ಯುವ ಸಂಗಾತಿ
“ಯುವಜನರ ಪರವಾಗಿ ಯುವಧ್ವನಿ”
ವಿಶೇಷ ಲೇಖನ
ಮೇಘ ರಾಮದಾಸ್ ಜಿ
ಯುವಜನರ ಪರವಾಗಿ ಯುವಧ್ವನಿ
ಆಕೆ ಓದಿನಲ್ಲಿ ಜಾಣೆ, ಮನೆಯ ಜವಾಬ್ದಾರಿ ನಿಭಾಯಿಸುವುದರಲ್ಲಿಯೂ ಬುದ್ದಿವಂತೆ, ಒಮ್ಮೆ ಆಕೆಯ ತರಗತಿಯ ಹುಡುಗನ ಜೊತೆಯಲ್ಲಿ ಇವಳು ಮಾತನಾಡುತ್ತಿರುವುದನ್ನು ನೋಡಿದ ಇವಳ ತಂದೆ ಅಪಾರ್ಥ ಮಾಡಿಕೊಂಡು ಏನೂ ಸುಳಿವಿಲ್ಲದೆಯೇ ಎರಡು ತಿಂಗಳ ಒಳಗೆ ಮದುವೆ ನಿಶ್ಚಯ ಮಾಡಿದರು. ಇದರ ಬಗ್ಗೆ ತಿಳಿದ ಆಕೆ ಹಸೆಮಣೆ ಏರುವ ಮೊದಲೆ ಮಣ್ಣಲ್ಲಿ ಮಣ್ಣಾದಳು.
ಆತನಿಗೆ ಚಿತ್ರಕಲೆಯಲ್ಲಿ ಬಹಳ ಪ್ರೀತಿ, ಓದು ಅವನ ಸಂಗಾತಿಯಾಗಲು ಬಹಳ ಕಷ್ಟ ಪಡುತ್ತಿತ್ತು. ಹತ್ತನೇ ತರಗತಿ ಮುಗಿಸಿದ ಅವನಿಗೆ ಚಿತ್ರಕಲೆಯಲ್ಲಿ ಡಿಪ್ಲೋಮೋ ಕೋರ್ಸ್ ಮಾಡುವ ಆಸಕ್ತಿ. ಆದರೆ ಇದರಲ್ಲಿ ಭವಿಷ್ಯ ಇಲ್ಲ ಎನ್ನುವ ಕಾರಣಕ್ಕೆ ಮನೆಯವರ ಒತ್ತಾಯಕ್ಕೆ ಪಿಯುಸಿಗೆ ಸೇರಿದ. ಆದರೆ ಈಗ ಓದು ಬಿಟ್ಟು ಕೂಲಿ ಕೆಲಸ ಮಾಡುತ್ತಾ ದುಶ್ಚಟಗಳಿಗೆ ದಾಸನಾಗಿದ್ದಾನೆ.
