ಕಥಾ ಸಂಗಾತಿ
ರಾಗರಂಜಿನಿ
“ವಸಂತಾಗಮನ”
ಅಕೌಂಟೆನ್ಸಿ ಗೆ ಹೊಸ ಲೆಕ್ಟರರ್ ಬಂದಿದ್ದಾರಂತೆ ಬಹಳ ಸ್ಮಾರ್ಟ್ ಇದ್ದಾರಂತೆ ಎಂಬ ಮಾತು ತರಗತಿಯ ಒಳಗೆ ಹೋಗುವಾಗಲೇ ಚೈತ್ರ ಹಾಗೂ ಪಲ್ಲವಿಯರ ಕಿವಿಗೆ ಬಿದ್ದಾಗ ಇಬ್ಬರೂ ಮುಖ ನೋಡಿಕೊಂಡರು
ಮೊದಲ ಪಿರಿಯೆಡ್ ನ ಇಂಗ್ಲಿಷ್ ಪಾಠ ಯಾರ ಮನಸ್ಸಿಗೆ ಬಿಡಿ ಕಿವಿಯ ಹತ್ತಿರವೂ ಸುಳಿಯಲಿಲ್ಲ
ಬೆಲ್ ಆದೊಡನೆ ಎಲ್ಲರ ಕಣ್ಣುಗಳೂ ಬಾಗಿಲ ಬಳಿ ನೆಟ್ಟಿದ್ದವು
ಆಗಲೇ ಕಪ್ಪು ಬಣ್ಣದ ಪ್ಯಾಂಟ್ ಗೆ ಚೆಕ್ಸ್ ಶರ್ಟ್, ಒಪ್ಪವಾಗಿ ಬಾಚಿದ ಕೂದಲು ಮುಗುಳುನಗುತ್ತಲೇ ಬರುತ್ತಿದ್ದ ಆತನನ್ನು ನೋಡಿ ಎಲ್ಲರೂ ಎದ್ದು ನಿಲ್ಲುವುದನ್ನೇ ಮರೆತಿದ್ದರು
ಆಗ ಆತನೇ ಹಾಯ್ ನಾನು ವಸಂತ್ ಈ ವರ್ಷ ನಿಮಗೆ ಅಕೌóಟೆನ್ಸಿ ಕಲಿಸಲು ಬಂದಿರುವೆ ಎಂದು ನಕ್ಕಾಗ ಅವನ ಕೆನ್ನೆಯ ಮೇಲೆ ಮೂಡಿದ್ದ ಗುಳಿ, ಗಲ್ಲದ ಕೆಳಗಿದ್ದ ಕರಿಮಚ್ಚೆ ಅವನ ಸೌಂದರ್ಯವನ್ನು ಹೆಚ್ಚಿಸಿದ್ದವು
ತನ್ನ ಸೂಕ್ಷ್ಮ ಪರಿಚಯದ ಬಳಿಕ ನಿಮ್ಮ ಪರಿಚಯ ಹೇಳಿ ಎಂದಾಗ ಎಲ್ಲರ ಪರಿಚಯ ಒಂದಿಷ್ಟು ಮಾತುಕತೆಯಾಗುವಷ್ಟರಲ್ಲಿ ಅವಧಿ ಮುಗಿದಿತ್ತು ಅವನು ತರಗತಿ ಬಿಟ್ಟು ತೆರಳಿದ್ದರೂ ಎಲ್ಲಾ ಹುಡುಗಿಯರ ಮನಸ್ಸಿನಲ್ಲಿ ಅವನೇ ತುಂಬಿದ್ದ
ಚೈತ್ರ, ಪಲ್ಲವಿಯರೂ ಇದಕ್ಕೆ ಹೊರತಾಗಿರಲಿಲ್ಲ
ದಿನ ಕಳೆದಂತೆ ಅವನ ಪಾಠ ಮಾಡುವ ವಿಧಾನದಿಂದ ಕಬ್ಬಿಣದ ಕಡಲೆ ಎನಿಸಿದವರಿಗೂ ಅಕೌಂಟೆನ್ಸಿ ಸುಲಭವಾಗಿ ಅರ್ಥವಾಗತೊಡಗಿದಾಗ ಆತ ಎಲ್ಲರ ಪಾಲಿನ ಆರಾಧ್ಯ ದೈವವಾಗಿದ್ದ
ತನ್ನ ನಡೆ ನುಡಿಗಳಿಂದ ಎಲ್ಲರ ಮೆಚ್ಚುಗೆಯನ್ನೂ ಗಳಿಸಿದ್ದ
ಚೈತ್ರ,ಪಲ್ಲವಿ ಇಬ್ಬರೂ ಅವನಿಗೆ ಮರುಳಾಗಿದ್ದರೂ ಪರಸ್ಪರ ಹೇಳಿಕೊಂಡಿರಲಿಲ್ಲ
ಚೈತ್ರ/ಪಲ್ಲವಿ
ಅವರಿಬ್ಬರದೂ ಬಾಲ್ಯದ ಗೆಳೆತನ ಚೈತ್ರಳಿಗೆ 5 ವರ್ಷವಿರುವಾಗ ಮನೆಯ ಪಕ್ಕದಲ್ಲಿದ್ದ ಖಾಲಿ ಮನೆಗೆ ಬಂದಿದ್ದರು ಪಲ್ಲವಿಯ ಕುಟುಂಬ.
