪುರದ ಹೆರಿಗೆಯ ಆಸ್ಪತ್ರೆಗೆ ದಾಖಲು ಮಾಡಿದಾಗ ತನ್ನ ದೊಡ್ಡಮ್ಮನ ಮನೆಯಲ್ಲಿ ಇರುತ್ತಿದ್ದ ವಿಶ್ವ. ಒಂದು ಶುಭ ಮುಹೂರ್ತದಲ್ಲಿ ಸುಮತಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ವಿಶ್ವನ ಖುಷಿ ಹೇಳತೀರದು. ಅವನಿಗೆ ತಂಗಿ ಎಂದರೆ ಬಹಳ ಇಷ್ಟ. “ಅಮ್ಮನಿಗೆ ಮಗನಾಗಿ ನಾನಿದ್ದೇನೆ ಅಲ್ಲವೇ? ಮುಂದೆ ಅಮ್ಮನ ಕೆಲಸದಲ್ಲಿ ಕೈಜೋಡಿಸಲು ತನಗೆ ತಂಗಿ ಇದ್ದರೆ ಅಮ್ಮನಿಗೆ ಆಯಾಸ ಆಗದು ಎನ್ನುವುದು ಅವನ ಆಶಯವಾಗಿತ್ತು. ಮುದ್ದಾದ ತಂಗಿಯನ್ನು ನೋಡಲು ಅಪ್ಪನ ಜೊತೆ ಆಸ್ಪತ್ರೆಗೆ ಬರುತ್ತಿದ್ದ ವಿಶ್ವ. ಅಮ್ಮನನ್ನು ಮತ್ತು ಮುದ್ದಾದ ಪುಟ್ಟ ತಂಗಿಯನ್ನು ಮನೆಗೆ ಎಂದು ಮನೆಗೆ ಕರೆತರುವರೋ ಎಂದು ಕಾತುರದಿಂದ ಕಾಯುತ್ತಿದ್ದ.
ಆಸ್ಪತ್ರೆಯಿಂದ ಸುಮತಿ ಮತ್ತು ಮುದ್ದಾದ ಮಗಳನ್ನು ವೇಲಾಯುಧನ್ ಅಕ್ಕನ ಮನೆಗೆ ಕರೆದುಕೊಂಡು ಬಂದರು. ತನಗೆ ಈಗ ಒಬ್ಬ ಮಗ ಹಾಗೂ ಮಗಳು ಇರುವರು ಎಂಬ ಹೆಮ್ಮೆ ವೇಲಾಯುಧನ್ ರವರಿಗೆ. ವಿಶ್ವನಿಗಂತೂ ಈಗ ಸಮಯವೇ ಸಾಲದು. ಅಮ್ಮ ತಂಗಿಯ ಜೊತೆ ಎಷ್ಟು ಹೊತ್ತು ಕಳೆದರೂ ಸಾಲದಾಯಿತು ಅವನಿಗೆ. ಕೆಲವು ತಿಂಗಳ ಬಾಣಂತನದ ನಂತರ ಒಂದು ಶುಭ ಮುಹೂರ್ತದಲ್ಲಿ ಮಗಳನ್ನೂ ಸುಮತಿಯನ್ನೂ ವೇಲಾಯುಧನ್ ಮನೆಗೆ ಕರೆದುಕೊಂಡು ಬಂದರು. ಸರಳವಾಗಿ ತೊಟ್ಟಿಲಶಾಸ್ತ್ರ, ನಾಮಕರಣ ಮುಗಿಯಿತು. ಸುಮತಿ ಹಾಗೂ ವಿಶ್ವನ ಆರೈಕೆಯಲ್ಲಿ ಮುದ್ದು ಮಗಳು ಬೆಳೆಯತೊಡಗಿದಳು. ಶಾಲೆಯಿಂದ ಬಂದ ಬಳಿಕ ಹಾಗೂ ಶಾಲೆಗೆ ಹೋಗುವ ಮೊದಲು ತಂಗಿಯನ್ನು ಬಹಳ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದ ವಿಶ್ವ. ತಂಗಿಯ ಜೊತೆ ಎಷ್ಟು ಹೊತ್ತು ಕಳೆದರೂ ಅವನಿಗೆ ಸಾಲುತ್ತಿರಲಿಲ್ಲ. ಸುಮತಿಯು ಮನೆಯ ಕೆಲಸಗಳಲ್ಲಿ ನಿರತಳಾಗಿರುತ್ತಿದ್ದ ಸಮಯದಲ್ಲಿ ಮುದ್ದು ತಂಗಿಯ ಬಾಲಲೀಲೆಗಳನ್ನು ನೋಡುತ್ತಾ ಅವಳ ಆಟಗಳ ಬಗ್ಗೆ ಅಮ್ಮನಿಗೆ ವರ್ಣಿಸಿ ಹೇಳುವುದು ವಿಶ್ವನಿಗೆ ಖುಷಿಯ ಸಂಗತಿ. ಪುಟ್ಟ ಮಗು ಕೂಡಾ ಅಣ್ಣನೊಂದಿಗೆ ಯಾವುದೇ ರಗಳೆ ಮಾಡದೇ ಇರುತ್ತಿದ್ದಳು. ಅಣ್ಣ ಜೊತೆಗೆ ಇದ್ದರೆ ಅವಳು ಅಳುತ್ತಲೇ ಇರಲಿಲ್ಲ. ತಂಗಿಯ ಜೊತೆ ಆಡುತ್ತಾ ಶಾಲೆಯ ಪಾಠಗಳನ್ನು ಕಲಿಯುತ್ತಾ ಚುರುಕಾಗಿ ಇರುತ್ತಿದ್ದ ವಿಶ್ವ. ತಂಗಿಗೆ ನಾಲ್ಕೈದು ತಿಂಗಳು ತುಂಬಿದ ಮೇಲೆ ಅವಳನ್ನು ಎತ್ತಿಕೊಂಡು ಆಡಿಸುತ್ತಿದ್ದ. ಅಣ್ಣ ಬಂದರೆ ಸಾಕು ತಂಗಿಯೂ ಅವನ ಆಟಗಳನ್ನು ನೋಡಿ ಕಿಲಕಿಲ ನಗುವಳು. ಅಣ್ಣ ತಂಗಿಯ ಈ ಅನ್ಯೋನ್ಯತೆ ಕಂಡು ಸುಮತಿ ಮನದಲ್ಲೇ ಶ್ರೀ ಕೃಷ್ಣನಿಗೆ ಧನ್ಯವಾದ ಹೇಳುವಳು. ತನ್ನ ಮಕ್ಕಳಿಬ್ಬರೂ ಸದಾ ಹೀಗೇ ಇರಲಿ ಎಂದು ಹೇಳುತ್ತಾ ದೃಷ್ಟಿ ತೆಗೆಯುವಳು.
ಅಣ್ಣತಂಗಿಯರ ಬಾಂಧವ್ಯ ಇತರರಿಗೂ ಅನುಕರಣೀಯವಾಗಿತ್ತು. ತಂಗಿಯು ಅಂಬೆಗಾಲು ಇಟ್ಟು ನಡೆಯುವಾಗ ವಿಶ್ವ ತಾನು ಕೂಡಾ ಅವಳನ್ನು ಅನುಕರಿಸುತ್ತಿದ್ದ. ತಂಗಿಯ ಜೊತೆ ಆಡುವುದು ವಿಶ್ವನಿಗೆ ಅತ್ಯಂತ ಖುಷಿಯ ವಿಷಯ. ಅವಳನ್ನು ಎತ್ತಿಕೊಂಡು ಹಿತ್ತಲ ಬಳಿಗೆ ಕರೆದೊಯ್ದು ಗಿಡ ಮರ ಬಳ್ಳಿಗಳು, ಹೂವುಗಳು