ಡಾ. ಬಂಟಹಳ್ಳಿ ಸರ್ವೇಶ್ ಅವರಕೃತಿ-‘ನೆಲದ ನಂಬಿಕೆ’ಒಂದು ಅವಲೋಕನ-ನಾಗೊಂಡಹಳ್ಳಿ ಸುನಿಲ್

ಸಮಕಾಲೀನ ದುರಳೀಕರಣದ ಪಲ್ಲಟಗಳನ್ನು ಹಾಗೂ ಮನುಷ್ಯತ್ವದ ಅಂತಕರಣವನ್ನು ಪ್ರಜ್ಞಾಗಮ್ಯವಾಗಿ ಪ್ರದರ್ಶಿಸುವ ಶಕ್ತಿ ಡಾ. ಬಂಟಹಳ್ಳಿ ಸರ್ವೇಶ್ ಅವರ ಕಾವ್ಯಕ್ಕಿದೆ.

ಹತ್ತು ವರ್ಷಗಳ ದೀರ್ಘ ಅವಧಿಯ ನಂತರ ಪ್ರಕಟಗೊಂಡಿರುವ ಅವರ ‘ನೆಲದ ನಂಬಿಕೆ’ ಕೃತಿಯಲ್ಲಿ ಮರೆತಿದ್ದನ್ನೋ,  ಗ್ರಹಿಸಿದ್ದನ್ನೋ ಸತ್ಯಾನ್ವೇಷಣೆಯ ಪ್ರಕ್ರಿಯೆಯಲ್ಲಿ ಧ್ಯಾನಸ್ಥ ಸ್ಥಿತಿಗೆ ದಕ್ಕಿದ ಧಾತುಗಳು ನವಿರಾಗಿ ಕವಿತೆಗಳ ಮೂಲಕ ಜೀವ ಪಡೆದಿವೆ.
ದೊಡ್ಡ ಕಲ್ಲಹಳ್ಳಿ ನಾರಾಯಣಪ್ಪ ಅವರು ಹೇಳುವಂತೆ ಕವಿತೆಯನ್ನು ಅನಾಥವಾಗಿಸುವ ಹಕ್ಕು ಯಾವ ಕವಿಗೂ ಇಲ್ಲ ಅದಕ್ಕೊಂದು ನೆಲೆ ರೂಪಿಸಬೇಕಾಗಿರುವುದು ಕವಿಯ ಕರ್ತವ್ಯ. ಈ ಮಾತು ಎಷ್ಟೊಂದು ಅರ್ಥಗರ್ಭಿತ ಅಲ್ಲವೇ? ಯಾವುದೋ ಪರಿಪಾಟಲುಗಳಿಂದ ಹಾಗೂ ಸಾಮಾಜಿಕ ಹೊಣೆಗಾರಿಕೆಯಿಂದ ಅಸ್ತವ್ಯಸ್ತ ಸಂಗತಿಗಳಿಗೆ ಭಾಷೆಯ ವೇಷವಿಟ್ಟು ತನ್ನನ್ನು ತಾನು ಕವಿತೆಗಳ ಮೂಲಕ ಚಿತ್ರಿಸಿಕೊಳ್ಳಲು, ಬಿಡುಗಡೆಗೊಳಿಸಿಕೊಳ್ಳಲು ಇರುವ ಮಾರ್ಗವೇ ಕಾವ್ಯವೆಂಬುದನ್ನು ನಾವು ಮರೆಯುವಂತಿಲ್ಲ.
ಕೃತಿ ಯುದ್ದಕ್ಕೂ ಭಾವ ಬುದ್ಧಿಗಳೆರಡು ಏಕರೂಪವಾಗಿ ಸಾಗುತ್ತಾ ವಿಶಿಷ್ಟ ವಸ್ತುಗುಚ್ಛಗಳೊಂದಿಗೆ ಕಾವ್ಯದ ಪ್ರಖರತೆಯನ್ನು ಕವಿ ಗಂಭೀರವಾಗಿ ಹಿಡಿದಿಟ್ಟಿದ್ದಾರೆ.
ಒಟ್ಟಾರೆ ನಲವತ್ತೈದು ಕವಿತೆಗಳನ್ನು ಹೊತ್ತ ಈ ಹೊತ್ತಿಗೆಯ ಮುಖ್ಯ ಭೂಮಿಕೆಯಲ್ಲಿ ಆತ್ಮ ವಿಮರ್ಶೆ, ಸಾಮಾಜಿಕ ನೈತಿಕ ಪತನತೆ, ರಾಜಕೀಯದ ಕ್ರೂರತೆ, ಕೋಮುವಾದ, ಸಾಮರಸ್ಯ, ಹತಾಶೆ – ನಿರಾಶೆ,ವಿರಹ, ನಿರೀಕ್ಷೆ ಭರವಸೆಗೆಳ ರೂಪಕಗಳು ಸಶಕ್ತವಾಗಿ ದುಡಿದಿವೆ.
ಈ ಕೃತಿಯನ್ನು ಬಿಡಿಬಿಡಿಯಾಗಿ ಎಳೆಯದೆ ಹಿಡಿಯಾಗಿ ಹಿಡಿಯಲು ಗ್ರಹಿಸುವುದಾದರೆ ಕವಿತೆಗಳುದ್ದಕ್ಕೂ  ಸಮಕಾಲೀನ ವಕ್ತಾರನಾಗಿ ಪ್ರತಿಬಿಂಬಿಸುವ ಕವಿ ಇಲ್ಲಿ ಮತ್ತೆ ಮತ್ತೆ ಮನಸ್ಥಿತಿಗಳನ್ನು ಮರುಮೌಲ್ಯಮಾಪನಕ್ಕೀಡು ಮಾಡುತ್ತಾರೆ.