ಅಂದಿನಿಂದ ಎರಡೂ ಮನೆಯಲ್ಲಿ ಅನ್ಯೋನ್ಯತೆ-
ಮಕ್ಕಳಿಬ್ಬರೂ ಒಡಹುಟ್ಟಿದವರಂತೆ ಹೊಂದಿಕೊಂಡಿದ್ದರು ಜಗಳವಾದಾಗಲೂ ಕೆಲವೇ ಸಮಯದಲ್ಲಿ ಎರಡು ಬೆರಳು ಸೇರಿಸಿ “ಕಟ್ಟಿ- ಬಟ್ಟಿ” ಆಗಿ ಬಿಡುತಿತ್ತು
ಆವರಲ್ಲಿ ಗೌಪ್ಯತೆ ಎಂಬುದೇ ಇರಲಿಲ್ಲ (ಈಗ ವಸಂತ್ ನನ್ನು ಪ್ರೀತಿಸುವ ವಿಷಯವೊಂದನ್ನು ಬಿಟ್ಟು)
ಅದೊಂದು ದಿನ ಚೈತ್ರ ಧೈರ್ಯದಿಂದ ಒಂದು ಪ್ರೇಮಪತ್ರವನ್ನು ಬರೆದು ನೋಟ್ಸ್ ಪುಸ್ತಕದಲ್ಲಿ ಇರಿಸಿ ವಸಂತ್ ಗೆ ತಲುಪಿಸಿಯೇ ಬಿಟ್ಟಳು
ಮರುದಿನ ಪಲ್ಲವಿಯನ್ನು ನೋಡುವ ಧೈರ್ಯವಿರಲಿಲ್ಲ ಆದರೂ ಸಾವರಿಸಿಕೊಂಡು ತರಗತಿಯಲ್ಲಿ ಕೂತರೂ ವಸಂತ್ ನ ಪ್ರತಿಕ್ರಿಯೆ ಹೇಗಿರಬಹುದು ಎಂದು ಅಳುಕಿದ್ದಳು ಆದರೆ ವಸಂತ್ ತನಗೇನೂ ತಿಳಿಯದು ಎಂಬಂತೆ ಇದ್ದರೂ ಆಗಾಗ್ಗೆ ತನ್ನನ್ನು ಗಮನಿಸಿದನ್ನು ಕಂಡು ಪುಳಕ ಗೊಂಡಳು
ಅದೊಂದು ಸಂಜೆ ಪಲ್ಲವಿ ಹಾಗೂ ಅವಳ ತಾಯಿ ಚೈತ್ರಾಳ ಮನೆಗೆ ಬಂದರು ಇಬ್ಬರ ಮುಖದಲ್ಲೂ ಸಂಭ್ರಮ
ವಿಷಯ ಏನು ಎಂದು ಕೇಳಿದಾಗ ಪಲ್ಲವಿಗೆ ಒಂದು ಸಂಬಂಧ ಬಂದಿದ್ದು ಜಾತಕ ಕೂಡಿ ಬಂದಿದ್ದು ಹುಡುಗ ಇಂಜಿನಿಯರಿಂಗ್ ಮುಗಿಸಿ ಒಳ್ಳೆ ಕಂಪೆನಿಯಲ್ಲಿ ಕೆಲಸದಲ್ಲಿ ಇರುವುದಾಗಿಯೂ ನಾಡಿದ್ದು ಭಾನುವಾರ ಪಲ್ಲವಿಯನ್ನು ನೋಡಲು ಬರುತ್ತಿರುವುದಾಗಿ ಅಂದು ನೀವಿಬ್ಬರೂ ನಮ್ಮ ಜೊತೆ ಇದ್ದು ಸಹಕರಿಸಬೇಕು ಎಂದಾಗ ಚೈತ್ರ ಓಡಿ ಹೋಗಿ ಪಲ್ಲವಿಯನ್ನು ಅಪ್ಪಿಕೊಂಡು ಕೆನ್ನೆಗೆ ಮುತ್ತಿಟ್ಟು “ಕಾಂಗ್ರಾಟ್ಸ್ ಪಲ್ಲು” ಎನ್ನುತ್ತಿದ್ದರೆ ಚೈತ್ರಾಳ ತಾಯಿಯ ಮುಖ ಒಮ್ಮೆಗೆ ಕಳೆಗುಂದಿತ್ತು ಕಣ್ಣಲ್ಲಿ ಬೇಡವೆಂದರೂ ಕಣ್ಣೀರು ಬಂದೇ ಬಿಡ್ತು
