‘ಬದುಕಿನಲ್ಲಿ ಗಾದೆ’ ಹಾಸ್ಯಲೇಖನ-ರಾಗರಂಜನಿ

ಹೇಳಿ ಕೇಳಿ ನಮ್ಮದು ಹಳ್ಳಿ
ವ್ಯವಸಾಯ ಅಂದ ಮೇಲೆ ದನಕರು ಇದ್ದದ್ದೇ ತಾನೇ
ನಮಗೂ ಒಂದಷ್ಟು ಎಕ್ರೆ ಜಮೀನಿದೆ ಆದರೆ ಕೆಲಸಕ್ಕೆ ಆಳುಗಳ ಕೊರತೆಯಿಂದ ಹೆಚ್ಚಿನವು ಹಡಿಲು ಬಿದ್ದಿದೆ
ಆದರೆ ದನಕರುಗಳಿಗೆ ಮೇವಿಗೆ ಹುಲ್ಲು ಸಾಕಷ್ಟು ಸಿಗುತ್ತೆ
ನಾವು ಬೆಳಿಗ್ಗೆ ಹಸುಗಳನ್ನು ಅಲ್ಲಿ ಬಿಟ್ಟು ಬಂದರೆ ಮಧ್ಯಾಹ್ನದ ಹೊತ್ತಿಗೆ ಅಟ್ಟಿಕೊಂಡು ಬರುವುದು ಅವು ಸೀದಾ ಮನೆಗೆ ಬರುತ್ತಿದ್ದವು
ಅದೊಂದು ದಿನ ಏನಾಯ್ತು ಅಂದ್ರೆ ಅದೇನೋ
ಕೆಟ್ಟು ಪಟ್ಣ ಸೇರು ಅಂತಾರಲ್ಲ ಹಾಗೇ ಹಸುಗಳು
ಆನೆ ನಡೆದದ್ದೇ ದಾರಿ ಅಂತ ಸೀದಾ ಸಿಕ್ಕಿದ ದಾರಿಯಲ್ಲಿ ಹೋಗಿಬಿಟ್ಟಿವೇ ನೋಡ್ರೀ
ಅಲ್ಲೊಂದು ಮನೆ
ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಅನ್ನೋ ಜನ ಅವರು
ಹಿತ್ತಲ ಗಿಡ ಮದ್ದಲ್ಲ ಅಂತಾರಲ್ಲ ಹಾಗೆ ನಮ್ಮ ಸ್ಥಳೀಯವಾಗಿ ಸಿಗುವ ಹೂವಿನ ಗಿಡಗಳನ್ನು ಕಡಿದು ಹಣ ಕೊಟ್ಟು ನರ್ಸರಿಯಿಂದ ಗಿಡ ತಂದು ನೆಟ್ಟಿದ್ದರಂತೆ
ನಮ್ಮ ಹಸುಗಳಿಗೇನು ಗೊತ್ತು
ಹುಚ್ಚನ ಮದುವೆ ಮನೆಯಲ್ಲಿ ಉಂಡವನೆ ಜಾಣ ಅನ್ನೋ ಹಾಗೆ ಸಿಕ್ಕಿದ್ದನ್ನೆಲ್ಲಾ ತಿಂದು ಬಿಟ್ಟಿವೆ ಇನ್ನು ಮನೆಯವರ ಬಗ್ಗೆ ಕೇಳ್ಬೇಕಾ
ಅವರೋ ನಮ್ಮ ಮನೆಗೆ ಬಂದು ಯದ್ವಾ ತದ್ವಾ ಹೇಳಿ ಹೋದರು
ನನ್ ತಾತ ತುಂಬಾ ಸ್ವಾಭಿಮಾನಿ ಅವರು ಇದರಿಂದ ತುಂಬಾ ನೊಂದು ಕೊಂಡರು ನಾಳೆಯಿಂದ ಒಂದು ವಾರ ಯಾರಾದರೂ ಹಸುಗಳ ಜೊತೆಗೆ ಹೋಗಿ ಅವುಗಳನ್ನು ಮೇಯಿಸಬೇಕು ಅನ್ನೋ ಫರ್ಮಾನು ಹೊರಡಿಸಿದರು
ಅದಕ್ಕೆ ಸರಿಯಾಗಿ ಮರುದಿನ ನನಗೆ ಕಾಲೇಜುಗೂ ರಜೆ ಇರಬೇಕೆ….
ಮೊದಲ ಸರದಿ ನನ್ನದೇ