“ನಿನ್ನೊಳಗೊಬ್ಬನಿದ್ದಾನೆ ಅವನನ್ನು ಕೇಳಬಾರದೇನು?
ಮಿತಿಗೆ ಚಿತೆ ಪೇರಿಸುವಾಗ ಎಡವಿದ್ದು ಎಲ್ಲೆಂದು”

ಬಸವಣ್ಣನವರ ಮನೆಯೊಳಗೆ ಮನೆಯೊಡೆಯನು ಇದ್ದಾನೋ ಇಲ್ಲವೋ ಎಂಬ ಮಾತನ್ನು ನೆನಪಿಸುವ ಸಾಲುಗಳಿವು. ಇಲ್ಲ ಸಲ್ಲದನ್ನು ಮಿತಿ ಇಲ್ಲದೆ ನಿರೀಕ್ಷೆಗಳ ಆಸೆಗಳನ್ನು ತುಂಬಿಕೊಂಡು ಅಸತ್ವಗಳ ಕಸವೇ ತುಂಬಿಕೊಂಡಾಗ ಮನದೊಳಗೆ ಜೀವಾತ್ಮರಲು ಸಾಧ್ಯವಿಲ್ಲ ನಮ್ಮೊಳಗಿನ ಇರುವಿಕೆಯೊಡೆಯನನ್ನು ನಾವೇ ಚೈತನ್ಯಗೊಳಿಸಬೇಕು ಎಂಬ ಅರಿವಿನೊಂದಿಗೆ ಸಾಗುವ ಈ ಕವಿತೆ ನಮ್ಮನ್ನು ಆವರಿಸುತ್ತದೆ.

ನೊಂದವರ ನೋವ ನೋಯದವರು ಎತ್ತ ಬಲ್ಲಾರು ಎಂಬ ಮಾತಿನಂತೆ ಅವರವರ ಹತಾಶೆಗಳು ಸಂಕಟಗಳ ರುಚಿ ಅನುಭವಿಸಿದವರಿಗಷ್ಟೇ ಅರಿವಾಗಲು ಸಾಧ್ಯ ಆದರೂ ಕೂಡ ಹತಾಶರಾಗದೆ ಧೈರ್ಯದಿಂದ ಮುನ್ನಡೆಯುವ ಭರವಸೆಯ ಬುದ್ಧಿ ನಮ್ಮದಾಗಬೇಕು ಎನ್ನುವಂತೆ ‘ನಿಂತ ಬದುಕು’ ಕವಿತೆ ಮಾತಾಡುತ್ತದೆ.