ಏನೆಂದು ಯಾರಿಗೂ ಅರ್ಥವಾಗದೇ ಪಲ್ಲವಿಯ ತಾಯಿ ಅವರ ಬಳಿ ಕುಳಿತು ಬೆನ್ನು ನೇವರಿಸುತ್ತ ಏನಾಯ್ತು ಎಂದು ಮೃದುವಾಗಿ ಕೇಳಿದಾಗ ಇದುವರೆಗೂ ಕಟ್ಟಿ ಹಾಕಿದ್ದ ಲಾವಾರಸ ಒಮ್ಮೆಲೇ ಸ್ಪೋಟಗೊಂಡಿತ್ತು
ಅವರು ಹೇಳಿದ್ದು ಇಷ್ಟು:
ನನ್ನ ಅಣ್ಣನ ಹೆಂಡತಿಗೆ ಚೊಚ್ಚಲ ಬಾಣಂತನದಲ್ಲಿ ಗಂಡು ಮಗು ಹುಟ್ಟಿತ್ತು ಆದರೆ ನಂತರ ಅವಳ ಆರೋಗ್ಯ ಬಿಗಡಾಯಿಸಿ ಆಕೆ ಮುಂದೆ ತಾಯಿಯಾಗುವುದಿಲ್ಲ ಎಂಬುದನ್ನು ವೈದ್ಯರು ತಿಳಿಸಿದ್ದರು
ಮುಂದೆ ವರುಷದೊಳಗೆ ನಾನು ಚೈತ್ರಾಳನ್ನು ಹೆತ್ತಾಗ ಅಣ್ಣ ಖುಷಿಯಿಂದ ಇವಳು ನನ್ನ ಸೊಸೆ ಕಣೇ ಇವಳಿಂದಲೇ ನಮ್ಮ ವಂಶ ಮುಂದುವರೆಯೋದು ಅಂದುಬಿಟ್ರು
ತವರಿನ ನಂಟು ಮುಂದುವರೆಯಬೇಕೆಂಬ ಹಂಬಲದಲ್ಲಿ ಅಣ್ಣ ತನ್ನ ಮಗನಿಗೂ ಚೈತ್ರಾಳಿಗೂ ತೊಟ್ಟಿಲ ಮದುವೆ ನಡೆಸಿಯೇ ಬಿಟ್ಟರು
ನಮಗೂ ಯಾವುದೇ ಬೇಸರವಿರಲಿಲ್ಲ
ಆದರೆ ವಿಧಿಲಿಖಿತ ಬೇರೆಯೇ ಇತ್ತು
ನಾನು 4 ತಿಂಗಳು ಬಾಣಂತನ ಮುಗಿಸಿ ಮನೆಗೆ ಬಂದಿದ್ದೆ
ಚೈತ್ರಳಿಗೆ 6 ತಿಂಗಳು ಆಗಿತಷ್ಟೇ
ಅಷ್ಟರಲ್ಲಿ ಅಣ್ಣನ ಮಗ ಕಾಮಾಲೆ ರೋಗಕ್ಕೆ ಬಲಿಯಾಗಿಬಿಟ್ಟ ಆಗ ಅಣ್ಣ ಅತ್ತಿಗೆ ಇಬ್ಬರೂ ಚೈತ್ರಾಳ ಕಾಲ್ಗುಣವೇ ಇದಕ್ಕೆ ಕಾರಣ ಎಂದು ಅವಳ ಕೊರಳಲ್ಲಿ ಕಟ್ಟಿದ್ದ ತಾಳಿಯನ್ನು ಕಿತ್ತುಕೊಂಡು ನಮ್ಮೊಂದಿಗೆ ಸಂಬಂಧವನ್ನೇ ಕಡಿದುಕೊಂಡು ಬಿಟ್ಟರು