ಮತ್ತು ಅವುಗಳ ಮಕರಂದ ಹೀರಲು ಹಾರುವ ದುಂಬಿ, ಚಿಟ್ಟೆಗಳನ್ನು ಕೌತುಕದಿಂದ ತೋರಿಸುತ್ತಿದ್ದ. ತನ್ನೆರಡೂ ಕೈಗಳನ್ನು ಆಡಿಸುತ್ತಾ ಪುಟ್ಟ ತಂಗಿಯೂ ಖುಷಿ ಪಡುವಳು. ಇವರಿಬ್ಬರ ಆಟಗಳನ್ನು ನೋಡುವುದೇ ಸುಮತಿಯ ಕಣ್ಣಿಗೆ ಹಬ್ಬ. ತನ್ನೆಲ್ಲಾ ನೋವುಗಳನ್ನೂ ಈ ಇಬ್ಬರು ಮಕ್ಕಳ ಲಾಲನೆ ಪಾಲನೆಯಲ್ಲಿ ಸುಮತಿ ಮರೆಯುವಳು. ತಂಗಿಯನ್ನು ಎತ್ತಿಕೊಳ್ಳಲು ಅಮ್ಮನಿಗೆ ವಿಶ್ವ ಬಿಡುತ್ತಿರಲಿಲ್ಲ. ತಂಗಿಗೂ ಸದಾ ಅಣ್ಣನ ಜೊತೆ ಇರುವುದೆಂದರೆ ಬಹಳ ಇಷ್ಟ. ಅಣ್ಣನನ್ನು ಕಂಡ ಕೂಡಲೇ ಅವಳ ಮುಖವು ಅರಳುತ್ತಿತ್ತು. ವೇಲಾಯುಧನ್ ಕೆಲಸ ಮುಗಿಸಿ ಮನೆ ಬಂದ ನಂತರ ಮಕ್ಕಳ ಜೊತೆ ಸ್ವಲ್ಪ ಹೊತ್ತು ಕಾಲ ಕಳೆಯುತ್ತಿದ್ದರು. ನಂತರ ಹೊರಗೆ ಸುತ್ತಾಡಲು ಹೋಗುತ್ತಿದ್ದರು. ಅಪ್ಪ ಮನೆಯಲ್ಲಿ ಇಲ್ಲದಿದ್ದರೆ ವಿಶ್ವನಿಗೆ ಬಹಳ ಸಂತೋಷ ಏಕೆಂದರೆ ಅಪ್ಪನ ಗದರುವಿಕೆ ಇರುತ್ತಿರಲಿಲ್ಲವಲ್ಲ. ಅವನಿಗೆ ಬಹಳ ನೋವು ತರಿಸುತ್ತಿದ್ದ ಸಂಗತಿ ಎಂದರೆ ಅಪ್ಪ ಅಮ್ಮನನ್ನು ಸಣ್ಣ ಕಾರಣಗಳಿಗೂ ನಿಂದಿಸುವುದು. ಕೆಲವೊಮ್ಮೆ ಬಹಳ ಕೋಪಗೊಂಡಾಗ ಅಪ್ಪ ಅಮ್ಮನನ್ನು ಹೊಡೆಯುತ್ತಾ ಇದ್ದದ್ದು ಅವನಿಂದ ನೋಡಲು ಆಗುತ್ತಿರಲಿಲ್ಲ. ಹೋಗಿ ಅಡ್ಡ ನಿಂತು ತಾನೂ ಅಪ್ಪನ ಹೊಡೆತ ತಿನ್ನುತ್ತಿದ್ದ. ಎಂಟು ವರ್ಷದ ಪೋರನಿಗೆ ಸದಾ ಅಮ್ಮನದೇ ಚಿಂತೆ. ಅಪ್ಪ ಏಕೆ ಹೀಗೆ ಇಷ್ಟು ಕೋಪಿಷ್ಠ ಎಂದು ಅಮ್ಮನನ್ನು ಕೇಳುತ್ತಿದ್ದ. ಆಗ ಸುಮತಿಯ ಏನು ಉತ್ತರ ಕೊಡುವುದೆಂದು ತಿಳಿಯದೇ ಸುಮ್ಮನಾಗುವಳು.