‘ ಇರಲಿ ಇರಲಿ ಸುಮ್ಮನಾಗು,
ಸಣ್ಣ ಸೋಲಿನೆದೆಯ ತುಂಬಾ
ಸಂತೋಷವು ತುಂಬದೆ?’

ವಿಶಾಲವಾದ ಈ ಬದುಕಿನಲ್ಲಿ ಯಕಶ್ಚಿತ್ ಸಣ್ಣ ನೋವಿಗೆ ಕೊರಗಬಾರದು ಭರವಸೆಯ ಛಲವೊಂದಿದ್ದರೆ ಸಂತೋಷದ ಸಾಗರವೇ ಹತ್ತಿರವಾಗುತ್ತದೆಂದು ನೊಂದ ಜೀವಗಳಿಗೆ ಈ ಕವಿತೆ ಸಾಂತ್ವನ ತುಂಬುತ್ತದೆ.

ಪ್ರೇಮವೆನ್ನುವುದು ಹಲವರಿಗೆ ಕೈಗೆಟುಕದ ಹುಳಿ ದ್ರಾಕ್ಷಿಯಂತೆ ವಿರಹ ಪ್ರತಿಯೊಬ್ಬರಿಗೂ ಕಾಡುವುದು ಸಾಮಾನ್ಯ ಆದರೆ ಬಿಟ್ಟು ಹೊರಟ ಭಾವನೆಗಳ ನೆನಪುಗಳ ನೋವುಗಳು ಅಗಣಿತ.


‘ಏಕೆ ಮತ್ತೆ ಆಕೆಯೆಡೆಗೆ ಜೀಕುತಿಹುದು ಕಲ್ಪನೆ
ದೂರದಬ್ಬಿ ದೂರುತಿರಲು ಮನದ ತುಂಬಾ ವೇದನೆ’


ಬೇಡವೆಂದು ದೂರ ತಳ್ಳಿ ಹೊರಟ ಗೆಳತಿಯನ್ನು ಮತ್ತೆ ಮತ್ತೆ ಕಲ್ಪಿಸಿಕೊಂಡ ನಿರಾಶೆಯ ಭಾವನೆಗಳು ವ್ಯಕ್ತಿಯನ್ನು ಕೆಲವೊಮ್ಮೆ ಕುಪಿತನಾಗಿಸುತ್ತವೆ ಮತ್ತೊಮ್ಮೆ ಗಟ್ಟಿಯಾಗಿಸುತ್ತವೆ.
ವಿಫಲ ಪ್ರೇಮಗಳೇ ಕವಿತ್ವವನ್ನು ಸೃಷ್ಟಿಸುವುದು,  ಕವಿಯನ್ನು ಮತಿಯನ್ನು ತೀಕ್ಷ್ಣಗೊಳಿಸುವುದಲ್ಲವೆ.
ಈ ಜಗದ ನೋವೆಲ್ಲ ನನ್ನವೇ ಇಲ್ಲಿರುವವರೆಲ್ಲ ನನ್ನವರೇ ಎಂಬ ತಾಯಿಗುಣ ಬಿದ್ದಾಗ ಮಾತ್ರ ಕೆಲವು ಕವಿತೆಗಳು ಹುಟ್ಟಲು ಸಾಧ್ಯ ಅಂತಹ ಕವಿತೆಗಳಲ್ಲಿ ನನ್ನನ್ನು ಬಹುವಾಗಿ ಕಾಡಿದ ಕವಿತೆ ‘ನಾನು ಉಳಿಯಲ್ಲ ಸಿಗಲು’ ಎಂಬ ಕವಿತೆ.