ಏನೂ ಅರಿಯದ ವಯಸ್ಸಿನಲ್ಲೇ ಎಲ್ಲವೂ ಮುಗಿದು ಹೋಗಿತ್ತು
ಅಂದಿನಿಂದ ನಾನು ತೌರ ಮುಖ ನೋಡಿಲ್ಲ ಆದರೆ ಚೈತ್ರಳ ತೊಟ್ಟಿಲು ಮದುವೆ ವಿಷಯ ಎಲ್ಲರಿಗೂ ತಿಳಿದು ಹೋಗಿತ್ತು ಎಲ್ಲರ ದೃಷ್ಟಿಯಲ್ಲಿ ಅವಳು ಬಾಲ ವಿಧವೆ ಎನ್ನುತ್ತಾ ಬಿಕ್ಕಳಿಸಿದಾಗ
ಯಾರಲ್ಲೂ ಮಾತಿರಲಿಲ್ಲ
ಚೈತ್ರಾಳ ತಾಯಿಯ ಎದೆಯೊಳಗಿನಿಂದ ಇಳಿದ ಭಾರ ಚೈತ್ರಾಳ ತಲೆಯ ಮೇಲೆ ಹೆಬ್ಬಂಡೆಯಂತೆ ಬಂದು ಕೂತಂತಾಯ್ತು
ಮುಂದೆ ಎಲ್ಲವೂ ನೀರಸ…ಚೈತ್ರ ತನ್ನ ಅಭ್ಯಾಸದ ಮೇಲಿನ ಏಕಾಗ್ರತೆಯನ್ನೇ ಕಳೆದುಕೊಂಡು ಬಿಟ್ಟಿದ್ದಳು
ಇತ್ತ ಪಲ್ಲವಿಯನ್ನು ನೋಡಲು ಬಂದ ಹುಡುಗನನ್ನು ಬೇಡ ಎನ್ನಲೂ ಯಾವುದೇ ಕಾರಣ ಇರಲಿಲ್ಲ ಪರಸ್ಪರ ಒಪಿಗೆಯಾಗಿತ್ತು ಪರೀಕ್ಷೆಗಳು ಮುಗಿದ ಬಳಿಕ ಮುಂದಿನ ಮಾತುಕತೆ ನಡೆಸುವ ಮಾತಿನೊಂದಿಗೆ ಅವರು ಹಿಂದಿರುಗಿದ್ದರು
ಈಗೀಗ ಚೈತ್ರಾಳ ನಡುವಳಿಕೆಯನ್ನು ಗುರುತಿಸಿದ್ದ ವಸಂತ್ ಅವಳೊಡನೆ ನೇರವಾಗಿ ಕೇಳುವುದು ಸರಿಯಲ್ಲ ಎಂದು ಒಂದು ದಿನ ಪಲ್ಲವಿಯನ್ನು ಕರೆದು ವಿಚಾರಿಸಿದ್ದ
ಪಲ್ಲವಿಗೆ ಗೆಳತಿಯ ಬಾಳಿನಲ್ಲಿ ನಡೆದ ಘಟನೆ ಬಹಳ ನೋವುಂಟು ಮಾಡಿತ್ತು ಆದರೆ ಯಾರೊಡನೆಯೂ ಹೇಳಿಕೊಳ್ಳುವ ಹಾಗಿರಲಿಲ್ಲ ಆದರೆ ಇಂದು ಅವಳಿಂದ ತಡೆಯಲಾಗಲಿಲ್ಲ ವಸಂತ ನ ಬಳಿ ಎಲ್ಲವನ್ನೂ ಹೇಳಿಕೊಂಡು ಕೊನೆಯಲ್ಲಿ ಆಕ್ರೋಶದಿಂದ ಇದೆಂತಾ ಸಮಾಜ ಸರ್ ಅರಿಯದ ವಯಸ್ಸಿನಲ್ಲಿ ಹಿರಿಯರು ಮಾಡಿದ ತಪ್ಪಿಗೆ ಚೈತ್ರಾಳ ಜೀವನ ಹಾಳಾಗಬೇಕೆ ?
