ವಚನ ಸಂಗಾತಿ
ಡಾ.ಶಾರದಾಮಣಿ. ಏಸ್. ಹುನಶಾಳ
ವಚನಮಾಲಿಕೆ-
ಚೆನ್ನಬಸವಣ್ಣನವರು.

. ಚೆನ್ನಬಸವಣ್ಣನವರು.
ತಾಯಿ — ಅಕ್ಕನಾಗಲಂಬಿಕೆ .
ತಂದೆ — ಶಿವದೇವ.
ಹುಟ್ಟಿದ ಸ್ಥಳ – ಇಂಗಳೇಶ್ವರ.
ಕಾಲ -೧೨ನೆಯ ಶತಮಾನ.
ಸೋದರಮಾವ – ಗುರುಬಸವಣ್ಣವರು .
ಒಟ್ಟು ವಚನಗಳು – ೧೧೭೪
ಬಸವಣ್ಣನವರ ಪ್ರಕಾರ – ಜನ್ಮತಃ ಜ್ಞಾನ ಪರಿಮಳಭರಿತ.
ಪ್ರಭುದೇವರ ದೃಷ್ಟಿಯಲ್ಲಿ – ಅವಿರಳ ಜ್ಞಾನಿ,ಸ್ವಯಂಭೂ ಜ್ಞಾನಿ. ಅಕ್ಕಮಹಾದೇವಿಯವರ ದೃಷ್ಟಿಯಲ್ಲಿ* – ಅವಿರಳ ಜ್ಞಾನಿ, ಸಮ್ಯಕ್ ಜ್ಞಾನಿ.

ಹನ್ನೆರಡನೆಯ ಶತಮಾನದಲ್ಲಿ ಉದಯಿಸಿ,ಕಿರಿದಾದ ವಯಸ್ಸಿನಲ್ಲಿಯೇ ಅತ್ಯುನ್ನತ ಆಧ್ಯಾತ್ಮದ ಶಿಖರಕ್ಕೇರಿ, ಜನರಲ್ಲಿದ್ದ ಅಜ್ಞಾನವನ್ನು ತೊಡೆದು ,ಸುಜ್ಞಾನವನ್ನು ನೀಡಲು ಆಗಮಿಸಿದ ಮಹಾ ಚೈತನ್ಯವೇ ಚೆನ್ನಬಸವಣ್ಣನವರು. ಇವರಿಗೆ ತಾಯಿಯ ಹಾಗೂ ಸೋದರ ಮಾವನಾದ ಬಸವಣ್ಣವರ ಗಾಢ ಪ್ರಭಾವ ಆತನನ್ನು ಅವಿರಳ ಜ್ಞಾನಿಯಾಗಿ, ಸಮ್ಯಕ್ ಜ್ಞಾನಿಯಾಗಿ, ಸ್ವಯಂಭೂಜ್ಞಾನಿ, ಷಟ್ ಸ್ಸ್ಥಲ ಚಕ್ರವರ್ತಿ ಎಂದು ಕರೆಸಿಕೊಳ್ಳುವ ಚೆನ್ನಬಸವಣ್ಣನವರು, ಶರಣ ಸಮಾಜದ ನಿರ್ಮಾಣದಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು. ಬಸವಣ್ಣನವರೇ “ನಾನೊಂದು ಕಾರಣ ಮರ್ತ್ಯಕ್ಕೆ ಬಂದೆನು, ಬಂದ ಮಣಿಹವ ಪೂರೈಸಲು, ಚೆನ್ನ ಬಸವಣ್ಣ ಬಂದರು, ಇನ್ನು ಬಾರದಂತೆ, ಪ್ರಭುದೇವರು ಬಂದರು,ಇದಕ್ಕೆ ಆಜ್ಞಾಕರ್ತೃ ಮಡಿವಾಳ ಮಾಚಿ ತಂದೆ ಬಂದರು ! .. ಎಂದು ಹೇಳುವಲ್ಲಿ ಚೆನ್ನಬಸವಣ್ಣನವರ ಪಾತ್ರ ಎಷ್ಟು ಹಿರಿದು ಎಂಬುದನ್ನು ಗುರುತಿಸಬಹುದು.
