ಶರಣ ನಿದ್ರೆಗೈದಡೆ ಜಪ ಕಾಣಿರೊ,
ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ,

ಶರಣ ನಡೆದುದೆ ಪಾವನ ಕಾಣಿರೊ,
ಶರಣ ನುಡಿದುದೆ ಶಿವತತ್ವ ಕಾಣಿರೊ,

ಕೂಡಲಸಂಗನ ಶರಣನ
ಕಾಯವೆ ಕೈಲಾಸ ಕಾಣಿರೊ.

          ಅಪ್ಪ ಬಸವಣ್ಣ

ಜಗಜ್ಯೋತಿ ವಿಶ್ವ ಗುರು ಅಪ್ಪ ಬಸವಣ್ಣನವರು ಒಂಬತ್ತು ಶತಮಾನಗಳ ಹಿಂದೆ ನಡೆದಂತೆ ನುಡಿದ ಶರಣ ಸಂದೇಶಗಳು ವಚನ ವಾಙ್ಮಯಗಳು ವೈಚಾರಿಕ ವೈಜ್ಞಾನಿಕ ಸಾರ್ವಕಾಲಿಕ ಸತ್ಯ ಶ್ರೇಷ್ಠತೆಯನ್ನು ಸಾರುತ್ತವೆ.

ಈ ಸತ್ಯದ ಪರಿಪೂರ್ಣ ಅರಿವಿನ ಹೊಳಪು ಯಾವ ವ್ಯಕ್ತಿ ಹೇಳಿದರೂ ,ಯಾವ ಭಾಷೆಯಲ್ಲಿ ಬರೆದರೂ, ಯಾವುದೇ ಕಾಲದಲ್ಲೂ,ಎಲ್ಲಿಯೇ ಹೇಳಿದರೂ ಒಂದೇ ಸತ್ಯದ  ಬೆಳಕನ್ನೇ ನೀಡುತ್ತವೆ.

ಇಂದು ನಾವು ಎಷ್ಟೇ ಪ್ರಗತಿ ಹೊಂದಿದ್ದರೂ, ಎಷ್ಟೇ ಮುಂದುವರಿದಿದ್ದರೂ ನಮ್ಮ  ಜ್ಞಾನಕ್ಕೂ,ಶರಣರ ಅರಿವಿಗೂ ಅಜಗಜಾಂತರ ವ್ಯತ್ಯಾಸವಿದೆ.

ಶರಣರ ದೃಷ್ಟಿಯಲ್ಲಿ ಶರಣ ಈ ಶಬ್ಧದ ಅರ್ಥ ಏನು ಅಂದರೆ
ಭವಕ್ಕೆ ಹುಟ್ಟುವನಲ್ಲ, ಸಂದೇಹೀ ಸೂತಕಿಯಲ್ಲ
ಆಕಾರ ನಿರಾಕಾರನಲ್ಲ ನೋಡಯ್ಯಾ
ಕಾಯವಂಚಕನಲ್ಲ, ಜೀವ ವಂಚಕನಲ್ಲ,
 ಶಂಕೆ ಇಲ್ಲದ ಮಹಾಮಹಿಮ ನೋಡಯ್ಯ ಕೂಡಲಸಂಗನ ಶರಣ ಉಪಮಾತೀತ ನೋಡಯ್ಯಾ

ಶರಣ ಅಂದರೆ ಸಾಮಾನ್ಯ  ಮಾನವನಲ್ಲ  ಎಲ್ಲವನ್ನೂ ಮೀರಿದ ಸ್ಥಿತಪ್ರಜ್ಞನು, ಶಬ್ಧಕ್ಕೆ ನಿಲುಕದ ಉಪಮಾತೀತನು,

ಇಂತಹ ಅಗಮ್ಯ ಅಗೊಚರ
ಶರಣ ನಿದ್ರೆಗೈದಡೆ ಜಪ ಕಾಣಿರೊ,
ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೋ
ಅರಿವೇ ಗುರು
ಆಚಾರವೇ ಲಿಂಗ
ಅನಭಾವವೇ ಜಂಗಮ


ಈ ತತ್ವದ ಅಡಿಯಲ್ಲಿ
ನುಡಿದಂತೆ ನಡೆಯುವ
ನಡೆದಂತೆ ನುಡಿಯುವ
 ಘನ ವ್ಯಕ್ತಿತ್ವವೇ ಶರಣ.


