ನಮ್ಮ ಮನಿ ಸಹಾಯಕಿ ರತ್ನ ಕೆಲಸ ಮಾಡಕೋಂತ ಪಾಪ ದರ್ಶನ ರಿ ಅಕ್ಕೋರೆ , ಅಂದಳು.

  ಈಕಿ ಸಿನಿಮಾ ನಟ ದರ್ಶನ ಬಗ್ಗೆ ಮಾತಾಡಲತಳ ಅಂತ ತಿಳಿತು ,     ಪಾಪ ಯಾಕಾಗತನ , ಯಾರಿಗಾರ ಸಾಯಸೋರಿಗಿ ಪಾಪ ಅನ್ನಲಕ ಆಗತದ ಏನೇ , ಅಂದೆ.

ಆದರೂ ಅಭಿಮಾನ ಅಂಬೋದು ಒಂದೊಂದು ಸಲ ಸರಿ ತಪ್ಪುಗಳ ನಿರ್ಣಯ ಮಾಡೊದ್ರಲ್ಲೂ ಸೋತು ಬಿಡತದ. ಒಬ್ಬರ  ತಪ್ಪನ್ನ ಸಮರ್ಥಿಸುವಂತ ಅಭಿಮಾನಕ್ಕ ,, ಅಭಿಮಾನ ಅನ್ನಬೇಕೊ , ಅಂಧಾಭಿಮಾನ ಅನಬೇಕೊ ತಿಳಿವಲ್ದು.

ಸಿನಿಮಾ ನಟರನ್ನು ಅತೀ ವೈಭವಿಕರಿಸಿ ಆರಾಧಿಸೋದು ನಮ್ಮ ದೇಶದಾಗ ತುಸು ಹೆಚ್ಚೆ ಅದಾ ನೋಡ್ರೀ . ನಟರನ್ನು ದೇವರು ಅಂತ ಅವರ ಗುಡಿ ಕಟ್ಟಿ ಪೂಜಾ ಮಾಡೋ ಅಂತ ಮನಸ್ಥಿತಿ ನಮ್ಮದು.  ನಾವು ಆರಾಧಿಸ್ತಿವಿ ಅಂತ ನಮ್ಮ ಸಲುವಾಗಿ ಅವರು ದೇವರು ಆಗೋದು ಅಷ್ಟು ಸುಲಭ ಅಲ್ಲ ಅವರಿಗಿ. ಯಾರೋ ಕೆಲವೊಬ್ಬ ನಟರು ಅಂತಹ ಅಭಿಮಾನ ಉಳಿಸಿಕೊಂಡವರು ಇರಬಹುದು.

ಸಿನಿಮಾ ಮೂಲಕ ಜನರಿಗೆ ಮಾದರಿಯಾಗಬೇಕಾದ ಚಿತ್ರರಂಗದಲ್ಲೆ ಹೆಚ್ಚು ಹೆಚ್ಚು ಅನೈತಿಕತೆ ಕಾಣತಿರೋದು ವಿಪರ್ಯಾಸ ಅನ್ನಬೇಕು. ಈಗೀನ ಅಧುನಿಕ ಯುಗದಲ್ಲಿ ಸರಿ ತಪ್ಪು ಗಳ ನಿರ್ಣಯ ಮಾಡೋದು ಅಷ್ಟು ಸುಲಭ ಅಲ್ಲ ಬಿಡ್ರಿ.