ಎರಡೂ ಘಟನೆಯಲ್ಲಿರುವ ಯುವಜನರು ಮುಗ್ಧರು ಹಾಗೆ ಪ್ರತಿಭಾವಂತರು ಕೂಡ. ಆದರೆ ಬೇರೆಯವರ ತಪ್ಪು ಕಲ್ಪನೆಗಳಿಗೆ, ಪ್ರತಿಷ್ಠೆಗಳಿಗೆ, ತಪ್ಪು ನಿರ್ಧಾರಗಳಿಗೆ, ನಿರ್ಲಕ್ಷಗಳಿಗೆ ಬಲಿಯಾಗಿದ್ದಾರೆ. ಇಂತಹ ಘಟನೆಗಳನ್ನು ನಮ್ಮ ಸುತ್ತಲೂ ನಾವು ಪ್ರತಿದಿನವೂ ನೋಡುತ್ತಲೇ ಇರುತ್ತೇವೆ. ನಮ್ಮ ಕುಟುಂಬಗಳಲ್ಲಿ, ಸ್ನೇಹ ಬಳಗದಲ್ಲಿ, ಊರುಗಳಲ್ಲಿ, ಹೀಗೆ ಎಲ್ಲೆಡೆ ಹತ್ತಿರದಿಂದಲೇ ನೋಡಿರುತ್ತೇವೆ. ಹಾಗೆಯೇ ಇಂಥ ವಿಚಾರಗಳಲ್ಲಿ ನಾವು ದೂರುವುದು ಕೇವಲ ಯುವ ಜನತೆಯನ್ನು ಮಾತ್ರ. ‘ಅವನಿಗೇನು ಕಮ್ಮಿ ಇತ್ತು ಪೋಲಿ ಬಿದ್ದಿದ್ದಾನೆ, ಅಹಂಕಾರ ನೆತ್ತಿಗೇರಿದೆ, ಏನೋ ಸ್ವಲ್ಪ ತೆಳ್ಳಗೆ ಬೆಳ್ಳಗಿದ್ದಾಳೆ ಅಂತ ಎಲ್ಲಾ ಹುಡುಗರ ಜೊತೆ ಹಲ್ಲು ಕಿರೀತ ಮಾತಾಡ್ತಾ ನಿಂತಿರ್ತಾಳೆ, ಏನ್ ತಪ್ ಮಾಡಿದ್ಲೋ ಅದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’. ಹೌದು, ಈ ಮೇಲಿನ ಘಟನೆಗಳಂತಹ ಸಂದರ್ಭಗಳು ನಮ್ಮ ಕಣ್ಣಿಗೆ ಬಿದ್ದಾಗ ಅಥವಾ ಕಿವಿಗೆ ಕೇಳಿಸಿದಾಗ ನಾವು ತಿಳಿದೋ ತಿಳಿಯದೆಯೋ ಈ ರೀತಿಯಾಗಿಯೆ ಮಾತನಾಡುತ್ತೇವೆ. ಇದು ಸಹಜ, ಏಕೆಂದರೆ ನಮ್ಮ ಸಮಾಜ ನಮ್ಮ ಕಣ್ಣಿಗೆ ಕಾಣಿಸದ, ಲಿಖಿತ ರೂಪದಲ್ಲಿ ಇರದ, ಒಂದು ಜೀವನ ಕ್ರಮವನ್ನು ಸದ್ದಿಲ್ಲದೆ ನಮಗರಿವಿಲ್ಲದೆ ನಮ್ಮಲ್ಲಿ ತುಂಬಿದೆ. ಇದರ ಪ್ರಭಾವದಿಂದ ನಾವು ಪ್ರತಿಯೊಂದು ವಿಚಾರವನ್ನು ಸಹ ನಕಾರಾತ್ಮಕವಾಗಿಯೆ ಮೊದಲು ನೋಡುವುದು. ಹುಡುಗಿ ಅಥವಾ ಹುಡುಗ ಯೌವನವಸ್ಥೆಗೆ ಬಂದಾಗ ಇದೇ ರೀತಿಯಲ್ಲಿರಬೇಕು, ಹೀಗೆ ವರ್ತಿಸಬೇಕು, ಹೀಗೆ ಬದುಕಬೇಕು ಎನ್ನುವ ನಿಯಮಗಳು ನಮಗೀಗಾಗಲೇ ಈ ಕಾಣದ ಜೀವನ ಕ್ರಮದಲ್ಲಿ ಅಳವಡಿಕೆಯಾಗಿವೆ. ಇದೇ ಕಾರಣಕ್ಕೆ ಯುವಜನರಿಗೆ ಸಂಬಂಧಿಸಿದ ಯಾವುದೇ ವಿಚಾರವಾದರೂ ಅದಕ್ಕೆ ಅವರನ್ನೇ ಹೊಣೆಗಾರರನ್ನಾಗಿಸುವುದು ನಮ್ಮ ಚಾಳಿಯಾಗಿದೆ.