ವೈದ್ಯ ಹೇಳಿದ್ದೂ ಹಾಲು ರೋಗಿ ಬಯಸಿದ್ದೂ ಹಾಲು ಎಂಬಂತೆ ಬಹಳ ಖುಷಿ ಆಯ್ತು ಮನೆಯಲ್ಲಿ ಇದ್ರೆ ಇಡೀ ದಿನ ಮೊಬೈಲ್ ನೋಡೋಕೆ ಬಿಡಲ್ಲ ಅಲ್ಲಿ ಕೂತು ಹಾಯಾಗಿ ನೋಡಬಹುದು ಯಾರೂ ಕೇಳೋರಿಲ್ಲ ಹೇಳೋರಿಲ್ಲ ಅಂತ ಮನಸಿನಲ್ಲೇ ಮಂಡಿಗೆ ತಿನ್ನುತ್ತಾ ಬೆಳಿಗ್ಗೆ ಆಗುವುದನ್ನೇ ಕಾಯುತ್ತಾ ಮಲಗಿದೆ
ಮರುದಿನ ಹಸುಗಳನ್ನು ಮೇಯಲು ಬಿಟ್ಟು ನೋಡ್ತೇನೆ
ರಾಮೇಶ್ವರಕ್ಕೆ ಹೋದರೂ ಶನೀಶ್ವರನ ಕಾಟ ತಪ್ಪಲಿಲ್ಲ ಅನ್ನೋ ತರ ಅಲ್ಲಿ ಮೊಬೈಲ್ ಗೆ ಒಂದು ಚೂರೂ ನೆಟ್ವರ್ಕ್ ಸಿಗ್ತಾ ಇಲ್ಲ
ಮುಳುಗುತ್ತಿರುವವನಿಗೆ ಕಂಕುಳಲ್ಲ್ಲೊಂದು ಭಾರ
ಎಂಬಂತೆ ನೀರಿನ ಬಾಟಲ್ ಹಾಗೂ ತಿನ್ನಲು ಒಯ್ದ ಕಡ್ಲೆ ಪುರಿ ಪಾಕೆಟ್ ಜೊತೆಗೆ ಮೊಬೈಲ್ ಭಾರ ಅನಿಸತೊಡಗಿತು
ಇನ್ನೇನ್ ಮಾಡೋದು ಕೆಳಗೆ ಎಲ್ಲಾದರೂ ಕೂರೋಣ ಅಂದ್ರೆ ಇರುವೆ, ಕೀಟ, ಹಾವುಗಳ ಭಯ
ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆ ಎಂತಯ್ಯಾ ಎಂದು ನನ್ನನ್ನೇ ನಾನು ಸಮಾಧಾನ ಪಡಿಸಿ ಒಂದು ಮರದ ನೆರಳಿನಲ್ಲಿ ಕೂತೆ
ಬೀಸುವ ತಂಗಾಳಿಗೆ ಯಾವಾಗ ನಿದ್ದೆ ಬಂತೋ ಗೊತ್ತಿಲ್ಲ.. ಇಲ್ಲಿ ನೋಡು ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ ಅನ್ನೋ ಮಾತ್ ಕೇಳಿ ಕಣ್ಣು ಬಿಡ್ತೇನೆ ತಾತ ಮತ್ತು ಪಪ್ಪ ನನ್ನೆದುರು ನಿಂತಿದ್ದಾರೆ
ಆಮೇಲೆ ಗೊತ್ತಾಯ್ತು ದನಗಳು ಅವುಗಳ ಸಮಯ ಆದ ಕೂಡಲೇ ನೇರ ಮನೆಗೆ ಹೋಗಿವೆ ಆದರೆ ನಾನು ಬರದಿದ್ದನ್ನು ಕಂಡು ಮನೆಯಲ್ಲಿ ಎಲ್ರೂ ಗಾಬರಿಯಾಗಿ ಹುಡುಕಿಕೊಂಡು ಬಂದಿದ್ರು
ಮತ್ತೆಂದೂ ನನ್ನನ್ನು ದನ ಕಾಯೋ ಕೆಲಸಕ್ಕೆ ಕಳಿಸಿಲ್ಲ ಅನ್ನೋದನ್ನ ಬೇರೆ ಹೇಳ್ಬೇಕಿಲ್ಲ ಅಲ್ವಾ?

————————-

12 thoughts on “‘ಬದುಕಿನಲ್ಲಿ ಗಾದೆ’ ಹಾಸ್ಯಲೇಖನ-ರಾಗರಂಜನಿ

    1. ಧನ್ಯವಾದಗಳು
      ಪ್ರತಿಕ್ರಿಯೆಗೆ ವಂದನೆ ತಮಗೆ

Leave a Reply

Back To Top