ಅಂಕಣ ಸಂಗಾತಿ
ಹನಿಬಿಂದು
ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ
ಪ್ರೀತಿ ಹಂಚಿ
ಪ್ರೀತಿಯಿಂದ ಬಾಳೋಣ
ಭಾವ ಬಂಧನವೆ ಜಗತ್ತಿನ ಕೀಲಿ ಕೈ. ಬದುಕಿನಲ್ಲಿ ಹೊಟ್ಟೆಯ ಹಸಿವಿನಷ್ಟೇ ಇರುತ್ತದೆ ಪ್ರೀತಿಯ ಹಸಿವು ಕೂಡ. ಇದನ್ನು ಆರಿಸಲು ಸಂಬಂಧಗಳಿಂದ ಮಾತ್ರ ಸಾಧ್ಯ. ಉತ್ತಮ ಸಂಬಂಧಗಳೆಂದರೆ ಅದು ಹಾಲು ನೀರಿನಂತೆ. ಒಂದನ್ನೊಂದು ಬಿಟ್ಟಿರಲಾರದು. ಭಾರತದಲ್ಲಿ ಇದಕ್ಕೆ ಕುಟುಂಬದ ಚೌಕಟ್ಟಿನಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಬೇರೆ ದೇಶಗಳಲ್ಲಿ ಕುಟುಂಬಕ್ಕೆ ಪ್ರಾಶಸ್ಯ ಇಲ್ಲವೆಂದು ಅಲ್ಲ, ಆದರೆ ಭಾರತಕ್ಕೆ ಹೋಲಿಸಿದರೆ ಕಡಿಮೆ ಅನ್ನಿಸುತ್ತದೆ. ಗಂಡ , ಹೆಂಡತಿ , ಅಣ್ಣ, ತಮ್ಮ, ಅಕ್ಕ , ತಂಗಿ, ಮಕ್ಕಳು, ತಾಯಿ, ತಂದೆ, ಅಜ್ಜ, ಅಜ್ಜಿ, ಅತ್ತೆ, ಮಾವ , ಚಿಕ್ಕಪ್ಪ, ಚಿಕ್ಕಮ್ಮ ಇಂತಹ ಸಂಬಂಧಗಳು ಪ್ರೀತಿಯನ್ನು ಹೆಚ್ಚಿಸುವ ಜೊತೆಗೆ ಪ್ರತಿಯೊಬ್ಬರಲ್ಲೂ ಒಂದು ವಿಧವಾದ ಧೈರ್ಯವನ್ನು ತುಂಬುತ್ತವೆ. ಭಾರತೀಯ ಸಂಬಂಧಗಳಲ್ಲಿ ಸ್ಟೆಪ್ ಫಾದರ್, ಸ್ಟೆಪ್ ಮದರ್, ಸ್ಟೆಪ್ ಬ್ರದರ್, ಸ್ಟೆಪ್ ಸಿಸ್ಟರ್ ಇಂತಹ ಸಂಬಂಧಗಳು ಸಿಗುವುದು ಕಡಿಮೆ ಮತ್ತು ಅವುಗಳಿಗೆ ಆಸ್ಪದವೂ ಇಲ್ಲ, ಬೆಲೆಯೂ ಇಲ್ಲ. ಪ್ರತಿಯೊಂದು ಸಂಬಂಧಕ್ಕೂ ಒಂದು ಚೌಕಟ್ಟಿದೆ ಮತ್ತು ಆ ಚೌಕಟ್ಟಿನಲ್ಲೇ ಅದು ಬೆಳೆಯುತ್ತದೆ. ಅಲ್ಲಿ ಹಿರಿಯರ ಭಯವು ಮತ್ತು ಕಿರಿಯರ ಪ್ರೀತಿಯು ಹಾಗೆಯೇ ಮನೆಯ ಯಜಮಾನನ ಅಧಿಕಾರಯುತ ವಾಣಿಯು ಕೂಡ ನಡೆಸಲ್ಪಡುತ್ತದೆ. ಕೆಲವು ಕುಟುಂಬಗಳಲ್ಲಿ ತಾಯಿ ಮೇಲಾದರೆ ಇನ್ನು ಕೆಲವು ಕುಟುಂಬಗಳಲ್ಲಿ ತಂದೆಯ ಸ್ಥಾನ ಮೇಲು. ಹೆಣ್ಣನ್ನೇ ಅತ್ಯಂತ ಮೇಲೆ ಇಟ್ಟು ಕುಟುಂಬದ ಯಜಮಾನಿಯನ್ನಾಗಿ ಮಾಡಿದ ಹಲವಾರು ಕುಟುಂಬಗಳು