‘ವೈಧವ್ಯ… ಶಾಪವಲ್ಲದ ಶಾಪ’ ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಲೇಖನ

ಘಟನೆ ಒಂದು… ಶುಭ ಕಾರ್ಯಕ್ರಮರಲ್ಲಿ ಭಾಗವಹಿಸಿದ್ದ ಆಕೆಗೆ ಕುಂಕುಮ, ಹೂವು ಕೊಡಲು ತಡವರಿಸಿದಾಗ ಅವರನ್ನು ಮುಂದಕ್ಕೆ ಕಳುಹಿಸಿದ ಆ ಹೆಣ್ಣು ಮಗಳು ಹುಸಿ ನಕ್ಕ ಘಳಿಗೆ ಮರೆಯಲಾಗದು.
 ಘಟನೆ ಎರಡು….ತನ್ನದೇ ಮಗನ ಮದುವೆಯಲ್ಲಿ ಆಮಂಗಳೆಯಾದ ತನ್ನಿಂದ ಅಶುಭವಾಗಬಾರದೆಂದು ಮಂಟಪದಿಂದ ತುಸು ದೂರವೇ ಕುಳಿತ ತಾಯಿ.
 ಘಟನೆ ಮೂರು… ಮದುವೆಯಾಗಿ ಕೆಲವೇ ತಿಂಗಳಲ್ಲಿ ಗಂಡನನ್ನು ಕಳೆದುಕೊಂಡು ಓದು ಮುಂದುವರಿಸಿ ಉದ್ಯೋಗ ಹೊಂದಿ ತನ್ನ ಮಗನೊಂದಿಗೆ ಬದುಕು ಕಟ್ಟಿಕೊಂಡಿರುವ ಹೆಣ್ಣು ಮಗಳು ಸಂಬಂಧಿಕರೊಂದಿಗೆ  ಹೋಗಿದ್ದ ಪ್ರವಾಸದಲ್ಲಿ ತನಗೆ ಅನುಕೂಲಕರವಾದ ಸಭ್ಯ ಬಟ್ಟೆ ಧರಿಸಿದಾಗ್ಯ್ಯೂ ಸ್ವತಹ ಒಡಹುಟ್ಟಿದವರೇ ಹೀಯಾಳಿಸಿ ಮಾತನಾಡಿದ್ದು.
 ಘಟನೆ ನಾಲ್ಕು…. ಗಂಡ ಸತ್ರು ಆಕೆಯ ಸೊಕ್ಕು ಅಡಗಿಲ್ಲ…ಉರೀತಾಳೆ ಎಂದು ಆಕೆಯ ಆತ್ಮಾಭಿಮಾನವನ್ನು ಸೊಕ್ಕೆಂದು ಪರಿಗಣಿಸಿದ್ದು.

 ಒಂದೇ ಎರಡೇ ಇಂಥ ನೂರು ಸಾವಿರ ಉದಾಹರಣೆಗಳು ಈ ಸಮಾಜದಲ್ಲಿ ಗಂಡನನ್ನು ಕಳೆದುಕೊಂಡ ಹೆಣ್ಣು ಮಕ್ಕಳು ಅನುಭವಿಸುವುದನ್ನು ಕಾಣುತ್ತೇವೆ.