ಎಂಟು ವರ್ಷದ ವಿಶ್ವನಿಗೆ ತಾನು ಆದಷ್ಟು ಬೇಗ ಬೆಳೆದು ದೊಡ್ಡವನಾಗಿ ಅಮ್ಮನನ್ನು ತಂಗಿಯನ್ನು ಕ್ಷೇಮವಾಗಿ ನೋಡಿಕೊಳ್ಳಬೇಕು ಎಂಬ ಕನಸು. ಸುಮತಿಯ ಬಳಿ ಆಗಾಗ ಹೇಳುತ್ತಿದ್ದ” ಅಮ್ಮ ನೀನು ಅಳಬೇಡ….ನಾನು ಬೇಗ ಬೆಳೆದು ದೊಡ್ಡವನಾಗುತ್ತೇನೆ….ನಿನ್ನನ್ನು ಹೀಗೆ ತೊಂದರೆ ಕೊಡಲು ಅಪ್ಪನನ್ನು ನಾನು ಬಿಡುವುದಿಲ್ಲ ….ನಿನ್ನನ್ನೂ ತಂಗಿಯನ್ನೂ ನಾನು ಚೆನ್ನಾಗಿ ನೋಡಿಕೊಳ್ಳುವೆ”….ಎಂದು ಹೇಳಿ ಸಮಾಧಾನ ಪಡಿಸುತ್ತಿದ್ದ. ಎಷ್ಟೇ ನೋವಿದ್ದರೂ ಮಕ್ಕಳ ಮುಂದೆ ಸುಮತಿ ಅಳುತ್ತಿರಲಿಲ್ಲ. ಆದರೂ ಅದು ಹೇಗೋ ಅಮ್ಮ ನೊಂದು ಅಳುವುದನ್ನು ವಿಶ್ವ ಅರ್ಥಮಾಡಿಕೊಳ್ಳುತ್ತಿದ್ದ. ಆಗೆಲ್ಲಾ ಅವನಿಗೆ ಹೃದಯವೇ ಕಿತ್ತು ಹೊರಬರುವಷ್ಟು ನೋವಾಗುತ್ತಿತ್ತು. ಅಮ್ಮನಿಗೆ ಕಾಣದಂತೆ ಮೌನವಾಗಿ ವಿಶ್ವನೂ ಅಳುತ್ತಿದ್ದ. ಆದರೆ ಆದಷ್ಟೂ ಅಮ್ಮ ನೊಂದು ಕೊಳ್ಳದ ಹಾಗೆ ನೋಡಿಕೊಳ್ಳುತ್ತಿದ್ದ. ವಿಶ್ವನ ಸಾಂತ್ವನದ ನುಡಿಗಳು ಸುಮತಿಗೆ ಅಮೃತದಂತೆ ಇರುತ್ತಿದ್ದವು. ಸುಮತಿಯ ತಮ್ಮಂದಿರಿಗೆ ವಿಶ್ವನೆಂದರೆ ಬಹಳ ಇಷ್ಟ. ಇವನು ಬೆಳೆದು ದೊಡ್ಡವನಾದ ಮೇಲೆ ಖಂಡಿತಾ ಸುಮತಿಯನ್ನು ಚೆನ್ನಾಗಿ ನೋಡಿಕೊಳ್ಳುವ ಎಂಬ ಭರವಸೆ ಇಬ್ಬರಿಗೂ ಇತ್ತು. ಬಾವ ಅಕ್ಕನನ್ನು ಬೈಯುವುದು ಹೊಡೆಯುವುದು ತಮ್ಮಂದಿರಿಗೂ ಸಹಿಸಲಾರದ ವಿಷಯವಾಗಿರುತ್ತಿತ್ತು. ಸುಮತಿಯ ನಿವೇದನೆಯಿಂದ ಅವರಿಬ್ಬರೂ ಬಾವನಿಗೆ ಎದುರು ಹೇಳುತ್ತಿರಲಿಲ್ಲ. ಆದರೆ ಮಗ ವಿಶ್ವನ ನಡೆ ಅವರಲ್ಲಿ ಸಮಾಧಾನ ತಂದಿತ್ತು. ಮುಂದೊಂದು ದಿನ ಇವನು ದೊಡ್ಡವನಾದ ಮೇಲೆ ಅಕ್ಕನ ಜೀವನ ಖಂಡಿತಾ ಸುಧಾರಿಸುವುದು ಎಂಬ ಮಹದಾಸೆ ಹೊತ್ತು ತಮ್ಮಂದಿರು ಸಮಾಧಾನ ಪಡುತ್ತಿದ್ದರು. ವಿಶ್ವ ಎಲ್ಲರ ಭರವಸೆಯ ಬೆಳಕಾಗಿದ್ದ.
ಚೆಂದ
ಸೂಪರ್
ಅದ್ಭುತ ಅನನ್ಯ ಎನಿಸುವ ಅಪರೂಪದ ಬರಹ.
ಧನ್ಯವಾದಗಳು