ಸಮಾಜದ ಕಟ್ಟುಪಾಡುಗಳನ್ನು ಅನುಸರಿಸಬೇಕು ನಿಜ ಆದರೆ ಇಂತವುಗಳನ್ನಲ್ಲ
ಒಂದು ವೇಳೆ ಹೆಣ್ಣು ಮಗು ಸತ್ತಿದ್ದರೆ ಅವರು ಅವನಿಗೆ ಮದುವೆ ಮಾಡುವುದಿಲ್ಲವೇ
ಎಲ್ಲಾ ಅವರವರ ಅನುಕೂಲಕ್ಕೆ ತಕ್ಕಂತೆ
ಹೆಣ್ಣು ಎಂದರೆ ಅಂದು ಅಲ್ಲ ಇಂದಿಗೂ ಯಾರಿಗೂ ಅವಳ ಬಗ್ಗೆ ಅಸಡ್ಡೆ ಯೇ ಎನ್ನುತ್ತಾ ತನ್ನ ಆಕ್ರೋಶವನ್ನೆಲ್ಲ ವಸಂತನ ಮುಂದೆ ತೋರಿಸಿಬಿಟ್ಟಳು
ಆಗ ವಸಂತ ಎಲ್ಲವನ್ನೂ ಸಾವಧಾನದಿಂದ ಕೇಳಿ ನಿಜಕ್ಕೂ ಬೇಸರದ ವಿಷಯ ಪಲ್ಲವಿ ನೀವು ಹೇಳಿದ್ದೆಲ್ಲವೂ ಸರಿ ಆದರೆ ಇದಕ್ಕೆ ನಿಮ್ಮ ಬಳಿ ಏನಾದರೂ ಪರಿಹಾರವಿದೆಯೇ ಎಂದಾಗ …
ಯಾಕಿಲ್ಲ ಸರ್ ನಿಮ್ಮಂತಹ ಇಂದಿನ ಯುವಕರು ಇದನ್ನು ವಿರೋಧಿಸಿ ಇಂತಹ ಹೆಣ್ಣುಮಕ್ಕಳ ಕೈ ಹಿಡಿಯಲು ಮುಂದಾಗಬೇಕು ಎಂದು ತನ್ನ ಮನದೊಳಗಿನ ಭಾವನೆಯನ್ನು ಹೊರ ಹಾಕಿದಳು ಆದರೂ ತಾನು ಹೇಳಿದ್ದು ತಪ್ಪಾಯ್ತೆನೋ ಎಂಬಂತೆ ನಾಲಿಗೆ ಕಚ್ಚಿಕೊಂಡಳು
ಆದರೆ ಅದೇ ಹೊತ್ತಿನಲ್ಲಿ ವಸಂತನ ತುಟಿಯಲ್ಲಿ ಮಿಂಚಿ ಮಾಯವಾದ ನಗುವನ್ನು ಆಕೆ ಗಮನಿಸಲಿಲ್ಲ
ಮುಂದಿನ ಭಾನುವಾರ ಚೈತ್ರಾಳ ಮನೆಗೆ ತನ್ನ ಹೆತ್ತವರೊಂದಿಗೆ ಬಂದಿಳಿದಿದ್ದ ವಸಂತ
ತನಗೆ ಎಲ್ಲಾ ವಿಷಯ ತಿಳಿದೇ ತಾನು ಬಂದಿರುವುದಾಗಿ ಹೇಳಿದ
ಬರಡಾಯಿತು ಎಂದು ಕೊಂಡಿದ್ದ ಚೈತ್ರಾಳ ಬಾಳಿನಲ್ಲಿ ಮತ್ತೊಮ್ಮೆ *ವಸಂತಾಗಮನ*ವಾಗಿತ್ತು
ರಾಗರಂಜಿನಿ