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದ್ರು ಎಂಬ ಘನಂದಾರಿ ಕೆಲಸ ಶತಶತಮಾನಗಳಿಂದ ಭಾರತ ದೇಶದಲ್ಲಿ  ನಡೆದುಬಂದಿದೆ ಎಂದರೆ ಆಶ್ಚರ್ಯವಾಗುತ್ತದೆಯಲ್ಲವೇ??
 ಒಬ್ಬ ಹೆಣ್ಣು ಮಗಳು ತನ್ನ ಪತಿಯನ್ನು ಕಳೆದುಕೊಂಡು ವಿಧವೆಯಾದಾಗ ಆಕೆಗೆ ಬಿಳಿ ಇಲ್ಲವೇ ಕೆಂಪು ಸೀರೆಯನ್ನು ಉಡಿಸಿ ತಲೆ ಕೂದಲು ಬೋಳಿಸಿ ಅಕ್ಷರಶಃ ವಿಕಾರವಾಗಿ ಕಾಣುವಂತೆ ಮಾಡುತ್ತಾರೆ, ಇದಕ್ಕೆ ಅವರು ಕೊಡುವ ಕಾರಣ ಆಕೆಯನ್ನು ನೋಡುವ ಪರಪುರುಷರು ಆಕೆಯತ್ತ ಮೋಹಿತರಾಗಬಾರದು, ಸಾಮಾಜಿಕ ತಲ್ಲಣಗಳು ಉಂಟಾಗಬಾರದು ಎಂದು. ಇದು ಎಷ್ಟರ ಮಟ್ಟಿಗೆ ಸರಿ?? ಗಂಡಸಿನ ಮಾನಸಿಕ ಅಸ್ವಸ್ಥತೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಹೆಣ್ಣನ್ನು ವಿಕೃತಗೊಳಿಸುವುದು…. ಇದನ್ನೇ ನಾನು ಹೇಳಿದ್ದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕುವುದು ಎಂದು.ಗಂಡಸು ತನ್ನ ತಾಯಿ ತಂಗಿಯರಲ್ಲಿ ಅರಸದ ಹೆಣ್ತನವನ್ನು ಪರನಾರಿಯರಲ್ಲಿ ಹೇಗೆ ಅರಸುತ್ತಾನೆ. ಎಲ್ಲ ಪುರುಷರೂ ಅಷ್ಟೊಂದು ಸಂಸ್ಕಾರ ಹೀನರೂ ಅಲ್ಲ. ಒಂದಿಡೀ ಬುಟ್ಟಿಯಲ್ಲಿನ ಒಂದೆರಡು ಹಣ್ಣುಗಳು ಕೆಟ್ಟ ಮಾತ್ರಕ್ಕೆ ಬುಟ್ಟಿಯಲ್ಲಿರುವ ಎಲ್ಲ ಹಣ್ಣುಗಳು ಕೆಟ್ಟವೇ? ಎಂದು ಭಾವಿಸುವುದು ಅದೆಷ್ಟರ ಮಟ್ಟಿಗೆ ಸರಿ??

 ಅದೆಷ್ಟು ಮೌಡ್ಯ ನಮ್ಮಲ್ಲಿ ತುಂಬಿದೆ.ನಮ್ಮ ಹಳೆಯ ಚಲನಚಿತ್ರಗಳಲ್ಲಂತೂ ವಿಧವೆ ಎಂದೊಡನೆ ಅದೆಷ್ಟೇ ಚಿಕ್ಕ ವಯಸ್ಸಿನವಳಾದರೂ ಸರಿಯೇ,ಆಕೆ ತನ್ನ ಸೌಭಾಗ್ಯದ ಎಲ್ಲಾ ಚಿಹ್ನೆಗಳನ್ನು ತೊರೆದು, ಬಿಳಿ ಸೀರೆ ಉಟ್ಟು ಒಪ್ಪತ್ತು ಊಟ ಮಾಡುವ ಮಡಿ ಹೆಂಗಸಾಗಿ ಬಿಡುತ್ತಾಳೆ. ಅವಿಭಕ್ತ ಕುಟುಂಬದ ಎಲ್ಲಾ ಬೇಕು ಬೇಡಗಳನ್ನು ಪೂರೈಸುವ ಅಡುಗೆಯವಳಾಗಿ ತನ್ನ ಇಡೀ ಬದುಕನ್ನು ಅಡುಗೆ ಮನೆಯ ಕತ್ತಲೆಯಲ್ಲಿ ನಿಡುಸುಯ್ಯುತ್ತಲೆ ಕಳೆಯುತ್ತಾಳೆ.
 ಇದು ಎತ್ತಣ ಮಾನವೀಯತೆ??

ತನ್ನ ಪತಿಯನ್ನು ಕಳೆದುಕೊಂಡು ಹಲವಾರು ವರ್ಷಗಳು ಕಳೆದಿರುವ ಓರ್ವ ಹೆಣ್ಣು ಮಗಳು ತಾನು ಉದ್ಯೋಗವನ್ನು ಮಾಡುವ ಸ್ಥಳದಲ್ಲಿ, ಪ್ರಯಾಣದಲ್ಲಿ ಸೌಭಾಗ್ಯದ ಚಿಹ್ನೆಗಳನ್ನು ಧರಿಸಿ ಮುಖ್ಯವಾಗಿ ತಾಳಿಯನ್ನು ಹಾಕಿಕೊಂಡು ಓಡಾಡುತ್ತಾಳೆ… ಕಾರಣ ಪರ ಪುರುಷರ ಕೆಟ್ಟ ಕಣ್ಣು ತನ್ನ ಮೇಲೆ ಬೀಳಬಾರದು ಎಂದು.ಇದರ ಅರಿವಿಲ್ಲದೆ ಆಕೆಯನ್ನು ಆಡಿಕೊಂಡು ನಕ್ಕರೆ ಏನು ಹೇಳಬೇಕು??

