ಅಂಕಣ ಬರಹ
ಸಂವೇದನೆ
ಭಾರತಿ ನಲವಡೆ
ಸಮರಸ
“ದೇವರು ಏನು ಕಡಿಮೆ ಮಾಡಿದ್ದಾನೆ.ಒಃದು ದಿನ ಸಂತೋಷದಿಂದ ಇರುವುದಿಲ್ಲ,ಸಮಸ್ಯೆ ಏನು? ಹೇಳಿದರೆ ತಾನೆ ಅರ್ಥವಾಗೋದು” ಎಂದು ಮಾಧವಿಯ ಅಕ್ಕ ತನ್ನ ತಂಗಿ ವೈಷ್ಣವಿಗೆ ಕೇಳಿದಾಗ ಅವಳು ಕಣ್ಣೀರಲ್ಲೇ ಉತ್ತರ ನೀಡಿದಳು.ಉತ್ತಮ ಸರ್ಕಾರಿ ಉದ್ಯೋಗದಲ್ಲಿರುವ ಶರತ್ ಗೆ ಸರ್ಕಾರಿ ಉದ್ಯೋಗದಲ್ಲಿದ್ದ ವೈಷ್ಣವಿಯನ್ನು ಮದುವೆ ಮಾಡಿಕೊಡಲಾಗಿತ್ತು.ಕಾರಣ ಒಂದೇ ಇಲಾಖೆ ಅರ್ಥಮಾಡಿಕೊಂಡು ಜೀವನ ನಡೆಸಲು ಚನ್ನಾಗುತ್ತೆ ಎಂದು ಇನ್ನೂ ಎರಡು ವರ್ಷ ಮದುವೆ ಬೇಡ ಎಂದ ಅವಳನ್ನು ಧಾರೆ ಎರೆದು ಕೊಡಲಾಗಿತ್ತು.ಅಂದುಕೊಂಡಂತೆ ಎರಡು ಮುದ್ದಾದ ಮಕ್ಕಳೊಂದಿಗೆ ಸಾಗುತ್ತಿದ್ದ ಕುಟುಂಬಕ್ಕೆ ಅವಳ ಅತ್ತೆಮನೆಯವರೆ ಶತ್ರುಗಳಾದರು.ನಿಮ್ಮಿಬ್ಬರ ಸಂಬಳದಲ್ಲಿ ಒಬ್ಬರ ಸಂಬಳ ನಮ್ಮ ಮನೆಗೆ ಕೊಡಬೇಕು ಇಲ್ಲದಿದ್ದರೆ ನೀನು ನನ್ನ ಆಸ್ತಿಯ ಬಿಡಿಗಾಸಿಗೂ ಅರ್ಹನಲ್ಲ ಎಂಬ ತಂದೆಯ ಮಾತಿನ ಚಾಟಿಗೆ ಆಗಲೇ ಶರತ್ ಹೂಂ ಗುಟ್ಟಿದ್ದ.ಆದರೆ ವೈಷ್ಣವಿ ಏನಾದರೂ ದೊಡ್ಡ ಕಾರ್ಯಕ್ರಮ ಇದ್ದಾಗ ಕೊಡೋಣ ಹೇಗೂ ಆರೆಕರೆ ಗದ್ದೆ ಇದೆಯಲ್ಲ ಎಂದು ಹೇಳಿದರೂ ಸುತಾರಾಂ ಒಪ್ಪಲಿಲ್ಲ.ಮದುವೆ ಮುಂಚೆ ವೈಷ್ಣವಿಯನ್ನು ಚನ್ನಾಗಿ ನೋಡಿಕೊಳ್ಳುವೆ ಎಂದು ಭಾಷೆ ನೀಡಿದ ಶರತ್ ತಾಯಿಯ ಬಣ್ಣದ ಮಾತಿನಿಂದ ಪ್ರತಿದಿನ ಕುಡಿದು ಬಂದು ಪತ್ನಿ ಪೀಡಕನಾದ.ಈ ಮಧ್ಯದಲ್ಲಿ ಅವನ ತಮ್ಮನಿಗೆ ಡಿಪ್ಲೋಮಾ ಸೇರಿಸಲು ಹಣ ಬೇಕಾಗಿತ್ತು. ವೈಷ್ಣವಿಯೊಡನೆ ಅಂಗಲಾಚಿ ನಿನ್ನಿಂದ ನನ್ನ ತಮ್ಮನ ಭವಿಷ್ಯ ಎಂದಾಗ ಪಾಪ ಅವಳು ಸಾಲ ತೆಗೆಸಿ ಅವನ ವಿದ್ಯಾಭ್ಯಾಸಕ್ಕೆ ಅಣಿಯಾದಳು.ಇದರ ಹಿಂದೆ ಸಾಲು ಸಾಲು ಐವರು ಹೆಣ್ಣುಮಕ್ಕಳ ಮದುವೆಗೂ ಸಾಲ.ಇದರ ನಡುವೆ ತನ್ನ ಪತ್ನಿ ಮಕ್ಕಳನ್ನೂ ಕಡೆಗಣಿಸಿ ತಾಯಿಯ ಮಾತನ್ನು ಕೇಳಿ ಪ್ರತಿದಿನ ಕಿರುಕುಳ ಕೊಡಲಾರಂಭಿಸಿದ.ಯಾರಾದರೂ ಬುದ್ಧಿ ಹೇಳಲು ಹೋದರೇ ವೈಷ್ಣವಿಯ ತಪ್ಪನ್ನೆ ಕೆದರಿ ರಂಪ ಮಾಡುತ್ತಿದ್ದ.