ಭಾರತದಲ್ಲಿ ಈಗಲೂ ಇವೆ. ಆದರೂ ಹೆಚ್ಚಿನ ಕಡೆಗಳಲ್ಲಿ ಮುಖ್ಯವಾಗಿ ಪಿತೃ ಪ್ರಧಾನ ಕುಟುಂಬವಿದೆ. ಕುಟುಂಬ ಹೇಗೆಯೇ ಇರಲಿ, ಅಲ್ಲಿರುವ ಪ್ರೀತಿ, ಸಹಕಾರ, ಸಹಬಾಳ್ವೆ , ಒಬ್ಬರಿಗೊಬ್ಬರ ಮೇಲೆ ಇರುವ ನಂಬಿಕೆ, ಕಷ್ಟದ ಸಮಯದಲ್ಲಿ ಸಹಾಯ ಮಾಡುವುದು ಇವುಗಳೇ ಮುಖ್ಯ ಅನ್ನಿಸಿಕೊಳ್ಳುತ್ತವೆ. ಹಿರಿಯರ ವಾಕ್ಯವೆಂದರೆ ಅದು ವೇದವಾಕ್ಯ ಅವರ ಮಾತಿಗೆ ತಪ್ಪಲು ಯಾರಿಗೂ ಸಾಧ್ಯವಿಲ್ಲ ಮತ್ತು ಅದನ್ನು ಮೀರಿ ನಡೆಯುವ ಧೈರ್ಯ ಯಾರಿಗೂ ಇಲ್ಲ. ಈ ಕುಟುಂಬ ಪದ್ಧತಿಯಿಂದ ನಮಗಾಗುವ ಉಪಯೋಗ ಏನೆಂದರೆ ಸಮಾಜದಲ್ಲಿನ ಹೆಚ್ಚಿನ ನಡತೆಗಳು ಕಡಿಮೆಯಾಗುತ್ತವೆ. ಹಾಗೂ ಕಳ್ಳತನ ಕೂಡಾ ಕಡಿಮೆ ಆಗುತ್ತದೆ, ಪ್ರೀತಿ, ಹಂಚಿ ತಿನ್ನುವ ಗುಣ, ಸಹಕಾರ, ಸಮಾಜದ ನೆಮ್ಮದಿ ಹೆಚ್ಚುತ್ತದೆ, ಹೆಣ್ಣು ಗಂಡು ಇಬ್ಬರ ಕಷ್ಟಗಳೂ ಇಬ್ಬರಿಗೂ ಅರ್ಥವಾಗುತ್ತವೆ, ಹೆಣ್ಣಿಗೆ ಬೆಲೆ ಇರುತ್ತದೆ, ಪರಸ್ಪರ ಸಹಕಾರ ಭಾವನೆ, ಕಷ್ಟ ಸುಖ ಸಮನಾಗಿ ಹಂಚಿಕೊಳ್ಳುವ ಮನೋಭಾವ ಬೆಳೆಯುತ್ತದೆ. ಮನೆಯಲ್ಲಿ ಹೆಣ್ಣು ಮಕ್ಕಳು ಇರುವ ಕಾರಣ ಹೊರಗಿನ ಹೆಣ್ಣು ಮಕ್ಕಳಿಗೆ ಮನೆಯ ಹೆಣ್ಣು ಮಕ್ಕಳಂತೆ ಗೌರವ ಕೊಡಬೇಕು ಎಂಬ ಅಂಶ ತನ್ನಿಂದ ತಾನೇ ದೊರೆಯುತ್ತದೆ. ಹೆಣ್ಣು ಗಂಡಿನ ಕಷ್ಟ ಸುಖವನ್ನು ಪರಸ್ಪರರು ಅರ್ಥ ಮಾಡಿಕೊಳ್ಳುತ್ತಾರೆ. ಮತ್ತು ಕಷ್ಟದಲ್ಲಿ ಒಬ್ಬರಿಗೆ ಒಬ್ಬರು ಬೆಂಗಾವಲಾಗಿ ನಿಲ್ಲುತ್ತಾರೆ. ಹೆರಿಗೆಯ ಸಮಯದಲ್ಲಿ ಗಂಡು, ಗಂಡು ಕಷ್ಟ ಪಡುವ ಸಮಯದಲ್ಲಿ ಹೆಣ್ಣು ಜೊತೆಯಾಗುತ್ತಾರೆ. ಹೆಣ್ಣು ಗಂಡೆಂಬ ಭೇದವಿಲ್ಲದ ಈಗಿನ ಸಮಯದಲ್ಲಿ ತಾರತಮ್ಯವಂತೂ ಇಲ್ಲವೇ ಇಲ್ಲ. ಈಗ ಅದೇನಿದ್ದರೂ ಕೂಡ ಸಂಬಂಧಗಳನ್ನು ಸಹ ದುಡ್ಡಿನಲ್ಲಿಯೇ ಲೆಕ್ಕ ಹಾಕುವ ಕಾಲ. ಅದರ ನಡು ನಡುವೆ ಸೀಮಂತ, ಮದುವೆ, ಮಗುವಿನ ನಾಮಕರಣ, ಹೊಸ ಮನೆಯ ಪ್ರವೇಶ, ಪೂಜೆ ಇದಕ್ಕೆ ಮಾತ್ರ ಸಂಬಂಧಗಳು ಬೇಕೆಂಬ ಕಾರಣ ಬಂದು ನಿಂತಿದೆ. ಭಾವನಾತ್ಮಕವಾಗಿ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳದೆ, ಆಸ್ತಿ ಗೋಸ್ಕರ ಜಗಳವಾಡುತ್ತಾ ತಂದೆ ತಾಯಿಗಳನ್ನು ಕೂಡ ಗೌರವ ಕೊಡದೆ ಕೆಲಸದ ಅಳುಗಳಂತೆ ನೋಡಿ ಕೊಳ್ಳುತ್ತಾ, ತವರು ಮಾಡಿಟ್ಟ ಆಸ್ತಿಯಲ್ಲಿ ಹೆಚ್ಚಿನ ಪಾಲು ತನಗೆ ಬೇಕು ಎಂದು ಹಠ ಹಿಡಿಯುತ್ತಾ, ತನ್ನ ಅಕ್ಕ ತಂಗಿ ಅಣ್ಣ ತಮ್ಮಂದಿರನ್ನು ಯಾವ್ಯಾವುದೋ ರೀತಿಯಲ್ಲಿ ಹಿಂಸಿಸುತ್ತಾ ಅವರ ಬದುಕನ್ನು ನಾಶ ಮಾಡುತ್ತಾ ತಾವು ಚೆನ್ನಾಗಿ ಮೆರೆಯುತ್ತಿರುವವರನ್ನು ನಾವು ಸಮಾಜದಲ್ಲಿ ಹಲವರನ್ನು ಕಾಣುತ್ತೇವೆ. ಅಕ್ಕ ತಂಗಿಯರಿಗೆ ಸರಿಯಾಗಿ ಪೆಟ್ಟುಕೊಟ್ಟು ಅವರು ಮನೆಗೆ ಬರದ ಹಾಗೆ ಮಾಡುವುದು, ಅವರ ಮಕ್ಕಳು ಬಂದರು ಅವರನ್ನೂ ಯಾವುದೇ ರೀತಿಯಲ್ಲಿ ನಡೆಸಿಕೊಳ್ಳದೆ ಇರುವುದು, ಸ್ವಲ್ಪ ಬಡವರಾದರೆ ಅವರನ್ನು ಮಾತಿನ ಮೂಲಕ ಹಾಗೂ ನೋಟದ ಮೂಲಕ ನಿಂದಿಸುವುದು ಇದೆಲ್ಲ ಕಾರ್ಯಗಳಿಂದ ಕುಟುಂಬದವರು ಮತ್ತು ಸಂಸಾರದವರು ದೂರ ಹೋಗಲಿ ಎಂದು ಬಯಸುವುದು. ಹೀಗಾಗಿ ಇತ್ತೀಚಿನ ದಿನಮಾನಗಳಲ್ಲಿ ನಾವು ನೋಡುತ್ತಿರುವುದು ಏನೆಂದರೆ ಎರಡು ಬೆಡ್ರೂಮಿನ ಒಂದು ಮನೆಯಲ್ಲಿ ಕೇವಲ ಇಬ್ಬರು ಅಥವಾ ಮೂರು ಮಾತ್ರ ವಾಸಿಸುತ್ತಿದ್ದಾರೆ. ಮಕ್ಕಳು ಚಿಕ್ಕವರಿದ್ದಾರೆ ಎಂದರೆ ಮಾತ್ರ ಕೆಲವು ಕುಟುಂಬಗಳಲ್ಲಿ ನಾಲ್ಕು ಜನರಿದ್ದಾರೆ. ಮಕ್ಕಳು ಸ್ವಲ್ಪ ದೊಡ್ಡವರಾಗುತ್ತಾ ಬಂದಂತೆ ಅವರು ಹೆಚ್ಚಿನ ಓದಿಗಾಗಿ ಕೆಲಸಕ್ಕಾಗಿ ಹೊರಗೆ ಹೋಗುವಾಗ, ಇರುವ ಇಬ್ಬರೇ ಗಂಡ ಹೆಂಡತಿಯರಲ್ಲಿ ಪ್ರೀತಿಯ ಭಾವನೆ ಬೆಳೆಯಬೇಕು ಮತ್ತು ಪರಸ್ಪರದಲ್ಲಿ ಹೊಂದಾಣಿಕೆ ಕಾಣಬೇಕು. ಆದರೆ ಅದೆಷ್ಟೋ ಪತಿ ಪತ್ನಿಯರು ಮಕ್ಕಳಿಗಾಗಿ ಜೊತೆಗಿದ್ದಾರೆ. ಮಕ್ಕಳು