ಮಾನವನ ಉನ್ನತಿಗೆ ಮಾರಕವಾಗಿರುವ ಆರಿಷಡ್ವರ್ಗಗಳಲ್ಲಿ ಒಂದು ಅಸೂಯೆ. ಹೊಟ್ಟೆಕಿಚ್ಚು ಮತ್ಸರ ಎಂಬೆಲ್ಲಾ ವಿವಿಧ ಅಭಿದಾನಗಳು ಇದಕ್ಕೆ. ನಮ್ಮಲ್ಲಿ ಇಲ್ಲದ ಪ್ರತಿಭೆಯನ್ನು ವಸ್ತುವನ್ನು ಇನ್ನೊಬ್ಬರು ಹೊಂದಿದಾಗ ನಾವು ಪಡುವ ಭಾವ ನಮ್ಮ ಬಳಿ  ಅದಿಲ್ಲವಲ್ಲಾ ಎನ್ನುವ ಕಿಚ್ಚು ನಮ್ಮನ್ನೇ ಸುಡುತ್ತದೆ ವಿನಹ ಅದರಿಂದ ಬೇರೆಯವರಿಗೆ ಹಾನಿಯಲ್ಲ . ತಾಳಿಕೊಳ್ಳುವ ಬುದ್ದಿ ಹಾಗೂ ಸಹನೆ ವಿವೇಕ ಅತಿ ಮುಖ್ಯ . ಅದು ಇಲ್ಲದಿದ್ದಾಗ ನಮ್ಮ ಕೆಲಸದ ಅಥವಾ ಬಲದ ಇತಿ ಮಿತಿಯನ್ನು ಅರಿತುಕೊಳ್ಳದೆ ಅಪೇಕ್ಷೆ ಪಡುವುದರಿಂದ ಜೀವನ ದುಸ್ಸಹವಾಗುತ್ತದೆ. ಅದೇ ಹೊಟ್ಟೆಯುರಿಗೆ ದಾರಿಯೂ ಸಹ. “ಇಷ್ಟು ದೊರಕಿದರೆ ಮತ್ತಷ್ಟರಾಸೆ” ಎನ್ನುವ ನಾಣ್ಣುಡಿಯಂತೆ ತಮ್ಮಲ್ಲಿ ಇರುವುದಕ್ಕೆ ತೃಪ್ತಿಪಟ್ಟುಕೊಳ್ಳದೆ ಮತ್ತಷ್ಟು ಮಗದಷ್ಟು ಆಶಿಸುತ್ತಾ ಹೋಗುವ ಲೋಭಿ ಗುಣವೇ ಮತ್ಸರದ ತಾಯಿ. ಈ ಅಸೂಯೆ ಎನ್ನುವುದು ಪ್ರೀತಿಯ ಕಡುವೈರಿ. ಎಂತಹ ಸ್ನೇಹಿತರನ್ನು ಶತ್ರುಗಳನ್ನಾಗಿ ಮಾಡುವಂತಹ ಅತಿಶಯದ ಬಲ ಇದರದು. ಅಸೂಯೆ ಪಡುವವನಿಗೆ ಖಂಡಿತ ಸುಖವಿಲ್ಲ ಅದಕ್ಕೆ ಗುರಿಯಾದವನಿಗೆ ತಲ್ಲಣ ಬಿಟ್ಟು ಬೇರೆ ಗತಿಯಿಲ್ಲ .

ಅದಕ್ಕೆ ಡಿವಿಜಿಯವರು ತಮ್ಮ ಈ ಕಗ್ಗದಲ್ಲಿ ಹೀಗೆ ನುಡಿದಿರುವುದು

ಹೊಟ್ಟೆಯೊಂದರ ರಗಳೆ ಸಾಲದೆದೇನೋ ವಿಧಿ
ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರನೊಳ್
ಹೊಟ್ಟೆ ತುಂಬಿದ ತೋಳ ಮಲಗೀತು ನೀಂ ಪೆರರ
ದಿಟ್ಟಿಸುತ ಕರುಬುವೆಯೊ _ ಮಂಕುತಿಮ್ಮ

ಪ್ರಾಣಿಗಳಲ್ಲಿ ಅತ್ಯಂತ ದುರಾಸೆಯದು ಎಂದು ಹೆಸರಾದ ಎಂದಿಗೂ ಹೊಟ್ಟೆ ತುಂಬದ ಪ್ರಾಣಿ ಎಂದೇ ಹೆಸರಾದ ತೋಳವಾದರೂ ಕೆಲವೊಮ್ಮೆ ಒಂದು ಪಕ್ಷ ಹೊಟ್ಟೆ ತುಂಬಿ ಮಲಗಬಹುದು; ಆದರೆ ಮತ್ಸರ ತುಂಬಿದ ಮನುಷ್ಯನಿಗೆ ತೃಪ್ತಿಯೆನ್ನುವುದು ಇಲ್ಲವೇ ಇಲ್ಲ ಬೇರೆಯವರಿಗೆ ದೊರಕಿರುವುದು ತನಗಿಲ್ಲವಲ್ಲ ಎಂದು ಅದನ್ನೇ ದೃಷ್ಟಿಸುತ್ತಾ ಕರುಬುತ್ತಿರುತ್ತಾನೆ .