ತಾವಿಬ್ಬರೂ ಸರ್ಕಾರಿ ನೌಕರರಾಗಿದ್ದರಿಂದ ಎಲ್ಲರೆದುರು ಅವಮಾನವಾಗಬಾರದೆಂಬ ಸಂಕಟದಿಂದ ತನಗೆ ಪರಿಚಯದವರಿಂದ ತಿಳಿಹೇಳಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.ನೆರೆಹೊರೆಯವರು ಒಮ್ಮೆ ಪೋಲಿಸ್ ಕಂಪ್ಲೇಟ ಕೊಟ್ಟು ನೋಡು ಆಗ ಬುದ್ಧಿ ಬರುತ್ತೆ ಎಂದಾಗಲೂ ಎಲ್ಲವನ್ನು ಸಹಿಸಿಕೊಂಡ ತನ್ನೆರಡು ಮಕ್ಕಳಿಗಾಗಿ ಜೀವ ಇಟ್ಟುಕೊಂಡು ಹೋರಾಟದ ಬದುಕು ನಡೆಸುತ್ತಿದ್ದಳು. ಪ್ರತಿದಿನ ಕುಡಿದು ಏನಾದರೊಂದು ನೆಪ ಮಾಡಿಕೊಂಡು ಕಿರುಚಾಡುವದು ಅವನ ರೂಢಿಯಾಗಿತ್ತು.ಇದರಿಂದ ರೋಸಿ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಾಗ ಮುದ್ದಮಕ್ಕಳ ಮುಖ ನೆನಪಾಗುತ್ತಿತ್ತು. ಗೋಮುಖ ವ್ಯಾಘ್ರನಂತೆ ಹೊರಗಡೆ ಎಲ್ಲರೊಡನೆ ನಗುತ ಉಪಕಾರಿಯಾಗಿದ್ದವ ಮನೆಗೆ ಬಂದ ಕೂಡಲೇ ಕುಡಿತದ ಅಮಲಿನಿಂದ ರಾಕ್ಷಸನಾಗುತ್ತಿದ್ದ.ಅವನ ಆಶೆಯಂತೆ ಮಗನನ್ನು ಇಂಜನಿಯರಿಂಗ್ ಗೆ ಸೇರಿಸಿ ಇನ್ನೊಬ್ಬನನ್ನು ಹತ್ತಿರದ ಕಾನ್ವೆಂಟಿಗೆ ಸೇರಿಸಿದ್ದ.ಅದಕ್ಕಾಗಿ ಅವಳ ಪಾಸ್ ಬುಕ್ ಎಟಿಎಂ ಕಾರ್ಡನ್ನು ಕೂಡ ತಾನೇ ಇಟ್ಟುಕೊಂಡು ಮನೆಯ ಜವಾಬ್ದಾರಿ ವಹಿಸುತ್ತಿದ್ದ.ಒಂದು ರೂಪಾಯಿಗೂ ಅವನ ಬಳಿ ಕೈ ಚಾಚುತ್ತಿದ್ದ ವೈಷ್ಣವಿಯ ಸ್ಥಿತಿ ನೋಡಿ ರಜೆಗೆಂದು ಮನೆಗೆ ಬಂದ ದೊಡ್ಡ ಮಗ ಪೋನ್ ಪೇ ಮಾಡಿಕೊಂಡು ಅವಶ್ಯವಾದಾಗ ತೆಗೆದುಕೊಳ್ಳಲು ಹೇಳುತ್ತಿದ್ದ. ಪಾಪ ಬಡಪಾಯಿ ವೈಷ್ಣವಿ ತನ್ನ ಸಿಬ್ಬಂದಿಯವರೊಡನೆ ಕಿಂಚಿತ್ತೂ ವಿಷಯ ಹೇಳದೇ ನಗುವಿನ ಮುಖವಾಡದಿಂದ ಜೀವನ ಮಾಡುತ್ತಿದ್ದಾಳೆ.ಆದರೆ ಇನ್ನೂ ಅವನ ಕುಡಿತದ ಕಿರುಕುಳದಿಂದ ಹೊರತಾಗಿಲ್ಲ.ವೈಷ್ಣವಿಯ ಕುರಿತು ಇಲ್ಲಸಲ್ಲದ ತಕರಾರನ್ನು ಮಾಧವಿಯ ಹತ್ತಿರ ಹೇಳಿ ಮಾಧವಿಯಿಂದ ಬುದ್ಧಿ ಹೇಳುತ್ತಿದ್ದವನ ಬಾಳು ಈಗ ತೋಳ ಬಂತು ತೋಳ ಎಂಬ ಕಥೆಯಂತಾಗಿದೆ.