‘ ನಮ್ಮವರೇ ತಿಳಿದವರೇ ನಗುತ್ತಿದ್ದಾರೆ ಚಿತ್ರದಲ್ಲಿ
ಉಸಿರು ಬಿಗಿಯಾಗುವ ಮುನ್ನವೇ ಮತ್ತೊಂದು
ಹೀಗಿರುವಾಗ ಹೇಗೆ ನಗಲಿ ಹೇಳಿ ಎಲ್ಲ ಮರೆತು.


ಬದುಕಿದ್ದಾಗ ಅವರ ಮುಖದಲ್ಲಿ ನಗುವಿತ್ತು ಇಲ್ಲವೋ ತಿಳಿಯದು. ಆದರೆ ಸತ್ತಾಗ ಅವನ ಭಾವಚಿತ್ರ ನಮ್ಮನ್ನೇ ಅಣಕಿಸಿ ನಗುವಂತೆ ಕಾಣುತ್ತದೆ ಸರಣಿಯೋಪಾದಿಯಲ್ಲಿ ನಮ್ಮವರು ತೀರಿಕೊಳ್ಳುತ್ತಿದ್ದಾರೆ ದುಃಖವಾರುವ ಮುನ್ನ ಮತ್ತೊಂದು ಸಾವಿನ ಬಿಂಬ ಈ ನೋವುಗಳ ನಡುವೆ ನಾ ಹೇಗೆ ನಗಲಿ ಎನ್ನುವ ಮಾತು ಕವಿಯ ಅಂತ ಸತ್ವದ ಜೀವ ಕಾರುಣ್ಯವನ್ನು ಪರಿಚಯಿಸುತ್ತದೆ.
ನಮ್ಮ ಮನೋಗತ ಭೂಮಿಕೆಯಲ್ಲಿ ಹುಟ್ಟುವ ಆಸೆ ಆಕಾಂಕ್ಷೆಗಳು, ಪಶ್ಚಾತಾಪಗಳು, ರಾಗ-ದ್ವೇಷಗಳು ಎಷ್ಟೊಂದು ಕೇಡು ಉಂಟು ಮಾಡುತ್ತವೆ ಎಂಬುದಕ್ಕೆ ‘ಆತ್ಮಗಳು ಅವಲೋಕಿಸುತ್ತವೆ’ ಕವಿತೆ ಧ್ವನಿ ತುಂಬಿದೆ.
ಇಂದಿನ ಪರಿಸ್ಥಿತಿಗಳು ಅತ್ಯಂತ ಜಟಿಲವಾಗಿ ಕವಿಗೆ ಕಾಣಿಸಿರುವ ಫಲವಾಗಿ ಅನೇಕ ಕವಿತೆಗಳಲ್ಲಿ ಆತ್ಮ ಘಾತಕ ಮತೀಯ ವಿಚಾರಗಳ ಬಗ್ಗೆ ಪ್ರತಿಭಟನಾತ್ಮಕ ಆಕ್ರೋಶವಿದೆ.
ನವ ನಾಗರೀಕತೆಗಳ ಅವಾಂತರಗಳು ಮೂರ್ತ ಅಮೂರ್ತ ವಾಸ್ತವಿಕೆಗಳೊಂದಿಗೆ ಕೆಲವು ಕವಿತೆಗಳು ಮುಖಾಮುಖಿಯಾಗುತ್ತ ಅನುಸಂಧಾನ ಗೊಳ್ಳುವ ಸೋಪಜ್ಞ ಗುಣವನ್ನು ತನ್ನೊಟ್ಟಿಗಿಟ್ಟುಕೊಂಡಿವೆ.
ಓದುಗನನ್ನು ಏಕಾಂತವಾಗಿ ಹಿಡಿದಿಟ್ಟು ಓದಿಸಿಕೊಳ್ಳುವ ಕೃತಿ ಇದಾಗಿದೆ ಇಂತಹ ಅಮೂಲ್ಯ ಕಾವ್ಯ ಕುಸುಮವನ್ನು ನಮ್ಮ ಕೈಗೆತ್ತಿದ್ದಕ್ಕೆ ಕವಿಗೆ ಅಭಿನಂದನೆಗಳು ಹಾಗೂ ಧನ್ಯವಾದಗಳು.


Leave a Reply

Back To Top