ಸಮಾಜ ಸಂಗಾತಿ
ಡಾ.ಸುಮತಿ ಪಿ
ʼಆಧುನಿಕತೆ ಮತ್ತು ಮಾನವೀಯತೆʼ

ಇದು ಬದಲಾವಣೆಯ ಯುಗ. ಪ್ರತಿ ಕ್ಷಣ ಕ್ಷಣವು ನಾವು ಬದಲಾವಣೆಯನ್ನು ಕಾಣುತ್ತೇವೆ.ಇಂಥ ಬದಲಾವಣೆಯ ಯುಗದಲ್ಲಿ ಬದಲಾವಣಿಗೆ ತಕ್ಕಂತೆ ಹೊಂದಿಕೊಂಡು ಬದುಕುವುದು ಅನಿವಾರ್ಯವಾಗಿದೆ.ಆದರೆ ಆಧುನಿಕತೆಯ ಬದಲಾವಣೆಯ ಹೆಸರಿನಲ್ಲಿ ನಮ್ಮತನವನ್ನು ನಾವು ಮರೆಯುತ್ತಿದ್ದೇವೆ.ಆಧುನಿಕತೆ ಮೈಗೂಡಿಸಿಕೊಂಡು ತಾಂತ್ರಿಕವಾಗಿ ಮುಂದುವರಿಯುತ್ತಿದ್ದೇವೆ.ಆದರೆ ನಮ್ಮಲ್ಲಿ ಇರಬೇಕಾದ ಮಾನವೀಯ ಮೌಲ್ಯಗಳನ್ನು ಮರೆಯುತ್ತಿದ್ದೇವೆ.ನಾವು ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ನೀತಿ ,ನಿಯಮ, ಶಿಸ್ತು ಸಂಯಮ ಆದರ್ಶ ಗುಣಗಳೇ ಜೀವನ ಮೌಲ್ಯಗಳು ಆಗಿವೆ. ಇಂತಹ ಜೀವನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ, ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ.ಆದರೆ ಆಧುನಿಕ ಯುಗದಲ್ಲಿ ಇಂತಹ ವ್ಯಕ್ತಿತ್ವವೇ ಮರೆಯಾಗುತ್ತಿದೆ ಎಂದು ಹೇಳಬಹುದು,
ಇಂದು ಆಧುನಿಕತೆಯ ಹೆಸರಿನಲ್ಲಿ ಮಾನವ ತನ್ನ ಜೀವಿತಾವಧಿಯಲ್ಲಿ ಸ್ವಾರ್ಥ ಸಾಧಿಸುವುದರಲ್ಲಿಯೇ ಮುಳುಗಿ,ಅತ್ಯಮೂಲ್ಯ ಜೀವನವನ್ನು ವ್ಯರ್ಥ ಮಾಡುತ್ತಿದ್ದಾನೆ. ಹುಟ್ಟು ಸಾವುಗಳ ನಡುವಿನ ಬದುಕಿನಲ್ಲಿ ಏನಾದರೂ ಸಾಧಿಸಬೇಕು.ಸಮಾಜದಲ್ಲಿ ಉಪಯುಕ್ತ ವ್ಯಕ್ತಿಯಾಗಿ ಬಾಳಬೇಕು.ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಇತರರಿಗೆ ಮಾದರಿಯಾಗಬೇಕು ಎನ್ನುವುದನ್ನು ಮರೆತುಬಿಟ್ಟಿದ್ದಾನೆ. ಹಣದ,ಅಧಿಕಾರದ ಹಿಂದೆ ಓಡುತ್ತಿರುವ ಮನುಷ್ಯ ಮಾನವೀಯತೆಯನ್ನು ಮರೆತು,ಇತರರನ್ನು ತುಳಿದು ತಾನು ವಿಜೃಂಭಿಸುವುದನ್ನು ಕಾಣಬಹುದು.ಇವತ್ತು ನಮ್ಮ ಹೃದಯ ಕಲ್ಲಾಗುತ್ತಿದೆ.ಇತರರ ನೋವಿಗೆ ಸ್ಪಂಧಿಸದಷ್ಟೂ ಕ್ರೂರಿಗಳಾಗುತ್ತಿದ್ದೇವೆ. ನಾನು,ನನ್ನದು ಎನ್ನುವ ಸಂಕುಚಿತತೆ ಕಾಣುತ್ತಿದ್ದೇವೆ.