“ಸೆರೆ ಸಿಂಧಿ ಸಹವಾಸ
ಹೆಂಡರು ಮಕ್ಕಳು ಉಪವಾಸ”ಎಂಬಂತೆ ಉಪವಾಸ ಇಡದಿದ್ದರೂ ಪ್ರತಿದಿನ ಕಿರಿಕಿರಿಯ ಜೀವನ ವೈಷ್ಣವಿಯ ಪಾಲಿಗೆ ಬಂದ ಪಂಚಾಮೃತ.
ನಮ್ಮ ಭಾರತಿಯ ಸನಾತನ ಸಂಸ್ಕಾರದಲ್ಲಿ” ಪತಿಯೇ ಪರದೈವ’ ಎಂಬ ನಂಬಿಕೆಯ ನಡೆಯ ಜೀವನದಲ್ಲಿ ಉದ್ಯೋಗಸ್ಥ ಮಹಿಳೆಯರಿಗೂ ಕಿರುಕುಳ ನಿಂತಿಲ್ಲ.ಪ್ರತಿಭಟಿಸಿದರೆ ಮನೆತನದ ಮರ್ಯಾದೆ ಹೋಗುತ್ತೆ ಎಂದು ಸಹನೆಯಿಂದ ಜೀವನ ಸಾಗಿಸುತ್ತಿರುವ ವೈಷ್ಣವಿಯಂತ ದಿಟ್ಟೆಯರು ರೋಸಿಹೋದ ಜೀವನದಿಂದ ಕೆಲವೊಮ್ಮೆ ಖಿನ್ನತೆಗೊಳಗಾಗುತ್ತಿದ್ದಾರೆ. ಹೆಂಡತಿ ಎಂದರೆ ಚರಣದಾಸಿ, ತಾನು ಹೇಳಿದಂತೆ ಕೇಳಿಕೊಂಡು ಬಿದ್ದಿರಲು ಈ ಶತಮಾನದ ಹೆಣ್ಣು ಒಪ್ಪಲಾರಳು.”ಈ ಶತಮಾನದ ಮಾದರಿ ಹೆಣ್ಣು,ಸ್ವಾಭಿಮಾನದ ಸಾಹಸಿ ಹೆಣ್ಣು” ಎಂಬ ಹಾಡು ಕವಿಗೆ ತಾನು ಉದ್ಯೋಗದಲ್ಲಿದ್ದು ಹೆಂಡತಿಯೂ ಉದ್ಯೋಗದಲ್ಲಿದ್ದಾಗ ಪುರುಷ ಸಮಾಜ ಯಾಕೆ ತನ್ನಂತೆ ಅವಳು ಸಮಾನವಾಗಿ ದುಡಿಯುತ್ತಾಳೆ,ತನ್ನ ಮನೆಗೆ ಮಕ್ಕಳಿಗಾಗಿ ಜೀವ ತೇಯುತ್ತಾಳೆಂದು ಅರ್ಥವಾಗುವದಿಲ್ಲವೋ ನಾ ಕಾಣೆ. ಕುಡಿತ ಒಂದು ಕುಟುಂಬವನ್ನು ಅಧೋಗತಿಗೆ ಒಯ್ಯುವ ಕೆಟ್ಟ ಹವ್ಯಾಸವೆಂದು ಗೊತ್ತಿದ್ದರೂ ಯಾಕೆ ಅದರ ದಾಸರಾಗುತ್ತಾರೆ ಎಂಬುದನ್ನು ಸಾಕ್ಷರರಾದ ಗಂಡುಗಳು ಅರ್ಥ ಮಾಡಿಕೊಳ್ಳಬೇಕಿದೆ.ಎಲ್ಲರೂ ಅಂಥವರೇ ಇರುತ್ತಾರೆ ಎನ್ನಲಾಗದು.