ಚೆನ್ನಬಸವಣ್ಣನವರ ವಚನಗಳು ಎಲ್ಲ ಶರಣರ ವಚನಗಳಿಗಿಂತ ಅತ್ಯಂತ ತಾತ್ವಿಕವಾಗಿವೆ. ಇಂದು ಬಸವ ಅನುಯಾಯಿಗಳು ಅರಿತು ಆಚರಿಸಬೇಕಾದ ತತ್ವಗಳು,ಆಚರಣೆಗಳು ಸಮಗ್ರವಾಗಿ ನೋಡಬೇಕೆಂದರೆ, ಕೇವಲ ಚೆನ್ನಬಸವಣ್ಣನವರ ವಚನಗಳಲ್ಲಿ ಮಾತ್ರ ಲಭ್ಯವಿದೆ. ಅಕ್ಕಮಹಾದೇವಿಯಂತಹ ಮಹಾನ್ ಚೇತನದ ಪರಿಚಯವನ್ನು ಅನುಭವ ಮಂಟಪದ ಸದಸ್ಯರಿಗೆ ಮಾಡಿದವರೇ ಚೆನ್ನಬಸವಣ್ಣ. ಚೆನ್ನಬಸವಣ್ಣ ನವರ ವಚನಗಳು ನಮಗೆ ಆಧ್ಯಾತ್ಮಿಕ ಮಾರ್ಗದಲ್ಲಿ ನಡೆಯಲು ಮತ್ತು ಆಧ್ಯಾತ್ಮಿಕ ಅನುಭವವನ್ನು ಪಡೆಯಲು ಮಾರ್ಗದರ್ಶನ ನೀಡುತ್ತವೆ. ಆಧ್ಯಾತ್ಮದಲ್ಲಿ ತಾವು ಬೆಳೆದಂತೆ ಶರಣಮಾರ್ಗಕ್ಕೆ ನೂತನ ಆಯಾಮ ನೀಡಿದರು.ಅಸಾಮಾನ್ಯ ಜ್ಞಾನಭಂಡಾರವನ್ನು ಹೊತ್ತ ಅವರು, ಸರ್ವ ಶರಣರಿಗೆ ತತ್ವಗಳ ಅಳವಡಿಕೆಯಲ್ಲಿ ಮಾರ್ಗದರ್ಶಿಗಳಾದರು .ಅವರ ಈ ವಚನವನ್ನು ಅವಲೋಕನ ಮಾಡೋಣ. ಚನ್ನಬಸವಣ್ಣ
ಅಗ್ಗವಣಿ ಶರಣಂಗೆ , ತನುಸುಯಿದಾನವಾಗಬೇಕು.
ತನು ಸುಯಿದಾನವಾದ ಶರಣಂಗೆ
ಮನಸುಯಿದಾನವಾಗಬೇಕು**
ಮನ ಸುಯಿದಾನವಾದ *ಶರಣಂಗೆ
ಪ್ರಾಣದ ಮೇಲೆ ಲಿಂಗ ಸಯವಾಗಬೇಕು .ಪ್ರಾಣದ ಮೇಲೆ ಲಿಂಗ * *ಸಯವಾಗದಿರ್ದಡೆ*
ಇದೆಲ್ಲ ವೃಥಾ ಎಂದಿತ್ತು*
ಕೂಡಲಚೆನ್ನಸಂಗಯ್ಯನ ವಚನ
ಸಮಗ್ರ ವಚನ ಸಂಪುಟ: * 3 ವಚನದ ಸಂಖ್ಯೆ.884**
ಶರಣರ ಆಧ್ಯಾತ್ಮ ಸಾಧನೆಯ ಮೂರು ಹಂತಗಳನ್ನು ಈ ವಚನ ವಿವರಿಸುತ್ತದೆ. ಈ ವಚನ ಶರಣರ ಸಾಧನೆಯ ಮಹತ್ವ ತಿಳಿಸುತ್ತಾ ,ಆಧ್ಯಾತ್ಮಿಕ ಚಿಂತನೆಯಲ್ಲಿ ಮುಳುಗುವಂತೆ ಪ್ರೇರೇಪಿಸುತ್ತದೆ..