ವಾಸ್ತವದಲ್ಲಿ ವಯಸ್ಕರ ತಮಗೆ ಇಷ್ಟ ಇಲ್ಲದ್ದನ್ನು ಮಾಡಲು ಇಚ್ಚಿಸುವುದಿಲ್ಲ. ಅದಕ್ಕೆ ಅವರು ಅವರದ್ದೇ ಕಾರಣಗಳನ್ನು ಕೊಡುತ್ತಾರೆ. ಆದರೆ ಯುವಜನತೆಗೆ ಇಷ್ಟವಿಲ್ಲದಿದ್ದರೂ ವಯಸ್ಕರು ತಾವು ಹೇಳಿದ್ದನ್ನು ಮಾಡಲು ಆಜ್ಞಾಪಿಸುತ್ತಾರೆ. ಇದಕ್ಕೆ ವಯಸ್ಕರು ಕೊಡುವ ಕಾರಣ ಯುವಜನತೆ ವಯಸ್ಸು ಮತ್ತು ಅನುಭವದಲ್ಲಿ ಚಿಕ್ಕವರು ಎನ್ನುವುದು. ಭಾರತದ ಯುವ ನೀತಿಯ ಅನುಸಾರ 15 ರಿಂದ 29 ವಯಸ್ಸಿನವರನ್ನು ಯುವಜನರು ಎಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಈ ವಯೋಮಾನದವರು ವಿದ್ಯಾಭ್ಯಾಸ ಅಥವಾ ಉದ್ಯೋಗ ಈ ಎರಡು ಕ್ಷೇತ್ರದಲ್ಲಿ ಮಾತ್ರ ಇರುತ್ತಾರೆ. ಜೀವನದ ಅನುಭವ ಕಡಿಮೆ, ಉಡಾಫೆ ಸ್ವಭಾವ, ದುಡುಕುತನ, ಅತಿಯಾದ ಆತ್ಮವಿಶ್ವಾಸ, ಚಂಚಲತೆ, ದುರಹಂಕಾರ, ಕೋಪ, ಆಕರ್ಷಣೆ, ಪ್ರೀತಿಯಲ್ಲಿ ಮುಳುಗಿರುತ್ತಾರೆ ಹೀಗೆ ಈ ಎಲ್ಲಾ ಪದಗಳು ಯುವಜನರನ್ನು ಪ್ರತಿನಿಧಿಸುವ ಲೇಬಲ್ ಗಳಾಗಿವೆ. ಆದರೆ ಸೂಕ್ತ ಬೆಂಬಲ ಸಿಕ್ಕರೆ ಏನೂ ಬೇಕಾದರೂ ಸಾಧಿಸುವ ಛಲ ಅವರಲ್ಲಿ ಇದೆ ಎನ್ನುವುದನ್ನು ನಾವು ನಂಬಲು ಮರೆತೇ ಬಿಟ್ಟೆದ್ದೇವೆ.
ಪ್ರತಿಯೊಂದು ವಿಚಾರದಲ್ಲಿ ಪೂರ್ವಪರ ಆಲೋಚಿಸಿ ವಿಮರ್ಶಿಸಿ ನಿರ್ಧಾರ ಮಾಡುವ ಯುವಜನತೆ ತಮ್ಮ ಭವಿಷ್ಯದ ಬಗ್ಗೆ ನಿರ್ಧರಿಸುವಲ್ಲಿ ಹೇಗೆ ಹಿಂದುಳಿಯಲು ಸಾಧ್ಯ? ಅವರು ತಮ್ಮ ಭವಿಷ್ಯದ ಕನಸನ್ನು ಬಹಳ ಬಲಿಷ್ಠವಾಗಿ ಕಟ್ಟಿಕೊಂಡಿರುತ್ತಾರೆ. ಆದರೆ ಅವರಿಗೆ ಸಮಾಜ, ಕುಟುಂಬ ಹಾಗೂ ಶೈಕ್ಷಣಿಕವಾಗಿ ಸಿಗುವ ಮಾರ್ಗದರ್ಶನ ಮತ್ತು ಬೆಂಬಲ ಮಾತ್ರ ಮುಖ್ಯವಾಗಿರುತ್ತದೆ. ಇದರ ಬದಲಿಗೆ ಯುವ ಜನತೆಗೆ ಈ ಎಲ್ಲಾ ಕ್ಷೇತ್ರಗಳಿಂದಲೂ ಸಿಗುತ್ತಿರುವುದು ನಿರ್ಲಕ್ಷ, ಬೈಗುಳ, ನಿರ್ಧಾರ ಹೇರಿಕೆಗಳಂತಹ ನಕಾರಾತ್ಮಕತೆಗಳು ಮಾತ್ರ. ಆದರೆ ಯಾರಿಗೆ ಸಕಾರಾತ್ಮಕ ಬೆಂಬಲಿ ಸಿಗುತ್ತದೆಯೋ ಅಂತ ಯುವ ಜನತೆ ನಿಜವಾಗಿಯೂ ಸಾಧನೆ ಮಾಡಿರುವ ಉದಾಹರಣೆಗಳು ಸಾಕಷ್ಟಿವೆ. ಸಾಧನೆ ಮಾಡಿರುವ ಕಲೆಗಾರರನ್ನೋ, ಕಲಾವಿದರನ್ನೋ, ಆಟಗಾರರನ್ನೋ, ಕ್ರೀಡಾಪಟುಗಳನೋ ನೋಡಿದಾಗ ಹೆಮ್ಮೆ ಪಡುವ ನಾವು ನಮ್ಮ ಮನೆಯ ಯುವಕ ಅಥವಾ ಯುವತಿ ಆ ಕ್ಷೇತ್ರದಲ್ಲಿ ಸಾಧನೆ ಮಾಡಲು ಹೊರಟಾಗ ಕಡಿವಾಣ ಹಾಕುತ್ತೇವೆ. ಮೊದಲು ವಯಸ್ಕರು ತಮ್ಮನ್ನು ತಾವು ವಿಮರ್ಶಿಸಿಕೊಳ್ಳುವ ಅಗತ್ಯತೆ ಇದೆ.
ಯುವಜನತೆ ವಾಸ್ತವದಲ್ಲಿ ಎಲ್ಲಾ ರೀತಿಯಿಂದಲೂ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಷ್ಟಗಳನ್ನು, ದೌರ್ಜನಗಳನ್ನು ಅನುಭವಿಸುತಲೇ ಇದ್ದಾರೆ. ಸಾಮಾಜಿಕವಾಗಿ ಜಾತಿಯ, ಲಿಂಗದ, ಧರ್ಮದ, ವರ್ಣದ, ವರ್ಗದ ಕಾರಣಕ್ಕಾಗಿ ದೌರ್ಜನಗಳನ್ನು ಅನುಭವಿಸಿದರೆ, ಕೌಟುಂಬಿಕವಾಗಿ ನಿರ್ಲಕ್ಷ, ತಾತ್ಸಾರ, ನಿರ್ಧಾರ ಹೇರಿಕೆ, ಇತರರೊಂದಿಗೆ ಹೋಲಿಕೆಗಳಂತಹ ಮಾನಸಿಕ ಕಷ್ಟಗಳನ್ನು ಸಹಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಶೈಕ್ಷಣಿಕವಾಗಿ ಒತ್ತಡ, ವೃತ್ತಿ ಹಾಗು ಶೈಕ್ಷಣಿಕ ಮಾರ್ಗದರ್ಶನ ಸಿಗದೇ ಇರುವುದು, ಲೈಂಗಿಕ ದೌರ್ಜನ್ಯಗಳು, ಶಿಕ್ಷೆ ರೂಪದಲ್ಲಿ ಅವಮಾನಗಳಂತಹ ಹಿಂಸೆಯನ್ನು ಅರಿವಿಲ್ಲದೆ ಸಹಿಸಿಕೊಳ್ಳುವ ದುಸ್ಥಿತಿಯಲ್ಲಿ ಯುವಜನತೆ ಇದಾರೆ.