ಯಾರು ಸಮಾಜಮುಖಿಯಾಗಿ  
ಸಮಾಜದ ಅಜ್ಞಾನಕ್ಕೆ ಸವಾಲಾಗಿ ಎದೆ ತಟ್ಟಿ ಅರಿವು ಆಚಾರವಾಗಿ ಮಾಡಲು ಸದಾ ಸಿದ್ಧನಾಗಿ ನಿಲ್ಲುವನೇ ಶರಣ.
ಇಂತಹ ಶರಣನು ನಿದ್ದೆ ಮಾಡಿದರೆ ಅದು ಜಪವೇ ಸರಿ


ಶರಣ ಸುಮ್ಮನಿದ್ದರೂ ಒಂದು ಅರ್ಥ,
ಶರಣ ಮಾತಾಡಿದರೂ ಒಂದು ಅರ್ಥ,


ಇಂತಹ ಶರಣನು ಎದ್ದು ಕುಳಿತರೆ ಅದು ಶಿವರಾತ್ರಿ ಎಂದು ಹೇಳುವ ಮೂಲಕ ಅಪ್ಪ ಬಸವಣ್ಣನವರು  ಶರಣತ್ವದ ಘನ ಮಹಿಮೆಯನ್ನು ಶ್ಲಾಘಿಸಿದ್ದಾರೆ.
ಶರಣರಿಗೆ ಅದೆಷ್ಟೋ ಕಷ್ಟ ದುಃಖಗಳು ಬಂದಿವೆ ಆದರೆ ಅವರ ಕಷ್ಟ ದುಃಖದಲ್ಲಿ ನಡೆದ ಬದುಕಿನ ಪ್ರತಿ ಹೆಜ್ಜೆಯೂ ಇಂದಿನ ಜಾಗತೀಕರಣದ ಒಂದೊಂದು ಸೂತ್ರಗಳಾಗಿವೆ.ಜಗತ್ತಿನ
ಜೀವನದ ಸಂವಿಧಾನದ ಮೆಟ್ಟಿಲುಗಳಾಗಿವೆ.
ಶರಣರಿಗೆ ಸುಖ- ದುಃಖಗಳು,
ಕಷ್ಟ -ಕಾರ್ಪಣ್ಯ, ಸೋಲು- ಗೆಲುವುಗಳು, ಬಡತನ- ಸಿರಿತನ ಗಳು ಸಹಜ ಸಂಗತಿಗಳಾದ ಬಿಸಿಲು ನೆರಳಿನಂತೆ ಸ್ವೀಕರಿಸುತ್ತಿದ್ದರು  ಇದುವೇ ಶರಣತ್ವದ ಗುಣ ವೈಶಿಷ್ಟ್ಯ.



ಶರಣ ನಡೆದುದೆ ಪಾವನ ಕಾಣಿರೊ,
ಶರಣ ನುಡಿದುದೆ ಶಿವತತ್ವ ಕಾಣಿರೊ,

ಶರಣನು ನಡೆಯುವ ಸತ್ಯ ಶುದ್ಧ ನಡತೆ ಪರಮ ಪಾವನ ಎಂದು ಹೇಳುವಲ್ಲಿ ಅವರು ತೆಗೆದುಕೊಳ್ಳುವ ನಿಲುವು ಅಪರೂಪದ ನಿಯಮಗಳು ಮತ್ತು ನ್ಯಾಯ ಮಾರ್ಗಗಳು ಎಂದರೆ ಅತಿಶಯೋಕ್ತಿಯಲ್ಲ ,
ಶರಣರು ತಮ್ಮ ಬದುಕಿನಲ್ಲಿ ಪ್ರಾಯೋಗಿಕ ನೆಲೆಯಲ್ಲಿ ಅಳವಡಿಸಿಕೊಂಡ ದಯಾ ಭಾವ,ಸಕಲ ಜೀವ ಚರಾಚರ ಸ್ರಷ್ಟಿಜೀವ ಜಾಲವನ್ನು ಪ್ರೀತಿಸುವ ಸಮತಾ ಚೈತನ್ಯಶೀಲ ಶರಣ  ನಡೆಯುವ ಮಾರ್ಗ ಯಾವಾಗಲೂ ಪಾವನ ವಾಗಿರುತ್ತದೆ.
ಅದೇರೀತಿ ಶರಣನ ಬಾಯಿಯಿಂದ ಬರುವ ನುಡಿಗಳು ಶಿವತತ್ವ ಆಗಿರುತ್ತವೆ.
ನುಡಿದಂತೆ ನಡೆ ಇದೆ ಜನ್ಮ ಕಡೆ
ಶರಣನಾದವನ ನುಡಿಗಳು ಶುಚಿತ್ವ ,ಶೀಲಚಾರಿತ್ರ ಆಗಿದ್ದು ಅವುಗಳು ತಮ್ಮ ಜೀವನದ ಪ್ರಯೋಗಶಾಲೆಯಲ್ಲಿ ಪರೀಕ್ಷೆಗೆ ಒಳಪಟ್ಟು ಅರಳಿದ   ಫಲಪುಷ್ಪಗಳಾಗಿವೆ.
ಈ ನುಡಿಗಳು ಇನ್ನೊಬ್ಬರ ಜೀವನ ಅರಳಿಸುತ್ತವೆ.
ಆದ್ದರಿಂದಲೇ ಶರಣ ಜೇಡರ ದಾಸಿಮಯ್ಯನವರು ಸಿರಿ ಸಂಪತ್ತು, ಧನ, ಧಾನ್ಯ, ಕನಕ ನನಗೆ ಬೇಡ ಶರಣರ ನುಡಿ ಕೇಳುವ  ಕ್ಷಣ ಕರುಣಿಸು ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಹೀಗೆ ಶರಣ  ಗುಣ ಮಹತ್ವ ಇಂಬಿಟ್ಟಿದ್ದಾರೆ
ಅಪ್ಪ ಬಸವಣ್ಣನವರು.