ಶರಣರ ವಚನಗಳಲ್ಲಿ ತನು, ಮನ ಮತ್ತು ಪ್ರಾಣಗಳ ನಿಗ್ರಹದ ಮಹತ್ವವನ್ನು ಈ ಕೆಳಗಿನಂತೆ ವಿವರಿಸಲಾಗಿದೆ:
ಚೆನ್ನ ಬಸವಣ್ಣನವರ ಈ ವಚನವು ಶರಣ ನಾಗುವ ಮಾರ್ಗವನ್ನು ವಿವರಿಸುತ್ತದೆ — ಶರಣ ತತ್ವದ ಪರಮಾವಧಿಯನ್ನು ವಿವರಿಸುತ್ತದೆ.
ಅಗ್ಗವಣಿ ಸುಯಿದಾನವಾದ ಶರಣoಗೆ ತನು ಸುಯಿದಾನವಾದಾಗ ಬೇಕು.
ಇಲ್ಲಿ ಅಗ್ಗವಣಿ ಎಂದರೆ, ಶುದ್ಧ ಜಲ,ಪೂಜೆಯ , ಶುದ್ದೋದಕ ನೀರು, ಸುಯಿದಾನ ಎಂದರೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವದು.
ಆಧ್ಯಾತ್ಮಿಕ ಜ್ಞಾನದಿಂದ ಪರಿಶುದ್ಧನಾದ ಶರಣನಿಗೆ,ಅವನ ದೇಹವು ಕೂಡ ದೇವರಿಗೆ ಅರ್ಪಿತ ವಾಗಬೇಕು.ದೇಹದ ಭೋಗಾಸಕ್ತಿಗಳು,ಸ್ವಾರ್ಥಗಳು,ತೊಲಗಿ, ದೇಹವು ಆ ಧ್ಯಾತ್ಮಿಕ ಕಾರ್ಯಗಳಿಗೆ ಬಳಕೆ ಯಾಗಬೇಕು. ‘ ಕಾಯಕವೇ ಕೈಲಾಸ ‘ ಎಂಬ ತತ್ವದ ಮೂಲಕ ಶರಣರು ದೈಹಿಕ ಶ್ರಮದ ಮಹತ್ವ ಮತ್ತು ಪ್ರಾಮಾಣಿಕ ಕೆಲಸದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.
ಶರಣರು ದೇಹವನ್ನು ಕೇವಲ ಭೌತಿಕ ಅಸ್ತಿತ್ವವೆಂದು ಪರಿಗಣಿಸದೆ, ಆಧ್ಯಾತ್ಮಿಕ ಸಾಧನೆಗೆ ಒಂದು ಸಾಧನವೆಂದು ಭಾವಿಸಿದ್ದಾರೆ.
* ದೇಹವನ್ನು ಶುದ್ಧ ,ಪ್ರಾಮಾಣಿಕ ಕಾಯಕದಲ್ಲಿ ಮತ್ತು ದಾಸೋಹದಲ್ಲಿ ತೊಡಗಿಸಿಕೊಳ್ಳುವುದು, ದೇಹವನ್ನು ದುಶ್ಚಟಗಳಿಂದ ದೂರವಿರಿಸಿ, ಸದಾಚಾರದಲ್ಲಿ ತೊಡಗಿಸಿಕೊಳ್ಳಲು ಶರಣರು ಕರೆ ನೀಡಿದ್ದಾರೆ.