ಅಸೂಯೆಯಿಂದ ಹಸಿವೆ ಇಲ್ಲ ನಿದ್ರೆ ಇಲ್ಲ ತನ್ನತನವೂ ಸಹ ನಷ್ಟವಾಗಿ ವ್ಯಕ್ತಿತ್ವ ಇಲ್ಲದಾಗುತ್ತದೆ . ಅಸೂಯೆ  ಕಾಯದ ಕಳವಳಕ್ಕೆ ಕಾರಣವಾಗಿ ಸಮಾಧಾನ ಹೇಳ ಹೆಸರಿಲ್ಲದಂತಾಗುತ್ತದೆ.  ಹಾಗಾಗಿ ಚಿತ್ತ ಶುದ್ದಿಯನ್ನು ಹೊಂದಲಿಕ್ಕೆ ಅತ್ಯಾಸೆಗಳನ್ನು ಬಿಡಬೇಕು. ಆತ್ಮ ಸಂಯಮ, ಸಂತೃಪ್ತಿ, ವಿರಕ್ತಿ ಭಾವ ಇದರಿಂದಲೇ ನಿಜವಾದ ಸುಖವೇ ಹೊರತು ಭೋಗವನ್ನು ಜೀವನದ ಪರಮಾರ್ಥವಾಗಿ ಪರಿಗಣಿಸುವುದರಿಂದಲ್ಲ.
ಕರ್ಮ ಸಿದ್ದಾಂತದಲ್ಲಿ ನಂಬಿಕೆ ಇಟ್ಟವನಿಗೆ ಅಸೂಯೆ ಕಾಡದು. ಅವರವರು ಪಡೆದದ್ದು ಅವರವರ ಕರ್ಮದ ಫಲ ಎಂಬ ಸಿದ್ಧಾಂತ ಮನಸ್ಸಿನ ಸಮಾಧಾನಕ್ಕೆ ಮೂಲ ಕಾರಣವಾಗುತ್ತದೆ . ಕರ್ಮಫಲದಿಂದ  ಪುಣ್ಯ ಸಂಚಯ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.

ಮಹಾಭಾರತದಲ್ಲಿ ಗಾಂಧಾರಿ ತನಗಿಂತ ಮುಂಚೆಯೇ ಕುಂತಿ ಮಕ್ಕಳನ್ನು ಪಡೆದಳೆಂಬ ಅಸೂಯೆಯಿಂದ ತನ್ನ ಗರ್ಭ ತಾನೇ ಗುದ್ದಿಕೊಂಡು 100 ಮಕ್ಕಳ ಸೃಷ್ಟಿಗೆ ಕಾರಣವಾಗುತ್ತದೆ ಹಾಗೆಯೇ ಶೂರ್ಪನಖಿಯ ಸೀತೆಯ ಮೇಲಿನ ಅಸೂಯೆಯಿಂದ ಮೂಗು ಕತ್ತರಿಸಿಕೊಳ್ಳಲು ಕಾರಣವಾಗುತ್ತದೆ.  ಹೀಗೆ ಅಸೂಯೆ ಮನಸ್ಸಿನಲ್ಲಿ ಹೊಗೆಯಾಡುತ್ತಾ ನಮ್ಮನ್ನೇ ಸುಟ್ಟು ಹಾಕುವ ದಾವಾನಲ.

ಅಸೂಯೆ ಮನಸ್ಸಿನ ನೆಮ್ಮದಿಯನ್ನು ಕದಡುವುದರ ಜೊತೆಗೆ ನಮ್ಮ ಕಾರ್ಯ ಕ್ಷಮತೆಯನ್ನು ಕುಂಠಿಸುತ್ತದೆ.ಆಯುಷ್ಯವನ್ನು ಕಡಿಮೆ ಮಾಡುತ್ತದೆ. ಹೀಗೆ ಬೇಡದ ಮಹಾ ಬೇನೆಯಾದ ಅಸೂಯೆ ಮನಸ್ಸಿನ ಕ್ಯಾನ್ಸರ್ ಎಂದರೂ ತಪ್ಪಲ್ಲ. ಅಸೂಯೆ ಮನುಷ್ಯ ಸ್ವಭಾವದ ಒಂದು ದೌರ್ಬಲ್ಯ. ಇದನ್ನು ಮನಸ್ಸಿನಲ್ಲಿ ಬೇರೂರಲು ಸ್ಥಾಯಿಯಾಗಲು ಬಿಡದೆ ವಿವೇಕ ಹಾಗೂ ಬುದ್ಧಿಯಿಂದ ಅದನ್ನು ತೊಡೆದು ಹಾಕಿದಾಗ ಜೀವನ ಸಹ್ಯವಾಗುತ್ತದೆ. ವ್ಯಕ್ತಿತ್ವಕ್ಕೆ ಹೊಸ ಮೆರಗು.
ಸಂಸ್ಕಾರ ಹೀನರಾಗಿ ಹೊಟ್ಟೆ ಕಿಚ್ಚು ಪಡುವುದರ ಬದಲು ಎಲ್ಲರ ಉನ್ನತಿಯಲ್ಲಿ ಸಂತಸ ಕಾಣುವ ಸಂಸ್ಕೃತಿ ಬೆಳೆಸಿಕೊಳ್ಳೋಣ; ಅನಸೂಯಾಪರರಾಗೋಣ ಆಲ್ಲವೇ?


Leave a Reply

Back To Top