ಮನುಷ್ಯನಲ್ಲಿ ಪ್ರೀತಿ, ದಯೆ, ಸಹನೆ,ಕರುಣೆ, ಅನುಕಂಪ ಈ ಮೊದಲಾದ ಗುಣಗಳಿದ್ದರೆ ಮಾತ್ರ ಮನುಷ್ಯ ಮಾನವ ಎನಿಸಿಕೊಳ್ಳುತ್ತಾನೆ. ಆದರೆ ಆಧುನಿಕ ಸಮಾಜದಲ್ಲಿ ಈ ಗುಣಗಳು ಮರೆಯಾಗುತ್ತಿವೆ. ಆಧುನಿಕತೆಯ ಹೆಸರಿನಲ್ಲಿ ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸಿಕೊಂಡು ನಮ್ಮ ಜೀವನ ಮೌಲ್ಯಗಳನ್ನು ನಾವು ನಮಗರಿವಿಲ್ಲದಂತೆಯೇ ಕಳೆದುಕೊಳ್ಳುತ್ತಿದ್ದೇವೆ. ಸಮಾಜದಲ್ಲಿ ಹಣ, ಅಂತಸ್ತು,ಅಧಿಕಾರ ವಿಜೃಂಭಿಸುವಾಗ,ಮಾನವೀಯ ಮೌಲ್ಯಗಳು ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿವೆ. ವೈಜ್ಞಾನಿಕವಾಗಿ, ಯಾಂತ್ರಿಕವಾಗಿ ,ಸಾಮಾಜಿಕವಾಗಿ ಪ್ರಗತಿ ಹೊಂದಿದಷ್ಟು ನಮ್ಮಲ್ಲಿರುವಂತಹ ಜೀವನ ಮೌಲ್ಯಗಳು ಕುಸಿಯುತ್ತಿವೆ.ಮನುಷ್ಯನ ಭಾವನೆಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಸಮಾಜದಲ್ಲಿ ಸಂಬಂಧಗಳು ಬಿರುಕು ಬಿಟ್ಟಿವೆ.ಮನುಷ್ಯರ ಮನಸುಗಳ ನಡುವೆ ಗೋಡೆ ನಿರ್ಮಾಣವಾಗಿದೆ.
ಮಾನವೀಯತೆ ಎನ್ನುವುದು ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿದೆ.ಅದು ನಮ್ಮ ಸಂಸ್ಕೃತಿಯ ಸಾರವಾಗಿದೆ.ಇಂತಹ ಮಾನವೀಯ ಮೌಲ್ಯಗಳನ್ನು ತೊರೆದು ಬದುಕುತ್ತಿದ್ದರೆ,ಅದು ಮನುಷ್ಯತ್ವ ಅಲ್ಲ,ಮೃಗತ್ವ ಎಂದೇ ಹೇಳಬಹುದು. ಆಧುನಿಕತೆಯಿಂದಾಗಿ ಹೆಚ್ಚು ಹೆಚ್ಚು ಜ್ಞಾನವನ್ನು ಗಳಿಸಿದಂತೆ ಪ್ರಾಮಾಣಿಕತೆ ಎನ್ನುವುದು ಕ್ಷೀಣಿಸುತ್ತಿದೆ. ಮನುಷ್ಯನಲ್ಲಿ ಅಹಂ ಹೆಚ್ಚಾಗುತ್ತಿದೆ. ಬದುಕನ್ನು ಕಟ್ಟಿಕೊಳ್ಳಬೇಕಾದಂತಹ ಜನರು ಸಂಸಾರವನ್ನು ಒಡೆಯುತ್ತಿದ್ದಾರೆ.ಪ್ರೀತಿ, ವಿಶ್ವಾಸ,ನಂಬಿಕೆ ಎನ್ನುವುದು ಮರೀಚಿಕೆಯಾಗುತ್ತಿದೆ.