ತನು ಸೂಯಿದಾನವಾದ ಶರಣoಗೆ ಮನ ಸುಯಿದಾನ ವಾಗಬೇಕು.
ಮನಸ್ಸನ್ನು ನಿಯಂತ್ರಿಸುವುದು ಬಹಳ ಮುಖ್ಯ ಎಂದು ಶರಣರು ಪ್ರತಿಪಾದಿಸಿದ್ದಾರೆ.
“ಎನ್ನ ಚಿತ್ತ ಅತ್ತಿಯ ಹಣ್ಣು ನೋಡಯ್ಯ,
ಎನ್ನ ಮನದ ಮರ್ಕಟವ ಹೊಗಲಾಡಿಸಯ್ಯ”, ಎಂಬ ವಚನದಲ್ಲಿ ಬಸವಣ್ಣ ಅವರು ಅಂತರಂಗದ ಶುದ್ಧಿಯ ಮಹತ್ವವನ್ನು ಹೇಳುತ್ತಾರೆ. ಮನಸ್ಸನ್ನು ಭಗವಂತನ ಚಿಂತನೆಯಲ್ಲಿ ನಿರತವಾಗಿರಿಸುವುದು, ದುರಾಲೋಚನೆಗಳಿಂದ ದೂರವಿರಿಸುವುದು ಮತ್ತು ಶಾಂತವಾಗಿರಿಸುವುದು.ಯೋಗ ಮತ್ತು,ಧ್ಯಾನ ಮನೋನಿಗ್ರಹದ ವಿಧಾನಗಳು.
ಮನಸ್ಸನ್ನು ನಿಯಂತ್ರಿಸುವುದರಿಂದ ಅಹಂಕಾರವನ್ನು ತೊರೆಯಲು ಮತ್ತು ಭಗವಂತನಿಗೆ ಶರಣಾಗಲು ಸಾಧ್ಯವಾಗುತ್ತದೆ.
ಪ್ರಾಣದ ಮೇಲೆ ಲಿಂಗದ ಅರಿವು ಸ್ಥಿರವಾಗುವುದು ಎಂದರೆ, ಪ್ರತಿ ಕ್ಷಣವೂ ದೈವಿಕ ಶಕ್ತಿಯ ಅರಿವಿನಲ್ಲಿ ಜೀವಿಸುವುದು. ಜೀವನದ ಪ್ರತಿಯೊಂದು ಉಸಿರಾಟವೂ ದೇವರಿಗೆ ಸಮರ್ಪಿತವಾಗಬೇಕು.
ಪ್ರಾಣದ ಮೇಲೆ ಲಿಂಗ ಸಯವಾಗದಿರ್ದಡೆ ಇದೆಲ್ಲ ವೃಥಾ ಎಂದಿತ್ತು ಕೂಡಲಚೆನ್ನಸಂಗಯ್ಯನ ವಚನ.
ಹೀಗೆ ಪ್ರಾಣದ ಮೇಲೆ ಲಿಂಗದ ಅರಿವು ಸ್ಥಿರವಾಗದಿದ್ದರೆ, ದೇಹ ಮತ್ತು ಮನಸ್ಸಿನ ಸಮರ್ಪಣೆಗಳು ವ್ಯರ್ಥವಾಗುತ್ತವೆ. ಅಂದರೆ, ಕೇವಲ ಬಾಹ್ಯವಾಗಿ ಸಮರ್ಪಿಸಿಕೊಂಡರೆ ಸಾಲದು,ಬದಲಾಗಿ ದೇಹ, ಮನಸ್ಸು ಮತ್ತು ಪ್ರಾಣಗಳನ್ನು ಸಂಪೂರ್ಣವಾಗಿ ದೇವರಿಗೆ ಅರ್ಪಿಸಬೇಕು. ಪ್ರತಿಯೊಂದು ಕ್ಷಣವೂ ಆಧ್ಯಾತ್ಮಿಕ ಅರಿವಿನಲ್ಲಿ ಜೀವಿಸುವುದೇ ನಿಜವಾದ ಶರಣತತ್ವ.
