ಅಂಕಣ ಬರಹ
ಸಂವೇದನೆ-
ಭಾರತಿ ನಲವಡೆ
ಕ್ಷಮಯಾಧರಿತ್ರಿ
ಪ್ರತಿದಿನ ಕುಡಿದು ತೂರಾಡುವ ಗಂಡನ ಬೈಗುಳ ಹೊಡೆತ ಸಹಿಸುತ್ತ ಬೆಳಗಾದರೆ ಮತ್ತೆ ನಗುತ ಮಕ್ಕಳನ್ನು ಶಾಲೆಗೆ ಕಳಿಸಿ, ಏನೂ ಆಗೆ ಇಲ್ಲ ಎಂಬಂತೆ ಅಕ್ಕಪಕ್ಕದವರೊಡನೆ ಒಡನಾಡುವ ಮಧ್ಯಮ ವರ್ಗದ ಕುಟುಂಬದ ಗೃಹಿಣಿ ಸಹನಾ ತನ್ನ ಮನೆಯ ವಿಷಯವನ್ನು ಯಾರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ.
ಪಕ್ಕದಮನೆಯ ಅನ್ನಪೂರ್ಣ”ದಿನಾ ರಾತ್ರಿ ನಿನ್ನ ಗಂಡ ಕುಡಿದು ಕಿರುಚಾಡುವದನ್ನು ಹೇಗೆ ಸಹಿಸುತ್ತಿಯಾ? ಅವ ಏಕೆ ನಿನಗೆ ಹಿಂಸೆ ಕೊಡುತ್ತಾನೆ”ಹಿಂಸೆ ಇಲ್ಲ ಏನಿಲ್ಲ ಹಾಗೆ ಮನೆ ಅಂದ ಮೇಲೆ ಒಂದಲ್ಲ ಒಂದು ವಿಷಯ ಇದ್ದೇ ಇರುತ್ತದೆ ಎಂದು ಹಾರಿಕೆಯ ಉತ್ತರ ನೀಡಿ ಮತ್ತೆ ಎಂದಿನಂತೆ ನಗುಮೊಗದಿ ಕೆಲಸದಲಿ ತಲ್ಲೀನಳಾಗಿರುತ್ತಿದ್ದಳು.ಕೆಲವೊಮ್ಮೆ ಹತಾಶಳಾಗಿ ಮಕ್ಕಳನ್ನು ತಬ್ಬಿ ಮಗುವಂತೆ ಅತ್ತು ಬಿಡುತ್ತಿದ್ದಳು.ಬಹಳ ಒಲುಮೆಯಿಂದ ಒತ್ತಾಯ ಮಾಡಿ ಕೇಳಿದಾಗ ಸಹನಾ”ಸಂಸಾರ ಗುಟ್ಟು, ವ್ಯಾಧಿ ರಟ್ಟು ಎಂದು ನಮ್ಮಮ್ಮ ಹೇಳಿದ್ದಾಳೆ.ಎಷ್ಟೇ ಕಷ್ಟ ಬಂದರೂ ಗಂಡನನ್ನು ಅನುಸರಿಸಿಕೊಂಡು ಹೋಗಬೇಕು, ಸಂಸಾರದ ಕಷ್ಟಕೋಟಲೆಗಳನ್ನು ಯಾರ ಹತ್ತಿರ ಹೇಳಬಾರದು ಮನೆತನದ ಮರ್ಯಾದೆಗೆ ಕುಂದುಂಟಾಗುತ್ತದೆ “ಎಂಬ ಅಜ್ಜಿಯ ಹಿತನುಡಿಯಂತೆ ನಡೆದ ಸಹನಾ ನಿಜಕ್ಕೂ ಸಹನಾ ಮೂರ್ತಿಯೇ ಸರಿ.
ಮಕ್ಕಳು ಮಾಡಿದ ತಪ್ಪನ್ನು ತಿದ್ದಿ ಬುದ್ಧಿ ಹೇಳಿ, ಪೆಟ್ಟನ್ನು ನೀಡಿ ಎಂದಿಗೂ ಕ್ಷಮಾದಾನ ನೀಡುವ ತಾಯಿ, ಮರ್ಯಾದೆಗಾಗಿ ಮಕ್ಕಳ ಮುಖ ನೋಡಿ ಮಕ್ಕಳಿಗಾದರೂ ಪತಿಯನ್ನು ಸಹಿಸಿಕೊಳ್ಳುವ ತವರುಮನೆಯ ಹೆಸರ ಉಳಿಸಲು ಸಂಸಾರ ನೌಕೆಯನ್ನು ನಡೆಸುವ ಹೆಣ್ಣು ನಿಜವಾಗಿಯೂ ಭೂಮಿ ತೂಕದ ಹೆಣ್ಣು ಕ್ಷಮಯಾಧರಿತ್ರಿ.
