ವಿಶೇಷ ಲೇಖನ
ಡಾ ಗೀತಾ ಡಿಗ್ಗೆ
‘ಅಕ್ಕಮಹಾದೇವಿ ಮತ್ತು ಮೀರಾಬಾಯಿ, ಸಾಮ್ಯತೆಗಳು’-
ಅಕ್ಕಮಹಾದೇವಿ ಮತ್ತು ಮೀರಾಬಾಯಿ ಮಧ್ಯಯುಗದ ಶ್ರೇಷ್ಠ ಅನುಭಾವಿ ಕವಯತ್ರಿಯರು. ಭಕ್ತಿಸಾಹಿತ್ಯದಲ್ಲಿ ಮೇರುವ್ಯಕ್ತಿತ್ವದವರು. ಅಕ್ಕಮಹಾದೇವಿ 12ನೇ ಶತಮಾನದ ಶಿವಶರಣೆ. ನಾಲ್ಕು ಶತಮಾನದ ಅಂತರದಲ್ಲಿ 16ನೇ ಶತಮಾನದವಳು ಮೀರಾಬಾಯಿ. ಆದರೂ ಇವರಿಬ್ಬರ ಬದುಕು ಬರಹಗಳಲ್ಲಿ ಸಾಕಷ್ಟು ಸಾಮ್ಯತೆಗಳು ಇರುವದನ್ನು ಕಾಣುತ್ತೇವೆ. ಇವರಿಬ್ಬರೂ ಭಿನ್ನನೆಲ, ಭಿನ್ನಗಾಳಿ, ಭಿನ್ನಭಾಷೆ ಮತ್ತು ಭಿನ್ನ ಕಾಲದವರು. ಅಂದು ಸ್ತ್ರೀಯರಿಗೆ ಇದ್ದ ಸಾಂಪ್ರದಾಯಿಕ ಸಂಕೋಲೆಗಳನ್ನು ಮತ್ತು ಕಟ್ಟಳೆಗಳನ್ನು ಧಿಕ್ಕರಿಸಿ ಹೊರಬಂದರು. ಸಂಪ್ರದಾಯ ವಿರೋಧಿಯಾಗಿ, ಪರಂಪರಾಗತವಾಗಿ ಬಂದ ಸ್ತ್ರೀ ಶೋಷಣೆಯ ಮೂಢ ನಡೆಗಳನ್ನು ವಿರೋಧಿಸಿದರು. ಸವಾಲನ್ನು ಹಾಕಿದರು. ತಮಗೆ ಸರಿ ಕಂಡಂತೆ ಸ್ವತಂತ್ರವಾಗಿ, ಯಶಸ್ವಿಯಾಗಿ ಬದುಕಿ ತೋರಿಸಿದರು. ಸ್ತ್ರೀ ಶಕ್ತಿಯ ಹಿರಿಮೆಯನ್ನು ಜಗತ್ತಿಗೆ ತೋರಿಸಿದ ಭಾರತೀಯ ಮಹಿಳಾಮಣಿಗಳಾಗಿದ್ದಾರೆ. ಇವರಿಬ್ಬರೂ ಅಪ್ರತಿಮ ವ್ಯಕ್ತಿತ್ವದವರು.
ಅಕ್ಕಮಹಾದೇವಿ ಚನ್ನಮಲ್ಲಿಕಾರ್ಜುನ ಮತ್ತು ಮೀರಾಬಾಯಿ ಶ್ರೀ ಕೃಷ್ಣ ತಮ್ಮ ತಮ್ಮ ಆರಾಧ್ಯ ದೈವವನ್ನೇ ಇಹಪರದ ಸಂಗತಿಯನ್ನಾಗಿ ಮಾಡಿಕೊಂಡು ಬದುಕಿದರು. ಇದರಿಂದ ಅವರಿಗೆ ಲೌಕಿಕದಲ್ಲಿ ವೈರಾಗ್ಯಜೀವನ ಸ್ವೀಕರಿಸಿ ಬದುಕಲು ಸಾಧ್ಯವಾಯಿತು. ಏಕೆಂದರೆ ಇವರು ಲೋಕ ವಿರೋಧಿಮಾರ್ಗದಲ್ಲಿ ನಡೆದರು. ಮಾನಾಪಾಮಾನಗಳನ್ನು ಸಮರ್ಥವಾಗಿ ಎದುರಿಸಿದರು. ಅತ್ಯಂತ ಸಂಘರ್ಷಮಯ ಜೀವನಕ್ಕೂ ಹೆದರಲಿಲ್ಲ. ದೃತಿಗೆಡಲಿಲ್ಲ. ವೈಯಕ್ತಿಕ ಬದುಕನ್ನು ತಮಗೆ ಬೇಕಾದಂತೆ ರೂಪಿಸಿಕೊಳ್ಳಲು ಸಾಧ್ಯವಿರದ ಕಾಲ. ಅಲ್ಲದೇ ಸ್ತ್ರೀ ತನ್ನ ಸ್ವಂತ ಜೀವನ ಕುರಿತು ಕಲ್ಪಿಸಿಕೊಳ್ಳಲೂ ಸಾಧ್ಯವಿರದ ಕಾಲವಾಗಿತ್ತು. ಅಂತಹ ಕಾಲದಲ್ಲಿಯೇ ಅಕ್ಕಮಹಾದೇವಿ ಮತ್ತು ಮೀರಾಬಾಯಿ ಸ್ತ್ರೀ ಸಮಾಜಕ್ಕೆ ಮಾದರಿಯಾಗಿ ಬದುಕಿದರು. ಇವರ ಬದುಕು ಸ್ತ್ರೀ ಶಕ್ತಿಗೆ ಪ್ರೇರಣೆ, ಸ್ತ್ರಿವಾದಿಗಳಿಗೆ ಮಾರ್ಗದರ್ಶನ ನೀಡುವ ಸ್ಫೂರ್ತಿಯ ಸೆಲೆಯಾಗಿದೆ ಎಂದರೆ ತಪ್ಪಾಗುವದಿಲ್ಲ.