ಸಾರಾಂಶವಾಗಿ ,
ಈ ವಚನವು ಶರಣನಾಗಲು ಬೇಕಾದ ಮೂರು ಹಂತಗಳನ್ನು ವಿವರಿಸುತ್ತದೆ:
ಜ್ಞಾನದ ಮೂಲಕ ಅರಿವು ಪಡೆಯುವುದು.
ದೇಹ ಮತ್ತು ಮನಸ್ಸನ್ನು ಸಮರ್ಪಿಸಿಕೊಳ್ಳುವುದು..
ಪ್ರತಿ ಕ್ಷಣವೂ ಆಧ್ಯಾತ್ಮಿಕ ಅರಿವಿನಲ್ಲಿ ಜೀವಿಸುವುದು. ಪ್ರಾಣವನ್ನು ನಿಯಂತ್ರಿಸುವುದು ಎಂದರೆ ಜೀವನದ ಮೇಲೆ ನಿಯಂತ್ರಣವನ್ನು ಹೊಂದುವುದು. ಪ್ರಾಣವನ್ನು ಭಗವಂತನ ಸೇವೆಗೆ ಅರ್ಪಿಸುವುದು, ಜೀವನವನ್ನು ಸಾರ್ಥಕಗೊಳಿಸುವುದು ಮತ್ತು ಮರಣದ ಭಯವನ್ನು ತೊರೆಯುವುದು.
ಶರಣರ ವಚನಗಳಲ್ಲಿ ಈ ಮೂರು ಅಂಶಗಳ ನಿಗ್ರಹದ ಮಹತ್ವವನ್ನು ಈ ಕೆಳಗಿನಂತೆ ಸಾರಲಾಗಿದೆ:
ತನು, ಮನ ಮತ್ತು ಪ್ರಾಣಗಳನ್ನು ನಿಯಂತ್ರಿಸುವುದರಿಂದ ಭಗವಂತನಿಗೆ ಹತ್ತಿರವಾಗಲು ಸಾಧ್ಯವಾಗುತ್ತದೆ.
ಈ ಮೂರು ಅಂಶಗಳನ್ನು ನಿಯಂತ್ರಿಸುವುದರಿಂದ ಅಹಂಕಾರವನ್ನು ತೊರೆಯಲು ಮತ್ತು ವಿನಯವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ.
“ತನುವ ದಾಸೋಹಕ್ಕೆ ಸವೆಸಿ, ಮನವ ಲಿಂಗಧ್ಯಾನದಲ್ಲಿ ಸವೆಸಿ” ಎನ್ನುವ ಬಸವಣ್ಣನವರ ವಚನವು, ತನು, ಮನಗಳನ್ನು ಹೇಗೆ ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಈ ವಚನ ನಮಗೆ ಕಟ್ಟಿಕೊಡುತ್ತದೆ.
ಶರಣರ ವಚನಗಳು ಇಂದಿಗೂ ಸಹ ತನು,ಮನ ಮತ್ತು ಪ್ರಾಣಗಳನ್ನು ನಿಯಂತ್ರಿಸುವ ಮೂಲಕ ಸಾರ್ಥಕ ಜೀವನವನ್ನು ನಡೆಸಲು ಮಾರ್ಗದರ್ಶನ ನೀಡುತ್ತವೆ.
ಭಕ್ತಿ ಮತ್ತು ಭಕ್ತನ ಪರಿಪೂರ್ಣತೆಯನ್ನು ನಾವು ಬಸವಾದಿ ಶರಣರಲ್ಲಿ ಕಾಣುತ್ತೇವೆ ಭಕ್ತಿ ಎಂಬ ಪಂಜರ ನಮಗೆ ಅವಶ್ಯ.
