ವೈ.ಎಂ.ಯಾಕೊಳ್ಳಿ ಅವರ ಗಜಲ್

ನೀರಿಲ್ಲದೂರಿನಲಿ‌ ಮತ್ತೆ ಮರವಾಗುತ್ತಾಳೆ ಅವಳು
ನೆರಳಿಲ್ಲದೂರಿನಲಿ ಮತ್ತೆ ವರವಾಗುತ್ತಾಳೆ ಅವಳು

ವಂಶದ ಕುಡಿಗಳ ತನ್ನ ಸೆರಗಿನಲಿ ಕಾಪಿಟ್ಟ ಮಾಯಿ
ಎನಿತೊ ಸಂಕಟಗಳ ನುಂಗಿ ನೆರವಾಗುತ್ತಾಳೆ ಅವಳು

ಸಾವಿರ ಸಾವಿರ ಹೊತ್ತಗೆಗಳು ಶಾಸನ ಸ್ಮಾರಕಗಳು
ಕೆತ್ತುವ ಸಾಲುಗಳಿಗೆ ಸಿಗದೆ ಚರವಾಗುತ್ತಾಳೆ ಅವಳು

ಇಹದ ಕಾರ್ಯವ ಮುಗಿಸಿ ಆಸೆಗಳಿಲ್ಲದೆ ನಡೆದಳು
ಬಾರದೂರಿಗೆ ಸೇರಿ ಕೈಗೆ ಸಿಗದೆ ಪರವಾಗುತ್ತಾಳೆ ಅವಳು

ಪ್ರತಿ ಪದದಲೂ ನೆನಪುಗಳ ಬಿತ್ತುತ್ತ ನಡೆದಿದ್ದಾನೆ ಜೋಗಿ
ಇಹಕೂ ಜೊತೆಯಾಗುವ ಕರುಣಿ ಧರೆಯಾಗುತ್ತಾಳೆ ಅವಳು


Leave a Reply

Back To Top