ಪ್ರಪಂಚದಾದ್ಯಂತ ಪ್ರತಿ ಮೂವರಲ್ಲಿ ಒಬ್ಬ ಮಹಿಳೆ ತನ್ನ ಜೀವಿತಾವಧಿಯಲ್ಲಿ ಸಾಮಾನ್ಯವಾಗಿ ಹಿಂಸೆಗೊಳಗಾಗುತ್ತಾಳೆ.1993ರ ಮಹಿಳೆಯರ ವಿರುದ್ಧ ಹಿಂಸಾಚಾರದ ನಿರ್ಮೂಲನದ ಘೋಷಣೆಯಿಂದ ಹೇಳಲಾದ ವ್ಯಾಖ್ಯಾನವು ಹಿಂಸಾಚಾರವು ಲಿಂಗ ಆಧಾರಿತ ಪದದೊಂದಿಗೆ ಹಿಂಸೆ ಎಂಬ ಪದವನ್ನು ಬಳಸಿದಾಗ ಪುರುಷ ಮತ್ತು ಮಹಿಳೆಯರ ನಡುವಿನ ಅಸಮಾನತೆಯೇ ಬೇರೂರಿದೆ ಎಂಬ ಕಲ್ಪನೆಯನ್ನು ಬೆಂಬಲಿಸುತ್ತದೆ.
ಮನೆಯು ಪ್ರೀತಿ,ಸುರಕ್ಷತೆ,ಭದ್ರತೆ ಮತ್ತು ಆಶ್ರಯವನ್ನು ಹುಡುಕುವ ಸ್ಥಳವಾಗಿದೆ.ಆದರೆ ಕೆಲವು ಕುಟುಂಬಗಳಲ್ಲಿ ಮನೆಗಳೆ ಅಶಾಂತಿಯ ಗೂಡುಗಳಾಗಿವೆ,ಕಾರಣ ಅವಳು ಉದ್ಯೋಗಸ್ಥಳಾಗಿದ್ದರೆ ಕೆಲಸಕ್ಕೆ ಹೋಗುವ ಮುಂಚೆ ಕುಟುಂಬದ ಸದಸ್ಯರಿಗೆ ಅಡುಗೆಯೊಂದಿಗೆ ವಯಸ್ಸಾದವರಿಗೆ ಮಾತ್ರೆಗಳನ್ನು ಕೂಡ ವ್ಯವಸ್ಥಿತವಾಗಿ ಸಜ್ಜುಗೊಳಿಸಿಟ್ಟು ಹೋಗುತ್ತಾರೆ. ಬಂದ ಮೇಲೂ ಮೂರನೇ ಇನ್ನಿಂಗ್ಸ ಪ್ರಾರಂಭ. ಎಷ್ಟೇ ತಾಳ್ಮೆಯಿಂದ ಮಾಡಿದಾಗಲೂ ಕೆಲವೊಮ್ಮೆ ಕುಟುಂಬದ ಸದಸ್ಯರು ಸಹಕರಿಸದೇ ಅಡುಗೆಗೆ “ಉಪ್ಪಿಲ್ಲ ಖಾರಿಲ್ಲ ” ಎಂದು ಮೂದಲಿಸುತ್ತಾ ಅವಳ ವಿದ್ಯಾಭ್ಯಾಸಕ್ಕೆ,ಕೆಲಸಕ್ಕೆ ಆದ್ಯತೆ ನೀಡದೇ ಅವಮಾನಿಸುತ್ತ ತನ್ನ ಉಳಿದ ಮನೆಯಲ್ಲಿರುವ ಕೆಲಸಕ್ಕೆ ಹೋಗದ ಸೊಸೆಯರನ್ನು ಎತ್ತೆಣಿಸಿ ಮಾತನಾಡುವ ಸಂದರ್ಭಗಳು ಇಲ್ಲವೆಂದಿಲ್ಲ.
ವರದಕ್ಷಿಣೆ ಕಿರುಕುಳದಿಂದ ಮತ್ತು ಕೆಲಸಕ್ಕೆ ಹೋಗುವ ಪತ್ನಿಯಲ ಕುರಿತ ಸಂಶಯರೋಗಪೀಡಿತ ಪುರುಷ ಸಮಾಜ ಇನ್ನೂ ತನ್ನ ಕಬಂಧ ಬಾಹುಗಳಲ್ಲಿ ಉಸಿರುಕಟ್ಟಿಸುತ್ತಿದ್ದರೂ ಹೊಂದಿಕೊಂಡು ಹೋಗುತ್ತ ಅಂತರಂಗದಲ್ಲಿ ಕೊರಗಿದ್ದರೂ ಮರುಗದೇ ಜಗತ್ತೇ ಬೆರಗುಗೊಳಿಸುವಂತೆ ಜೀವನ ಮಾಡುವ ಹೆಣ್ಣು ನಿಜಕ್ಕೂ ಕ್ಷಮಯಾಧರಿತ್ರಿ.