ಭಕ್ತಿ ಎಂಬ ಪಂಜರ ದೊಳಗಿಕ್ಕಿ ಸಲಹು ಕೂಡಲಸಂಗಮದೇವ ಎಂದು ಪ್ರಾರ್ಥಿಸುತ್ತಾರೆ.. ಭಕ್ತಿ ಪದ ಶರಣರ ಕಾಲದಲ್ಲಿ ಪರಿಪೂರ್ಣಗೊಂಡ ಹೊಸ ರೂಪದಲ್ಲಿ ಪ್ರಜ್ವಲಿಸುತ್ತದೆ. ಆ ಬೆಳಕಿನಲ್ಲಿ ಜಗತ್ತು ಮಿ೦ದೇಳುತ್ತದೆ. ಭಕ್ತನಲ್ಲಿ ನಡೆ, ನುಡಿ ,ಅಂತರಂಗ – ಬಹಿರಂಗಗಳು ಏಕಿಭವಿಸಿರಬೇಕು. ನಮ್ಮ ಮಾತು ನಯ – ವಿನಯಗಳಿಂದ ಕೂಡಿದ್ದು. ,ಅದು ಕೇಳುಗರಿಗೆ ಸುಭಾಷೆಯಾಗಿರಬೇಕು. ನಾವಾಡುವ ಮಾತು,ಇತರರ ಅಜ್ಞಾನದ ಕತ್ತಲೆಯನ್ನು ಕಳೆದು,ಅವರಲ್ಲಿ ಸುಜ್ಞಾನದ ಬೆಳೆಯನ್ನು ಬೆಳೆಯಬೇಕು. ಚೆನ್ನಬಸವಣ್ಣರ ವಚನಗಳು ಅಂತರಂಗ – ಬಹಿರಂಗ ಶುದ್ಧಿಯ ಮಹತ್ವವನ್ನು ಸಾರಿ,ವ್ಯಕ್ತಿ ಮತ್ತು ಸಮಾಜದ ಉನ್ನತಿಗೆ ಮಾರ್ಗದರ್ಶನ ನೀಡುತ್ತ ಅರಿವನ್ನು ಮೂಡಿಸುತ್ತವೆ. ಹಾಗೂ ಸಮಾಜದಲ್ಲಿ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಚೆನ್ನಬಸವಣ್ಣನರು ಸುಕ್ಷೇತ್ರ ಕೂಡಲಸಂಗಮದಲ್ಲಿದ್ದುದು, ೧೨ ವರ್ಷ., ಆದರೆ, ಅವರು ಸಂಪಾದಿಸಿದ ಜ್ಞಾನ ನೂರು ವರ್ಷ್,ಅಭ್ಯಾಸ ಗೈದರೊ ಬರದಷ್ಟು . ಇಂಥಹ ಅಗಾಧವಾದ ದಿವ್ಯಜ್ಞಾನ ಸಂಪಾದನೆಯನ್ನು ಕಂಡು ಸ್ವತಃ ಬಸವಣ್ಣ ಅವರೇ ಈ ರೀತಿಯಾಗಿ ಉದ್ಗರಿಸುತ್ತಾರೆ… ಇಂದು ಹುಟ್ಟಿದ ಕೂಸಿoಗೆ, ಇಂದೆ ಜವ್ವನವಾಯಿತು., ಆ ಕೂಸು ಬೀದಿಯಲ್ಲಿ ಒತ್ತೆಗೊಳ್ಳಲು ನಿಂದಿತ್ತಯ್ಯ.ಇದರ ಸಂಗ ಸುಖದಅನುಭವವನ್ನು ಕೂಡಸಂಗಮದೇವ ತಾನೆ ಬಲ್ಲ .