ರತ್ನನಂತಹ ಲಕ್ಷಾಂತರ ಅಭಿಮಾನಿಗಳು ಸಿನಿಮಾ ಮತ್ತು ನಟರನ್ನು ಅದೇಷ್ಟು ಆರಾಧಿಸತಾರೆಂದ್ರ ಅವರ ಯಾವ ತಪ್ಪು ಗಳು ತಪ್ಪೆ ಅನಿಸದಷ್ಟು.. ಪರದೆಯ ಮೇಲೆ ಆದರ್ಶ ಪತಿ , ಮಗ , ಅಣ್ಣ ,ತಮ್ಮ , ದೇಶಭಕ್ತ , ಸಮಾಜಸುಧಾರಕ‌ನಂತಹ ಪಾತ್ರ ಗಳಲ್ಲಿ ನಟರನ್ನು ನೋಡಿ ಅವರ ಮ್ಯಾಲ ಅತೀ ಅಭಿಮಾನ ಆವರಿಸಿಕೊಂಡು ಬಿಡತದ. ತಮ್ಮ ದೈನಂದಿನ ಜಂಜಾಟ , ಒತ್ತಡ , ಇವುಗಳಲ್ಲೆ ಮುಳುಗೊ ಅವರಿಗಿ ಸಿನಿಮಾ ಧಾರಾವಾಹಿಗಳು ಸ್ವಲ್ಪ ನೆಮ್ಮದಿ ನಿಡತವ. ತಮ್ಮ ಜೀವನದೊಳಗ ಇರಲಾರದಂತ ಪ್ರೀತಿ , ಪ್ರಣಯ , ಶ್ರೀಮಂತಿಕೆ , ಒಳ್ಳೆತನ ಎಲ್ಲವೂ ಪರದೆಗಳ ಮ್ಯಾಲ ನೋಡಿ  ಅಲ್ಲಿ  ಅಭಿನಯಿಸೋರಲ್ಲಿ ತಮ್ಮನ್ನೆ ಕಲ್ಪಿಸಿಕೊಂಡು ಅವರ ಅಭಿಮಾನಿ ಆಗಿಬಿಡತಾರ.

ಇದಕ್ಕ ನಾನೂ ಹೊರತಾಗಿಲ್ಲ ಬಿಡ್ರೀ , ಕಾಲೇಜ್ ಕಲಿವಾಗ ಚಿರಂಜಿವಿ ಅಭಿಮಾನಿಯಾದ ನಾನು ನನ್ನ ಎಲ್ಲ ನೋಟ್ ಬುಕ್ ನಾಗ ಅವನ ಪೋಟೋ ಇಟಕೊಂಡಿರತಿದ್ದ. ನನ್ನ ಹೀರೋ , ನಿನ್ನ ಹೀರೋ ಅಂತ  ಗೆಳತೇರೊಂದಿಗಿ ವಾದ  ಮಾಡಿದ್ದೆ ಮಾಡಿದ್ದು. ಸಿನಿಮಾ ಮತ್ತು ವಾಸ್ತವಕ್ಕ ಅದೆಷ್ಟು ಅಜಗಜಾಂತರ ವ್ಯತ್ಯಾಸ ಅದ ಅಂಬೊ ಅರಿವಾಗೊವಷ್ಟರಲ್ಲಿ ಬಾಲ್ಯ ಮತ್ತು ಅರ್ಧ ಯೌವನ ದಾಟಿಯಾಗಿತ್ತು.

ಇವತ್ತು ನಟ ದರ್ಶನ ಪ್ರತಿ ರತ್ನಳ ಅಭಿಮಾನ ನೋಡಿ ಮತ್ತ ಇವೆಲ್ಲ ನೆನಪಿಗಿ ಬಂದ್ವು. ಲಕ್ಷಾಂತರ ಜನರನ್ನು ರಂಜಿಸುವ ನಟರು ಸಾಮಾನ್ಯ ಮನುಷ್ಯರೆ . ಅವರಿಗೂ ದೌರ್ಬಲ್ಯ ಗಳಿರತಾವ , ಸಾಮಾನ್ಯರಿಗಿಂತ ತುಸು ಹೆಚ್ಚೆ ಇರತಾವ ಅನ್ನಬಹುದು . ತರೆಮೇಲೆ ನಟಿಸಿ  ಆದರ್ಶ ಪುರುಷ , ಅಥವಾ ಮಹಿಳೆ ಅನ್ನಿಸಿಕೊಳ್ಳೊದು ಅವರಿಗೂ ರೇಜಿಗಿ ಹುಟ್ಟಿಸಬಹುದು . ಅವರ ಪ್ರತಿಯೊಂದು ನಡತೆ ಇಷ್ಟಾನಿಷ್ಟಗಳೆಲ್ಲ ದೊಡ್ಡ ಸುದ್ದಿಯಾಗುವಾಗ ಸಾಮಾಜಿಕ ಜೀವನದಿಂದ ಅವರು ರೋಸಿ ಹೋಗಬಹುದು.  ಸದಾ ಒಳ್ಳೆತನದ ಮುಖವಾಡ ಹಾಕಿಕೊಂಡು ಅದರಿಂದ ಹೊರಬರಲು ಅವರು ಕಾತರಿಸಬಹುದು.