ಹೊರಗೆ ಹೋಗುವಾಗ ಅವರ ತಾಯಿ ಅವರೊಂದಿಗೆ ಹೊರಗೆ ಹೋಗುವ ಅದೆಷ್ಟೋ ಸಂಬಂಧಗಳನ್ನು ನಾವು ನೋಡುತ್ತೇವೆ. ಇದರಿಂದ 60ರ ನಂತರ ಗಂಡಸೊಬ್ಬ ತನ್ನ ಇಡೀ ಕುಟುಂಬವನ್ನು ಬಿಟ್ಟು ಒಬ್ಬನೇ ಬದುಕಬೇಕಾಗಿರುತ್ತದೆ. ಅಲ್ಲಿ ಕೆಲವೊಮ್ಮೆ ಅವನ ತಪ್ಪುಗಳು ಇರುತ್ತವೆ. ಕುಡಿತ, ಜೂಜು, ಬೇರೆ ಹೆಣ್ಣಿನ ಸಂಗ ಮೊದಲಾದ ದುಷ್ಟ ಚಟಗಳು ಅಂಟಿಕೊಂಡಿದ್ದರೆ ಮಡದಿ ಅವನನ್ನು ತ್ಯಜಿಸಿ ಮಕ್ಕಳ ಕಡೆ ವಾಲಿಕೊಳ್ಳುತ್ತಾಳೆ. ಅದಕ್ಕಿಂತ ಮೊದಲು ಎಲ್ಲವನ್ನು ಕೂಡ ಸಮಾಜಕ್ಕಾಗಿ ಮತ್ತು ತಮ್ಮ ಮಕ್ಕಳಿಗಾಗಿ ತ್ಯಾಗ ಮಾಡಿರುತ್ತಾಳೆ. ಕೆಲವೊಂದು ಕುಟುಂಬಗಳಲ್ಲಿ ಮಕ್ಕಳ ಆರೋಗ್ಯ ಮತ್ತು ಪಾಲನೆಗಾಗಿ ಇಂತಹ ನೋವನ್ನು ತಂದೆಯು ಅನುಭವಿಸಿರುತ್ತಾನೆ. ಆದರೆ ಯಾರಲ್ಲಿಯೂ ಹೇಳಿಕೊಳ್ಳಲಾಗದ ನೋವು ಇಬ್ಬರನ್ನು ಕಾಡುತ್ತಿರುತ್ತದೆ. ಪರಸ್ಪರ ಮಾತನಾಡಿ ಅದನ್ನು ಸರಿಪಡಿಸಿಕೊಳ್ಳಲು ಯಾರು ಮುಂದೆ ಬರುವುದಿಲ್ಲ ಮತ್ತು ಅದೇ ದ್ವೇಷದಲ್ಲಿ ಜೀವನ ಪೂರ್ತಿ ಕಳೆಯುತ್ತಿರುತ್ತಾರೆ. ಕೆಲವೊಮ್ಮೆ ಬದುಕಲು ಸಾಧ್ಯವಾಗದೇ ಡೈವೋರ್ಸ್ ಪಡೆದುಕೊಂಡು ಆ ಮನೆಯಿಂದ ಹೊರಗೆ ಬಂದರೆ, ಕೆಲವರು ಅದಕ್ಕೂ ಅವಕಾಶ ನೀಡುವುದಿಲ್ಲ. ಹಾಗಾಗಿ ಏನು ಮಾಡದ ಸ್ಥಿತಿಯಲ್ಲಿ ಒಬ್ಬರಿಗೊಬ್ಬರು ಅವರಷ್ಟಕ್ಕೆ ಅವರು ಬದುಕುತ್ತಿರುತ್ತಾರೆ. ಇಂದು ಮನೆಗಳು ದೊಡ್ಡದಾಗಿವೆ ಮತ್ತು ಮನಗಳು ಚಿಕ್ಕದಾಗಿವೆ. ಎಲ್ಲರ ಬಳಿಯೂ ಹಣವಿದೆ ಆದರೆ ಪರರಿಗೆ ಸಹಾಯ ಮಾಡುವ ಸವದಾವಕಾಶ ಬಂದರೆ ಅದು ಯಾರೋ ಮೂರನೆಯವರು ಮಾಡಬೇಕಾಗುತ್ತದೆ. ಕೆಲವರು ತಮ್ಮ ಬದುಕಲ್ಲಿ ಹಣದ ಹಿಂದೆ ಓಡಿದರೆ ಇನ್ನು ಕೆಲವರು ಆಸ್ತಿಯ ಹಿಂದೆ ಓಡುವವರಾಗಿದ್ದಾರೆ, ಒಂದಷ್ಟು ಜನ ಚಿನ್ನದ ಹಿಂದೆ ಬಿದ್ದರೆ ಎಲ್ಲೋ ಅಲ್ಲಿ ಇಲ್ಲಿ ಒಂದಿಬ್ಬರು ಸಮಾಜ ಸೇವೆಗೆ ಟೊಂಕ ಕಟ್ಟಿ ನಿಂತಿದ್ದಾರೆ. ಬಡವರು, ನಿರ್ಗತಿಕರು, ವಯಸ್ಸಾದವರು, ಅನಾಥ ಮಕ್ಕಳು, ಮಕ್ಕಳಿಗೆ ಬೇಡವಾದ ವಯಸ್ಸಾದ ಪೋಷಕರು, ರೋಗಿಗಳು, ಮನೆಮಠ ಕಳೆದುಕೊಂಡವರು, ಹತ್ತಾರು ಮಕ್ಕಳನ್ನು ಸಾಕಿ ಅವರನ್ನು ಅವರ ಸ್ವಂತ ಕಾಲ ಮೇಲೆ ನಿಲ್ಲಿಸಲು ಪರಿಶ್ರಮಪಟ್ಟು ತಮ್ಮೆಲ್ಲ ಗಳಿಕೆಯನ್ನು ಕಳೆದುಕೊಂಡವರು ಮತ್ತು ವ್ಯಯಿಸಿದವರು ಇಂಥವರನ್ನೇ ಒಂದು ಆಶ್ರಮವನ್ನು ಕಟ್ಟಿ ಸಾಕುವವರು ಕೂಡ ನಮ್ಮ ಸಮಾಜದಲ್ಲಿ ಇದ್ದಾರೆ. ಅಂಥವರ ಸಂಖ್ಯೆ ಸಾವಿರವಾಗಲಿ ಮತ್ತು ಅವರಿಗೆ ದೇವರು ಹಲವಾರು ವರ್ಷಗಳ ಆಯುಷ್ಯ ಆರೋಗ್ಯ ನೀಡಲಿ. ತನ್ನ ತಂದೆ ತಾಯಿ ಸರಿಯಾಗಿ ವರ್ತಿಸುತ್ತಿಲ್ಲ ಎಂದು ವಯಸ್ಸಾದ ತಂದೆ ತಾಯಿಗೆ ಸಿಕ್ಕಿದ ಕೋಲಿನಲ್ಲಿ ಬಡಿಗೆಯಲ್ಲಿ ಕೈಯಲ್ಲಿ ದೇಹದ ಬೇರೆ ಬೇರೆ ಭಾಗಗಳಿಗೆ ಹೊಡೆಯುವಂತಹ ಮಕ್ಕಳನ್ನು ನೋಡಿದ್ದೇನೆ. ತಂದೆ ಬೀಡಿ ಸೇದುವ ಕೆಟ್ಟ ಚಟವನ್ನು ಬೆಳೆಸಿಕೊಂಡಿದ್ದಾನೆ ಎಂದು ಮತ್ತು ಅವನು ಬೀಡಿಗಾಗಿ ಮನೆಗೆ ಬಂದು ಹೋಗುವ ಎಲ್ಲರನ್ನೂ ಬೇಡುತ್ತಾನೆ ಆಗ ತನ್ನ ಮರ್ಯಾದೆ ಹೋಗುತ್ತದೆ ಎಂದು ಮಗನೊಬ್ಬ ತಂದೆಯನ್ನು ಚಿಕ್ಕ ಮಗುವಿಗೆ ಶಾಲೆಯಲ್ಲಿಯೋ ಅಥವಾ ಮನೆಯಲ್ಲಿಯೋ ಹೊಡೆದಂತೆ ಮಾನಸಿಕವಾಗಿ ಅಸ್ವಸ್ಥನಾದ ತನ್ನ ತಂದೆಗೆ ಪಟಪಟನೆ ಬಾರಿಸುತ್ತಿದ್ದ. ಇಂತಹ ಘಟನೆಗಳು ನಮ್ಮ ಬಾಳಿನಲ್ಲಿ ನಿತ್ಯವೂ ನಾವು ನೋಡಿಕೊಂಡು ನೋಡದೆ ಇರುವ ಹಾಗೆ ಸುಮ್ಮನೆ ಇರುತ್ತೇವೆ.ಕಾರಣ ಇಂತಹ ಸಮಸ್ಯೆಗೆ ಪರಿಹಾರ ನಮ್ಮ ಬಳಿ ಇಲ್ಲ. ಆ ತಂದೆಯನ್ನು ಅನಾಥಾಶ್ರಮಕ್ಕೆ ಸೇರಿಸಲು ಮಗನಿಗೆ ಇಷ್ಟವಿಲ್ಲ, ಇದ್ದರೆ ಇಂತಹ ಕಷ್ಟದ ಪರಿಸ್ಥಿತಿಯನ್ನು ಸಹಿಸಲು ಆಗುವುದಿಲ್ಲ. ಅಂತಹ ಸಮಯದಲ್ಲಿ ಆಸ್ಪತ್ರೆಯಲ್ಲಿ ಸ್ವಲ್ಪ ದಿನ ಅವರನ್ನು ಇಟ್ಟಿರಬಹುದು, ಆದರೆ ಅಲ್ಲಿ ಹೋಗಿ ನೋಡಿಕೊಂಡಿರಲು