 ಕಾಲಕ್ಕೆ ತಕ್ಕಂತೆ ಜನ ಬದಲಾಗಲೇಬೇಕು, ಹಾಗೆ ಆಗಿಯೂ ಇದ್ದಾರೆ. ಆದರೆ ಎಲ್ಲರ ದೃಷ್ಟಿಕೋನವು ಒಂದೇ ಅಲ್ಲ…. ಎಷ್ಟೋ ಬಾರಿ ಗಂಡಸರು ಮತ್ತು ವಿದ್ಯಾವಂತರಾದರೂ ಸಂಕುಚಿತ ಪ್ರವೃತ್ತಿಯ ಹೆಣ್ಣು ಮಕ್ಕಳು ತಮ್ಮೊಂದಿಗೆ ಒಡನಾಡುವ ವಿಧವಾ ಹೆಣ್ಣು ಮಕ್ಕಳನ್ನು ಕುರಿತು, ಅವರ ಮನಸ್ಸಿಗೆ ನೋವನ್ನುಂಟು ಮಾಡುತ್ತದೆ ಎಂಬುದು ಗೊತ್ತಿದ್ದು ಕೂಡ ತುಂಬಾ ಕೇವಲವಾಗಿ ಮಾತನಾಡುತ್ತಾರೆ. ಅವರ ಉಡುಗೆ ತೊಡುಗೆ, ಅಲಂಕಾರ, ನಡವಳಿಕೆಗಳ ಕುರಿತು ತಮ್ಮ ಅಸಹನೆಯನ್ನು ತೋರ್ಪಡಿಸಲು ವಿನಾಕಾರಣ ಕಮೆಂಟ್ ಮಾಡುತ್ತಾರೆ.

 ಇನ್ನು ಕೆಲವರು ಸಂಪ್ರದಾಯದ ಹೆಸರಿನಲ್ಲಿ ಅವರಿಗೆ ಕುಂಕುಮ,ಹೂ ಕೊಡದಿರುವುದನ್ನು, ಮಂಗಳ ಕಾರ್ಯದಲ್ಲಿ ಅವರ ಉಪಸ್ಥಿತಿಯನ್ನು ಹೀಗಳೆಯುವುದನ್ನು ಮಾಡುತ್ತಾರೆ….. ಇದು ಖಂಡಿತಾ ಸಲ್ಲದು.

 ಆಕೆ ಹುಟ್ಟಿದಾಗಿನಿಂದ ಸಾಯುವವರೆಗಿನ ಬದುಕಿನ ಮಧ್ಯದ ಪಯಣದಲ್ಲಿ ಬರುವ ಸಂಗಾತಿ ಪತಿಯೇ ಆದರೂ, ಜೀವನದ ಕೊನೆಯ ಗಳಿಗೆಯವರೆಗೂ ಅವರಿಬ್ಬರೂ ಜೊತೆಯಾಗಿ ಇರಬಲ್ಲರು ಎಂಬುದಕ್ಕೆ ಯಾರೂ ಗ್ಯಾರೆಂಟಿ ಕೊಡಲು ಸಾಧ್ಯವಿಲ್ಲ.

ಆಕೆ ಕೇವಲ ಗಂಡನನ್ನು ಕಳೆದುಕೊಂಡಿದ್ದಾಳೆ… ಬದುಕನ್ನಲ್ಲ.

 ಆಕೆಯ ಮೇಲೆ ಹೆಚ್ಚಿನ ಜವಾಬ್ದಾರಿಗಳಿವೆ… ತನ್ನನ್ನು ತಾನು ಸಂಭಾಳಿಸಿಕೊಂಡು ತನ್ನ ಮಕ್ಕಳ, ಮನೆಯವರ ಜವಾಬ್ದಾರಿಯನ್ನು ಹೊತ್ತು ಬದುಕು ಸಾಗಿಸಬೇಕಾಗಿದೆ. ಯಾವುದೇ ವಿದ್ಯಾರ್ಹತೆಯನ್ನು ಹೊಂದಿರದ  ವ್ಯಕ್ತಿಯಾಗಿದ್ದರೆ ಮುಂದಿನ ಬದುಕಿನ ಕುರಿತು ಸದಾ ಯೋಚಿಸುವಂತಹ ಸ್ಥಿತಿ. ಮಕ್ಕಳ ಶಾಲೆಯ ಫೀ, ಆರೋಗ್ಯ, ಹಬ್ಬಗಳಿಗೆ ಬಟ್ಟೆ ಬರೆ ಖರೀದಿ, ಮನೆ ಬಾಡಿಗೆ, ದಿನಸಿ ಹೀಗೆ ಹತ್ತು ಹಲವು ಖರ್ಚುಗಳನ್ನು ನಿಭಾಯಿಸಬೇಕಾದಂತ ಪರಿಸ್ಥಿತಿ ಆಕೆಯದು. ಈಗಾಗಲೇ ವಿಧಿ ಆಕೆಯ ಬದುಕಿನ ಮೇಲೆ ಆರದ ಗಾಯ ಮಾಡಿದ್ದು ಅದಕ್ಕೆ ಮುಲಾಮು ಸವರಲಾಗದಿದ್ದರೆ ಬೇಡ, ಗಾಯದ ಮೇಲೆ ಬರೆ ಕೊಡುವಂತಹ ಮಾತುಗಳು ಬೇಡ.

 ಈಗಾಗಲೇ ತನ್ನ ಬದುಕನ್ನು ಚಲಾಯಿಸುವ ಹುಟ್ಟನ್ನು ಕಳೆದುಕೊಂಡು ನಡುನೀರಿನಲ್ಲಿ ನಿಂತ ದೋಣಿಯಂತಾಗಿರುವ ಆಕೆಯ ಮತ್ತು ಆಕೆಯ ಮಕ್ಕಳ ಬದುಕಿಗೆ ಆಕೆಯ ಭರವಸೆಯೆಂಬ ಕೈಗಳೇ ಹರಿಗೋಲುಗಳಾಗಿ ದಡ ಮುಟ್ಟಿಸಬೇಕು.

-ಅವರು ನಡೆಯುವ ದಾರಿಯಲ್ಲಿ ಹೂವ ಹಾಸದಿದ್ದರೂ ಪರವಾಗಿಲ್ಲ  ಮುಳ್ಳನ್ನು ಹರಡದಿರೋಣ.
-ಸಾಂತ್ವನಿಸದಿದ್ದರೂ ಪರವಾಗಿಲ್ಲ       ನೋಯಿಸದಿರೋಣ.
-ಗೌರವಿಸದಿದ್ದರೂ ಪರವಾಗಿಲ್ಲ, ಅವರ ಪಾಡು ಅವರಿಗಿರಲಿ, ಬಿಟ್ಟುಬಿಡೋಣ.
-ಅವರ ನೋವಿನ ಆಳ ತಿಳಿಯದ ನಾವು -ಅವರು ಸಣ್ಣ ಪುಟ್ಟ ಖುಷಿಗಳನ್ನು  ಸಂಭ್ರಮಿಸುವಾಗ ಕೆಣಕದೇ ಇರೋಣ.
-ತಂದೆಯನ್ನು ಕಳೆದುಕೊಂಡ ಮಕ್ಕಳು ತಾಯಿಯ ಮುಖದ ನಗುವನ್ನು ನೋಡಿ ಹೊಸ ಭರವಸೆ ತುಂಬಿಕೊಳ್ಳಲಿ, ಏಕೆಂದರೆ ಆಕೆ ಕೇವಲ ತಾಯಿಯಾಗಿ ಮಾತ್ರವಲ್ಲ ತಂದೆಯಾಗಿಯೂ ತನ್ನ ಮಕ್ಕಳ, ಕುಟುಂಬದ ಜವಾಬ್ದಾರಿಯನ್ನು ಹೊರಲು ಭಾವನಾತ್ಮಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ನೆಮ್ಮದಿಯ ಜೀವನ ಬೇಕು.

 ಸಂಗಾತಿಯನ್ನು ಕಳೆದುಕೊಂಡ ಮಾತ್ರಕ್ಕೆ ಅವರು ಒಂದೊಳ್ಳೆಯ ಬದುಕು ಬದುಕಲು ಅರ್ಹರಲ್ಲ ಎಂದು ತೀರ್ಮಾನಿಸಲು ನಾವೆಷ್ಟರವರು ಅಲ್ಲವೇ. ಅವರು ಕೂಡ  ನಮ್ಮಷ್ಟೇ ಈ ಪ್ರಪಂಚದಲ್ಲಿ ಬದುಕಲು, ಬಾಳು ರೂಪಿಸಿಕೊಳ್ಳಲು ಸ್ವತಂತ್ರರು. ದಯವಿಟ್ಟು ನೋಯಿಸದೆ,ಕಡೆಗಣಿಸದೆ, ಅವಮಾನಿಸದೆ ಆತ್ಮ ಗೌರವದಿಂದ,ಘನತೆಯಿಂದ ಬಾಳಲು ಅವಕಾಶ ಕೊಡಿ.


Leave a Reply

Back To Top