ಇನ್ನ ಸಿನಿತಾರೆಯರ ವಯಕ್ತಿಕ ಬದುಕಿನ ಬಗೆಗಂತೂ ಲೋಕಕ್ಕ ಬಾಳ ಕೂತುಹಲ.ಅವರ ಗಂಡ , ಹೆಂಡ್ತಿ , ಮಕ್ಕಳು , ಮತ್ತ ಅವರು ಎಷ್ಟು ಎಷ್ಟು ಮದಿ ಮಾಡಕೊಂಡ್ರು , ಯಾರು ಯಾರ ಸರಿ ಸಂಭಂಧ ಇಟ್ಟಕೊಂಡ್ರು , ಇಂತವೆಲ್ಲ ರೂಮರ್ಸ ಗಳು ನಮಗೆಲ್ಲ ಎಂಟರ್ಟೈನ್ಮೆಂಟ್ ಆಗತವ. ಆದ್ರ ಒಂದು ಸಂಭಂಧ ಕಿತ್ತುಕೊಂಡು ಮತ್ತೊಂದು ಸಂಭಂಧ ಬೆಳಸಲಕ  ಒಬ್ಬ ಸಾಮಾನ್ಯರಿಗಿ ಬಾಳ ದೈರ್ಯ , ಆತ್ಮವಿಶ್ವಾಸ ಬೇಕಾಗತದ. ನಮ್ಮ ಸಮಾಜದಾಗ ಎಷ್ಟೋ ಸಂಸಾರಗಳದಾಗ ಗಂಡ ಹೆಂಡತಿ ಒಬ್ಬರಿಗೊಬ್ರು ದ್ವಷಿಸಕೋಂತ ಜೀವನ ದೂಡತಿರೋರು ಇದ್ದಾರ. ಮಕ್ಕಳ ಸಲುವಾಗಿ ಅಂಬೋದು ಒಂದು ಕಾರಣ . ಆದ್ರ ಮುಖ್ಯ ಕಾರಣ‌ ಅವಲಂಬನೆ ಆಗಿರತದ. ಸ್ವಾವಲಂಬಿ ಯಾಗಿರದ ಹೆಣ್ಣು  ಗಂಡನ ಮ್ಯಾಲ ಅವಲಂಬಿತಳಾಗಿದ್ದ ಸಂದರ್ಬದಲ್ಲಿ ದಬ್ಬಾಳಿಕಿ ಸಹಿಸಿಕೊಂಡು ಇರಲೇಬೇಕಾಗತದ. ಆದ್ರೂ ಎಷ್ಟೋ ಸ್ವಾವಲಂಬಿ ಮಹಿಳೆರು ಕೂಡ  ಪ್ರತಿಕೂಲ ಸಂದರ್ಬದಲ್ಲೂ ಗಂಡನ ತೊರೆದು ಬದುಕೋ ದೈರ್ಯ ಮಾಡಲ್ಲ. ಒಂಟಿ ಮಹಿಳೆ ಬಗ್ಗೆ ಸಮಾಜಕ್ಕಿರುವ ಧೋರಣೆ ಇದಕ್ಕ ಕಾರಣ ಅನ್ನಬಹುದು.

ಇಷ್ಟವಿಲ್ಲದ ವಿವಾಹದಿಂದ ಹೊರಬರುವ ದೈರ್ಯ ಮಾಡಲಾರದ  ಕದ್ದು ಮತ್ತೊಂದು ವಿವಾಹ ಬಾಹಿರ ಸಂಪರ್ಕ ಇಟ್ಟುಕೊಂಡ್ರೆ ತೊಂದರೆ ಇದ್ದದ್ದೇ ನೋಡ್ರಿ. ಇಲ್ಲಿ ನಟ ದರ್ಶನ ಅನುಭವಿಸಿದ ತೊಂದರೆ ಗೆ ಇದೂ ಒಂದು ಕಾರಣ. ವಿವಾಹಿತ ವ್ಯಕ್ತಿಯ ಜೀವನದಲ್ಲಿ ಪ್ರವೇಶಿಸುವದಕ್ಕೆ ಮುಂಚೆನೆ  ವಿಚಾರ ಮಾಡಬೇಕು.ಸಮಾಜದಲ್ಲಿ ಆಗುವ  ನಿಂದನೆ ಒಂದು ಕಡೆಯಾದ್ರೆ ಮಾನಸಿಕವಾಗಿ ಹಾಳಾಗುವ ನೆಮ್ಮದಿ  ಇನ್ನೊಂದು ಕಡಿ . ಇಬ್ಬರದು ಒಪ್ಪಿತ ಸಂಭಂಧವೆ ಆದ್ರೂ ವಿವಾಹೇತರ ಸಂಬಂಧ ಇದು ಕಾನೂನಿಗೆ ವಿರುದ್ದನೆ.