ಶರಣರು ಅರಿತು ಆಚರಿಸಿ ಅನುಭಾವಿಸಿದ ಇಂಥಾ ಘನತರವಾದ ನೈಜ ಭಕ್ತಿಯ ಪಥವನ್ನು ನಾವೆಲ್ಲರೂ ಅರಿತು ಆಚರಿಸಿ ಅನುಭಾವಿಸಬೇಕೇ ಹೊರತು ಕೇವಲ ಕೃತಕ,ಡಾಂಭಿಕ ಭಕ್ತಿಯ ಆಚರಣೆಯಿಂದ ಯಾವ ಪ್ರಯೋಜನವೂ ಇಲ್ಲ.
ಶರಣರು ಅನುಭಾವಿಸಿದ ಭಕ್ತಿ, ಹೊರಗಣ ವಸ್ತುಗಳನ್ನು ತನಗೆ ಪೂರೈಸೆಂದು ದೇವರಿಗೆ ಮೊರೆಹೊಕ್ಕಿದ್ದಲ್ಲ. ತಮ್ಮನ್ನು ತಾವು ನೀತಿವಂತರನ್ನಾಗಿ, ಸತ್ಯವಂತರನ್ನಾಗಿ, ಸದಾಚಾರ ನಡತೆಯುಳ್ಳವರನ್ನಾಗಿ ರೂಪಿಸಿಕೊಳ್ಳುವ,ಆತ್ಮ ಸಾಕ್ಷಾತ್ಕಾರ ಪಡೆಯುವ ಮೂಲಕ ಜೀವನದ ಪರಿಪೂರ್ಣತೆಯೆಡೆಗೆ , ಆದರ್ಶ ಬದುಕಿನೆಡೆಗೆ ,ಪಯಣಿಸುವುದೇ ನಿಜವಾದ ಭಕ್ತಿ. ಅಂಥಾ ಭಕ್ತಿಯ ಪಥವನ್ನು ಅಳವಡಿಸಿಕೊಂಡರೆ ನಾವೂ ಜೀವನದ ಪರಿಪೂರ್ಣತೆಯನ್ನು ಸಾಧಿಸಲು ಸಾಧ್ಯ. ಅಂಥದೊಂದು ಪ್ರಾಮಾಣಿಕ ಪ್ರಯತ್ನವ ನಾವು ಮಾಡೋಣ…
—————–
ಆಧಾರ ಗ್ರಂಥ – 1.ವಚನ ಚಿಂತನ – ಡಾ.ಏಸ್.ವಿದ್ಯಾಶಂಕರ್ 2.ಶಿವಶರಣರ ಜೀವನ ಚರಿತ್ರೆ.- ಶ್ರೀ ಏಸ್.ವಿ.ಪಾಟೀಲ. ———————————-ಇಂತಹ ಷಟಸ್ಥಲ ಚಕ್ರವರ್ತಿ ಎಂದು ಕರೆಸಿಕೊಂಡಿರುವ ಚೆನ್ನಬಸವಣ್ಣ ಅವರ ಕುರಿತು ಬರೆಯಲು, ತಿಳಿದುಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟ , ಈ ವೇದಿಕೆಯ ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಸರ್, ಅವರಿಗೆ ಅನಂತ ವಂದನೆಗಳು .
ಶರಣು ಶರಣಾರ್ಥಿಗಳು
ಡಾ.ಶಾರದಾಮಣಿ. ಏಸ್. ಹುನಶಾಳ.

Excellent Research Dr Sharadamani
Many gratitudes sir..thank you for being an inspiration
ಒಂದೊಳ್ಳೆಯ ಸಂಶೋಧನಾತ್ಮಕ ಲೇಖನ ಮೇಡಂ
ಸುಧಾ ಪಾಟೀಲ
ಬೆಳಗಾವಿ
Thank you sudha madam
ಅತ್ಯುತ್ತಮ ಲೇಖನ ಮೇಡಂ
ಡಾ ಗೀತಾ ಡಿಗ್ಗೆ
ಸೊಲ್ಲಾಪುರ
ಧನ್ಯವಾದಗಳು ಗೀತಾ ಮೇಡಂ