ಕೂಡಲಸಂಗನ ಶರಣನ ಕಾಯವೆ
ಕೈಲಾಸ ಕಾಣಿರೊ.

ಎಂದು ಹೇಳುವಲ್ಲಿ ಅಪ್ಪ ಬಸವಣ್ಣನವರು
ಶರಣ ಧರ್ಮ ಸಹಜ ಧರ್ಮ ಈ ತತ್ವ
ಸ್ಪಷ್ಟನೆ ಮಾಡಿದ್ದಾರೆ.
ಕಾಯವೇ ಕೈಲಾಸ ಎನ್ನುವ ಭಾವ   ನಿಸರ್ಗದತ್ತವಾದ ಜೀವನ ದರ್ಶನ ಮಾಡಿಸಿದ್ದಾರೆ.
ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕಳಿವಿಲ್ಲ ಎಂಬ ಸತ್ಯವನ್ನು ಅರಿಸುತ್ತ  ನಮ್ಮಲ್ಲಿ ಇಂದಿಗೂ ಬೇರೂರಿರುವ ನಂಬಿಕೆಗಳಾದ,ಸ್ವರ್ಗ ನರಕ
ಕೈಲಾಸದ ಪರಿಕಲ್ಪನೆಯನ್ನು 900 ವರ್ಷಗಳ ಹಿಂದೆ ಶರಣರು ಅಲ್ಲಗಳೆದು ನೈಸರ್ಗಿಕ ನೈಜ ಬದುಕಿನ ದಾರಿ ತೋರಿಸಿದ ಶ್ರೇಯಸ್ಸು ಶರಣರದ್ದು.
ದುಡಿದು ತಿನ್ನುವ ಧರ್ಮ ಶರಣ ಧರ್ಮ ,ಸತ್ಯ ಶುದ್ಧ ಕಾಯಕದಿಂದ ಬಂದುದನ್ನು ತನ್ನ ಬದುಕು ನಡೆಸಿ, ಉಳಿದದ್ದನ್ನು ದಾಸೋಹ ಮಾಡುವ ಶರಣ ನಿಸರ್ಗದತ್ತ ಜೀವನ ಸಾಗಿಸುತ್ತಾನೆ
ನಿಸರ್ಗದಿಂದ ಕಲಿಯಬೇಕಾದದ್ದು ಬಹಳಷ್ಟಿದೆ
ಯಾವುದೇ ಕ್ರೀಮಿ, ಕಿಟಕ, ಪಶು, ಪಕ್ಷಿಗಳು  ದುರಾಸೆ, ದುರ್ಬುದ್ಧಿ, ಸಂಗ್ರಹಬುದ್ಧಿ ಇಲ್ಲ
ಆದರೆ  ಮನುಷ್ಯನಾಗಿ ಈ ಅವಗುಣಗಳು  ಇದ್ದರೆ ಆತ ಶರಣನೇ ಅಲ್ಲ ಎನ್ನಲಾಗುತ್ತದೆ.
ಶರಣನಾದವನು ಕಾಯವೇ ಕೈಲಾಸ ಮಾಡಿಕೊಂಡು ಬದುಕು ಸಾಗಿಸಬೇಕು  ಹೇಗೆ ಒಂದು ಮರವು ತನ್ನ ಆಯುಷ್ಯದುದ್ದಕ್ಕೂ ಪ್ರಪಂಚಕ್ಕೆ ನೆರಳು , ನೆರವು, ಫಲ, ಪುಷ್ಪಗಳನ್ನು ಕೊಡುತ್ತದೆ ಹಾಗೆ ಮನುಷ್ಯನಾದವನು ಕಾಯವನ್ನೇ ಕೈಲಾಸ ಮಾಡಿಕೊಂಡು ಸಮಾಜಮುಖಿಯಾಗಿ ಜೀವನ ಸಾಗಿಸಬೇಕು
ದೇಹವೇ ಕೈಲಾಸ ಆದಾಗ ದಯೆ,ಕರುಣೆ,ಸೌಹಾರ್ದತೆ,ಸಮತೆ ಆನಂದ ಭಕ್ತಿಯ ನಿಲಯವಾಗುತ್ತವೆ,ಆಗ ಜೀವ ಭಾವ ಒಂದಾಗಿ ಲಿಂಗಾಂಗ ಸಾಮರಸ್ಯ ಅಳವಟ್ಟು ಯೋಗ ಜೀವನ,ಶರಣ ಜೀವನ ಕಾರ್ಯರೂಪಕ್ಕೆ ಬರುವುದು
ಅಂದಾಗ ಶರಣ ಸಾಧಕನು ಸಾರ್ಥಕ ಬದುಕಿನ ಬೆಳಕಾಗಲು ಸಾದ್ಯ.
————————————————————————–


One thought on “

  1. ಶರಣು ಶರಣಾರ್ಥಿಗಳು ಸುಜಾತಾ ಸಿಧನಗೌಡಾ ಪಾಟಿಲ ಶರಣಮ್ಮನವರಿಗೆ.

Leave a Reply

Back To Top