ಪ್ರೀತಿ ಮತ್ತ ಆಕರ್ಷಣೆ ಯಾವಾಗ ಯಾರಜೋತೆ ಎರ್ಪಡತದ ತಿಳಿದ ವಿಷಯ. ಬುದ್ದಿ ಕೈಯಾಗ ಇರಲ್ಲ.ಆದ್ರ ಮನಸ್ಸನ್ನು ಕಂಟ್ರೋಲ್ ಮಾಡಕೊಳ್ಳಕ್ಕ ಪ್ರಯತ್ನ‌ಪಡಬೇಕು. ಇಷ್ಟವಿಲ್ಲದ  ಸಂಭಂಧದ ಜೊತಿಗಿ ಬದುಕ್ತ ಒಮ್ಮೆಗೆ ಜೀವನದಾವ ಯಾರೋ ಇಷ್ಟ ಆದವ್ರ ಪ್ರವೇಶ ಆಗತದ. ಸ್ನೇಹ ಸಂಭಂಧ ಆಗಿ ಬದಲಾಗೊ ಅರಿವಾಗೊವಷ್ಟರಲ್ಲಿ ಸಮಯ ಮೀರಿರತದ. ಆ ಸಂಭಂಧ ಲೋಕಕ್ಕ ತಿಳಿಲಾರದಂಗ ಮುಚ್ವಿಡೊ ಪ್ರಯತ್ನದಲ್ಲಿ ಇಬ್ರೂ ಹೈರಾಣಾಗಬೇಕು. ಎಲ್ಲಾ ಪ್ರೀತಿಗಳು ವಾಂಛ್ಯಯಲ್ಲೆ ಬದಲಾಗಬೇಕು ಅಂಬೋ ಪ್ರಯತ್ನ ಯಾಕ..! . ಬರಿ ಪ್ರೀತಿಯಲ್ಲೆ ಇದ್ರೂ ಬರಡು ಬದುಕಿಗೆ ಒಂದಿಷ್ಟು ನೆಮ್ಮದಿನೆ.  ಆದ್ರೂ ಸಂಸಾರದಲ್ಲಿ ಮತ್ತೊಬ್ಬರ ಪ್ರವೇಶ ಯಾರಿಗೂ ನೆಮ್ಮದಿ ಕೊಡಲ್ಲ. ಒಂದನ್ನು ಒಪ್ಪಕೊಂಡು ಒಂದು ತೊರೆಯುವ ನಿರ್ಧಾರ ಮಾಡ್ಲೆಬೇಕು.ಇಲ್ಲದಿದ್ರ ಬದುಕು ಹಾಳಾಗಕ್ಜ ಬಾಳ ಸಮಯ ಬೇಕಾಗಲ್ಲ.