ಇದೆಲ್ಲದಕ್ಕೂ ಸೂಕ್ತ ಪರಿಹಾರ ಎಂದರೆ ಅತಿ ಹೆಚ್ಚು ತಿರಸ್ಕಾರಕ್ಕೆ ಒಳಗಾಗಿರುವ ಯುವ ಸಮುದಾಯಕ್ಕೆ ಎಲ್ಲಾ ಕ್ಷೇತ್ರಗಳಲ್ಲಿಯೂ ವಿಶೇಷ ಆದ್ಯತೆ, ರಕ್ಷಣೆ ಹಾಗೂ ಹಕ್ಕುಗಳು ಸಿಗುವ ಅಗತ್ಯ ಇದೆ. ಶಿಕ್ಷಣ ಪಡೆಯುತ್ತಿರುವ ಯುವ ಜನತೆಗೆ ಶೈಕ್ಷಣಿಕ ಸವಲತ್ತುಗಳು, ಉತ್ತಮ ಕಾಲೇಜುಗಳು, ವಸತಿ ನಿಲಯಗಳು, ಬಸ್ ವ್ಯವಸ್ಥೆಗಳು ಮಾತ್ರವಲ್ಲದೆ ವೃತ್ತಿ ಹಾಗು ಶೈಕ್ಷಣಿಕ ಮಾರ್ಗದರ್ಶನ, ಲೈಂಗಿಕ ಶಿಕ್ಷಣ, ಆಪ್ತ ಸಮಾಲೋಚನೆ, ಕಾನೂನು ಅರಿವು, ಜೀವನ ಕೌಶಲ್ಯಗಳಂತಹ ಜೀವನ ರೂಪಿಸುವ ಶಿಕ್ಷಣ ನೀಡುವುದು ಅತ್ಯಗತ್ಯವಾಗಿದೆ. ಈ ಎಲ್ಲಾ ಶಿಕ್ಷಣದಿಂದ ಯುವ ಜನತೆ ದಾರಿ ತಪ್ಪುವುದನ್ನು ಹಾಗೂ ಆತ್ಮಹತ್ಯೆಗಳನ್ನು ಮಾಡಿಕೊಳ್ಳುವುದನ್ನು ತಡೆಗಟ್ಟಬಹುದಾಗಿದೆ. ಇವುಗಳ ಜೊತೆಗೆ ಶಾಲಾ ಮಕ್ಕಳಿಗೆ ನೀಡುವ ಹಾಗೆ ಮಧ್ಯಾಹ್ನದ ಬಿಸಿಯೂಟವನ್ನು ಕಾಲೇಜುಗಳಲ್ಲಿ ನೀಡುವುದು ಕೂಡ ಯುವಜನತೆ ಆರೋಗ್ಯದ ಕಾರಣಕ್ಕೆ ಅವಶ್ಯಕವಾಗಿದೆ
ಇನ್ನು ಯುವಜನತೆಯ ರಕ್ಷಣೆಯ ವಿಚಾರಕ್ಕೆ ಬಂದರೆ ಮಕ್ಕಳ ಸಹಾಯವಾಣಿಯ ರೀತಿಯಲ್ಲಿ ಯುವಜನ ಸಹಾಯವಾಣಿ (155265) ಕೂಡ ಆರಂಭವಾಗಿದೆ. ಇದು ಮುನ್ನೆಲೆಗೆ ಬರುವ ಅವಶ್ಯಕತೆ ಇದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ” ಯುವ ಸ್ಪಂದನ ” ಎನ್ನುವ ಕಾರ್ಯಕ್ರಮವು ಯುವಜನರ ಮಾನಸಿಕ ತುಮಲಗಳಿಗೆ ಪರಿಹಾರ ನೀಡಲೆಂದು ರೂಪಿತವಾಗಿದೆ. ಆದರೆ ಈ ಕಾರ್ಯಕ್ರಮ ಎಷ್ಟೋ ಯುವ ಜನರಿಗೆ ತಿಳಿದಿಲ್ಲ ಎನ್ನುವುದೇ ವಿಪರ್ಯಾಸ. ಹಾಗಾಗಿ ಸಹಾಯವಾಣಿಯ ಬಗ್ಗೆ ಹೆಚ್ಚು ಪ್ರಚಾರ ಮಾಡುವುದರಿಂದ ಯುವಜನತೆ ತಾವಿದ್ದ ಸ್ಥಳದಿಂದಲೇ ತಮ್ಮ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಸಾಧ್ಯವಾಗುತ್ತದೆ.