12ನೇ ಶತಮಾನದ ಶಿವಶರಣರ ಸಮಾಕಾಲೀನದವಳು ಅಕ್ಕಮಹಾದೇವಿಯನ್ನು ಕುರಿತು ಅನೇಕರು ಕಾವ್ಯ ರಚಿಸಿದರು. ಹರಿಹರ ‘ಮಹಾದೇವಿಯಕ್ಕನ ರಗಳೆ ‘, ಚಾಮರಸನ ‘ಪ್ರಭುಲಿಂಗಲೀಲೆ ‘, ಚೆನ್ನಬಸವಾಂಕನ ‘ಮಹಾದೇವಿಯಕ್ಕನ ಪುರಾಣ ‘, ಏಳಂದೂರು ಹರೀಶ್ವರ ‘ಪ್ರಭುದೇವರ ಪುರಾಣ ‘, ವಿರೂಪಾಕ್ಷ ಪಂಡಿತನ ‘ಚೆನ್ನಬಸವ ಪುರಾಣ ‘, ರಾಚಕವಿ ‘ಮಹಾದೇವಿಯಕ್ಕನ ಸಾಂಗತ್ಯ ‘, ಶೂನ್ಯಸಂಪಾದನೆಗಳು -ಇವುಗಳು ಅಕ್ಕನಜೀವನ ಚರಿತ್ರೆಯ ಆಕರ ಕೃತಿಗಳಾಗಿವೆ. ಹಾಗೂ ಅಕ್ಕನನ್ನು ಕೇಂದ್ರವಾಗಿರಿಸಿಕೊಂಡು ಹೊಸಗನ್ನಡ ಕಾದಂಬರಿಗಳೂ ರಚನೆಯಾಗಿವೆ. ಬಸವರಾಜ ಕಟ್ಟಿಮನಿಯವರು ‘ಗಿರಿಯನವಿಲು ‘, ಡಾ ಎಚ್ ತಿಪ್ಪೆರುದ್ರಸ್ವಾಮಿಯವರು ‘ಕದಳಿ ಕರ್ಪುರ ‘, ಮುಂತಾದವು. ಅದೇ ರೀತಿ ಮೀರಾಬಾಯಿ ಕುರಿತು ಆಧುನಿಕ ಯುಗದಲ್ಲಿ ಕಾವ್ಯಗಳು, ನಾಟಕಗಳು ಹಾಗೂ ಕಾದಂಬರಿಗಳು ಬಂದಿವೆ. ಮಧ್ಯಕಾಲೀನ ಭಕ್ತಕವಿಗಳು ಹಿತಧ್ರುವದಾಸ, ಪ್ರೀಯಾದಾಸ ನ ಭಕ್ತಿಮಾಲಾದ ಟೀಕೆ (10ಸಾಲು), ಛತ್ರದಾಸ (40ಸಾಲು) ಹಾಗೂ ನಗರೀದಾಸ ಆರು ಪ್ರಸಂಗಗಳನ್ನು ಉಲ್ಲೇಖಿಸುತ್ತಾರೆ. ವಿಷ ಕುಡಿದ ಸಂದರ್ಭವನ್ನು ಎಲ್ಲ ಭಕ್ತ ಕವಿಗಳು ಪ್ರಸ್ತುತಪಡಿಸಿದ್ದಾರೆ. ದೊ ಸೌ ಬಾವನ್ ವೈಷ್ಣವನಕಿ ವಾರ್ತಾ. ಭಕ್ತಮಾಲಾ ಹಾಗೂ ಪದಪ್ರಸಂಗ ಮಾಲಾದಂತಹ ಭಕ್ತಿ ಸಾಹಿತ್ಯದ ಗ್ರಂಥಗಳಲ್ಲಿ ಮೀರಾಬಾಯಿ ಉಲ್ಲೇಖ ಬರುವದು
ಡಾ ಗೀತಾ ಡಿಗ್ಗೆ
Good article madam
Thanks sir