ಒಂದು ಸಾರಿ ವಿವಾಹ ಬಂಧನ ಎರ್ಪಟ್ಟ ಮ್ಯಾಲ ನಮ್ಮ ಸಮಾಜದಲ್ಲಿ ಇಷ್ಟನೊ ಕಷ್ಡನೊ ಹೊಂದಿಕೊಂಡು ಹೋಗೊ ಪ್ರಯತ್ನ ಮಾಡತಾರ.ಮಕ್ಕಳು ಆದಮ್ಯಾಲಂತೂ ಇಷ್ಟನಿಷ್ಟಗಳೆಲ್ಲ ಮೂಲೆಗುಂಪಾಗತವ. ಆದ್ರ ಈಗಿನ ಯುವಕ ಯುವತಿಯರು ಬೇಡವಾದ ಸಂಭಂಧಗಳಿಂದ ಹೊರ ಬರೊದಕ್ಕ ಅಂಜತಿಲ್ಲ. ಆದ್ರೂ ದುಡುಕು ನಿರ್ಧಾರ ನೂ ಒಳ್ಳೆದಲ್ಲ. ಕೆಲವೊಂದು ಸಲ ಪತಿ ಪತ್ನಿ ನಡು ಹೊಂದಾಣಿಕಿ ಬರಲಕ್ಕ ಸ್ವಲ್ಪ ಸಮಯ ಹಿಡಿತದ . ಆಗ ತಾಳ್ಮೆ ಮುಖ್ಯ. ಅದಕ್ಕೂ ಮೀರಿ ಹೊಂದಾಣಿಕಿ ಅಸಾದ್ಯ ಅನಿಸತಿದ್ರ ಬೆರ್ಪಡುವದೆ ಉತ್ತಮ ಅನಸತದ.

ಪ್ರೀತಿ ಮತ್ತು ಆಕರ್ಷಣೆ ಗಳು ಕಾಲ ಮಾಗಿದಂತೆ ಬದಲಾಗತಿರತವ. ಒಂದೊಮ್ಮೆ ತೀವ್ರ ವಾಗಿ ಕಾಡುವ ಪ್ರೇಮ ಸಮಯದ ನಂತರ ರೇಜಿಗೆ ಹುಟ್ಟಿಸಬಹುದು. ಒಟ್ಟಿಗೆ ಬದುಕೋದು ಅಸಾದ್ಯ ಅನಿಸಿದ ಸಂಭಂಧಗಳಲ್ಲೂ ಪ್ರೇಮ ಮೊಳೆಯಬಹುದು. ಆದ್ರ ಪ್ರೀತಿಯ ಹುಡುಕಾಟದಲ್ಲಿ ಸಂಭಂಧಗಳು ಬದಲಿಸತ ಹೋದಂಗೆಲ್ಲ ಅಲ್ಲಿ ಪ್ರೀತಿ ಯಾಂತ್ರಿಕ ಆಗಿಬಿಡತದ.

ಮದುವೆ ಆದ ಮ್ಯಾಲ ಮತ್ತೊಂದು ವ್ಯಕ್ತಿಯನ್ನು ಪ್ರೀತಿಸಲೆ ಬಾರದು ಎಂಬ  ನಿಯಮ ಎನಿಲ್ಲ. ಆದ್ರ ಆ ಪ್ರೀತಿ ತಮ್ಮ ಸಂಸಾರದಲ್ಲಿ ಹುಳಿ ಹಿಂಡುವಂತಿರಬಾರದು. ಓಶೊ ರಜನೀಶ ಅವರ ಒಂದು ಪುಸ್ತಕದಲ್ಲಿ ಓದಿದ್ದ ನೆನಪು . ಯಾವ ಒಬ್ಬ ವ್ಯಕ್ತಿ  ಮತ್ತೊಬ್ಬರನ್ನು ಪ್ರೀತಿಸುವವರಾಗಿರುತ್ತಾರೊ ಅವರು ತಮ್ಮ ಗಂಡ / ಹೆಂಡತಿಯನ್ನು ಇನ್ನೂ ಹೆಚ್ಚಾಗಿ ಪ್ರೀತಿಸಬಹುದೆಂದು.  ಆ ಪ್ರೀತಿಯೆ ತಮ್ಮವರನ್ನು ಇನ್ನಷ್ಟು ಪ್ರೀತಿಸಲು ಕಲಿಸುತ್ತದೆ. ಆದ್ರೆ ನಾವು ಹೆಣ್ಣ ಮಕ್ಕಳು ನಮ್ಮ ಗಂಡಂದಿರಿಗಿ ಮತ್ತೊಂದು ಹೆಣ್ಣಿನಿಂದ ದೂರ ಇಡಲು ಪ್ರಯತ್ನಿಸತಿರತಿವಿ. ಸ್ವಲ್ಪ ಸ್ನೇಹವನ್ನು ಅಪಾರ್ಥ ಮಾಡಿಕೊಂಡು ರಂಪ ಎಬ್ಬಿಸುವ ಸ್ವಭಾವ ನಮ್ಮದು. ಮತ್ತೊಂದು ಸ್ತ್ರೀ ಯೊಂದಿಗೆ ಸ್ನೇಹದಿಂದ ಇದ್ದ ಮಾತ್ರಕ್ಕೆ ಆ ಸಂಭಂಧ ಅಪಾರ್ಥ ಕಲ್ಪಿಸಿ ಕೊಂಡು ಮತ್ತೊಂದು ಹೆಣ್ಣನ್ನು ಬದ್ದ ವೈರಿಯಂತೆ ನೋಡೊ ಅವಶ್ಯಕತೆ ಇಲ್ಲ.

ಸಂಭಂಧಗಳಲ್ಲಿ ಸ್ನೇಹ , ನಂಬಿಕೆ ಇದ್ರ ಅಪಾರ್ಥ ಕ್ಕ ಅವಕಾಶ ಇರಲ್ಲ. ಆದ್ರೂ ಈ ಅತೀ ಪ್ರೀತಿ (possessiveness) ಸಂಭಂಧಗಳಿಗೆ ಯಾವತ್ತು ಮಾರಕ.

ಪ್ರತಿಯೊಂದು ಸಂದರ್ಭದಲ್ಲಿ ತಪ್ಪು ಸರಿ ನಿರ್ಣಯ ಮಾಡಕ್ಕೆ ಹೋಗಬಾರದು.ಸರಿ ತಪ್ಪು ಗಳು ಸಂದರ್ಭಕ್ಕ ತಕ್ಕ ಬದಲಾಗತಾವ. ಘಟನೆಗಳು ಜೀವನದಲ್ಲಿ ಜರುಗತಿರತಾವ. ದೊಡ್ಡವರದು ದೊಡ್ಡ ಸುದ್ದಿಯಾಗತವ. ಇಲ್ಲಿ ದರ್ಶನ ಮಾಡಿದ್ಷು ತಪ್ಪಾ ಸರಿನಾ ನಿರ್ಣಯಿಸಲಕ್ಕ ಕಾನೂನ ಅದ. ಇನ್ನ ಅವನ ಸಂಸಾರದ ನಿರ್ಣಯಗಳು ಅವರಿಗೆ ಸೇರಿದ್ದು. ಅವನು ಕನ್ನಡ ಚಿತ್ರರಂಗದ ಒಬ್ಬ ಪ್ರತಿಭಾವಂತ ನಟ ಇದ್ದ ಅಂತ ಇಷ್ಟ ಮಾತ್ರ ಹೇಳಬಹುದು.


4 thoughts on “

  1. ಇಂದಿನ ಯುವ ಜನರ ಮನಸ್ಥಿತಿಯನ್ನು ತುಂಬಾ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದೀರಿ ಮೇಡಂ

  2. ನಿಮ್ಮ ಲೇಖನ ಓದಿದೆ, ಚೆನ್ನಾಗಿ ಮೂಡಿ ಬಂದಿದೆ,ದೇಶಿ ಸೊಗಡು,ಭಾಷೆ ಅಪ್ಯಾಯಮಾನವಾಗಿರುವುದು,ಅವರವರ ಕಸುಬಿನ ಹಾಗೆ ಭಾಷೆ ಪ್ರಯೋಗ ಸರಿ ಎನಿಸಿತು,ಆದರೆ “ದರ್ಶನ” ಎನ್ನು ನಾಮದ ಬದಲಾಗಿ ಬೇರೆ ಹೆಸರು ಉಪಯೋಗಿಸಿದರೆ ಉತ್ತಮ ಏಕೆಂದರೆ ಪ್ರಸ್ತುತ ನಡೆದ ಘಟನೆಯಿಂದ ಪ್ರೇರಣೆಗೊಂಡು ಮೂಡಿಬಂದ
    ಈ ಪ್ರಬಂಧದಲ್ಲಿ ಹೆಸರು ಬದಲಿಸಿರಿ ಕಾಲ್ಪನಿಕ ಹೆಸರು ಕೊಡಿರಿ.

  3. ಬಹಳ ಚೆನ್ನಾಗಿ ಬರೆದಿದ್ದೀರಿ ಮೇಡಂ. ತುಂಬು ಹೃದಯದ ಅಭಿನಂದನೆಗಳು. …… ಬಿ ಆರ್ ಅಣ್ಣಾಸಾಗರ

Leave a Reply

Back To Top