ಇತ್ತೀಚಿನ ಕೆಲವು ಬೆಳುವಣಿಗೆಗಳನ್ನು ನೋಡಿದ್ದಾಗ ಅವಿಭಕ್ತ ಕುಟುಂಬಗಳು ಮರೆಯಾಗಿ ವಿಭಕ್ತ ಕುಟುಂಬಗಳಲ್ಲಿರುವುದರಿಂದ ಗಂಡಿನಷ್ಟೇ ಸರಿಸಮನಾಗಿ ದುಡಿಯುವ ಕಷ್ಟಪಟ್ಟು ತನ್ನ ಜೀವನ ರೂಪಿಸಿದ ಮಹಿಳೆ ತನ್ನದಲ್ಲದ ತಪ್ಪಿಗೆ ಶರಣಾಗಿ ಅದಕ್ಕೂ ಮಿತಿಮೀರಿದರೆ ಮರಣದಲ್ಲಿ ಶಾಂತಿಕಾಣುವ ಪ್ರಕರಣಗಳು ಹಾಗೂ ವಿವಾಹ ವಿಚ್ಛೇದನದಂತ ಕಾನೂನಿನ ಮೊರೆಹೋಗುವ ಸಂಭವ ಹೆಚ್ಚುತ್ತಿದೆ.
ತನ್ನ ಕ್ಷಮಾಗುಣದಿಂದ ಬದುಕ ಸವೆಸುವ ಹೆಣ್ಣು ತನ್ನ ಕಷ್ಟಗಳನ್ನೆ ನುಂಗಿ ಪತಿಗೆ ಇಷ್ಟವಾಗುವ ರೀತಿ ನಡೆದರೂ ಅವಳು ಕೌಟುಂಬಿಕ ಹಿಂಸೆಯಿಂದ ಹೊರತಾಗಿಲ್ಲ.
ಭಾರತೀಯ ದಂಡಸಂಹಿತೆ ಸೆಕ್ಷನ್ 498-ಎ ಪ್ರಕಾರ ಒಬ್ಬ ಮಹಿಳೆಯ ಪತಿಅಥವಾ ಪತಿಯ ಸಂಬಂಧಿಕರಿಂದ ನಡೆಯುವ ದೌರ್ಜನ್ಯವಾಗಿರುತ್ತದೆ.ಮೂರು ವರ್ಷಗಳ ಅವಧಿಗೆ ಮೀರದಂತೆ ಹಾಗೂ ಏಳು ವರ್ಷಗಳ ಅವಧಿಯವರೆಗೆ ಜೈಲುಶಿಕ್ಷೆಯನ್ನು ಕೂಡ ವಿಧಿಸಬಹುದು.ಕ್ರೌರ್ಯ ಎಂದರೆ ಯಾವುದೇ ಉದ್ದೇಶಪೂರ್ವಕ ನಡವಳಿಕೆಯು ಮಹಿಳೆಯನ್ನು ಆತ್ಮಹತ್ಯೆಗೆ ಪ್ರೇರೆಪಿಸುವದೇ ಆಗಿದೆ.
ಕ್ಷಮೆಯು ಸೀಮೆಯನ್ನು ಮೀರಿದರೆ ಸ್ವಾಭಿಮಾನಿ ಮಹಿಳೆ ಇಳೆಯ ಕ್ಷಮೆ ಮೀರಿ ಸಂಭವಿಸುವ ಭೂಕಂಪದಂತೆ ಅಲ್ಲೋಲ ಕಲ್ಲೋಲವಾದ ಬಾಳು ಸಂಘರ್ಷದ ಗೋಳಾಗುತ್ತದೆ.
ಅವಳ ಕ್ಷಮೆಯನ್ನೇ ಅವಳ ದೌರ್ಬಲ್ಯವೆಂದು ತಿಳಿಯದೇ ಅವಳ ಭಾವನೆಗಳಿಗೂ ಬೆಲೆ ನೀಡಿ ಮಮತೆಯ ನೆಲೆಯಲ್ಲಿ ದುರುಪಯೋಗಪಡಿಸಿಕೊಳ್ಳದೇ ಬಾಳಿದರೇ ಬಾಳೇ ಹಾಲುಜೇನು
ಭಾರತಿ ಕೇದಾರಿ ನಲವಡೆ.
ಭಾರತಿಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡಶಾಲೆಮಂಗಳವಾಡದಲ್ಲಿಸಹಶಿಕ್ಷಕಿಯಾಗಿಕಾರ್ಯನಿರ್ವಹಿಸುತ್ತಿದ್ದಾರೆ.ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾಸಾಹಿತ್ಯಪುರಸ್ಕಾರ2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆಸಲ್ಲಿಸುತ್ತಿದ್ದಾರೆ