ಗಂಡ ಹೆಂಡತಿಗೆ ಸಮಯವಿಲ್ಲ. ಆಸ್ಪತ್ರೆಗಳ ಬಿಲ್ ಕೂಡ ಇತ್ತೀಚಿಗೆ ಅತ್ಯಂತ ದುಬಾರಿಯಾದ ಕಾರಣ ಅಷ್ಟೊಂದು ಹಣವನ್ನು ಕಟ್ಟುವ ತಾಕತ್ತು ಕೂಡ ಇಲ್ಲ. ಎಲ್ಲವೂ ಕೂಡ ಸಮಾಜದಲ್ಲಿ ನಾವು ಕಾಣುವ ನಿತ್ಯದ ಸಮಸ್ಯೆಗಳೇ ಆಗಿದೆ. ಭಾರತ ಅದೆಷ್ಟೋ ಮುಂದುವರಿದಿದೆ ಎಂದು ಹೇಳಿಕೊಂಡರು ಕೂಡ ಬಡತನ ಹಳ್ಳಿ ಹಳ್ಳಿಯ ಮೂಲೆ ಮೂಲೆಗಳಲ್ಲಿ ತಾಂಡವವಾಡುತ್ತಲೇ ಇದೆ. ಹಸಿವಿನಿಂದ ಸಾಯುವವರು ಒಂದೆಡೆಯಾದರೆ ಪ್ರೀತಿಯ ಹಸಿವಿನಿಂದ ನರಳುತ್ತಿರುವವರು ಇನ್ನೊಂದು ಕಡೆ. ನಾವೇನು ದೊಡ್ಡದಾಗಿ ವ್ಯಾಲೆಂಟೈನ್ಸ್ ಡೇ ಆಚರಿಸಲು ಹೊರಟಿದ್ದೇವೆ, ಅದನ್ನು ದ್ವೇಷಿಸುವವರು ನಮ್ಮಲ್ಲಿ ಅರ್ಧಕರ್ಧ ಜನರಿದ್ದಾರೆ. ಕಾರಣ ಬದುಕಿನಲ್ಲಿ ಕಳೆದು ಹೋದ ತಮ್ಮ ಪ್ರೀತಿ ಮತ್ತು ಸಂಬಂಧಿಕರು, ಪ್ರೀತಿಯಲ್ಲಿ ಮೋಸ ಹೋದದ್ದು ,ಪ್ರೀತಿಗಾಗಿ ತಡಕಾಡಿದ್ದು, ಬಾಳಿನಲ್ಲಿ ಸುಂದರವಾದ ಕನಸುಗಳನ್ನು ಕಂಡು ಹೆಣೆದು ಅದನ್ನು ಕಳೆದುಕೊಂಡದ್ದು ಇವೆಲ್ಲವೂ ಕೂಡ ಫೆಬ್ರವರಿ 14ರಂದು ನೆನಪಿಸಿಕೊಳ್ಳುವವರು ಅದೆಷ್ಟೋ ಜನರಿದ್ದಾರೆ. ಎಲ್ಲಾ ಸಮಯದಲ್ಲೂ ಮಾನಸಿಕ ಸ್ಥಿತಿ ಬೇರೆಬೇರೆಯಾದ ಕಾರಣ ಎಲ್ಲರಿಗೂ ಎಲ್ಲರ ಜೊತೆಗೂ ಬದುಕು ಸಾಧ್ಯವಿಲ್ಲ. ಒಂದಿಷ್ಟು ಸಡಿಲಗೊಳಿಸುವಿಕೆ, ಮತ್ತೊಂದಿಷ್ಟು ಕ್ಷಮೆ , ಒಂದಷ್ಟು ತಾಳ್ಮೆ ಇವನ್ನೆಲ್ಲ ಮದ್ದಿನ ಹಾಗೆ ಬಳಸುತ್ತಾ ಪ್ರತಿನಿತ್ಯ ಬದುಕಬೇಕಾಗುತ್ತದೆ. ಆದರೆ ಅದೆಷ್ಟು ದಿನ ಸಾಧ್ಯ? ಒಬ್ಬ ಕ್ಷಮಾ ಗುಣದವನು ಅದೆಷ್ಟು ದಿನವೆಂದು ಇತರರಿಗೆ ಕ್ಷಮೆ ನೀಡಿಯಾನು? ಎಲ್ಲರ ತಾಳ್ಮೆಗೂ ಒಂದು ಕಟ್ಟೆ ಎಂಬುದು ಇದೇ ತಾನೇ? ಕೆಲವೊಮ್ಮೆ ಪ್ರತಿ ತಾಳ್ಮೆಯು ಪ್ರತಿ ಕ್ಷಮೆಯು ಕಟ್ಟೆ ಒಡೆದು ಹೊರಗೆ ಬಂದುಬಿಡುತ್ತದೆ. ಅದೇ ಸಮಯದಲ್ಲಿ ಸಂಬಂಧಗಳು ಕೆಡಲು ಪ್ರಾರಂಭಿಸುತ್ತವೆ. ಮನೆಯ ಜವಾಬ್ದಾರಿಯನ್ನು ನಿಭಾಯಿಸುವ ಮತ್ತು ಅವನೊಂದಿಗೆ ಬದುಕುವ ಜನರ ತಾಳ್ಮೆ , ಕ್ಷಮೆಯ ಗುಣಗಳ ಮೇಲೆ ಎಲ್ಲಾ ಸಂಬಂಧಗಳು ನಿಂತಿವೆ. ಒಬ್ಬರಿಗೊಬ್ಬರು ಮಾನಸಿಕವಾಗಿ ಅರ್ಥ ಮಾಡಿಕೊಂಡು ಒಬ್ಬರಿಗಾಗಿ ಇನ್ನೊಬ್ಬರು ಎಂದು ಬದುಕಿದಾಗ ಮಾತ್ರ ಸಂಬಂಧಗಳು ಸರಿಯಾದ ರೀತಿಯಲ್ಲಿ ನಡೆಸಲ್ಪಡುತ್ತವೆ ಮತ್ತು ಪ್ರೀತಿಯನ್ನು ಹಂಚಲಾಗುತ್ತದೆ. ಇಂತಹ ಸಂಬಂಧಗಳು ಸಮಾಜದಲ್ಲಿ ಕೇವಲ 5 ರಿಂದ 10 ಶೇಕಡ ಮಾತ್ರ ಇರಬಹುದು. ಉಳಿದವರದ್ದೆಲ್ಲ ಪ್ರೀತಿಯ ಹಸಿವೆಯಿಂದಾಗಿ ಒದ್ದಾಡುವ ಸನ್ನಿವೇಶವೇ ಆಗಿರುತ್ತದೆ. ಅವರೆಲ್ಲರೂ ಕೂಡ ಪ್ರೀತಿಯ ಹಸಿವಿನಿಂದಾಗಿ ಕೋಪ ದ್ವೇಷ ರೋಷ ಇವುಗಳನ್ನು ತನ್ನೊಳಗೆ ಅಡಗಿಸಿಕೊಂಡಿರುತ್ತಾರೆ. ಇದರಿಂದಾಗಿ ಸಮಾಜದಲ್ಲಿ ಇಷ್ಟೊಂದು ಗಲಾಟೆ, ಗೊಂದಲ , ಕೊಲೆ, ಸಾವು, ಅತ್ಯಾಚಾರ, ಹಿಂಸೆಗಳು ನಡೆಯುತ್ತವೆ ಎಂಬುದು ನನ್ನ ಅನಿಸಿಕೆ. ಸರಿಯಲ್ಲವೇ?ಸಮಾಜದ ಎಲ್ಲರನ್ನು ಪ್ರೀತಿ ಕೊಟ್ಟು ಅವರನ್ನು ತೃಪ್ತಿಗೊಳಿಸಿ ಬದುಕಲು ನಮಗೆ ಸಾಧ್ಯವಿಲ್ಲ . ಕಾರಣ ಪ್ರತಿಯೊಬ್ಬರಿಗೂ ಕೂಡ ಸಮಾಜದಲ್ಲಿ ಅವರದ್ದೇ ಆದ ಕರ್ತವ್ಯಗಳಿರುತ್ತವೆ ಮತ್ತು ಅವರು ಅವುಗಳನ್ನು ನಿಭಾಯಿಸಿಕೊಂಡು ಹೋಗಬೇಕು. ತಮ್ಮ ಕುಟುಂಬದ ಜವಾಬ್ದಾರಿಗಳು ಬಹಳಷ್ಟು ಇದ್ದು, ಅವುಗಳನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೂ ಇದೆ. ಹಾಗಿರುವಾಗ ಎಲ್ಲರೂ ಸಮಾಜ ಸೇವಕರು ಆಗಲು ಸಾಧ್ಯವಿಲ್ಲ. ಒಂದಷ್ಟು ಜನ ಸಮಾಜದಲ್ಲಿ ಸಾಂತ್ವನ ನೀಡಲು ಮುಂದೆ ಬರುತ್ತಾರೆ, ಮತ್ತೊಂದಿಷ್ಟು ಜನ ಆರ್ಥಿಕವಾದ ಸಹಾಯವನ್ನು ನೀಡಬಹುದು. ಅದು ಅವರವರ ದೊಡ್ಡತನವೇ ಹೊರತು ಹೊರಗಿನ ಯಾವುದೇ ಒತ್ತಡಗಳಿಂದ ಬರುವಂತದ್ದು ಅಲ್ಲ. ಅವರನ್ನು ಸಮಾಜದಲ್ಲಿ ಎಂದಿಗೂ ಗೌರವಿಸಲೇಬೇಕಾಗಿದೆ. ನಮ್ಮ ಕೈಲಾದಷ್ಟು ಸಹಾಯವನ್ನು ಇತರರಿಗೆ ಮಾಡೋಣ. ಎಲ್ಲರೂ ಆರ್ಥಿಕವಾಗಿ ಬರಲಿಕ್ಕೆ ಸಹಾಯ ಮಾಡುವಷ್ಟು ಸಿರಿವಂತರಾಗಿರುವುದಿಲ್ಲ. ಅವರವರ ದುಡಿದು ಅವರವರ ಜವಾಬ್ದಾರಿಗಳನ್ನು ನಿಭಾಯಿಸಲೇಬೇಕು. ಜವಾಬ್ದಾರಿಗಳನ್ನು ನಿಭಾಯಿಸಲು ಪರ ಮೇಲೆ ಒತ್ತಡ ಹಾಕದೆ ಇರೋಣ. ಇತರರನ್ನು ನಂಬಿ ಮೋಸ ಹೋಗದೆ ಇರೋಣ. ನಮ್ಮೊಂದಿಗೆ ಇರುವವರಿಗೆ ನಮ್ಮನ್ನು ಅರ್ಥ ಮಾಡಿಕೊಂಡವರಿಗೆ ಹಾಗೂ ನಮ್ಮನ್ನು ಏನೂ ಎಂದು ತಿಳಿದು ನಮಗೆ ಸಹಾಯ ಮಾಡುವವರಿಗೆ ನಾವು ಮೋಸ ಮಾಡದೆ ಇರೋಣ. ಈ ರೀತಿಯಲ್ಲಿ ಬದುಕು ಮತ್ತು ಸಂಬಂಧಗಳು ನಮ್ಮಿಂದ ಹಾಳಾಗದೆ ಇರಲಿ ಮತ್ತು ನಮ್ಮ ನೆಮ್ಮದಿ ನಮಗೆ ಸಿಗಲಿ. ನಮ್ಮ ನೆಮ್ಮದಿಗೆ ತೊಂದರೆ ಕೊಡುವವರನ್ನು ನಮ್ಮ ಬದುಕಿನಿಂದ ದೂರವೇ ಇರಿಸಿ ಬಿಡೋಣ. ಸದಾ ನೋವು ಕೊಡುವವರ ಜೊತೆ ಬದುಕುವ ಬದಲು ಒಬ್ಬರೇ ಬದುಕುವ ಬದುಕು ಕೂಡ ಅದೆಷ್ಟೋ ಸಾಂತ್ವನದ ಬದುಕು. ಬದುಕಿನ ಸ್ವಾತಂತ್ರ್ಯವನ್ನು ಅನುಭವಿಸೋಣ. ಬದುಕು ಬಹಳಷ್ಟು ಚಿಕ್ಕದು. ನಾಲ್ಕು ದಿನದ ಈ ಬದುಕನ್ನು ಖುಷಿ ಖುಷಿಯಿಂದ ಕಳೆಯುವಂತೆ ಬದುಕೋಣ ಅಲ್ಲವೇ? ಪ್ರೇಮಿಗಳ ದಿನವನ್ನು ಆಚರಿಸುವ ಬದಲು ಸಂತಸದ ಖುಷಿಯ ಕ್ಷಣಗಳನ್ನು ಪ್ರತಿಕ್ಷಣವೂ ಅನುಭವಿಸೋಣ ಮತ್ತು ನಮಗೆ ಸಂತಸ ಕೊಡುವ ಯಾರಿದ್ದಾರೆಯೋ ಅವರಿಗೆ ಖುಷಿಯನ್ನು ನೀಡುತ್ತಾ ಸಂತಸ ಹಾಗೂ ಉತ್ತಮ ಆಹಾರ ತಿಂದು ಆರೋಗ್ಯವನ್ನು ವೃದ್ದಿಸುತ್ತಾ ಕಳೆಯೋಣ. ಪರರ ಬದುಕು ಅವರಿಗೆ, ಅವರ ಆಚರಣೆ ನಮಗೆ ನೋವು ಕೊಡದೆ ಇರಲಿ ಎಂದು ಆಶಿಸೋಣ, ಪರರನ್ನು ಅವರಷ್ಟಕ್ಕೆ ಬದುಕಲು ಬಿಡೋಣ. ನಮ್ಮಿಂದ ಪರರಿಗೆ ಯಾರಿಗೂ ತೊಂದರೆ ಆಗದಿರಲಿ ಅಲ್ಲವೇ? ನೀವೇನಂತೀರಿ?
——————————–
ಹನಿಬಿಂದು
ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.