ಎಲ್ಲರೂ ಇಂದು ಸ್ವಾರ್ಥಕ್ಕೆ ದಾಸರಾಗಿದ್ದಾರೆ. ಇದರಿಂದ ಮಾನವ ಸಂಬಂಧಗಳೇ ಮರೆಯಾಗುತ್ತಿವೆ. ಇಂದು ಪ್ರತಿಷ್ಠೆ,ಅಧಿಕಾರ,ಅಂತಸ್ತು, ಜನಪ್ರಿಯತೆಯ ಮುಷ್ಠಿಗೆ ಒಳಗಾಗಿ ಜನತೆ ತತ್ತರಿಸುತ್ತಿದೆ. ಮಾರ್ಗದರ್ಶನ ನೀಡಬೇಕಾದವರೇ ಸ್ವಾರ್ಥ ಸಾಧನೆಯಲ್ಲಿ ನಿರತರಾಗಿದ್ದಾರೆ.ಕಾನೂನಿನ ಚೌಕಟ್ಟನ್ನು ಮೀರುವ ಘಟನೆಗಳು ನಡೆಯುತ್ತಿದ್ದು,ಸಮಾಜದ ಸ್ವಾಸ್ಥ್ಯವು ಕೆಡುತ್ತಿದೆ. ಸಮಾಜದಲ್ಲಿ ಶ್ರೀಮಂತಿಕೆ ಮತ್ತು ಅಧಿಕಾರಕ್ಕೆ ಬೆಲೆ ನೀಡುವುದರ ಜೊತೆಗೆ ಮಾನವೀಯ ಮೌಲ್ಯಗಳ ಗುರುತಿಸುವಿಕೆಯೂ ನಡೆಯಬೇಕಾಗಿದೆ.ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳದೆ ಸಮಾಜದ ಸುಧಾರಣೆ ಸಾಧ್ಯವಿಲ್ಲ. ಪ್ರತಿಯೊಬ್ಬರೂ ಕಾನೂನಿನ ಚೌಕಟ್ಟಿನಲ್ಲಿ ಅಭಿವೃದ್ಧಿ ಹೊಂದುತ್ತಾ,ಇತರರ ಅಭಿವೃದ್ಧಿಗೆ ಸಹಕರಿಸುವ ಮನಸ್ಸು ಮಾಡದ ಹೊರತು ಮಾನವೀಯ ಸಮಾಜ ನಿರ್ಮಾಣವಾಗದು.
ಇಂದು ಹಿರಿಯರಾದ ನಾವುಗಳು ಮಾನವೀಯತೆಯನ್ನು ಮೈಗೂಡಿಸಿಕೊಂಡು,ಕಿರಿಯರಿಗೆ ಮಾದರಿಯಾಗಿ,ನಮ್ಮ ಮಕ್ಕಳು ಇತರರನ್ನು,ಹಿರಿಯರನ್ನು,ಹೆಣ್ಣು ಮಕ್ಕಳನ್ನು ಯಾವರೀತಿ ಗೌರವದಿಂದ ಕಾಣಬೇಕೆಂಬುವುದನ್ನು ಕಲಿಸಿಕೊಡಬೇಕಾದ ಅನಿವಾರ್ಯತೆ ಇದೆ.ಸಂಬಂಧಗಳ ಪ್ರಾವಿತ್ರ್ಯತೆಯ ಬಗ್ಗೆ ಮನದಟ್ಟು ಮಾಡಬೇಕಾಗಿದೆ.ಆಧುನಿಕತೆ ಎಂದರೆ ಮಾನವೀಯತೆ, ಸಂಸ್ಕಾರ , ಸಂಸ್ಕೃತಿ ಮರೆಯುವುದೆಂದರ್ಥವಲ್ಲ.ಮಾನವೀಯತೆಯೊಂದಿಗೆ ಆಧುನಿಕತೆಗೆ ತೆರೆದುಕೊಳ್ಳಬೇಕಾಗಿದೆ.ಈಗಾಗಲೇ ಸಮಾಜದಲ್ಲಿ ಭಯದಿಂದ ಬದುಕುವ ಸ್ಥಿತಿ ನಿರ್ಮಾಣವಾಗಿದೆ.ಸಮಾಜದಲ್ಲಿ ಶಾಂತಿಯುತವಾದ ನೆಮ್ಮದಿಯ ಜೀವನ ನಡೆಸಬೇಕಾದರೆ ‘ಎಲ್ಲೇ ಇದ್ದರೂ,ಏನೇ ಮಾಡಿದರೂ ಮೊದಲು ಮಾನವೀಯತೆ ಮೈಗೂಡಿಸಿಕೊಂಡಿರು’ಎಂಬ ತತ್ವ ಅಳವಡಿಸಿಕೊಳ್ಳಬೇಕು.ಮಾನವೀಯತೆಯು ಬದುಕಿನ ದಿಕ್ಸೂಚಿ ಯಾಗಬೇಕು.
ಡಾ.ಸುಮತಿ ಪಿ

Nice madam