ಉದ್ಯೋಗಸ್ಥ ದಂಪತಿಗಳು ಅನ್ಯೋನ್ಯವಾಗಿ ಮಾತನಾಡಿಕೊಂಡು ಜೀವನ ನಡೆಸುತ್ತಿರುವ ಹಾಗೂ ತಮ್ಮ ಕುಟುಂಬದ ಕೆಲಸಗಳನ್ನು ತಾವೇ ಹಂಚಿಕೊಂಡು ಮಾಡುತ್ತ ಆನಂದದ ಜೀವನ ನಡೆಸುತ್ತ ಒಮ್ಮತದಿಂದ ಸಾಗುತ್ತಿರುವವರು ಇದ್ದಾರೆ.ತಂದೆ ತಾಯಿಯರ ಮಾತು ಕೇಳಬೇಕು ನಿಜ, ಅದು ತನ್ನ ಕೌಟುಂಬಿಕ ಜೀವನಕ್ಕೆ ಮಾರಕವಾಗದೇ ಪೂರಕವಾಗಿರಬೇಕು.ಹೆಣ್ಣೆಗೆ ಹೆಣ್ಣು ಶತ್ರು ಎಂಬ ಮಾತಿದೆ.ಎಷ್ಟೋ ಕುಟುಂಬಗಳಲ್ಲಿ ಅತ್ತೆ ಸೊಸೆ ತಾಯಿ ಮಗಳಂತೆ ಇರುತ್ತಾರೆ. ತನ್ನ ತಾಯಿಯನ್ನು ತೃಪ್ತಿಪಡಿಸಲು ಹೆಂಡತಿಯನ್ನು ಕೀಳಾಗಿ ಕಾಣುವ ಪುರುಷನಿರಲು ಆ ಕುಟುಂಬ ಸುಖವಾಗಿರಲು ಹೇಗೆ ಸಾಧ್ಯ.ಎಲ್ಲಕ್ಕೂ ಒಂದು ಮಿತಿ ಎಂಬುದಿದೆ.ಹೀಗೆ ಮುಂದುವರೆದಾಗ ಮಕ್ಕಳೆ ತಂದೆಯನ್ನು ಕಾಣುವ ದೃಷ್ಟಿಕೋನ ಬದಲಾಗಿ ಯಾರೂ ಕೂಡ ಕುಡುಕ ವ್ಯಕ್ತಿಯನ್ನು ದಿಕ್ಕರಿಸುವ ದಿನಗಳು ಇಲ್ಲವೆಂದಲ್ಲ.
ಮನಸು ಬಿಚ್ಚಿ ಮಾತನಾಡಿದರೆ ಸಮಸ್ಯೆ ಪರಿಹಾರ.ತಮ್ಮ ಸಂಸಾರಕ್ಕೆ ತಾವೇ ಹೊಂದಿಕೊಂಡು ಹೋಗಬೇಕೇ ವಿನಃ ಪತ್ನಿಯ ತೇಜೋವಧೆ ಮಾಡುತ ತಾನೇ ಶ್ರೇಷ್ಟ ಎಂಬ ಭಾವ ಸಲ್ಲ.”ಸತಿಪತಿಯರೊಡನಾದ ಭಕ್ತಿ ಹಿತವಪ್ಪುದು ಶಿವಂಗೆ” ಎಂಬಂತೆ ” ಸರಸವೇ ಜನನ
ವಿರಸವೇ ಮರಣ
ಸಮರಸವೇ ಜೀವನ”ಎಂಬ ಬೇಂದ್ರೇಯವರ ಸಾಲುಗಳಂತೆ ಬದುಕಲಿ ಸಮರಸದಿ ಬೆಂದರೆ ಜೀವನ ಸುಖಮಯ ಅಲ್ಲವೇ
ಭಾರತಿ ಕೇ ನಲವಡೆ
ಭಾರತಿಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡಶಾಲೆಮಂಗಳವಾಡದಲ್ಲಿಸಹಶಿಕ್ಷಕಿಯಾಗಿಕಾರ್ಯನಿರ್ವಹಿಸುತ್ತಿದ್ದಾರೆ.ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾಸಾಹಿತ್ಯಪುರಸ್ಕಾರ2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆಸಲ್ಲಿಸುತ್ತಿದ್ದಾರೆ
.