ಯುವಜನತೆ ಆಯ್ಕೆಗಳನ್ನು ಮಾಡುವ ವಿಚಾರದಲ್ಲಿ ಯಾವುದೇ ಸ್ವತಂತ್ರವನ್ನು ಹೊಂದಿರುವಂತೆ ಕಾಣುವುದಿಲ್ಲ. ಕಾರಣ ಅವರ ಶಿಕ್ಷಣ ಮುಗಿಸುವವರೆಗೂ ಎಲ್ಲಾ ಆಯ್ಕೆಗಳನ್ನು ಪೋಷಕರೇ ನಿರ್ಧರಿಸುವುದು ನಮ್ಮ ಸಮಾಜದಲ್ಲಿ ಸಹಜ ಪ್ರಕ್ರಿಯೆ ಆಗಿಬಿಟ್ಟಿದೆ. ಆದರೆ ಯುವ ಜನರಿಗೂ ಆಯ್ಕೆ ಹಕ್ಕು ಇದೆ ಎಂಬುದನ್ನು ಮರೆತುಬಿಟ್ಟಿದ್ದೇವೆ. ಯುವ ಜನತೆಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಆಯ್ಕೆ ಅಧಿಕಾರ ಕೊಟ್ಟು ಅದಕ್ಕೊಂದಷ್ಟು ಬೆಂಬಲ ನೀಡಿದರೆ ಅವರು ಖಂಡಿತವಾಗಿಯೂ ಸಫಲರಾಗುತ್ತಾರೆ.
ಆದ್ದರಿಂದ ದೇಶದ ಭವಿಷ್ಯ, ಅತಿ ದೊಡ್ಡ ಸಮುದಾಯ, ಯುವಶಕ್ತಿ ದೇಶದ ಆಸ್ತಿ ಎಂದೆಲ್ಲಾ ಹೊಗಳಿಸಿಕೊಳ್ಳುವ ಯುವ ಜನತೆಗೆ ಹೊಗಳಿಕೆಗಳಿಗೆ ಸರಿದೂಗುವಂತಹ ಬೆಂಬಲ, ರಕ್ಷಣೆ, ಆದ್ಯತೆ, ಹಕ್ಕುಗಳು ಕಾನೂನಾತ್ಮಕವಾಗಿ ಸಿಗುವುದು ಮುಖ್ಯವಾಗಿದೆ. ಹಾಗೆ ಇದಕ್ಕಿ ಧ್ವನಿ ಆಗಬೇಕಿರುವುದು ಸಹ ಯುವ ಜನತೆಯೇ ಹೊರತು ಬೇರೆ ಯಾರು ಅಲ್ಲ. ತಮ್ಮ ಹಕ್ಕುಗಳಿಗಾಗಿ ಯುವಜನತೆಯೇ ಪ್ರತಿಪಾದಿಸಬೇಕಿದೆ. ಚುನಾವಣಾ ಸಮಯದಲ್ಲಿ ರಾಜಕೀಯ ದಾಳವಾಗಿ ಬಳಸಿಕೊಳ್ಳಲಾಗುವ ಈ ಯುವಜನತೆ, ತಮ್ಮ ಪರವಾದ ಕೆಲಸಗಳಿಗೆ ಸರ್ಕಾರಗಳನ್ನು ಒತ್ತಾಯಿಸುವ ಅಗತ್ಯವಿದೆ. ಹಾಗೆಯೇ ಈ ಒತ್ತಾಯದ ಧ್ವನಿಗೆ ನಮ್ಮೆಲ್ಲರ ಬೆಂಬಲದ ಅಗತ್ಯವೂ ಇರುವುದು ಸುಳ್ಳಲ್ಲ.
ಮೇಘ ರಾಮದಾಸ್ ಜಿ
ಯುವಜನ ಕಾರ್ಯಕರ್ತರು
ಕಾರ್ಯದರ್ಶಿ ಹೊಂಬಾಳೆ ಟ್ರಸ್ಟ್
ಗುಳಿಗೇನಹಳ್ಳಿ, ಸಿರಾ, ತುಮಕೂರು